ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸಭಾ ಪರ್ವ
ಜರಾಸಂಧವಧ ಪರ್ವ
ಅಧ್ಯಾಯ 19
ಸಾರ
ಮಗಧದ ವರ್ಣನೆ (1-11). ಸ್ನಾತಕ ಬ್ರಾಹ್ಮಣರ ವೇಷಧರಿಸಿ ಮಗಧ ಪುರಪ್ರವೇಶ (12-28). ಮಾಗಧನಿಂದ ಬ್ರಾಹ್ಮಣ ವೇಷದಲ್ಲಿದ್ದ ಮೂವರ ಸತ್ಕಾರ (29-36). ಅವರು ವೇಷಧರಿಸಿ ಬಂದವರೆಂದು ಶಂಕಿಸಿ ಜರಾಸಂಧನು ಅವರು ಯಾರು ಮತ್ತು ಬಂದ ಉದ್ದೇಶವೇನೆಂದು ಕೇಳುವುದು (37-43). ಕೃಷ್ಣನು ತಾವು ಕ್ಷತ್ರಿಯರೆಂದೂ ಶತ್ರುವಿನ ಮನೆಯ ಆತಿಥ್ಯವನ್ನು ಸ್ವೀಕರಿಸುವುದಿಲ್ಲವೆಂದೂ ಹೇಳುವುದು (44-50).
02019001 ವಾಸುದೇವ ಉವಾಚ।
02019001a ಏಷ ಪಾರ್ಥ ಮಹಾನ್ಸ್ವಾದುಃ ಪಶುಮಾನ್ನಿತ್ಯಮಂಬುಮಾನ್।
02019001c ನಿರಾಮಯಃ ಸುವೇಶ್ಮಾಢ್ಯೋ ನಿವೇಶೋ ಮಾಗಧಃ ಶುಭಃ।।
ವಾಸುದೇವನು ಹೇಳಿದನು: “ಪಾರ್ಥ! ಇದೇ ಸದಾ ಪಶು-ನೀರಿನಿಂದ ಮತ್ತು ನಿರಾಮಯ ಸುಂದರ ದೊಡ್ಡ ನಿವೇಶನಗಳಿಂದ ಕೂಡಿದ ಶುಭ ಮಗಧ ದೇಶ!
02019002a ವೈಹಾರೋ ವಿಪುಲಃ ಶೈಲೋ ವರಾಹೋ ವೃಷಭಸ್ತಥಾ।
02019002c ತಥೈವರ್ಷಿಗಿರಿಸ್ತಾತ ಶುಭಾಶ್ಚೈತ್ಯಕಪಂಚಮಾಃ।।
02019003a ಏತೇ ಪಂಚ ಮಹಾಶೃಂಗಾಃ ಪರ್ವತಾಃ ಶೀತಲದ್ರುಮಾಃ।
02019003c ರಕ್ಷಂತೀವಾಭಿಸಂಹತ್ಯ ಸಂಹತಾಂಗಾ ಗಿರಿವ್ರಜಂ।।
ಇವು ವೈಹಾರ, ವರಾಹ, ವೃಷಭ, ಋಷಿಗಿರಿ ಮತ್ತು ಚೈತ್ಯಗಳೆಂಬ ಐದು ವಿಪುಲ ಬೆಟ್ಟಗಳು. ಶೀತಲ ದ್ರುಮಗಳನ್ನೊಡಗೂಡಿದ ಈ ಐದು ಮಹಾಶೃಂಗ ಪರ್ವತಗಳು ಒಟ್ಟಾಗಿ, ಒಂದಕ್ಕೊಂದು ಹೊಂದಿಕೊಂಡು, ಗಿರಿವ್ರಜವನ್ನು ರಕ್ಷಿಸುತ್ತಿವೆಯೋ ಎಂಬಂತೆ ತೋರುತ್ತಿವೆ.
02019004a ಪುಷ್ಪವೇಷ್ಟಿತಶಾಖಾಗ್ರೈರ್ಗಂಧವದ್ಭಿರ್ಮನೋರಮೈಃ।
02019004c ನಿಗೂಢಾ ಇವ ಲೋಧ್ರಾಣಾಂ ವನೈಃ ಕಾಮಿಜನಪ್ರಿಯೈಃ।।
ಪುಷ್ಪಗಳಿಂದ ತುಂಬಿದ ಶಾಖೆಗಳ ಮನೋರಮ ಸುಗಂಧವನ್ನು ಸೂಸುವ ಕಾಮಿಜನಪ್ರಿಯಕರ ಲೋಧ್ರಾ ವನಗಳಲ್ಲಿ ಗಿರಿವ್ರಜವು ಅಡಗಿರುವಂತೆ ತೋರುತ್ತಿದೆ.
02019005a ಶೂದ್ರಾಯಾಂ ಗೌತಮೋ ಯತ್ರ ಮಹಾತ್ಮಾ ಸಂಶಿತವ್ರತಃ।
02019005c ಔಶೀನರ್ಯಾಮಜನಯತ್ಕಾಕ್ಷೀವಾದೀನ್ಸುತಾನೃಷಿಃ।।
ಇಲ್ಲಿಯೇ ಮಹಾತ್ಮ ಸಂಶಿತವ್ರತ ಗೌತಮ ಋಷಿಯು ಶೂದ್ರ ಔಶೀನರಿ1ಯಲ್ಲಿ ಕಾಕ್ಷೀವಾನ್ ಮೊದಲಾದ ಸುತರನ್ನು ಪಡೆದನು.
02019006a ಗೌತಮಃ ಕ್ಷಯಣಾದಸ್ಮಾದಥಾಸೌ ತತ್ರ ವೇಶ್ಮನಿ।
02019006c ಭಜತೇ ಮಾಗಧಂ ವಂಶಂ ಸ ನೃಪಾಣಾಮನುಗ್ರಹಾತ್।।
ಅವನ ಸ್ಥಳದಲ್ಲಿ ವಾಸಿಸುತ್ತಿದ್ದುದಕ್ಕಾಗಿ ಗೌತಮನು ಮಗಧ ರಾಜವಂಶವನ್ನು ಅದರ ರಾಜರು ಅವನಿಗಿತ್ತ ಮಾನ್ಯತೆಗಳಿಗಾಗಿ ಪ್ರೀತಿಸಿದನು2.
02019007a ಅಂಗವಂಗಾದಯಶ್ಚೈವ ರಾಜಾನಃ ಸುಮಹಾಬಲಾಃ।
02019007c ಗೌತಮಕ್ಷಯಮಭ್ಯೇತ್ಯ ರಮಂತೇ ಸ್ಮ ಪುರಾರ್ಜುನ।।
ಅರ್ಜುನ! ಹಿಂದೆ ಅಂಗ, ವಂಗ ಮೊದಲಾದ ಸುಮಹಾಬಲ ರಾಜರುಗಳೂ ಕೂಡ ಗೌತಮನ ಆಶ್ರಮಕ್ಕೆ ಬಂದು ಸಂತೋಷವನ್ನು ಪಡೆದರು.
02019008a ವನರಾಜೀಸ್ತು ಪಶ್ಯೇಮಾಃ ಪ್ರಿಯಾಲಾನಾಂ ಮನೋರಮಾಃ।
02019008c ಲೋಧ್ರಾಣಾಂ ಚ ಶುಭಾಃ ಪಾರ್ಥ ಗೌತಮೌಕಃಸಮೀಪಜಾಃ।।
ಪಾರ್ಥ! ಗೌತಮನ ಆಶ್ರಮಕ್ಕೆ ಹೊಂದಿಕೊಂಡು ಬೆಳೆದಿರುವ ಈ ಮನೋರಮ ಪ್ರಿಯಾಲ ವನರಾಶಿ ಮತ್ತು ಸುಂದರ ಲೋಧ್ರಾವೃಕ್ಷಗಳನ್ನು ನೋಡು.
