016 ಜರಾಸಂಧೋತ್ಪತ್ತಿಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸಭಾ ಪರ್ವ

ಮಂತ್ರ ಪರ್ವ

ಅಧ್ಯಾಯ 16

ಸಾರ

ಸೇನೆಯನ್ನು ತೆಗೆದುಕೊಳ್ಳದೇ ಶತ್ರುವಿನ ಬಳಿಸೇರಿ, ಶತ್ರುದೇಹವನ್ನು ಆಕ್ರಮಿಸಿ, ತಮ್ಮ ಗುರಿಯನ್ನು ಸಾಧಿಸಿದರೆ ಯಾವ ಅಪವಾದವೂ ಬರುವುದಿಲ್ಲವೆಂದು ಕೃಷ್ಣನು ಹೇಳುವುದು (1-9). ಜರಾಸಂಧನು ಯಾರು ಮತ್ತು ಅವನ ಪರಾಕ್ರಮಗಳೇನು ಎಂದು ಯುಧಿಷ್ಠಿರನು ಕೇಳಲು, ಕೃಷ್ಣನು ಜರಾಸಂಧನ ಜನ್ಮ-ಪರಾಕ್ರಮಗಳನ್ನು ವರ್ಣಿಸಿದ್ದುದು (10-51).

02016001 ವಾಸುದೇವ ಉವಾಚ।
02016001a ಜಾತಸ್ಯ ಭಾರತೇ ವಂಶೇ ತಥಾ ಕುಂತ್ಯಾಃ ಸುತಸ್ಯ ಚ।
02016001c ಯಾ ವೈ ಯುಕ್ತಾ ಮತಿಃ ಸೇಯಮರ್ಜುನೇನ ಪ್ರದರ್ಶಿತಾ।।

ವಾಸುದೇವನು ಹೇಳಿದನು: “ಅರ್ಜುನನು ಭಾರತ ವಂಶದಲ್ಲಿ ಮತ್ತು ಕುಂತಿಯ ಸುತನಾಗಿ ಹುಟ್ಟಿದುದಕ್ಕೆ ಸರಿಯಾದ ಬುದ್ಧಿಯನ್ನು ಪ್ರದರ್ಶಿಸಿದ್ದಾನೆ.

02016002a ನ ಮೃತ್ಯೋಃ ಸಮಯಂ ವಿದ್ಮ ರಾತ್ರೌ ವಾ ಯದಿ ವಾ ದಿವಾ।
02016002c ನ ಚಾಪಿ ಕಂ ಚಿದಮರಮಯುದ್ಧೇನಾಪಿ ಶುಶ್ರುಮಃ।।

ರಾತ್ರಿಯೋ ಹಗಲೋ ಮೃತ್ಯುವಿನ ಸಮಯವನ್ನು ನಾವು ಯಾರೂ ತಿಳಿದಿಲ್ಲ! ಹಾಗೆಯೇ ಯುದ್ಧಮಾಡದೇ ಅಮರರಾದ ಯಾರ ಕುರಿತೂ ನಾವು ಕೇಳಿಲ್ಲ!

02016003a ಏತಾವದೇವ ಪುರುಷೈಃ ಕಾರ್ಯಂ ಹೃದಯತೋಷಣಂ।
02016003c ನಯೇನ ವಿಧಿದೃಷ್ಟೇನ ಯದುಪಕ್ರಮತೇ ಪರಾನ್।।

ಇದೇ ನ್ಯಾಯ ಮತ್ತು ವಿಧಿಪೂರ್ವಕವಾಗಿ ಶತ್ರುಗಳ ಮೇಲೆ ಧಾಳಿಯಿಡುವ ಪುರುಷನ ಹೃದಯವನ್ನು ಸಂತಸಗೊಳಿಸುವ ಕಾರ್ಯ.

02016004a ಸುನಯಸ್ಯಾನಪಾಯಸ್ಯ ಸಮ್ಯುಗೇ ಪರಮಃ ಕ್ರಮಃ।
02016004c ಸಂಶಯೋ ಜಾಯತೇ ಸಾಮ್ಯೇ ಸಾಮ್ಯಂ ಚ ನ ಭವೇದ್ದ್ವಯೋಃ।।

ಹೋರಾಟದಲ್ಲಿ ಉತ್ತಮ ನ್ಯಾಯವೇ ಗೆಲ್ಲುತ್ತದೆ. ಎರಡೂ ಪಕ್ಷಗಳು ಸರಿಸಮವಾಗಿದ್ದರೆ, ಅದರಲ್ಲಿ ಸಂಶಯ ಬರಬಹುದು. ಆದರೆ ಎರಡು ಪಕ್ಷಗಳು ಎಂದೂ ಸರಿಸಮವಾಗಿರುವುದಿಲ್ಲ.

02016005a ತೇ ವಯಂ ನಯಮಾಸ್ಥಾಯ ಶತ್ರುದೇಹಸಮೀಪಗಾಃ।
02016005c ಕಥಮಂತಂ ನ ಗಚ್ಛೇಮ ವೃಕ್ಷಸ್ಯೇವ ನದೀರಯಾಃ।
02016005e ಪರರಂಧ್ರೇ ಪರಾಕ್ರಾಂತಾಃ ಸ್ವರಂಧ್ರಾವರಣೇ ಸ್ಥಿತಾಃ।।

ಒಳ್ಳೆಯ ನೀತಿಯನ್ನು ನಮ್ಮದಾಗಿಸಿಕೊಂಡು ಶತ್ರುವಿನ ಬಳಿ ಹೋದರೆ ನದಿಯ ಪ್ರವಾಹವು ವೃಕ್ಷವನ್ನು ಹೇಗೋ ಹಾಗೆ ಕೊನೆಗೊಳಿಸಲು ಏಕೆ ಸಾಧ್ಯವಿಲ್ಲ? ನಮ್ಮ ದುರ್ಬಲತೆಯನ್ನು ಮುಚ್ಚಿಟ್ಟುಕೊಂಡು ಅವನ ದುರ್ಬಲತೆಯನ್ನು ನೋಡಿ ಆಕ್ರಮಣ ಮಾಡೋಣ.

