014 ಕೃಷ್ಣವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸಭಾ ಪರ್ವ

ಮಂತ್ರ ಪರ್ವ

ಅಧ್ಯಾಯ 14

ಸಾರ

ಯುಧಿಷ್ಠಿರನು ಇತರ ಕ್ಷತ್ರಿಯರನ್ನು ಎದಿರುಹಾಕಿಕೊಳ್ಳಲು ಹಿಂಜರಿಯುವುದು (1-6). ಭೀಮನು ರಾಜನಲ್ಲಿ ಸಾಹಸಪ್ರವೃತ್ತಿಯಿರಬೇಕೆಂದು ರಾಜಸೂಯಕ್ಕೆ ಪ್ರೋತ್ಸಾಹಿಸುವುದು (7-9). ಜರಾಸಂಧನನ್ನು ಸೋಲಿಸಿದವನು ಸಾಮ್ರಾಟನಾಗಬಲ್ಲ ಎಂದು ಕೃಷ್ಣನು ಹೇಳುವುದು (10-20).

02014001 ಯುಧಿಷ್ಠಿರ ಉವಾಚ।
02014001a ಉಕ್ತಂ ತ್ವಯಾ ಬುದ್ಧಿಮತಾ ಯನ್ನಾನ್ಯೋ ವಕ್ತುಮರ್ಹತಿ।
02014001c ಸಂಶಯಾನಾಂ ಹಿ ನಿರ್ಮೋಕ್ತಾ ತ್ವನ್ನಾನ್ಯೋ ವಿದ್ಯತೇ ಭುವಿ।।

ಯುಧಿಷ್ಠಿರನು ಹೇಳಿದನು: “ಬುದ್ಧಿವಂತ! ಯಾರಿಗೂ ಹೇಳಲು ಸಾಧ್ಯವಾಗದೇ ಇದ್ದುದನ್ನು ನೀನು ಹೇಳಿದ್ದೀಯೆ. ನೀನಲ್ಲದೇ ಭುವಿಯಲ್ಲಿ ಬೇರೆ ಯಾರಿಗೂ ಸಂಶಯಗಳನ್ನು ನಿರ್ಮೂಲನೆ ಮಾಡುವುದು ತಿಳಿದಿಲ್ಲ!

02014002a ಗೃಹೇ ಗೃಹೇ ಹಿ ರಾಜಾನಃ ಸ್ವಸ್ಯ ಸ್ವಸ್ಯ ಪ್ರಿಯಂಕರಾಃ।
02014002c ನ ಚ ಸಾಂರಾಜ್ಯಮಾಪ್ತಾಸ್ತೇ ಸಮ್ರಾತ್ ಶಬ್ಧೋ ಹಿ ಕೃತ್ಸ್ನಭಾಕ್।।

ರಾಜರ ಮನೆ ಮನೆಗಳಲ್ಲಿ ಅವರವರದ್ದೇ ಮೆಚ್ಚಿನವರಿರುತ್ತಾರೆ. ಆದರೆ ಅವರ್ಯಾರೂ ಎಲ್ಲರನ್ನೂ ಒಳಗೊಂಡ ಸಾಮ್ರಾಟ ಎನ್ನುವ ಪದವಿಯನ್ನು ಪಡೆಯಲಿಲ್ಲ.

02014003a ಕಥಂ ಪರಾನುಭಾವಜ್ಞಃ ಸ್ವಂ ಪ್ರಶಂಸಿತುಮರ್ಹತಿ।
02014003c ಪರೇಣ ಸಮವೇತಸ್ತು ಯಃ ಪ್ರಶಸ್ತಃ ಸ ಪೂಜ್ಯತೇ।।

ಇನ್ನೊಬ್ಬರ ಶಕ್ತಿಯನ್ನು ತಿಳಿದಿದ್ದವನು ತನ್ನನ್ನು ತಾನೇ ಹೊಗಳಿಕೊಳ್ಳಬಹುದು? ಇತರರಿಗೆ ಹೋಲಿಸಿ ಯಾರನ್ನು ಪ್ರಶಂಸಿಸುತ್ತಾರೋ ಅವರಿಗೇ ನಿಜವಾದ ಗೌರವ.

