ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸಭಾ ಪರ್ವ
ಮಂತ್ರ ಪರ್ವ
ಅಧ್ಯಾಯ 15
ಸಾರ
ಸಾಮ್ರಾಟ ಪದವಿಯು ತನ್ನ ವೈಯಕ್ತಿಕ ಬಯಕೆಯಾದರೂ ಭೀಮಾರ್ಜುನರನ್ನು ಅಪಾಯಕ್ಕೀಡುಮಾಡಲು ಯುಧಿಷ್ಠಿರನು ಅಂಜಿಕೊಳ್ಳುವುದು (1-5). ಪಾರ್ಥನು ಆಶ್ವಾಸನೆ ನೀಡುವುದು (6-16).
02015001 ಯುಧಿಷ್ಠಿರ ಉವಾಚ।
02015001a ಸಮ್ರಾಡ್ಗುಣಮಭೀಪ್ಸನ್ವೈ ಯುಷ್ಮಾನ್ಸ್ವಾರ್ಥಪರಾಯಣಃ।
02015001c ಕಥಂ ಪ್ರಹಿಣುಯಾಂ ಭೀಮಂ ಬಲಾತ್ಕೇವಲಸಾಹಸಾತ್।।
ಯುಧಿಷ್ಠಿರನು ಹೇಳಿದನು: “ಸಮ್ರಾಟಪದವಿಯನ್ನು ಪಡೆಯುವುದು ನನ್ನ ವೈಯಕ್ತಿಕ ಬಯಕೆ. ಸ್ವಾರ್ಥಪರಾಯಣನಾದ ನಾನು ಹೇಗೆ ನಿಮ್ಮೆಲ್ಲರನ್ನೂ ಬಲವಂತಮಾಡಿ ಇಂಥಹ ಸಾಹಸಕ್ಕೆ ಕಳುಹಿಸಲಿ?
02015002a ಭೀಮಾರ್ಜುನಾವುಭೌ ನೇತ್ರೇ ಮನೋ ಮನ್ಯೇ ಜನಾರ್ದನಂ।
02015002c ಮನಶ್ಚಕ್ಷುರ್ವಿಹೀನಸ್ಯ ಕೀದೃಶಂ ಜೀವಿತಂ ಭವೇತ್।।
ಜನಾರ್ದನ! ಭೀಮಾರ್ಜುನರಿಬ್ಬರೂ ನನ್ನ ಕಣ್ಣುಗಳಿದ್ದಂತೆ ಎಂದು ನನ್ನ ಅನಿಸಿಕೆ. ಮನಸ್ಸು ಮತ್ತು ಕಣ್ಣುಗಳನ್ನು ಕಳೆದುಕೊಂಡರೆ ನನ್ನ ಜೀವನದಲ್ಲಿ ಉಳಿಯುವುದಾದರೂ ಏನು?
02015003a ಜರಾಸಂಧಬಲಂ ಪ್ರಾಪ್ಯ ದುಷ್ಪಾರಂ ಭೀಮವಿಕ್ರಮಂ।
02015003c ಶ್ರಮೋ ಹಿ ವಃ ಪರಾಜಯ್ಯಾತ್ಕಿಮು ತತ್ರ ವಿಚೇಷ್ಟಿತಂ।।
ಜರಾಸಂಧನ ದುಷ್ಪಾರ ಭೀಮವಿಕ್ರಮ ಬಲವನ್ನು ಎದುರಿಸಿದಾಗ ಕೇವಲ ಶ್ರಮವು ಪರಾಜಯಗೊಳಿಸುತ್ತದೆ. ಇದರಲ್ಲಿ ಅರ್ಥವಾದರೂ ಏನಿದೆ?
