030 ರಾಜಸೂಯದೀಕ್ಷಾ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸಭಾ ಪರ್ವ

ರಾಜಸೂಯಿಕ ಪರ್ವ

ಅಧ್ಯಾಯ 30

ಸಾರ

ಯುಧಿಷ್ಠಿರನ ಅಭಿವೃದ್ಧಿಯ ವರ್ಣನೆ (1-10). ಕೃಷ್ಣನ ಆಗಮನ, ರಾಜಸೂಯಕ್ಕೆ ಅನುಮತಿ (11-24). ಯಾಗ ಸಿದ್ಧತೆ-ಸಂಭ್ರಮ (25-54).

02030001 ವೈಶಂಪಾಯನ ಉವಾಚ।
02030001a ರಕ್ಷಣಾದ್ಧರ್ಮರಾಜಸ್ಯ ಸತ್ಯಸ್ಯ ಪರಿಪಾಲನಾತ್।
02030001c ಶತ್ರೂಣಾಂ ಕ್ಷಪಣಾಚ್ಚೈವ ಸ್ವಕರ್ಮನಿರತಾಃ ಪ್ರಜಾಃ।।
02030002a ಬಲೀನಾಂ ಸಮ್ಯಗಾದಾನಾದ್ಧರ್ಮತಶ್ಚಾನುಶಾಸನಾತ್।
02030002c ನಿಕಾಮವರ್ಷೀ ಪರ್ಜನ್ಯಃ ಸ್ಫೀತೋ ಜನಪದೋಽಭವತ್।।

ವೈಶಂಪಾಯನನು ಹೇಳಿದನು: “ಧರ್ಮರಾಜನ ರಕ್ಷಣೆ, ಸತ್ಯಪರಿಪಾಲನೆ, ಮತ್ತು ಶತ್ರುಗಳ ಮರ್ದನದಿಂದ ಪ್ರಜೆಗಳು ಸ್ವಕರ್ಮನಿರತರಾಗಿದ್ದರು. ಆ ಬಲಶಾಲಿಗಳ ಒಳ್ಳೆಯ ದಾನ ಧರ್ಮಗಳಿಂದೊಡಗೂಡಿದ ಅನುಶಾಸನದಿಂದ ಸಕಾಲದಲ್ಲಿ ಸಾಕಷ್ಟು ಮಳೆಸುರಿದು, ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಹೊಂದಿದವು.

02030003a ಸರ್ವಾರಂಭಾಃ ಸುಪ್ರವೃತ್ತಾ ಗೋರಕ್ಷಂ ಕರ್ಷಣಂ ವಣಿಕ್।
02030003c ವಿಶೇಷಾತ್ಸರ್ವಮೇವೈತತ್ಸಂಜಜ್ಞೇ ರಾಜಕರ್ಮಣಃ।।

ಗೋರಕ್ಷಣೆ, ಕೃಷಿ, ವಾಣಿಜ್ಯ ಎಲ್ಲ ಉದ್ದಿಮೆಗಳೂ ಅಭಿವೃದ್ಧಿ ಹೊಂದಿದವು. ವಿಶೇಷವಾಗಿ ಇವೆಲ್ಲವೂ ರಾಜಕರ್ಮ ಎಂದು ಜನರು ತಿಳಿದುಕೊಂಡರು.

02030004a ದಸ್ಯುಭ್ಯೋ ವಂಚಕೇಭ್ಯೋ ವಾ ರಾಜನ್ಪ್ರತಿ ಪರಸ್ಪರಂ।
02030004c ರಾಜವಲ್ಲಭತಶ್ಚೈವ ನಾಶ್ರೂಯಂತ ಮೃಷಾ ಗಿರಃ।।

ದಸ್ಯುಗಳಿಂದಾಗಲೀ, ವಂಚಕರಿಂದಾಗಲೀ, ರಾಜವಲ್ಲಭರಿಂದಾಗಲೀ ರಾಜನ ಕುರಿತು ಕೆಟ್ಟ ಮಾತು ಬರುತ್ತಿರಲಿಲ್ಲ.

02030005a ಅವರ್ಷಂ ಚಾತಿವರ್ಷಂ ಚ ವ್ಯಾಧಿಪಾವಕಮೂರ್ಚನಂ।
02030005c ಸರ್ವಮೇತತ್ತದಾ ನಾಸೀದ್ಧರ್ಮನಿತ್ಯೇ ಯುಧಿಷ್ಠಿರೇ।।

ಬರಗಾಲವಾಗಲೀ, ಅತಿವೃಷ್ಟಿಯಾಗಲೀ, ವ್ಯಾಧಿಗಳಾಗಲೀ, ಬೆಂಕಿಯಾಗಲೀ ದಂಗೆಯಾಗಲೀ ಧರ್ಮನಿಷ್ಠ ಯುಧಿಷ್ಠಿರನಲ್ಲಿ ಸರ್ವಥಾ ಇರಲಿಲ್ಲ.

02030006a ಪ್ರಿಯಂ ಕರ್ತುಮುಪಸ್ಥಾತುಂ ಬಲಿಕರ್ಮ ಸ್ವಭಾವಜಂ।
02030006c ಅಭಿಹರ್ತುಂ ನೃಪಾ ಜಗ್ಮುರ್ನಾನ್ಯೈಃ ಕಾರ್ಯೈಃ ಪೃಥಕ್ ಪೃಥಕ್।।

ಏನಾದರೂ ಒಳ್ಳೆಯದನ್ನು ಮಾಡಲಿಕ್ಕೆಂದು, ತಮ್ಮ ಹಾಜರಿಯನ್ನು ಹಾಕಲು ಅಥವಾ ತಾವಾಗಿಯೇ ಕಪ್ಪ ಕೊಡಬೇಕೆಂದು ನೃಪರು ಪುನಃ ಪುನಃ ಬರುತ್ತಿದ್ದರೇ ಹೊರತು ಬೇರೆ ಯಾವ ಕಾರಣಕ್ಕೂ ಬರುತ್ತಿರಲಿಲ್ಲ.