02019009a ಅರ್ಬುದಃ ಶಕ್ರವಾಪೀ ಚ ಪನ್ನಗೌ ಶತ್ರುತಾಪನೌ।
02019009c ಸ್ವಸ್ತಿಕಸ್ಯಾಲಯಶ್ಚಾತ್ರ ಮಣಿನಾಗಸ್ಯ ಚೋತ್ತಮಃ।।
ಇಲ್ಲಿ ಅರ್ಬುದ ಮತ್ತು ಶಕ್ರವಾಪೀ ಎಂಬ ಎರಡು ಶತ್ರುತಾಪನ ಪನ್ನಗಗಳು ವಾಸಿಸುತ್ತವೆ. ಅಲ್ಲಿಯೇ ಸ್ವಸ್ತಿಕ ಮತ್ತು ಮಣಿನಾಗನ ಉತ್ತಮ ಆಲಯಗಳೂ ಇವೆ.
02019010a ಅಪರಿಹಾರ್ಯಾ ಮೇಘಾನಾಂ ಮಾಗಧೇಯಂ ಮಣೇಃ ಕೃತೇ।
02019010c ಕೌಶಿಕೋ ಮಣಿಮಾಂಶ್ಚೈವ ವವೃಧಾತೇ ಹ್ಯನುಗ್ರಹಂ।।
ಮಣಿಯ ಕೃಪೆಯಿಂದ ಈ ಮಾಗಧವು ಮೇಘಗಳಿಂದ ಎಂದೂ ವಂಚಿತವಾಗುವುದಿಲ್ಲ. ಕೌಶಿಕ ಮತ್ತು ಮಣಿಮತನೂ ಕೂಡ ಇದರ ಮೇಲೆ ಅನುಗ್ರಹವನ್ನು ವೃದ್ಧಿಸಿದ್ದಾರೆ3.
02019011a ಅರ್ಥಸಿದ್ಧಿಂ ತ್ವನಪಗಾಂ ಜರಾಸಂಧೋಽಭಿಮನ್ಯತೇ।
02019011c ವಯಮಾಸಾದನೇ ತಸ್ಯ ದರ್ಪಮದ್ಯ ನಿಹನ್ಮ ಹಿ।।
4ತಾನು ಗಳಿಸಿದ ಅರ್ಥಸಿದ್ಧಿಯು ಎಂದೂ ಕಡಿಮೆಯಾಗುವುದಿಲ್ಲ ಎಂದು ಜರಾಸಂಧನು ತಿಳಿದಿದ್ದಾನೆ. ಆದರೆ ನಾವು ಅವನ ಬಳಿ ಹೋಗಿ ಅವನ ದರ್ಪವನ್ನು ಕೆಳಗುರಿಸೋಣ.””
02019012 ವೈಶಂಪಾಯನ ಉವಾಚ।
02019012a ಏವಮುಕ್ತ್ವಾ ತತಃ ಸರ್ವೇ ಭ್ರಾತರೋ ವಿಪುಲೌಜಸಃ।
02019012c ವಾರ್ಷ್ಣೇಯಃ ಪಾಂಡವೇಯೌ ಚ ಪ್ರತಸ್ಥುರ್ಮಾಗಧಂ ಪುರಂ।।
ವೈಶಂಪಾಯನನು ಹೇಳಿದನು: “ಈ ರೀತಿ ಮಾತನಾಡುತ್ತಾ ವಿಪುಲೌಜಸ ಅಣ್ಣತಮ್ಮಂದಿರೆಲ್ಲರೂ - ವಾರ್ಷ್ಣೇಯ ಮತ್ತು ಇಬ್ಬರು ಪಾಂಡವರು - ಮಗಧಪುರ ಪ್ರವೇಶ ಮಾಡಿದರು.
02019013a ತುಷ್ಟಪುಷ್ಟಜನೋಪೇತಂ ಚಾತುರ್ವರ್ಣ್ಯಜನಾಕುಲಂ।
02019013c ಸ್ಫೀತೋತ್ಸವಮನಾಧೃಷ್ಯಮಾಸೇದುಶ್ಚ ಗಿರಿವ್ರಜಂ।।
ತುಷ್ಟಪುಷ್ಟ5ಜನ ಭರಿತ, ಚಾತುರ್ವರ್ಣ್ಯಜನ ಸಮುದಾಯದಿಂದ ಕೂಡಿದ, ವಿಜೃಂಭಣೆಯ ಉತ್ಸವಭರಿತವಾದ, ಭೇಧಿಸಲಸಾದ್ಯ ಗಿರಿವ್ರಜವನ್ನು ಅವರು ಪ್ರವೇಶಿಸಿದರು6.
02019014a ತೇಽಥ ದ್ವಾರಮನಾಸಾದ್ಯ ಪುರಸ್ಯ ಗಿರಿಮುಚ್ಛ್ರಿತಂ।
02019014c ಬಾರ್ಹದ್ರಥೈಃ ಪೂಜ್ಯಮಾನಂ ತಥಾ ನಗರವಾಸಿಭಿಃ।।
02019015a ಯತ್ರ ಮಾಷಾದಮೃಷಭಮಾಸಸಾದ ಬೃಹದ್ರಥಃ।
02019015c ತಂ ಹತ್ವಾ ಮಾಷನಾಲಾಶ್ಚ ತಿಸ್ರೋ ಭೇರೀರಕಾರಯತ್।।
ಅವರು ನಗರದ ಮಹಾದ್ವಾರದ ಮೂಲಕ ಹೋಗದೇ ಬೃಹದ್ರಥರು ಮತ್ತು ನಗರವಾಸಿಗಳು ಪೂಜಿಸುವ ಗಿರಿಯನ್ನು ಏರಿದರು. ಅಲ್ಲಿ ಬೃಹದ್ರಥನು ನರಭಕ್ಷಕ ವೃಷಭರೂಪೀ ರಾಕ್ಷಸನನ್ನು ಸಂಹರಿಸಿದ್ದನು. ಆ ನರಭಕ್ಷಕನನ್ನು ಸಂಹರಿಸಿ ಅವನ ಚರ್ಮದಿಂದ ಮೂರು ನಗಾರಿಗಳನ್ನು ಮಾಡಿದ್ದನು.
02019016a ಆನಹ್ಯ ಚರ್ಮಣಾ ತೇನ ಸ್ಥಾಪಯಾಮಾಸ ಸ್ವೇ ಪುರೇ।
02019016c ಯತ್ರ ತಾಃ ಪ್ರಾಣದನ್ಭೇರ್ಯೋ ದಿವ್ಯಪುಷ್ಪಾವಚೂರ್ಣಿತಾಃ।।
ಚರ್ಮದಿಂದ ಅವುಗಳನ್ನು ಮುಚ್ಚಿ ತನ್ನ ಪುರದಲ್ಲಿ ಸ್ಥಾಪಿಸಿದನು. ಈ ನಗಾರಿಗಳನ್ನು ಬಾರಿಸುವಾಗ ದಿವ್ಯಪುಷ್ಪಗಳ ಮಳೆ ಸುರಿಯುತ್ತಿತ್ತು.
