ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸಭಾ ಪರ್ವ
ಜರಾಸಂಧವಧ ಪರ್ವ
ಅಧ್ಯಾಯ 21
ಸಾರ
ಜರಾಸಂಧನು ಯುದ್ಧಮಾಡಲು ಭೀಮನನ್ನು ಆರಿಸಿಕೊಳ್ಳುವುದು (1-2). ಭೀಮ-ಜರಾಸಂಧರ ಹದಿನಾಲ್ಕು ದಿನಗಳ ಯುದ್ಧ (3-19). ಕೃಷ್ಣನು ಭೀಮಸೇನನಿಗೆ ಸಲಹೆ ನೀಡಿ ಹುರಿದುಂಬಿಸುವುದು (20-23).
02021001 ವೈಶಂಪಾಯನ ಉವಾಚ।
02021001a ತತಸ್ತಂ ನಿಶ್ಚಿತಾತ್ಮಾನಂ ಯುದ್ಧಾಯ ಯದುನಂದನಃ।
02021001c ಉವಾಚ ವಾಗ್ಮೀ ರಾಜಾನಂ ಜರಾಸಂಧಮಧೋಕ್ಷಜಃ।।
ವೈಶಂಪಾಯನನು ಹೇಳಿದನು: “ನಂತರ ಯದುನಂದನ ಅಧೋಕ್ಷಜನು ಯುದ್ಧಕ್ಕೆ ನಿರ್ಧರಿಸಿದ ವಾಗ್ಮಿ ರಾಜನನ್ನು ಕುರಿತು ಹೇಳಿದನು:
02021002a ತ್ರಯಾಣಾಂ ಕೇನ ತೇ ರಾಜನ್ಯೋದ್ಧುಂ ವಿತರತೇ ಮನಃ।
02021002c ಅಸ್ಮದನ್ಯತಮೇನೇಹ ಸಜ್ಜೀಭವತು ಕೋ ಯುಧಿ।।
“ರಾಜನ್! ನಮ್ಮ ಈ ಮೂವರಲ್ಲಿ ಯಾರೊಂದಿಗೆ ಯುದ್ಧಮಾಡಲು ಬಯಸುತ್ತೀಯೆ? ನಮ್ಮಲ್ಲಿ ಯಾರು ನಿನ್ನೊಂದಿಗೆ ಯುದ್ಧಮಾಡಲು ಅಣಿಯಾಗಬೇಕು?”
02021003a ಏವಮುಕ್ತಃ ಸ ಕೃಷ್ಣೇನ ಯುದ್ಧಂ ವವ್ರೇ ಮಹಾದ್ಯುತಿಃ।
02021003c ಜರಾಸಂಧಸ್ತತೋ ರಾಜನ್ಭೀಮಸೇನೇನ ಮಾಗಧಃ।।
ರಾಜನ್! ಕೃಷ್ಣನು ಈ ರೀತಿ ಹೇಳಲು ಮಾಗಧ ಮಹಾದ್ಯುತಿ ಜರಾಸಂಧನು ಯುದ್ಧಮಾಡಲು ಭೀಮಸೇನನನ್ನು ಆರಿಸಿಕೊಂಡನು.
02021004a ಧಾರಯನ್ನಗದಾನ್ಮುಖ್ಯಾನ್ನಿರ್ವೃತೀರ್ವೇದನಾನಿ ಚ।
02021004c ಉಪತಸ್ಥೇ ಜರಾಸಂಧಂ ಯುಯುತ್ಸುಂ ವೈ ಪುರೋಹಿತಃ।।
ಜರಾಸಂಧನ ಬಳಿಯಲ್ಲಿ ಅವನ ಪುರೋಹಿತರು ವೇದನೆಯನ್ನು ಹೋಗಲಾಡಿಸುವ, ಪುನಃಶ್ಚೇತನಗೊಳಿಸುವ ಶ್ರೇಷ್ಠ ಗಿಡಮೂಲಿಕೆಗಳನ್ನು ಹಿಡಿದು ನಿಂತರು.
