024 ಅರ್ಜುನದಿಗ್ವಿಜಯೇ ನಾನಾದೇಶಜಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸಭಾ ಪರ್ವ

ದಿಗ್ವಿಜಯ ಪರ್ವ

ಅಧ್ಯಾಯ 24

ಸಾರ

ಅರ್ಜುನನು ಉತ್ತರದಲ್ಲಿದ್ದ ಇತರ ರಾಜರನ್ನು ಸೋಲಿಸಿದ್ದು (1-27).

02024001 ವೈಶಂಪಾಯನ ಉವಾಚ।
02024001a ತಂ ವಿಜಿತ್ಯ ಮಹಾಬಾಹುಃ ಕುಂತೀಪುತ್ರೋ ಧನಂಜಯಃ।
02024001c ಪ್ರಯಯಾವುತ್ತರಾಂ ತಸ್ಮಾದ್ದಿಶಂ ಧನದಪಾಲಿತಾಂ ।।

ವೈಶಂಪಾಯನನು ಹೇಳಿದನು: “ಅವನನ್ನು ಜಯಿಸಿದ ಮಹಾಬಾಹು ಕುಂತೀಪುತ್ರ ಧನಂಜಯನು ಧನದನು ಪಾಲಿಸುವ ಉತ್ತರ ದಿಶೆಯಲ್ಲಿ ಹೊರಟನು.

02024002a ಅಂತರ್ಗಿರಿಂ ಚ ಕೌಂತೇಯಸ್ತಥೈವ ಚ ಬಹಿರ್ಗಿರಿಂ।
02024002c ತಥೋಪರಿಗಿರಿಂ ಚೈವ ವಿಜಿಗ್ಯೇ ಪುರುಷರ್ಷಭಃ।।
02024003a ವಿಜಿತ್ಯ ಪರ್ವತಾನ್ಸರ್ವಾನ್ಯೇ ಚ ತತ್ರ ನರಾಧಿಪಾಃ।
02024003c ತಾನ್ವಶೇ ಸ್ಥಾಪಯಿತ್ವಾ ಸ ರತ್ನಾನ್ಯಾದಾಯ ಸರ್ವಶಃ।।

ಪುರುಷರ್ಷಭ ಕೌಂತೇಯನು ಒಳಗಿನ ಪರ್ವತಗಳನ್ನು, ಹೊರಗಿನ ಪರ್ವತಪ್ರದೇಶಗಳನ್ನು ಮತ್ತು ಮೇಲಿನ ಪರ್ವತಗಳನ್ನು ಜಯಿಸಿದನು. ಆ ಎಲ್ಲ ಪರ್ವತಗಳನ್ನೂ ಗೆದ್ದು ಅಲ್ಲಿಯ ನರಾಧಿಪರೆಲ್ಲರನ್ನೂ ತನ್ನ ವಶದಲ್ಲಿ ಪಡೆದುಕೊಂಡು ಅವರ ಸಂಪತ್ತುಗಳನ್ನೆಲ್ಲವನ್ನೂ ತನ್ನದಾಗಿಸಿಕೊಂಡನು.

02024004a ತೈರೇವ ಸಹಿತಃ ಸರ್ವೈರನುರಜ್ಯ ಚ ತಾನ್ನೃಪಾನ್।
02024004c ಕುಲೂತವಾಸಿನಂ ರಾಜನ್ಬೃಹಂತಮುಪಜಗ್ಮಿವಾನ್।।
02024005a ಮೃದಂಗವರನಾದೇನ ರಥನೇಮಿಸ್ವನೇನ ಚ।
02024005c ಹಸ್ತಿನಾಂ ಚ ನಿನಾದೇನ ಕಂಪಯನ್ವಸುಧಾಮಿಮಾಂ।।

ಆ ಎಲ್ಲ ನೃಪರನ್ನೊಡಗೂಡಿ ಕುಲೂತವಾಸಿ ರಾಜ ಬೃಹಂತನ ಮೇಲೆ ಭೂಮಿಯನ್ನು ನಡುಗಿಸುವ ಮೃದಂಗ ವಾದ್ಯಗಳಿಂದ, ರಥಗಳ ಧ್ವನಿಯಿಂದ, ಅನೆಗಳ ನಿನಾದದಿಂದ ಕೂಡಿ ಆಕ್ರಮಣ ಮಾಡಿದನು.

