ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸಭಾ ಪರ್ವ
ಜರಾಸಂಧವಧ ಪರ್ವ
ಅಧ್ಯಾಯ 20
ಸಾರ
ಏನೂ ತಪ್ಪು ಮಾಡಿರದ ತಾನು ಅವರಿಗೆ ಹೇಗೆ ಶತ್ರುವಾಗುತ್ತಾನೆ ಎಂದು ಜರಾಸಂಧನು ಕೇಳುವುದು (1-5). ರಾಜರನ್ನು ಬಂಧಿಸಿರುವುದೇ ಅಪರಾಧವೆಂದು ಹೇಳಿ ಕೃಷ್ಣನು ತಮ್ಮ ನಿಜಪರಿಚಯವನ್ನು ಹೇಳಿಕೊಂಡು ಜರಾಸಂಧನನ್ನು ಯುದ್ಧಕ್ಕೆ ಆಹ್ವಾನಿಸಿದುದು (6-24). ಜರಾಸಂಧನು ಯುದ್ಧಕ್ಕೆ ಸಿದ್ಧನಾದುದು (25-34).
02020001 ಜರಾಸಂಧ ಉವಾಚ।
02020001a ನ ಸ್ಮರೇಯಂ ಕದಾ ವೈರಂ ಕೃತಂ ಯುಷ್ಮಾಭಿರಿತ್ಯುತ।
02020001c ಚಿಂತಯಂಶ್ಚ ನ ಪಶ್ಯಾಮಿ ಭವತಾಂ ಪ್ರತಿ ವೈಕೃತಂ।।
ಜರಾಸಂಧನು ಹೇಳಿದನು: “ನಿಮಗೆ ನಾನು ಎಂದೂ ವೈರತ್ವದಿಂದ ಏನನ್ನೂ ಮಾಡಿದ ನೆನಪಿಲ್ಲ. ನಿಮ್ಮ ಕುರಿತು ಕೆಟ್ಟದ್ದಾಗಿ ಯೋಚಿಸಿದ್ದೂ ನನ್ನ ಗಮನಕ್ಕಿಲ್ಲ.
02020002a ವೈಕೃತೇ ಚಾಸತಿ ಕಥಂ ಮನ್ಯಧ್ವಂ ಮಾಮನಾಗಸಂ।
02020002c ಅರಿಂ ವಿಬ್ರೂತ ತದ್ವಿಪ್ರಾಃ ಸತಾಂ ಸಮಯ ಏಷ ಹಿ।।
ವೈರತ್ವವನ್ನೇ ತೋರಿಸದಿದ್ದ ಅನಾಗಸ ನನ್ನನ್ನು ನೀವು ಹೇಗೆ ಶತ್ರುವೆಂದು ತಿಳಿಯುತ್ತೀರಿ. ಹೇಳಿ ವಿಪ್ರರೇ! ಇದು ಸಾತ್ವಿಕರ ನಿಯಮವೇ?
02020003a ಅಥ ಧರ್ಮೋಪಘಾತಾದ್ಧಿ ಮನಃ ಸಮುಪತಪ್ಯತೇ।
02020003c ಯೋಽನಾಗಸಿ ಪ್ರಸೃಜತಿ ಕ್ಷತ್ರಿಯೋಽಪಿ ನ ಸಂಶಯಃ।।
ಅನಾಗಸನ ವಿರುದ್ಧವಾದರೆ ಕ್ಷತ್ರಿಯನಾಗಿದ್ದರೂ ಅವನು ಧರ್ಮಲೋಪಿಯಾಗುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ1.
02020004a ಅತೋಽನ್ಯಥಾಚರಽಲ್ಲೋಕೇ ಧರ್ಮಜ್ಞಃ ಸನ್ಮಹಾವ್ರತಃ।
02020004c ವೃಜಿನಾಂ ಗತಿಮಾಪ್ನೋತಿ ಶ್ರೇಯಸೋಽಪ್ಯುಪಹಂತಿ ಚ।।
ಅವನು ಎಷ್ಟೇ ಧರ್ಮಜ್ಞನಾಗಿರಲಿ ಅಥವಾ ಮಹಾತ್ಮನಾಗಿರಲಿ, ಇದಕ್ಕೆ ವಿರುದ್ಧವಾಗಿ ಲೋಕದಲ್ಲಿ ನಡೆದುಕೊಂಡರೆ ವೃಜಿಗಳ ಗತಿಯನ್ನು ಹೊಂದುತ್ತಾನೆ ಮತ್ತು ತನ್ನ ಶ್ರೇಯಸ್ಸನ್ನು ಕಳೆದುಕೊಳ್ಳುತ್ತಾನೆ.