02015004a ಅಸ್ಮಿನ್ನರ್ಥಾಂತರೇ ಯುಕ್ತಮನರ್ಥಃ ಪ್ರತಿಪದ್ಯತೇ।
02015004c ಯಥಾಹಂ ವಿಮೃಶಾಮ್ಯೇಕಸ್ತತ್ತಾವಚ್ಶ್ರೂಯತಾಂ ಮಮ।।
ಇದಕ್ಕಿಂತ ಬೇರೆ ಪರಿಣಾಮವಾದರೂ ಅತ್ಯಂತ ಅನರ್ಥವಾಗುವುದು. ಇದರ ಕುರಿತು ನಾನು ಏನು ಯೋಚಿಸುತ್ತಿದ್ದೇನೆ ಎನ್ನುವುದನ್ನು ಕೇಳು.
02015005a ಸಂನ್ಯಾಸಂ ರೋಚಯೇ ಸಾಧು ಕಾರ್ಯಸ್ಯಾಸ್ಯ ಜನಾರ್ದನ।
02015005c ಪ್ರತಿಹಂತಿ ಮನೋ ಮೇಽದ್ಯ ರಾಜಸೂಯೋ ದುರಾಸದಃ।।
ಜನಾರ್ದನ! ಈ ಯೋಜನೆಯನ್ನು ಇಲ್ಲಿಯೇ ಬಿಟ್ಟುಬಿಡುವುದು ಒಳ್ಳೆಯದು ಎಂದು ನನಗನ್ನಿಸುತ್ತಿದೆ. ಈಗ ನನ್ನ ಮನಸ್ಸು ಇದರ ವಿರುದ್ಧವಾಗಿದೆ. ರಾಜಸೂಯವು ಸಾಧ್ಯವಾದುದಲ್ಲ.””
02015006 ವೈಶಂಪಾಯನ ಉವಾಚ।
02015006a ಪಾರ್ಥಃ ಪ್ರಾಪ್ಯ ಧನುಃಶ್ರೇಷ್ಠಮಕ್ಷಯ್ಯೌ ಚ ಮಹೇಷುಧೀ।
02015006c ರಥಂ ಧ್ವಜಂ ಸಭಾಂ ಚೈವ ಯುಧಿಷ್ಠಿರಮಭಾಷತ।।
ವೈಶಂಪಾಯನನು ಹೇಳಿದನು: “ಶ್ರೇಷ್ಠ ಧನುಸ್ಸು, ಎರಡು ಅಕ್ಷಯ ಬತ್ತಳಿಕೆಗಳು, ರಥ, ಧ್ವಜ, ಮತ್ತು ಸಭೆಯನ್ನು ಪಡೆದ ಮಹಾಯೋಧ ಪಾರ್ಥನು ಯುಧಿಷ್ಠಿರನಿಗೆ ಹೇಳಿದನು:
02015007a ಧನುರಸ್ತ್ರಂ ಶರಾ ವೀರ್ಯಂ ಪಕ್ಷೋ ಭೂಮಿರ್ಯಶೋ ಬಲಂ।
02015007c ಪ್ರಾಪ್ತಮೇತನ್ಮಯಾ ರಾಜನ್ದುಷ್ಪ್ರಾಪಂ ಯದಭೀಪ್ಸಿತಂ।।
“ರಾಜನ್! ಬಯಸಿದರೂ ದೊರಕಲು ಕಷ್ಟವಾದ ಧನಸ್ಸು, ಅಸ್ತ್ರ, ಬಾಣಗಳು, ವೀರ್ಯ, ಬೆಂಬಲಿಗರು, ಭೂಮಿ, ಯಶಸ್ಸು, ಬಲಗಳನ್ನು ನಾನು ಪಡೆದಿದ್ದೇನೆ.
02015008a ಕುಲೇ ಜನ್ಮ ಪ್ರಶಂಸಂತಿ ವೈದ್ಯಾಃ ಸಾಧು ಸುನಿಷ್ಠಿತಾಃ।
02015008c ಬಲೇನ ಸದೃಶಂ ನಾಸ್ತಿ ವೀರ್ಯಂ ತು ಮಮ ರೋಚತೇ।।
ತಿಳಿದವರು ಉತ್ತಮ ಕುಲದಲ್ಲಿ ಜನಿಸಿದವರನ್ನು ಮತ್ತು ಸತ್ಕರ್ಮದಲ್ಲಿ ತೊಡಗಿದವರನ್ನು ಪ್ರಶಂಸಿಸುತ್ತಾರೆ. ಆದರೆ ಬಲದ ಸದೃಶವಾದುದ್ದು ಇಲ್ಲ ಮತ್ತು ಸಾಹಸವು ನನಗೆ ಇಷ್ಟವಾಗುತ್ತದೆ.
