023 ಅರ್ಜುನದಿಗ್ವಿಜಯೇ ಭಗದತ್ತಪರಾಜಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸಭಾ ಪರ್ವ

ದಿಗ್ವಿಜಯ ಪರ್ವ

ಅಧ್ಯಾಯ 23

ಸಾರ

ಅರ್ಜುನನು ಉತ್ತರ ದೇಶಗಳನ್ನು ಗೆದ್ದುದು (1-16). ಭಗದತ್ತನೊಡನೆ ಅರ್ಜುನನ ಎಂಟು ದಿನಗಳ ಯುದ್ಧ (17-26).

02023001 ವೈಶಂಪಾಯನ ಉವಾಚ।
02023001a ಪಾರ್ಥಃ ಪ್ರಾಪ್ಯ ಧನುಃಶ್ರೇಷ್ಠಮಕ್ಷಯ್ಯೌ ಚ ಮಹೇಷುಧೀ।
02023001c ರಥಂ ಧ್ವಜಂ ಸಭಾಂ ಚೈವ ಯುಧಿಷ್ಠಿರಮಭಾಷತ।।

ವೈಶಂಪಾಯನನು ಹೇಳಿದನು: “ಶ್ರೇಷ್ಠ ಧನುಸ್ಸು, ಎರಡು ಅಕ್ಷಯ ಬತ್ತಳಿಕೆಗಳು, ರಥ, ಮತ್ತು ಧ್ವಜಗಳನ್ನು ಪಡೆದ ಮಹೇಷುಧಿ ಪಾರ್ಥನು ಸಭೆಯಲ್ಲಿ ಯುಧಿಷ್ಠಿರನಿಗೆ ಹೇಳಿದನು:

02023002a ಧನುರಸ್ತ್ರಂ ಶರಾ ವೀರ್ಯಂ ಪಕ್ಷೋ ಭೂಮಿರ್ಯಶೋ ಬಲಂ।
02023002c ಪ್ರಾಪ್ತಮೇತನ್ಮಯಾ ರಾಜನ್ದುಷ್ಪ್ರಾಪಂ ಯದಭೀಪ್ಸಿತಂ।।

“ರಾಜನ್! ಬಯಸಿದರೂ ಪಡೆಯಲು ದುಷ್ಕರವಾದ ಧನಸ್ಸು, ಅಸ್ತ್ರ, ಬಾಣ, ವೀರ್ಯ, ಬೆಂಬಲಿಗರು, ಭೂಮಿ, ಯಶಸ್ಸು, ಬಲಗಳನ್ನು ನಾನು ಗಳಿಸಿದ್ದೇನೆ.

02023003a ತತ್ರ ಕೃತ್ಯಮಹಂ ಮನ್ಯೇ ಕೋಶಸ್ಯಾಸ್ಯ ವಿವರ್ಧನಂ।
02023003c ಕರಮಾಹಾರಯಿಷ್ಯಾಮಿ ರಾಜ್ಞಃ ಸರ್ವಾನ್ನೃಪೋತ್ತಮ।।

ನೃಪೋತ್ತಮ! ಈಗ ನಮ್ಮ ಕೋಶವನ್ನು ವೃದ್ಧಿಗೊಳಿಸುವ ಕೃತ್ಯವನ್ನು ಮಾಡಬೇಕೆಂದು ನನ್ನ ಅಭಿಪ್ರಾಯ. ಎಲ್ಲ ರಾಜರುಗಳಿಂದ ಕರ-ಕಪ್ಪಗಳನ್ನು ತರುತ್ತೇನೆ.

02023004a ವಿಜಯಾಯ ಪ್ರಯಾಸ್ಯಾಮಿ ದಿಶಂ ಧನದರಕ್ಷಿತಾಂ।
02023004c ತಿಥಾವಥ ಮುಹೂರ್ತೇ ಚ ನಕ್ಷತ್ರೇ ಚ ತಥಾ ಶಿವೇ।।

ಶುಭ ತಿಥಿ, ಮುಹೂರ್ತ ಮತ್ತು ನಕ್ಷತ್ರದಲ್ಲಿ ವಿಜಯಕ್ಕಾಗಿ ಧನರಾಜನಿಂದ ರಕ್ಷಿತ ದಿಕ್ಕಿಗೆ ಹೊರಡುತ್ತೇನೆ.”