02020005a ತ್ರೈಲೋಕ್ಯೇ ಕ್ಷತ್ರಧರ್ಮಾದ್ಧಿ ಶ್ರೇಯಾಂಸಂ ಸಾಧುಚಾರಿಣಾಂ।
02020005c ಅನಾಗಸಂ ಪ್ರಜಾನಾನಾಃ ಪ್ರಮಾದಾದಿವ ಜಲ್ಪಥ।।
ತ್ರೈಲೋಕ್ಯದಲ್ಲಿಯೇ ಕ್ಷತ್ರಧರ್ಮವನ್ನು ಪಾಲಿಸಿಕೊಂಡು ಸಾಧುಚಾರಿಗಳಲ್ಲಿ ಶ್ರೇಷ್ಠನಾದ, ಅನಾಗಸನಾದ, ಪ್ರಜಾಪಾಲಕನಾದ, ನನ್ನನ್ನು ನೀವು ಪ್ರಮಾದದಿಂದ ಶತ್ರುವೆಂದು ತಿಳಿದಿರುವಿರಿ2.”
02020006 ವಾಸುದೇವ ಉವಾಚ।
02020006a ಕುಲಕಾರ್ಯಂ ಮಹಾರಾಜ ಕಶ್ಚಿದೇಕಃ ಕುಲೋದ್ವಹಃ।
02020006c ವಹತೇ ತನ್ನಿಯೋಗಾದ್ವೈ ವಯಮಭ್ಯುತ್ಥಿತಾಸ್ತ್ರಯಃ।।
ವಾಸುದೇವನು ಹೇಳಿದನು: “ಮಹಾಬಾಹೋ! ಕುಲಕಾರ್ಯನಾದ ಕುಲೋದ್ಧಹನಾದ ಓರ್ವ ಮಹಾರಾಜನಿದ್ದಾನೆ. ಅವನ ನಿಯೋಗದಿಂದಲೇ ನಾವು ಮೂವರು ಇಲ್ಲಿ ಉಪಸ್ಥಿತರಿದ್ದೇವೆ.
02020007a ತ್ವಯಾ ಚೋಪಹೃತಾ ರಾಜನ್ ಕ್ಷತ್ರಿಯಾ ಲೋಕವಾಸಿನಃ।
02020007c ತದಾಗಃ ಕ್ರೂರಮುತ್ಪಾದ್ಯ ಮನ್ಯಸೇ ಕಿಂ ತ್ವನಾಗಸಂ।।
ರಾಜನ್! ಲೋಕವಾಸಿಗಳಾದ ಕ್ಷತ್ರಿಯರನ್ನು ನೀನು ಅಪಹರಿಸಿದ ಅತಿ ದೊಡ್ಡ ಕ್ರೂರಕಾರ್ಯವನ್ನು ಮಾಡಿದ್ದರೂ ನೀನು ನಿನ್ನನ್ನು ಅನಾಗಸನೆಂದು ಹೇಗೆ ಕಲ್ಪಿಸಿಕೊಂಡಿದ್ದೀಯೆ?
02020008a ರಾಜಾ ರಾಜ್ಞಃ ಕಥಂ ಸಾಧೂನ್ ಹಿಂಸ್ಯಾನ್ನೃಪತಿಸತ್ತಮ।
02020008c ತದ್ರಾಜ್ಞಃ ಸನ್ನಿಗೃಹ್ಯ ತ್ವಂ ರುದ್ರಾಯೋಪಜಿಹೀರ್ಷಸಿ।।
ನೃಪತಿಸತ್ತಮ! ಒಬ್ಬ ರಾಜನು ಇತರ ಸಾಧು ರಾಜರುಗಳನ್ನು ಹೇಗೆ ತಾನೆ ಹಿಂಸಿಸಬಹುದು? ಸೆರೆಹಿಡಿದ ರಾಜರುಗಳನ್ನು ನೀನು ರುದ್ರನಿಗೆ ಬಲಿಯಾಗಿ ನೀಡಲು ಬಯಸುತ್ತಿರುವೆ!
02020009a ಅಸ್ಮಾಂಸ್ತದೇನೋ ಗಚ್ಛೇತ ತ್ವಯಾ ಬಾರ್ಹದ್ರಥೇ ಕೃತಂ।
02020009c ವಯಂ ಹಿ ಶಕ್ತಾ ಧರ್ಮಸ್ಯ ರಕ್ಷಣೇ ಧರ್ಮಚಾರಿಣಃ।।
ಬಾರ್ಹದ್ರಥ! ನೀನು ಮಾಡಿದ ಈ ಪಾಪಕೃತ್ಯವು ನಮ್ಮ ಮೇಲೆಯೂ ಪರಿಣಾಮ ಬೀರುತ್ತಿದೆ. ಏಕೆಂದರೆ, ಧರ್ಮಚಾರಿಣರಾದ ನಾವು ಧರ್ಮದ ರಕ್ಷಣೆಗೆ ಶಕ್ತರಾಗಿದ್ದೇವೆ.