02019017a ಮಾಗಧಾನಾಂ ಸುರುಚಿರಂ ಚೈತ್ಯಕಾಂತಂ ಸಮಾದ್ರವನ್।
02019017c ಶಿರಸೀವ ಜಿಘಾಂಸಂತೋ ಜರಾಸಂಧಜಿಘಾಂಸವಃ।।
ಜರಾಸಂಧನನ್ನು ಕೊಲ್ಲಲು ಬಯಸಿದ ಅವರು ಮಾಗಧರ ಮೆಚ್ಚಿನ ಚೈತ್ಯಕ ಶಿಖರವನ್ನೇರಿ ಅವನ ತಲೆಯನ್ನೋ ಎನ್ನುವಂತೆ ಆ ನಗಾರಿಗಳನ್ನು ಒಡೆದುಹಾಕಿದರು7.
02019018a ಸ್ಥಿರಂ ಸುವಿಪುಲಂ ಶೃಂಗಂ ಸುಮಹಾಂತಂ ಪುರಾತನಂ।
02019018c ಅರ್ಚಿತಂ ಮಾಲ್ಯದಾಮೈಶ್ಚ ಸತತಂ ಸುಪ್ರತಿಷ್ಠಿತಂ।।
ಆ ಶೃಂಗವು ಪುರಾತನವೂ, ಅಗಲವೂ, ಸ್ಥಿರವಾಗಿದ್ದುದೂ ಆಗಿತ್ತು ಮತ್ತು ಮಾಲೆಗಳಿಂದ ಸದಾ ಅರ್ಚಿಸಲ್ಪಟ್ಟು ಸುಪ್ರತಿಷ್ಠವಾಗಿತ್ತು.
02019019a ವಿಪುಲೈರ್ಬಾಹುಭಿರ್ವೀರಾಸ್ತೇಽಭಿಹತ್ಯಾಭ್ಯಪಾತಯನ್।
02019019c ತತಸ್ತೇ ಮಾಗಧಂ ದೃಷ್ಟ್ವಾ ಪುರಂ ಪ್ರವಿವಿಶುಸ್ತದಾ।।
ತಮ್ಮ ವಿಪುಲ ಬಾಹುಬಲದಿಂದ ಆ ವೀರರು ಅದನ್ನು ಒಡೆದು ಕೆಳಗುರುಳಿಸಿದರು. ನಂತರ ಅವರು ಮಾಗಧವನ್ನು ನೋಡಿ8, ಪುರವನ್ನು ಪ್ರವೇಶಿಸಿದರು.
02019020a ಏತಸ್ಮಿನ್ನೇವ ಕಾಲೇ ತು ಜರಾಸಂಧಂ ಸಮರ್ಚಯನ್।
02019020c ಪರ್ಯಗ್ನಿ ಕುರ್ವಂಶ್ಚ ನೃಪಂ ದ್ವಿರದಸ್ಥಂ ಪುರೋಹಿತಾಃ।।
ಇದೇ ಸಮಯದಲ್ಲಿ ಪುರೋಹಿತರು ನೃಪ ಜರಾಸಂಧನನ್ನು ಆನೆಯ ಮೇಲೆ ಕುಳ್ಳಿರಿಸಿ ನಾಲ್ಕೂ ಕಡೆಗಳಿಂದ ಅಗ್ನಿಯನ್ನು ಹಿಡಿದು ಪೂಜಿಸುತ್ತಿದ್ದರು9.
02019021a ಸ್ನಾತಕವ್ರತಿನಸ್ತೇ ತು ಬಾಹುಶಸ್ತ್ರಾ ನಿರಾಯುಧಾಃ।
02019021c ಯುಯುತ್ಸವಃ ಪ್ರವಿವಿಶುರ್ಜರಾಸಂಧೇನ ಭಾರತ।।
ಭಾರತ! ಸ್ನಾತಕವ್ರತಿಗಳಂತೆ ವೇಷಧರಿಸಿದ ಆ ಮೂವರು ತಮ್ಮ ಬಾಹುಗಳನ್ನು ಬಿಟ್ಟು ಬೇರೆ ಯಾವ ಆಯುಧಗಳೂ ಇಲ್ಲದೇ ಜರಾಸಂಧನೊಡನೆ ಹೋರಾಡಲು ಪ್ರವೇಶಮಾಡಿದರು10.
02019022a ಭಕ್ಷ್ಯಮಾಲ್ಯಾಪಣಾನಾಂ ಚ ದದೃಶುಃ ಶ್ರಿಯಮುತ್ತಮಾಂ।
02019022c ಸ್ಫೀತಾಂ ಸರ್ವಗುಣೋಪೇತಾಂ ಸರ್ವಕಾಮಸಮೃದ್ಧಿನೀಂ।।
ಸರ್ವಕಾಮ ಸಮೃದ್ಧಿಗೊಳಿಸುವ ಸರ್ವಗುಣೋಪೇತ ಉತ್ತಮ ವಸ್ತುಗಳಿಂದ ಭೂಷಿತ ಸಂಪದ್ಭರಿತ ಭಕ್ಷ್ಯ ಮಾಲೆಗಳ ಅಂಗಡಿಗಳನ್ನು ನೋಡಿದರು.
02019023a ತಾಂ ತು ದೃಷ್ಟ್ವಾ ಸಮೃದ್ಧಿಂ ತೇ ವೀಥ್ಯಾಂ ತಸ್ಯಾಂ ನರೋತ್ತಮಾಃ।
02019023c ರಾಜಮಾರ್ಗೇಣ ಗಚ್ಛಂತಃ ಕೃಷ್ಣಭೀಮಧನಂಜಯಾಃ।।
ಆ ಸಮೃಧ್ಧ ವೀಧಿಗಳನ್ನು ನೋಡಿ ಆ ನರೋತ್ತಮ ಕೃಷ್ಣ, ಭೀಮ, ಧನಂಜಯರು ರಾಜಮಾರ್ಗದಲ್ಲಿ ನಡೆದರು.
02019024a ಬಲಾದ್ಗೃಹೀತ್ವಾ ಮಾಲ್ಯಾನಿ ಮಾಲಾಕಾರಾನ್ಮಹಾಬಲಾಃ।
02019024c ವಿರಾಗವಸನಾಃ ಸರ್ವೇ ಸ್ರಗ್ವಿಣೋ ಮೃಷ್ಟಕುಂಡಲಾಃ।।
02019025a ನಿವೇಶನಮಥಾಜಗ್ಮುರ್ಜರಾಸಂಧಸ್ಯ ಧೀಮತಃ।
02019025c ಗೋವಾಸಮಿವ ವೀಕ್ಷಂತಃ ಸಿಂಹಾ ಹೈಮವತಾ ಯಥಾ।।
ಆ ಮಹಾಬಲಿಗಳು ಬಲಾತ್ಕಾರವಾಗಿ ಮಾಲಾಕಾರನಿಂದ ಮಾಲೆಗಳನ್ನು ಕಸಿದುಕೊಂಡರು. ಈ ರೀತಿ ಬಣ್ಣಬಣ್ಣದ ವಸ್ತ್ರಗಳನ್ನು, ಮಾಲೆಗಳನ್ನು ಮತ್ತು ಉತ್ತಮ ಕುಂಡಲಗಳನ್ನು ಧರಿಸಿ ಅವರು ಧೀಮತ ಜರಾಸಂಧನ ನಿವೇಶನವನ್ನು ಹಿಮವತ್ಪರ್ವತದ ಸಿಂಹಗಳು ಗೋವಿನ ಹಟ್ಟಿಯನ್ನು ಪ್ರವೇಶಿಸುವಂತೆ ಪ್ರವೇಶಿಸಿದರು.
