ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸಭಾ ಪರ್ವ
ಅರ್ಘ್ಯಾಭಿಹರಣ ಪರ್ವ
ಅಧ್ಯಾಯ 34
ಸಾರ
ಶಿಶುಪಾಲನು ಆಕ್ಷೇಪಿಸಿ, ಸಭೆಯನ್ನು ತ್ಯಜಿಸಿ ಹೊರಹೋದುದು (1-23).
02034001 ಶಿಶುಪಾಲ ಉವಾಚ।
02034001a ನಾಯಮರ್ಹತಿ ವಾರ್ಷ್ಣೇಯಸ್ತಿಷ್ಠತ್ಸ್ವಿಹ ಮಹಾತ್ಮಸು।
02034001c ಮಹೀಪತಿಷು ಕೌರವ್ಯ ರಾಜವತ್ಪಾರ್ಥಿವಾರ್ಹಣಂ।।
ಶಿಶುಪಾಲನು ಹೇಳಿದನು: “ಕೌರವ್ಯ! ಮಹಾತ್ಮ ಮಹೀಪತಿಗಳು ಇಲ್ಲಿರವಾಗ ಪಾರ್ಥಿವನಿಗೆ ಸಲ್ಲಬೇಕಾದ ರಾಜ ಗೌರವಕ್ಕೆ ರಾಜನಲ್ಲದ ವಾರ್ಷ್ಣೇಯನು1 ಅರ್ಹನಲ್ಲ.
02034002a ನಾಯಂ ಯುಕ್ತಃ ಸಮಾಚಾರಃ ಪಾಂಡವೇಷು ಮಹಾತ್ಮಸು।
02034002c ಯತ್ಕಾಮಾತ್ಪುಂಡರೀಕಾಕ್ಷಂ ಪಾಂಡವಾರ್ಚಿತವಾನಸಿ।।
ಪಾಂಡವ! ನಿಮಗಿಷ್ಟ ಬಂದಹಾಗೆ ಈ ಪುಂಡರೀಕಾಕ್ಷನನ್ನು ಅರ್ಚಿಸುವುದು ಮಹಾತ್ಮ ಪಾಂಡವರಿಗೆ ತಕ್ಕುದಲ್ಲ!
02034003a ಬಾಲಾ ಯೂಯಂ ನ ಜಾನೀಧ್ವಂ ಧರ್ಮಃ ಸೂಕ್ಷ್ಮೋ ಹಿ ಪಾಂಡವಾಃ।
02034003c ಅಯಂ ತತ್ರಾಭ್ಯತಿಕ್ರಾಂತ ಆಪಗೇಯೋಽಲ್ಪದರ್ಶನಃ।।
02034004a ತ್ವಾದೃಶೋ ಧರ್ಮಯುಕ್ತೋ ಹಿ ಕುರ್ವಾಣಃ ಪ್ರಿಯಕಾಮ್ಯಯಾ।
02034004c ಭವತ್ಯಭ್ಯಧಿಕಂ ಭೀಷ್ಮೋ ಲೋಕೇಷ್ವವಮತಃ ಸತಾಂ।।
ಪಾಂಡವರೇ! ಸೂಕ್ಷ್ಮವಾದ ಧರ್ಮವು ನಿಮ್ಮಂಥ ಬಾಲಕರಿಗೆ ಅರ್ಥವಾಗುವುದಿಲ್ಲ! ಆದರೆ ಈ ದೂರದೃಷ್ಟಿಯಿಲ್ಲದ ನದಿಯ ಪುತ್ರ ಭೀಷ್ಮನು ಧರ್ಮಯುಕ್ತನಾಗಿದ್ದರೂ ಧರ್ಮವನ್ನು ಉಲ್ಲಂಘಿಸಿ ತನಗಿಷ್ಟಬಂದಹಾಗೆ ಮಾಡುತ್ತಾನೆಂದಾದರೆ ಅವನೇ ಈ ಲೋಕದ ಸಂತರಿಂದ ಹೆಚ್ಚು ಹೀಳಾಯಿಸಿಕೊಳ್ಳುತ್ತಾನೆ.
