ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸಭಾ ಪರ್ವ
ದಿಗ್ವಿಜಯ ಪರ್ವ
ಅಧ್ಯಾಯ 28
ಸಾರ
ಸಹದೇವನ ದಕ್ಷಿಣ ದಿಗ್ವಿಜಯ (1-10). ಸಹದೇವನು ಅಗ್ನಿಯ ಕಾರಣದಿಂದ ನೀಲನಿಂದ ಪರಾಜಯಗೊಂಡಿದುದು, ಅಗ್ನಿಯನ್ನು ಸ್ತುತಿಸಿ ಜಯಗಳಿಸಿದ್ದುದು (11-37). ಇತರ ರಾಜರನ್ನು ಸೋಲಿಸಿ ಸಹದೇವನು ಹಿಂದಿರುಗಿದುದು (38-55).
02028001 ವೈಶಂಪಾಯನ ಉವಾಚ।
02028001a ತಥೈವ ಸಹದೇವೋಽಪಿ ಧರ್ಮರಾಜೇನ ಪೂಜಿತಃ।
02028001c ಮಹತ್ಯಾ ಸೇನಯಾ ಸಾರ್ಧಂ ಪ್ರಯಯೌ ದಕ್ಷಿಣಾಂ ದಿಶಂ।।
ವೈಶಂಪಾಯನನು ಹೇಳಿದನು: “ಹಾಗೆಯೇ ಸಹದೇವನೂ ಕೂಡ ಧರ್ಮರಾಜನಿಂದ ಗೌರವಿಸಲ್ಪಟ್ಟು ಮಹಾಸೇನೆಯೊಂದಿಗೆ ದಕ್ಷಿಣ ದಿಕ್ಕಿಗೆ ಪ್ರಯಾಣಿಸಿದನು.
02028002a ಸ ಶೂರಸೇನಾನ್ಕಾರ್ತ್ಸ್ನ್ಯೆನ ಪೂರ್ವಮೇವಾಜಯತ್ಪ್ರಭುಃ।
02028002c ಮತ್ಸ್ಯರಾಜಂ ಚ ಕೌರವ್ಯೋ ವಶೇ ಚಕ್ರೇ ಬಲಾದ್ಬಲೀ।।
ಮೊದಲು ಪ್ರಭುವು ಶೂರಸೇನನ ಸಂಪೂರ್ಣ ರಾಜ್ಯವನ್ನು ಜಯಿಸಿದನು. ಮತ್ತು ಆ ಕೌರವ್ಯನು ಬಲಿ ಮತ್ಸ್ಯ1 ರಾಜನನ್ನು ಬಲವಂತವಾಗಿ ವಶಪಡಿಸಿಕೊಂಡನು.
02028003a ಅಧಿರಾಜಾಧಿಪಂ ಚೈವ ದಂತವಕ್ರಂ ಮಹಾಹವೇ।
02028003c ಜಿಗಾಯ ಕರದಂ ಚೈವ ಸ್ವರಾಜ್ಯೇ ಸಮ್ನ್ಯವೇಶಯತ್।।
ಮಹಾಯುದ್ಧದಲ್ಲಿ ಅಧಿರಾಜಾಧಿಪ ದಂತವಕ್ತ್ರ2ನನ್ನು ಗೆದ್ದು ಕರದನನ್ನಾಗಿ ಮಾಡಿ ತನ್ನ ರಾಜ್ಯದೊಡನೆ ಸೇರಿಸಿಕೊಂಡನು.
02028004a ಸುಕುಮಾರಂ ವಶೇ ಚಕ್ರೇ ಸುಮಿತ್ರಂ ಚ ನರಾಧಿಪಂ।
02028004c ತಥೈವಾಪರಮತ್ಸ್ಯಾಂಶ್ಚ ವ್ಯಜಯತ್ಸ ಪಟಚ್ಚರಾನ್।।
ಅವನು ನರಾಧಿಪ ಸುಕುಮಾರ, ಸುಮಿತ್ರರನ್ನು ವಶಪಡೆಸಿಕೊಂಡು ಪಶ್ಚಿಮ ಮತ್ಸ್ಯರನ್ನೂ ಪಟಚ್ಚರನ್ನೂ ಜಯಿಸಿದನು.
02028005a ನಿಷಾದಭೂಮಿಂ ಗೋಶೃಂಗಂ ಪರ್ವತಪ್ರವರಂ ತಥಾ।
02028005c ತರಸಾ ವ್ಯಜಯದ್ಧೀಮಾಂಶ್ರೇಣಿಮಂತಂ ಚ ಪಾರ್ಥಿವಂ।।
ವೇಗದಲ್ಲಿ ನಿಷಧಭೂಮಿಯನ್ನೂ, ಪರ್ವತಪ್ರವರ ಗೋಶೃಂಗವನ್ನೂ, ಧೀಮಂತ ಪಾರ್ಥಿವ ಶ್ರೇಣಿಮಂತನನ್ನೂ ಜಯಿಸಿದನು.
02028006a ನವರಾಷ್ಟ್ರಂ ವಿನಿರ್ಜಿತ್ಯ ಕುಂತಿಭೋಜಮುಪಾದ್ರವತ್।
02028006c ಪ್ರೀತಿಪೂರ್ವಂ ಚ ತಸ್ಯಾಸೌ ಪ್ರತಿಜಗ್ರಾಹ ಶಾಸನಂ।।
ನವರಾಷ್ಟ್ರವನ್ನು ಗೆದ್ದು ಕುಂತಿಭೋಜನ ಬಳಿ ಬರಲು ಅವನು ಪ್ರೀತಿಪೂರ್ವಕವಾಗಿ ಶಾಸನವನ್ನು ಸ್ವೀಕರಿಸಿದನು.
02028007a ತತಶ್ಚರ್ಮಣ್ವತೀಕೂಲೇ ಜಂಭಕಸ್ಯಾತ್ಮಜಂ ನೃಪಂ।
02028007c ದದರ್ಶ ವಾಸುದೇವೇನ ಶೇಷಿತಂ ಪೂರ್ವವೈರಿಣಾ।।
ಅನಂತರ ಚರ್ಮಣ್ವತೀ ತೀರದಲ್ಲಿ ಹಿಂದೆ ವಾಸುದೇವನಿಂದ ಉಳಿಸಲಟ್ಟ ನೃಪ ಜಂಭಕನ ಮಗನನ್ನು ಕಂಡನು.
