ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸಭಾ ಪರ್ವ
ದಿಗ್ವಿಜಯ ಪರ್ವ
ಅಧ್ಯಾಯ 25
ಸಾರ
ಉತ್ತರ ದಿಕ್ಕನ್ನು ಗೆದ್ದು ಅರ್ಜುನನು ಮರಳಿದುದು (1-20).
02025001 ವೈಶಂಪಾಯನ ಉವಾಚ।
02025001a ಸ ಶ್ವೇತಪರ್ವತಂ ವೀರಃ ಸಮತಿಕ್ರಮ್ಯ ಭಾರತ।
02025001c ದೇಶಂ ಕಿಂಪುರುಷಾವಾಸಂ ದ್ರುಮಪುತ್ರೇಣ ರಕ್ಷಿತಂ।।
ವೈಶಂಪಾಯನನು ಹೇಳಿದನು: “ಭಾರತ! ಶ್ವೇತಪರ್ವತವನ್ನು ದಾಟಿ ಆ ವೀರನು ದ್ರುಮಪುತ್ರನಿಂದ ರಕ್ಷಿತ ಕಿಂಪುರುಷರು ವಾಸಿಸುತ್ತಿದ್ದ ದೇಶಕ್ಕೆ ಬಂದನು.
02025002a ಮಹತಾ ಸನ್ನಿಪಾತೇನ ಕ್ಷತ್ರಿಯಾಂತಕರೇಣ ಹ।
02025002c ವ್ಯಜಯತ್ಪಾಂಡವಶ್ರೇಷ್ಠಃ ಕರೇ ಚೈವ ನ್ಯವೇಶಯತ್।।
ಹಲವಾರು ಕ್ಷತ್ರಿಯರು ತಮ್ಮ ಅಂತ್ಯವನ್ನು ಕಂಡ ಆ ಮಹಾ ಯುದ್ಧದಲ್ಲಿ ಪಾಂಡವಶ್ರೇಷ್ಠನು ಅದನ್ನು ಗೆದ್ದು ಕರವನ್ನು ಪಡೆದುಕೊಂಡನು.
02025003a ತಂ ಜಿತ್ವಾ ಹಾಟಕಂ ನಾಮ ದೇಶಂ ಗುಹ್ಯಕರಕ್ಷಿತಂ।
02025003c ಪಾಕಶಾಸನಿರವ್ಯಗ್ರಃ ಸಹಸೈನ್ಯಃ ಸಮಾಸದತ್।।
ಗುಹ್ಯಕರಿಂದ ರಕ್ಷಿತ ಹಾಟಕ ಎಂಬ ಹೆಸರಿನ ದೇಶವನ್ನು ಗೆದ್ದು ನಿರವ್ಯಗ್ರ ಪಾಕಶಾಸನಿಯು ಸೈನ್ಯದೊಂದಿಗೆ ಅಲ್ಲಿ ನೆಲಸಿದನು.
02025004a ತಾಂಸ್ತು ಸಾಂತ್ವೇನ ನಿರ್ಜಿತ್ಯ ಮಾನಸಂ ಸರ ಉತ್ತಮಂ।
02025004c ಋಷಿಕುಲ್ಯಾಶ್ಚ ತಾಃ ಸರ್ವಾ ದದರ್ಶ ಕುರುನಂದನಃ।।
ಸಾಂತ್ವನದಿಂದ ಅವರನ್ನು ಗೆದ್ದು ಕುರುನಂದನನು ಋಷಿಕುಂಜರಗಳಿಂದ ಕೂಡಿದ್ದ ಉತ್ತಮ ಮಾನಸ ಸರೋವರವನ್ನು ಕಂಡನು.
02025005a ಸರೋ ಮಾನಸಮಾಸಾದ್ಯ ಹಾಟಕಾನಭಿತಃ ಪ್ರಭುಃ।
02025005c ಗಂಧರ್ವರಕ್ಷಿತಂ ದೇಶಂ ವ್ಯಜಯತ್ಪಾಂಡವಸ್ತತಃ।।
ಮಾನಸ ಸರೋವರವನ್ನು ತಲುಪಿ ಪ್ರಭು ಪಾಂಡವನು ಹಾಟಕದ ಬಳಿಯಿರುವ ಗಂಧರ್ವರಿಂದ ರಕ್ಷಿತ ದೇಶವನ್ನು ಗೆದ್ದನು.