02034005a ಕಥಂ ಹ್ಯರಾಜಾ ದಾಶಾರ್ಹೋ ಮಧ್ಯೇ ಸರ್ವಮಹೀಕ್ಷಿತಾಂ।
02034005c ಅರ್ಹಣಾಮರ್ಹತಿ ತಥಾ ಯಥಾ ಯುಷ್ಮಾಭಿರರ್ಚಿತಃ।।
ರಾಜನಲ್ಲದ ದಾಶಾರ್ಹನು ಸರ್ವ ಮಹೀಕ್ಷಿತರ ಮಧ್ಯೆ ಹೇಗೆ ನೀವು ಅರ್ಚಿಸಿದಂತೆ ಅಗ್ರಪೂಜೆಗೆ ಅರ್ಹನಾಗುತ್ತಾನೆ?
02034006a ಅಥ ವಾ ಮನ್ಯಸೇ ಕೃಷ್ಣಂ ಸ್ಥವಿರಂ ಭರತರ್ಷಭ।
02034006c ವಸುದೇವೇ ಸ್ಥಿತೇ ವೃದ್ಧೇ ಕಥಮರ್ಹತಿ ತತ್ಸುತಃ।।
ಅಥವಾ ಕೃಷ್ಣನು ಹಿರಿಯವನೆಂದು ನೀವು ಪರಿಗಣಿಸಿದರೆ, ಭರತರ್ಷಭ! ವಸುದೇವನೇ ಇಲ್ಲಿರುವಾಗ ಅವನ ಮಗನು ಹೇಗೆ ಹಿರಿಯವನಾಗುತ್ತಾನೆ?
02034007a ಅಥ ವಾ ವಾಸುದೇವೋಽಪಿ ಪ್ರಿಯಕಾಮೋಽನುವೃತ್ತವಾನ್।
02034007c ದ್ರುಪದೇ ತಿಷ್ಠತಿ ಕಥಂ ಮಾಧವೋಽರ್ಹತಿ ಪೂಜನಂ।।
ಅಥವಾ ವಾಸುದೇವನು ನಿಮ್ಮ ಪ್ರಿಯಕರ, ಬೇಕಾದುದನ್ನು ಮಾಡಿಕೊಡುತ್ತಾನೆ ಎಂದಿದ್ದರೆ ದ್ರುಪದನೇ ಇಲ್ಲಿ ಇರುವಾಗ ಮಾಧವನು ಹೇಗೆ ಈ ಪೂಜೆಗೆ ಅರ್ಹನಾಗುತ್ತಾನೆ?
02034008a ಆಚಾರ್ಯಂ ಮನ್ಯಸೇ ಕೃಷ್ಣಮಥ ವಾ ಕುರುಪುಂಗವ।
02034008c ದ್ರೋಣೇ ತಿಷ್ಠತಿ ವಾರ್ಷ್ಣೇಯಂ ಕಸ್ಮಾದರ್ಚಿತವಾನಸಿ।।
ಕುರುಪುಂಗವ! ಅಥವಾ ಕೃಷ್ಣನನ್ನು ಆಚಾರ್ಯನೆಂದು ಮನ್ನಿಸಿದೆಯಾದರೆ, ದ್ರೋಣನೇ ಇಲ್ಲಿರುವಾಗ ವಾರ್ಷ್ಣೇಯನು ಹೇಗೆ ಪೂಜೆಗರ್ಹನಾಗುತ್ತಾನೆ?
02034009a ಋತ್ವಿಜಂ ಮನ್ಯಸೇ ಕೃಷ್ಣಮಥ ವಾ ಕುರುನಂದನ।
02034009c ದ್ವೈಪಾಯನೇ ಸ್ಥಿತೇ ವಿಪ್ರೇ ಕಥಂ ಕೃಷ್ಣೋಽರ್ಚಿತಸ್ತ್ವಯಾ।।
ಕುರುನಂದನ! ಅಥವಾ ಕೃಷ್ಣನನ್ನು ಋತ್ವಿಜನೆಂದು ಮನ್ನಿಸಿದೆಯಾದರೆ ವಿಪ್ರ ದ್ವೈಪಾಯನನೇ ಇಲ್ಲಿರುವಾಗ ಕೃಷ್ಣನು ಹೇಗೆ ಪೂಜೆಗರ್ಹನಾಗುತ್ತಾನೆ?
