ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸಭಾ ಪರ್ವ
ಜರಾಸಂಧವಧ ಪರ್ವ
ಅಧ್ಯಾಯ 18
ಸಾರ
ಜರಾಸಂಧನನ್ನು ಕೊಲ್ಲುವ ಉಪಾಯವನ್ನು ಮಾತನಾಡಿಕೊಂಡು ಕೃಷ್ಣನು ಯುಧಿಷ್ಠಿರನಲ್ಲಿ ಭೀಮಾರ್ಜುನರನ್ನು ಕೇಳಿ ಪಡೆದುದು (1-20). ಮೂವರೂ ಮಗಧಕ್ಕೆ ಪ್ರಯಾಣಿಸಿದುದು (21-30).
02018001 ವಾಸುದೇವ ಉವಾಚ।
02018001a ಪತಿತೌ ಹಂಸಡಿಭಕೌ ಕಂಸಾಮಾತ್ಯೌ ನಿಪಾತಿತೌ।
02018001c ಜರಾಸಂಧಸ್ಯ ನಿಧನೇ ಕಾಲೋಽಯಂ ಸಮುಪಾಗತಃ।।
ವಾಸುದೇವನು ಹೇಳಿದನು: “ಹಂಸ-ಡಿಭಕರು1 ಪತಿತರಾಗಿದ್ದಾರೆ; ಕಂಸ ಮತ್ತು ಅವನ ಅಮಾತ್ಯರು2 ನಿಪತಿತರಾಗಿದ್ದಾರೆ. ಈಗ ಜರಾಸಂಧನ ನಿಧನದ ಕಾಲವು ಬಂದೊದಗಿದೆ.
02018002a ನ ಸ ಶಕ್ಯೋ ರಣೇ ಜೇತುಂ ಸರ್ವೈರಪಿ ಸುರಾಸುರೈಃ।
02018002c ಪ್ರಾಣಯುದ್ಧೇನ ಜೇತವ್ಯಃ ಸ ಇತ್ಯುಪಲಭಾಮಹೇ।।
ಅವನನ್ನು ರಣದಲ್ಲಿ ಗೆಲ್ಲಲು ಸುರಾಸುರ ಸರ್ವರಿಂದಲೂ ಶಕ್ಯವಿಲ್ಲ. ಆದರೆ, ನಮಗೆ ತಿಳಿದಿರುವಂತೆ, ಪ್ರಾಣ-ಯುದ್ಧ3ದಲ್ಲಿ ಅವನನ್ನು ಗೆಲ್ಲಬಹುದು.
02018003a ಮಯಿ ನೀತಿರ್ಬಲಂ ಭೀಮೇ ರಕ್ಷಿತಾ ಚಾವಯೋರ್ಜುನಃ।
02018003c ಸಾಧಯಿಷ್ಯಾಮ ತಂ ರಾಜನ್ವಯಂ ತ್ರಯ ಇವಾಗ್ನಯಃ।।
ನನ್ನಲ್ಲಿ ನೀತಿಯಿದೆ. ಭೀಮನಲ್ಲಿ ಬಲವಿದೆ. ಮತ್ತು ಅರ್ಜುನನು ನಮ್ಮೀರ್ವರನ್ನು ರಕ್ಷಿಸಬಲ್ಲನು. ರಾಜನ್! ಮೂರು ಅಗ್ನಿಗಳಂತೆ ನಾವು ಅವನನ್ನು ಸಾಧಿಸುತ್ತೇವೆ4.
02018004a ತ್ರಿಭಿರಾಸಾದಿತೋಽಸ್ಮಾಭಿರ್ವಿಜನೇ ಸ ನರಾಧಿಪಃ।
02018004c ನ ಸಂದೇಹೋ ಯಥಾ ಯುದ್ಧಮೇಕೇನಾಭ್ಯುಪಯಾಸ್ಯತಿ।।
ಏಕಾಂತದಲ್ಲಿ ಆ ನರಾಧಿಪನನ್ನು ನಾವು ಮೂವರೂ ಎದುರಿಸಿದಾಗ ನಮ್ಮಲ್ಲಿ ಒಬ್ಬನನ್ನು ಯುದ್ಧದಲ್ಲಿ ತೊಡಗಿಸುತ್ತಾನೆ ಎನ್ನುವುದರಲ್ಲಿ ಸಂದೇಹವಿಲ್ಲ.