02025006a ತತ್ರ ತಿತ್ತಿರಿಕಲ್ಮಾಷಾನ್ಮಂಡೂಕಾಕ್ಷಾನ್ ಹಯೋತ್ತಮಾನ್।
02025006c ಲೇಭೇ ಸ ಕರಮತ್ಯಂತಂ ಗಂಧರ್ವನಗರಾತ್ತದಾ।।
ಅಲ್ಲಿ ಗಂಧರ್ವ ನಗರದಲ್ಲಿ ಅವನು ತಿತ್ತಿರಿ ಬಣ್ಣದ ಕಪ್ಪೆಯಂತೆ ಕಣ್ಣುಗಳನ್ನು ಹೊಂದಿದ್ದ ಉತ್ತಮ ಕುದುರೆಗಳನ್ನು ಇನ್ನೂ ಇತರ ಕಾಣಿಕೆಗಳನ್ನು ಪಡೆದನು.
02025007a ಉತ್ತರಂ ಹರಿವರ್ಷಂ ತು ಸಮಾಸಾದ್ಯ ಸ ಪಾಂಡವಃ।
02025007c ಇಯೇಷ ಜೇತುಂ ತಂ ದೇಶಂ ಪಾಕಶಾಸನನಂದನಃ।।
ಅನಂತರ ಪಾಕಶಾಸನ ನಂದನ ಪಾಂಡವನು ಉತ್ತರ ಹರಿವರ್ಷವನ್ನು ತಲುಪಿ ಆ ದೇಶವನ್ನು ಗೆಲ್ಲಲು ಬಯಸಿದನು.
02025008a ತತ ಏನಂ ಮಹಾಕಾಯಾ ಮಹಾವೀರ್ಯಾ ಮಹಾಬಲಾಃ।
02025008c ದ್ವಾರಪಾಲಾಃ ಸಮಾಸಾದ್ಯ ಹೃಷ್ಟಾ ವಚನಮಬ್ರುವನ್।।
ಅಲ್ಲಿ ಮಹಾಕಾಯ, ಮಹಾವೀರ, ಮಹಾಬಲ ದ್ವಾರಪಾಲಕರು ಅವನ ಹತ್ತಿರ ಬಂದು ಸಂತೋಷದಿಂದ ಈ ಮಾತುಗಳನ್ನಾಡಿದರು:
02025009a ಪಾರ್ಥ ನೇದಂ ತ್ವಯಾ ಶಕ್ಯಂ ಪುರಂ ಜೇತುಂ ಕಥಂ ಚನ।
02025009c ಉಪಾವರ್ತಸ್ವ ಕಲ್ಯಾಣ ಪರ್ಯಾಪ್ತಮಿದಮಚ್ಯುತ।।
“ಪಾರ್ಥ! ಯಾವ ರೀತಿಯಿಂದಲೂ ಈ ಪುರವನ್ನು ಜಯಿಸಲು ನೀನು ಶಕ್ಯನಿಲ್ಲ. ಅಚ್ಯುತ! ಕಲ್ಯಾಣ! ಹಿಂದಿರುಗು! ಇದೇ ನಿನಗೆ ಒಳ್ಳೆಯದಾಗುತ್ತದೆ!
02025010a ಇದಂ ಪುರಂ ಯಃ ಪ್ರವಿಶೇದ್ಧ್ರುವಂ ಸ ನ ಭವೇನ್ನರಃ।
02025010c ಪ್ರೀಯಾಮಹೇ ತ್ವಯಾ ವೀರ ಪರ್ಯಾಪ್ತೋ ವಿಜಯಸ್ತವ।।
ಈ ಪುರವನ್ನು ಪ್ರವೇಶಿಸುವ ಯಾವ ನರನೂ ಸಾಯಲೇ ಬೇಕು. ವೀರ! ನಾವು ನಿನ್ನ ಮೇಲೆ ಪ್ರೀತಿಯನ್ನು ತೋರಿಸುತ್ತಿದ್ದೇವೆ. ನಿನ್ನ ವಿಜಯವನ್ನು ಇನ್ನು ಸಾಕುಮಾಡು.