02030007a ಧರ್ಮ್ಯೈರ್ಧನಾಗಮೈಸ್ತಸ್ಯ ವವೃಧೇ ನಿಚಯೋ ಮಹಾನ್।
02030007c ಕರ್ತುಂ ಯಸ್ಯ ನ ಶಕ್ಯೇತ ಕ್ಷಯೋ ವರ್ಷಶತೈರಪಿ।।

ಧರ್ಮದಿಂದ ಸಂಗ್ರಹಿಸಿದ ವಿತ್ತವು ನೂರು ವರ್ಷಗಳಲ್ಲಿಯೂ ಖರ್ಚು ಮಾಡಲಿಕ್ಕಾಗದಷ್ಟು ವೃದ್ಧಿಯಾಯಿತು.

02030008a ಸ್ವಕೋಶಸ್ಯ ಪರೀಮಾಣಂ ಕೋಷ್ಠಸ್ಯ ಚ ಮಹೀಪತಿಃ।
02030008c ವಿಜ್ಞಾಯ ರಾಜಾ ಕೌಂತೇಯೋ ಯಜ್ಞಾಯೈವ ಮನೋ ದಧೇ।।

ತನ್ನ ಕೋಶ ಮತ್ತು ಕೋಷ್ಟಗಳ ಪ್ರಮಾಣವನ್ನು ತಿಳಿದ ರಾಜ ಕೌಂತೇಯನು ಯಜ್ಞದ ಕುರಿತು ಮನಸ್ಸುಮಾಡಿದನು.

02030009a ಸುಹೃದಶ್ಚೈವ ತಂ ಸರ್ವೇ ಪೃಥಕ್ಚ ಸಹ ಚಾಬ್ರುವನ್।
02030009c ಯಜ್ಞಕಾಲಸ್ತವ ವಿಭೋ ಕ್ರಿಯತಾಮತ್ರ ಸಾಂಪ್ರತಂ।।

ಅವನ ಎಲ್ಲ ಸುಹೃದಯರೂ ಒಟ್ಟಿಗೆ ಮತ್ತು ಪ್ರತ್ಯೇಕವಾಗಿ “ವಿಭೋ! ಯಜ್ಞದ ಸಮಯ ಬಂದಿದೆ. ಅದಕ್ಕೆ ತಕ್ಕುದನ್ನು ಮಾಡು!” ಎಂದು ಹೇಳಿದರು.

02030010a ಅಥೈವಂ ಬ್ರುವತಾಮೇವ ತೇಷಾಮಭ್ಯಾಯಯೌ ಹರಿಃ।
02030010c ಋಷಿಃ ಪುರಾಣೋ ವೇದಾತ್ಮಾ ದೃಶ್ಯಶ್ಚಾಪಿ ವಿಜಾನತಾಂ।।
02030011a ಜಗತಸ್ತಸ್ಥುಷಾಂ ಶ್ರೇಷ್ಠಃ ಪ್ರಭವಶ್ಚಾಪ್ಯಯಶ್ಚ ಹ।
02030011c ಭೂತಭವ್ಯಭವನ್ನಾಥಃ ಕೇಶವಃ ಕೇಶಿಸೂದನಃ।।

ಹೀಗೆ ಅವರು ಮಾತನಾಡಿಕೊಳ್ಳುತ್ತಿರುವಾಗ ಅಲ್ಲಿಗೆ ಋಷಿ, ಪುರಾಣ, ವೇದಾತ್ಮ, ತಿಳಿದವರಿಗೆ ಮಾತ್ರ ಕಾಣಿಸಿಕೊಳ್ಳುವ, ಶ್ರೇಷ್ಠರಲ್ಲಿ ಶ್ರೇಷ್ಠನಾದ, ಜಗತ್ತಿನ ಹುಟ್ಟು ಮತ್ತು ಅಂತ್ಯನಾದ, ಹಿಂದೆ ಆಗಿದ್ದುದರ, ಮುಂದೆ ಆಗುವ ಮತ್ತು ಈಗ ಆಗುತ್ತಿರುವುದಕ್ಕೆ ಒಡೆಯನಾದ, ಕೇಶಿಸೂದನ, ಕೇಶವ, ಸರ್ವ ವೃಷ್ಣಿಗಳಿಗೆ ಕೋಟೆಯಂತಿರುವ, ಕಷ್ಟದಲ್ಲಿರುವವರಿಗೆ ರಕ್ಷಣೆಯನ್ನು ನೀಡುವ ಶತ್ರುಹರ ಹರಿಯು ಆಗಮಿಸಿದನು.

02030012a ಪ್ರಾಕಾರಃ ಸರ್ವವೃಷ್ಣೀನಾಮಾಪತ್ಸ್ವಭಯದೋಽರಿಹಾ।
02030012c ಬಲಾಧಿಕಾರೇ ನಿಕ್ಷಿಪ್ಯ ಸಂಹತ್ಯಾನಕದುನ್ದುಭಿಂ।।
02030013a ಉಚ್ಚಾವಚಮುಪಾದಾಯ ಧರ್ಮರಾಜಾಯ ಮಾಧವಃ।
02030013c ಧನೌಘಂ ಪುರುಷವ್ಯಾಘ್ರೋ ಬಲೇನ ಮಹತಾ ವೃತಃ।।
02030014a ತಂ ಧನೌಘಮಪರ್ಯಂತಂ ರತ್ನಸಾಗರಮಕ್ಷಯಂ।
02030014c ನಾದಯನ್ರಥಘೋಷೇಣ ಪ್ರವಿವೇಶ ಪುರೋತ್ತಮಂ।।

ಅನಕದುಂದುಭಿಯನ್ನು ತನ್ನ ಬಲದ ನಿಯಂತ್ರಣಕ್ಕೆ ಇರಿಸಿ ಧರ್ಮರಾಜನಿಗೆ ಬಹಳಷ್ಟು ಸಂಪತ್ತನ್ನು ತೆಗೆದುಕೊಂಡ ಪುರುಷವ್ಯಾಘ್ರ ಮಾಧವನು ಮಹಾ ಸೇನೆಯೊಂದಿಗೆ, ಆ ಅಪರಿಮಿತ ಅಕ್ಷಯ ರತ್ನಗಳ ಸಾಗರವೇ ಉಕ್ಕಿಬಂದಹಾಗೆ ರಥಘೋಷದ ಶಬ್ಧದೊಡನೆ ಆ ಉತ್ತಮ ಪುರವನ್ನು ಪ್ರವೇಶಿಸಿದನು.