02018005a ಅವಮಾನಾಚ್ಚ ಲೋಕಸ್ಯ ವ್ಯಾಯತತ್ವಾಚ್ಚ ಧರ್ಷಿತಃ।
02018005c ಭೀಮಸೇನೇನ ಯುದ್ಧಾಯ ಧ್ರುವಮಭ್ಯುಪಯಾಸ್ಯತಿ।।
ಲೋಕದ ಅವಮಾನ ಮತ್ತು ತನ್ನ ಮೇಲಿರುವ ಅಭಿಮಾನಗಳು5 ನಿಶ್ಚಿತವಾಗಿಯೂ ಅವನನ್ನು ಭೀಮಸೇನನೊಡನೆ ಯುದ್ಧಮಾಡಲು ಪ್ರೇರೇಪಿಸುತ್ತವೆ.
02018006a ಅಲಂ ತಸ್ಯ ಮಹಾಬಾಹುರ್ಭೀಮಸೇನೋ ಮಹಾಬಲಃ।
02018006c ಲೋಕಸ್ಯ ಸಮುದೀರ್ಣಸ್ಯ ನಿಧನಾಯಾಂತಕೋ ಯಥಾ।।
ಲೋಕ ನಿಧನಕ್ಕೆ ಹೇಗೆ ಅಂತಕನು ಸಾಕೋ ಹಾಗೆ ಅವನ ನಿಧನಕ್ಕೆ ಮಹಾಬಾಹು ಮಹಾಬಲ ಭೀಮಸೇನನು ಸಾಕು6.
02018007a ಯದಿ ತೇ ಹೃದಯಂ ವೇತ್ತಿ ಯದಿ ತೇ ಪ್ರತ್ಯಯೋ ಮಯಿ।
02018007c ಭೀಮಸೇನಾರ್ಜುನೌ ಶೀಘ್ರಂ ನ್ಯಾಸಭೂತೌ ಪ್ರಯಚ್ಛ ಮೇ।।
ನಿನ್ನ ಹೃದಯವು ತಿಳಿದಿದ್ದರೆ7 ಮತ್ತು ನನ್ನಮೇಲೆ ನಿನಗೆ ವಿಶ್ವಾಸವಿದ್ದರೆ ಶೀಘ್ರದಲ್ಲಿಯೇ ಭೀಮಾರ್ಜುನರನ್ನು ನನಗೊಪ್ಪಿಸು.””
02018008 ವೈಶಂಪಾಯನ ಉವಾಚ।
02018008a ಏವಮುಕ್ತೋ ಭಗವತಾ ಪ್ರತ್ಯುವಾಚ ಯುಧಿಷ್ಠಿರಃ।
02018008c ಭೀಮಪಾರ್ಥೌ ಸಮಾಲೋಕ್ಯ ಸಂಪ್ರಹೃಷ್ಟಮುಖೌ ಸ್ಥಿತೌ।।
ವೈಶಂಪಾಯನನು ಹೇಳಿದನು: “ಭಗವಂತನು ಹೀಗೆ ಹೇಳಲು ಯುಧಿಷ್ಠಿರನು ಸಂಪ್ರಹೃಷ್ಟಮುಖರಾಗಿ ನಿಂತಿದ್ದ ಭೀಮ-ಪಾರ್ಥರೆಡೆಗೆ ನೋಡುತ್ತಾ ಉತ್ತರಿಸಿದನು:
02018009a ಅಚ್ಯುತಾಚ್ಯುತ ಮಾ ಮೈವಂ ವ್ಯಾಹರಾಮಿತ್ರಕರ್ಷಣ।
02018009c ಪಾಂಡವಾನಾಂ ಭವಾನ್ನಾಥೋ ಭವಂತಂ ಚಾಶ್ರಿತಾ ವಯಂ।।
“ಅಚ್ಯುತ8! ಅಚ್ಯುತ! ಅಮಿತ್ರಕರ್ಷಣ! ನನ್ನೊಂದಿಗೆ ಈ ರೀತಿ ವ್ಯವಹರಿಸಬೇಡ! ಪಾಂಡವರ ನಾಥನು ನೀನು. ನಾವೆಲ್ಲರೂ ನಿನ್ನ ಆಶ್ರಯದಲ್ಲಿದ್ದೇವೆ.
02018010a ಯಥಾ ವದಸಿ ಗೋವಿಂದ ಸರ್ವಂ ತದುಪಪದ್ಯತೇ।
02018010c ನ ಹಿ ತ್ವಮಗ್ರತಸ್ತೇಷಾಂ ಯೇಷಾಂ ಲಕ್ಷ್ಮೀಃ ಪರಾಙ್ಮುಖೀ।।
ಗೋವಿಂದ! ನೀನು ಹೇಳಿದುದೆಲ್ಲವೂ ಸರಿಯೇ. ಲಕ್ಷ್ಮಿಯು ಪರಾಂಙ್ಮುಖಿಯಾಗಿರುವವರ ಎದಿರು ನೀನು ಬರುವುದೇ ಇಲ್ಲ.