02016006a ವ್ಯೂಢಾನೀಕೈರನುಬಲೈರ್ನೋಪೇಯಾದ್ಬಲವತ್ತರಂ।
02016006c ಇತಿ ಬುದ್ಧಿಮತಾಂ ನೀತಿಸ್ತನ್ಮಮಾಪೀಹ ರೋಚತೇ।।

ತನಗಿಂತಲೂ ಬಲಶಾಲಿಯಾಗಿರುವವನನ್ನು ಸೇನೆ ಮತ್ತು ಬಲದೊಂದಿಗೆ ಆಕ್ರಮಣ ಮಾಡಬಾರದು ಎನ್ನುವುದು ಬುದ್ಧಿವಂತರ ನೀತಿ ಮತ್ತು ಇದು ನನಗೂ ಇಷ್ಟವಾಗುತ್ತದೆ.

02016007a ಅನವದ್ಯಾ ಹ್ಯಸಂಬುದ್ಧಾಃ ಪ್ರವಿಷ್ಟಾಃ ಶತ್ರುಸದ್ಮ ತತ್।
02016007c ಶತ್ರುದೇಹಮುಪಾಕ್ರಮ್ಯ ತಂ ಕಾಮಂ ಪ್ರಾಪ್ನುಯಾಮಹೇ।।

ಸೇನೆಯನ್ನು ತೆಗೆದುಕೊಳ್ಳದೇ ಶತ್ರುವಿನ ಬಳಿಸೇರಿ, ಶತ್ರುದೇಹವನ್ನು ಆಕ್ರಮಿಸಿ, ನಮ್ಮ ಗುರಿಯನ್ನು ಸಾಧಿಸಿದರೆ ನಮ್ಮ ಮೇಲೆ ಯಾವ ಅಪವಾದವೂ ಬರುವುದಿಲ್ಲ.

02016008a ಏಕೋ ಹ್ಯೇವ ಶ್ರಿಯಂ ನಿತ್ಯಂ ಬಿಭರ್ತಿ ಪುರುಷರ್ಷಭ।
02016008c ಅಂತರಾತ್ಮೇವ ಭೂತಾನಾಂ ತತ್ಕ್ಷಯೇ ವೈ ಬಲಕ್ಷಯಃ।।

ಪುರುಷರ್ಷಭ! ಜೀವಿಗಳ ಅಂತರಾತ್ಮನಂತೆ ಅವನೊಬ್ಬನೇ ನಿತ್ಯ ಶ್ರೀಯನ್ನು ಹೊರಸೂಸುತ್ತಾನೆ, ಅವನ ಕ್ಷಯದೊಂದಿಗೆ ಅವನ ಬಲವೂ ಕ್ಷಯಿಸುವುದು.

02016009a ಅಥ ಚೇತ್ತಂ ನಿಹತ್ಯಾಜೌ ಶೇಷೇಣಾಭಿಸಮಾಗತಾಃ।
02016009c ಪ್ರಾಪ್ನುಯಾಮ ತತಃ ಸ್ವರ್ಗಂ ಜ್ಞಾತಿತ್ರಾಣಪರಾಯಣಾಃ।।

ಒಂದುವೇಳೆ ಅವನನ್ನು ನಾವು ಕೊಂದನಂತರ ಉಳಿದವರು ನಮ್ಮ ಮೇಲೆ ಆಕ್ರಮಣ ಮಾಡಿದರೆ ತಮ್ಮ ಜಾತಿಯವರನ್ನು ಬಿಡುಗಡೆಮಾಡಲು ತೊಡಗಿ ಯುದ್ಧದಲ್ಲಿ ವೀರಸ್ವರ್ಗವನ್ನು ಪಡೆಯುತ್ತೇವೆ.”

02016010 ಯುಧಿಷ್ಠಿರ ಉವಾಚ।
02016010a ಕೃಷ್ಣ ಕೋಽಯಂ ಜರಾಸಂಧಃ ಕಿಂವೀರ್ಯಃ ಕಿಂಪರಾಕ್ರಮಃ।
02016010c ಯಸ್ತ್ವಾಂ ಸ್ಪೃಷ್ಟ್ವಾಗ್ನಿಸದೃಶಂ ನ ದಗ್ಧಃ ಶಲಭೋ ಯಥಾ।।

ಯುಧಿಷ್ಠಿರನು ಹೇಳಿದನು: “ಕೃಷ್ಣ! ಈ ಜರಾಸಂಧನು ಯಾರು? ಅಗ್ನಿಸದೃಶನಾದ ನಿನ್ನನ್ನು ಮುಟ್ಟಿದರೂ ಪತಂಗದಂತೆ ಸುಟ್ಟುಹೋಗದೇ ಇರುವ ಅವನ ವೀರ್ಯ ಮತ್ತು ಪರಾಕ್ರಮಗಳಾದರೂ ಏನು?”

02016011 ಕೃಷ್ಣ ಉವಾಚ।
02016011a ಶೃಣು ರಾಜಂ ಜರಾಸಂಧೋ ಯದ್ವೀರ್ಯೋ ಯತ್ಪರಾಕ್ರಮಃ।
02016011c ಯಥಾ ಚೋಪೇಕ್ಷಿತೋಽಸ್ಮಾಭಿರ್ಬಹುಶಃ ಕೃತವಿಪ್ರಿಯಃ।।

ಕೃಷ್ಣನು ಹೇಳಿದನು: “ರಾಜನ್! ಜರಾಸಂಧನ ವೀರ್ಯ ಪರಾಕ್ರಮಗಳ ಕುರಿತು ಮತ್ತು ಅವನು ನಮ್ಮ ವಿರುದ್ಧ ಬಹಳ ರೀತಿಯಲ್ಲಿ ನಡೆದುಕೊಂಡರೂ ಏನೂ ಮಾಡದೇ ಇದ್ದುದಕ್ಕೆ ಕಾರಣವನ್ನು ಕೇಳು.