02024006a ತತೋ ಬೃಹಂತಸ್ತರುಣೋ ಬಲೇನ ಚತುರಂಗಿಣಾ।
02024006c ನಿಷ್ಕ್ರಮ್ಯ ನಗರಾತ್ತಸ್ಮಾದ್ಯೋಧಯಾಮಾಸ ಪಾಂಡವಂ।।

ಆಗ ತರುಣ ಬೃಹಂತನು ಚತುರಂಗ ಬಲದೊಂದಿಗೆ ನಗರದ ಹೊರಬಂದು ಪಾಂಡವನೊಂದಿಗೆ ಯುದ್ಧ ಮಾಡಿದನು.

02024007a ಸುಮಹಾನ್ಸನ್ನಿಪಾತೋಽಭೂದ್ಧನಂಜಯಬೃಹಂತಯೋಃ।
02024007c ನ ಶಶಾಕ ಬೃಹಂತಸ್ತು ಸೋಢುಂ ಪಾಂಡವವಿಕ್ರಮಂ।।

ಧನಂಜಯ ಬೃಹಂತರ ಮಧ್ಯೆ ಮಹಾ ಕಾಳಗವೇ ನಡೆಯಿತು. ಆದರೆ ಬೃಹಂತನು ಪಾಂಡವನ ವಿಕ್ರಮವನ್ನು ಎದುರಿಸಲು ಅಶಕ್ತನಾದನು.

02024008a ಸೋಽವಿಷಃಯತಮಂ ಜ್ಞಾತ್ವಾ ಕೌಂತೇಯಂ ಪರ್ವತೇಶ್ವರಃ।
02024008c ಉಪಾವರ್ತತ ದುರ್ಮೇಧಾ ರತ್ನಾನ್ಯಾದಾಯ ಸರ್ವಶಃ।।

ಕೌಂತೇಯನನ್ನು ಸೋಲಿಸಲಿಕ್ಕಾಗುವುದಿಲ್ಲ ಎಂದು ತಿಳಿದ ಆ ಪರ್ವತೇಶ್ವರನು ತನ್ನ ಸರ್ವ ಸಂಪತ್ತನ್ನೂ ತಂದೊಪ್ಪಿಸಿದನು.

02024009a ಸ ತದ್ರಾಜ್ಯಮವಸ್ಥಾಪ್ಯ ಕುಲೂತಸಹಿತೋ ಯಯೌ।
02024009c ಸೇನಾಬಿಂದುಮಥೋ ರಾಜನ್ರಾಜ್ಯಾದಾಶು ಸಮಾಕ್ಷಿಪತ್।।

ರಾಜನ್! ಆ ರಾಜ್ಯವನ್ನು ಪಡೆದು ಕುಲೂತನೊಂದಿಗೆ ಹೊರಟು, ಸೇನಾಬಿಂದುವನ್ನು ಅವನ ರಾಜ್ಯಭ್ರಷ್ಟನನ್ನಾಗಿ ಮಾಡಿದನು.

02024010a ಮೋದಾಪುರಂ ವಾಮದೇವಂ ಸುದಾಮಾನಂ ಸುಸಂಕುಲಂ।
02024010c ಕುಲೂತಾನುತ್ತರಾಂಶ್ಚೈವ ತಾಂಶ್ಚ ರಾಜ್ಞಃ ಸಮಾನಯತ್।।

ಅವನು ಮೋದಾಪುರ, ವಾಮದೇವ, ಸುದಾಮರೊಡನೆ ಉತ್ತರ ಕುಲೂತದ ಸರ್ವ ರಾಜಕುಲಗಳನ್ನು ತನ್ನದಾಗಿಸಿಕೊಂಡನು.

02024011a ತತ್ರಸ್ಥಃ ಪುರುಷೈರೇವ ಧರ್ಮರಾಜಸ್ಯ ಶಾಸನಾತ್।
02024011c ವ್ಯಜಯದ್ಧನಂಜಯೋ ರಾಜನ್ದೇಶಾನ್ಪಂಚ ಪ್ರಮಾಣತಃ।।

ರಾಜನ್! ಧರ್ಮರಾಜನ ಶಾಸನದಂತೆ ಅಲ್ಲಿಯೇ ತಂಗಿ ಧನಂಜಯನು ತನ್ನ ಸೇನೆಯಿಂದ ಐದು ದೇಶಗಳನ್ನು ಗೆದ್ದನು.

