013 ಕೃಷ್ಣವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸಭಾ ಪರ್ವ

ಮಂತ್ರ ಪರ್ವ

ಅಧ್ಯಾಯ 13

ಸಾರ

ಭಾರತ ವರ್ಷದಲ್ಲಿರುವ ರಾಜರ ಮತ್ತು ಶತ್ರು-ಮಿತ್ರರ ಕುರಿತು, ಶ್ರೀಕೃಷ್ಣನು ವಿಶ್ಲೇಷಣೆ ನೀಡಿದುದು (1-46). ಮಗಧದ ಜರಾಸಂಧನ ವರ್ಣನೆ; ಅವನನ್ನು ವಧಿಸಿ ಬಂಧನದಲ್ಲಿರುವ ರಾಜರನ್ನು ಬಿಡುಗಡೆಮಾಡಿದರೆ ರಾಜಸೂಯವನ್ನು ಪ್ರಾರಂಭಿಸಬಹುದೆಂದು ಕೃಷ್ಣನ ಸಲಹೆ (47-68).

02013001 ಶ್ರೀಕೃಷ್ಣ ಉವಾಚ।
02013001a ಸರ್ವೈರ್ಗುಣೈರ್ಮಹಾರಾಜ ರಾಜಸೂಯಂ ತ್ವಮರ್ಹಸಿ।
02013001c ಜಾನತಸ್ತ್ವೇವ ತೇ ಸರ್ವಂ ಕಿಂ ಚಿದ್ವಕ್ಷ್ಯಾಮಿ ಭಾರತ।।

ಶ್ರೀಕೃಷ್ಣನು ಹೇಳಿದನು: “ಮಹಾರಾಜ! ನಿನ್ನ ಸರ್ವಗುಣಗಳಿಂದಾಗಿ ನೀನು ರಾಜಸೂಯವನ್ನು ಮಾಡಲು ಅರ್ಹನಾಗಿದ್ದೀಯೆ. ಭಾರತ! ಆದರೆ, ನಿನಗೆ ಇದೆಲ್ಲ ತಿಳಿದಿದ್ದರೂ ಕೆಲವು ವಿಷಯಗಳನ್ನು ಹೇಳುತ್ತೇನೆ.

02013002a ಜಾಮದಗ್ನ್ಯೇನ ರಾಮೇಣ ಕ್ಷತ್ರಂ ಯದವಶೇಷಿತಂ।
02013002c ತಸ್ಮಾದವರಜಂ ಲೋಕೇ ಯದಿದಂ ಕ್ಷತ್ರಸಂಜ್ಞಿತಂ।।

ಈಗ ಕ್ಷತ್ರಿಯರೆಂದು ಯಾರು ತಿಳಿಯಲ್ಪಟ್ಟಿದ್ದಾರೋ ಅವರೆಲ್ಲರೂ ಜಾಮದಗ್ನಿ ರಾಮನು ಉಳಿಸಿದ ಕ್ಷತ್ರಿಯರಿಂದಲೇ ಹುಟ್ಟಿದ್ದಾರೆ.

02013003a ಕೃತೋಽಯಂ ಕುಲಸಂಕಲ್ಪಃ ಕ್ಷತ್ರಿಯೈರ್ವಸುಧಾಧಿಪ।
02013003c ನಿದೇಶವಾಗ್ಭಿಸ್ತತ್ತೇ ಹ ವಿದಿತಂ ಭರತರ್ಷಭ।।

ಭರತರ್ಷಭ! ವಸುಧಾಧಿಪ! ಈಗಿನ ಕ್ಷತ್ರಿಯರು ತಮ್ಮ ಕುಲಸಂಕಲ್ಪಗಳನ್ನು ಅವರವರ ಮಾತಿನ ಅಧಿಕಾರದಂತೆ ಮಾಡಿಕೊಂಡಿದ್ದಾರೆ.

02013004a ಐಲಸ್ಯೇಕ್ಷ್ವಾಕುವಂಶಸ್ಯ ಪ್ರಕೃತಿಂ ಪರಿಚಕ್ಷತೇ।
02013004c ರಾಜಾನಃ ಶ್ರೇಣಿಬದ್ಧಾಶ್ಚ ತತೋಽನ್ಯೇ ಕ್ಷತ್ರಿಯಾ ಭುವಿ।।

ಈ ಭುವಿಯಲ್ಲಿರುವ ರಾಜರುಗಳ ಮತ್ತು ಇತರ ಶ್ರೇಣಿಬದ್ಧ ಕ್ಷತ್ರಿಯರು ಇಲ ಮತ್ತು ಇಕ್ಷ್ವಾಕು ವಂಶಗಳಿಂದ ಬಂದಿದ್ದವೆಂದು ಪರಿಗಣಿಸುತ್ತಾರೆ.