02016012a ಅಕ್ಷೌಹಿಣೀನಾಂ ತಿಸೃಣಾಮಾಸೀತ್ಸಮರದರ್ಪಿತಃ।
02016012c ರಾಜಾ ಬೃಹದ್ರಥೋ ನಾಮ ಮಗಧಾಧಿಪತಿಃ ಪತಿಃ।।

ಮೂರು ಅಕ್ಷೌಹಿಣೀ ಸೇನಾಪತಿ ಸಮರದರ್ಪಿತ ಬೃಹದ್ರಥನೆಂಬ ಹೆಸರಿನ ಮಗಧಾಧಿಪತಿ ರಾಜನಿದ್ದನು.

02016013a ರೂಪವಾನ್ವೀರ್ಯಸಂಪನ್ನಃ ಶ್ರೀಮಾನತುಲವಿಕ್ರಮಃ।
02016013c ನಿತ್ಯಂ ದೀಕ್ಷಾಕೃಶತನುಃ ಶತಕ್ರತುರಿವಾಪರಃ।।

ಅವನು ರೂಪವಂತನೂ ವೀರ್ಯಸಂಪನ್ನನೂ ಶ್ರೀಮಂತನೂ ಅತುಲವಿಕ್ರಮನೂ ಆಗಿದ್ದನು. ನಿತ್ಯವೂ ದೀಕ್ಷಾನಿರತನಾಗಿದ್ದ ಅವನು ತೆಳುದೇಹನವನಾಗಿದ್ದು ಇನ್ನೊಬ್ಬ ಶತುಕ್ರತುವೋ ಎಂಬಂತೆ ತೋರುತ್ತಿದ್ದನು.

02016014a ತೇಜಸಾ ಸೂರ್ಯಸದೃಶಃ ಕ್ಷಮಯಾ ಪೃಥಿವೀಸಮಃ।
02016014c ಯಮಾಂತಕಸಮಃ ಕೋಪೇ ಶ್ರಿಯಾ ವೈಶ್ರವಣೋಪಮಃ।।

ತೇಜಸ್ಸಿನಲ್ಲಿ ಸೂರ್ಯಸದೃಶನಾಗಿದ್ದನು, ಕ್ಷಮೆಯಲ್ಲಿ ಪೃಥ್ವಿಸಮನಾಗಿದ್ದನು, ಕೋಪದಲ್ಲಿ ಅಂತಕ ಯಮನ ಸಮನಾಗಿದ್ದನು, ಮತ್ತು ಸಂಪತ್ತಿನಲ್ಲಿ ವೈಶ್ರವಣನಂತಿದ್ದನು.

02016015a ತಸ್ಯಾಭಿಜನಸಮ್ಯುಕ್ತೈರ್ಗುಣೈರ್ಭರತಸತ್ತಮ।
02016015c ವ್ಯಾಪ್ತೇಯಂ ಪೃಥಿವೀ ಸರ್ವಾ ಸೂರ್ಯಸ್ಯೇವ ಗಭಸ್ತಿಭಿಃ।।

ಭರತಸತ್ತಮ! ಅವನ ಉಚ್ಛ ಜನ್ಮದಂತೆ ಅವನ ಗುಣಗಳೂ ಉತ್ತಮವಾಗಿದ್ದು, ಸೂರ್ಯನಿಂದ ಹೊರಸೂಸಿದ ಕಿರಣಗಳಂತೆ ಇಡೀ ಪೃಥ್ವಿಯನ್ನೇ ವ್ಯಾಪಿಸಿದ್ದವು.

02016016a ಸ ಕಾಶಿರಾಜಸ್ಯ ಸುತೇ ಯಮಜೇ ಭರತರ್ಷಭ।
02016016c ಉಪಯೇಮೇ ಮಹಾವೀರ್ಯೋ ರೂಪದ್ರವಿಣಸಮ್ಮತೇ।।

ಭರತರ್ಷಭ! ಆ ಮಹಾವೀರನು ರೂಪ ಮತ್ತು ಸಂಪತ್ತನ್ನು ಹೊಂದಿದ್ದ ಕಾಶೀರಾಜನ ಅವಳಿ ಮಕ್ಕಳನ್ನು ಮದುವೆಯಾದನು.

02016017a ತಯೋಶ್ಚಕಾರ ಸಮಯಂ ಮಿಥಃ ಸ ಪುರುಷರ್ಷಭಃ।
02016017c ನಾತಿವರ್ತಿಷ್ಯ ಇತ್ಯೇವಂ ಪತ್ನೀಭ್ಯಾಂ ಸನ್ನಿಧೌ ತದಾ।।

ಆ ಪುರುಷರ್ಷಭನು ತನ್ನ ಪತ್ನಿಯರಿಬ್ಬರ ಸಮಕ್ಷಮದಲ್ಲಿ ಅವನು ಅವರ ವಿರುದ್ಧ ಎಂದೂ ನಡೆದುಕೊಳ್ಳುವುದಿಲ್ಲ ಎಂಬ ಒಂದು ಒಪ್ಪಂದವನ್ನು ಮಾಡಿಕೊಂಡನು.