02025011a ನ ಚಾಪಿ ಕಿಂ ಚಿಜ್ಜೇತವ್ಯಮರ್ಜುನಾತ್ರ ಪ್ರದೃಶ್ಯತೇ।
02025011c ಉತ್ತರಾಃ ಕುರವೋ ಹ್ಯೇತೇ ನಾತ್ರ ಯುದ್ಧಂ ಪ್ರವರ್ತತೇ।।
ಅರ್ಜುನ! ನೀನು ಜಯಿಸಬೇಕಾದ್ದುದು ಇನ್ನು ಯಾವುದೂ ಉಳಿದಿಲ್ಲ. ಇದು ಉತ್ತರ ಕುರುಗಳ ರಾಷ್ರ ಮತ್ತು ಇಲ್ಲಿ ಯುದ್ಧ ಯಾವುದೂ ನಡೆಯುವುದಿಲ್ಲ.
02025012a ಪ್ರವಿಷ್ಟಶ್ಚಾಪಿ ಕೌಂತೇಯ ನೇಹ ದ್ರಕ್ಷ್ಯಸಿ ಕಿಂ ಚನ।
02025012c ನ ಹಿ ಮಾನುಷದೇಹೇನ ಶಕ್ಯಮತ್ರಾಭಿವೀಕ್ಷಿತುಂ।।
ಕೌಂತೇಯ! ಒಂದು ವೇಳೆ ನೀನು ಇದನ್ನು ಪ್ರವೇಶಿಸಿದರೂ ನಿನಗೆ ಏನೂ ಕಾಣುವುದಿಲ್ಲ. ಯಾಕೆಂದರೆ ಇಲ್ಲಿರುವ ಏನನ್ನು ನೋಡಲು ಮನುಷ್ಯನಿಗೆ ಶಕ್ಯವಿಲ್ಲ.
02025013a ಅಥೇಹ ಪುರುಷವ್ಯಾಘ್ರ ಕಿಂ ಚಿದನ್ಯಚ್ಚಿಕೀರ್ಷಸಿ।
02025013c ತದ್ಬ್ರವೀಹಿ ಕರಿಷ್ಯಾಮೋ ವಚನಾತ್ತವ ಭಾರತ।।
ಆದರೆ ಭಾರತ! ಪುರುಷವ್ಯಾಘ್ರ! ಇಲ್ಲಿ ಇನ್ನೇನನ್ನಾದರನ್ನೂ ಮಾಡಲು ಬಯಸುವೆಯಾದರೆ ಹೇಳು. ನಿನ್ನ ಮಾತನ್ನು ನಡೆಸಿಕೊಡುತ್ತೇವೆ.”
02025014a ತತಸ್ತಾನಬ್ರವೀದ್ರಾಜನ್ನರ್ಜುನಃ ಪಾಕಶಾಸನಿಃ।
02025014c ಪಾರ್ಥಿವತ್ವಂ ಚಿಕೀರ್ಷಾಮಿ ಧರ್ಮರಾಜಸ್ಯ ಧೀಮತಃ।।
ರಾಜನ್! ಈ ಮಾತುಗಳಿಗೆ ಪಾಕಶಾಸನಿ ಅರ್ಜುನನು ಹೇಳಿದನು: “ಧೀಮಂತ ಧರ್ಮರಾಜನು ಪಾರ್ಥಿವತ್ವವನ್ನು ಬಯಸಿದ್ದಾನೆ.
02025015a ನ ಪ್ರವೇಕ್ಷ್ಯಾಮಿ ವೋ ದೇಶಂ ಬಾಧ್ಯತ್ವಂ ಯದಿ ಮಾನುಷೈಃ।
02025015c ಯುಧಿಷ್ಠಿರಾಯ ಯತ್ಕಿಂ ಚಿತ್ಕರವನ್ನಃ ಪ್ರದೀಯತಾಂ।।
ಮನುಷ್ಯರಿಗೆ ಬಾಧ್ಯತ ನಿಮ್ಮ ದೇಶವನ್ನು ನಾನು ಪ್ರವೇಶಿಸುವುದಿಲ್ಲ. ಆದರೆ ಯುಧಿಷ್ಠಿರನಿಗೆ ಕರದ ರೂಪದಲ್ಲಿ ಏನನ್ನಾದರೂ ಕೊಡಬೇಕು.”