02028008a ಚಕ್ರೇ ತತ್ರ ಸ ಸಂಗ್ರಾಮಂ ಸಹ ಭೋಜೇನ ಭಾರತ।
02028008c ಸ ತಮಾಜೌ ವಿನಿರ್ಜಿತ್ಯ ದಕ್ಷಿಣಾಭಿಮುಖೋ ಯಯೌ।।
ಭಾರತ! ಅಲ್ಲಿಯೇ ಭೋಜನೊಂದಿಗೆ ಸಂಗ್ರಾಮವನ್ನು ಮಾಡಿ ಅವನ್ನು ಸೋಲಿಸಿ ದಕ್ಷಿಣಾಭಿಮುಖವಾಗಿ ಪ್ರಯಾಣಿಸಿದನು.
02028009a ಕರಾಂಸ್ತೇಭ್ಯ ಉಪಾದಾಯ ರತ್ನಾನಿ ವಿವಿಧಾನಿ ಚ।
02028009c ತತಸ್ತೈರೇವ ಸಹಿತೋ ನರ್ಮದಾಮಭಿತೋ ಯಯೌ।।
ಅವರಿಂದ ವಿವಿಧ ರತ್ನಗಳನ್ನು ಕರವನ್ನಾಗಿ ಪಡೆದು ಅವರೆಲ್ಲರ ಸಹಿತ ನರ್ಮದಾನದಿಯ ಕಡೆ ಹೊರಟನು.
02028010a ವಿಂದಾನುವಿಂದಾವಾವಂತ್ಯೌ ಸೈನ್ಯೇನ ಮಹತಾ ವೃತೌ।
02028010c ಜಿಗಾಯ ಸಮರೇ ವೀರಾವಾಶ್ವಿನೇಯಃ ಪ್ರತಾಪವಾನ್।।
02028011a ತತೋ ರತ್ನಾನ್ಯುಪಾದಾಯ ಪುರೀಂ ಮಾಹಿಷ್ಮತೀಂ ಯಯೌ।
02028011c ತತ್ರ ನೀಲೇನ ರಾಜ್ಞಾ ಸ ಚಕ್ರೇ ಯುದ್ಧಂ ನರರ್ಷಭಃ।।
02028012a ಪಾಂಡವಃ ಪರವೀರಘ್ನಃ ಸಹದೇವಃ ಪ್ರತಾಪವಾನ್।
02028012c ತತೋಽಸ್ಯ ಸುಮಹದ್ಯುದ್ಧಮಾಸೀದ್ಭೀರುಭಯಂಕರಂ।।
02028013a ಸೈನ್ಯಕ್ಷಯಕರಂ ಚೈವ ಪ್ರಾಣಾನಾಂ ಸಂಶಯಾಯ ಚ।
02028013c ಚಕ್ರೇ ತಸ್ಯ ಹಿ ಸಾಹಾಯ್ಯಂ ಭಗವಾನ್ ಹವ್ಯವಾಹನಃ।।
ವೀರವಾನ್, ಪ್ರತಾಪವಾನ್ ಅಶ್ವಿನೇಯನು ಮಹಾಸೇನೆಗಳನ್ನು ಹೊಂದಿದ್ದ ಅವಂತಿಯ ವಿಂದಾನುವಿಂದರನ್ನು ಸಮರದಲ್ಲಿ ಜಯಿಸಿ ಅವರಿಂದ ರತ್ನಗಳನ್ನು ಪಡೆದು ಮಾಹಿಷ್ಮತೀ ಪುರವನ್ನು ಸೇರಿದನು. ಅಲ್ಲಿ ನರರ್ಷಭ ಪಾಂಡವ ಪರವೀರಘ್ನ ತಾಪವಾನ್ ಸಹದೇವನು ಭಗವಾನ್ ಹವ್ಯವಾಹನನು ಸಹಾಯ ನೀಡಿದ ರಾಜ ನೀಲನೊಂದಿಗೆ ಸೈನ್ಯಕ್ಷಯಕರ, ತನ್ನ ಪ್ರಾಣಕ್ಕೇ ಸಂಶಯತರುವಂಥಹ ಯುದ್ಧವನ್ನು ನಡೆಸಿದನು.
02028014a ತತೋ ಹಯಾ ರಥಾ ನಾಗಾಃ ಪುರುಷಾಃ ಕವಚಾನಿ ಚ।
02028014c ಪ್ರದೀಪ್ತಾನಿ ವ್ಯದೃಶ್ಯಂತ ಸಹದೇವಬಲೇ ತದಾ।।
ಸಹದೇವನ ಸೇನೆಯಲ್ಲಿ ಕುದುರೆಗಳು, ರಥಗಳು, ಆನೆಗಳು, ಸೈನಿಕರು, ಕವಚಗಳು ಇದ್ದಕ್ಕಿದ್ದ ಹಾಗೆ ಬೆಂಕಿ ಹಿಡಿಯುತ್ತಿರುವುದು ಕಂಡುಬಂದಿತು.
02028015a ತತಃ ಸುಸಂಭ್ರಾಂತಮನಾ ಬಭೂವ ಕುರುನಂದನಃ।
02028015c ನೋತ್ತರಂ ಪ್ರತಿವಕ್ತುಂ ಚ ಶಕ್ತೋಽಭೂಜ್ಜನಮೇಜಯ।।
ಜನಮೇಜಯ! ಆಗ ಕುರುನಂದನನು ತುಂಬಾ ಸಂಭ್ರಾಂತ ಮನಸ್ಕನಾದನು ಮತ್ತು ಅದಕ್ಕೆ ಪ್ರತ್ಯುತ್ತರವನ್ನು ಕೊಡಲು ಅಸಮರ್ಥನಾದನು.”