02030015a ಅಸೂರ್ಯಮಿವ ಸೂರ್ಯೇಣ ನಿವಾತಮಿವ ವಾಯುನಾ।
02030015c ಕೃಷ್ಣೇನ ಸಮುಪೇತೇನ ಜಹೃಷೇ ಭಾರತಂ ಪುರಂ।।

ಬೆಳಕಿಲ್ಲದಿದ್ದಲ್ಲಿ ಸೂರ್ಯನಿಂದ ಹೇಗೋ ಹಾಗೆ ಮತ್ತು ಗಾಳಿಯಿಲ್ಲದಿದ್ದಲ್ಲಿ ವಾಯುವಿನಿಂದ ಹೇಗೋ ಹಾಗೆ ಭಾರತ ಪುರವು ಕೃಷ್ಣನ ಆಗಮನವನ್ನು ಉತ್ಸಾಹಿಸಿತು.

02030016a ತಂ ಮುದಾಭಿಸಮಾಗಮ್ಯ ಸತ್ಕೃತ್ಯ ಚ ಯಥಾವಿಧಿ।
02030016c ಸಂಪೃಷ್ಟ್ವಾ ಕುಶಲಂ ಚೈವ ಸುಖಾಸೀನಂ ಯುಧಿಷ್ಠಿರಃ।।
02030017a ಧೌಮ್ಯದ್ವೈಪಾಯನಮುಖೈರೃತ್ವಿಗ್ಭಿಃ ಪುರುಷರ್ಷಭಃ।
02030017c ಭೀಮಾರ್ಜುನಯಮೈಶ್ಚಾಪಿ ಸಹಿತಃ ಕೃಷ್ಣಮಬ್ರವೀತ್।।

ಯುಧಿಷ್ಠಿರನು ಸಂತೋಷದಿಂದ ಅವನನ್ನು ಬರಮಾಡಿಕೊಂಡು ಯಥಾವಿಧಿಯಾಗಿ ಸತ್ಕರಿಸಿದನು. ಕುಶಲವನ್ನು ವಿಚಾರಿಸಿ ಸುಖಾಸೀನನಾದನಂತರ ಆ ಪುರುಷರ್ಷಭನು ಧೌಮ್ಯ-ದ್ವೈಪಾಯನರ ಸಮ್ಮುಖದಲ್ಲಿ ಋತ್ವಿಜರು ಮತ್ತು ಭೀಮಾರ್ಜುನರ ಸಹಿತ ಕೃಷ್ಣನಿಗೆ ಹೇಳಿದನು:

02030018a ತ್ವತ್ಕೃತೇ ಪೃಥಿವೀ ಸರ್ವಾ ಮದ್ವಶೇ ಕೃಷ್ಣ ವರ್ತತೇ।
02030018c ಧನಂ ಚ ಬಹು ವಾರ್ಷ್ಣೇಯ ತ್ವತ್ಪ್ರಸಾದಾದುಪಾರ್ಜಿತಂ।।

“ಕೃಷ್ಣ! ನಿನ್ನ ಕೃಪೆಯಿಂದ ಸರ್ವ ಪೃಥ್ವಿಯೂ ನನ್ನ ವಶದಲ್ಲಿದೆ. ವಾರ್ಷ್ಣೇಯ! ನಿನ್ನ ಅನುಗ್ರಹದಿಂದ ಬಹಳಷ್ಟು ಧನವನ್ನೂ ಒಟ್ಟುಗೂಡಿಸಿದ್ದೇವೆ.

02030019a ಸೋಽಹಮಿಚ್ಛಾಮಿ ತತ್ಸರ್ವಂ ವಿಧಿವದ್ದೇವಕೀಸುತ।
02030019c ಉಪಯೋಕ್ತುಂ ದ್ವಿಜಾಗ್ರ್ಯೇಷು ಹವ್ಯವಾಹೇ ಚ ಮಾಧವ।।

ದೇವಕೀಸುತ! ಮಾಧವ! ಈಗ ನಾನು ಈ ಎಲ್ಲವನ್ನೂ ವಿಧಿವತ್ತಾಗಿ ದ್ವಿಜಾಗ್ರರ ಮೂಲಕ ಹವ್ಯವಾಹಕ್ಕೆ ಉಪಯೋಗಿಸಲು ಬಯಸುತ್ತೇನೆ.

02030020a ತದಹಂ ಯಷ್ಟುಮಿಚ್ಛಾಮಿ ದಾಶಾರ್ಹ ಸಹಿತಸ್ತ್ವಯಾ।
02030020c ಅನುಜೈಶ್ಚ ಮಹಾಬಾಹೋ ತನ್ಮಾನುಜ್ಞಾತುಮರ್ಹಸಿ।।

ಮಹಾಬಾಹೋ! ದಾಶಾರ್ಹ! ನಿನ್ನೊಂದಿಗೆ ಮತ್ತು ಅನುಜರೊಂದಿಗೆ ನಾನು ಯಾಗಿಸಲು ಬಯಸುತ್ತೇನೆ. ಅದಕ್ಕೆ ಅಪ್ಪಣೆಯನ್ನು ನೀಡಬೇಕು!