02014004a ವಿಶಾಲಾ ಬಹುಲಾ ಭೂಮಿರ್ಬಹುರತ್ನಸಮಾಚಿತಾ।
02014004c ದೂರಂ ಗತ್ವಾ ವಿಜಾನಾತಿ ಶ್ರೇಯೋ ವೃಷ್ಣಿಕುಲೋದ್ವಹ।।

ಭೂಮಿಯು ಬಹಳ ವಿಶಾಲವಾಗಿದೆ ಮತ್ತು ಬಹಳ ರತ್ನಗಳಿಂದ ಕೂಡಿದೆ. ವೃಷ್ಣಿಕುಲೋದ್ದಹ! ದೂರ ಹೋದರೆ ಮಾತ್ರ ಯಾವುದು ಒಳ್ಳೆಯದೆಂದು ತಿಳಿಯಲು ಸಾಧ್ಯ.

02014005a ಶಮಮೇವ ಪರಂ ಮನ್ಯೇ ನ ತು ಮೋಕ್ಷಾದ್ಭವೇಚ್ಛಮಃ।
02014005c ಆರಂಭೇ ಪಾರಮೇಷ್ಠ್ಯಂ ತು ನ ಪ್ರಾಪ್ಯಮಿತಿ ಮೇ ಮತಿಃ।।

ಶಮೆಯೇ ಅತ್ಯುತ್ತಮವೆಂದು ನನ್ನ ಅನಿಸಿಕೆ. ಅವರನ್ನು ಬಿಡುಗಡೆಮಾಡಿಸುವುದರಿಂದ ಶಮೆಯು ದೊರಕುವುದಿಲ್ಲ. ಯಜ್ಞವನ್ನು ಪ್ರಾರಂಭಿಸಿದರೆ ಅದು ದೊರಕುವುದಿಲ್ಲ ಎನ್ನುವುದು ನನ್ನ ಅಭಿಪ್ರಾಯ.

02014006a ಏವಮೇವಾಭಿಜಾನಂತಿ ಕುಲೇ ಜಾತಾ ಮನಸ್ವಿನಃ।
02014006c ಕಶ್ಚಿತ್ಕದಾ ಚಿದೇತೇಷಾಂ ಭವೇಚ್ಛ್ರೇಷ್ಠೋ ಜನಾರ್ದನ।।

ಜನಾರ್ದನ! ಒಳ್ಳೆಯ ಕುಲದಲ್ಲಿ ಹುಟ್ಟಿದ ಮನಸ್ವಿಗಳೆಲ್ಲರೂ ಇದೇ ಅಭಿಪ್ರಾಯ ಪಡುತ್ತಾರೆ. ಬಹುಷಃ ಯಾವಾಗಲೋ ಅವರಲ್ಲಿಯೇ ಒಬ್ಬನು ಶ್ರೇಷ್ಠನೆನೆಸಿಕೊಳ್ಳುತ್ತಾನೆ.”

02014007 ಭೀಮ ಉವಾಚ।
02014007a ಅನಾರಂಭಪರೋ ರಾಜಾ ವಲ್ಮೀಕ ಇವ ಸೀದತಿ।
02014007c ದುರ್ಬಲಶ್ಚಾನುಪಾಯೇನ ಬಲಿನಂ ಯೋಽಧಿತಿಷ್ಠತಿ।।

ಭೀಮನು ಹೇಳಿದನು: “ಸಾಹಸಪ್ರವೃತ್ತಿಯಿಲ್ಲದ ರಾಜನು ಹುತ್ತದಂತೆ ಕುಸಿಯುತ್ತಾನೆ. ಉಪಾಯವಿಲ್ಲದ ಬಲಶಾಲಿಯೂ ದುರ್ಬಲನೆಂದೇ ಪರಿಗಣಿಸಲ್ಪಡುತ್ತಾನೆ.