02028016 ಜನಮೇಜಯ ಉವಾಚ।
02028016a ಕಿಮರ್ಥಂ ಭಗವಾನಗ್ನಿಃ ಪ್ರತ್ಯಮಿತ್ರೋಽಭವದ್ಯುಧಿ।
02028016c ಸಹದೇವಸ್ಯ ಯಜ್ಞಾರ್ಥಂ ಘಟಮಾನಸ್ಯ ವೈ ದ್ವಿಜ।।
ಜನಮೇಜಯನು ಹೇಳಿದನು: “ದ್ವಿಜ! ಯಾವಕಾರಣಕ್ಕಾಗಿ ಭಗವಾನ್ ಅಗ್ನಿಯು ಯಜ್ಞಕ್ಕಾಗಿ ಹೋರಾಡುತ್ತಿರುವ ಆ ಯುದ್ಧದಲ್ಲಿ ಸಹದೇವನ ಎದುರು ಶತ್ರುವಾದನು?”
02028017 ವೈಶಂಪಾಯನ ಉವಾಚ।
02028017a ತತ್ರ ಮಾಹಿಷ್ಮತೀವಾಸೀ ಭಗವಾನ್ ಹವ್ಯವಾಹನಃ।
02028017c ಶ್ರೂಯತೇ ನಿಗೃಹೀತೋ ವೈ ಪುರಸ್ತಾತ್ಪಾರದಾರಿಕಃ।।
ವೈಶಂಪಾಯನನು ಹೇಳಿದನು: “ಅಲ್ಲಿ ಮಾಹಿಷ್ಮತೀವಾಸಿ ಭಗವಾನ್ ಹವ್ಯವಾಹನನು ಹಿಂದೆ ಪಾರದಾರಿಕೆ3ಗೋಸ್ಕರ ಬಂಧಿಯಾಗಿದ್ದ ಎಂದು ಕೇಳಿದ್ದೇವೆ.
02028018a ನೀಲಸ್ಯ ರಾಜ್ಞಃ ಪೂರ್ವೇಷಾಮುಪನೀತಶ್ಚ ಸೋಽಭವತ್।
02028018c ತದಾ ಬ್ರಾಹ್ಮಣರೂಪೇಣ ಚರಮಾಣೋ ಯದೃಚ್ಛಯಾ।।
ಆಗ ಬ್ರಾಹ್ಮಣರೂಪದಲ್ಲಿ ಕದ್ದು ನಡೆಯುತ್ತಿದ್ದ ಅವನನ್ನು ಹಿಂದಿನ ರಾಜ ನೀಲ4ನ ಮುಂದೆ ಕರೆದೊಯ್ಯಲಾಯಿತು.
02028019a ತಂ ತು ರಾಜಾ ಯಥಾಶಾಸ್ತ್ರಮನ್ವಶಾದ್ಧಾರ್ಮಿಕಸ್ತದಾ।
02028019c ಪ್ರಜಜ್ವಾಲ ತತಃ ಕೋಪಾದ್ಭಗವಾನ್ ಹವ್ಯವಾಹನಃ।।
ಧಾರ್ಮಿಕ ರಾಜನು ಯಥಾಶಾಸ್ತ್ರವಾಗಿ ದಂಡಿಸಲು ಕೋಪದಿಂದ ಭಗವಾನ್ ಹವ್ಯವಾಹನನು ಉರಿದೆದ್ದನು.
02028020a ತಂ ದೃಷ್ಟ್ವಾ ವಿಸ್ಮಿತೋ ರಾಜಾ ಜಗಾಮ ಶಿರಸಾ ಕವಿಂ।
02028020c ಚಕ್ರೇ ಪ್ರಸಾದಂ ಚ ತದಾ ತಸ್ಯ ರಾಜ್ಞೋ ವಿಭಾವಸುಃ।।
ಇದನ್ನು ನೋಡಿ ವಿಸ್ಮಿತನಾದ ರಾಜನು ಆ ಕವಿಗೆ ಶಿರಸಾ ನಮಸ್ಕರಿಸಲು ಆ ವಿಭಾವಸುವು ರಾಜನಿಗೆ ಕರುಣೆತೋರಿದನು.
02028021a ವರೇಣ ಚಂದಯಾಮಾಸ ತಂ ನೃಪಂ ಸ್ವಿಷ್ಟಕೃತ್ತಮಃ।
02028021c ಅಭಯಂ ಚ ಸ ಜಗ್ರಾಹ ಸ್ವಸೈನ್ಯೇ ವೈ ಮಹೀಪತಿಃ।।
ಸ್ವಿಷ್ಟಕೃತ್ತಮನು ನೃಪನಿಗೆ ವರದಿಂದ ತೃಪ್ತಿಗೊಳಿಸಲು ಮಹೀಪತಿಯು ತನ್ನ ಸೈನ್ಯಕ್ಕೆ ಅಭಯವನ್ನು ಬೇಡಿದನು.
02028022a ತತಃ ಪ್ರಭೃತಿ ಯೇ ಕೇ ಚಿದಜ್ಞಾನಾತ್ತಾಂ ಪುರೀಂ ನೃಪಾಃ।
02028022c ಜಿಗೀಷಂತಿ ಬಲಾದ್ರಾಜಂಸ್ತೇ ದಹ್ಯಂತೀಹ ವಹ್ನಿನಾ।।
ರಾಜನ್! ಅಂದಿನಿಂದ ಅಜ್ಞಾನದಿಂದ ನೃಪರು ಆ ಪುರಿಯನ್ನು ಬಲವಂತವಾಗಿ ಜಯಿಸಲು ಪ್ರಯತ್ನಿಸಿದರೆ ಅಲ್ಲಿಯೇ ವಹ್ನಿಯಿಂದ ಸುಟ್ಟುಹೋಗುತ್ತಾರೆ.