02013005a ಐಲವಂಶ್ಯಾಸ್ತು ಯೇ ರಾಜಂಸ್ತಥೈವೇಕ್ಷ್ವಾಕವೋ ನೃಪಾಃ।
02013005c ತಾನಿ ಚೈಕಶತಂ ವಿದ್ಧಿ ಕುಲಾನಿ ಭರತರ್ಷಭ।।

ರಾಜನ್! ಭರತರ್ಷಭ! ಇಲ ಮತ್ತು ಇಕ್ಷ್ವಾಕು ವಂಶದ ನೃಪರ ನೂರಾ ಒಂದು ಕುಲಗಳಿವೆ ಎಂದು ತಿಳಿ.

02013006a ಯಯಾತೇಸ್ತ್ವೇವ ಭೋಜಾನಾಂ ವಿಸ್ತರೋಽತಿಗುಣೋ ಮಹಾನ್।
02013006c ಭಜತೇ ಚ ಮಹಾರಾಜ ವಿಸ್ತರಃ ಸ ಚತುರ್ದಿಶಂ।।
02013007a ತೇಷಾಂ ತಥೈವ ತಾಂ ಲಕ್ಷ್ಮೀಂ ಸರ್ವಕ್ಷತ್ರಮುಪಾಸತೇ।

ಯಯಾತಿ ಮತ್ತು ಭೋಜರ ಎರಡು ಮಹಾ ಕವಲುಗಳು ನಾಲ್ಕೂ ದಿಶೆಯಲ್ಲಿ ಹರಡಿವೆ. ಮಹಾರಾಜ! ಹೀಗೆ ಎಲ್ಲ ಕ್ಷತ್ರಿಯರೂ ಅವರವರ ಕುಲವನ್ನು ಗೌರವಿಸುತ್ತಾರೆ.

02013007c ಸೋಽವನೀಂ ಮಧ್ಯಮಾಂ ಭುಕ್ತ್ವಾ ಮಿಥೋಭೇದೇಷ್ವಮನ್ಯತ।।
02013008a ಚತುರ್ಯುಸ್ತ್ವಪರೋ ರಾಜಾ ಯಸ್ಮಿನ್ನೇಕಶತೋಽಭವತ್।
02013008c ಸ ಸಾಮ್ರಾಜ್ಯಂ ಜರಾಸಂಧಃ ಪ್ರಾಪ್ತೋ ಭವತಿ ಯೋನಿತಃ।।

ಮಧ್ಯ ಭೂಮಿಯನ್ನಾಳಿದ ನೂರಾ‌ಒಂದನೆಯ ಕುಲದಲ್ಲಿ ಹುಟ್ಟಿದ ಚತುರ್ಯ ಎನ್ನುವ ಓರ್ವ ರಾಜನು ಇದರಲ್ಲಿ ಮಿಥಭೇದವನ್ನು ತಂದನು. ಆ ಸಾಮ್ರಾಜ್ಯವನ್ನು ತನ್ನ ಹುಟ್ಟಿನಿಂದ ಜರಾಸಂಧನು ಪಡೆದಿದ್ದಾನೆ.

02013009a ತಂ ಸ ರಾಜಾ ಮಹಾಪ್ರಾಜ್ಞ ಸಂಶ್ರಿತ್ಯ ಕಿಲ ಸರ್ವಶಃ।
02013009c ರಾಜನ್ಸೇನಾಪತಿರ್ಜಾತಃ ಶಿಶುಪಾಲಃ ಪ್ರತಾಪವಾನ್।।

ರಾಜನ್! ಇನ್ನೊಬ್ಬ ಪ್ರತಾಪಿ ಶಿಶುಪಾಲನು ಸಂಪೂರ್ಣವಾಗಿ ಅವನೊಂದಿಗೆ ಸೇರಿಕೊಂಡಿದ್ದಾನೆ ಮತ್ತು ಅತಿ ಬುದ್ಧಿವಂತಿಕೆಯಿಂದ ಅವನ ಸೇನಾಪತಿಯಾಗಿದ್ದಾನೆ.

02013010a ತಮೇವ ಚ ಮಹಾರಾಜ ಶಿಷ್ಯವತ್ಸಮುಪಸ್ಥಿತಃ।
02013010c ವಕ್ರಃ ಕರೂಷಾಧಿಪತಿರ್ಮಾಯಾಯೋಧೀ ಮಹಾಬಲಃ।।

ಮಹಾರಾಜ! ಕರೂಷಾಧಿಪತಿ ಮಾಯಾಯೋದ್ಧ ಮಹಾಬಲ ವಕ್ರನು ಶಿಷ್ಯನಂತೆ ಅವನನ್ನು ಸೇರಿಕೊಂಡಿದ್ದಾನೆ.