02015009a ಕೃತವೀರ್ಯಕುಲೇ ಜಾತೋ ನಿರ್ವೀರ್ಯಃ ಕಿಂ ಕರಿಷ್ಯತಿ।
02015009c ಕ್ಷತ್ರಿಯಃ ಸರ್ವಶೋ ರಾಜನ್ಯಸ್ಯ ವೃತ್ತಿಃ ಪರಾಜಯೇ।।
ವೀರ ಕುಲದಲ್ಲಿ ಹುಟ್ಟಿದವನು ನಿರ್ವೀರ್ಯನಾಗಿ ಏನನ್ನು ಸಾಧಿಸುತ್ತಾನೆ? ರಾಜನ್! ಎಲ್ಲೆಡೆಯೂ ಸೋಲಿಸುವುದನ್ನೇ ಪ್ರವೃತ್ತಿಯನ್ನಾಗಿಸಿಕೊಂಡವನು ಕ್ಷತ್ರಿಯನೆನೆಸಿಕೊಳ್ಳುತ್ತಾನೆ.
02015010a ಸರ್ವೈರಪಿ ಗುಣೈರ್ಹೀನೋ ವೀರ್ಯವಾನ್ ಹಿ ತರೇದ್ರಿಪೂನ್।
02015010c ಸರ್ವೈರಪಿ ಗುಣೈರ್ಯುಕ್ತೋ ನಿರ್ವೀರ್ಯಃ ಕಿಂ ಕರಿಷ್ಯತಿ।।
ಸರ್ವಗುಣಹೀನನೂ ಕೂಡ ವೀರ್ಯವಂತನಾಗಿದ್ದರೆ ಶತ್ರುಗಳನ್ನು ಸೋಲಿಸುತ್ತಾನೆ. ಆದರೆ ಸರ್ವಗುಣಯುಕ್ತನಾಗಿದ್ದರೂ ನಿರ್ವೀರ್ಯನಾಗಿದ್ದರೆ ಏನು ತಾನೆ ಮಾಡಿಯಾನು?
02015011a ದ್ರವ್ಯಭೂತಾ ಗುಣಾಃ ಸರ್ವೇ ತಿಷ್ಠಂತಿ ಹಿ ಪರಾಕ್ರಮೇ।
02015011c ಜಯಸ್ಯ ಹೇತುಃ ಸಿದ್ಧಿರ್ಹಿ ಕರ್ಮ ದೈವಂ ಚ ಸಂಶ್ರಿತಂ।।
ಬಳಸಬಹುದಾದ ಸರ್ವಗುಣಗಳೂ ಪರಾಕ್ರಮಿಯಲ್ಲಿವೆ. ಸಿದ್ಧಿ, ಕಾರ್ಯ, ದೈವಗಳು ಒಟ್ಟಿಗೇ ಜಯಕ್ಕೆ ಕಾರಣವಾಗುತ್ತವೆ.
02015012a ಸಂಯುಕ್ತೋ ಹಿ ಬಲೈಃ ಕಶ್ಚಿತ್ಪ್ರಮಾದಾನ್ನೋಪಯುಜ್ಯತೇ।
02015012c ತೇನ ದ್ವಾರೇಣ ಶತ್ರುಭ್ಯಃ ಕ್ಷೀಯತೇ ಸಬಲೋ ರಿಪುಃ।।
ಒಮ್ಮೊಮ್ಮೆ ಈ ಬಲಗಳಿಂದ ಕೂಡಿದವನೂ ಪ್ರಮಾದಕ್ಕೊಳಗಾಗಿ ಶತ್ರುವಿನ ದ್ವಾರದಲ್ಲಿಯೇ ತನ್ನ ಬಲವನ್ನು ಕಡಿಮೆಮಾಡಿಕೊಳ್ಳಬಹುದು.