02020010a ಮನುಷ್ಯಾಣಾಂ ಸಮಾಲಂಭೋ ನ ಚ ದೃಷ್ಟಃ ಕದಾ ಚನ।
02020010c ಸ ಕಥಂ ಮಾನುಷೈರ್ದೇವಂ ಯಷ್ಟುಮಿಚ್ಛಸಿ ಶಂಕರಂ।।
ಮನುಷ್ಯರನ್ನು ಬಲಿಕೊಡುವುದನ್ನು ಎಂದೂ ನೋಡಿದ್ದಿಲ್ಲ. ನೀನು ಹೇಗೆ ದೇವ ಶಂಕರನಿಗೆ ಮನುಷ್ಯರನ್ನು ಬಲಿಕೊಡಲು ಯೋಚಿಸುತ್ತಿರುವೆ?
02020011a ಸವರ್ಣೋ ಹಿ ಸವರ್ಣಾನಾಂ ಪಶುಸಂಜ್ಞಾಂ ಕರಿಷ್ಯತಿ।
02020011c ಕೋಽನ್ಯ ಏವಂ ಯಥಾ ಹಿ ತ್ವಂ ಜರಾಸಂಧ ವೃಥಾಮತಿಃ।।
ಸವರ್ಣಿಯಾದ ನೀನು ಸವರ್ಣದವರನ್ನೇ ಪಶುಗಳಂತೆ ಬಲಿಕೊಡಲು ಬಯಸುತ್ತಿದ್ದೀಯೆ3. ಜರಾಸಂಧ! ನಿನಗಿಂತಲೂ ವೃಥಾಮತ4ಯಾದ ಇನ್ನೊಬ್ಬನು ಯಾರಿದ್ದಾನೆ?
02020012a ತೇ ತ್ವಾಂ ಜ್ಞಾತಿಕ್ಷಯಕರಂ ವಯಮಾರ್ತಾನುಸಾರಿಣಃ।
02020012c ಜ್ಞಾತಿವೃದ್ಧಿನಿಮಿತ್ತಾರ್ಥಂ ವಿನಿಯಂತುಮಿಹಾಗತಾಃ।।
ಆರ್ತಾನುಸಾರಿಗಳಾದ ನಾವು ಜ್ಞತಿಕ್ಷಯಕಾರಕ ನಿನ್ನನ್ನು ವಿನೀತನನ್ನಾಗಿಸಿ ಜ್ಞಾತಿಜರ ವೃದ್ಧಿಗೋಸ್ಕರವಾಗಿ ಇಲ್ಲಿಗೆ ಬಂದಿದ್ದೇವೆ.
02020013a ನಾಸ್ತಿ ಲೋಕೇ ಪುಮಾನನ್ಯಃ ಕ್ಷತ್ರಿಯೇಷ್ವಿತಿ ಚೈವ ಯತ್।
02020013c ಮನ್ಯಸೇ ಸ ಚ ತೇ ರಾಜನ್ಸುಮಹಾನ್ಬುದ್ಧಿವಿಪ್ಲವಃ।।
ರಾಜನ್! ಲೋಕದ ಕ್ಷತ್ರಿಯರಲ್ಲಿ ಅನ್ಯ ಪುರುಷರು ಯಾರೂ ಇಲ್ಲವೆಂದು ನೀನು ತಿಳಿದಿದ್ದರೆ ಅದೊಂದು ದೊಡ್ಡ ಬುದ್ಧಿವಿಪ್ಲವತೆ5 ಎಂದು ತಿಳಿ.
02020014a ಕೋ ಹಿ ಜಾನನ್ನಭಿಜನಮಾತ್ಮನಃ ಕ್ಷತ್ರಿಯೋ ನೃಪ।
02020014c ನಾವಿಶೇತ್ಸ್ವರ್ಗಮತುಲಂ ರಣಾನಂತರಮವ್ಯಯಂ।।
ನೃಪ! ತನ್ನ ಉತ್ತಮ ಜನ್ಮವನ್ನು ತಿಳಿದ ಯಾವ ಕ್ಷತ್ರಿಯನು ತಾನೆ ರಣದಲ್ಲಿ ತೀರಿಕೊಂಡ ನಂತರ ಅವ್ಯಯವೂ ಅತುಲವೂ ಆದ ಸ್ವರ್ಗವನ್ನು ಹೊಂದುವುದಿಲ್ಲ6?
02020015a ಸ್ವರ್ಗಂ ಹ್ಯೇವ ಸಮಾಸ್ಥಾಯ ರಣಯಜ್ಞೇಷು ದೀಕ್ಷಿತಾಃ।
02020015c ಯಜಂತೇ ಕ್ಷತ್ರಿಯಾ ಲೋಕಾಂಸ್ತದ್ವಿದ್ಧಿ ಮಗಧಾಧಿಪ।।
ಮಗಧಾಧಿಪ! ಸ್ವರ್ಗವನ್ನೇ ಗುರಿಯನಾಗಿಟ್ಟುಕೊಂಡು ರಣಯಜ್ಞದಲ್ಲಿ ದೀಕ್ಷಿತರಾದವರನ್ನು ಲೋಕದ ಕ್ಷತ್ರಿಯರು ಪೂಜಿಸುತ್ತಾರೆ7 ಎನ್ನುವುದನ್ನು ತಿಳಿ.