02021005a ಕೃತಸ್ವಸ್ತ್ಯಯನೋ ವಿದ್ವಾನ್ಬ್ರಾಹ್ಮಣೇನ ಯಶಸ್ವಿನಾ।
02021005c ಸಮನಹ್ಯಜ್ಜರಾಸಂಧಃ ಕ್ಷತ್ರಧರ್ಮಮನುವ್ರತಃ।।
02021006a ಅವಮುಚ್ಯ ಕಿರೀಟಂ ಸ ಕೇಶಾನ್ಸಮನುಮೃಜ್ಯ ಚ।
02021006c ಉದತಿಷ್ಠಜ್ಜರಾಸಂಧೋ ವೇಲಾತಿಗ ಇವಾರ್ಣವಃ।।
ವಿದ್ವಾನ್ ಬ್ರಾಹ್ಮಣರು ಯಶಸ್ಸಿಗಾಗಿ ಆಶಿರ್ವಚನಗಳನ್ನು ನೀಡಲು, ಸಮನರ್ಹ ಕ್ಷತ್ರಧರ್ಮ ಪಾಲಕ ಜರಾಸಂಧನು ತನ್ನ ಕಿರೀಟವನ್ನು ಕೆಳಗಿಟ್ಟು, ತಲೆಗೂದಲನ್ನು ಬಾಚಿ, ಅಲೆಗಳೊಂದಿಗೆ ಮೇಲೇರುವ ಸಮುದ್ರದಂತೆ ಮೇಲೆದ್ದನು.
02021007a ಉವಾಚ ಮತಿಮಾನ್ರಾಜಾ ಭೀಮಂ ಭೀಮಪರಾಕ್ರಮಂ।
02021007c ಭೀಮ ಯೋತ್ಸ್ಯೇ ತ್ವಯಾ ಸಾರ್ಧಂ ಶ್ರೇಯಸಾ ನಿರ್ಜಿತಂ ವರಂ।।
ಆ ಮತಿವಂತ ರಾಜನು ಭೀಮಪರಾಕ್ರಮಿ ಭೀಮನಲ್ಲಿ ಹೇಳಿದನು: “ಭೀಮ! ನಾನು ನಿನ್ನೊಂದಿಗೆ ಯುದ್ಧ ಮಾಡುತ್ತೇನೆ. ಏಕೆಂದರೆ ತನಗಿಂಥ ಶ್ರೇಷ್ಠನಾದವನಿಂದ ಸೋಲುವುದು ಒಳ್ಳೆಯದು.”
02021008a ಏವಮುಕ್ತ್ವಾ ಜರಾಸಂಧೋ ಭೀಮಸೇನಮರಿಂದಮಃ।
02021008c ಪ್ರತ್ಯುದ್ಯಯೌ ಮಹಾತೇಜಾಃ ಶಕ್ರಂ ಬಲಿರಿವಾಸುರಃ।।
ಹೀಗೆ ಹೇಳಿ ಅರಿಂದಮ ಮಹಾತೇಜಸ್ವಿ ಜರಾಸಂಧನು ಹಿಂದೆ ಅಸುರ ಬಲಿಯು ಶಕ್ರನನ್ನು ಹೇಗೋ ಹಾಗೆ ಭೀಮಸೇನನ ಮೇಲೆ ಎರಗಿದನು.
02021009a ತತಃ ಸಮ್ಮಂತ್ರ್ಯ ಕೃಷ್ಣೇನ ಕೃತಸ್ವಸ್ತ್ಯಯನೋ ಬಲೀ।
02021009c ಭೀಮಸೇನೋ ಜರಾಸಂಧಮಾಸಸಾದ ಯುಯುತ್ಸಯಾ।।
ಆಗ ಬಲಶಾಲಿ ಭೀಮಸೇನನು ಕೃಷ್ಣನಿಂದ ಸಲಹೆ ಪಡೆದು ಅವನಿಂದ ಹರಸಲ್ಪಟ್ಟು ಜರಾಸಂಧನೊಡನೆ ಯುದ್ಧಮಾಡಲು ಮುಂದಾದನು.