02015013a ದೈನ್ಯಂ ಯಥಾಬಲವತಿ ತಥಾ ಮೋಹೋ ಬಲಾನ್ವಿತೇ।
02015013c ತಾವುಭೌ ನಾಶಕೌ ಹೇತೂ ರಾಜ್ಞಾ ತ್ಯಾಜ್ಯೌ ಜಯಾರ್ಥಿನಾ।।
ಬಲವಿಲ್ಲದವನು ಹೇಗೆ ದೀನನೋ ಹಾಗೆ ಬಲಾನ್ವಿತನು ಎಲ್ಲರಿಗೂ ಬೇಕಾದವನು. ಜಯವನ್ನು ಬಯಸುವ ರಾಜನು ಇವೆರಡೂ ನಾಶಕಾರಕ ಕಾರಣಗಳನ್ನು ತೊರೆಯಬೇಕು.
02015014a ಜರಾಸಂಧವಿನಾಶಂ ಚ ರಾಜ್ಞಾಂ ಚ ಪರಿಮೋಕ್ಷಣಂ।
02015014c ಯದಿ ಕುರ್ಯಾಮ ಯಜ್ಞಾರ್ಥಂ ಕಿಂ ತತಃ ಪರಮಂ ಭವೇತ್।।
ಯಜ್ಞಕ್ಕೋಸ್ಕರ ನಾವು ಜರಾಸಂಧನ ವಿನಾಶ ಮತ್ತು ರಾಜರ ವಿಮೋಚನೆಯನ್ನು ಸಾಧಿಸಿದರೆ ಇದಕ್ಕಿಂತಲೂ ಹೆಚ್ಚಿನದು ಏನಾಗಬಹುದು?
02015015a ಅನಾರಂಭೇ ತು ನಿಯತೋ ಭವೇದಗುಣನಿಶ್ಚಯಃ।
02015015c ಗುಣಾನ್ನಿಃಸಂಶಯಾದ್ರಾಜನ್ನೈರ್ಗುಣ್ಯಂ ಮನ್ಯಸೇ ಕಥಂ।।
ಇದಕ್ಕೆ ನಾವು ಹಿಂಜರಿದರೆ ನಮ್ಮಲ್ಲಿ ಗುಣವಿಲ್ಲವೆಂದಾಗುವುದು ನಿಶ್ಚಯ. ರಾಜನ್! ನಿಃಸಂಶಯ ಗುಣಕ್ಕಿಂತಲೂ ನಿರ್ಗುಣವನ್ನು ನೀನು ಹೇಗೆ ಗೌರವಿಸುತ್ತೀಯೆ?
02015016a ಕಾಷಾಯಂ ಸುಲಭಂ ಪಶ್ಚಾನ್ಮುನೀನಾಂ ಶಮಮಿಚ್ಛತಾಂ।
02015016c ಸಾಮ್ರಾಜ್ಯಂ ತು ತವೇಚ್ಛಂತೋ ವಯಂ ಯೋತ್ಸ್ಯಾಮಹೇ ಪರೈಃ।।
ನಿನ್ನನ್ನು ಸಾಮ್ರಾಟನನ್ನಾಗಿಸಲು ನಾವು ಶತ್ರುಗಳೊಂದಿಗೆ ಹೋರಾಡುತ್ತೇವೆ. ನಂತರ ಶಾಂತಿಯನ್ನು ಬಯಸುವ ಮುನಿಗಳಿಗೆ ಸುಲಭವಾಗಿ ಕಾಷಾಯವು ದೊರೆಯುತ್ತದೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಮಂತ್ರಪರ್ವಣಿ ಜರಾಸಂಧವಧಮಂತ್ರಣೇ ಪಂಚದಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸಭಾಪರ್ವದಲ್ಲಿ ಮಂತ್ರಪರ್ವದಲ್ಲಿ ಜರಾಸಂಧವಧಮಂತ್ರಣ ಎನ್ನುವ ಹದಿನೈದನೆಯ ಅಧ್ಯಾಯವು.