ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸಭಾ ಪರ್ವ
ಶಿಶುಪಾಲವಧ ಪರ್ವ
ಅಧ್ಯಾಯ 37
ಸಾರ
ಯುಧಿಷ್ಠಿರನು ಯಾಗಕ್ಕೆ ವಿಘ್ನವಾಗಬಹುದೆಂದು ಭಯಪಡಲು, ಭೀಷ್ಮನು ಅವನಿಗೆ ಹೆದರಬೇಡವೆಂದೂ, ಶಿಶುಪಾಲನಿಗೆ ಬುದ್ಧಿ ಕೆಟ್ಟುಹೋಗಿದೆಯೆಂದೂ ಹೇಳಿದುದು (1-15).
02037001 ವೈಶಂಪಾಯನ ಉವಾಚ।
02037001a ತತಃ ಸಾಗರಸಂಕಾಶಂ ದೃಷ್ಟ್ವಾ ನೃಪತಿಸಾಗರಂ।
02037001c ರೋಷಾತ್ಪ್ರಚಲಿತಂ ಸರ್ವಮಿದಮಾಹ ಯುಧಿಷ್ಠಿರಃ।।
02037002a ಭೀಷ್ಮಂ ಮತಿಮತಾಂ ಶ್ರೇಷ್ಠಂ ವೃದ್ಧಂ ಕುರುಪಿತಾಮಹಂ।
02037002c ಬೃಹಸ್ಪತಿಂ ಬೃಹತ್ತೇಜಾಃ ಪುರುಹೂತ ಇವಾರಿಹಾ।।
ವೈಶಂಪಾಯನನು ಹೇಳಿದನು: “ಈ ರೀತಿ ಸಾಗರಸಂಕಾಶ ಸರ್ವ ನೃಪತಿಸಾಗರವು ರೋಷದಿಂದ ಪ್ರಚಲಿತವಾದುದನ್ನು ಕಂಡ ಯುಧಿಷ್ಠಿರನು ಮತಿಮತರಲ್ಲಿ ಶ್ರೇಷ್ಠ ವೃದ್ಧ ಕುರುಪಿತಾಮಹ ಬೃಹಸ್ಪತಿಯಂತೆ ಬೃಹತ್ತೇಜಸ್ವಿ ಪುರುಹೂತ ಭೀಷ್ಮನಲ್ಲಿ ಈ ರೀತಿ ಕೇಳಿಕೊಂಡನು:
02037003a ಅಸೌ ರೋಷಾತ್ಪ್ರಚಲಿತೋ ಮಹಾನ್ನೃಪತಿಸಾಗರಃ।
02037003c ಅತ್ರ ಯತ್ಪ್ರತಿಪತ್ತವ್ಯಂ ತನ್ಮೇ ಬ್ರೂಹಿ ಪಿತಾಮಹ।।
“ಈ ಮಹಾನೃಪತಿಸಾಗರವು ರೋಷದಿಂದ ಪ್ರಚಲಿತವಾಗುತ್ತಿದೆ. ಪಿತಾಮಹ! ಹೀಗಿರುವಾಗ ನಾನು ಏನನ್ನು ಮಾಡಬೇಕೆಂದು ಹೇಳು.
02037004a ಯಜ್ಞಸ್ಯ ಚ ನ ವಿಘ್ನಃ ಸ್ಯಾತ್ಪ್ರಜಾನಾಂ ಚ ಶಿವಂ ಭವೇತ್।
02037004c ಯಥಾ ಸರ್ವತ್ರ ತತ್ಸರ್ವಂ ಬ್ರೂಹಿ ಮೇಽದ್ಯ ಪಿತಾಮಹ।।
ಪಿತಾಮಹ! ಈ ಯಜ್ಞವು ವಿಘ್ನವಾಗದಂಥೆ ಮತ್ತು ಪ್ರಜೆಗಳಿಗೆ ಶುಭವಾಗುವಂತೆ ನಾನು ಏನು ಮಾಡಬಹುದೆಂದು ಸರ್ವವನ್ನೂ ಇಂದು ನನಗೆ ಹೇಳು1.”