02021010a ತತಸ್ತೌ ನರಶಾರ್ದೂಲೌ ಬಾಹುಶಸ್ತ್ರೌ ಸಮೀಯತುಃ।
02021010c ವೀರೌ ಪರಮಸಂಹೃಷ್ಟಾವನ್ಯೋನ್ಯಜಯಕಾಂಕ್ಷಿಣೌ।।
ಆ ಇಬ್ಬರು ವೀರ ನರಶಾರ್ದೂಲರು ಬಾಹುಗಳನ್ನೇ ಶಸ್ತ್ರಗಳನ್ನಾಗಿಸಿ ಪರಮಸಂಹೃಷ್ಟರಾಗಿ ಅನ್ಯೋನ್ಯರನ್ನು ಸೋಲಿಸುವ ಉದ್ದೇಶದಿಂದ ಪರಸ್ಪರರ ಮೇಲೆರಗಿದರು.
02021011a ತಯೋರಥ ಭುಜಾಘಾತಾನ್ನಿಗ್ರಹಪ್ರಗ್ರಹಾತ್ತಥಾ।
02021011c ಆಸೀತ್ಸುಭೀಮಸಂಹ್ರಾದೋ ವಜ್ರಪರ್ವತಯೋರಿವ।।
ಅವರ ಭುಜಗಳ ಹೊಡೆತದಿಂದ, ನಿಗ್ರಹ ಪ್ರಗ್ರಹಗಳ ಶಬ್ಧವು ಮಿಂಚು ಬಡಿದ ಪರ್ವತಗಳ ಗರ್ಜನೆಯಂತೆ ಕೇಳಿಬಂದವು.
02021012a ಉಭೌ ಪರಮಸಂಹೃಷ್ಟೌ ಬಲೇನಾತಿಬಲಾವುಭೌ।
02021012c ಅನ್ಯೋನ್ಯಸ್ಯಾಂತರಂ ಪ್ರೇಪ್ಸೂ ಪರಸ್ಪರಜಯೈಷಿಣೌ।।
ಅವರಿಬ್ಬರೂ ಪರಮಸಂಹೃಷ್ಟರಾಗಿದ್ದರು. ಇಬ್ಬರೂ ಬಲದಲ್ಲಿ ಅತಿಬಲರಾಗಿದ್ದರು ಮತ್ತು ಪರಸ್ಪರರನ್ನು ಬೀಳಿಸುವ ಉದ್ದೇಶದಿಂದ ಅನ್ಯೋನ್ಯರಲ್ಲಿರುವ ನ್ಯೂನತೆಗಳನ್ನು ಹುಡುಕುತ್ತಿದ್ದರು.
02021013a ತದ್ಭೀಮಮುತ್ಸಾರ್ಯ ಜನಂ ಯುದ್ಧಮಾಸೀದುಪಹ್ವರೇ।
02021013c ಬಲಿನೋಃ ಸಂಯುಗೇ ರಾಜನ್ವೃತ್ರವಾಸವಯೋರಿವ।।
ರಾಜನ್! ವೃತ್ರ ಮತ್ತು ವಾಸವರ ಯುದ್ಧದಂತಿದ್ದ ಈ ಬಲಿಗಳ ನಡುವಿನ ಯುದ್ಧವು ಬಹಳಷ್ಟು ಪ್ರೇಕ್ಷಕರನ್ನು ಹಿಂಜರಿಯುವಂತೆ ಮಾಡಿತು.
02021014a ಪ್ರಕರ್ಷಣಾಕರ್ಷಣಾಭ್ಯಾಮಭ್ಯಾಕರ್ಷವಿಕರ್ಷಣೈಃ।
02021014c ಆಕರ್ಷೇತಾಂ ತಥಾನ್ಯೋನ್ಯಂ ಜಾನುಭಿಶ್ಚಾಭಿಜಘ್ನತುಃ।।
ಪ್ರಕರ್ಷಣ ಆಕರ್ಷಣಗಳಿಂದ ಮತ್ತು ಬಿಗಿ ಹಿಡಿದ ಮುಷ್ಟಿಗಳಿಂದ ಅನ್ಯೋನ್ಯರನ್ನು ಎಳೆದಾಡಿ ಕಾಲುಗಳನ್ನು ಮೇಲೆತ್ತಿ ಬಡಿದರು.