02028023a ತಸ್ಯಾಂ ಪುರ್ಯಾಂ ತದಾ ಚೈವ ಮಾಹಿಷ್ಮತ್ಯಾಂ ಕುರೂದ್ವಹ।
02028023c ಬಭೂವುರನಭಿಗ್ರಾಹ್ಯಾ ಯೋಷಿತಶ್ಚಂದತಃ ಕಿಲ।।
02028024a ಏವಮಗ್ನಿರ್ವರಂ ಪ್ರಾದಾತ್ ಸ್ತ್ರೀಣಾಮಪ್ರತಿವಾರಣೇ।
02028024c ಸ್ವೈರಿಣ್ಯಸ್ತತ್ರ ನಾರ್ಯೋ ಹಿ ಯಥೇಷ್ಟಂ ಪ್ರಚರಂತ್ಯುತ।।
ಕುರೂದ್ದಹ! ಅದಕ್ಕೂ ಮೊದಲು ಮಾಹಿಷ್ಮತಿಯ ಸ್ತ್ರೀಯರನ್ನು ಹಿಡಿದಿಟ್ಟಿರುತ್ತಿದ್ದರು. ಆಗ ಅಗ್ನಿಯು ಅವರನ್ನು ಬೇರೆಯಾಗಿ ಇಡಬಾರದು ಯಾಕೆಂದರೆ ನಾರಿಯರು ಸ್ವತಂತ್ರರು ಮತ್ತು ತಮಗಿಷ್ಟಬಂದಹಾಗೆ ನಡೆದುಕೊಳ್ಳಬಹುದು ಎಂದು ಸ್ತ್ರೀಯರಿಗೆ ವರವನ್ನಿತ್ತನು.
02028025a ವರ್ಜಯಂತಿ ಚ ರಾಜಾನಸ್ತದ್ರಾಷ್ಟ್ರಂ ಪುರುಷೋತ್ತಮ।
02028025c ಭಯಾದಗ್ನೇರ್ಮಹಾರಾಜ ತದಾ ಪ್ರಭೃತಿ ಸರ್ವದಾ।।
ಮಹಾರಾಜ! ಜನಮೇಜಯ! ಅಂದಿನಿಂದ ರಾಜರು ಆ ರಾಷ್ಟ್ರವನ್ನು ಅಗ್ನಿಯ ಭಯದಿಂದ ಸರ್ವದಾ ವರ್ಜಿಸಿದ್ದಾರೆ5.
02028026a ಸಹದೇವಸ್ತು ಧರ್ಮಾತ್ಮಾ ಸೈನ್ಯಂ ದೃಷ್ಟ್ವಾ ಭಯಾರ್ದಿತಂ।
02028026c ಪರೀತಮಗ್ನಿನಾ ರಾಜನ್ನಾಕಂಪತ ಯಥಾ ಗಿರಿಃ।।
ರಾಜನ್! ಭಯಾರ್ದಿತ ಸೇನೆಯನ್ನು ನೋಡಿ ಧರ್ಮಾತ್ಮ ಸಹದೇವನು ಅಗ್ನಿಯಿಂದ ಸುತ್ತುವರೆಯಲ್ಪಟ್ಟ ಗಿರಿಯಂತೆ ನಡುಗಿದನು.
02028027a ಉಪಸ್ಪೃಶ್ಯ ಶುಚಿರ್ಭೂತ್ವಾ ಸೋಽಬ್ರವೀತ್ಪಾವಕಂ ತತಃ।
02028027c ತ್ವದರ್ಥೋಽಯಂ ಸಮಾರಂಭಃ ಕೃಷ್ಣವರ್ತ್ಮನ್ನಮೋಽಸ್ತು ತೇ।।
ನೀರನ್ನು ಮುಟ್ಟಿ ಶುಚಿರ್ಭೂತನಾಗಿ ಅವನು ಪಾವಕನನ್ನುದ್ದೇಶಿಸಿ ಹೇಳಿದನು: “ನಿನಗಾಗಿಯೇ ಈ ಸಮಾರಂಭವನ್ನು ಕೈಗೊಡಿದ್ದೇವೆ. ಕೃಷ್ಣವರ್ತ್ಮ6! ನಿನಗೆ ನಮಸ್ಕಾರ.
02028028a ಮುಖಂ ತ್ವಮಸಿ ದೇವಾನಾಂ ಯಜ್ಞಸ್ತ್ವಮಸಿ ಪಾವಕ।
02028028c ಪಾವನಾತ್ಪಾವಕಶ್ಚಾಸಿ ವಹನಾದ್ಧವ್ಯವಾಹನಃ।।
ನೀನು ದೇವತೆಗಳ ಬಾಯಿ. ಪಾವಕ! ನೀನು ಯಜ್ಞ. ಪಾವನ ಮಾಡುವ ನೀನು ಪಾವಕ! ಹವಿಸ್ಸನ್ನು ಕೊಂಡೊಯ್ಯುವ ವಾಹನ ನೀನು ಹವ್ಯವಾಹನ!
02028029a ವೇದಾಸ್ತ್ವದರ್ಥಂ ಜಾತಾಶ್ಚ ಜಾತವೇದಾಸ್ತತೋ ಹ್ಯಸಿ।
02028029c ಯಜ್ಞವಿಘ್ನಮಿಮಂ ಕರ್ತುಂ ನಾರ್ಹಸ್ತ್ವಂ ಹವ್ಯವಾಹನ।।
ನಿನಗೋಸ್ಕರವೇ ವೇದಗಳು ಹುಟ್ಟಿರುವುದರಿಂದ ನೀನು ಜಾತವೇದಸ. ಹವ್ಯವಾಹನ! ಈ ಯಜ್ಞಕ್ಕೆ ವಿಘ್ನವನ್ನು ತಂದೊಡ್ಡುವುದು ನಿನಗೆ ಸರಿಯಲ್ಲ.”