02019026a ಶೈಲಸ್ತಂಭನಿಭಾಸ್ತೇಷಾಂ ಚಂದನಾಗುರುಭೂಷಿತಾಃ।
02019026c ಅಶೋಭಂತ ಮಹಾರಾಜ ಬಾಹವೋ ಬಾಹುಶಾಲಿನಾಂ।।
ಮಹಾರಾಜ! ಆ ಬಾಹುಶಾಲಿಗಳ ಚಂದನ ಮತ್ತು ಅಗರುಗಳಿಂದ ಭೂಷಿತ ಬಾಹುಗಳು ಶೈಲಸ್ತಂಭಗಳಂತೆ ಶೋಭಿಸುತ್ತಿದ್ದವು11.
02019027a ತಾನ್ದೃಷ್ಟ್ವಾ ದ್ವಿರದಪ್ರಖ್ಯಾಂ ಶಾಲಸ್ಕಂಧಾನಿವೋದ್ಗತಾನ್।
02019027c ವ್ಯೂಢೋರಸ್ಕಾನ್ಮಾಗಧಾನಾಂ ವಿಸ್ಮಯಃ ಸಮಜಾಯತ।।
ಆನೆಗಳಂತೆ ಧೃಢಕಾಯರಾದ, ಶಾಲವೃಕ್ಷದಂತೆ ಎತ್ತರವಾಗಿದ್ದ, ವಿಶಾಲ ಎದೆಯ ಅವರನ್ನು ನೋಡಿದ ಮಾಗಧರು ವಿಸ್ಮಿತರಾದರು.
02019028a ತೇ ತ್ವತೀತ್ಯ ಜನಾಕೀರ್ಣಾಸ್ತಿಸ್ರಃ ಕಕ್ಷ್ಯಾ ನರರ್ಷಭಾಃ।
02019028c ಅಹಂಕಾರೇಣ ರಾಜಾನಮುಪತಸ್ಥುರ್ಮಹಾಬಲಾಃ।।
ಆ ಮಹಾಬಲಿ ನರರ್ಷಭರು ಜನಸಂದಣಿಯಿಂದ ಕೂಡಿದ್ದ ಮೂರು ಕಕ್ಷಗಳನ್ನು ದಾಟಿ ಅಹಂಕಾರದಿಂದ12 ರಾಜನ ಸಮೀಪ ಬಂದರು.
02019029a ತಾನ್ಪಾದ್ಯಮಧುಪರ್ಕಾರ್ಹಾನ್ಮಾನಾರ್ಹಾನ್ಸತ್ಕೃತಿಂ ಗತಾನ್।
02019029c ಪ್ರತ್ಯುತ್ಥಾಯ ಜರಾಸಂಧ ಉಪತಸ್ಥೇ ಯಥಾವಿಧಿ।।
ಜರಾಸಂಧನು ಪಾದ್ಯ-ಮಧುಪರ್ಕಗಳಿಗರ್ಹ ಮಾನಾರ್ಹ ಅವರನ್ನು ಕುಳ್ಳಿರಿಸಿ ಯಥಾವಿಧಿಯಾಗಿ ಸತ್ಕರಿಸಿದನು.
02019030a ಉವಾಚ ಚೈತಾನ್ರಾಜಾಸೌ ಸ್ವಾಗತಂ ವೋಽಸ್ತ್ವಿತಿ ಪ್ರಭುಃ।
02019030c ತಸ್ಯ ಹ್ಯೇತದ್ವ್ರತಂ ರಾಜನ್ಬಭೂವ ಭುವಿ ವಿಶ್ರುತಂ।।
02019031a ಸ್ನಾತಕಾನ್ಬ್ರಾಹ್ಮಣಾನ್ಪ್ರಾಪ್ತಾಂ ಶ್ರುತ್ವಾ ಸ ಸಮಿತಿಂಜಯಃ।
02019031c ಅಪ್ಯರ್ಧರಾತ್ರೇ ನೃಪತಿಃ ಪ್ರತ್ಯುದ್ಗಚ್ಛತಿ ಭಾರತ।।
ಭಾರತ! ರಾಜನ್! ಅವರಿಗೆ ರಾಜ ಪ್ರಭುವು ನಿಮಗೆ ಸ್ವಾಗತ ಎಂದು ಹೇಳಿದನು. ಏಕೆಂದರೆ ಸ್ನಾತಕ ಬ್ರಾಹ್ಮಣರು ತಲುಪಿದ್ದಾರೆ ಎಂದು ಕೇಳಿದ ಕೂಡಲೇ ಮಧ್ಯರಾತ್ರಿಯಲ್ಲಿ ಕೂಡ ಅವರನ್ನು ಭೇಟಿಯಾಗುವುದು ಆ ನೃಪತಿಯ ಭೂಮಿಯಲ್ಲೆಲ್ಲ ವಿಶ್ರುತ ವ್ರತವಾಗಿದ್ದಿತು13.
02019032a ತಾಂಸ್ತ್ವಪೂರ್ವೇಣ ವೇಷೇಣ ದೃಷ್ಟ್ವಾ ನೃಪತಿಸತ್ತಮಃ।
02019032c ಉಪತಸ್ಥೇ ಜರಾಸಂಧೋ ವಿಸ್ಮಿತಶ್ಚಾಭವತ್ತದಾ।।
ಅಪೂರ್ವ ವೇಷಗಳಲ್ಲಿದ್ದ ಅವರನ್ನು ಸಮೀಪದಿಂದ ನೋಡಿದ ನೃಪತಿಸತ್ತಮ ಜರಾಸಂಧನು ವಿಸ್ಮಿತನಾದನು.
02019033a ತೇ ತು ದೃಷ್ಟ್ವೈವ ರಾಜಾನಂ ಜರಾಸಂಧಂ ನರರ್ಷಭಾಃ।
02019033c ಇದಮೂಚುರಮಿತ್ರಘ್ನಾಃ ಸರ್ವೇ ಭರತಸತ್ತಮ।।
ಭರತಸತ್ತಮ! ರಾಜ ಜರಾಸಂಧನನ್ನು ಕಂಡಕೂಡಲೇ ಅಮಿತ್ರಘ್ನ ನರರ್ಷಭರು ಎಲ್ಲರೂ ಹೀಗೆ ಹೇಳಿದರು:
02019034a ಸ್ವಸ್ತ್ಯಸ್ತು ಕುಶಲಂ ರಾಜನ್ನಿತಿ ಸರ್ವೇ ವ್ಯವಸ್ಥಿತಾಃ।
02019034c ತಂ ನೃಪಂ ನೃಪಶಾರ್ದೂಲ ವಿಪ್ರೈಕ್ಷಂತ ಪರಸ್ಪರಂ।।
“ರಾಜನ್! ನೃಪಶಾರ್ದೂಲ! ಸ್ವಸ್ತಿ ಮತ್ತು ಕುಶಲವಾಗಲಿ!” ಇದನ್ನು ಹೇಳಿ ಹಾಗೆಯೇ ನಿಂತುಕೊಂಡು, ನೃಪನನ್ನೂ ಮತ್ತು ಪರಸ್ಪರರನ್ನೂ ನೋಡತೊಡಗಿದರು.