02018011a ನಿಹತಶ್ಚ ಜರಾಸಂಧೋ ಮೋಕ್ಷಿತಾಶ್ಚ ಮಹೀಕ್ಷಿತಃ।
02018011c ರಾಜಸೂಯಶ್ಚ ಮೇ ಲಬ್ಧೋ ನಿದೇಶೇ ತವ ತಿಷ್ಠತಃ।।
ನಿನ್ನ ನಿರ್ದೇಶನದಂತೆ ನಡೆದರೆ ಜರಾಸಂಧನು ನಿಹತನಾಗುತ್ತಾನೆ, ಮಹೀಕ್ಷಿತರು ಬಿಡುಗಡೆ ಹೊಂದುತ್ತಾರೆ ಮತ್ತು ರಾಜಸೂಯವು ನನಗೆ ಲಬ್ಧವಾಗುತ್ತದೆ.
02018012a ಕ್ಷಿಪ್ರಕಾರಿನ್ಯಥಾ ತ್ವೇತತ್ಕಾರ್ಯಂ ಸಮುಪಪದ್ಯತೇ।
02018012c ಮಮ ಕಾರ್ಯಂ ಜಗತ್ಕಾರ್ಯಂ ತಥಾ ಕುರು ನರೋತ್ತಮ।।
ನರೋತ್ತಮ! ಕ್ಷಿಪ್ರಕಾರಿನ್! ನನ್ನ ಜಗತ್ಕಾರ್ಯ ಕಾರ್ಯವು ಸರಿಯಾಗಿ ನೆರವೇರುವಂತೆ ಮಾಡು9.
02018013a ತ್ರಿಭಿರ್ಭವದ್ಭಿರ್ಹಿ ವಿನಾ ನಾಹಂ ಜೀವಿತುಮುತ್ಸಹೇ।
02018013c ಧರ್ಮಕಾಮಾರ್ಥರಹಿತೋ ರೋಗಾರ್ತ ಇವ ದುರ್ಗತಃ।।
ನೀವು ಮೂವರ ವಿನಃ ನಾನು ಜೀವಿಸಲು ಶಕ್ಯನಿಲ್ಲ. ಧರ್ಮಕಾಮಾರ್ಥರಹಿತ ರೋಗಿಯಂತೆ ಬಳಲುತ್ತೇನೆ10.
02018014a ನ ಶೌರಿಣಾ ವಿನಾ ಪಾರ್ಥೋ ನ ಶೌರಿಃ ಪಾಂಡವಂ ವಿನಾ।
02018014c ನಾಜೇಯೋಽಸ್ತ್ಯನಯೋರ್ಲೋಕೇ ಕೃಷ್ಣಯೋರಿತಿ ಮೇ ಮತಿಃ।।
ಶೌರಿಯ ವಿನಃ ಪಾರ್ಥನಿಲ್ಲ, ಪಾಂಡವನ ವಿನಃ ಶೌರಿಯಿಲ್ಲ. ಈ ಈರ್ವರು ಕೃಷ್ಣರಿಗೆ ಲೋಕದಲ್ಲಿ ಅಜೇಯರು ಯಾರೂ ಇಲ್ಲ ಎನ್ನುವುದು ನನ್ನ ಅಭಿಪ್ರಾಯ.
02018015a ಅಯಂ ಚ ಬಲಿನಾಂ ಶ್ರೇಷ್ಠಃ ಶ್ರೀಮಾನಪಿ ವೃಕೋದರಃ।
02018015c ಯುವಾಭ್ಯಾಂ ಸಹಿತೋ ವೀರಃ ಕಿಂ ನ ಕುರ್ಯಾನ್ಮಹಾಯಶಾಃ।।
ಈ ಶ್ರೀಮಾನ್ ವೃಕೋದರನೂ ಕೂಡ ಬಲಿಗಳಲ್ಲಿ ಶ್ರೇಷ್ಠನು. ನಿಮ್ಮಿಬ್ಬರ ಸಹಾಯ ದೊರೆತರೆ ಈ ಮಹಾಯಶಸ್ವಿ ವೀರನು ಏನನ್ನು ಸಾಧಿಸಲಾರ?