02016018a ಸ ತಾಭ್ಯಾಂ ಶುಶುಭೇ ರಾಜಾ ಪತ್ನೀಭ್ಯಾಂ ಮನುಜಾಧಿಪ।
02016018c ಪ್ರಿಯಾಭ್ಯಾಮನುರೂಪಾಭ್ಯಾಂ ಕರೇಣುಭ್ಯಾಮಿವ ದ್ವಿಪಃ।।

ಮನುಜಾಧಿಪ! ಆ ರಾಜನು ತನ್ನ ಪ್ರಿಯ ಅನುರೂಪ ಇಬ್ಬರು ಪತ್ನಿಯರೊಂದಿಗೆ ಹೆಣ್ಣಾನೆಗಳ ಮಧ್ಯೆ ಗಂಡಾನೆಯಂತೆ ರಂಜಿಸಿದನು.

02016019a ತಯೋರ್ಮಧ್ಯಗತಶ್ಚಾಪಿ ರರಾಜ ವಸುಧಾಧಿಪಃ।
02016019c ಗಂಗಾಯಮುನಯೋರ್ಮಧ್ಯೇ ಮೂರ್ತಿಮಾನಿವ ಸಾಗರಃ।।

ಅವರಿಬ್ಬರ ಮಧ್ಯೆ ವಸುಧಾಧಿಪನು ಗಂಗಾ ಮತ್ತು ಯಮುನೆಯರ ಮಧ್ಯೆ ಸಾಗರನ ಮೂರ್ತಿಯಂತೆ ರರಾಜಿಸಿದನು.

02016020a ವಿಷಯೇಷು ನಿಮಗ್ನಸ್ಯ ತಸ್ಯ ಯೌವನಮತ್ಯಗಾತ್।
02016020c ನ ಚ ವಂಶಕರಃ ಪುತ್ರಸ್ತಸ್ಯಾಜಾಯತ ಕಶ್ಚನ।।

ವಿಷಯ ಸುಖದಲ್ಲಿಯೇ ಮಗ್ನನಾಗಿ ಅವನ ಯೌವನವು ಕಳೆಯುತ್ತಾಬಂದರೂ ಅವನಿಗೆ ವಂಶಕರ ಪುತ್ರನು ಯಾರೂ ಜನಿಸಲಿಲ್ಲ.

02016021a ಮಂಗಲೈರ್ಬಹುಭಿರ್ಹೋಮೈಃ ಪುತ್ರಕಾಮಾಭಿರಿಷ್ಟಿಭಿಃ।
02016021c ನಾಸಸಾದ ನೃಪಶ್ರೇಷ್ಠಃ ಪುತ್ರಂ ಕುಲವಿವರ್ಧನಂ।।

ಬಹಳಷ್ಟು ಮಂಗಲ ಹೋಮಗಳು ಮತ್ತು ಪುತ್ರಕಾಮೇಷ್ಟಿಯಿಂದಲೂ ಆ ನೃಪಶ್ರೇಷ್ಠನು ಕುಲವಿವರ್ಧನ ಪುತ್ರನನ್ನು ಪಡೆಯಲಿಲ್ಲ.

02016022a ಅಥ ಕಾಕ್ಷೀವತಃ ಪುತ್ರಂ ಗೌತಮಸ್ಯ ಮಹಾತ್ಮನಃ।
02016022c ಶುಶ್ರಾವ ತಪಸಿ ಶ್ರಾಂತಮುದಾರಂ ಚಂಡಕೌಶಿಕಂ।।
02016023a ಯದೃಚ್ಛಯಾಗತಂ ತಂ ತು ವೃಕ್ಷಮೂಲಮುಪಾಶ್ರಿತಂ।
02016023c ಪತ್ನೀಭ್ಯಾಂ ಸಹಿತೋ ರಾಜಾ ಸರ್ವರತ್ನೈರತೋಷಯತ್।।

ಆಗ ಮಹಾತ್ಮ ಗೌತಮ ಕಾಕ್ಷೀವತನ ಮಗ ಚಂಡಕೌಶಿಕಿ ಎಂದು ಪ್ರಸಿದ್ಧ ಉದಾರ ತಪಸ್ವಿಯು ಅಲ್ಲಿಗೆ ಬಂದು ಒಂದು ಮರದಡಿಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾನೆ ಎಂದು ಕೇಳಿದನು. ಪತ್ನಿಯರ ಸಹಿತ ರಾಜನು ಸರ್ವ ರತ್ನ ಉಡುಗೊರೆಗಳಿಂದ ಅವನನ್ನು ಸಂತೃಪ್ತಿಗೊಳಿಸಿದನು.

02016024a ತಮಬ್ರವೀತ್ಸತ್ಯಧೃತಿಃ ಸತ್ಯವಾಗೃಷಿಸತ್ತಮಃ।
02016024c ಪರಿತುಷ್ಟೋಽಸ್ಮಿ ತೇ ರಾಜನ್ವರಂ ವರಯ ಸುವ್ರತ।।

ಆ ಸತ್ಯಧೃತಿ ಸತ್ಯವಾಗ್ಮಿ ಋಷಿಸತ್ತಮನು “ಸುವ್ರತ ರಾಜನ್! ನಾನು ಸಂತುಷ್ಟಗೊಂಡಿದ್ದೇನೆ. ವರವನ್ನು ಕೇಳಿಕೋ!” ಎಂದನು.