02019035a ತಾನಬ್ರವೀಜ್ಜರಾಸಂಧಸ್ತದಾ ಯಾದವಪಾಂಡವಾನ್।
02019035c ಆಸ್ಯತಾಮಿತಿ ರಾಜೇಂದ್ರ ಬ್ರಾಹ್ಮಣಚ್ಛದ್ಮಸಂವೃತಾನ್।।
ರಾಜೇಂದ್ರ! ನಂತರ ಜರಾಸಂಧನು ಬ್ರಾಹ್ಮಣವೇಷದಲ್ಲಿದ್ದ ಯಾದವ- ಪಾಂಡವರಿಗೆ ಕುಳಿತುಕೊಳ್ಳಿ ಎಂದು ಹೇಳಿದನು.
02019036a ಅಥೋಪವಿವಿಶುಃ ಸರ್ವೇ ತ್ರಯಸ್ತೇ ಪುರುಷರ್ಷಭಾಃ।
02019036c ಸಂಪ್ರದೀಪ್ತಾಸ್ತ್ರಯೋ ಲಕ್ಷ್ಮ್ಯಾ ಮಹಾಧ್ವರ ಇವಾಗ್ನಯಃ।।
ಮೂವರು ಪುರುಷರ್ಷಭರೂ ಕುಳಿತುಕೊಂಡರು. ಮಹಾಧ್ವರದ ಅಗ್ನಿಗಳಂತೆ ಮೂವರೂ ಕಳೆಯಿಂದ ಬೆಳಗುತ್ತಿದ್ದರು.
02019037a ತಾನುವಾಚ ಜರಾಸಂಧಃ ಸತ್ಯಸಂಧೋ ನರಾಧಿಪಃ।
02019037c ವಿಗರ್ಹಮಾಣಃ ಕೌರವ್ಯ ವೇಷಗ್ರಹಣಕಾರಣಾತ್।।
ಕೌರವ್ಯ! ಆಗ ಅವರ ವೇಷಧಾರಣೆಯ ಕಾರಣದಿಂದ ಅವರನ್ನು ನಿಂದಿಸುತ್ತಾ ಸತ್ಯಸಂಧ ನರಾಧಿಪ ಜರಾಸಂಧನು ಹೇಳಿದನು:
02019038a ನ ಸ್ನಾತಕವ್ರತಾ ವಿಪ್ರಾ ಬಹಿರ್ಮಾಲ್ಯಾನುಲೇಪನಾಃ।
02019038c ಭವಂತೀತಿ ನೃಲೋಕೇಽಸ್ಮಿನ್ವಿದಿತಂ ಮಮ ಸರ್ವಶಃ।।
“ನನಗೆ ಎಲ್ಲ ತಿಳಿದಿರುವಂತೆ ಈ ಮನುಷ್ಯಲೋಕದಲ್ಲಿ ಸ್ನಾತಕವ್ರತದಲ್ಲಿರುವ ಬ್ರಾಹ್ಮಣರು ಮಾಲೆ-ಲೇಪನಗಳನ್ನು ಧರಿಸುವುದಿಲ್ಲ.
02019039a ತೇ ಯೂಯಂ ಪುಷ್ಪವಂತಶ್ಚ ಭುಜೈರ್ಜ್ಯಾಘಾತಲಕ್ಷಣೈಃ।
02019039c ಬಿಭ್ರತಃ ಕ್ಷಾತ್ರಮೋಜಶ್ಚ ಬ್ರಾಹ್ಮಣ್ಯಂ ಪ್ರತಿಜಾನಥ।।
ಇಲ್ಲಿರುವ ನೀವು ಪುಷ್ಪಗಳನ್ನು ಧರಿಸಿದ್ದೀರಿ ಮತ್ತು ನಿಮ್ಮ ಭುಜಗಳು ಧನುಸ್ಸನ್ನು ಏರಿಸಿದುದರಿಂದಾದ ಘಾಯಗಳನ್ನು ಹೊಂದಿವೆ. ಕ್ಷತ್ರಿಯರ ಅಂಗವಸ್ತ್ರಗಳನ್ನು ಧರಿಸಿರುವ ನೀವು ಬ್ರಾಹ್ಮಣರೆಂದು ತೋರುತ್ತಿದ್ದೀರಿ.
02019040a ಏವಂ ವಿರಾಗವಸನಾ ಬಹಿರ್ಮಾಲ್ಯಾನುಲೇಪನಾಃ।
02019040c ಸತ್ಯಂ ವದತ ಕೇ ಯೂಯಂ ಸತ್ಯಂ ರಾಜಸು ಶೋಭತೇ।।
ಈ ರೀತಿ ಬಣ್ಣಬಣ್ಣದ ವಸ್ತ್ರಗಳನ್ನು ಧರಿಸಿ, ಮಾಲೆ-ಲೇಪನಗಳನ್ನು ಧರಿಸಿರುವ ನೀವು ಯಾರು? ಸತ್ಯವನ್ನು ಹೇಳಿರಿ. ರಾಜನಲ್ಲಿ ಸತ್ಯವೇ ಶೋಭೆಯನ್ನು ನೀಡುತ್ತದೆ.
02019041a ಚೈತ್ಯಕಂ ಚ ಗಿರೇಃ ಶೃಂಗಂ ಭಿತ್ತ್ವಾ ಕಿಮಿವ ಸದ್ಮ ನಃ।
02019041c ಅದ್ವಾರೇಣ ಪ್ರವಿಷ್ಟಾಃ ಸ್ಥ ನಿರ್ಭಯಾ ರಾಜಕಿಲ್ಬಿಷಾತ್।।
ನೀವುಗಳು ರಾಜನನ್ನು ಅಪಮಾನಿಸುತ್ತಿದ್ದೇವೆ ಎನ್ನುವ ಭಯವಿಲ್ಲದೇ ಚೈತ್ಯಕ ಗಿರಿಯ ಶಿಖರವನ್ನು ಒಡೆದು, ದ್ವಾರದ ಮೂಲಕವಲ್ಲದೇ ಪ್ರವೇಶಿಸಿದ್ದುದು ಏಕೆ?
02019042a ಕರ್ಮ ಚೈತದ್ವಿಲಿಂಗಸ್ಯ ಕಿಂ ವಾದ್ಯ ಪ್ರಸಮೀಕ್ಷಿತಂ।
02019042c ವದಧ್ವಂ ವಾಚಿ ವೀರ್ಯಂ ಚ ಬ್ರಾಹ್ಮಣಸ್ಯ ವಿಶೇಷತಃ।।
ವಿಶೇಷವಾಗಿ ಮಾತಿನಲ್ಲಿಯೇ ಬ್ರಾಹ್ಮಣರ ವೀರತನವಿರುತ್ತದೆ. ಆದರೆ ನೀವು ಮಾಡಿದ್ದುದು ನಿಮ್ಮ ಗುರುತಿಗೆ ಸರಿಯಾದುದಲ್ಲ. ನಿಮ್ಮ ಉದ್ದೇಶವೇನು ಹೇಳಿ.
02019043a ಏವಂ ಚ ಮಾಮುಪಸ್ಥಾಯ ಕಸ್ಮಾಚ್ಚ ವಿಧಿನಾರ್ಹಣಾಂ।
02019043c ಪ್ರಣೀತಾಂ ನೋ ನ ಗೃಹ್ಣೀತ ಕಾರ್ಯಂ ಕಿಂ ಚಾಸ್ಮದಾಗಮೇ।।
ಈ ರೀತಿ ನನ್ನ ಬಳಿ ಬಂದು ವಿಧಿಪೂರ್ವಕವಾಗಿ ನಿಮಗಿತ್ತಿರುವ ಸತ್ಕಾರವನ್ನು ನೀವು ಏಕೆ ಸ್ವೀಕರಿಸುತ್ತಿಲ್ಲ? ನೀವು ಯಾವ ಕಾರ್ಯಕ್ಕಾಗಿ ನಮ್ಮಲ್ಲಿಗೆ ಬಂದಿದ್ದೀರಿ?”