02018016a ಸುಪ್ರಣೀತೋ ಬಲೌಘೋ ಹಿ ಕುರುತೇ ಕಾರ್ಯಮುತ್ತಮಂ।
02018016c ಅಂಧಂ ಜಡಂ ಬಲಂ ಪ್ರಾಹುಃ ಪ್ರಣೇತವ್ಯಂ ವಿಚಕ್ಷಣೈಃ।।
ಸುಪ್ರಣೀತನ ನಾಯಕತ್ವವನ್ನು ಹೊಂದಿರುವ ಬಲಪ್ರವಾಹವು ಉತ್ತಮ ಕಾರ್ಯವನ್ನು ಸಾಧಿಸಬಲ್ಲದು. ಪ್ರಣೀತನ ನಾಯಕತ್ವದಲ್ಲಿ ಬಲವಿರಬೇಕು. ಇಲ್ಲದಿದ್ದರೆ ಅದು ಕುರುಡು ಮತ್ತು ಜಡವಾಗಿರುತ್ತದೆ ಎಂದು ಹೇಳುತ್ತಾರೆ.
02018017a ಯತೋ ಹಿ ನಿಮ್ನಂ ಭವತಿ ನಯಂತೀಹ ತತೋ ಜಲಂ।
02018017c ಯತಶ್ಚಿದ್ರಂ ತತಶ್ಚಾಪಿ ನಯಂತೇ ಧೀಧನಾ ಬಲಂ।।
ತಗ್ಗಿರುವಲ್ಲಿಗೇ ನೀರು ಹೇಗೆ ಹರಿಯುತ್ತದೆಯೋ ಹಾಗೆ ಅಮಿತಬುದ್ಧಿಯುಳ್ಳವರು11 ಛಿದ್ರವಿರುವಲ್ಲಿಗೆ ಬಲವನ್ನು ಒಯ್ಯುತ್ತಾರೆ.
02018018a ತಸ್ಮಾನ್ನಯವಿಧಾನಜ್ಞಂ ಪುರುಷಂ ಲೋಕವಿಶ್ರುತಂ।
02018018c ವಯಮಾಶ್ರಿತ್ಯ ಗೋವಿಂದಂ ಯತಾಮಃ ಕಾರ್ಯಸಿದ್ಧಯೇ।।
ಆದುದರಿಂದ ವಿಧಾನಜ್ಞ12 ಲೋಕವಿಶ್ರುತ ಪುರುಷ ಗೋವಿಂದನ ಆಶ್ರಯದಲ್ಲಿರುವ ನಾವು ಕಾರ್ಯಸಿದ್ಧಿಯನ್ನು ಹೊಂದುತ್ತೇವೆ.
02018019a ಏವಂ ಪ್ರಜ್ಞಾನಯಬಲಂ ಕ್ರಿಯೋಪಾಯಸಮನ್ವಿತಂ।
02018019c ಪುರಸ್ಕುರ್ವೀತ ಕಾರ್ಯೇಷು ಕೃಷ್ಣ ಕಾರ್ಯಾರ್ಥಸಿದ್ಧಯೇ।।
ಹೀಗೆ ಕಾರ್ಯಾರ್ಥಸಿದ್ಧಿಗಾಗಿ ಎಲ್ಲ ಕಾರ್ಯಗಳಲ್ಲಿ ಪ್ರಜ್ಞೆ, ನೀತಿ, ಬಲ ಮತ್ತು ಕ್ರಿಯೋಪಾಯಸಮನ್ವಿತ ಕೃಷ್ಣನನ್ನೇ ಮುಂದಿಡಬೇಕು.
02018020a ಏವಮೇವ ಯದುಶ್ರೇಷ್ಠಂ ಪಾರ್ಥಃ ಕಾರ್ಯಾರ್ಥಸಿದ್ಧಯೇ।
02018020c ಅರ್ಜುನಃ ಕೃಷ್ಣಮನ್ವೇತು ಭೀಮೋಽನ್ವೇತು ಧನಂಜಯಂ।
02018020e ನಯೋ ಜಯೋ ಬಲಂ ಚೈವ ವಿಕ್ರಮೇ ಸಿದ್ಧಿಮೇಷ್ಯತಿ।।
ಈ ರೀತಿ ಕಾರ್ಯಾರ್ಥಸಿದ್ಧಿಗಾಗಿ ಪಾರ್ಥ ಅರ್ಜುನನು ಯದುಶ್ರೇಷ್ಠ ಕೃಷ್ಣನನ್ನು ಅನುಸರಿಸಲಿ13. ಭೀಮನು ದನಂಜಯನನ್ನು ಅನುಸರಿಸಲಿ. ನೀತಿ, ಜಯ ಮತ್ತು ಬಲವು ವಿಕ್ರಮವನ್ನು ಸಿದ್ಧಿಗೊಳಿಸುತ್ತದೆ.”