02014008a ಅತಂದ್ರಿತಸ್ತು ಪ್ರಾಯೇಣ ದುರ್ಬಲೋ ಬಲಿನಂ ರಿಪುಂ।
02014008c ಜಯೇತ್ಸಮ್ಯಮ್ನಯೋ ರಾಜನ್ನೀತ್ಯಾರ್ಥಾನಾತ್ಮನೋ ಹಿತಾನ್।।

ಆದರೆ, ಓರ್ವ ದುರ್ಬಲನು ಉಪಾಯದಿಂದ ಬಲಶಾಲಿ ಶತ್ರುವನ್ನು ಸೋಲಿಸಬಹುದು. ರಾಜನ್! ಅವನ ಯೋಜನೆಯು ಸರಿಯಾದುದಾಗಿತ್ತೆಂದರೆ ಅವನು ತನಗೆ ಹಿತವಾದುದನ್ನು ಸಾಧಿಸಬಹುದು.

02014009a ಕೃಷ್ಣೇ ನಯೋ ಮಯಿ ಬಲಂ ಜಯಃ ಪಾರ್ಥೇ ಧನಂಜಯೇ।
02014009c ಮಾಗಧಂ ಸಾಧಯಿಷ್ಯಾಮೋ ವಯಂ ತ್ರಯ ಇವಾಗ್ನಯಃ।।

ಕೃಷ್ಣನಲ್ಲಿ ಯೋಜನೆಯಿದೆ. ನನ್ನಲ್ಲಿ ಶಕ್ತಿಯಿದೆ. ಮತ್ತು ಪಾರ್ಥ ಧನಂಜಯನಲ್ಲಿ ಜಯವಿದೆ. ಮೂರು ಅಗ್ನಿಗಳಂತೆ ನಾವು ಮಾಗಧನನ್ನು ಗೆಲ್ಲಬಹುದು.”

02014010 ಕೃಷ್ಣ ಉವಾಚ।
02014010a ಆದತ್ತೇಽರ್ಥಪರೋ ಬಾಲೋ ನಾನುಬಂಧಮವೇಕ್ಷತೇ।
02014010c ತಸ್ಮಾದರಿಂ ನ ಮೃಷ್ಯಂತಿ ಬಾಲಮರ್ಥಪರಾಯಣಂ।।

ಕೃಷ್ಣನು ಹೇಳಿದನು: “ತನ್ನ ಲಾಭವನ್ನೇ ಅನುಸರಿಸುತ್ತಿರುವ ಮೂರ್ಖನು ಆಗುವ ಪರಿಣಾಮಗಳನ್ನು ಗಮನಿಸುವುದಿಲ್ಲ. ಆದುದರಿಂದ ಅವರು ಲಾಭದ ಹಿಂದೆಹೋಗುತ್ತಿರುವ ಮೂರ್ಖ ಶತ್ರುಗಳನ್ನು ಸಹಿಸುವುದಿಲ್ಲ.

02014011a ಹಿತ್ವಾ ಕರಾನ್ಯೌವನಾಶ್ವಃ ಪಾಲನಾಚ್ಚ ಭಗೀರಥಃ।
02014011c ಕಾರ್ತವೀರ್ಯಸ್ತಪೋಯೋಗಾದ್ಬಲಾತ್ತು ಭರತೋ ವಿಭುಃ।
02014011e ಋದ್ಧ್ಯಾ ಮರುತ್ತಸ್ತಾನ್ಪಂಚ ಸಮ್ರಾಜ ಇತಿ ಶುಶ್ರುಮಃ।।

ತೆರಿಗೆಯಿಲ್ಲದಂತೆ ಮಾಡಿ ಯೌವನಾಶ್ವ, ಪ್ರಜಾಪಾಲನೆಯ ಮೂಲಕ ಭಗೀರಥ, ತಪೋಯೋಗದ ಮೂಲಕ ಕಾರ್ತವೀರ್ಯ, ಬಲದಿಂದ ವಿಭು ಭರತ, ಮತ್ತು ಸಂಪತ್ತಿನ ಮೂಲಕ ಮರುತ್ತ ಈ ಐವರು ಸಾಮ್ರಾಟರೆನಿಸಿಕೊಂಡರೆಂದು ಕೇಳಿದ್ದೇವೆ.