02025016a ತತೋ ದಿವ್ಯಾನಿ ವಸ್ತ್ರಾಣಿ ದಿವ್ಯಾನ್ಯಾಭರಣಾನಿ ಚ।
02025016c ಮೋಕಾಜಿನಾನಿ ದಿವ್ಯಾನಿ ತಸ್ಮೈ ತೇ ಪ್ರದದುಃ ಕರಂ।।
ಆಗ ಅವರು ದಿವ್ಯ ವಸ್ತ್ರಗಳನ್ನು, ದಿವ್ಯ ಆಭರಣಗಳನ್ನೂ, ದಿವ್ಯ ಚರ್ಮಗಳನ್ನೂ ಕರವಾಗಿ ಅವನಿಗೆ ನೀಡಿದರು.
02025017a ಏವಂ ಸ ಪುರುಷವ್ಯಾಘ್ರೋ ವಿಜಿಗ್ಯೇ ದಿಶಮುತ್ತರಾಂ।
02025017c ಸಂಗ್ರಾಮಾನ್ಸುಬಹೂನ್ಕೃತ್ವಾ ಕ್ಷತ್ರಿಯೈರ್ದಸ್ಯುಭಿಸ್ತಥಾ।।
02025018a ಸ ವಿನಿರ್ಜಿತ್ಯ ರಾಜ್ಞಸ್ತಾನ್ಕರೇ ಚ ವಿನಿವೇಶ್ಯ ಹ।
02025018c ಧನಾನ್ಯಾದಾಯ ಸರ್ವೇಭ್ಯೋ ರತ್ನಾನಿ ವಿವಿಧಾನಿ ಚ।।
02025019a ಹಯಾಂಸ್ತಿತ್ತಿರಿಕಲ್ಮಾಷಾಂ ಶುಕಪತ್ರನಿಭಾನಪಿ।
02025019c ಮಯೂರಸದೃಶಾಂಶ್ಚಾನ್ಯಾನ್ಸರ್ವಾನನಿಲರಂಹಸಃ।।
ಈ ರೀತಿ ಪುರುಷವ್ಯಾಘ್ರನು ಉತ್ತರ ದಿಶವನ್ನು ಗೆದ್ದು, ಕ್ಷತ್ರಿಯರು ಮತ್ತು ದಸ್ಯುಗಳೊಂದಿಗೆ ಬಹಳಷ್ಟು ಸಂಗ್ರಾಮಗಳನ್ನು ನಡೆಸಿ ಆ ರಾಜರನ್ನು ಗೆದ್ದು ಅವರು ಕರವನ್ನು ಕೊಡುವಂತೆ ಮಾಡಿ, ಅವರೆಲ್ಲರಿಂದ ವಿವಿಧ ಧನ, ರತ್ನಗಳು, ಚಿಟ್ಟೆಗಳ ಬಣ್ಣಗಳ ನವಿಲು ಮತ್ತು ಗಿಳಿಗಳ ರೆಕ್ಕೆಗಳ ಬಣ್ಣಗಳ, ಎಲ್ಲವೂ ವಾಯುವೇಗದ ಕುದುರೆಗಳನ್ನು ಪಡೆದನು.
02025020a ವೃತಃ ಸುಮಹತಾ ರಾಜನ್ಬಲೇನ ಚತುರಂಗಿಣಾ।
02025020c ಆಜಗಾಮ ಪುನರ್ವೀರಃ ಶಕ್ರಪ್ರಸ್ಥಂ ಪುರೋತ್ತಮಂ।।
ರಾಜನ್! ಮಹತ್ತರ ಚತುರಂಗ ಬಲದಿಂದೊಡಗೂಡಿ ಆ ವೀರನು ಉತ್ತಮ ಶಕ್ರಪ್ರಸ್ಥ ಪುರವನ್ನು ಪುನಃ ಪ್ರವೇಶಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದಿಗ್ವಿಜಯಪರ್ವಣಿ ಅರ್ಜುನೋತ್ತರದಿಗ್ವಿಜಯೇ ಪಂಚವಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದಿಗ್ವಿಜಯಪರ್ವದಲ್ಲಿ ಅರ್ಜುನೋತ್ತರದಿಗ್ವಿಜಯ ಎನ್ನುವ ಇಪ್ಪತ್ತೈದನೆಯ ಅಧ್ಯಾಯವು.