02030021a ಸ ದೀಕ್ಷಾಪಯ ಗೋವಿಂದ ತ್ವಮಾತ್ಮಾನಂ ಮಹಾಭುಜ।
02030021c ತ್ವಯೀಷ್ಟವತಿ ದಾಶಾರ್ಹ ವಿಪಾಪ್ಮಾ ಭವಿತಾ ಹ್ಯಹಂ।।

ಮಹಾಭುಜ ಗೊವಿಂದ! ದಾಶಾರ್ಹ! ನೀನು ನನಗೆ ಇದಕ್ಕೆ ದೀಕ್ಷೆಯನ್ನು ನೀಡು. ನಿನ್ನ ಇಷ್ಟದಂತೆ ಇದು ನಡೆದರೆ ನಾನು ದೋಷವನ್ನು ಹೊಂದುವುದಿಲ್ಲ.

02030022a ಮಾಂ ವಾಪ್ಯಭ್ಯನುಜಾನೀಹಿ ಸಹೈಭಿರನುಜೈರ್ವಿಭೋ।
02030022c ಅನುಜ್ಞಾತಸ್ತ್ವಯಾ ಕೃಷ್ಣ ಪ್ರಾಪ್ನುಯಾಂ ಕ್ರತುಮುತ್ತಮಂ।।

ಕೃಷ್ಣ! ವಿಭೋ! ನೀನು ಅನುಜ್ಞೆಯನ್ನಿತ್ತರೆ ತಮ್ಮಂದಿರೊಡನೆ ಉತ್ತಮ ಕ್ರತುವನ್ನು ಸಾಧಿಸಬಲ್ಲೆ.”

02030023a ತಂ ಕೃಷ್ಣಃ ಪ್ರತ್ಯುವಾಚೇದಂ ಬಹೂಕ್ತ್ವಾ ಗುಣವಿಸ್ತರಂ।
02030023c ತ್ವಮೇವ ರಾಜಶಾರ್ದೂಲ ಸಮ್ರಾಡರ್ಹೋ ಮಹಾಕ್ರತುಂ।
02030023e ಸಂಪ್ರಾಪ್ನುಹಿ ತ್ವಯಾ ಪ್ರಾಪ್ತೇ ಕೃತಕೃತ್ಯಾಸ್ತತೋ ವಯಂ।।

ಅವನ ಬಹು ಗುಣಗಳನ್ನು ವಿಸ್ತರಿಸುತ್ತಾ ಕೃಷ್ಣನು ಉತ್ತರಿಸಿದನು: “ರಾಜಶಾರ್ದೂಲ! ನೀನು ಸಾಮ್ರಾಟನಾಗಲು ಅರ್ಹನಾಗಿದ್ದೀಯೆ. ಮಹಾಕ್ರತುವನ್ನೂ ಕೈಗೊಳ್ಳುತ್ತೀಯೆ. ನೀನು ಅದನ್ನು ಗಳಿಸಿದೆಯಾದರೆ ನಾವು ಕೃತಕೃತ್ಯರಾಗುತ್ತೇವೆ.

02030024a ಯಜಸ್ವಾಭೀಪ್ಸಿತಂ ಯಜ್ಞಂ ಮಯಿ ಶ್ರೇಯಸ್ಯವಸ್ಥಿತೇ।
02030024c ನಿಯುಂಕ್ಷ್ವ ಚಾಪಿ ಮಾಂ ಕೃತ್ಯೇ ಸರ್ವಂ ಕರ್ತಾಸ್ಮಿ ತೇ ವಚಃ।।

ನಿನ್ನ ಶ್ರೇಯಸ್ಸಿಗೆ ನಾನು ಬದ್ಧನಾಗಿರುವಾಗ ನಿನಗಿಷ್ಟವಾದ ಯಜ್ಞವನ್ನು ಯಾಜಿಸು. ನನ್ನನ್ನೂ ಈ ಕೆಲಸದಲ್ಲಿ ತೊಡಗಿಸಿಕೋ. ನೀನು ಹೇಳಿದುದೆಲ್ಲವನ್ನೂ ನಾನು ಮಾಡುತ್ತೇನೆ.”

02030025 ಯುಧಿಷ್ಠಿರ ಉವಾಚ।
02030025a ಸಫಲಃ ಕೃಷ್ಣ ಸಂಕಲ್ಪಃ ಸಿದ್ಧಿಶ್ಚ ನಿಯತಾ ಮಮ।
02030025c ಯಸ್ಯ ಮೇ ತ್ವಂ ಹೃಷೀಕೇಶ ಯಥೇಪ್ಸಿತಮುಪಸ್ಥಿತಃ।।

ಯುಧಿಷ್ಠಿರನು ಹೇಳಿದನು: “ಕೃಷ್ಣ! ಹೃಷೀಕೇಶ! ನೀನು ನಿನಗಿಷ್ಟಬಂದಹಾಗೆ ನನ್ನೊಡನಿದ್ದೀಯೆಯಾದರೆ ನನ್ನ ಸಂಕಲ್ಪವು ಸಫಲವಾಯಿತು ಮತ್ತು ನನ್ನ ಸಿದ್ಧಿಯೂ ನಿಶ್ಚಯವಾಯಿತು.””

02030026 ವೈಶಂಪಾಯನ ಉವಾಚ।
02030026a ಅನುಜ್ಞಾತಸ್ತು ಕೃಷ್ಣೇನ ಪಾಂಡವೋ ಭ್ರಾತೃಭಿಃ ಸಹ।
02030026c ಈಹಿತುಂ ರಾಜಸೂಯಾಯ ಸಾಧನಾನ್ಯುಪಚಕ್ರಮೇ।।

ವೈಶಂಪಾಯನನು ಹೇಳಿದನು: “ಹೀಗೆ ಕೃಷ್ಣನಿಂದ ಅನುಮತಿಯನ್ನು ಪಡೆದ ಪಾಂಡವನು ಭ್ರಾತೃಗಳ ಸಹಿತ ರಾಜಸೂಯಕ್ಕೆ ಸಾಧನಗಳ ಏರ್ಪಾಡುಮಾಡಲು ಪ್ರಾರಂಭಿಸಿದನು.