02020016a ಸ್ವರ್ಗಯೋನಿರ್ಜಯೋ ರಾಜನ್ಸ್ವರ್ಗಯೋನಿರ್ಮಹದ್ಯಶಃ।
02020016c ಸ್ವರ್ಗಯೋನಿಸ್ತಪೋ ಯುದ್ಧೇ ಮಾರ್ಗಃ ಸೋಽವ್ಯಭಿಚಾರವಾನ್।।
ರಾಜನ್! ಜಯವು ಸ್ವರ್ಗಯೋನಿ, ಯಶಸ್ಸೂ ಸ್ವರ್ಗಯೋನಿ, ತಪಸ್ಸೂ ಸ್ವರ್ಗಯೋನಿ. ಹಾಗೆಯೇ ಯುದ್ಧವೂ ನೇರವಾದ ಮಾರ್ಗವು8.
02020017a ಏಷ ಹ್ಯೈಂದ್ರೋ ವೈಜಯಂತೋ ಗುಣೋ ನಿತ್ಯಂ ಸಮಾಹಿತಃ।
02020017c ಯೇನಾಸುರಾನ್ಪರಾಜಿತ್ಯ ಜಗತ್ಪಾತಿ ಶತಕ್ರತುಃ।।
ಯಾಕೆಂದರೆ ಇದೇ ಗುಣದಿಂದಲೇ ನಿತ್ಯ ಸಮಾಹಿತ ವೈಜಯಂತ ಜಗತ್ಪತಿ ಶತಕ್ರತು ಇಂದ್ರನು ಅಸುರರನ್ನು ಪರಾಜಿತಗೊಳಿಸಿದನು.
02020018a ಸ್ವರ್ಗಮಾಸ್ಥಾಯ ಕಸ್ಯ ಸ್ಯಾದ್ವಿಗ್ರಹಿತ್ವಂ ಯಥಾ ತವ।
02020018c ಮಾಗಧೈರ್ವಿಪುಲೈಃ ಸೈನ್ಯೈರ್ಬಾಹುಲ್ಯಬಲದರ್ಪಿತೈಃ।।
ವಿಪುಲ ಮಾಗಧ ಸೈನ್ಯವನ್ನು ಹೊಂದಿ ಬಾಹುಬಲದರ್ಪಿತನಾದ ನಿನ್ನನ್ನು ಸೋಲಿಸದೇ ಬೇರೆ ಹೇಗೆ ತಾನೆ ಸ್ವರ್ಗವನ್ನು ಪಡೆಯಬಹುದು?
02020019a ಮಾವಮಂಸ್ಥಾಃ ಪರಾನ್ರಾಜನ್ನಾಸ್ತಿ ವೀರ್ಯಂ ನರೇ ನರೇ।
02020019c ಸಮಂ ತೇಜಸ್ತ್ವಯಾ ಚೈವ ಕೇವಲಂ ಮನುಜೇಶ್ವರ।।
ರಾಜನ್! ಇತರರನ್ನು ಕಡೆಗಣಿಸಬೇಡ! ಯಾವ ನರನಲ್ಲಿಯೂ ವೀರ್ಯವಿಲ್ಲವೇ? ಮನುಜೇಶ್ವರ! ನಿನ್ನ ತೇಜಸ್ಸಿಗೆ ಸಮನಾದವನು ಯಾರೂ ಇಲ್ಲವೇ?
02020020a ಯಾವದೇವ ನ ಸಂಬುದ್ಧಂ ತಾವದೇವ ಭವೇತ್ತವ।
02020020c ವಿಷಹ್ಯಮೇತದಸ್ಮಾಕಮತೋ ರಾಜನ್ಬ್ರವೀಮಿ ತೇ।।
02020021a ಜಹಿ ತ್ವಂ ಸದೃಶೇಷ್ವೇವ ಮಾನಂ ದರ್ಪಂ ಚ ಮಾಗಧ।
02020021c ಮಾ ಗಮಃ ಸಸುತಾಮಾತ್ಯಃ ಸಬಲಶ್ಚ ಯಮಕ್ಷಯಂ।।
ರಾಜನ್! ನಾನು ನಿನಗೆ ಹೇಳುತ್ತೇನೆ. ನಾವು ನಿನ್ನ ಸರಿಸಾಟಿಗಳಾಗಿದ್ದೇವೆ. ಮಾಗಧ! ನಿನ್ನ ದರ್ಪವನ್ನು ತೊರೆ. ಮಕ್ಕಳು, ಅಮಾತ್ಯರು ಮತ್ತು ಸೇನೆಯೊಂದಿಗೆ ಯಮಕ್ಷಯಕ್ಕೆ ಹೋಗಬೇಡ.