02024012a ಸ ದಿವಃಪ್ರಸ್ಥಮಾಸಾದ್ಯ ಸೇನಾಬಿಂದೋಃ ಪುರಂ ಮಹತ್।
02024012c ಬಲೇನ ಚತುರಂಗೇಣ ನಿವೇಶಮಕರೋತ್ಪ್ರಭುಃ।।

ಸೇನಬಿಂದುವಿನ ಮಹಾ ಪುರ ದಿವಃಪ್ರಸ್ಥವನ್ನು ತಲುಪಿ ಆ ಪ್ರಭುವು ಅದನ್ನೇ ತನ್ನ ಚತುರಂಗಬಲದ ತಂಗುದಾಣವನ್ನಾಗಿ ಮಾಡಿದನು.

02024013a ಸ ತೈಃ ಪರಿವೃತಃ ಸರ್ವೈರ್ವಿಷ್ವಗಶ್ವಂ ನರಾಧಿಪಂ।
02024013c ಅಭ್ಯಗಚ್ಛನ್ಮಹಾತೇಜಾಃ ಪೌರವಂ ಪುರುಷರ್ಷಭಃ।।
02024014a ವಿಜಿತ್ಯ ಚಾಹವೇ ಶೂರಾನ್ಪಾರ್ವತೀಯಾನ್ಮಹಾರಥಾನ್।
02024014c ಧ್ವಜಿನ್ಯಾ ವ್ಯಜಯದ್ರಾಜನ್ಪುರಂ ಪೌರವರಕ್ಷಿತಂ।।

ರಾಜನ್! ಅವರೆಲ್ಲರಿಂದ ಪರಿವೃತನಾಗಿ ಆ ಮಹಾತೇಜಸ್ವಿ ಪುರುಷರ್ಷಭನು ನರಾಧಿಪ ಪೌರವ ವಿಶ್ವಗಶ್ವನಲ್ಲಿಗೆ ಹೋಗಿ ಶೂರ ಮಹಾರಥಿ ಪರ್ವತ ಜನರನ್ನು ತನ್ನ ಧ್ವಜಯುಕ್ತ ಸೇನೆಯಿಂದ ಗೆದ್ದು ಪೌರವರಕ್ಷಿತ ಪುರವನ್ನು ಗೆದ್ದನು.

02024015a ಪೌರವಂ ತು ವಿನಿರ್ಜಿತ್ಯ ದಸ್ಯೂನ್ಪರ್ವತವಾಸಿನಃ।
02024015c ಗಣಾನುತ್ಸವಸಂಕೇತಾನಜಯತ್ಸಪ್ತ ಪಾಂಡವಃ।।

ಪೌರವನನ್ನು ಸೋಲಿಸಿದ ನಂತರ ಪಾಂಡವನು ಪರ್ವತವಾಸಿ ಏಳು ದಸ್ಯುಗಣ ಉತ್ಸವಸಂಕೇತಕರನ್ನು ಗೆದ್ದನು.

02024016a ತತಃ ಕಾಶ್ಮೀರಕಾನ್ವೀರಾನ್ ಕ್ಷತ್ರಿಯಾನ್ ಕ್ಷತ್ರಿಯರ್ಷಭಃ।
02024016c ವ್ಯಜಯಲ್ಲೋಹಿತಂ ಚೈವ ಮಂಡಲೈರ್ದಶಭಿಃ ಸಹ।।
02024017a ತತಸ್ತ್ರಿಗರ್ತಾನ್ಕೌಂತೇಯೋ ದಾರ್ವಾನ್ಕೋಕನದಾಶ್ಚ ಯೇ।
02024017c ಕ್ಷತ್ರಿಯಾ ಬಹವೋ ರಾಜನ್ನುಪಾವರ್ತಂತ ಸರ್ವಶಃ।।

ಅನಂತರ ಕ್ಷತ್ರಿಯರ್ಷಭನು ಅವರ ಹತ್ತು ಮಂಡಲಗಳೊಂದಿಗೆ ವೀರ ಕಾಶ್ಮೀರಕ ಮತ್ತು ಲೋಹಿತ ಕ್ಷತ್ರಿಯರನ್ನು ಜಯಿಸಿದನು. ರಾಜನ್! ಹಾಗೆಯೇ ತ್ರಿಗರ್ತರನ್ನು, ದಾರ್ವರನ್ನು, ಕೋಕನದರನ್ನು ಮತ್ತು ಇನ್ನೂ ಅವನೊಂದಿಗೆ ಹೋರಾಡಿದ ಬಹಳ ಕ್ಷತ್ರಿಯರೆಲ್ಲರನ್ನೂ ಕೌಂತೇಯನು ಗೆದ್ದನು.