02023005a ಧನಂಜಯವಚಃ ಶ್ರುತ್ವಾ ಧರ್ಮರಾಜೋ ಯುಧಿಷ್ಠಿರಃ।
02023005c ಸ್ನಿಗ್ಧಗಂಭೀರನಾದಿನ್ಯಾ ತಂ ಗಿರಾ ಪ್ರತ್ಯಭಾಷತ।।

ಧನಂಜಯನ ಮಾತುಗಳನ್ನು ಕೇಳಿದ ಧರ್ಮರಾಜ ಯುಧಿಷ್ಠಿರನು ಪ್ರೀತಿ ಮತ್ತು ಗಂಭೀರಧ್ವನಿಯಲ್ಲಿ ಈ ಮಾತುಗಳನ್ನಾಡಿದನು:

02023006a ಸ್ವಸ್ತಿ ವಾಚ್ಯಾರ್ಹತೋ ವಿಪ್ರಾನ್ಪ್ರಯಾಹಿ ಭರತರ್ಷಭ।
02023006c ದುರ್ಹೃದಾಮಪ್ರಹರ್ಷಾಯ ಸುಹೃದಾಂ ನಂದನಾಯ ಚ।।
02023006e ವಿಜಯಸ್ತೇ ಧ್ರುವಂ ಪಾರ್ಥ ಪ್ರಿಯಂ ಕಾಮಮವಾಪ್ನುಹಿ।।

“ಭರತರ್ಷಭ! ಶತ್ರುಗಳಿಗೆ ದುಃಖವನ್ನು ತರಲು ಮತ್ತು ಸುಹೃದಯರಿಗೆ ಸಂತೋಷವನ್ನು ತರಲು ಅರ್ಹ ವಿಪ್ರರ ಸ್ವಸ್ತಿವಾಚನಗಳೊಂದಿಗೆ ಹೊರಡು. ಪಾರ್ಥ! ನಿನಗೆ ವಿಜಯವು ನಿಶ್ಚಯವಾದದ್ದು. ನಿನ್ನ ಪ್ರಿಯಕಾಮಗಳೆಲ್ಲವನ್ನೂ ಪಡೆಯುತ್ತೀಯೆ!”

02023007a ಇತ್ಯುಕ್ತಃ ಪ್ರಯಯೌ ಪಾರ್ಥಃ ಸೈನ್ಯೇನ ಮಹತಾ ವೃತಃ।
02023007c ಅಗ್ನಿದತ್ತೇನ ದಿವ್ಯೇನ ರಥೇನಾದ್ಭುತಕರ್ಮಣಾ।।

ಇದನ್ನು ಕೇಳಿ ಪಾರ್ಥನು ಮಹಾ ಸೇನೆಯೊಂದಿಗೆ ಅಗ್ನಿದತ್ತ ಅದ್ಭುತಕರ್ಮಿ ದಿವ್ಯ ರಥದಲ್ಲಿ ಹೊರಟನು.

02023008a ತಥೈವ ಭೀಮಸೇನೋಽಪಿ ಯಮೌ ಚ ಪುರುಷರ್ಷಭೌ।
02023008c ಸಸೈನ್ಯಾಃ ಪ್ರಯಯುಃ ಸರ್ವೇ ಧರ್ಮರಾಜಾಭಿಪೂಜಿತಾಃ।।

ಹಾಗೆಯೇ ಭೀಮಸೇನ ಮತ್ತು ಯಮಳ ಪುರುಷರ್ಷಭರೀರ್ವರೆಲ್ಲರೂ ಸೈನ್ಯಗಳೊಂದಿಗೆ ಧರ್ಮರಾಜನ ಆಶೀರ್ವಾದದೊಂದಿಗೆ ಹೊರಟರು.