02020022a ದಂಭೋದ್ಭವಃ ಕಾರ್ತವೀರ್ಯ ಉತ್ತರಶ್ಚ ಬೃಹದ್ರಥಃ।
02020022c ಶ್ರೇಯಸೋ ಹ್ಯವಮನ್ಯೇಹ ವಿನೇಶುಃ ಸಬಲಾ ನೃಪಾಃ।।
ಅವರಿಗಿಂಥ ಉತ್ತಮರನ್ನು ಕಡೆಗಣಿಸಿದುದರಿಂದಲೇ ಇಲ್ಲಿ ದಂಭೋದ್ಭವ9, ಕಾರ್ತವೀರ್ಯ, ಉತ್ತರ ಮತ್ತು ಬೃಹದ್ರಥ ಮೊದಲಾದ ನೃಪರು ಸೇನೆಗಳೊಂದಿಗೆ ವಿನಾಶಹೊಂದಿದರು.
02020023a ಮುಮುಕ್ಷಮಾಣಾಸ್ತ್ವತ್ತಶ್ಚ ನ ವಯಂ ಬ್ರಾಹ್ಮಣಬ್ರುವಾಃ।
02020023c ಶೌರಿರಸ್ಮಿ ಹೃಷೀಕೇಶೋ ನೃವೀರೌ ಪಾಂಡವಾವಿಮೌ।।
ನಿನ್ನಿಂದ ರಾಜರುಗಳನ್ನು ಬಿಡುಗಡೆಮಾಡಲು ಬಯಸುವ ನಾವು ಬ್ರಾಹ್ಮಣರಲ್ಲ. ನಾನು ಶೌರಿ ಹೃಷೀಕೇಶ ಮತ್ತು ಈ ಈರ್ವರು ವೀರರು ಪಾಂಡವರು.
02020024a ತ್ವಾಮಾಹ್ವಯಾಮಹೇ ರಾಜನ್ ಸ್ಥಿರೋ ಯುಧ್ಯಸ್ವ ಮಾಗಧ।
02020024c ಮುಂಚ ವಾ ನೃಪತೀನ್ಸರ್ವಾನ್ಮಾ ಗಮಸ್ತ್ವಂ ಯಮಕ್ಷಯಂ।।
ರಾಜನ್! ಮಾಗಧ! ನಾವು ನಿನ್ನನ್ನು ಆಹ್ವಾನಿಸುತ್ತಿದ್ದೇವೆ. ಸ್ಥಿರನಾಗಿ ಯುದ್ಧ ಮಾಡು. ಸರ್ವ ನೃಪತಿಗಳನ್ನೂ ಬಿಡುಗಡೆಮಾಡು ಅಥವಾ ಯಮಕ್ಷಯಕ್ಕೆ ಹೋಗು.”
02020025 ಜರಾಸಂಧ ಉವಾಚ।
02020025a ನಾಜಿತಾನ್ವೈ ನರಪತೀನಹಮಾದದ್ಮಿ ಕಾಂಶ್ಚನ।
02020025c ಜಿತಃ ಕಃ ಪರ್ಯವಸ್ಥಾತಾ ಕೋಽತ್ರ ಯೋ ನ ಮಯಾ ಜಿತಃ।।
ಜರಾಸಂಧನು ಹೇಳಿದನು: “ನಾನು ಎಂದೂ ಸೋಲಿಸದೇ ಯಾವ ರಾಜನನ್ನೂ ಹಿಡಿದಿಲ್ಲ. ಸೋತವರು ಯಾರುತಾನೆ ನನ್ನನ್ನು ಎದುರಿಸಿದ್ದಾರೆ? ಮತ್ತು ನಾನು ಯಾರನ್ನು ತಾನೇ ಸೋಲಿಸಲಿಲ್ಲ?
02020026a ಕ್ಷತ್ರಿಯಸ್ಯೈತದೇವಾಹುರ್ಧರ್ಮ್ಯಂ ಕೃಷ್ಣೋಪಜೀವನಂ।
02020026c ವಿಕ್ರಮ್ಯ ವಶಮಾನೀಯ ಕಾಮತೋ ಯತ್ಸಮಾಚರೇತ್।।
ಕೃಷ್ಣ! ವಿಕ್ರಮದಿಂದ ವಶಮಾಡಿಕೊಳ್ಳುವುದು ಮತ್ತು ತನಗಿಷ್ಟಬಂದಂತೆ ನಡೆದುಕೊಳ್ಳುವುದೇ ಕ್ಷತ್ರಿಯನ ಧರ್ಮವೆಂದು ಹೇಳಿದ್ದಾರೆ.