02024018a ಅಭಿಸಾರೀಂ ತತೋ ರಮ್ಯಾಂ ವಿಜಿಗ್ಯೇ ಕುರುನಂದನಃ।
02024018c ಉರಶಾವಾಸಿನಂ ಚೈವ ರೋಚಮಾನಂ ರಣೇಽಜಯತ್।।

ಕುರುನಂದನನು ರಮ್ಯ ನಗರಿ ಅಭಿಸಾರಿಯನ್ನು ಮುತ್ತಿ, ಉರಶವಾಸಿ ರೋಚಮಾನನನ್ನು ರಣದಲ್ಲಿ ಗೆದ್ದನು.

02024019a ತತಃ ಸಿಂಹಪುರಂ ರಮ್ಯಂ ಚಿತ್ರಾಯುಧಸುರಕ್ಷಿತಂ।
02024019c ಪ್ರಾಮಥದ್ಬಲಮಾಸ್ಥಾಯ ಪಾಕಶಾಸನಿರಾಹವೇ।।
02024020a ತತಃ ಸುಹ್ಮಾಂಶ್ಚ ಚೋಲಾಂಶ್ಚ ಕಿರೀಟೀ ಪಾಂಡವರ್ಷಭಃ।
02024020c ಸಹಿತಃ ಸರ್ವಸೈನ್ಯೇನ ಪ್ರಾಮಥತ್ಕುರುನಂದನಃ।।

ಅನಂತರ ಪಾಕಶಾಸನಿಯು ಚಿತ್ರಾಯುಧನಿಂದ ಸುರಕ್ಷಿತ ರಮ್ಯ ಸಿಂಹಪುರವನ್ನು ತನ್ನ ಅತಿ ದೊಡ್ಡ ಬಲದಿಂದ ಗೆದ್ದನು. ನಂತರ ಕಿರೀಟೀ ಪಾಂಡವರ್ಷಭ ಕುರುನಂದನನು ತನ್ನ ಸರ್ವ ಸೈನ್ಯದಿಂದ ಸುಹ್ಮರು ಮತ್ತು ಚೋಲರನ್ನು ಗೆದ್ದನು.

02024021a ತತಃ ಪರಮವಿಕ್ರಾಂತೋ ಬಾಹ್ಲೀಕಾನ್ಕುರುನಂದನಃ।
02024021c ಮಹತಾ ಪರಿಮರ್ದೇನ ವಶೇ ಚಕ್ರೇ ದುರಾಸದಾನ್।।

ಅನಂತರ ಪರಮವಿಕ್ರಾಂತ ಕುರುನಂದನನು ದುರಾಸದ ಬಾಹ್ಲೀಕರನ್ನು ತನ್ನ ಮಹಾ ಶಕ್ತಿಯೊಂದಿಗೆ ವಶಮಾಡಿಕೊಂಡನು.

02024022a ಗೃಹೀತ್ವಾ ತು ಬಲಂ ಸಾರಂ ಫಲ್ಗು ಚೋತ್ಸೃಜ್ಯ ಪಾಂಡವಃ।
02024022c ದರದಾನ್ಸಹ ಕಾಂಬೋಜೈರಜಯತ್ಪಾಕಶಾಸನಿಃ।।

ಪಾಕಶಾಸನಿ ಪಾಂಡವನು ಅವರ ಬಲವನ್ನು ಕಿತ್ತುಕೊಂಡು ಕಡಿಮೆಯಿದ್ದಿದ್ದ ಸಂಪನ್ಮೂಲಗಳನ್ನು ಅಲ್ಲಿಯೇ ಬಿಟ್ಟು ದರದರೊಂದಿಗೆ ಕಾಂಬೋಜರನ್ನು ಜಯಿಸಿದನು.

02024023a ಪ್ರಾಗುತ್ತರಾಂ ದಿಶಂ ಯೇ ಚ ವಸಂತ್ಯಾಶ್ರಿತ್ಯ ದಸ್ಯವಃ।
02024023c ನಿವಸಂತಿ ವನೇ ಯೇ ಚ ತಾನ್ಸರ್ವಾನಜಯತ್ಪ್ರಭುಃ।।

ಇಂದ್ರನ ಮಗ ಪ್ರಭುವು ಪೂರ್ವೋತ್ತರ ದಿಕ್ಕಿನಲ್ಲಿ ವಾಸಿಸುವ ದಸ್ಯುಗಳನ್ನು ಮತ್ತು ವನಗಳಲ್ಲಿ ವಾಸಿಸುತ್ತಿರುವವರನ್ನು ಸೋಲಿಸಿದನು.

