ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸಭಾ ಪರ್ವ
ಅರ್ಘ್ಯಾಭಿಹರಣ ಪರ್ವ
ಅಧ್ಯಾಯ 36
ಸಾರ
ಸಹದೇವನು ಕೋಪದಿಂದ ಶಿಶುಪಾಲನಿಗೆ ತನ್ನ ಕಾಲನ್ನು ತೋರಿಸಿದುದು (1-6). ಶಿಶುಪಾಲನು ಯುದ್ಧಕ್ಕೆ ಸನ್ನದ್ಧನಾದುದು (7-15).
02036001 ವೈಶಂಪಾಯನ ಉವಾಚ।
02036001a ಏವಮುಕ್ತ್ವಾ ತತೋ ಭೀಷ್ಮೋ ವಿರರಾಮ ಮಹಾಯಶಾಃ।
02036001c ವ್ಯಾಜಹಾರೋತ್ತರಂ ತತ್ರ ಸಹದೇವೋಽರ್ಥವದ್ವಚಃ।।
ವೈಶಂಪಾಯನನು ಹೇಳಿದನು: “ಹೀಗೆ ಹೇಳಿದ ಮಹಾಯಶಸ್ವಿ ಭೀಷ್ಮನು ಸುಮ್ಮನಾದನು. ಅದಕ್ಕೆ ಉತ್ತರವಾಗಿ ಸಹದೇವನು ಅರ್ಥವತ್ತಾದ ಮಾತುಗಳನ್ನಾಡಿದನು:
02036002a ಕೇಶವಂ ಕೇಶಿಹಂತಾರಮಪ್ರಮೇಯಪರಾಕ್ರಮಂ।
02036002c ಪೂಜ್ಯಮಾನಂ ಮಯಾ ಯೋ ವಃ ಕೃಷ್ಣಂ ನ ಸಹತೇ ನೃಪಾಃ।।
02036003a ಸರ್ವೇಷಾಂ ಬಲಿನಾಂ ಮೂರ್ಧ್ನಿ ಮಯೇದಂ ನಿಹಿತಂ ಪದಂ।
02036003c ಏವಮುಕ್ತೇ ಮಯಾ ಸಮ್ಯಗುತ್ತರಂ ಪ್ರಬ್ರವೀತು ಸಃ।।
“ಅಪ್ರಮೇಯ ಪರಾಕ್ರಮಿ ಕೇಶಿಹಂತಾರ ಕೇಶವ ಕೃಷ್ಣನನ್ನು ನಾನು ಪೂಜಿಸಿದ್ದುದನ್ನು ಯಾರಿಗೆ ಸಹಿಸಲಿಕ್ಕಾಗಲಿಲ್ಲವೋ ಅವರೆಲ್ಲ ಬಲಿಗಳ ಶಿರಗಳನ್ನು ನನ್ನ ಈ ಪಾದದಿಂದ ತುಳಿಯುತ್ತೇನೆ. ನನ್ನ ಈ ಮಾತಿಗೆ ಅವನು ಸರಿಯಾದ ಉತ್ತರವನ್ನು ನೀಡಲಿ!
02036004a ಮತಿಮಂತಸ್ತು ಯೇ ಕೇ ಚಿದಾಚಾರ್ಯಂ ಪಿತರಂ ಗುರುಂ।
02036004c ಅರ್ಚ್ಯಮರ್ಚಿತಮರ್ಚಾರ್ಹಮನುಜಾನಂತು ತೇ ನೃಪಾಃ।।
ಆದರೆ ಮತಿವಂತ ನೃಪರು ಅವನು ಆಚಾರ್ಯ, ಪಿತ, ಗುರು, ಅರ್ಚಿತನು, ಅರ್ಚನೆಗರ್ಹ, ಮತ್ತು ಅರ್ಚಿಸಬೇಕಾದವನು ಎಂದು ತಿಳಿದಿದ್ದಾರೆ.”
02036005a ತತೋ ನ ವ್ಯಾಜಹಾರೈಷಾಂ ಕಶ್ಚಿದ್ಬುದ್ಧಿಮತಾಂ ಸತಾಂ।
02036005c ಮಾನಿನಾಂ ಬಲಿನಾಂ ರಾಜ್ಞಾಂ ಮಧ್ಯೇ ಸಂದರ್ಶಿತೇ ಪದೇ।।
ಹೀಗೆ ಅವನು ತನ್ನ ಪಾದವನ್ನು ತೋರಿಸಿದಾಗ ಅಲ್ಲಿದ್ದ ಬುದ್ಧಿವಂತ, ಸಂತ, ಗೌರವಾನ್ವಿತ, ಬಲಶಾಲಿ ರಾಜರು ಯಾರೂ ಮಾತನಾಡಲಿಲ್ಲ.