02037005a ಇತ್ಯುಕ್ತವತಿ ಧರ್ಮಜ್ಞೇ ಧರ್ಮರಾಜೇ ಯುಧಿಷ್ಠಿರೇ।
02037005c ಉವಾಚೇದಂ ವಚೋ ಭೀಷ್ಮಸ್ತತಃ ಕುರುಪಿತಾಮಹಃ।।
ಧರ್ಮಜ್ಞ ಧರ್ಮರಾಜ ಯುಧಿಷ್ಠಿರನು ಈ ರೀತಿ ಹೇಳಲು ಕುರುಪಿತಾಮಹ ಭೀಷ್ಮನು ಈ ಮಾತುಗಳನ್ನಾಡಿದನು.
02037006a ಮಾ ಭೈಸ್ತ್ವಂ ಕುರುಶಾರ್ದೂಲ ಶ್ವಾ ಸಿಂಹಂ ಹಂತುಮರ್ಹತಿ।
02037006c ಶಿವಃ ಪಂಥಾಃ ಸುನೀತೋಽತ್ರ ಮಯಾ ಪೂರ್ವತರಂ ವೃತಃ।।
“ಕುರುಶಾರ್ದೂಲ! ಭಯಪಡದಿರು! ನಾಯಿಯು ಸಿಂಹವನ್ನು ಕೊಲ್ಲಬಲ್ಲದೇ? ಇದರ ಹಿಂದೆಯೇ ನಾನು ಒಂದು ಮಂಗಳಕರ ಸುನೀತಿಯುಕ್ತ ದಾರಿಯನ್ನು ಆರಿಸಿಕೊಂಡಿದ್ದೇನೆ2.
02037007a ಪ್ರಸುಪ್ತೇ ಹಿ ಯಥಾ ಸಿಂಹೇ ಶ್ವಾನಸ್ತತ್ರ ಸಮಾಗತಾಃ।
02037007c ಭಷೇಯುಃ ಸಹಿತಾಃ ಸರ್ವೇ ತಥೇಮೇ ವಸುಧಾಧಿಪಾಃ।।
ಈ ಎಲ್ಲ ವಸುಧಾಧಿಪರೂ ಸಿಂಹವು ಮಲಗಿರುವ ಸಮಯದಲ್ಲಿ ಬೊಗಳುವ ನಾಯಿಗಳ ಪಡೆಯಂತೆ ಸೇರಿಕೊಂಡಿದ್ದಾರೆ.
02037008a ವೃಷ್ಣಿಸಿಂಹಸ್ಯ ಸುಪ್ತಸ್ಯ ತಥೇಮೇ ಪ್ರಮುಖೇ ಸ್ಥಿತಾಃ।
02037008c ಭಷಂತೇ ತಾತ ಸಂಕ್ರುದ್ಧಾಃ ಶ್ವಾನಃ ಸಿಂಹಸ್ಯ ಸನ್ನಿಧೌ।।
ಇವರೆಲ್ಲರೂ ಮಲಗಿರುವ ವೃಷ್ಣಿಸಿಂಹನ ಎದಿರು ನಿಂತು ಸಿಂಹನ ಸನ್ನಿಧಿಯಲ್ಲಿ ಬೊಗಳುವ ನಾಯಿಗಳಂತೆ ಬೊಗಳುತ್ತಿದ್ದಾರೆ.
02037009a ನ ಹಿ ಸಂಬುಧ್ಯತೇ ತಾವತ್ಸುಪ್ತಃ ಸಿಂಹ ಇವಾಚ್ಯುತಃ।
02037009c ತೇನ ಸಿಂಹೀಕರೋತ್ಯೇತಾನ್ನೃಸಿಂಹಶ್ಚೇದಿಪುಂಗವಃ।।
ಎಲ್ಲಿಯವರೆಗೆ ಮಲಗಿರುವ ಸಿಂಹದಂತಿರುವ ಅಚ್ಯುತನು ಏಳುವುದಿಲ್ಲವೋ ಅಲ್ಲಿಯವರೆಗೆ ಅವರೆಲ್ಲರೂ ಆ ನರಸಿಂಹ ಚೇದಿಪುಂಗವನನ್ನು ಸಿಂಹನನ್ನಾಗಿ ಮಾಡುತ್ತಿದ್ದಾರೆ.