02018021a ಏವಮುಕ್ತಾಸ್ತತಃ ಸರ್ವೇ ಭ್ರಾತರೋ ವಿಪುಲೌಜಸಃ।
02018021c ವಾರ್ಷ್ಣೇಯಃ ಪಾಂಡವೇಯೌ ಚ ಪ್ರತಸ್ಥುರ್ಮಾಗಧಂ ಪ್ರತಿ।।
ಅವನು ಈ ರೀತಿ ಹೇಳಲು ವಿಪುಲೌಜಸ ಸರ್ವ ಭ್ರಾತರರೂ - ವಾರ್ಷ್ಣೇಯ ಮತ್ತು ಪಾಂಡವರೀರ್ವರು - ಮಗಧದ ಕಡೆ ಹೊರಟರು.
02018022a ವರ್ಚಸ್ವಿನಾಂ ಬ್ರಾಹ್ಮಣಾನಾಂ ಸ್ನಾತಕಾನಾಂ ಪರಿಚ್ಛದಾನ್।
02018022c ಆಚ್ಛಾದ್ಯ ಸುಹೃದಾಂ ವಾಕ್ಯೈರ್ಮನೋಜ್ಞೈರಭಿನಂದಿತಾಃ।।
ವರ್ಚಸ್ವಿ ಸ್ನಾತಕ ಬ್ರಾಹ್ಮಣರ ಉಡುಪನ್ನು ಹೊದ್ದು ಸುಹೃದಯರ ಮನೋಜ್ಞ ಮಾತುಗಳಿಂದ ಅಭಿನಂದಿತರಾಗಿ ಹೊರಟರು.
02018023a ಅಮರ್ಷಾದಭಿತಪ್ತಾನಾಂ ಜ್ಞಾತ್ಯರ್ಥಂ ಮುಖ್ಯವಾಸಸಾಂ।
02018023c ರವಿಸೋಮಾಗ್ನಿವಪುಷಾಂ ಭೀಮಮಾಸೀತ್ತದಾ ವಪುಃ।।
ಸುಂದರ ವಸ್ತ್ರಗಳನ್ನು ಧರಿಸಿದ್ದ ಮತ್ತು ಅಭಿತಪ್ತ ಜ್ಞಾತಿಗಳಿಗೋಸ್ಕರ ಸಿಟ್ಟಿಗೆದ್ದಿದ್ದ ಆ ರವಿಸೋಮಾಗ್ನಿವಪುಷರ ದೇಹಗಳು ಭಯಂಕರವಾಗಿ ತೋರುತ್ತಿದ್ದವು14.
02018024a ಹತಂ ಮೇನೇ ಜರಾಸಂಧಂ ದೃಷ್ಟ್ವಾ ಭೀಮಪುರೋಗಮೌ।
02018024c ಏಕಕಾರ್ಯಸಮುದ್ಯುಕ್ತೌ ಕೃಷ್ಣೌ ಯುದ್ಧೇಽಪರಾಜಿತೌ।।
ಭೀಮನನ್ನು ಮುಂದಿಟ್ಟುಕೊಂಡು ಒಂದೇ ಕಾರ್ಯದಲ್ಲಿ ತೊಡಗಿರುವ ಯುದ್ಧದಲ್ಲಿ ಅಪರಾಜಿತ ಕೃಷ್ಣರೀರ್ವರನ್ನು ನೋಡಿದ ಅವನು ಜರಾಸಂಧನು ಹತನಾದನೆಂದೇ ಭಾವಿಸಿದನು.
02018025a ಈಶೌ ಹಿ ತೌ ಮಹಾತ್ಮಾನೌ ಸರ್ವಕಾರ್ಯಪ್ರವರ್ತನೇ।
02018025c ಧರ್ಮಾರ್ಥಕಾಮಕಾರ್ಯಾಣಾಂ ಕಾರ್ಯಾಣಾಮಿವ ನಿಗ್ರಹೇ।।
ಯಾಕೆಂದರೆ ಅವರೀರ್ವರು ಮಹಾತ್ಮರೂ ಸರ್ವಕಾರ್ಯಗಳನ್ನು ಪ್ರಾರಂಭಿಸುವುದರಲ್ಲಿ ಮತ್ತು ಧರ್ಮಾರ್ಥಕಾಮಕಾರ್ಯಗಳ ನಿಗ್ರಹದಲ್ಲಿ ಈಶರು15.