02016025a ತತಃ ಸಭಾರ್ಯಃ ಪ್ರಣತಸ್ತಮುವಾಚ ಬೃಹದ್ರಥಃ।
02016025c ಪುತ್ರದರ್ಶನನೈರಾಶ್ಯಾದ್ಬಾಷ್ಪಗದ್ಗದಯಾ ಗಿರಾ।।

ಪುತ್ರನನ್ನು ನೋಡಲು ಹಾತೊರೆಯುತ್ತಿದ್ದ ಬೃಹದ್ರಥನು ತನ್ನ ಪತ್ನಿಯರೊಂದಿಗೆ ನಮಸ್ಕರಿಸಿ ಕಣ್ಣೀರಿನಿಂದ ಕಟ್ಟಿದ ಧ್ವನಿಯಲ್ಲಿ ಹೇಳಿದನು:

02016026 ಬೃಹದ್ರಥ ಉವಾಚ।
02016026a ಭಗವನ್ರಾಜ್ಯಮುತ್ಸೃಜ್ಯ ಪ್ರಸ್ಥಿತಸ್ಯ ತಪೋವನಂ।
02016026c ಕಿಂ ವರೇಣಾಲ್ಪಭಾಗ್ಯಸ್ಯ ಕಿಂ ರಾಜ್ಯೇನಾಪ್ರಜಸ್ಯ ಮೇ।।

ಬೃಹದ್ರಥನು ಹೇಳಿದನು: “ಭಗವನ್! ಮಕ್ಕಳಿಲ್ಲದೆ ರಾಜ್ಯವನ್ನು ತೊರೆದು ತಪೋವನಕ್ಕೆ ಹೊರಡುತ್ತಿರುವ ಈ ಅಲ್ಪಭಾಗನಿಗೆ ಈ ರಾಜ್ಯದಿಂದ ಏನಾಗಬೇಕು? ವರದಿಂದ ಏನಾಗಬೇಕು?””

02016027 ಕೃಷ್ಣ ಉವಾಚ।
02016027a ಏತಚ್ಛೃತ್ವಾ ಮುನಿರ್ಧ್ಯಾನಮಗಮತ್ ಕ್ಷುಭಿತೇಂದ್ರಿಯಃ।
02016027c ತಸ್ಯೈವ ಚಾಮ್ರವೃಕ್ಷಸ್ಯ ಚಾಯಾಯಾಂ ಸಮುಪಾವಿಶತ್।।
02016028a ತಸ್ಯೋಪವಿಷ್ಟಸ್ಯ ಮುನೇರುತ್ಸಂಗೇ ನಿಪಪಾತ ಹ।
02016028c ಅವಾತಮಶುಕಾದಷ್ಟಮೇಕಮಾಮ್ರಫಲಂ ಕಿಲ।।

ಕೃಷ್ಣನು ಹೇಳಿದನು: “ಇದನ್ನು ಕೇಳಿದ ಮುನಿಯು ಚಿಂತೆಗೊಳಗಾಗಿ ಧ್ಯಾನಮಗ್ನನಾದನು. ಅವನು ಯಾವ ಮಾವಿನ ಮರದ ಕೆಳಗೆ ಕುಳಿತಿದ್ದನೋ ಅಲ್ಲಿಂದ ಗಿಳಿಗಳು ಕಚ್ಚದೇ ಇದ್ದ ಒಂದು ಇಡೀ ಮಾವಿನ ಹಣ್ಣು ಅವನ ತೊಡೆಯಮೇಲೆ ಬಿದ್ದಿತು.

02016029a ತತ್ಪ್ರಗೃಹ್ಯ ಮುನಿಶ್ರೇಷ್ಠೋ ಹೃದಯೇನಾಭಿಮಂತ್ರ್ಯ ಚ।
02016029c ರಾಜ್ಞೇ ದದಾವಪ್ರತಿಮಂ ಪುತ್ರಸಂಪ್ರಾಪ್ತಿಕಾರಕಂ।।

ಮುನಿಶ್ರೇಷ್ಠನು ಆ ಅಪ್ರತಿಮ ಹಣ್ಣನ್ನು ತನ್ನ ಕೈಯಲ್ಲಿ ತೆಗೆದುಕೊಂಡು, ಪುತ್ರನನ್ನು ಕೊಡುವಂತೆ ಅದಕ್ಕೆ ಹೃದಯದಿಂದ ಅಭಿಮಂತ್ರಿಸಿ ರಾಜನಿಗೆ ಕೊಟ್ಟನು.

02016030a ಉವಾಚ ಚ ಮಹಾಪ್ರಾಜ್ಞಸ್ತಂ ರಾಜಾನಂ ಮಹಾಮುನಿಃ।
02016030c ಗಚ್ಛ ರಾಜನ್ಕೃತಾರ್ಥೋಽಸಿ ನಿವರ್ತ ಮನುಜಾಧಿಪ।।

ಮತ್ತು ಆ ಮಹಾಪ್ರಾಜ್ಞ ಮಹಾಮುನಿಯು ರಾಜನಿಗೆ ಹೇಳಿದನು: “ರಾಜನ್! ನಿನ್ನ ಆಸೆಯು ಈಡೇರುತ್ತದೆ. ಹೋಗು. ಮನುಜಾಧಿಪ! ಹಿಂದಿರುಗು.”

02016031a ಯಥಾಸಮಯಮಾಜ್ಞಾಯ ತದಾ ಸ ನೃಪಸತ್ತಮಃ।
02016031c ದ್ವಾಭ್ಯಾಮೇಕಂ ಫಲಂ ಪ್ರಾದಾತ್ಪತ್ನೀಭ್ಯಾಂ ಭರತರ್ಷಭ।।

ಭರತರ್ಷಭ! ಆಗ ಆ ನೃಪತಿಸತ್ತಮನು ತಾನು ಮಾಡಿಕೊಂಡಿದ್ದ ಒಪ್ಪಂದವನ್ನು ನೆನಪಿಸಿಕೊಂಡು ತನ್ನ ಇಬ್ಬರು ಪತ್ನಿಯರಿಗೂ ಆ ಒಂದು ಫಲವನ್ನು ಕೊಟ್ಟನು.