02037010a ಪಾರ್ಥಿವಾನ್ಪಾರ್ಥಿವಶ್ರೇಷ್ಠ ಶಿಶುಪಾಲೋಽಲ್ಪಚೇತನಃ।
02037010c ಸರ್ವಾನ್ಸರ್ವಾತ್ಮನಾ ತಾತ ನೇತುಕಾಮೋ ಯಮಕ್ಷಯಂ।।
ಮಗೂ! ಪಾರ್ಥಿವಶ್ರೇಷ್ಠ! ಅಲ್ಪಚೇತನ ಶಿಶುಪಾಲನು ಪಾರ್ಥಿವ ಸರ್ವರನ್ನೂ, ಯಾರನ್ನೂ ಬಿಡದೇ, ತನ್ನೊಂದಿಗೆ ಯಮಲೋಕಕ್ಕೆ ಕರೆದೊಯ್ಯಲು ಬಯಸುತ್ತಿದ್ದಾನೆ.
02037011a ನೂನಮೇತತ್ಸಮಾದಾತುಂ ಪುನರಿಚ್ಛತ್ಯಧೋಕ್ಷಜಃ।
02037011c ಯದಸ್ಯ ಶಿಶುಪಾಲಸ್ಥಂ ತೇಜಸ್ತಿಷ್ಠತಿ ಭಾರತ।।
ಭಾರತ! ಅಧೋಕ್ಷಜನು ಶಿಶುಪಾಲನಲ್ಲಿರುವ ತೇಜಸ್ಸನ್ನು ಹಿಂದೆ ತೆಗೆದುಕೊಳ್ಳಲು ಬಯಸುತ್ತಿದ್ದಾನೆ ಎನ್ನುವುದರಲ್ಲಿ ಸಂಶಯವಿಲ್ಲ.
02037012a ವಿಪ್ಲುತಾ ಚಾಸ್ಯ ಭದ್ರಂ ತೇ ಬುದ್ಧಿರ್ಬುದ್ಧಿಮತಾಂ ವರ।
02037012c ಚೇದಿರಾಜಸ್ಯ ಕೌಂತೇಯ ಸರ್ವೇಷಾಂ ಚ ಮಹೀಕ್ಷಿತಾಂ।।
ಬುದ್ಧಿವಂತರಲ್ಲಿ ಶ್ರೇಷ್ಠ! ನಿನಗೆ ಮಂಗಳವಾಗಲಿ. ಕೌಂತೇಯ! ಚೇದಿರಾಜನ ಮತ್ತು ಸರ್ವ ಮಹೀಕ್ಷಿತರ ಬುದ್ಧಿಯು ಕೆಟ್ಟುಹೋಗಿದೆ.
02037013a ಆದಾತುಂ ಹಿ ನರವ್ಯಾಘ್ರೋ ಯಂ ಯಮಿಚ್ಛತ್ಯಯಂ ಯದಾ।
02037013c ತಸ್ಯ ವಿಪ್ಲವತೇ ಬುದ್ಧಿರೇವಂ ಚೇದಿಪತೇರ್ಯಥಾ।।
ಯಾಕೆಂದರೆ ಈ ನರವ್ಯಾಘ್ರನು ಯಾರನ್ನು ತೆಗೆದುಕೊಳ್ಳಲು ಇಚ್ಛಿಸುತ್ತಾನೋ ಅವರ ಬುದ್ಧಿಯು ಚೇದಿಪತಿಯ ಬುದ್ಧಿಯು ಹೇಗೆ ಕೆಟ್ಟುಹೋಗಿದೆಯೋ ಹಾಗೆ ಕೆಟ್ಟುಹೋಗುತ್ತದೆ.
02037014a ಚತುರ್ವಿಧಾನಾಂ ಭೂತಾನಾಂ ತ್ರಿಷು ಲೋಕೇಷು ಮಾಧವಃ।
02037014c ಪ್ರಭವಶ್ಚೈವ ಸರ್ವೇಷಾಂ ನಿಧನಂ ಚ ಯುಧಿಷ್ಠಿರ।।
ಯುಧಿಷ್ಠಿರ! ಮೂರೂ ಲೋಕಗಳ ಎಲ್ಲ ಚತುರ್ವಿಧ ಭೂತಗಳಿಗೆ ಮಾಧವನೇ ಪ್ರಭವ ಮತ್ತು ನಿಧನ.”