02018026a ಕುರುಭ್ಯಃ ಪ್ರಸ್ಥಿತಾಸ್ತೇ ತು ಮಧ್ಯೇನ ಕುರುಜಾಂಗಲಂ।
02018026c ರಮ್ಯಂ ಪದ್ಮಸರೋ ಗತ್ವಾ ಕಾಲಕೂಟಮತೀತ್ಯ ಚ।।
02018027a ಗಂಡಕೀಯಾಂ ತಥಾ ಶೋಣಂ ಸದಾನೀರಾಂ ತಥೈವ ಚ।
02018027c ಏಕಪರ್ವತಕೇ ನದ್ಯಃ ಕ್ರಮೇಣೈತ್ಯ ವ್ರಜಂತಿ ತೇ।।
ಕುರುದೇಶದಿಂದ ಹೊರಟು ಕುರುಜಂಗಲದ ಮಧ್ಯದಿಂದ ಹಾಯ್ದು ರಮ್ಯ ಪದ್ಮಸರೋವರಕ್ಕೆ ಹೋಗಿ ಕಾಲಕೂಟವನ್ನು ದಾಟಿ, ಒಂದೇ ಪರ್ವತದಿಂದ ಉದ್ಭವಿಸುವ ಗಂಡಕೀ, ಶೋಣ ಮತ್ತು ಸದಾನೀರ ನದಿಗಳನ್ನು ಒಂದೊಂದಾಗಿ ದಾಟಿ ಮುಂದುವರೆದರು.
02018028a ಸಂತೀರ್ಯ ಸರಯೂಮ್ರಮ್ಯಾಂ ದೃಷ್ಟ್ವಾ ಪೂರ್ವಾಂಶ್ಚ ಕೋಸಲಾನ್।
02018028c ಅತೀತ್ಯ ಜಗ್ಮುರ್ಮಿಥಿಲಾಂ ಮಾಲಾಂ ಚರ್ಮಣ್ವತೀಂ ನದೀಂ।।
ರಮ್ಯ ಸರಯೂವನ್ನು ದಾಟಿ ಪೂರ್ವದಲ್ಲಿ ಕೋಸಲವನ್ನು ನೋಡುತ್ತಾ ಮಿಥಿಲೆಗೆ ಹೋಗಿ ಮಾಲಾ ಮತ್ತು ಚರ್ಮಣ್ವತೀ ನದಿಗಳನ್ನು ದಾಟಿದರು.
02018029a ಉತ್ತೀರ್ಯ ಗಂಗಾಂ ಶೋಣಂ ಚ ಸರ್ವೇ ತೇ ಪ್ರಾಙ್ಮುಖಾಸ್ತ್ರಯಃ।
02018029c ಕುರವೋರಶ್ಚದಂ ಜಗ್ಮುರ್ಮಾಗಧಂ ಕ್ಷೇತ್ರಮಚ್ಯುತಾಃ।।
ಆ ಮೂವರು ಅಚ್ಯುತರೂ ಪೂರ್ವಮುಖವಾಗಿ ಹೊರಟು ಗಂಗಾ ಮತ್ತು ಶೋಣ ನದಿಗಳನ್ನು ದಾಟಿ ಕುರವ ವೃಕ್ಷಗಳಿಂದ ಸುತ್ತುವರೆಯಲ್ಪಟ್ಟ ಮಾಗಧ ಕ್ಷೇತ್ರವನ್ನು ತಲುಪಿದರು16.
02018030a ತೇ ಶಶ್ವದ್ಗೋಧನಾಕೀರ್ಣಮಂಬುಮಂತಂ ಶುಭದ್ರುಮಂ।
02018030c ಗೋರಥಂ ಗಿರಿಮಾಸಾದ್ಯ ದದೃಶುರ್ಮಾಗಧಂ ಪುರಂ।।
ಗೋವುಗಳ ಗುಂಪಿನಿಂದ ಕೂಡಿದ, ಒಳ್ಳೆಯ ನೀರು ಮತ್ತು ಸುಂದರ ವೃಕ್ಷಗಳಿಂದ ಕೂಡಿದ ಗೋರಥ ಗಿರಿಯನ್ನು ತಲುಪಿ ಅಲ್ಲಿಂದ ಅವರು ಮಾಗಧ ಪುರವನ್ನು ಕಂಡರು.