02019044a ಏವಮುಕ್ತಸ್ತತಃ ಕೃಷ್ಣಃ ಪ್ರತ್ಯುವಾಚ ಮಹಾಮನಾಃ।
02019044c ಸ್ನಿಗ್ಧಗಂಭೀರಯಾ ವಾಚಾ ವಾಕ್ಯಂ ವಾಕ್ಯವಿಶಾರದಃ।।
ಅವನ ಈ ಮಾತಿಗೆ ಮಹಾಮನಸ್ವಿ, ವಾಕ್ಯವಿಶಾರದ ಕೃಷ್ಣನು ಮೃದು-ಗಂಭೀರಧ್ವನಿಯಲ್ಲಿ ಈ ಮಾತುಗಳನ್ನಾಡಿದನು:
02019045a ಸ್ನಾತಕವ್ರತಿನೋ ರಾಜನ್ಬ್ರಾಹ್ಮಣಾಃ ಕ್ಷತ್ರಿಯಾ ವಿಶಃ।
02019045c ವಿಶೇಷನಿಯಮಾಶ್ಚೈಷಾಮವಿಶೇಷಾಶ್ಚ ಸಂತ್ಯುತ।।
“ರಾಜನ್! ಬ್ರಾಹ್ಮಣರು, ಕ್ಷತ್ರಿಯರು ಮತ್ತು ವೈಶ್ಯರು ಯಾರೂ ಸ್ನಾತಕವ್ರತಿಗಳಾಗಬಹುದು. ಆದರೆ ಅದಕ್ಕೆ ಕೆಲವು ವಿಶೇಷನಿಯಮಗಳು ಕೆಲವು ಸಾಧಾರಣ ನಿಯಮಗಳೂ ಇವೆ14.
02019046a ವಿಶೇಷವಾಂಶ್ಚ ಸತತಂ ಕ್ಷತ್ರಿಯಃ ಶ್ರಿಯಮರ್ಚತಿ।
02019046c ಪುಷ್ಪವತ್ಸು ಧ್ರುವಾ ಶ್ರೀಶ್ಚ ಪುಷ್ಪವಂತಸ್ತತೋ ವಯಂ।।
ವಿಶೇಷನಿಯಮಗಳನ್ನು ಪರಿಪಾಲಿಸುವ ಕ್ಷತ್ರಿಯನು ಸದಾ ಸಂಪತ್ತಿನ ಪಾತ್ರನಾಗುತ್ತಾನೆ. ಪುಷ್ಪಧಾರಣಮಾಡುವವರಲ್ಲಿ ಶ್ರೀಯು ವಾಸಿಸುವುದು ನಿಶ್ಚಿತ. ಆದುದರಿಂದ ನಾವು ಪುಷ್ಪಗಳನ್ನು ಧರಿಸಿದ್ದೇವೆ.
02019047a ಕ್ಷತ್ರಿಯೋ ಬಾಹುವೀರ್ಯಸ್ತು ನ ತಥಾ ವಾಕ್ಯವೀರ್ಯವಾನ್।
02019047c ಅಪ್ರಗಲ್ಭಂ ವಚಸ್ತಸ್ಯ ತಸ್ಮಾದ್ಬಾರ್ಹದ್ರಥೇ ಸ್ಮೃತಂ।।
ಕ್ಷತ್ರಿಯನ ವೀರ್ಯತ್ವವು ಅವನ ಬಾಹುಗಳಲ್ಲಿರುತ್ತವೆ. ಮಾತಿನಲ್ಲಿ ಅವನು ಅಷ್ಟೊಂದು ವೀರನಿಲ್ಲದಿರಬಹುದು. ಆದುದರಿಂದ ಬಾರ್ಹದ್ರಥ! ಅವನ ಮಾತು ನಿಷ್ಟೂರವಾಗಿರುವುದಿಲ್ಲ ಎಂದು ಕೇಳಿದ್ದೇವೆ.
02019048a ಸ್ವವೀರ್ಯಂ ಕ್ಷತ್ರಿಯಾಣಾಂ ಚ ಬಾಹ್ವೋರ್ಧಾತಾ ನ್ಯವೇಶಯತ್।
02019048c ತದ್ದಿದೃಕ್ಷಸಿ ಚೇದ್ರಾಜನ್ದ್ರಷ್ಟಾಸ್ಯದ್ಯ ನ ಸಂಶಯಃ।।
ವಿಧಾತನು ಕ್ಷತ್ರಿಯರ ವಿರ್ಯವನ್ನು ಅವರ ಭುಜಗಳಲ್ಲಿಯೇ ಇರಿಸಿದ್ದಾನೆ. ರಾಜನ್! ಅದನ್ನು ನೀನು ನೋಡಲು ಬಯಸುವೆಯಾದರೆ ನಿಸ್ಸಂಶಯವಾಗಿ ನಿನಗೆ ತೋರಿಸಲಾಗುತ್ತದೆ.
02019049a ಅದ್ವಾರೇಣ ರಿಪೋರ್ಗೇಹಂ ದ್ವಾರೇಣ ಸುಹೃದೋ ಗೃಹಂ।
02019049c ಪ್ರವಿಶಂತಿ ಸದಾ ಸಂತೋ ದ್ವಾರಂ ನೋ ವರ್ಜಿತಂ ತತಃ।।
ಸಂತರು ಅವರ ಶತ್ರುವಿನ ಗೃಹವನ್ನು ದ್ವಾರದಮೂಲಕ ಪ್ರವೇಶಿಸುವುದಿಲ್ಲ ಮತ್ತು ಸುಹೃದಯರ ಗೃಹವನ್ನು ದ್ವಾರದ ಮೂಲಕವೇ ಪ್ರವೇಶಿಸುತ್ತಾರೆ. ಆದುದರಿಂದ ನಾವು ನಿನ್ನ ದ್ವಾರವನ್ನು ತಿರಸ್ಕರಿಸಿದೆವು.
02019050a ಕಾರ್ಯವಂತೋ ಗೃಹಾನೇತ್ಯ ಶತ್ರುತೋ ನಾರ್ಹಣಾಂ ವಯಂ।
02019050c ಪ್ರತಿಗೃಹ್ಣೀಮ ತದ್ವಿದ್ಧಿ ಏತನ್ನಃ ಶಾಶ್ವತಂ ವ್ರತಂ।।
ಒಂದು ಕಾರ್ಯದ ಉದ್ದೇಶವನ್ನಿಟ್ಟುಕೊಂಡು ಬಂದ ನಾವು ಶತ್ರುವಿನ ಆತಿಥ್ಯವನ್ನು ಸ್ವೀಕರಿಸುವುದಿಲ್ಲ. ಇದು ನಮ್ಮ ಶಾಶ್ವತ ವ್ರತವೆಂದು ತಿಳಿ15.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಜರಾಸಂಧವಧಪರ್ವಣಿ ಕೃಷ್ಣಜರಾಸಂಧಸಂವಾದೇ ಏಕವಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಜರಾಸಂಧವಧಪರ್ವದಲ್ಲಿ ಕೃಷ್ಣಜರಾಸಂಧಸಂವಾದವೆನ್ನುವ ಹತ್ತೊಂಭತ್ತನೆಯ ಅಧ್ಯಾಯವು.