02016032a ತೇ ತದಾಮ್ರಂ ದ್ವಿಧಾ ಕೃತ್ವಾ ಭಕ್ಷಯಾಮಾಸತುಃ ಶುಭೇ।
02016032c ಭಾವಿತ್ವಾದಪಿ ಚಾರ್ಥಸ್ಯ ಸತ್ಯವಾಕ್ಯಾತ್ತಥಾ ಮುನೇಃ।।
02016033a ತಯೋಃ ಸಮಭವದ್ಗರ್ಭಃ ಫಲಪ್ರಾಶನಸಂಭವಃ।
02016033c ತೇ ಚ ದೃಷ್ಟ್ವಾ ನರಪತಿಃ ಪರಾಂ ಮುದಮವಾಪ ಹ।।

ಶುಭೆಯರಿಬ್ಬರೂ ಆ ಮಾವಿನಹಣ್ಣನ್ನು ಅರ್ಧಮಾಡಿ ತಿಂದರು. ಮುನಿಯ ಸತ್ಯವಾಖ್ಯಗಳು ನಿಜವಾಗುವುದು ನಿರ್ದಿಷ್ಟವಾಗುವುದರಿಂದ, ಆ ಮಾವಿನ ಹಣ್ಣನ್ನು ತಿಂದ ಇಬ್ಬರೂ ಗರ್ಭವನ್ನು ಧರಿಸಿದರು. ಅವರನ್ನು ನೋಡಿದ ನರಪತಿಯು ಬಹಳ ಹರ್ಷಿತನಾದನು.

02016034a ಅಥ ಕಾಲೇ ಮಹಾಪ್ರಾಜ್ಞ ಯಥಾಸಮಯಮಾಗತೇ।
02016034c ಪ್ರಜಾಯೇತಾಮುಭೇ ರಾಜಂ ಶರೀರಶಕಲೇ ತದಾ।।
02016035a ಏಕಾಕ್ಷಿಬಾಹುಚರಣೇ ಅರ್ಧೋದರಮುಖಸ್ಫಿಜೇ।
02016035c ದೃಷ್ಟ್ವಾ ಶರೀರಶಕಲೇ ಪ್ರವೇಪಾತೇ ಉಭೇ ಭೃಶಂ।।

ಮಹಾಪ್ರಾಜ್ಞ ರಾಜನ್! ಸಮಯವು ಪ್ರಾಪ್ತಿಯಾದಾಗ ಇಬ್ಬರು ಶುಭೆಯರೂ ಅರ್ಧ ದೇಹವನ್ನು ಹೊಂದಿದ - ಒಂದು ಕಣ್ಣು, ಒಂದು ತೋಳು, ಒಂದು ಕಾಲು, ಕುಂಡೆ, ಅರ್ಧ ಮುಖ ಮತ್ತು ಹೊಟ್ಟೆಯ ಮಗುವಿಗೆ ಜನ್ಮವಿತ್ತರು. ಆ ಅರ್ಧ ಮಗುವನ್ನು ನೋಡಿ ಇಬ್ಬರೂ ಭಯದಿಂದ ನಡುಗಿದರು.

02016036a ಉದ್ವಿಗ್ನೇ ಸಹ ಸಮ್ಮಂತ್ರ್ಯ ತೇ ಭಗಿನ್ಯೌ ತದಾಬಲೇ।
02016036c ಸಜೀವೇ ಪ್ರಾಣಿಶಕಲೇ ತತ್ಯಜಾತೇ ಸುದುಃಖಿತೇ।।

ಆಗ ಆ ಉದ್ವಿಗ್ನ ಅಬಲೆ ಸಹೋದರಿಯರು ಜೊತೆಗೆ ವಿಚಾರ ಮಾಡಿ ಬಹು ದುಃಖಿತರಾಗಿ ಜೀವಂತವಾಗಿದ್ದ ಆ ಎರಡು ಅರ್ಧ ಶಿಶುಗಳನ್ನು ಬಿಸಾಡಿದರು.

02016037a ತಯೋರ್ಧಾತ್ರ್ಯೌ ಸುಸಂವೀತೇ ಕೃತ್ವಾ ತೇ ಗರ್ಭಸಂಪ್ಲವೇ।
02016037c ನಿರ್ಗಮ್ಯಾಂತಃಪುರದ್ವಾರಾತ್ಸಮುತ್ಸೃಜ್ಯಾಶು ಜಗ್ಮತುಃ।।

ಆ ಎರಡು ಅರ್ಧ ಶಿಶುಗಳನ್ನು ಸರಿಯಾಗಿ ಸುತ್ತಿ ಸೂತಗಿತ್ತಿಯರು ಅಂತಃಪುರದ ಬಾಗಿಲಿನಿಂದ ಹೊರಹೋಗಿ ಎಸೆದು ಅವಸರದಲ್ಲಿ ಹಿಂದಿರುಗಿದರು.

02016038a ತೇ ಚತುಷ್ಪಥನಿಕ್ಷಿಪ್ತೇ ಜರಾ ನಾಮಾಥ ರಾಕ್ಷಸೀ।
02016038c ಜಗ್ರಾಹ ಮನುಜವ್ಯಾಘ್ರ ಮಾಂಸಶೋಣಿತಭೋಜನಾ।।

ಮನುಜವ್ಯಾಘ್ರ! ಅದೇ ಸಮಯದಲ್ಲಿ ರಕ್ತ-ಮಾಂಸಗಳನ್ನು ತಿನ್ನುವ ಜರಾ ಎಂಬ ಹೆಸರಿನ ರಾಕ್ಷಸಿಯು ನಾಲ್ಕು ರಸ್ತೆಗಳು ಸೇರುವಲ್ಲಿ ಇರಿಸಿದ್ದ ಮಕ್ಕಳನ್ನು ಎತ್ತಿಕೊಂಡಳು.