02028030a ಏವಮುಕ್ತ್ವಾ ತು ಮಾದ್ರೇಯಃ ಕುಶೈರಾಸ್ತೀರ್ಯ ಮೇದಿನೀಂ।
02028030c ವಿಧಿವತ್ಪುರುಷವ್ಯಾಘ್ರಃ ಪಾವಕಂ ಪ್ರತ್ಯುಪಾವಿಶತ್।।
02028031a ಪ್ರಮುಖೇ ಸರ್ವಸೈನ್ಯಸ್ಯ ಭೀತೋದ್ವಿಗ್ನಸ್ಯ ಭಾರತ।
02028031c ನ ಚೈನಮತ್ಯಗಾದ್ವಹ್ನಿರ್ವೇಲಾಮಿವ ಮಹೋದಧಿಃ।।
ಭಾರತ! ಭೂಮಿಯ ಮೇಲೆ ಕುಶವನ್ನೇರಿ ಕುಳಿತು ಪುರುಷವ್ಯಾಘ್ರ ಮಾದ್ರೇಯನು ಈ ರೀತಿ ವಿಧಿವತ್ತಾಗಿ ಸ್ತುತಿಸಲು ಪಾವಕನು ಭೀತ ಉದ್ವಿಗ್ನವಾಗಿದ್ದ ಸರ್ವ ಸೇನೆಯ ಎದಿರು ಕಾಣಿಸಿಕೊಂಡನು. ಮಹೋದಧಿಯು ಪ್ರವಾಹದ ರೇಖೆಯನ್ನು ಹೇಗೆ ದಾಟುವುದಿಲ್ಲವೋ ಹಾಗೆ ಅವನನ್ನು ದಾಟಿ ಮುಂದುವರೆಯಲಿಲ್ಲ.
02028032a ತಮಭ್ಯೇತ್ಯ ಶನೈರ್ವಹ್ನಿರುವಾಚ ಕುರುನಂದನಂ।
02028032c ಸಹದೇವಂ ನೃಣಾಂ ದೇವಂ ಸಾಂತ್ವಪೂರ್ವಮಿದಂ ವಚಃ।।
ಅವನ ಹತ್ತಿರ ಬಂದು ವಹ್ನಿಯು ಕುರುನಂದನ ಮನುಷ್ಯರ ದೇವ ಸಹದೇವನಿಗೆ ಮೆಲ್ಲನೆ ಸಾಂತ್ವಪೂರ್ವಕ ಈ ಮಾತುಗಳನ್ನು ಹೇಳಿದನು.
02028033a ಉತ್ತಿಷ್ಠೋತ್ತಿಷ್ಠ ಕೌರವ್ಯ ಜಿಜ್ಞಾಸೇಯಂ ಕೃತಾ ಮಯಾ।
02028033c ವೇದ್ಮಿ ಸರ್ವಮಭಿಪ್ರಾಯಂ ತವ ಧರ್ಮಸುತಸ್ಯ ಚ।।
“ಕೌರವ್ಯ! ಮೇಲೇಳು! ನಿನ್ನನ್ನು ಪರೀಕ್ಷಿಸಲು ನಾನು ಹೀಗೆ ಮಾಡಿದೆ. ನಿನ್ನ ಮತ್ತು ಧರ್ಮಸುತನ ಸರ್ವ ಅಭಿಪ್ರಾಯವನ್ನು ಅರಿತಿದ್ದೇನೆ.
02028034a ಮಯಾ ತು ರಕ್ಷಿತವ್ಯೇಯಂ ಪುರೀ ಭರತಸತ್ತಮ।
02028034c ಯಾವದ್ರಾಜ್ಞೋಽಸ್ಯ ನೀಲಸ್ಯ ಕುಲವಂಶಧರಾ ಇತಿ।।
02028034e ಈಪ್ಸಿತಂ ತು ಕರಿಷ್ಯಾಮಿ ಮನಸಸ್ತವ ಪಾಂಡವ।।
ಭರತಸತ್ತಮ! ಆದರೂ ರಾಜ ನೀಲನ ಕುಲವಂಶಧರರು ಇರುವವರೆಗೆ ಈ ಪುರವನ್ನು ನಾನು ರಕ್ಷಿಸಬೇಕಾಗಿದೆ. ಪಾಂಡವ! ನಿನ್ನ ಮನಸ್ಸಿನಲ್ಲಿರುವ ಆಸೆಯಂತೆ ನಡೆಸಿಕೊಡುತ್ತೇನೆ.”
02028035a ತತ ಉತ್ಥಾಯ ಹೃಷ್ಟಾತ್ಮಾ ಪ್ರಾಂಜಲಿಃ ಶಿರಸಾನತಃ।
02028035c ಪೂಜಯಾಮಾಸ ಮಾದ್ರೇಯಃ ಪಾವಕಂ ಪುರುಷರ್ಷಭಃ।।
ಆಗ ಪುರುಷರ್ಷಭ ಮಾದ್ರೇಯನು ಸಂತೋಷಗೊಂಡು ಎದ್ದುನಿಂತು ಅಂಜಲೀ ಬದ್ಧನಾಗಿ ತಲೆಬಾಗಿ ಪಾವಕನನ್ನು ಪೂಜಿಸಿದನು.
02028036a ಪಾವಕೇ ವಿನಿವೃತ್ತೇ ತು ನೀಲೋ ರಾಜಾಭ್ಯಯಾತ್ತದಾ।
02028036c ಸತ್ಕಾರೇಣ ನರವ್ಯಾಘ್ರಂ ಸಹದೇವಂ ಯುಧಾಂ ಪತಿಂ।।
ಪಾವಕನು ಹಿಂದೆಸರಿಯಲು ರಾಜ ನೀಲನು ಆಗಮಿಸಿ, ಯೋದ್ಧರ ನಾಯಕ ನರವ್ಯಾಘ್ರ ಸಹದೇವನನ್ನು ಸತ್ಕರಿಸಿ ಸ್ವಾಗತಿಸಿದನು.
02028037a ಪ್ರತಿಗೃಹ್ಯ ಚ ತಾಂ ಪೂಜಾಂ ಕರೇ ಚ ವಿನಿವೇಶ್ಯ ತಂ।
02028037c ಮಾದ್ರೀಸುತಸ್ತತಃ ಪ್ರಾಯಾದ್ವಿಜಯೀ ದಕ್ಷಿಣಾಂ ದಿಶಂ।।
ಅವನ ಸತ್ಕಾರವನ್ನು ಸ್ವೀಕರಿಸಿ ಅವನನ್ನು ಕರನೀಡುವವನನ್ನಾಗಿ ಮಾಡಿದನು. ನಂತರ ವಿಜಯೀ ಮಾದ್ರೀಸುತನು ದಕ್ಷಿಣ ದಿಕ್ಕಿನಲ್ಲಿ ಮುಂದುವರೆದನು.