-
ರಾಜಾ ಉಶೀನರ ಕನ್ಯೆ. ↩︎
-
ಗೋರಖಪುರದ ಸಂಪುಟದಲ್ಲಿ “ಗೌತಮಃ ಪ್ರಣಯಾತ್ ತಸ್ಮಾದ್ ಯಥಾಸೌ ತತ್ರ ಸದ್ಮನಿ। ಭಜತೇ ಮಾಗಧಂ ವಂಶಂ ಸ ನೃಪಾಣಾಮನುಗ್ರಹಾತ್।। ” ಎಂದಿದೆ. ಅರ್ಥಾತ್: ಇದೇ ಕಾರಣದಿಂದ ರಾಜರ ಪ್ರೇಮದಿಂದ ಅಲ್ಲಿಯೇ ವಾಸಿಸಿದನು ಮತ್ತು ಮಗಧ ದೇಶದ ರಾಜವಂಶವನ್ನು ಅನುಗ್ರಹಿಸಿದನು. ↩︎
-
ಗೋರಖಪುರ ಸಂಪುಟದಲ್ಲಿ ಅಪರಿಹಾರ್ಯಾ ಮೇಘಾನಾಂ ಮಾಗಧಾ ಮನುನಾ ಕೃತಃ। ಕೌಶಿಕೋ ಮಣಿಮಾಂಶ್ಚೈವ ಚಕ್ರಾತೇ ಚಾಪ್ಯನುಗ್ರಹಂ।। ಎಂದಿದೆ. ಅರ್ಥಾತ್: ಮನುವು ಮಾಗಧಕ್ಕೆ ಮೋಡಗಳ ಅನುಗ್ರವನ್ನು ನೀಡಿದ್ದಾನೆ ಅಂದರೆ ಅಲ್ಲಿ ಮೋಡಗಳು ಸದಾ ಯಥೇಚ್ಛವಾಗಿ ಮಳೆಸುರಿಸುತ್ತವೆ. ಕೌಶಿಕ ಮುನಿ ಮತ್ತು ಮಣಿಮಾನ್ ನಾಗಗಳೂ ಕೂಡ ಮಗಧದೇಶವನ್ನು ಅನುಗ್ರಹಿಸಿದ್ದಾರೆ. ↩︎
-
ೋರಖಪುರ ಸಂಪುಟದಲ್ಲಿ ಈ ಶ್ಲೋಕ ಮತ್ತು ಹಿಂದಿನ ಶ್ಲೋಕಗಳ ಮಧ್ಯೆ ಈ ಕೆಳಗಿನ ಶ್ಲೋಕಗಳನ್ನು ಕೊಡಲಾಗಿದೆ: ಪಾಂಡರೇ ವಿಪುಲೇ ಚೈವ ತಥಾ ವಾರಾಹಕೇಽಪಿ ಚ। ಚೈತ್ಯಕೇ ಚ ಗಿರಿಶ್ರೇಷ್ಠೇ ಮಾತಂಗೇ ಚ ಶಿಲೋಚ್ಚಯೇ।। ಏತೇಷು ಪರ್ವತೇಂದ್ರೇಷು ಸರ್ವಸಿದ್ಧಮಹಾಲಯಾಃ। ಯತೀನಾಮಾಶ್ರಮಾಚ್ಚೈವ ಮುನೀನಾಂ ಚ ಮಹಾತ್ಮನಾಂ।। ವೃಷಭಸ್ಯ ತಮಾಲಸ್ಯ ಮಹಾವೀರ್ಯಸ್ಯ ವೈ ತಥಾ। ಗಂಧರ್ವರಕ್ಷಸಾಂ ಚೈವ ನಾಗಾನಾಂ ಚ ತಥಾಽಽಲಯಾಃ।। ಏವಂ ಪ್ರಾಪ್ಯ ಪುರಂ ರಮ್ಯಂ ದುರಾಧರ್ಷಂ ಸಮಂತತಃ। ಅರ್ಥಾಸಿದ್ಧಿಂ ತ್ವನುಪಮಾಂ ಜರಾಸಂಧೋಽಭಿಮನ್ಯತೇ।। ಅರ್ಥಾತ್: ವಿಪುಲವಾದ ಶ್ವೇತವರ್ನದ ವಾರಾಹಕ, ಚೈತ್ಯಕ ಮತ್ತು ಗಿರಿಶ್ರೇಷ್ಟ ಮಾತಂಗ ಈ ಪರ್ವತೇಂದ್ರರ ಶಿಖರಗಳ ಮೇಲೆ ಸರ್ವ ಸಿದ್ದರ ಮಹಾಲಯಗಳೂ, ಯತಿಗಳ ಮತ್ತು ಮಹಾತ್ಮ ಮುನಿಗಳ ಆಶ್ರಗಳೂ ತುಂಬಿದ್ದವು. ವೃಷಭದ ಮೇಲೆ ಮಹಾವೀರ ತಮಾಲನ, ಮತ್ತು ಗಂಧರ್ವ, ರಾಕ್ಷಸ, ಮತ್ತು ನಾಗಗಲ ಆಲಯಗಳೂ ಇವೆ. ಈ ರೀತಿ ನಾಲ್ಕೂ ಕಡೆಗಳಿಂದ ದುರ್ಧರ್ಷವಾದ ರಮಣೀಯ ಪುರವನ್ನು ಪಡೆದ ಜರಾಸಂಧನು ತನಗೆ ಅನುಪಮ ಅರ್ಥಸಿದ್ದಿಯಾಗುತ್ತಡೆ ಎಂದು ತಿಳಿದಿದ್ದಾನೆ. ↩︎
-
ಸಂತೃಪ್ತರೂ ಆರೋಗ್ಯವಂತರೂ ಆದ ↩︎
-
ಗೋರಖಪುರದ ಸಂಪುಟದಲ್ಲಿ ಈ ಶ್ಲೋಕಗಳು ಈ ರೀತಿ ಇವೆ: ತತೋ ದ್ವಾರಮನಾಸಾದ್ಯ ಪುರಸ್ಯ ಗಿರುಮುಚ್ಛ್ರಿತಂ। ಬಾರ್ಹದ್ರಥೈಃ ಪೂಜ್ಯಮಾನಂ ತಥಾ ನಗರವಾಸಿಭಿಃ।। ಮಗಧಾನಾಂ ಸುರುಚಿರಂ ಚೈತ್ಯಕಾಂತಂ ಸಮಾದ್ರವನ್। ಯತ್ರ ಮಾಂಸಾದಮೃಷಭಮಾಸಸಾದ ಬೃಹದ್ರಥಃ।। ತಂ ಹತ್ವಾ ಮಾಸತಾಲಾಭಿಸ್ತಿಸ್ರೋ ಭೇರೀರಕಾರಯತ್।। ಅರ್ಥಾತ್: ಅವರು ಪುರದ್ವಾರದ ಕಡೆ ಹೋಗದೇ ನಗರವಾಸಿಗಳು ಮತ್ತು ಬೃಹದ್ರಥರು ಪೂಜಿಸುತ್ತಿದ್ದ, ಮಗಧರಿಗೆ ಅತ್ಯಂತ ಪ್ರಿಯವಾದ ಚೈತ್ಯಕ ಎನ್ನುವ ಎತ್ತರ ಪರ್ವತದ ಮೇಲೆ ಹೋದರು. ಅಲ್ಲಿ ಬೃಹದ್ರಥನು ಮಾಂಸಹಾರಿ ಋಷಭ ಎಂಬ ಹೆಸರಿನ ರಾಕ್ಷಸನನ್ನು ಕೊಂದು ಅವನ ಚರ್ಮದಿಂದ, ಒಂದು ಸಾರಿ ಹೊಡೆದರು ತಿಂಗಳುಗಟ್ಟಲೆ ಶಬ್ಧವನ್ನು ಕೊಡುತ್ತಿದ್ದ ಮೂರು ನಗಾರಿಗಳನ್ನು ತಯಾರಿಸಿದ್ದನು. ಶ್ಲೋಕಗಳ ಒಂದೆರಡು ಪದಗಳಲ್ಲಿ (ಇಲ್ಲಿ ‘ಮಾಷ’ ಮತ್ತು ‘ಮಾಂಸಾ’) ಬದಲಾವಣೆಗಳಿಂದ ಅರ್ಥವೇ ಬದಲಾಗುತ್ತದೆ. ↩︎