02023009a ದಿಶಂ ಧನಪತೇರಿಷ್ಟಾಮಜಯತ್ಪಾಕಶಾಸನಿಃ।
02023009c ಭೀಮಸೇನಸ್ತಥಾ ಪ್ರಾಚೀಂ ಸಹದೇವಸ್ತು ದಕ್ಷಿಣಾಂ।।
02023010a ಪ್ರತೀಚೀಂ ನಕುಲೋ ರಾಜನ್ದಿಶಂ ವ್ಯಜಯದಸ್ತ್ರವಿತ್।
02023010c ಖಾಂಡವಪ್ರಸ್ಥಮಧ್ಯಾಸ್ತೇ ಧರ್ಮರಾಜೋ ಯುಧಿಷ್ಠಿರಃ।।

ರಾಜನ್! ಧನಪತಿಯ ಇಷ್ಟದಿಶವನ್ನು ಪಾಕಶಾಸನಿಯು ಜಯಿಸಿದನು, ಹಾಗೆಯೇ ಭೀಮಸೇನನು ಪೂರ್ವ, ಸಹದೇವನು ದಕ್ಷಿಣ ಮತ್ತು ಅಸ್ತ್ರವಿದುಶಿ ನಕುಲನು ಪಶ್ಚಿಮ ದಿಕ್ಕುಗಳನ್ನು ಜಯಿಸಿದರು. ಧರ್ಮರಾಜ ಯುಧಿಷ್ಠಿರನು ಮಧ್ಯದಲ್ಲಿದ್ದ ಖಾಂಡವಪ್ರಸ್ಥದಲ್ಲಿಯೇ ಉಳಿದುಕೊಂಡನು.”

02023011 ಜನಮೇಜಯ ಉವಾಚ।
02023011a ದಿಶಾಮಭಿಜಯಂ ಬ್ರಹ್ಮನ್ವಿಸ್ತರೇಣಾನುಕೀರ್ತಯ।
02023011c ನ ಹಿ ತೃಪ್ಯಾಮಿ ಪೂರ್ವೇಷಾಂ ಶೃಣ್ವಾನಶ್ಚರಿತಂ ಮಹತ್।।

ಜನಮೇಜಯನು ಹೇಳಿದನು: “ಬ್ರಹ್ಮನ್! ಅವರು ದಿಕ್ಕುಗಳ ಮೇಲೆ ವಿಜಯ ಸಾಧಿಸಿದುದರ ಕುರಿತು ವಿಸ್ತಾರವಾಗಿ ಹೇಳು. ಪೂರ್ವಜರ ಮಹಾ ಚರಿತ್ರವನ್ನು ಎಷ್ಟು ಕೇಳಿದರೂ ತೃಪ್ತಿಯಾಗುತ್ತಿಲ್ಲ.”

02023012 ವೈಶಂಪಾಯನ ಉವಾಚ।
02023012a ಧನಂಜಯಸ್ಯ ವಕ್ಷ್ಯಾಮಿ ವಿಜಯಂ ಪೂರ್ವಮೇವ ತೇ।
02023012c ಯೌಗಪದ್ಯೇನ ಪಾರ್ಥೈರ್ಹಿ ವಿಜಿತೇಯಂ ವಸುಂಧರಾ।।

ವೈಶಂಪಾಯನನು ಹೇಳಿದನು: “ಮೊದಲನೆಯದಾಗಿ ನಿನಗೆ ಧನಂಜಯನ ವಿಜಯದ ಕುರಿತು ಹೇಳುತ್ತೇನೆ. ಪಾರ್ಥರು ಒಂದೇ ವೇಳೆಯಲ್ಲಿ ವಸುಂಧರೆಯನ್ನು ಜಯಿಸಿದರು1.

02023013a ಪೂರ್ವಂ ಕುಣಿಂದವಿಷಯೇ ವಶೇ ಚಕ್ರೇ ಮಹೀಪತೀನ್।
02023013c ಧನಂಜಯೋ ಮಹಾಬಾಹುರ್ನಾತಿತೀವ್ರೇಣ ಕರ್ಮಣಾ।।

ಮೊಟ್ಟಮೊದಲನೆಯದಾಗಿ ಮಹಾಬಾಹು ಧನಂಜಯನು ಅತಿ ತೀವ್ರäಕರ್ಮಗಳಿಂದ ಕುಣಿಂದ ದೇಶದ ಮಹೀಪತಿಗಳನ್ನು ವಶೀಕರಿಸಿದನು.