02034010a ನೈವ ಋತ್ವಿಮ್ನ ಚಾಚಾರ್ಯೋ ನ ರಾಜಾ ಮಧುಸೂದನಃ।
02034010c ಅರ್ಚಿತಶ್ಚ ಕುರುಶ್ರೇಷ್ಠ ಕಿಮನ್ಯತ್ಪ್ರಿಯಕಾಮ್ಯಯಾ।।
ಈ ಮಧುಸೂದನನು ಋತ್ವಿಜನೂ ಅಲ್ಲ, ಆಚಾರ್ಯನೂ ಅಲ್ಲ, ರಾಜನೂ ಅಲ್ಲ. ಕುರುಶ್ರೇಷ್ಠ! ಅಂಥವನನ್ನು ನೀನು ಪೂಜೆಸಿದ್ದೀಯೆಂದರೆ ಇದು ಕೇವಲ ನಿನಗಿಷ್ಟಬಂದಹಾಗೆ ಮಾಡಿದಹಾಗಾಗಲಿಲ್ಲವೇ?
02034011a ಅಥ ವಾಪ್ಯರ್ಚನೀಯೋಽಯಂ ಯುಷ್ಮಾಕಂ ಮಧುಸೂದನಃ।
02034011c ಕಿಂ ರಾಜಭಿರಿಹಾನೀತೈರವಮಾನಾಯ ಭಾರತ।।
ಭಾರತ! ನಿನಗೆ ಮಧುಸೂದನನನ್ನೇ ಪೂಜಿಸಬೇಕೆಂದಿದ್ದಿದ್ದರೆ ಈ ರಾಜರೆನ್ನೆಲ್ಲಾ ಇಲ್ಲಿಗೆ ಕರೆದಿದ್ದೇಕೆ? ಅವಮಾನ ಮಾಡಲಿಕ್ಕೆಂದೇ?
02034012a ವಯಂ ತು ನ ಭಯಾದಸ್ಯ ಕೌಂತೇಯಸ್ಯ ಮಹಾತ್ಮನಃ।
02034012c ಪ್ರಯಚ್ಛಾಮಃ ಕರಾನ್ಸರ್ವೇ ನ ಲೋಭಾನ್ನ ಚ ಸಾಂತ್ವನಾತ್।।
ನಾವೆಲ್ಲ ಮಹಾತ್ಮ ಕೌಂತೇಯನಿಗೆ ಕರವನ್ನು ಕೊಟ್ಟಿದ್ದುದು ಭಯದಿಂದಲ್ಲ, ಲೋಭದಿಂದಲೂ ಅಲ್ಲ ಅಥವಾ ನಿನ್ನನ್ನು ಮೆಚ್ಚಿಸಬೇಕೆಂದೂ ಅಲ್ಲ.
02034013a ಅಸ್ಯ ಧರ್ಮಪ್ರವೃತ್ತಸ್ಯ ಪಾರ್ಥಿವತ್ವಂ ಚಿಕೀರ್ಷತಃ।
02034013c ಕರಾನಸ್ಮೈ ಪ್ರಯಚ್ಛಾಮಃ ಸೋಽಯಮಸ್ಮಾನ್ನ ಮನ್ಯತೇ।।
ಈ ಧರ್ಮಪ್ರವೃತ್ತನು ಪಾರ್ಥಿವತ್ವವನ್ನು ಬಯಸಿದನು. ಆದುದರಿಂದ ಅವನಿಗೆ ಕರವನಿತ್ತೆವು. ಆದರೆ ಈಗ ಅವನು ನಮ್ಮನ್ನು ಪರಿಗಣಿಸುವುದೇ ಇಲ್ಲ!
02034014a ಕಿಮನ್ಯದವಮಾನಾದ್ಧಿ ಯದಿಮಂ ರಾಜಸಂಸದಿ।
02034014c ಅಪ್ರಾಪ್ತಲಕ್ಷಣಂ ಕೃಷ್ಣಮರ್ಘ್ಯೇಣಾರ್ಚಿತವಾನಸಿ।।
ಈ ರಾಜ ಸಂಸದಿಯಲ್ಲಿ ಅದರ ಚಿಹ್ನೆಯೇ ಇಲ್ಲದ ಕೃಷ್ಣನಿಗೆ ಅರ್ಘ್ಯವನ್ನಿತ್ತು ಪೂಜಿಸಿದ್ದೀಯೆಂದರೆ ಇದು ನಮ್ಮನ್ನು ಅವಮಾನಿಸುವ ಬುದ್ಧಿಯಿಂದಲ್ಲದೇ ಮತ್ತ್ಯಾವ ಕಾರಣದಿಂದ?