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಜರಾಸಂಧವಧಪರ್ವಣಿ ಕೃಷ್ಣಪಾಂಡವಮಾಗಧಯಾತ್ರಾಯಾಂ ಅಷ್ಟಾದಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಜರಾಸಂಧವಧಪರ್ವದಲ್ಲಿ ಕೃಷ್ಣಪಾಂಡವರ ಮಾಗಧಯಾತ್ರೆ ಎನ್ನುವ ಹದಿನೆಂಟನೆಯ ಅಧ್ಯಾಯವು.
-
ಹಂಸ ಮತ್ತು ಡಿಭಕರು ಜರಾಸಂಧನ ಸಹಾಯಕರು ಮತ್ತು ಅವರು ಯಮುನಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದರು. ಇವರ ನಿಜವಾದ ಹೆಸರು ಕೌಶಿಕ ಮತ್ತು ಚಿತ್ರಸೇನ. ↩︎
-
ಗೋರಖಪುರದ ಸಂಪುಟದಲ್ಲಿ ಪತಿತೌ ಹಂಸಡಿಂಭಕೌ ಕಂಸಶ್ಚ ಸಗಣೋ ಹತಃ ಎಂದಿದೆ. ↩︎
-
ಗೋರಖಪುರ ಪರಿಪಾಠದಲ್ಲಿ “ಪ್ರಾಣಯುದ್ಧ” ದ ಬದಲಾಗಿ “ಬಾಹುಯುದ್ಧ” ಎಂದಿದೆ. ರಣಯುದ್ಧವೆಂದರೆ ಶಸ್ತ್ರಾಸ್ತ್ರಗಳಿಂದ ಹೋರಾಟ. ಬಾಹುಯುದ್ಧವೆಂದರೆ ಆಯುಧಗಳನ್ನೇನನ್ನೂ ಬಳಸದೇ, ಬರಿಗೈಯಲ್ಲಿ, ಮುಷ್ಠಿಯುದ್ಧ ಮಾಡುವುದು ಎಂದರ್ಥ. ↩︎
-
ಗೋರಖಪುರದ ಸಂಪುಟದಲ್ಲಿ ಮಾಗಧಂ ಸಾಧಯಿಷ್ಯಾಮ ಇಷ್ಟಿಂ ತ್ರಯ ಇವಾಗ್ನಯಃ ಎಂದಿದೆ. ಅಂದರೆ “ಮೂರು ಅಗ್ನಿಗಳು ಯಜ್ಞವನ್ನು ಹೇಗೆ ಸಾಧಿಸುತ್ತವೆಯೋ ಹಾಗೆ ನಾವು ಮೂವರು ಮಾಗಧನನ್ನು (ಮಗಧ ರಾಜ ಜರಾಸಂಧನನ್ನು) ಸಾಧಿಸುತ್ತೇವೆ” ಎಂದರ್ಥ. ↩︎
-
ಗೋರಖಪುರದ ಸಂಪುಟದಲ್ಲಿ ಅವಮಾನಾಚ್ಚ ಲೋಭಾಚ್ಚ ಬಾಹುವೀರ್ಯಾಚ್ಚ ದರ್ಪಿತಃ ಎಂದಿದೆ. ಅಂದರೆ, ಅಪಮಾನದ ಭಯದಿಂದ, ಭೀಮಸೇನನಂಥಹ ಮಹಾ ಯೋದ್ಧನೊಡನೆ ಹೋರಾಡುವ ಆಸೆಯಿಂದ, ಮತ್ತು ತನ್ನ ಬಾಹುಬಲದಿಂದ ದರ್ಪಿತನಾಗಿರುವುದರಿಂದ ಅವನು ಭೀಮಸೇನನೊಂದಿಗೆ ಹೋರಾಡಲು ನಿಶ್ಚಯಿಸುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ. ↩︎
-
ಇಡೀ ಲೋಕವನ್ನು ಅಂತ್ಯಗೊಳಿಸಲು ಅಂತಕನೊಬ್ಬನೇ ಇರುವ ಹಾಗೆ ಜರಾಸಂದನನ್ನು ಅಂತ್ಯಗೊಳಿಸಲು ಭೀಮಸೇನನೊಬ್ಬನೇ ಸಾಕು. ↩︎