02036006a ತತೋಽಪತತ್ಪುಷ್ಪವೃಷ್ಟಿಃ ಸಹದೇವಸ್ಯ ಮೂರ್ಧನಿ।
02036006c ಅದೃಶ್ಯರೂಪಾ ವಾಚಶ್ಚಾಪ್ಯಬ್ರುವನ್ಸಾಧು ಸಾಧ್ವಿತಿ।।
ಆಗ ಸಹದೇವನ ತಲೆಯಮೇಲೆ ಪುಷ್ಪವೃಷ್ಠಿಯು ಬಿದ್ದಿತು ಮತ್ತು “ಸಾಧು! ಸಾಧು!” ಎಂಬ ಅದೃಶ್ಯ ರೂಪೀ ಮಾತುಗಳು ಕೇಳಿಬಂದವು.
02036007a ಆವಿಧ್ಯದಜಿನಂ ಕೃಷ್ಣಂ ಭವಿಷ್ಯದ್ಭೂತಜಲ್ಪಕಃ।
02036007c ಸರ್ವಸಂಶಯನಿರ್ಮೋಕ್ತಾ ನಾರದಃ ಸರ್ವಲೋಕವಿತ್।।
ಆಗ ಭೂತಭವಿಷ್ಯಗಳನ್ನು ತಿಳಿದಿರುವ, ಸರ್ವಸಂಶಯ ನಿರ್ಮೋಕ್ತ, ಸರ್ವಲೋಕವಿದು ನಾರದನು ತನ್ನ ಕೃಷ್ಣಾಜಿನವನ್ನು ಮುಟ್ಟಿದನು.
02036008a ತತ್ರಾಹೂತಾಗತಾಃ ಸರ್ವೇ ಸುನೀಥಪ್ರಮುಖಾ ಗಣಾಃ।
02036008c ಸಂಪ್ರಾದೃಶ್ಯಂತ ಸಂಕ್ರುದ್ಧಾ ವಿವರ್ಣವದನಾಸ್ತಥಾ।।
ಸುನೀಥ1ನ ನಾಯಕತ್ವದಲ್ಲಿ ಆಗಮಿಸಿದ್ದ ಅತಿಥಿ ಗಣಗಳಲ್ಲಿದ್ದ ಎಲ್ಲರೂ ಸಂಕೃದ್ಧರಾಗಿ ವಿವರ್ಣವದನರಾಗಿ ಕಂಡು ಬಂದರು.
02036009a ಯುಧಿಷ್ಠಿರಾಭಿಷೇಕಂ ಚ ವಾಸುದೇವಸ್ಯ ಚಾರ್ಹಣಂ।
02036009c ಅಬ್ರುವಂಸ್ತತ್ರ ರಾಜಾನೋ ನಿರ್ವೇದಾದಾತ್ಮನಿಶ್ಚಯಾತ್।।
ಯುಧಿಷ್ಠಿರನ ಅಭಿಷೇಕ ಮತ್ತು ವಾಸುದೇವನಿಗಿತ್ತ ಪೂಜೆಯ ಕುರಿತು ಇವಕ್ಕೆಲ್ಲ ತಾವೇ ಅರ್ಹರಾಗಿದ್ದರೆಂದು ತಿಳಿದ ರಾಜರು ಮಾತನಾಡಿಕೊಂಡರು.
02036010a ಸುಹೃದ್ಭಿರ್ವಾರ್ಯಮಾಣಾನಾಂ ತೇಷಾಂ ಹಿ ವಪುರಾಬಭೌ।
02036010c ಆಮಿಷಾದಪಕೃಷ್ಟಾನಾಂ ಸಿಂಹಾನಾಮಿವ ಗರ್ಜತಾಂ।।
ಮಿತ್ರರು ಅವರನ್ನು ತಡೆಯಲು ಹಸಿಮಾಂಸದ ತುಂಡಿನಿಂದ ದೂರಕ್ಕೆ ಎಳೆಯಲ್ಪಡುತ್ತಿರುವ ಸಿಂಹಗಳು ಗರ್ಜಿಸುವಂತೆ ಕಂಡುಬರುತ್ತಿದ್ದರು.
02036011a ತಂ ಬಲೌಘಮಪರ್ಯಂತಂ ರಾಜಸಾಗರಮಕ್ಷಯಂ।
02036011c ಕುರ್ವಾಣಂ ಸಮಯಂ ಕೃಷ್ಣೋ ಯುದ್ಧಾಯ ಬುಬುಧೇ ತದಾ।।
ಆಗ ಆ ಅಕ್ಷಯ ರಾಜಸಾಗರವು ತಮ್ಮ ಸೇನೆಗಳನ್ನು ಒಟ್ಟುಮಾಡಿಕೊಂಡು ಯುದ್ಧಕ್ಕೆ ತಯಾರಿ ನಡೆಸುತ್ತಿದೆ ಎನ್ನುವುದನ್ನು ಕೃಷ್ಣನು ಅರ್ಥಮಾಡಿಕೊಂಡನು.