02020027a ದೇವತಾರ್ಥಮುಪಾಕೃತ್ಯ ರಾಜ್ಞಃ ಕೃಷ್ಣ ಕಥಂ ಭಯಾತ್।
02020027c ಅಹಮದ್ಯ ವಿಮುಂಚೇಯಂ ಕ್ಷಾತ್ರಂ ವ್ರತಮನುಸ್ಮರನ್।।
ಕೃಷ್ಣ! ಕ್ಷತ್ರಿಯಧರ್ಮವನ್ನು ತಿಳಿದಿರುವ ನಾನು ದೇವನಿಗೆಂದು ಹಿಡಿದಿಟ್ಟಿರುವ ಈ ರಾಜರುಗಳನ್ನು ಇಂದು ಭಯದಿಂದ ಹೇಗೆ ಬಿಡುಗಡೆಮಾಡಬಲ್ಲೆ?
02020028a ಸೈನ್ಯಂ ಸೈನ್ಯೇನ ವ್ಯೂಢೇನ ಏಕ ಏಕೇನ ವಾ ಪುನಃ।
02020028c ದ್ವಾಭ್ಯಾಂ ತ್ರಿಭಿರ್ವಾ ಯೋತ್ಸ್ಯೇಽಹಂ ಯುಗಪತ್ಪೃಥಗೇವ ವಾ।।
ಸೈನ್ಯದೊಂದಿಗೆ ಸೇರಿರುವ ಸೈನ್ಯವನ್ನು ಅಥವಾ ಒಬ್ಬನೇ ಒಬ್ಬನೊಂದಿಗೆ, ಅಥವಾ ಇಬ್ಬರೊಂದಿಗೆ ಅಥವಾ ಒಬ್ಬೊಬ್ಬರಾಗಿ ಅಥವಾ ಒಟ್ಟಿಗೇ ಮೂವರೊಂದಿಗೆ ಯುದ್ಧಮಾಡಬಲ್ಲೆ.””
02020029 ವೈಶಂಪಾಯನ ಉವಾಚ।
02020029a ಏವಮುಕ್ತ್ವಾ ಜರಾಸಂಧಃ ಸಹದೇವಾಭಿಷೇಚನಂ।
02020029c ಆಜ್ಞಾಪಯತ್ತದಾ ರಾಜಾ ಯುಯುತ್ಸುರ್ಭೀಮಕರ್ಮಭಿಃ।।
ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಜರಾಸಂಧನು ಸಹದೇವನ ಅಭಿಷೇಕವನ್ನು ಆಜ್ಞಾಪಿಸಿ ಭಯಂಕರ ಯುದ್ಧಮಾಡಲು ಸಿದ್ಧನಾಗಿ ನಿಂತನು.
02020030a ಸ ತು ಸೇನಾಪತೀ ರಾಜಾ ಸಸ್ಮಾರ ಭರತರ್ಷಭ।
02020030c ಕೌಶಿಕಂ ಚಿತ್ರಸೇನಂ ಚ ತಸ್ಮಿನ್ಯುದ್ಧ ಉಪಸ್ಥಿತೇ।।
02020031a ಯಯೋಸ್ತೇ ನಾಮನೀ ಲೋಕೇ ಹಂಸೇತಿ ಡಿಭಕೇತಿ ಚ।
02020031c ಪೂರ್ವಂ ಸಂಕಥಿತೇ ಪುಂಭಿರ್ನೃಲೋಕೇ ಲೋಕಸತ್ಕೃತೇ।।
ಭರತರ್ಷಭ! ಆ ಯುದ್ಧವು ಪ್ರಾರಂಭವಾಗುವಾಗ ರಾಜನು ತನ್ನ ಸೇನಾಪತಿಗಳಾದ, ಲೋಕದಲ್ಲಿ ಹಂಸ-ಡಿಭಕರೆಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ, ಮನುಷ್ಯಲೋಕದಲ್ಲಿ ಹಿಂದೆ ಶ್ರೇಷ್ಠರೆಂದು ಕರೆಯಲ್ಪಟ್ಟು ಲೋಕಸತ್ಕೃತರಾಗಿದ್ದ, ಕೌಶಿಕ-ಚಿತ್ರಸೇನರನ್ನು ನೆನೆದನು.