02030027a ತತ ಆಜ್ಞಾಪಯಾಮಾಸ ಪಾಂಡವೋಽರಿನಿಬರ್ಹಣಃ।
02030027c ಸಹದೇವಂ ಯುಧಾಂ ಶ್ರೇಷ್ಠಂ ಮಂತ್ರಿಣಶ್ಚೈವ ಸರ್ವಶಃ।।

ಅರಿನಿಬರ್ಹಣ ಪಾಂಡವನು ಯೋದ್ಧರಲ್ಲಿ ಶ್ರೇಷ್ಠ ಸಹದೇವ ಮತ್ತು ಎಲ್ಲ ಮಂತ್ರಿಗಳಿಗೆ ಆಜ್ಞಾಪಿಸಿದನು:

02030028a ಅಸ್ಮಿನ್ಕ್ರತೌ ಯಥೋಕ್ತಾನಿ ಯಜ್ಞಾಂಗಾನಿ ದ್ವಿಜಾತಿಭಿಃ।
02030028c ತಥೋಪಕರಣಂ ಸರ್ವಂ ಮಂಗಲಾನಿ ಚ ಸರ್ವಶಃ।।
02030029a ಅಧಿಯಜ್ಞಾಂಶ್ಚ ಸಂಭಾರಾನ್ಧೌಮ್ಯೋಕ್ತಾನ್ ಕ್ಷಿಪ್ರಮೇವ ಹಿ।
02030029c ಸಮಾನಯಂತು ಪುರುಷಾ ಯಥಾಯೋಗಂ ಯಥಾಕ್ರಮಂ।।

“ಈ ಕ್ರತುವಿನ ಯಜ್ಞಾಂಗವಾಗಿ ದ್ವಿಜರು ಏನೆಲ್ಲ ಮಂಗಲ ಉಪಕರಣಗಳು ಬೇಕೆಂದು ಹೇಳುತ್ತಾರೋ ಆ ಎಲ್ಲನ್ನೂ ಮತ್ತು ಧೌಮ್ಯನು ಹೇಳುವ ಅಧಿಯಜ್ಞದ ಪದಾರ್ಥಗಳನ್ನೆಲ್ಲವನ್ನೂ ಬೇಗನೇ ಯೋಗ್ಯ ಪುರುಷರು ಯಥಾಕ್ರಮವಾಗಿ ಒಟ್ಟುಗೂಡಿಸಲಿ.

02030030a ಇಂದ್ರಸೇನೋ ವಿಶೋಕಶ್ಚ ಪೂರುಶ್ಚಾರ್ಜುನಸಾರಥಿಃ।
02030030c ಅನ್ನಾದ್ಯಾಹರಣೇ ಯುಕ್ತಾಃ ಸಂತು ಮತ್ಪ್ರಿಯಕಾಮ್ಯಯಾ।।

ಇಂದ್ರಸೇನ1, ವಿಶೋಕ2, ಅರ್ಜುನಸಾರಥಿ ಪುರು ಇವರು ನನ್ನ ಪ್ರೀತಿ- ಇಷ್ಟದಂತೆ ಆಹಾರ-ಊಟದ ವ್ಯವಸ್ಥೆಯನ್ನು ವಹಿಸಿಕೊಳ್ಳಬೇಕು.

02030031a ಸರ್ವಕಾಮಾಶ್ಚ ಕಾರ್ಯಂತಾಂ ರಸಗಂಧಸಮನ್ವಿತಾಃ।
02030031c ಮನೋಹರಾಃ ಪ್ರೀತಿಕರಾ ದ್ವಿಜಾನಾಂ ಕುರುಸತ್ತಮ।।

ಕುರುಸತ್ತಮ! ದ್ವಿಜರಿಗೆ ಪ್ರೀತಿಕರವೂ ಮನೋಹರವೂ ಆದ ಎಲ್ಲ ಬಯಕೆಗಳನ್ನೂ ಪೂರೈಸುವ ರಸಗಂಧಸಮನ್ವಿತ ಆಹಾರವನ್ನು ತರಿಸಿ!”

02030032a ತದ್ವಾಕ್ಯಸಮಕಾಲಂ ತು ಕೃತಂ ಸರ್ವಮವೇದಯತ್।
02030032c ಸಹದೇವೋ ಯುಧಾಂ ಶ್ರೇಷ್ಠೋ ಧರ್ಮರಾಜೇ ಮಹಾತ್ಮನಿ।।

ಮಹಾತ್ಮ ಧರ್ಮರಾಜನ ಈ ಮಾತುಗಳನ್ನು ಕೇಳಿದ ತಕ್ಷಣವೇ ಯೋದ್ಧರಲ್ಲಿ ಶ್ರೇಷ್ಠ ಸಹದೇವನು ಅವೆಲ್ಲವನ್ನೂ ಏರ್ಪಡಿಸಿದನು.

02030033a ತತೋ ದ್ವೈಪಾಯನೋ ರಾಜನ್ನೃತ್ವಿಜಃ ಸಮುಪಾನಯತ್।
02030033c ವೇದಾನಿವ ಮಹಾಭಾಗಾನ್ಸಾಕ್ಷಾನ್ಮೂರ್ತಿಮತೋ ದ್ವಿಜಾನ್।।

ರಾಜನ್! ನಂತರ ದ್ವೈಪಾಯನನು ಸಾಕ್ಷಾತ್ ವೇದಗಳೇ ಮೂರ್ತಿಮತ್ತರಾಗಿದ್ದರೋ ಎನ್ನುವ ಮಹಾಭಾಗ ದ್ವಿಜ ಋತ್ವಿಜರನ್ನು ಕರೆಯಿಸಿಕೊಂಡನು.

02030034a ಸ್ವಯಂ ಬ್ರಹ್ಮತ್ವಮಕರೋತ್ತಸ್ಯ ಸತ್ಯವತೀಸುತಃ।
02030034c ಧನಂಜಯಾನಾಂ ಋಷಭಃ ಸುಸಾಮಾ ಸಾಮಗೋಽಭವತ್।।
02030035a ಯಾಜ್ಞವಲ್ಕ್ಯೋ ಬಭೂವಾಥ ಬ್ರಹ್ಮಿಷ್ಠೋಽಧ್ವರ್ಯುಸತ್ತಮಃ।
02030035c ಪೈಲೋ ಹೋತಾ ವಸೋಃ ಪುತ್ರೋ ಧೌಮ್ಯೇನ ಸಹಿತೋಽಭವತ್।।

ಸ್ವಯಂ ಸತ್ಯವತೀಸುತನು ಅದರ ಬ್ರಹ್ಮತ್ವವನ್ನು ವಹಿಸಿಕೊಂಡನು. ಧನಂಜಯರ ಋಷಭ ಸುಸಾಮನು ಸಾಮಗನಾದನು. ಬ್ರಹ್ಮಿಷ್ಟ ಸತ್ತಮ ಯಾಜ್ಞವಲ್ಕ್ಯನು ಅಧ್ವರ್ಯುವಾದನು. ಧೌಮ್ಯನ ಸಹಿತ ವಸುಪುತ್ರ ಪೈಲನು ಹೋತಾರನಾದನು.

02030036a ಏತೇಷಾಂ ಶಿಷ್ಯವರ್ಗಾಶ್ಚ ಪುತ್ರಾಶ್ಚ ಭರತರ್ಷಭ।
02030036c ಬಭೂವುರ್ಹೋತ್ರಗಾಃ ಸರ್ವೇ ವೇದವೇದಾಂಗಪಾರಗಾಃ।।

ಭರತರ್ಷಭ! ವೇದ ವೇದಾಂಗಪಾರಗರಾದ ಇವರ ಶಿಷ್ಯವರ್ಗ ಮತ್ತು ಪುತ್ರರು ಎಲ್ಲರೂ ಹೋತ್ರಗರಾದರು.

02030037a ತೇ ವಾಚಯಿತ್ವಾ ಪುಣ್ಯಾಹಮೀಹಯಿತ್ವಾ ಚ ತಂ ವಿಧಿಂ।
02030037c ಶಾಸ್ತ್ರೋಕ್ತಂ ಯೋಜಯಾಮಾಸುಸ್ತದ್ದೇವಯಜನಂ ಮಹತ್।।

ವಾಚನ ಪುಣ್ಯಾಹಾದಿಗಳನ್ನು ವಿಧಿವತ್ತಾಗಿ ಪೂರೈಸಿ ಆ ಮಹಾ ದೇವಯಜ್ಞವನ್ನು ಶಾಸ್ತ್ರೋಕ್ತವಾಗಿ ನಿಯೋಜಿಸಿದರು.

02030038a ತತ್ರ ಚಕ್ರುರನುಜ್ಞಾತಾಃ ಶರಣಾನ್ಯುತ ಶಿಲ್ಪಿನಃ।
02030038c ರತ್ನವಂತಿ ವಿಶಾಲಾನಿ ವೇಶ್ಮಾನೀವ ದಿವೌಕಸಾಂ।।

ಅಪ್ಪಣೆಯ ಮೇರೆಗೆ ಶಿಲ್ಪಿಗಳು ಉಳಿಯಲಿಕ್ಕೆಂದು ದೇವತೆಗಳ ಮನೆಗಳಂತಿರುವ ರತ್ನಗಳಿಂದ ಅಲಂಕೃತ ವಿಶಾಲ ಮನೆಗಳನ್ನು ನಿರ್ಮಿಸಿದರು.

02030039a ತತ ಆಜ್ಞಾಪಯಾಮಾಸ ಸ ರಾಜಾ ರಾಜಸತ್ತಮಃ।
02030039c ಸಹದೇವಂ ತದಾ ಸದ್ಯೋ ಮಂತ್ರಿಣಂ ಕುರುಸತ್ತಮಃ।।

ಆಗ ಕುರುಸತ್ತಮ ರಾಜಸತ್ತಮ ರಾಜನು ತನ್ನ ಸದ್ಯದ ಮಂತ್ರಿ ಸಹದೇವನಿಗೆ ಆಜ್ಞೆಯನ್ನಿತ್ತನು:

02030040a ಆಮಂತ್ರಣಾರ್ಥಂ ದೂತಾಂಸ್ತ್ವಂ ಪ್ರೇಷಯಸ್ವಾಶುಗಾನ್ದ್ರುತಂ।
02030040c ಉಪಶ್ರುತ್ಯ ವಚೋ ರಾಜ್ಞಃ ಸ ದೂತಾನ್ಪ್ರಾಹಿಣೋತ್ತದಾ।।

“ಆಮಂತ್ರಣಕ್ಕೆಂದು ನೀನು ವೇಗವಾಗಿ ಹೋಗಬಲ್ಲ ದೂತರನ್ನು ಕಳುಹಿಸು!” ರಾಜನ ಈ ಮಾತುಗಳನ್ನು ಕೇಳಿದ ಕೂಡಲೇ ದೂತರನ್ನು ಕಳುಹಿಸಿದನು.

02030041a ಆಮಂತ್ರಯಧ್ವಂ ರಾಷ್ಟ್ರೇಷು ಬ್ರಾಹ್ಮಣಾನ್ಭೂಮಿಪಾನಪಿ।
02030041c ವಿಶಶ್ಚ ಮಾನ್ಯಾಂ ಶೂದ್ರಾಂಶ್ಚ ಸರ್ವಾನಾನಯತೇತಿ ಚ।।

“ರಾಷ್ಟ್ರಗಳನ್ನು, ಬ್ರಾಹ್ಮಣರನ್ನು ಮತ್ತು ಭೂಮಿಪರನ್ನು ಆಮಂತ್ರಿಸಿ! ಗೌರವಕ್ಕೆ ಅರ್ಹ ಎಲ್ಲ ವೈಶ್ಯರನ್ನೂ ಶೂದ್ರರನ್ನೂ ಕರೆದಕೊಂಡು ಬನ್ನಿ!”