02023014a ಆನರ್ತಾನ್ಕಾಲಕೂಟಾಂಶ್ಚ ಕುಣಿಂದಾಂಶ್ಚ ವಿಜಿತ್ಯ ಸಃ।
02023014c ಸುಮಂಡಲಂ ಪಾಪಜಿತಂ ಕೃತವಾನನುಸೈನಿಕಂ ।।

ಅನಾರ್ತ, ಕಾಲಕೂಟ ಮತ್ತು ಕುಣಿಂದರನ್ನು ಜಯಿಸಿ, ಆ ಪಾಪಜಿತನು ಸುಮಂಡಲನನ್ನು ತನ್ನ ಅನುಸೈನಿಕನನ್ನಾಗಿ ಮಾಡಿದನು.

02023015a ಸ ತೇನ ಸಹಿತೋ ರಾಜನ್ಸವ್ಯಸಾಚೀ ಪರಂತಪಃ।
02023015c ವಿಜಿಗ್ಯೇ ಸಕಲಂ ದ್ವೀಪಂ ಪ್ರತಿವಿಂಧ್ಯಂ ಚ ಪಾರ್ಥಿವಂ।।
02023016a ಸಕಲದ್ವೀಪವಾಸಾಂಶ್ಚ ಸಪ್ತದ್ವೀಪೇ ಚ ಯೇ ನೃಪಾಃ।
02023016c ಅರ್ಜುನಸ್ಯ ಚ ಸೈನ್ಯಾನಾಂ ವಿಗ್ರಹಸ್ತುಮುಲೋಽಭವತ್।।

ರಾಜನ್! ಅವನೊಂದಿಗೆ ಸವ್ಯಸಾಚೀ ಪರಂತಪನು ಸಕಲ ದ್ವೀಪವನ್ನು ಮತ್ತು ಸಕಲದ್ವೀಪವಾಸಿ ಪಾರ್ಥಿವ ಪ್ರತಿವಿಂಧ್ಯನನ್ನು ಜಯಿಸಿದನು. ಏಳು ದ್ವೀಪಗಳ ನೃಪರ ಮತ್ತು ಅರ್ಜುನನ ಸೇನೆಗಳ ಮಧ್ಯೆ ತುಮುಲ ಯುದ್ಧವೇ ನಡೆಯಿತು.

02023017a ಸ ತಾನಪಿ ಮಹೇಷ್ವಾಸೋ ವಿಜಿತ್ಯ ಭರತರ್ಷಭ।
02023017c ತೈರೇವ ಸಹಿತಃ ಸರ್ವೈಃ ಪ್ರಾಗ್ಜ್ಯೋತಿಷಮುಪಾದ್ರವತ್।।

ಭರತರ್ಷಭ! ಅವರನ್ನು ಜಯಿಸಿದ ಆ ಮಹೇಷ್ವಾಸನು ಅವರೆಲ್ಲರ ಸಹಿತ ಪ್ರಾಗ್ಜ್ಯೋತಿಷ ಪುರದ ಮೇಲೆ ಆಕ್ರಮಣ ಮಾಡಿದನು.

02023018a ತತ್ರ ರಾಜಾ ಮಹಾನಾಸೀದ್ಭಗದತ್ತೋ ವಿಶಾಂ ಪತೇ।
02023018c ತೇನಾಸೀತ್ಸುಮಹದ್ಯುದ್ಧಂ ಪಾಂಡವಸ್ಯ ಮಹಾತ್ಮನಃ।।

ವಿಶಾಂಪತೇ! ಅಲ್ಲಿಯ ಮಹಾರಾಜ ಭಗದತ್ತನೊಂದಿಗೆ ಮಹಾತ್ಮ ಪಾಂಡವನ ಮಹಾಯುದ್ಧವಾಯಿತು.