02021015a ತತಃ ಶಬ್ಧೇನ ಮಹತಾ ಭರ್ತ್ಸಯಂತೌ ಪರಸ್ಪರಂ।
02021015c ಪಾಷಾಣಸಂಘಾತನಿಭೈಃ ಪ್ರಹಾರೈರಭಿಜಘ್ನತುಃ।।
ನಂತರ ದೊಡ್ಡ ಧ್ವನಿಯಿಂದ ಪರಸ್ಪರರನ್ನು ಹೀಯಾಳಿಸುತ್ತಾ ಕಲ್ಲಿನ ಮೇಲೆ ಕಲ್ಲಿನ ಪ್ರಹಾರವಾಗುತ್ತಿದೆಯೋ ಎನ್ನುವಂತೆ ಇಬ್ಬರೂ ಪರಸ್ಪರರನ್ನು ಗುದ್ದಿದರು.
02021016a ವ್ಯೂಢೋರಸ್ಕೌ ದೀರ್ಘಭುಜೌ ನಿಯುದ್ಧಕುಶಲಾವುಭೌ।
02021016c ಬಾಹುಭಿಃ ಸಮಸಜ್ಜೇತಾಮಾಯಸೈಃ ಪರಿಘೈರಿವ।।
ವಿಶಾಲ ಎದೆಯ, ನೀಳಬಾಹುಗಳ, ಇಬ್ಬರು ಯುದ್ಧಕುಶಲರೂ ಕಬ್ಬಿಣದ ಪರಿಘಗಳಂತಿರುವ ಬಾಹುಗಳಿಂದ ಶರೀರದಮೇಲೆ ಹೊಡೆತಗಳ ಮಳೆಸುರಿಸಿದರು.
02021017a ಕಾರ್ತ್ತಿಕಸ್ಯ ತು ಮಾಸಸ್ಯ ಪ್ರವೃತ್ತಂ ಪ್ರಥಮೇಽಹನಿ।
02021017c ಅನಾರತಂ ದಿವಾರಾತ್ರಮವಿಶ್ರಾಂತಮವರ್ತತ।।
ಕಾರ್ತೀಕ ಮಾಸದ ಪ್ರಥಮ ದಿನ ಪ್ರಾರಂಭವಾದ ಆ ಸ್ಪರ್ಧೆಯು ದಿನ-ರಾತ್ರಿಗಳೆನ್ನದೇ ಅನವರತವಾಗಿ ಅವಿಶ್ರಾಂತವಾಗಿ ನಡೆಯಿತು.
02021018a ತದ್ವೃತ್ತಂ ತು ತ್ರಯೋದಶ್ಯಾಂ ಸಮವೇತಂ ಮಹಾತ್ಮನೋಃ।
02021018c ಚತುರ್ದಶ್ಯಾಂ ನಿಶಾಯಾಂ ತು ನಿವೃತ್ತೋ ಮಾಗಧಃ ಕ್ಲಮಾತ್।।
ಹದಿಮೂರನೆಯ ದಿನವೂ ಇಬ್ಬರು ಮಹಾತ್ಮರೂ ಯುದ್ಧದಲ್ಲಿ ತೊಡಗಿದ್ದರು. ಆದರೆ, ಹದಿನಾಲ್ಕನೆಯ ರಾತ್ರಿ, ಮಾಗಧನು ಆಯಾಸಗೊಂಡು ಹಿಂದೆ ಸರಿದನು.