02036012a ಪೂಜಯಿತ್ವಾ ತು ಪೂಜಾರ್ಹಂ ಬ್ರಹ್ಮಕ್ಷತ್ರಂ ವಿಶೇಷತಃ।
02036012c ಸಹದೇವೋ ನೃಣಾಂ ದೇವಃ ಸಮಾಪಯತ ಕರ್ಮ ತತ್।।
ಮನುಷ್ಯರಲ್ಲಿ ದೇವನಂತಿದ್ದ ಸಹದೇವನು ಪೂಜಾರ್ಹ ಬ್ರಾಹ್ಮಣ-ಕ್ಷತ್ರಿಯರನ್ನು ವಿಶೇಷವಾಗಿ ಪೂಜಿಸಿ ಆ ಕರ್ಮವನ್ನು ಪೂರೈಸಿದನು.
02036013a ತಸ್ಮಿನ್ನಭ್ಯರ್ಚಿತೇ ಕೃಷ್ಣೇ ಸುನೀಥಃ ಶತ್ರುಕರ್ಷಣಃ।
02036013c ಅತಿತಾಮ್ರೇಕ್ಷಣಃ ಕೋಪಾದುವಾಚ ಮನುಜಾಧಿಪಾನ್।।
ಕೃಷ್ಣನನ್ನು ಅರ್ಚಿಸಿದ ನಂತರ ಶತ್ರುಕರ್ಷಣ ಸುನೀಥನು ಕೋಪದಿಂದ ತನ್ನ ಕಣ್ಣುಗಳನ್ನು ಅತೀವ ಕೆಂಪಾಗಿಸಿಕೊಂಡು ಮನುಜಾಧಿಪರನ್ನುದ್ದೇಶಿಸಿ ಹೇಳಿದನು:
02036014a ಸ್ಥಿತಃ ಸೇನಾಪತಿರ್ವೋಽಹಂ ಮನ್ಯಧ್ವಂ ಕಿಂ ನು ಸಾಂಪ್ರತಂ।
02036014c ಯುಧಿ ತಿಷ್ಠಾಮ ಸಮ್ನಹ್ಯ ಸಮೇತಾನ್ವೃಷ್ಣಿಪಾಂಡವಾನ್।।
“ನಾನು ನಿಮ್ಮ ಸೇನಾಪತಿಯಾಗಿ ನಿಂತಿದ್ದೇನೆ. ನಿಮಗೆಲ್ಲರಿಗೂ ಸ್ವೀಕಾರವಿದೆ ತಾನೆ? ಇಲ್ಲಿ ಒಂದಾಗಿರುವ ವೃಷ್ಣಿ ಪಾಂಡವರೊಂದಿಗೆ ಯುದ್ಧಕ್ಕೆ ಸನ್ನದ್ಧನಾಗಿ ನಿಂತಿದ್ದೇನೆ.”
02036015a ಇತಿ ಸರ್ವಾನ್ಸಮುತ್ಸಾಹ್ಯ ರಾಜ್ಞಸ್ತಾಂಶ್ಚೇದಿಪುಂಗವಃ।
02036015c ಯಜ್ಞೋಪಘಾತಾಯ ತತಃ ಸೋಽಮಂತ್ರಯತ ರಾಜಭಿಃ।।
ಹೀಗೆ ರಾಜರೆಲ್ಲರೂ ಉತ್ಸಾಹದಿಂದ ಮೇಲೇಳಲು, ಚೇದಿಪುಂಗವನು ರಾಜರೊಂದಿಗೆ ಈ ಯಜ್ಞವನ್ನು ಭಂಗಪಡಿಸುವ ಕುರಿತು ಯೋಚಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಅರ್ಘಾಭಿಹರಣಪರ್ವಣಿ ರಾಜಮಂತ್ರಣೇ ಷಟ್ತ್ರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಅರ್ಘಾಭಿಹರಣಪರ್ವದಲ್ಲಿ ರಾಜಮಂತ್ರಣ ಎನ್ನುವ ಮೂವತ್ತಾರನೆಯ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಅರ್ಘ್ಯಾಭಿಹರಣಪರ್ವಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಅರ್ಘ್ಯಾಭಿಹರಣಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-1/18, ಉಪಪರ್ವಗಳು-25/100, ಅಧ್ಯಾಯಗಳು-261/1995, ಶ್ಲೋಕಗಳು-8423/73784.
-
ಶಿಶುಪಾಲ . ↩︎