02023019a ಸ ಕಿರಾತೈಶ್ಚ ಚೀನೈಶ್ಚ ವೃತಃ ಪ್ರಾಗ್ಜ್ಯೋತಿಷೋಽಭವತ್।
02023019c ಅನ್ಯೈಶ್ಚ ಬಹುಭಿರ್ಯೋಧೈಃ ಸಾಗರಾನೂಪವಾಸಿಭಿಃ।।

ಪ್ರಾಗ್ಜ್ಯೋತಿಷವು ಕಿರಾತ ಮತ್ತು ಚೀನರಿಂದ ಹಾಗೂ ಸಾಗರ ಮಡುವಿನಲ್ಲಿ ವಾಸಿಸುತ್ತಿದ್ದ ಇನ್ನೂ ಇತರ ಬಹಳಷ್ಟು ಯೋದ್ಧರಿಂದ ಸುತ್ತುವರೆಯಲ್ಪಟ್ಟಿತ್ತು.

02023020a ತತಃ ಸ ದಿವಸಾನಷ್ಟೌ ಯೋಧಯಿತ್ವಾ ಧನಂಜಯಂ।
02023020c ಪ್ರಹಸನ್ನಬ್ರವೀದ್ರಾಜಾ ಸಂಗ್ರಾಮೇ ವಿಗತಕ್ಲಮಃ।।

ಧನಂಜಯನೊಡನೆ ಎಂಟು ದಿನಗಳು ಯುದ್ಧಮಾಡಿದ ಆ ರಾಜನು ರಣರಂಗದಲ್ಲಿ ಅಯಾಸಹೊಂದದೇ ಮುಗುಳ್ನಗುತ್ತಾ ಹೇಳಿದನು:

02023021a ಉಪಪನ್ನಂ ಮಹಾಬಾಹೋ ತ್ವಯಿ ಪಾಂಡವನಂದನ।
02023021c ಪಾಕಶಾಸನದಾಯಾದೇ ವೀರ್ಯಮಾಹವಶೋಭಿನಿ।।

“ಮಹಾಬಾಹು ಪಾಂಡವನಂದನ! ಪಾಕಶಾಸನ ದಾಯಾದಿ! ಯುದ್ಧದಲ್ಲಿ ಶೋಭಿಸುವ ನಿನ್ನ ಈ ವೀರ್ಯವು ಯಾವುದಕ್ಕೂ ಕಡಿಮೆಯಿಲ್ಲ.

02023022a ಅಹಂ ಸಖಾ ಸುರೇಂದ್ರಸ್ಯ ಶಕ್ರಾದನವಮೋ ರಣೇ।
02023022c ನ ಚ ಶಕ್ನೋಮಿ ತೇ ತಾತ ಸ್ಥಾತುಂ ಪ್ರಮುಖತೋ ಯುಧಿ।।

ಸುರೇಂದ್ರನ ಸಖನಾದ ನಾನು ರಣದಲ್ಲಿ ಶಕ್ರನನಿಗೆ ಸರಿಸಮ. ಆದರೂ ಮಗು! ಯುದ್ಧದಲ್ಲಿ ನಿನ್ನನ್ನು ಎದುರಿಸಲು ಸಾಧ್ಯವಿಲ್ಲ!

02023023a ಕಿಮೀಪ್ಸಿತಂ ಪಾಂಡವೇಯ ಬ್ರೂಹಿ ಕಿಂ ಕರವಾಣಿ ತೇ।
02023023c ಯದ್ವಕ್ಷ್ಯಸಿ ಮಹಾಬಾಹೋ ತತ್ಕರಿಷ್ಯಾಮಿ ಪುತ್ರಕ।।

ಪಾಂಡವೇಯ! ನಿನಗಾಗಿ ನಾನು ಏನುಮಾಡಬೇಕೆಂದು ಬಯಸುತ್ತೀಯೆ ಹೇಳು! ಪುತ್ರಕ! ಮಹಾಬಾಹು! ನನಗೆ ಕೇಳಿದ್ದುದನ್ನು ಮಾಡಿಕೊಡುತ್ತೇನೆ.”