02030042a ತೇ ಸರ್ವಾನ್ಪೃಥಿವೀಪಾಲಾನ್ಪಾಂಡವೇಯಸ್ಯ ಶಾಸನಾತ್।
02030042c ಆಮಂತ್ರಯಾಂ ಬಭೂವುಶ್ಚ ಪ್ರೇಷಯಾಮಾಸ ಚಾಪರಾನ್।।

ಪಾಂಡವೇಯನ ಶಾಸನದಂತೆ ಅವರು ಸರ್ವ ಮಹೀಪಾಲರನ್ನೂ ಆಮಂತ್ರಿಸಿದರು. ಇನ್ನೂ ಇತರರಿಗೂ ಕಳುಹಿಸಲಾಯಿತು.

02030043a ತತಸ್ತೇ ತು ಯಥಾಕಾಲಂ ಕುಂತೀಪುತ್ರಂ ಯುಧಿಷ್ಠಿರಂ।
02030043c ದೀಕ್ಷಯಾಂ ಚಕ್ರಿರೇ ವಿಪ್ರಾ ರಾಜಸೂಯಾಯ ಭಾರತ।।

ಭಾರತ! ಆ ಸಮಯದಲ್ಲಿ ಯಥಾಕಾಲದಲ್ಲಿ ವಿಪ್ರರು ರಾಜಸೂಯಕ್ಕೆಂದು ಕುಂತೀಪುತ್ರ ಯುಧಿಷ್ಠಿರನಿಗೆ ದೀಕ್ಷೆಯನ್ನು ನೀಡಿದರು.

02030044a ದೀಕ್ಷಿತಃ ಸ ತು ಧರ್ಮಾತ್ಮಾ ಧರ್ಮರಾಜೋ ಯುಧಿಷ್ಠಿರಃ।
02030044c ಜಗಾಮ ಯಜ್ಞಾಯತನಂ ವೃತೋ ವಿಪ್ರೈಃ ಸಹಸ್ರಶಃ।।
02030045a ಭ್ರಾತೃಭಿರ್ಜ್ಞಾತಿಭಿಶ್ಚೈವ ಸುಹೃದ್ಭಿಃ ಸಚಿವೈಸ್ತಥಾ।
02030045c ಕ್ಷತ್ರಿಯೈಶ್ಚ ಮನುಷ್ಯೇಂದ್ರ ನಾನಾದೇಶಸಮಾಗತೈಃ।
02030045e ಅಮಾತ್ಯೈಶ್ಚ ನೃಪಶ್ರೇಷ್ಠೋ ಧರ್ಮೋ ವಿಗ್ರಹವಾನಿವ।।

ದೀಕ್ಷಿತನಾದ ನೃಪಶ್ರೇಷ್ಠ ಧರ್ಮಾತ್ಮ ಧರ್ಮರಾಜ ಯುಧಿಷ್ಠಿರನು ಸಹಸ್ರಾರು ವಿಪ್ರರಿಂದ, ಭ್ರಾತೃಗಳಿಂದ, ಬಾಂಧವರಿಂದ, ಮಿತ್ರರಿಂದ, ಸಚಿವರಿಂದ, ನಾನಾ ದೇಶಗಳಿಂದ ಬಂದು ಸೇರಿದ್ದ ಕ್ಷತ್ರಿಯ ಮನುಷ್ಯೇಂದ್ರರಿಂದ, ಅಮಾತ್ಯರಿಂದ, ಸುತ್ತುವರೆಯಲ್ಪಟ್ಟು ಧರ್ಮನೇ ಮೂರ್ತಿಮತ್ತಾಗಿರುವಂತೆ ಯಜ್ಞವೇದಿಕೆಯನ್ನು ಪ್ರವೇಶಿಸಿದನು.

02030046a ಆಜಗ್ಮುರ್ಬ್ರಾಹ್ಮಣಾಸ್ತತ್ರ ವಿಷಯೇಭ್ಯಸ್ತತಸ್ತತಃ।
02030046c ಸರ್ವವಿದ್ಯಾಸು ನಿಷ್ಣಾತಾ ವೇದವೇದಾಂಗಪಾರಗಾಃ।।

ಬೇರೆ ಬೇರೆ ದೇಶಗಳಿಂದ ಸರ್ವವಿಧ್ಯೆಗಳಲ್ಲಿ ನಿಷ್ಣಾತ ವೇದವೇದಾಂಗಪಾರಂಗತ ಬ್ರಾಹ್ಮಣರು ಅಲ್ಲಿಗೆ ಬಂದರು.

02030047a ತೇಷಾಮಾವಸಥಾಂಶ್ಚಕ್ರುರ್ಧರ್ಮರಾಜಸ್ಯ ಶಾಸನಾತ್।
02030047c ಬಹ್ವನ್ನಾಂ ಶಯನೈರ್ಯುಕ್ತಾನ್ಸಗಣಾನಾಂ ಪೃಥಕ್ ಪೃಥಕ್।
02030047e ಸರ್ವರ್ತುಗುಣಸಂಪನ್ನಾಂ ಶಿಲ್ಪಿನೋಽಥ ಸಹಸ್ರಶಃ।।

ಅವರೆಲ್ಲರಿಗೆ ಉಳಿದುಕೊಳ್ಳಲು ಧರ್ಮರಾಜನ ಶಾಸನದಂತೆ ಅವರೊಂದಿಗೆ ಬಂದವರಿಗೂ ಸಾಕಾಗುವಷ್ಟು ಆಹಾರ-ಶಯನಗಳಿಂದ ಸುಸಜ್ಜಿತ, ಸರ್ವ ಋತುಗಳಿಗೆ ಯುಕ್ತ ಸೌಲಭ್ಯಗಳಿಂದ ಕೂಡಿದ ಸಹಸ್ರಾರು ಪ್ರತ್ಯೇಕ ಪ್ರತ್ಯೇಕ ವಸತಿಗೃಹಗಳನ್ನು ಶಿಲ್ಪಿಗಳು ನಿರ್ಮಿಸಿದರು.