02016039a ಕರ್ತುಕಾಮಾ ಸುಖವಹೇ ಶಕಲೇ ಸಾ ತು ರಾಕ್ಷಸೀ।
02016039c ಸಂಘಟ್ಟಯಾಮಾಸ ತದಾ ವಿಧಾನಬಲಚೋದಿತಾ।।

ಅವನ್ನು ತೆಗೆದುಕೊಂಡು ಹೋಗಲು ಸುಲಭವಾಗಲೆಂದು ಆ ರಾಕ್ಷಸಿಯು, ವಿಧಿಯ ಶಕ್ತಿಯಿಂದ ಪ್ರಚೋದಿತಳಾಗಿ, ಆ ಎರಡು ಅರ್ಧ ಶರೀರಗಳನ್ನು ಒಟ್ಟುಮಾಡಿ ಹಿಡಿದುಕೊಂಡಳು.

02016040a ತೇ ಸಮಾನೀತಮಾತ್ರೇ ತು ಶಕಲೇ ಪುರುಷರ್ಷಭ।
02016040c ಏಕಮೂರ್ತಿಕೃತೇ ವೀರಃ ಕುಮಾರಃ ಸಮಪದ್ಯತ।।

ಪುರುಷರ್ಷಭ! ಆ ಎರಡು ಅರ್ಧಶರೀರಗಳನ್ನು ಒಟ್ಟುಮಾಡಿದ ಕೂಡಲೇ ಒಂದಾಗಿ ವೀರ ಕುಮಾರನ ಶರೀರವನ್ನು ತಾಳಿತು.

02016041a ತತಃ ಸಾ ರಾಕ್ಷಸೀ ರಾಜನ್ವಿಸ್ಮಯೋತ್ಫುಲ್ಲಲೋಚನಾ।
02016041c ನ ಶಶಾಕ ಸಮುದ್ವೋಢುಂ ವಜ್ರಸಾರಮಯಂ ಶಿಶುಂ।।

ರಾಜನ್! ಆಗ ಆ ರಾಕ್ಷಸಿಯು ಆಶ್ಚರ್ಯದಿಂದ ತೆರೆದ ಕಣ್ಣುಗಳಿಂದ ನೋಡಿದಳು. ವಜ್ರದಿಂದ ಮಾಡಿದಂಥಿದ್ದ ಆ ಶಿಶುವನ್ನು ಎತ್ತಿಕೊಂಡು ಹೋಗಲೂ ಅವಳಿಗೆ ಸಾಧ್ಯವಾಗಲಿಲ್ಲ.

02016042a ಬಾಲಸ್ತಾಮ್ರತಲಂ ಮುಷ್ಟಿಂ ಕೃತ್ವಾ ಚಾಸ್ಯೇ ನಿಧಾಯ ಸಃ।
02016042c ಪ್ರಾಕ್ರೋಶದತಿಸಂರಂಭಾತ್ಸತೋಯ ಇವ ತೋಯದಃ।।

ಆ ಬಾಲಕನು ತನ್ನ ಕೈಬೆರಳುಗಳನ್ನು ಮುಷ್ಟಿ ಮಾಡಿಕೊಂಡು ತನ್ನ ಬಾಯಿಯಲ್ಲಿಟ್ಟುಕೊಂಡು ಮಳೆಯ ಮೋಡವು ಒಡೆಯುವಾಗ ಹೇಗೆ ಗುಡುಗುತ್ತದೆಯೋ ಹಾಗೆ ಜೋರಾಗಿ ಅಳತೊಡಗಿದನು.

02016043a ತೇನ ಶಬ್ಧೇನ ಸಂಭ್ರಾಂತಃ ಸಹಸಾಂತಃಪುರೇ ಜನಃ।
02016043c ನಿರ್ಜಗಾಮ ನರವ್ಯಾಘ್ರ ರಾಜ್ಞಾ ಸಹ ಪರಂತಪ।।

ಆ ಶಬ್ಧವನ್ನು ಕೇಳಿ ಸಂಭ್ರಾಂತನಾದ ಪರಂತಪ ನರವ್ಯಾಘ್ರ ರಾಜನು ಅಂತಃಪುರ ಜನರೊಂದಿಗೆ ಹೊರಬಂದನು.

02016044a ತೇ ಚಾಬಲೇ ಪರಿಗ್ಲಾನೇ ಪಯಃಪೂರ್ಣಪಯೋಧರೇ।
02016044c ನಿರಾಶೇ ಪುತ್ರಲಾಭಾಯ ಸಹಸೈವಾಭ್ಯಗಚ್ಛತಾಂ।।

ದುಃಖಿತರಾದ, ನಿರಾಶರಾದ, ಹಾಲುತುಂಬಿದ ಸ್ತನಗಳ ಆ ಅಬಲೆಯರು ಪುತ್ರನನ್ನು ಪಡೆಯಲೋಸುಗ ತಕ್ಷಣವೇ ಓಡಿ ಬಂದರು.

02016045a ಅಥ ದೃಷ್ಟ್ವಾ ತಥಾಭೂತೇ ರಾಜಾನಂ ಚೇಷ್ಟಸಂತತಿಂ।
02016045c ತಂ ಚ ಬಾಲಂ ಸುಬಲಿನಂ ಚಿಂತಯಾಮಾಸ ರಾಕ್ಷಸೀ।।

ಸಂತತಿಯನ್ನು ಬಯಸಿ ಬಂದ ಆ ರಾಜನನ್ನು ಮತ್ತು ಬಲಶಾಲಿ ಮಗುವನ್ನು ನೋಡಿದ ರಾಕ್ಷಸಿಯು ಯೋಚಿಸಿದಳು:

02016046a ನಾರ್ಹಾಮಿ ವಿಷಯೇ ರಾಜ್ಞೋ ವಸಂತೀ ಪುತ್ರಗೃದ್ಧಿನಃ।
02016046c ಬಾಲಂ ಪುತ್ರಮುಪಾದಾತುಂ ಮೇಘಲೇಖೇವ ಭಾಸ್ಕರಂ।।

“ಪುತ್ರನಿಗಾಗಿ ಕೃಪಣನಾದ ಈ ರಾಜನ ರಾಜ್ಯದಲ್ಲಿ ವಾಸಿಸುತ್ತಿರುವ ನಾನು ಬಾಸ್ಕರನ ಕಿರಣಗಳನ್ನು ಕೊಂಡೊಯ್ಯುವ ಮೋಡಗಳಂತೆ ಈ ಬಾಲಕನನ್ನು ಎತ್ತಿಕೊಂಡು ಹೋಗಬಾರದು.”