-
ಗೋರಖಪುರದ ಸಂಪುಟದಲ್ಲಿ ಈ ಶ್ಲೋಕಕ್ಕೂ ಮೊದಲು ಒಂದು ಶ್ಲೋಕವಿದೆ: ಭಂಕ್ತ್ವಾ ಭೇರೀತ್ರಯಂ ತೇಽಪಿ ಚೈತ್ಯಪ್ರಾಕಾರಮಾದ್ರವನ್। ದ್ವಾರತೋಽಭಿಮುಖಾಃ ಸರ್ವೇ ಯಯುರ್ನಾನಾಽಽಯುಧಾಸ್ತದಾ।। ಅರ್ಥಾತ್: ಅವರು ಮೂರು ಭೇರಿಗಳನ್ನೂ ಒಡೆಃಡು, ನಾನಾ ಆಯುಧಗಳಿಂದ ಚೈತ್ಯಕ ಪರ್ವತ ಶಿಖರದ ಮೇಲೆ ಆಕ್ರಮಣ ಮಾಡಿದರು. ↩︎
-
ಗೋರಖಪುರ ಸಂಪುಟದಲ್ಲಿ “ದೃಷ್ಟ್ವಾ” ಎಂಬ ಶಬ್ಧದ ಬದಲಿಗೆ “ಹೃಷ್ಟ್ವಾ” ಎನ್ನುವ ಶಬ್ಧವನ್ನು ಬಳಸಲಾಗಿದೆ. ಅಂದರೆ ಸಂತೋಷಗೊಂಡು ಎಂದರ್ಥ. ↩︎
-
ಗೋರಖಪುರದ ಸಂಪುಟದಲ್ಲಿ ಈ ಶ್ಲೋಕದ ಮೊದಲು ಈ ರೀತಿಯಿದೆ: ಏತಸ್ಮಿನ್ನೇವ ಕಾಲೇ ತು ಬ್ರಾಹ್ಮಣಾ ವೇದಪಾರಗಾಃ। ದೃಷ್ಟ್ವಾ ತು ದುರ್ನಿಮಿತ್ತಾನಿ ಜರಾಸಂಧಮದರ್ಷಯನ್।। ಅರ್ಥಾತ್: ಇದೇ ಸಮಯದಲ್ಲಿ ವೇದಪಾರಂಗತ ಬ್ರಾಹ್ಮಣರು ದುರ್ನಿಮಿತ್ತಗಳನ್ನು (ಅಪಶಕುನಗಳನ್ನು) ಕಂಡು ಜರಾಸಂಧನಿಗೆ ಸೂಚಿಸಿದರು. ↩︎
-
ಗೋರಖಪುರದ ಸಂಪುಟದಲ್ಲಿ ಈ ಶ್ಲೋಕದ ಮೊದಲು ಒಂದು ಶ್ಲೋಕ ಈ ರೀತಿಯಿದೆ: ತತಸ್ತಚ್ಛಾಂತಯೇ ರಾಜಾ ಜರಾಸಂಧಃ ಪ್ರತಾಪವಾನ್। ದೀಕ್ಷಿತೋ ನಿಯಮಸ್ಥೋಽಸಾವುಪವಾಸಪರೋಽಭವತ್।। ಎಂದಿದೆ. ಅಂದರೆ: ಅನಿಷ್ಟಗಳನ್ನು ಶಾಂತಗೊಳಿಸಲು ಪ್ರತಾಪವಾನ್ ರಾಜ ಜರಾಸಂಧನು ನಿಯಮಪೂರ್ವಕವಾಗಿ ಉಪವಾಸವ್ರತದ ದೀಕ್ಷೆಯನ್ನು ಕೈಗೊಂಡನು. ↩︎
-
ಗೋರಖಪುರ ಸಂಪುಟದಲ್ಲಿ ಇದೇ ಶ್ಲೋಕವನ್ನು ಸ್ವಲ್ಪ ವ್ಯತ್ಯಾಸವಾಗಿ ಕೊಡಲಾಗಿದೆ: ಶಾಲಸ್ತಂಭನಿಭಾಸ್ತೇಷಾಂ ಚಂದನಾಗುರುರೂಷಿತಾಃ। ಅಶೋಭಂತ ಮಹಾರಾಜ ಬಾಹವೋ ಯುದ್ಧಶಾಲಿನಾಂ।। ↩︎
-
ಗೋರಖಪುರದ ಸಂಪುಟದಲ್ಲಿ ಈ ಶ್ಲೋಕದ ಉತ್ತರಾರ್ಧವು ಈ ರೀತಿಯಿದೆ: ಅಹಂಕಾರೇಣ ರಾಜಾನಮುಪತಸ್ಥುರ್ಗತವ್ಯಥಾಃ।। ಅಂದರೆ ನಿರ್ಭಯರಾಗಿ ಅಹಂಕಾರದಿಂದ ಅವರು ರಾಜನ ಬಳಿ ಸಾರಿದರು. ↩︎
-
ಗೋರಖಪುರದ ಸಂಪುಟದಲ್ಲಿ ಈ ಶ್ಲೋಕಗಳ ಮಧ್ಯೆ ಮೌನಮಾಸೀತ್ ತದಾ ಪಾರ್ಥಭೀಮಯೋರ್ಜನಮೇಜಯ। ಎಂದಿದೆ. ಅರ್ಥಾತ್: ಆ ಸಮಯದಲ್ಲಿ ಪಾರ್ಥ ಭೀಮ ಮತ್ತು ಅರ್ಜುನರು ಮೌನಧರಿಸಿದ್ದರು. ↩︎
-
ಇದಕ್ಕೆ ಇನ್ನೊಂದು ಅರ್ಥ ಹೀಗೂ ಇರಬಹುದು: ಕೆಲವರು ವಿಶೇಷನಿಯಮಗಳನ್ನು ಪಾಲಿಸುತ್ತಾರೆ ಮತ್ತು ಇನ್ನು ಕೆಲವರು ವಿಶೇಷನಿಯಮಗಳನ್ನು ಪಾಲಿಸುತ್ತಾರೆ. ↩︎
-
ಇದಕ್ಕೆ ಇನ್ನೊಂದು ಅರ್ಥವೆಂದರೆ: ಶತ್ರುತ್ವದ ಕಾರ್ಯವನ್ನಿಟ್ಟುಕೊಂಡು ಬಂದಿರುವ ನಾವು ನಿನ್ನಿಂದ ಆತಿಥ್ಯವನ್ನು ಸ್ವೀಕರಿಸುವುದಿಲ್ಲ. ↩︎