02020032a ತಂ ತು ರಾಜನ್ವಿಭುಃ ಶೌರೀ ರಾಜಾನಂ ಬಲಿನಾಂ ವರಂ।
02020032c ಸ್ಮೃತ್ವಾ ಪುರುಷಶಾರ್ದೂಲ ಶಾರ್ದೂಲಸಮವಿಕ್ರಮಂ।।
02020033a ಸತ್ಯಸಂಧೋ ಜರಾಸಂಧಂ ಭುವಿ ಭೀಮಪರಾಕ್ರಮಂ।
02020033c ಭಾಗಮನ್ಯಸ್ಯ ನಿರ್ದಿಷ್ಟಂ ವಧ್ಯಂ ಭೂಮಿಭೃದಚ್ಯುತಃ।।
ರಾಜನ್! ಪುರುಷಶಾರ್ದೂಲ! ಅಚ್ಯುತ ಶೌರಿಯೂ ಕೂಡ ಆ ರಾಜನು ಬಲಶಾಲಿಗಳಲ್ಲಿ ಶ್ರೇಷ್ಠ, ವಿಕ್ರಮದಲ್ಲಿ ಶಾರ್ದೂಲ ಸಮನಾಗಿದ್ದಾನೆ, ಸತ್ಯಸಂಧ ಜರಾಸಂಧನು ಭುವಿಯಲ್ಲಿ ಭೀಮಪರಾಕ್ರಮಿಯಾಗಿದ್ದಾನೆ ಮತ್ತು ಅವನ ವಧೆಯು ಬೇರೆಯವನ ಪಾಲೆಂದು ನಿರ್ದಿಷ್ಟವಾಗಿದೆ ಎನ್ನುವುದನ್ನು ನೆನಪಿಸಿಕೊಂಡನು.
02020034a ನಾತ್ಮನಾತ್ಮವತಾಂ ಮುಖ್ಯ ಇಯೇಷ ಮಧುಸೂದನಃ।
02020034c ಬ್ರಹ್ಮಣೋಽಜ್ಞಾಂ ಪುರಸ್ಕೃತ್ಯ ಹಂತುಂ ಹಲಧರಾನುಜಃ।।
ಹೀಗೆ ಹಲಧರನ ಅನುಜ ಮಧುಸೂದನನು ತನ್ನನ್ನು ತಾನೇ ಮುಖ್ಯನೆಂದು ಪರಿಗಣಿಸದೇ ಬ್ರಹ್ಮನ ಯೋಚನೆಯನ್ನು ಪುರಸ್ಕರಿಸಿ10 ಅವನನ್ನು ಕೊಲ್ಲಲು ಮುಂದಾದನು11.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಜರಾಸಂಧವಧಪರ್ವಣಿ ಜರಾಸಂಧಯುದ್ಧೋದ್ಯೋಗೇ ವಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಜರಾಸಂಧವಧಪರ್ವದಲ್ಲಿ ಜರಾಸಂಧಯುದ್ಧೋದ್ಯೋಗ ಎನ್ನುವ ಇಪ್ಪತ್ತನೆಯ ಅಧ್ಯಾಯವು.
-
ಕ್ಷತ್ರಿಯನಿಗೆ ದಂಡಿಸುವುದು ಧರ್ಮವಾಗಿದ್ದರೂ ಕೂಡ ಓರ್ವ ಮುಗ್ಧನನ್ನು ದಂಡಿಸುವುದರಿಂದ ಅವನು ಧರ್ಮಘಾತಿಯಾಗುತ್ತಾನೆ. ಕ್ಷತ್ರಿಯನಾದ ಮಾತ್ರಕ್ಕೆ ಅವನಿಗೆ ಮುಗ್ಧನನ್ನು (ಅಂದರೆ ತನ್ನ ತಪ್ಪು ಏನೆಂದು ತಿಳಿಯದಿದ್ದವನನ್ನು) ದಂಡಿಸುವುದು ಸರಿಯಲ್ಲ. ↩︎
-
ಗೋರಖಪುರ ಸಂಪುಟದಲ್ಲಿ ಈ ಶ್ಲೋಕಗಳಿಗೆ ಇನ್ನೆರಡು ಶ್ಲೋಕಗಳನ್ನು ಸೇರಿಸಿ ಈ ರೀತಿ ನೀಡಲಾಗಿದೆ: ತ್ರೈಲೋಕ್ಯೇಕ್ಷತ್ರಧರ್ಮೋಹಿ ಶ್ರೇಯಾನ್ ವೈ ಸಾಧುಚಾರಿಣಾಂ। ನಾನ್ಯಂ ಧರ್ಮಂ ಪ್ರಶಂಸಂತಿ ಯೇ ಚ ಧರ್ಮವಿದೋ ಜನಾಃ।। ತಸ್ಯ ಮೇಽದ್ಯ ಸ್ಥಿತಸ್ಯೇಹ ಸ್ವಧರ್ಮೇ ನಿಯತಾತ್ಮನಃ। ಅನಾಗಸಂ ಪ್ರಜಾನಾಂ ಚ ಪ್ರಮಾದಾದಿವ ಜಲ್ಪಥ।। ಅರ್ಥಾತ್ ಸಾಧುಚಾರಿಣರಿಗೆ ಮೂರೂ ಲೋಕದಲ್ಲಿ ಕ್ಷತ್ರಿಯಧರ್ಮವೇ ಅತಿ ಶ್ರೇಷ್ಠವಾದುದು. ಧರ್ಮವಿದ ಜನರು ಬೇರೆ ಯಾವ ಧರ್ಮವನ್ನೂ ಪ್ರಶಂಸಿಸುವುದಿಲ್ಲ. ನಿಯತಾತ್ಮನಾದ ನಾನು ಸ್ವಧರ್ಮದಲ್ಲಿಯೇ ನಿರತನಾಗಿದ್ದೇನೆ. ಅನಾಗಸನೂ ಪ್ರಜಾಪಾಲಕನೂ ಆದ ನನ್ನನ್ನು ಪ್ರಮಾದದಿಂದ ನೀವು ಶತ್ರುವೆಂದು ತಿಳಿದಿರಬಹುದು. ↩︎
-
ಕ್ಷತ್ರಿಯನಾದ ನೀನು ಇತರ ಕ್ಷತ್ರಿಯರನ್ನು ಪಶುಗಳೋಪಾದಿಯಲ್ಲಿ ಕೊಡುತ್ತಿದ್ದೀಯೆ ಎಂದರ್ಥ. ↩︎
-
ಮತಿಗೆಟ್ಟ . ↩︎
-
ಬುದ್ಧಿಯು ಸರಿಯಾಗಿ ಕೆಲಸಮಾಡುತ್ತಿಲ್ಲ ↩︎
-
ಈ ಶ್ಲೋಕದ ಇನ್ನೊಂದು ಅರ್ಥ ಹೀಗಿರಬಹುದು: ತನ್ನವರ ಶ್ರೇಯಸ್ಸಿಗಾಗಿ ರಣದಲ್ಲಿ ಮರಣಹೊಂದಿದ ಯಾವ ಕ್ಷತ್ರಿಯನು ಅವ್ಯಯವೂ ಅತುಲವೂ ಆದ ಸ್ವರ್ಗವನ್ನು ಹೊಂದುವುದಿಲ್ಲ? ↩︎
-
ಗೋರಖಪುರದ ಸಂಪುಟದಲ್ಲಿ “ಯಜಂತೇ” ಎಂಬ ಶಬ್ಧದ ಬದಲಾಗಿ “ಜಯಂತಿ” ಎಂಬ ಪದವಿದೆ. ಈ ಪದದಿಂದ ಇಡೀ ಶ್ಲೋಕದ ಅರ್ಥ ಬದಲಾಗುತ್ತದೆ. ಸ್ವರ್ಗವನ್ನೇ ಗುರಿಯನ್ನಾಗಿಟ್ಟುಕೊಂಡು ರಣಯಜ್ಞದ ದೀಕ್ಷೆಯನ್ನು ಪಡೆದ ಕ್ಷತ್ರಿಯರು ಲೋಕದಲಿ ವಿಜಯವನ್ನುಹೊಂದುತ್ತಾರೆ. ↩︎
-
ಗೋರಖಪುರದ ಸಂಪುಟದಲ್ಲಿ ಸ್ವರ್ಗಯೋನಿರ್ಜಯೋ ಎನ್ನುವುದರ ಬದಲಾಗಿ ಸ್ವರ್ಗಯೋನಿರ್ಮಹದ್ ಬ್ರಹ್ಮ ಎಂದಿದೆ. ಇದಕ್ಕೆ ಈ ಕೆಳಗಿನ ಅರ್ಥವನ್ನೂ ಕೊಡಲಾಗಿದೆ: ವೇದಾಧ್ಯಯನ, ಯಶಸ್ಸು ಮತ್ತು ತಪಸ್ಸು ಈ ಮೂರೂ ಸ್ವರ್ಗಪ್ರಾಪ್ತಿಗೆ ಕಾರಣಗಳೆಂದಾದರೆ ಕ್ಷತ್ರಿಯರಿಗೆ ಯುದ್ಧದಲ್ಲಿ ಮೃತ್ಯುವು ಸ್ವರ್ಗಪ್ರಾಪ್ತಿಗೆ ಕಾರಣ. ↩︎
-
ದಂಬೋದ್ಭವನ ಚರಿತ್ರೆಯನ್ನು ಭೀಷ್ಮನು ಮುಂದೆ ಉದ್ಯೋಗಪರ್ವದಲ್ಲಿ ದುರ್ಯೋಧನನಿಗೆ ಹೇಳುವುದಿದೆ. ↩︎
-
ದೈವವೇ ಜರಾಸಂಧನ ಸಂಹಾರಕನನ್ನು ಆರಿಸಿಕೊಳ್ಳಲಿ ಎಂದು ಕೃಷ್ಣನು ಜರಾಸಂಧನಿಗೆ “ನಾವು ಮೂವರಲ್ಲಿ ಯಾರೊಡನೆ ಯುದ್ಧಮಾಡಲು ಬಯಸುತ್ತೀಯೆ?” ಎಂದು ಕೇಳಿದ್ದುದು. ↩︎
-
ಜರಾಸಂಧ ಮತ್ತು ಕೃಷ್ಣರ ನಡುವೆ ಇರುವ ವೈರತ್ವದ ಕುರಿತಾದ ವಿವರಣೆಯು ಕುಂಭಕೋಣ ಸಂಪುಟದಲ್ಲಿದೆ. ↩︎