02021019a ತಂ ರಾಜಾನಂ ತಥಾ ಕ್ಲಾಂತಂ ದೃಷ್ಟ್ವಾ ರಾಜಂ ಜನಾರ್ದನಃ।
02021019c ಉವಾಚ ಭೀಮಕರ್ಮಾಣಂ ಭೀಮಂ ಸಂಬೋಧಯನ್ನಿವ।।
ರಾಜನ್! ರಾಜನು ಆಯಾಸಗೊಂಡಿದ್ದುದನ್ನು ನೋಡಿದ ಜನಾರ್ದನನು ಭೀಮಕರ್ಮಿಣಿ ಭೀಮನನ್ನು ಸಂಬೋಧಿಸುತ್ತಿದ್ದಾನೋ ಎನ್ನುವಂತೆ ಹೇಳಿದನು:
02021020a ಕ್ಲಾಂತಃ ಶತ್ರುರ್ನ ಕೌಂತೇಯ ಲಭ್ಯಃ ಪೀಡಯಿತುಂ ರಣೇ।
02021020c ಪೀಡ್ಯಮಾನೋ ಹಿ ಕಾರ್ತ್ಸ್ನ್ಯೆನ ಜಹ್ಯಾಜ್ಜೀವಿತಮಾತ್ಮನಃ।।
“ಕೌಂತೇಯ! ಆಯಾಸಗೊಂಡ ಶತ್ರುವನ್ನು ರಣದಲ್ಲಿ ಅಪ್ಪಳಿಸಬಾರದು. ಹಾಗೆ ಅಪ್ಪಳಿಸಿದರೆ ಅವನು ಸಂಪೂರ್ಣವಾಗಿ ಜೀವ ತೊರೆಯಬಹುದು.
02021021a ತಸ್ಮಾತ್ತೇ ನೈವ ಕೌಂತೇಯ ಪೀಡನೀಯೋ ನರಾಧಿಪಃ।
02021021c ಸಮಮೇತೇನ ಯುಧ್ಯಸ್ವ ಬಾಹುಭ್ಯಾಂ ಭರತರ್ಷಭ।।
ಕೌಂತೇಯ! ಆದುದರಿಂದ ನರಾಧಿಪನನ್ನು ಪೀಡಿಸಬೇಡ. ಭರತರ್ಷಭ! ಮೊದಲಿನಂತೆ ಒಂದೇ ಸಮನೆ ಬಾಹುಗಳಿಂದಲೇ ಯುದ್ಧಮಾಡು.”
02021022a ಏವಮುಕ್ತಃ ಸ ಕೃಷ್ಣೇನ ಪಾಂಡವಃ ಪರವೀರಹಾ।
02021022c ಜರಾಸಂಧಸ್ಯ ತದ್ರಂಧ್ರಂ ಜ್ಞಾತ್ವಾ ಚಕ್ರೇ ಮತಿಂ ವಧೇ।।
ಕೃಷ್ಣನು ಈ ರೀತಿ ಹೇಳಲು ಪರವೀರಹ ಪಾಂಡವನು ಜರಾಸಂಧನ ರಂಧ್ರವನ್ನು ತಿಳಿದು ಅವನನ್ನು ವಧಿಸುವ ಮನಸ್ಸುಮಾಡಿದನು.
02021023a ತತಸ್ತಮಜಿತಂ ಜೇತುಂ ಜರಾಸಂಧಂ ವೃಕೋದರಃ।
02021023c ಸಂರಭ್ಯ ಬಲಿನಾಂ ಮುಖ್ಯೋ ಜಗ್ರಾಹ ಕುರುನಂದನಃ।।
ಜಯಿಸಲಾಧ್ಯ ಜರಾಸಂಧನನ್ನು ಬಲಿಗಳ ಮುಖ್ಯ ವೃಕೋದರ ಕುರುನಂದನನು ಗಟ್ಟಿಯಾಗಿ ಹಿಡಿದುಕೊಂಡನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಜರಾಸಂಧವಧಪರ್ವಣಿ ಜರಾಸಂಧಕ್ಲಾಂತೌ ಏಕವಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಜರಾಸಂಧವಧಪರ್ವದಲ್ಲಿ ಜರಾಸಂಧನ ಸೋಲು ಎನ್ನುವ ಇಪ್ಪತ್ತೊಂದನೆಯ ಅಧ್ಯಾಯವು.