-
ಇಡೀ ಲೋಕವನ್ನು ಅಂತ್ಯಗೊಳಿಸಲು ಅಂತಕನೊಬ್ಬನೇ ಇರುವ ಹಾಗೆ ಜರಾಸಂದನನ್ನು ಅಂತ್ಯಗೊಳಿಸಲು ಭೀಮಸೇನನೊಬ್ಬನೇ ಸಾಕು. ↩︎
-
ತನ್ನ ಮರ್ಯಾದೆಯಿಂದ ಚ್ಯುತನಾಗದವನು ಅಚ್ಯುತ. ↩︎
-
ಗೋರಖಪುರ ಸಂಪುಟದಲ್ಲಿ ಅಪ್ರಮತ್ತೋ ಜಗನ್ನಾಥ ತಥಾ ಕುರು ನರೋತ್ತಮ ಎಂದಿದೆ. ↩︎
-
ೋರಖಪುರ ಸಂಪುಟದಲ್ಲಿ ದುರ್ಗತಃ ಎನ್ನುವುದರ ಬದಲು ದುಃಖಿತಃ ಎಂದಿದೆ. ↩︎
-
“ಧೀಧನಾ” ಎಂದರೆ ಬುದ್ಧಿಯನ್ನೇ ಸಂಪತ್ತನ್ನಾಗಿ ಹೊಂದಿದವರು ಎಂದೂ ಅರ್ಥವಾಗುತ್ತದೆ. ↩︎
-
ಏನು ಮಾಡಬೇಕೆಂದು ತಿಳಿದಿರುವವನು ↩︎
-
ಗೋರಖಪುರದ ಸಂಪುಟದಲ್ಲಿ ಏವಮೇವ ಯದುಶ್ರೇಷ್ಠ ಯಾವತ್ಕಾರ್ಯಾರ್ಥಸಿದ್ಧಯೇ ಎಂದಿದೆ. ↩︎
-
ಗೋರಖಪುರದ ಸಂಪುಟದಲ್ಲಿ ಅಮರ್ಷದಭಿತಪ್ತಾನಾಂ ಜ್ಞಾತ್ಯರ್ಥಂ ಮುಖ್ಯತೇಜಸಾಂ। ರವಿಸೋಮಾಗಿವಪುಷಾಂ ದೀಪ್ತಮಾಸೀತ್ ತದಾ ವಪುಃ।। ಎಂದಿದೆ. ಅಂದರೆ: ಜರಾಸಂಧನ ಮೇಲಿನ ಸಿಟ್ಟಿನಿಂದ ಪ್ರಜ್ವಲಿಸುತ್ತಿದ್ದ ಮತ್ತು ಜ್ಜಾತಿ ಕ್ಷತ್ರಿಯರನ್ನು ಬಿಡುಡಡೆಮಾಡುವ ಉದ್ದೇಶದಿಂದ ಮುಖದಲ್ಲಿ ತೇಜಸ್ಸನ್ನು ಪ್ರಕಟಿಸುತ್ತಿದ್ದ, ರವಿ, ಸೋಮ ಮತ್ತು ಅಗ್ನಿ ಸಮಾನ ತೇಜಸ್ವಿ ಶರೀರವನ್ನು ಹೊಂದಿದ್ದ ಆ ಮೂವರ ಸ್ವರೂಪಗಳು ಅತ್ಯಂತ ಉದ್ಭಾಸಿತವಾಗಿ ತೋರುತ್ತಿದ್ದವು. ↩︎
-
ಗೋರಖಪುರದ ಸಂಪುಟದಲ್ಲಿ ಈಶೌ ಹಿ ತೌ ಮಹಾತ್ಮಾನೌ ಸರ್ವಕಾರ್ಯಪ್ರವರ್ತಿನೌ। ಧರ್ಮಕಾಮಾರ್ಥಲೋಕಾನಾಂ ಕಾರ್ಯಾಣಾಂ ಚ ಪ್ರವರ್ತಕೌ।। ಎಂದಿದೆ. ಇದರರ್ಥ: ಯಾಕೆಂದರೆ ಇವರೀರ್ವರು ಮಹಾತ್ರ್ಮರೂ ಸರ್ವಕಾರ್ಯಪ್ರವರ್ತಿಗಳಾಗಿದ್ದು ಲೋಕಗಳ ಧರ್ಮ, ಕಾಮ, ಮತ್ತು ಅರ್ಥಕ್ಕೆ ಸಂಬಂಧಿಸಿದ ಸರ್ವ ಕಾರ್ಯಗಳ ಪ್ರವರ್ತಕರು. ↩︎
-
ಗೋರಖಪುರದ ಸಂಪುಟದಲ್ಲಿ ಕುರವೋರಶ್ಚದಂ ಎನ್ನುವುದರ ಬದಲಿಗೆ ಕುಶಚೀರಚ್ಛದಾ ಎಂದಿದೆ. ಇದರ ಅರ್ಥ: ಕುಶ ಮತ್ತು ಚೀರಗಳನ್ನು ಧರಿಸಿದ (ಆ ಮೂವರೂ). ↩︎