02034015a ಅಕಸ್ಮಾದ್ಧರ್ಮಪುತ್ರಸ್ಯ ಧರ್ಮಾತ್ಮೇತಿ ಯಶೋ ಗತಂ।
02034015c ಕೋ ಹಿ ಧರ್ಮಚ್ಯುತೇ ಪೂಜಾಮೇವಂ ಯುಕ್ತಾಂ ಪ್ರಯೋಜಯೇತ್।
02034015e ಯೋಽಯಂ ವೃಷ್ಣಿಕುಲೇ ಜಾತೋ ರಾಜಾನಂ ಹತವಾನ್ಪುರಾ।।
ಅಕಸ್ಮಾತ್ ಧರ್ಮಪುತ್ರನ ಧರ್ಮಾತ್ಮನೆನ್ನುವ ಯಶಸ್ಸು ಹೊರಟುಹೋಯಿತು! ವೃಷ್ಣಿಕುಲದಲ್ಲಿ ಹುಟ್ಟಿ ಹಿಂದೆ ರಾಜನನ್ನು ಕೊಂದ ಧರ್ಮಚ್ಯುತನಿಗೆ ಯಾರುತಾನೇ ಈ ರೀತಿಯ ಗೌರವವನ್ನಿತ್ತು ಪೂಜಿಸುತ್ತಾರೆ?
02034016a ಅದ್ಯ ಧರ್ಮಾತ್ಮತಾ ಚೈವ ವ್ಯಪಕೃಷ್ಟಾ ಯುಧಿಷ್ಠಿರಾತ್।
02034016c ಕೃಪಣತ್ವಂ ನಿವಿಷ್ಟಂ ಚ ಕೃಷ್ಣೇಽರ್ಘ್ಯಸ್ಯ ನಿವೇದನಾತ್।।
ಕೃಷ್ಣನಿಗೆ ಅರ್ಘ್ಯವನ್ನು ನೀಡುವುದರಿಂದ ಇಂದು ಯುಧಿಷ್ಠಿರನ ಧರ್ಮಾತ್ಮತೆಯು ಹರಿದು ಚಿಂದಿಯಾಗಿ ಹೋಗಿ ಅವನ ಕೃಪಣತ್ವವು ತೋರಿಸಿಕೊಂಡಿತು!
02034017a ಯದಿ ಭೀತಾಶ್ಚ ಕೌಂತೇಯಾಃ ಕೃಪಣಾಶ್ಚ ತಪಸ್ವಿನಃ।
02034017c ನನು ತ್ವಯಾಪಿ ಬೋದ್ಧವ್ಯಂ ಯಾಂ ಪೂಜಾಂ ಮಾಧವೋಽರ್ಹತಿ।।
ಒಂದು ವೇಳೆ ಕೌಂತೇಯರು ಭೀತರೂ, ಕೃಪಣರೂ, ಬೆಂದವರೂ ಆಗಿದ್ದಾರೆಂದರೆ ಮಾಧವ! ಅವರಿಗೆ ನೀನಾದರೂ ಎಂಥವರು ಪೂಜೆಗೆ ಅರ್ಹರು ಎಂದು ತಿಳಿಸಿಕೊಡಬಹುದಿದ್ದಲ್ಲವೇ?
02034018a ಅಥ ವಾ ಕೃಪಣೈರೇತಾಮುಪನೀತಾಂ ಜನಾರ್ದನ।
02034018c ಪೂಜಾಮನರ್ಹಃ ಕಸ್ಮಾತ್ತ್ವಮಭ್ಯನುಜ್ಞಾತವಾನಸಿ।।
ಅಥವಾ ತಮ್ಮ ಸಣ್ಣಬುದ್ಧಿಯಿಂದ ಅನರ್ಹನಾದ ನಿನಗೆ ಪೂಜೆಯನ್ನಿತ್ತರೂ ಜನಾರ್ದನ! ನೀನು ಹೇಗೆ ಅದನ್ನು ಒಪ್ಪಿಕೊಂಡು ಸ್ವೀಕರಿಸಿದೆ?
02034019a ಅಯುಕ್ತಾಮಾತ್ಮನಃ ಪೂಜಾಂ ತ್ವಂ ಪುನರ್ಬಹು ಮನ್ಯಸೇ।
02034019c ಹವಿಷಃ ಪ್ರಾಪ್ಯ ನಿಷ್ಯಂದಂ ಪ್ರಾಶಿತುಂ ಶ್ವೇವ ನಿರ್ಜನೇ।।
ಇಲ್ಲ! ಚೆಲ್ಲಿದ ಹವಿಸ್ಸನ್ನು ಎತ್ತಿಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ತಿಂದು ಸಂತೋಷಪಡುವ ನಾಯಿಯ ಹಾಗೆ ನೀನು ನಿನಗರ್ಹವಾಗಿರದ ಪೂಜೆಯನ್ನು ಉತ್ತಮ ಉಡುಗೊರೆಯೆಂದು ಸಂತೋಷಪಡುತ್ತಿದ್ದೀಯೆ!