02028038a ತ್ರೈಪುರಂ ಸ ವಶೇ ಕೃತ್ವಾ ರಾಜಾನಮಮಿತೌಜಸಂ।
02028038c ನಿಜಗ್ರಾಹ ಮಹಾಬಾಹುಸ್ತರಸಾ ಪೋತನೇಶ್ವರಂ।।
ಆ ಮಹಾಬಾಹುವು ಅಮಿತೌಜಸ ತ್ರಿಪುರ ರಾಜನನ್ನು ವಶಪಡೆಸಿಕೊಂಡು ಬೇಗನೆ ಪೋತನೇರನನ್ನು ಜಯಿಸಿದನು.
02028039a ಆಹೃತಿಂ ಕೌಶಿಕಾಚಾರ್ಯಂ ಯತ್ನೇನ ಮಹತಾ ತತಃ।
02028039c ವಶೇ ಚಕ್ರೇ ಮಹಾಬಾಹುಃ ಸುರಾಷ್ಟ್ರಾಧಿಪತಿಂ ತಥಾ।।
ಅನಂತರ ಆ ಮಹಾಬಾಹುವು ಕೌಶಿಕನು ಆಚಾರ್ಯನಾಗಿದ್ದ ಸುರಾಷ್ಟ್ರಾಧಿಪತಿ ಆಹೃತಿಯನ್ನು ಮಹಾ ಪ್ರಯತ್ನದಿಂದ ವಶಪಡೆಸಿಕೊಂಡನು.
02028040a ಸುರಾಷ್ಟ್ರವಿಷಯಸ್ಥಶ್ಚ ಪ್ರೇಷಯಾಮಾಸ ರುಕ್ಮಿಣೇ।
02028040c ರಾಜ್ಞೇ ಭೋಜಕಟಸ್ಥಾಯ ಮಹಾಮಾತ್ರಾಯ ಧೀಮತೇ।।
02028041a ಭೀಷ್ಮಕಾಯ ಸ ಧರ್ಮಾತ್ಮಾ ಸಾಕ್ಷಾದಿಂದ್ರಸಖಾಯ ವೈ।।
ಸುರಾಷ್ಟ್ರದೇಶದಲ್ಲಿದ್ದಾಗ ಭೋಜಕಟದಲ್ಲಿದ್ದ ಧೀಮಂತ ಧರ್ಮಾತ್ಮ ಸಾಕ್ಷಾತ್ ಇಂದ್ರನ ಸಖ ಭೀಷ್ಮಕ ರಾಜ ಮತ್ತು ರುಕ್ಮಿಗೆ ರಾಯಭಾರಿಯನ್ನು ಕಳುಹಿಸಿದನು.
02028041c ಸ ಚಾಸ್ಯ ಸಸುತೋ ರಾಜನ್ಪ್ರತಿಜಗ್ರಾಹ ಶಾಸನಂ।
02028042a ಪ್ರೀತಿಪೂರ್ವಂ ಮಹಾಬಾಹುರ್ವಾಸುದೇವಮವೇಕ್ಷ್ಯ ಚ।।
02028042c ತತಃ ಸ ರತ್ನಾನ್ಯಾದಾಯ ಪುನಃ ಪ್ರಾಯಾದ್ಯುಧಾಂ ಪತಿಃ।
02028043a ತತಃ ಶೂರ್ಪಾರಕಂ ಚೈವ ಗಣಂ ಚೋಪಕೃತಾಃವಯಂ।।
02028043c ವಶೇ ಚಕ್ರೇ ಮಹಾತೇಜಾ ದಂಡಕಾಂಶ್ಚ ಮಹಾಬಲಃ।।
ರಾಜನ್! ಮಗನೊಂದಿಗೆ ಅವನು7 ಮಹಾಬಾಹು ವಾಸುದೇವನನ್ನು ಗಮನಿಸಿ8 ಪ್ರೀತಿಪೂರ್ವಕವಾಗಿ ಅವನ ಶಾಸನವನ್ನು ಸ್ವೀಕರಿಸಿದನು. ರತ್ನಗಳನ್ನು ಪಡೆದು ಅಲ್ಲಿಂದ ಮಹಾಬಲ ಯುಧಾಂಪತಿಯು ಪುನಃ ಹೊರಟು ಶೂರ್ಪರಕ ಗಣ ಮತ್ತು ಉಪಕೃತ ದೇಶಗಳನ್ನು ಹಾಗೂ ದಂಡಕರನ್ನು ವಶಪಡಿಸಿಕೊಂಡನು.
02028044a ಸಾಗರದ್ವೀಪವಾಸಾಂಶ್ಚ ನೃಪತೀನ್ಮ್ಲೇಚ್ಛಯೋನಿಜಾನ್।
02028044c ನಿಷಾದಾನ್ಪುರುಷಾದಾಂಶ್ಚ ಕರ್ಣಪ್ರಾವರಣಾನಪಿ।।
02028045a ಯೇ ಚ ಕಾಲಮುಖಾ ನಾಮ ನರಾ ರಾಕ್ಷಸಯೋನಯಃ।
02028045c ಕೃತ್ಸ್ನಂ ಕೋಲ್ಲಗಿರಿಂ ಚೈವ ಮುರಚೀಪತ್ತನಂ ತಥಾ।।
02028046a ದ್ವೀಪಂ ತಾಮ್ರಾಹ್ವಯಂ ಚೈವ ಪರ್ವತಂ ರಾಮಕಂ ತಥಾ।
02028046c ತಿಮಿಂಗಿಲಂ ಚ ನೃಪತಿಂ ವಶೇ ಚಕ್ರೇ ಮಹಾಮತಿಃ।।
ಆ ಮಹಾಮತಿಯು ಸಾಗರದ್ವೀಪವಾಸಿ ಮ್ಲೇಚ್ಛಯೋನಿಜ ನೃಪತಿಗಳನ್ನು, ನಿಷಾದರನ್ನೂ, ಕರ್ಣಪ್ರಾವರಣರನ್ನೂ, ರಾಕ್ಷಸ ಯೋನಿಯ ಕಾಲಮುಖರೆಂಬ ಹೆಸರಿನ ನರರನ್ನೂ, ಕೋಲ್ಲಗಿರಿ ಮತ್ತು ಮುರಚೀಪತ್ತನ, ಹಾಗೂ ತಾಮ್ರಾಹ್ವಯ ದ್ವೀಪವನ್ನೂ, ರಾಮಕ ಎನ್ನುವ ಪರ್ವತವನ್ನೂ, ತಿಮಿಂಗಿಲದ ನೃಪತಿಯನ್ನೂ ವಶಪಡೆಸಿಕೊಂಡನು.