02014012a ನಿಗ್ರಾಹ್ಯಲಕ್ಷಣಂ ಪ್ರಾಪ್ತೋ ಧರ್ಮಾರ್ಥನಯಲಕ್ಷಣೈಃ।
02014012c ಬಾರ್ಹದ್ರಥೋ ಜರಾಸಂಧಸ್ತದ್ವಿದ್ಧಿ ಭರತರ್ಷಭ।।

ಭರತರ್ಷಭ! ಈಗ ಬಾರ್ಹದತ್ತ ಜರಾಸಂಧನನ್ನು ಧರ್ಮ, ಲಾಭ ಮತ್ತು ನ್ಯಾಯಗಳಿಂದ ನಿಗ್ರಹಿಸುವ ಸೂಚನೆಯು ಬಂದೊದಗಿದೆ ಎಂದು ತಿಳಿ.

02014013a ನ ಚೈನಮನುರುಧ್ಯಂತೇ ಕುಲಾನ್ಯೇಕಶತಂ ನೃಪಾಃ।
02014013c ತಸ್ಮಾದೇತದ್ಬಲಾದೇವ ಸಾಮ್ರಾಜ್ಯಂ ಕುರುತೇಽದ್ಯ ಸಃ।।

ನೂರಾ‌ಒಂದು ಕುಲಗಳ ನೃಪರು ಅವನಿಗೆ ತಕ್ಕಂತೆ ನಡೆದುಕೊಳ್ಳಲು ಬಯಸುವುದಿಲ್ಲ. ಆದುದರಿಂದಲೇ ಅವನು ತನ್ನ ಬಲದಿಂದ ರಾಜ್ಯಭಾರ ಮಾಡುತ್ತಿದ್ದಾನೆ.

02014014a ರತ್ನಭಾಜೋ ಹಿ ರಾಜಾನೋ ಜರಾಸಂಧಮುಪಾಸತೇ।
02014014c ನ ಚ ತುಷ್ಯತಿ ತೇನಾಪಿ ಬಾಲ್ಯಾದನಯಮಾಸ್ಥಿತಃ।।

ಸಂಪತ್ತಿಗೆ ಭಾಗಧಾರ ರಾಜರು ಜರಾಸಂಧನನ್ನು ಗೌರವಿಸುತ್ತಾರೆ. ಆದರೆ ಬಾಲ್ಯದಿಂದಲೇ ಅನ್ಯಾಯದಲ್ಲಿ ನಿರತನಾಗಿದ್ದ ಅವನಿಗೆ ಇದೂ ಕೂಡ ತೃಪ್ತಿಯನ್ನು ನೀಡುತ್ತಿಲ್ಲ.

02014015a ಮೂರ್ಧಾಭಿಷಿಕ್ತಂ ನೃಪತಿಂ ಪ್ರಧಾನಪುರುಷಂ ಬಲಾತ್।
02014015c ಆದತ್ತೇ ನ ಚ ನೋ ದೃಷ್ಟೋಽಭಾಗಃ ಪುರುಷತಃ ಕ್ವ ಚಿತ್।।

ಅವನು ಮೂರ್ಧಾಭಿಷಿಕ್ತ ನೃಪತಿ ಮುಖ್ಯ ಪುರುಷರನ್ನು ಬಲಾತ್ಕಾರವಾಗಿ ಸೋರೆಹೊಡೆಯುತ್ತಾನೆ. ಅವನಿಗೆ ಕಪ್ಪವನ್ನು ಕೊಡದೇ ಇರುವ ಪುರುಷರು ಯಾರನ್ನೂ ನೋಡಿಲ್ಲ.

02014016a ಏವಂ ಸರ್ವಾನ್ವಶೇ ಚಕ್ರೇ ಜರಾಸಂಧಃ ಶತಾವರಾನ್।
02014016c ತಂ ದುರ್ಬಲತರೋ ರಾಜಾ ಕಥಂ ಪಾರ್ಥ ಉಪೈಷ್ಯತಿ।।

ಈ ರೀತಿ ಜರಾಸಂಧನು ಸರ್ವರನ್ನೂ ತನ್ನ ವಶದಲ್ಲಿ ಇರಿಸಿಕೊಂಡಿದ್ದಾನೆ - ಅಂಥವರ ಸಂಖ್ಯೆ ಸುಮಾರು ನೂರರ ಹತ್ತಿರವಿದೆ. ಪಾರ್ಥ! ಅಂಥಹವನ ಮೇಲೆ ಓರ್ವ ದುರ್ಬಲ ರಾಜನು ಹೇಗೆ ತಾನೆ ಧಾಳಿಯಿಡಬಹುದು?