02030048a ತೇಷು ತೇ ನ್ಯವಸನ್ರಾಜನ್ಬ್ರಾಹ್ಮಣಾ ಭೃಶಸತ್ಕೃತಾಃ।
02030048c ಕಥಯಂತಃ ಕಥಾ ಬಹ್ವೀಃ ಪಶ್ಯಂತೋ ನಟನರ್ತಕಾನ್।।

ರಾಜನ್! ಚೆನ್ನಾಗಿ ಸತ್ಕೃತರಾಗಿ ಬ್ರಾಹ್ಮಣರು ಅಲ್ಲಿಯೇ ಕಥೆಗಳನ್ನು ಹೇಳುತ್ತಾ, ನಟನರ್ತಕರನ್ನು ನೋಡುತ್ತಾ ವಾಸಿಸಿದರು.

02030049a ಭುಂಜತಾಂ ಚೈವ ವಿಪ್ರಾಣಾಂ ವದತಾಂ ಚ ಮಹಾಸ್ವನಃ।
02030049c ಅನಿಶಂ ಶ್ರೂಯತೇ ಸ್ಮಾತ್ರ ಮುದಿತಾನಾಂ ಮಹಾತ್ಮನಾಂ।।

ಸಂತೋಷದಿಂದ ಊಟಮಾಡುತ್ತಿದ್ದ ಮತ್ತು ಮಾತನಾಡುತ್ತಿದ್ದ ಆ ಮಹಾತ್ಮ ವಿಪ್ರರ ಮಹಾ ಧ್ವನಿಯು ಹಗಲೂ ರಾತ್ರಿ ಕೇಳಿಬರುತ್ತಿತ್ತು.

02030050a ದೀಯತಾಂ ದೀಯತಾಮೇಷಾಂ ಭುಜ್ಯತಾಂ ಭುಜ್ಯತಾಮಿತಿ।
02030050c ಏವಂಪ್ರಕಾರಾಃ ಸಂಜಲ್ಪಾಃ ಶ್ರೂಯಂತೇ ಸ್ಮಾತ್ರ ನಿತ್ಯಶಃ।।

“ಇದನ್ನು ಕೊಡಿ! ಕೊಡಿ! ಮತ್ತು ಭೋಜನಮಾಡಿ! ಭೋಜನ ಮಾಡಿ!” ಈ ಪ್ರಕಾರದ ಮಾತುಗಳು ಅಲ್ಲಿ ನಿತ್ಯವೂ ಕೇಳಿಬರುತ್ತಿತ್ತು.

02030051a ಗವಾಂ ಶತಸಹಸ್ರಾಣಿ ಶಯನಾನಾಂ ಚ ಭಾರತ।
02030051c ರುಕ್ಮಸ್ಯ ಯೋಷಿತಾಂ ಚೈವ ಧರ್ಮರಾಜಃ ಪೃಥಗ್ದದೌ।।

ಭಾರತ! ಧರ್ಮರಾಜನು ಅವರಿಗೆ ಪ್ರತ್ಯೇಕವಾಗಿ ಒಂದು ಲಕ್ಷ ಗೋವುಗಳನ್ನು, ಶಯನಗಳನ್ನು, ಚಿನ್ನ ಮತ್ತು ದಾಸಿಯರನ್ನು ನೀಡಿದನು.

02030052a ಪ್ರಾವರ್ತತೈವಂ ಯಜ್ಞಃ ಸ ಪಾಂಡವಸ್ಯ ಮಹಾತ್ಮನಃ।
02030052c ಪೃಥಿವ್ಯಾಮೇಕವೀರಸ್ಯ ಶಕ್ರಸ್ಯೇವ ತ್ರಿವಿಷ್ಟಪೇ।।

ಈ ರೀತಿ ಸ್ವರ್ಗದಲ್ಲಿ ಶಕ್ರನು ಹೇಗೋ ಹಾಗೆ ಪೃಥ್ವಿಯಲ್ಲಿ ಏಕೈಕ ವೀರ ಮಹಾತ್ಮ ಪಾಂಡವನ ಯಜ್ಞವು ಪ್ರಾರಂಭಗೊಂಡಿತು.

02030053a ತತೋ ಯುಧಿಷ್ಠಿರೋ ರಾಜಾ ಪ್ರೇಷಯಾಮಾಸ ಪಾಂಡವಂ।
02030053c ನಕುಲಂ ಹಾಸ್ತಿನಪುರಂ ಭೀಷ್ಮಾಯ ಭರತರ್ಷಭ।।
02030054a ದ್ರೋಣಾಯ ಧೃತರಾಷ್ಟ್ರಾಯ ವಿದುರಾಯ ಕೃಪಾಯ ಚ।
02030054c ಭ್ರಾತೄಣಾಂ ಚೈವ ಸರ್ವೇಷಾಂ ಯೇಽನುರಕ್ತಾ ಯುಧಿಷ್ಠಿರೇ।।

ಆಗ ರಾಜ ಯುಧಿಷ್ಠಿರನು ಪಾಂಡವ ನಕುಲನನ್ನು ಹಸ್ತಿನಾಪುರಕ್ಕೆ ಭರತರ್ಷಭ ಭೀಷ್ಮ, ದ್ರೋಣ, ಧೃತರಾಷ್ಟ್ರ, ಕೃಪ, ತಮ್ಮಂದಿರು, ಮತ್ತು ಯುಧಿಷ್ಠಿರನಲ್ಲಿ ಅನುರಕ್ತರಾಗಿದ್ದ ಎಲ್ಲರನ್ನೂ ಆಹ್ವಾನಿಸಲು ಕಳುಹಿಸಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ರಾಜಸೂಯಿಕಪರ್ವಣಿ ರಾಜಸೂಯದೀಕ್ಷಾಯಾಂ ತ್ರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ರಾಜಸೂಯಿಕಪರ್ವದಲ್ಲಿ ರಾಜಸೂಯದೀಕ್ಷೆ ಎನ್ನುವ ಮೂವತ್ತನೆಯ ಅಧ್ಯಾಯವು.


  1. ಯುಧಿಷ್ಠಿರನ ಸಾರಥಿ. ↩︎

  2. ಭೀಮಸೇನನ ಸಾರಥಿ. ↩︎