02016047a ಸಾ ಕೃತ್ವಾ ಮಾನುಷಂ ರೂಪಮುವಾಚ ಮನುಜಾಧಿಪಂ।
02016047c ಬೃಹದ್ರಥ ಸುತಸ್ತೇಽಯಂ ಮದ್ದತ್ತಃ ಪ್ರತಿಗೃಹ್ಯತಾಂ।।

ಅವಳು ಮನುಷ್ಯರೂಪವನ್ನು ಧರಿಸಿ ಮನುಜಾಧಿಪನಿಗೆ ಹೇಳಿದಳು: “ಬೃಹದ್ರಥ! ನಾನು ಕೊಡುತ್ತಿರುವ ಇವನು ನಿನ್ನ ಮಗ. ಸ್ವೀಕರಿಸು.

02016048a ತವ ಪತ್ನೀದ್ವಯೇ ಜಾತೋ ದ್ವಿಜಾತಿವರಶಾಸನಾತ್।
02016048c ಧಾತ್ರೀಜನಪರಿತ್ಯಕ್ತೋ ಮಯಾಯಂ ಪರಿರಕ್ಷಿತಃ।।

ಆ ದ್ವಿಜಶ್ರೇಷ್ಠನ ವರಪ್ರಸಾದದಿಂದ ನಿನ್ನ ಇಬ್ಬರು ಪತ್ನಿಯರಲ್ಲಿ ಜನಿಸಿ, ಸೂಲಗಿತ್ತಿರಿಯರಿಂದ ಪರಿತ್ಯಕ್ತನಾದ ಇವನನ್ನು ನಾನು ರಕ್ಷಿಸಿದ್ದೇನೆ.”

02016049a ತತಸ್ತೇ ಭರತಶ್ರೇಷ್ಠ ಕಾಶಿರಾಜಸುತೇ ಶುಭೇ।
02016049c ತಂ ಬಾಲಮಭಿಪತ್ಯಾಶು ಪ್ರಸ್ನವೈರಭಿಷಿಂಚತಾಂ।।

ಭರತಶ್ರೇಷ್ಠ! ಅನಂತರ ಸುಂದರ ಕಾಶಿರಾಜನ ಸುತೆಯರು ಆ ಬಾಲಕನನ್ನು ಎಳೆದು ಬಿಗಿದಪ್ಪಿ ಹರಿದು ಬರುತ್ತಿದ್ದ ಮೊಲೆಯ ಹಾಲನ್ನು ಅವನ ಮೇಲೆ ಸುರಿಸಿದರು.

02016050a ತತಃ ಸ ರಾಜಾ ಸಂಹೃಷ್ಟಃ ಸರ್ವಂ ತದುಪಲಭ್ಯ ಚ।
02016050c ಅಪೃಚ್ಛನ್ನವಹೇಮಾಭಾಂ ರಾಕ್ಷಸೀಂ ತಾಮರಾಕ್ಷಸೀಂ।।

ಇದನ್ನೆಲ್ಲ ನೋಡಿ ಸಂತೋಷಗೊಂಡ ರಾಜನು ತನ್ನ ಮನುಷ್ಯರೂಪದಲ್ಲಿ ರಾಕ್ಷಸಿಯಂತೆ ತೋರದಿದ್ದ ಹೊಸ ಬಂಗಾರದ ಕಾಂತಿಯುಕ್ತ ಆ ರಾಕ್ಷಸಿಗೆ ಹೇಳಿದನು:

02016051a ಕಾ ತ್ವಂ ಕಮಲಗರ್ಭಾಭೇ ಮಮ ಪುತ್ರಪ್ರದಾಯಿನೀ।
02016051c ಕಾಮಯಾ ಬ್ರೂಹಿ ಕಲ್ಯಾಣಿ ದೇವತಾ ಪ್ರತಿಭಾಸಿ ಮೇ।।

“ನನ್ನ ಮಗನನ್ನು ಇತ್ತ ಕಮಲದ ಕುಸುಮದಂತೆ ಕಾಂತಿಯುಕ್ತಳಾದ ನೀನು ಯಾರು? ಕಲ್ಯಾಣಿ! ನನಗೆ ನಿನ್ನ ಮೇಲುಂಟಾದ ಪ್ರೀತಿಗಾಗಿ ಹೇಳು. ನಿನ್ನ ಪ್ರತಿಭೆಯನ್ನು ನೋಡಿದರೆ ದೇವತೆಯೆಂದು ನನಗನ್ನಿಸುತ್ತದೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಮಂತ್ರಪರ್ವಣಿ ಜರಾಸಂಧೋತ್ಪತ್ತೌ ಷೋಡಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸಭಾಪರ್ವದಲ್ಲಿ ಮಂತ್ರಪರ್ವದಲ್ಲಿ ಜರಾಸಂಧೋತ್ಪತ್ತಿ ಎನ್ನುವ ಹದಿನಾರನೆಯ ಅಧ್ಯಾಯವು.