02014017a ಪ್ರೋಕ್ಷಿತಾನಾಂ ಪ್ರಮೃಷ್ಟಾನಾಂ ರಾಜ್ಞಾಂ ಪಶುಪತೇರ್ಗೃಹೇ।
02014017c ಪಶೂನಾಮಿವ ಕಾ ಪ್ರೀತಿರ್ಜೀವಿತೇ ಭರತರ್ಷಭ।।

ಭರತರ್ಷಭ! ಪಶುಪತಿಯ ಮನೆಯಲ್ಲಿ ಬಲಿಪಶುಗಳಂತೆ ಪ್ರೋಕ್ಷಣೆಮಾಡಿ ಶುದ್ಧಪಡಿಸಿದ ರಾಜರು ಹೇಗೆ ತಾನೆ ಜೀವಿತವಾಗಿರಲು ಬಯಸುತ್ತಾರೆ?

02014018a ಕ್ಷತ್ರಿಯಃ ಶಸ್ತ್ರಮರಣೋ ಯದಾ ಭವತಿ ಸತ್ಕೃತಃ।
02014018c ನನು ಸ್ಮ ಮಾಗಧಂ ಸರ್ವೇ ಪ್ರತಿಬಾಧೇಮ ಯದ್ವಯಂ।।

ಶಸ್ತ್ರದಿಂದ ಮರಣಹೊಂದಿದ ಕ್ಷತ್ರಿಯನು ಗೌರವಿಸಲ್ಪಡುತ್ತಾನೆ. ಹೀಗಿರುವಾಗ ನಾವೆಲ್ಲರೂ ಸೇರಿ ಮಾಗಧನನ್ನು ಎದುರಿಸಬಾರದೇ?

02014019a ಷಡಶೀತಿಃ ಸಮಾನೀತಾಃ ಶೇಷಾ ರಾಜಂಶ್ಚತುರ್ದಶ।
02014019c ಜರಾಸಂಧೇನ ರಾಜಾನಸ್ತತಃ ಕ್ರೂರಂ ಪ್ರಪತ್ಸ್ಯತೇ।।

ರಾಜನ್! ಎಂಭತ್ತಾರು ರಾಜರು ಜರಾಸಂಧನ ಕಾರಗೃಹದಲ್ಲಿ ಬಂಧಿತರಾಗಿದ್ದಾರೆ. ಇನ್ನು ಉಳಿದ ಹದಿನಾಲ್ಕು ರಾಜರುಗಳ ನಂತರ ಅವನ ಕ್ರೂರಕೃತ್ಯವನ್ನು ನೆರವೇರಿಸುತ್ತಾನೆ.

02014020a ಪ್ರಾಪ್ನುಯಾತ್ಸ ಯಶೋ ದೀಪ್ತಂ ತತ್ರ ಯೋ ವಿಘ್ನಮಾಚರೇತ್।
02014020c ಜಯೇದ್ಯಶ್ಚ ಜರಾಸಂಧಂ ಸ ಸಮ್ರಾಣ್ನಿಯತಂ ಭವೇತ್।।

ಇದರಲ್ಲಿ ಅವನಿಗೆ ವಿಘ್ನವನ್ನು ತರುವವನು ಬೆಳಗುವ ಯಶಸ್ಸನ್ನು ಹೊಂದುತ್ತಾನೆ. ಮತ್ತು ಜರಾಸಂಧನ ಮೇಲೆ ವಿಜಯವನ್ನು ಗಳಿಸಿದವನು ನಿಶ್ಚಯವಾಗಿಯೂ ಸಾಮ್ರಾಟನಾಗುತ್ತಾನೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಮಂತ್ರಪರ್ವಣಿ ಕೃಷ್ಣವಾಕ್ಯೇ ಚತುರ್ದಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸಭಾಪರ್ವದಲ್ಲಿ ಮಂತ್ರಪರ್ವದಲ್ಲಿ ಕೃಷ್ಣವಾಕ್ಯ ಎನ್ನುವ ಹದಿನಾಲ್ಕನೆಯ ಅಧ್ಯಾಯವು.