02034020a ನ ತ್ವಯಂ ಪಾರ್ಥಿವೇಂದ್ರಾಣಾಮವಮಾನಃ ಪ್ರಯುಜ್ಯತೇ।
02034020c ತ್ವಾಮೇವ ಕುರವೋ ವ್ಯಕ್ತಂ ಪ್ರಲಂಭಂತೇ ಜನಾರ್ದನ।।
ಜನಾರ್ದನ! ಕೌರವರು ಈ ಪಾರ್ಥಿವೇಂದ್ರರಿಗೆ ಅಪಮಾನ ಮಾಡಿದ್ದುದಲ್ಲದೇ ನಿನ್ನನ್ನು ಪೂಜಿಸಿ ನೀನೂ ಕೂಡ ಎಂಥವನೆಂದು ಪ್ರದರ್ಶಿಸಿದ್ದಾರೆ!
02034021a ಕ್ಲೀಬೇ ದಾರಕ್ರಿಯಾ ಯಾದೃಗಂಧೇ ವಾ ರೂಪದರ್ಶನಂ।
02034021c ಅರಾಜ್ಞೋ ರಾಜವತ್ಪೂಜಾ ತಥಾ ತೇ ಮಧುಸೂದನ।।
ಮಧುಸೂದನ! ಶಿಖಂಡಿಗೆ ಮದುವೆಯು ಹೇಗೋ ಹಾಗೆ, ಅಂಧನಿಗೆ ರೂಪದರ್ಶನವು ಹೇಗೋ ಹಾಗೆ, ರಾಜನಲ್ಲದ ನಿನಗೆ ಸಲ್ಲಿಸಿದ ಈ ರಾಜಪೂಜೆ!
02034022a ದೃಷ್ಟೋ ಯುಧಿಷ್ಠಿರೋ ರಾಜಾ ದೃಷ್ಟೋ ಭೀಷ್ಮಶ್ಚ ಯಾದೃಶಃ।
02034022c ವಾಸುದೇವೋಽಪ್ಯಯಂ ದೃಷ್ಟಃ ಸರ್ವಮೇತದ್ಯಥಾತಥಂ।।
ರಾಜ ಯುಧಿಷ್ಠಿರನು ಎಂಥವನು ಎಂದು ನೋಡಿದೆವು, ಭೀಷ್ಮನೂ ಎಂಥವನೆಂದು ನೋಡಿದೆವು, ಮತ್ತು ವಾಸುದೇವನನ್ನೂ ಇಂದು ನಾವೆಲ್ಲರೂ ನೋಡಿಯಾಯಿತು.”
02034023a ಇತ್ಯುಕ್ತ್ವಾ ಶಿಶುಪಾಲಸ್ತಾನುತ್ಥಾಯ ಪರಮಾಸನಾತ್।
02034023c ನಿರ್ಯಯೌ ಸದಸಸ್ತಸ್ಮಾತ್ಸಹಿತೋ ರಾಜಭಿಸ್ತದಾ।।
ಹೀಗೆ ಹೇಳಿ ಶಿಶುಪಾಲನು ಉನ್ನತ ಆಸನದಿಂದ ಮೇಲೆದ್ದು ಕೆಲವು ರಾಜರೊಂದಿಗೆ ಸಭೆಯನ್ನು ಬಿಟ್ಟು ಹೊರಟನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಅರ್ಘಾಭಿಹರಣಪರ್ವಣಿ ಶಿಶುಪಾಲಕ್ರೋಧೇ ಚತುಸ್ತ್ರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಅರ್ಘಾಭಿಹರಣಪರ್ವದಲ್ಲಿ ಶಿಶುಪಾಲಕ್ರೋಧ ಎನ್ನುವ ಮೂವತ್ನಾಲ್ಕನೆಯ ಅಧ್ಯಾಯವು.
-
ಯದುಕುಲದಲ್ಲಿ ಹುಟ್ಟಿದ ಶ್ರೀಕೃಷ್ಣನು ರಾಜನಲ್ಲ. ಯಯಾತಿಯ ಶಾಪದಿಂದ ಯಾದವರು ರಾಜ್ಯಭ್ರಷ್ಟರಾಗಿದ್ದರು. ↩︎