02023024 ಅರ್ಜುನ ಉವಾಚ।
02023024a ಕುರೂಣಾಂ ಋಷಭೋ ರಾಜಾ ಧರ್ಮಪುತ್ರೋ ಯುಧಿಷ್ಠಿರಃ।
02023024c ತಸ್ಯ ಪಾರ್ಥಿವತಾಮೀಪ್ಸೇ ಕರಸ್ತಸ್ಮೈ ಪ್ರದೀಯತಾಂ।।

ಅರ್ಜುನನು ಹೇಳಿದನು: “ಕುರುವೃಷಭ ಧರ್ಮಪುತ್ರ ರಾಜಾ ಯುಧಿಷ್ಠಿರನನ್ನು ಪಾರ್ಥಿವನೆಂದು ಪರಿಗಣಿಸಿ ಅವನಿಗೆ ಕರವನ್ನು ಕೊಡಬೇಕೆಂಬುದೇ ನನ್ನ ಇಚ್ಛೆ.

02023025a ಭವಾನ್ಪಿತೃಸಖಾ ಚೈವ ಪ್ರೀಯಮಾಣೋ ಮಯಾಪಿ ಚ।
02023025c ತತೋ ನಾಜ್ಞಾಪಯಾಮಿ ತ್ವಾಂ ಪ್ರೀತಿಪೂರ್ವಂ ಪ್ರದೀಯತಾಂ।।

ನೀನು ನನ್ನ ತಂದೆಯ ಮಿತ್ರ ಮತ್ತು ನನ್ನ ಮೇಲೆಯೂ ಪ್ರೀತಿಯನ್ನು ತೋರಿಸುತ್ತಿದ್ದೀಯೆ. ಆದುದರಿಂದ ನಾನು ನಿನಗೆ ಆಜ್ಞೆಯನ್ನು ಮಾಡುತ್ತಿಲ್ಲ. ಪ್ರೀತಿಪೂರ್ವಕವಾಗಿ ಕೊಡು.”

02023026 ಭಗದತ್ತ ಉವಾಚ।
02023026a ಕುಂತೀಮಾತರ್ಯಥಾ ಮೇ ತ್ವಂ ತಥಾ ರಾಜಾ ಯುಧಿಷ್ಠಿರಃ।
02023026c ಸರ್ವಮೇತತ್ಕರಿಷ್ಯಾಮಿ ಕಿಂ ಚಾನ್ಯತ್ಕರವಾಣಿ ತೇ।।

ಭಗದತ್ತನು ಹೇಳಿದನು: “ಕುಂತಿಯ ಮಗನಾದ ನೀನು ನನಗೆ ಹೇಗೋ ಹಾಗೆ ರಾಜ ಯುಧಿಷ್ಠಿರನು ಕೂಡ ಹೌದು. ಎಲ್ಲವನ್ನೂ ಮಾಡುತ್ತೇನೆ. ನಿನಗಾಗಿ ಬೇರೆ ಏನನ್ನು ಮಾಡಬೇಕು?””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದಿಗ್ವಿಜಯಪರ್ವಣಿ ಅರ್ಜುನದಿಗ್ವಿಜಯೇ ಭಗದತ್ತಪರಾಜಯೇ ತ್ರಯೋವಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದಿಗ್ವಿಜಯಪರ್ವದಲ್ಲಿ ಅರ್ಜುನದಿಗ್ವಿಜಯದಲ್ಲಿ ಭಗದತ್ತನ ಪರಾಭವ ಎನ್ನುವ ಇಪ್ಪತ್ತ್ಮೂರನೆಯ ಅಧ್ಯಾಯವು.


  1. ಅರ್ಜುನ, ಭೀಮ ಮತ್ತು ನಕುಲ-ಸಹದೇವರು ಒಂದೇ ಸಮಯದಲ್ಲಿ ನಾಲ್ಕೂ ದಿಕ್ಕುಗಳನ್ನು ಜಯಿಸಿದರು. ↩︎