02028047a ಏಕಪಾದಾಂಶ್ಚ ಪುರುಷಾನ್ಕೇವಲಾನ್ವನವಾಸಿನಃ।
02028047c ನಗರೀಂ ಸಂಜಯಂತೀಂ ಚ ಪಿಚ್ಛಂಡಂ ಕರಹಾಟಕಂ।।
02028047e ದೂತೈರೇವ ವಶೇ ಚಕ್ರೇ ಕರಂ ಚೈನಾನದಾಪಯತ್।।
ಕೇವಲ ವನವಾಸಿಗಳಾದ ಒಂದೇ ಕಾಲಿನ ಪುರುಷರನ್ನು, ಸಂಜಯಂತೀ ನಗರವನ್ನು, ಪಿಚ್ಛಂಡರನ್ನು, ಮತ್ತು ಕರಹಾಟಕರನ್ನು ಕೇವಲ ದೂತರ ಮೂಲಕ ವಶಪಡೆಸಿಕೊಂಡು ಕಪ್ಪ ಕೊಡುವವರನ್ನಾಗಿ ಮಾಡಿದನು.
02028048a ಪಾಂಡ್ಯಾಂಶ್ಚ ದ್ರವಿಡಾಂಶ್ಚೈವ ಸಹಿತಾಂಶ್ಚೋಡ್ರಕೇರಲೈಃ।
02028048c ಅಂಧ್ರಾಂಸ್ತಲವನಾಂಶ್ಚೈವ ಕಲಿಂಗಾನೋಷ್ಟ್ರಕರ್ಣಿಕಾನ್।।
02028049a ಅಂತಾಖೀಂ ಚೈವ ರೋಮಾಂ ಚ ಯವನಾನಾಂ ಪುರಂ ತಥಾ।
02028049c ದೂತೈರೇವ ವಶೇ ಚಕ್ರೇ ಕರಂ ಚೈನಾನದಾಪಯತ್।।
ಅದೇರೀತಿ ದೂತರ ಮೂಲಕ ಪಾಂಡ್ಯರನ್ನು, ದ್ರವಿಡರನ್ನು, ಚೋಡ್ರ ಕೇರಳೀಯರ ಸಹಿತ ಆಂಧ್ರರನ್ನು, ತಲವರನ್ನು, ಕಲಿಂಗರನ್ನು, ಊಷ್ಟ್ರಕರ್ಣಿಕರನ್ನು, ಅಂತಾಖೀಯರನ್ನು ರೋಮನರನ್ನೂ ಮತ್ತು ಯವನರ ಪುರವನ್ನು ವಶ ಪಡೆಸಿಕೊಂಡು ಕಪ್ಪವನ್ನು ಕೊಡುವವರನ್ನಾಗಿ ಮಾಡಿದನು.
02028050a ಭರುಕಚ್ಛಂ ಗತೋ ಧೀಮಾನ್ದೂತಾನ್ಮಾದ್ರವತೀಸುತಃ।
02028050c ಪ್ರೇಷಯಾಮಾಸ ರಾಜೇಂದ್ರ ಪೌಲಸ್ತ್ಯಾಯ ಮಹಾತ್ಮನೇ।।
02028050e ವಿಭೀಷಣಾಯ ಧರ್ಮಾತ್ಮಾ ಪ್ರೀತಿಪೂರ್ವಮರಿಂದಮಃ।।
ರಾಜೇಂದ್ರ! ಅನಂತರ ಅರಿಂದಮ ಧೀಮಾನ್ ಮಾದ್ರವತೀಸುತನು ಭರೂಕಚ್ಛಕ್ಕೆ [ಲಂಕೆಯ ಇನ್ನೊಂದು ಹೆಸರು?] ಹೋಗಿ ಪೌಲಸ್ತ್ಯ, ಮಹಾತ್ಮ, ಧರ್ಮಾತ್ಮ ವಿಭೀಷಣನಿಗೆ ಪೃತಿಪೂರ್ವಕ ದೂತರನ್ನು ಕಳುಹಿಸಿದನು9.
02028051a ಸ ಚಾಸ್ಯ ಪ್ರತಿಜಗ್ರಾಹ ಶಾಸನಂ ಪ್ರೀತಿಪೂರ್ವಕಂ।
02028051c ತಚ್ಚ ಕಾಲಕೃತಂ ಧೀಮಾನನ್ವಮನ್ಯತ ಸ ಪ್ರಭುಃ।।
ಅವನು ಶಾಸನವನ್ನು ಪ್ರೀತಿಪೂರ್ವಕವಾಗಿ ಸ್ವೀಕರಿಸಿ, ಆ ಧೀಮಂತನು ಕಾಲಕೃತ ಪ್ರಭುವಿಗೆ ಒಪ್ಪಿಗೆಯನ್ನಿತ್ತನು10.
02028052a ತತಃ ಸಂಪ್ರೇಷಯಾಮಾಸ ರತ್ನಾನಿ ವಿವಿಧಾನಿ ಚ।
02028052c ಚಂದನಾಗುರುಮುಖ್ಯಾನಿ ದಿವ್ಯಾನ್ಯಾಭರಣಾನಿ ಚ।।
ಅವನು ವಿವಿಧ ರತ್ನಗಳನ್ನೂ, ಚಂದರ, ಅಗರು, ಪ್ರಮುಖ ದಿವ್ಯಾಭರಣಗಳನ್ನೂ ಕಳುಹಿಸಿಕೊಟ್ಟನು.