02024024a ಲೋಹಾನ್ಪರಮಕಾಂಬೋಜಾನೃಷಿಕಾನುತ್ತರಾನಪಿ।
02024024c ಸಹಿತಾಂಸ್ತಾನ್ಮಹಾರಾಜ ವ್ಯಜಯತ್ಪಾಕಶಾಸನಿಃ।।

ಮಹಾರಾಜ! ಅನಂತರ ಪಾಕಶಾಸನಿಯು ಲೋಹರನ್ನು, ಮೇಲಿನ ಕಾಂಬೋಜರನ್ನು, ಮತ್ತು ಉತ್ತರದ ಋಷಿಕರನ್ನು ಒಟ್ಟಿಗೇ ಗೆದ್ದನು.

02024025a ಋಷಿಕೇಷು ತು ಸಂಗ್ರಾಮೋ ಬಭೂವಾತಿಭಯಂಕರಃ।
02024025c ತಾರಕಾಮಯಸಂಕಾಶಃ ಪರಮರ್ಷಿಕಪಾರ್ಥಯೋಃ।।

ಋಷಿಕದಲ್ಲಿ ಮೇಲಿನ ಋಷಿಕರು ಮತ್ತು ಪಾರ್ಥನ ನಡುವೆ ನಡೆದ ಯುದ್ಧವು ತಾರಕನೊಂದಿಗೆ ನಡೆದ ಯುದ್ಧದಂತೆ ಅತಿ ಭಯಂಕರವಾಗಿತ್ತು.

02024026a ಸ ವಿಜಿತ್ಯ ತತೋ ರಾಜನ್ನೃಷಿಕಾನ್ರಣಮೂರ್ಧನಿ।
02024026c ಶುಕೋದರಸಮಪ್ರಖ್ಯಾನ್ ಹಯಾನಷ್ಟೌ ಸಮಾನಯತ್।।
02024026e ಮಯೂರಸದೃಶಾನನ್ಯಾನುಭಯಾನೇವ ಚಾಪರಾನ್।।

ರಾಜನ್! ರಣದಲ್ಲಿ ಋಷಿಕರನ್ನು ಜಯಿಸಿದ ನಂತರ ಅವನು ಗಿಳಿಯ ಹೊಟ್ಟೆಯ ಬಣ್ಣದ ಎಂಟು ಮತ್ತು ನವಿಲಿನ ಬಣ್ಣದ ಇನ್ನೂ ಇತರ ಕುದುರೆಗಳನ್ನು ವಶಪಡಿಸಿಕೊಂಡನು.

02024027a ಸ ವಿನಿರ್ಜಿತ್ಯ ಸಂಗ್ರಾಮೇ ಹಿಮವಂತಂ ಸನಿಷ್ಕುಟಂ।
02024027c ಶ್ವೇತಪರ್ವತಮಾಸಾದ್ಯ ನ್ಯವಸತ್ ಪುರುಷರ್ಷಭಃ।।

ನಿಷ್ಕುಟದೊಂದಿಗೆ ಹಿಮವತ್ಪರ್ವತವನ್ನು ಸಂಗ್ರಾಮದಲ್ಲಿ ಗೆದ್ದು ಪುರುಷರ್ಷಭನು ಶ್ವೇತಪರ್ವವನ್ನು ಸೇರಿ ಅಲ್ಲಿ ಬೀಡು ಬಿಟ್ಟನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದಿಗ್ವಿಜಯಪರ್ವಣಿ ಅರ್ಜುನದಿಗ್ವಿಜಯೇ ನಾನಾದೇಶಜಯೇ ಚತುರ್ವಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದಿಗ್ವಿಜಯಪರ್ವದಲ್ಲಿ ಅರ್ಜುನದಿಗ್ವಿಜಯದಲ್ಲಿ ನಾನಾದೇಶಜಯ ಎನ್ನುವ ಇಪ್ಪತ್ತ್ನಾಲ್ಕನೆಯ ಅಧ್ಯಾಯವು.