02037015a ಇತಿ ತಸ್ಯ ವಚಃ ಶ್ರುತ್ವಾ ತತಶ್ಚೇದಿಪತಿರ್ನೃಪಃ।
02037015c ಭೀಷ್ಮಂ ರೂಕ್ಷಾಕ್ಷರಾ ವಾಚಃ ಶ್ರಾವಯಾಮಾಸ ಭಾರತ।।
ಭಾರತ! ಅವನ ಈ ಮಾತುಗಳನ್ನು ಕೇಳಿದ ಚೇದಿಪತಿ ನೃಪನು ಬೀಷ್ಮನಿಗೆ ಸಿಟ್ಟಿನಿಂದ ಈ ಮಾತುಗಳನ್ನು ಹೇಳಿದನು.
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಶಿಶುಪಾಲವಧಪರ್ವಣಿ ಯುಧಿಷ್ಠಿರಾಶ್ವಾಸನೇ ಸಪ್ತತ್ರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಶಿಶುಪಾಲವಧಪರ್ವದಲ್ಲಿ ಯುಧಿಷ್ಠಿರಾಶ್ವಾಸನ ಎನ್ನುವ ಮೂವತ್ತೇಳನೆಯ ಅಧ್ಯಾಯವು.
-
ಯುಧಿಷ್ಠಿರನಿಗೆ ಈ ರೀತಿಯ ಅನುಮಾನವು ಏಕುಂಟಾಯಿತು? ಅವನಿಗೆ ಕೃಷ್ಣನ ದೇವತ್ವದ ಕುರಿತಾಗಲೀ ಅಥವಾ ಅವನಿಗೇ ಅಗ್ರಪೂಜೆಯು ದೊರೆಯಬೇಕು ಎನ್ನುವುದರ ಕುರಿತಾಗಲೀ ಅನುಮಾನವಿದ್ದು ಈ ಪ್ರಶ್ನೆಯನ್ನು ಕೇಳಿದನೇ? ಅಥವಾ, ಅವನಿಗೆ ಸೇರಿದ ನೃಪಕುಲರು ಏನು ಹೇಳಿಬಿಡುತ್ತಾರೋ ಎನ್ನುವ ಭಯವಿತ್ತೇ? ಅಥವಾ ಅವನ ಮಾತೇ ಸೂಚಿಸುವಂತೆ ಕೇವಲ ಯಜ್ಞ ನಿರ್ವಿಘ್ನವಾಗಿ ನೆರವೇರಬೇಕು, ಮತ್ತು ಪ್ರಜೆಗಳೆಲ್ಲರಿಗೂ ಶುಭವಾಗಬೇಕು ಎನ್ನುವ ಚಿಂತೆಯಿಂದ ಈ ಪ್ರಶ್ನೆಗಳನ್ನು ಭೀಷ್ಮನಿಗೆ ಕೇಳಿದನೇ? ಈ ರಾಜಸೂಯದ ಸಹಾಯಕನಾದ ಕೃಷ್ಣನಲ್ಲಿಯೇ ಈ ಪ್ರಶ್ನೆಯನ್ನು ಏಕೆ ಕೇಳಲಿಲ್ಲ? ಭೀಷ್ಮನಲ್ಲಿ ಈ ಪ್ರಶ್ನೆಯನ್ನು ಏಕೆ ಕೇಳಿದನು? ಇವೆಲ್ಲವುಗಳನ್ನೂ ವಿಶ್ಲೇಷಿಸಬೇಕು. ↩︎
-
ಇನ್ನೂ ಹೆಚ್ಚು ಶ್ರೀಕೃಷ್ಣನ ಗುಣಗಾನವನ್ನು ಮಾಡಿ ಶಿಶುಪಾಲನಿಂದ ಕೃಷ್ಣನ ನಿಂದನೆಯಾಗುವುದರ ಮೂಲಕ ಕೃಷ್ಣನು ತನ್ನ ಪ್ರತಿಜ್ಞೆಯನ್ನು ಪೂರೈಸಲು ಸಹಾಯಕವಾಗುವ ದಾರಿಯನ್ನು ಭೀಷ್ಮನು ಇಲ್ಲಿ ಯೋಚಿಸಿಕೊಂಡಿದ್ದಾನೆ ಎಂದು ತಿಳಿಯಬಹುದು. ↩︎