02028053a ವಾಸಾಂಸಿ ಚ ಮಹಾರ್ಹಾಣಿ ಮಣೀಂಶ್ಚೈವ ಮಹಾಧನಾನ್।
02028053c ನ್ಯವರ್ತತ ತತೋ ಧೀಮಾನ್ಸಹದೇವಃ ಪ್ರತಾಪವಾನ್।।
02028054a ಏವಂ ನಿರ್ಜಿತ್ಯ ತರಸಾ ಸಾಂತ್ವೇನ ವಿಜಯೇನ ಚ।
02028054c ಕರದಾನ್ಪಾರ್ಥಿವಾನ್ಕೃತ್ವಾ ಪ್ರತ್ಯಾಗಚ್ಛದರಿಂದಮಃ।।
ಈ ರೀತಿ ಸಾಂತ್ವನದಿಂದ ಮತ್ತು ವಿಜಯದಿಂದ ಬೇಗನೆ ಪಾರ್ಥಿವರನ್ನು ಕರದನ್ನಾಗಿಮಾಡಿ ಆ ಅರಿಂದಮ ಧೀಮಾನ್, ಪ್ರತಾಪವಾನ್ ಸಹದೇವನು ಬೆಲೆಬಾಳುವ ವಸ್ತ್ರಗಳನ್ನೂ, ಮಣಿ ಮಹಾಧನಗಳನ್ನು ಪಡೆದು ಹಿಂದಿರುಗಿದನು.
02028055a ಧರ್ಮರಾಜಾಯ ತತ್ಸರ್ವಂ ನಿವೇದ್ಯ ಭರತರ್ಷಭ।
02028055c ಕೃತಕರ್ಮಾ ಸುಖಂ ರಾಜನ್ನುವಾಸ ಜನಮೇಜಯ।।
ಭರತರ್ಷಭ! ಜನಮೇಜಯ! ರಾಜನ್! ಅವೆಲ್ಲವನ್ನೂ ಧರ್ಮರಾಜನಿಗೆ ನಿವೇದಿಸಿ ಅವನು ಕೃತಕರ್ಮನಾಗಿ ಸುಖದಿಂದ ವಾಸಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದಿಗ್ವಿಜಯಪರ್ವಣಿ ಸಹದೇವದಕ್ಷಿಣದಿಗ್ವಿಜಯೇ ಅಷ್ಟವಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದಿಗ್ವಿಜಯಪರ್ವದಲ್ಲಿ ಸಹದೇವದಕ್ಷಿಣದಿಗ್ವಿಜಯ ಎನ್ನುವ ಇಪ್ಪತ್ತೆಂಟನೆಯ ಅಧ್ಯಾಯವು.
-
ಭೀಮನು ಪೂರ್ವದಿಕ್ಕಿನಲ್ಲಿ ಜಯಿಸಿದ ಮತ್ಸ್ಯರಾಜ ಮತ್ತು ಸಹದೇವನು ದಕ್ಷಿಣದಲ್ಲಿ ಜಯಿಸಿದ ಮತ್ಸ್ಯರಾಜ ಇವರು ಬೇರೆ ಬೇರೆ ಇದ್ದಿರಬಹುದು. ↩︎
-
ಮಹಾವಿಷ್ಣುವು ದ್ವಾಪರ ಯುಗದಲ್ಲಿ ಶ್ರೀಕೃಷ್ಣನಾಗಿ ಅವತರಿಸಿದ್ದುದು ಸನಕಾದಿ ಮುನಿಗಳ ಶಾಪದಿಂದ ಶಿಶುಪಾಲ-ದಂತವಕ್ತ್ರರಾಗಿ ಜನಿಸಿದ್ದ ವೈಕುಂಠದ ದ್ವಾರಪಾಲಕರಾಗಿದ್ದ ಜಯ-ವಿಜಯರೆಂದು ಪುರಾಣಗಳು ಹೇಳುತ್ತವೆ. ↩︎
-
ರಾಜನಿಗೆ ತಿಳಿಯದಂತೆ ಕದ್ದು ರಾಜಕುಮಾರಿಯೊಂದಿಗೆ ಅಗ್ನಿಯು ಸಂಬಂಧವನ್ನು ಇಟ್ಟುಕೊಂಡಿದ್ದ ↩︎
-
ಈಗಿನ ರಾಜನ ಹೆಸರು ನೀಲನೆಂದಿರಬಹುದು. ↩︎
-
ಇದಕ್ಕೆ ಸಂಬಂಧಿಸಿದ ಕಥೆಯೊಂದಿದೆ. ↩︎
-
ಕಪ್ಪು ಬಾಲಗಳನ್ನು ಹೊಂದಿರುವವ ↩︎
-
ಮಗ ರುಕ್ಮಿಯೊಂದಿಗೆ ರಾಜಾ ಭೀಷ್ಮಕನು ↩︎
-
ಅಳಿಯ ಶ್ರೀಕೃಷ್ಣನ ಪಾಂಡವರ ಸಂಬಂಧಿ, ಮಿತ್ರ ಮತ್ತು ಹಿತಚಿಂತಕನೆಂದು ಗಮನಿಸಿ ↩︎
-
ರಾವಣನ ತಮ್ಮ ವಿಭೀಷಣನು ತ್ರೇತಾಯುಗದಿಂದ ದ್ವಾಪರ ಯುಗದ ವರೆಗೆ ಇದ್ದನೇ? ಅವನಿಗೆ ಅಮರನೆಂಬ ವರವಿತ್ತೆಂದು ಹೇಳುತ್ತಾರೆ! ↩︎
-
ಹಿಂದೆ ಶ್ರೀರಾಮಚಂದ್ರನನ್ನು ಪ್ರಭುವನ್ನಾಗಿ ಸ್ವೀಕರಿಸಿದ ವಿಭೀಷಣನು ಈಗ ಒಂದು ಯುಗವೇ ಕಳೆದ ನಂತರ ಯುಧಿಷ್ಠಿರನನ್ನು ಪ್ರಭುವನ್ನಾಗಿ ಸ್ವೀಕರಿಸುವುದು ಕಾಲದ ಮಹಿಮೆಯೇ ಸರಿ! ↩︎