02013011a ಅಪರೌ ಚ ಮಹಾವೀರ್ಯೌ ಮಹಾತ್ಮಾನೌ ಸಮಾಶ್ರಿತೌ।
02013011c ಜರಾಸಂಧಂ ಮಹಾವೀರ್ಯಂ ತೌ ಹಂಸಡಿಭಕಾವುಭೌ।।

ಹಂಸ ಮತ್ತು ಡಿಂಬಕರೆಂಬ ಇಬ್ಬರು ಇತರ ಮಹಾವೀರ ಮಹಾತ್ಮರು ಆ ಮಹಾವೀರ ಜರಾಸಂಧನನ್ನು ಸೇರಿಕೊಂಡಿದ್ದಾರೆ.

02013012a ದಂತವಕ್ರಃ ಕರೂಷಶ್ಚ ಕಲಭೋ ಮೇಘವಾಹನಃ।
02013012c ಮೂರ್ಧ್ನಾ ದಿವ್ಯಂ ಮಣಿಂ ಬಿಭ್ರದ್ಯಂ ತಂ ಭೂತಮಣಿಂ ವಿದುಃ।।
02013013a ಮುರಂ ಚ ನರಕಂ ಚೈವ ಶಾಸ್ತಿ ಯೋ ಯವನಾಧಿಪೌ।
02013013c ಅಪರ್ಯಂತಬಲೋ ರಾಜಾ ಪ್ರತೀಚ್ಯಾಂ ವರುಣೋ ಯಥಾ।।
02013014a ಭಗದತ್ತೋ ಮಹಾರಾಜ ವೃದ್ಧಸ್ತವ ಪಿತುಃ ಸಖಾ।
02013014c ಸ ವಾಚಾ ಪ್ರಣತಸ್ತಸ್ಯ ಕರ್ಮಣಾ ಚೈವ ಭಾರತ।।
02013015a ಸ್ನೇಹಬದ್ಧಸ್ತು ಪಿತೃವನ್ಮನಸಾ ಭಕ್ತಿಮಾಂಸ್ತ್ವಯಿ।

ಇದೇ ರೀತಿ ದಂತವಕ್ತ್ರ, ಕರೂಷ, ಕಲಭ, ಮೇಘವಾಹನರೂ ಅವನನ್ನು ಸೇರಿದ್ದಾರೆ. ಭೂತಮಣಿಯೆಂದು ಹೆಸರಾದ ಹೊಳೆಯುತ್ತಿರುವ ದಿವ್ಯ ಮಣಿಯನ್ನು ತಲೆಯ ಮೇಲೆ ಹೊತ್ತ, ಯವನಾಧಿಪರಾದ ಮುರ ಮತ್ತು ನರಕರನ್ನು ಶಿಕ್ಷಿಸಿದ, ವರುಣನಂತೆ ಅತೀವ ಬಲದಿಂದ ಪಶ್ಚಿಮ ದೇಶಗಳನ್ನು ಆಳುತ್ತಿರುವ, ನಿನ್ನ ತಂದೆಯ ಸಖ ವೃದ್ಧ ಭಗದತ್ತನು ಅವನಿಗೆ ಮಾತು ಮತ್ತು ಕರ್ಮಗಳ ಮೂಲಕ ನಮಿಸುತ್ತಾನೆ. ಆದರೆ ನಿನ್ನ ತಂದೆಯ ಸ್ನೇಹದಿಂದಾಗಿ ಮನಸ್ಸಿನಲ್ಲಿ ನಿನ್ನ ಬೆಂಬಲಿಗನಾಗಿದ್ದಾನೆ.

02013015c ಪ್ರತೀಚ್ಯಾಂ ದಕ್ಷಿಣಂ ಚಾಂತಂ ಪೃಥಿವ್ಯಾಃ ಪಾತಿ ಯೋ ನೃಪಃ।।
02013016a ಮಾತುಲೋ ಭವತಃ ಶೂರಃ ಪುರುಜಿತ್ಕುಂತಿವರ್ಧನಃ।
02013016c ಸ ತೇ ಸನ್ನತಿಮಾನೇಕಃ ಸ್ನೇಹತಃ ಶತ್ರುತಾಪನಃ।।

ಭೂಮಿಯ ದಕ್ಷಿಣ-ಪಶ್ಚಿಮ ಭಾಗದಲ್ಲಿರುವ ನಿನ್ನ ಸೋದರ ಮಾವ, ಕುಂತಿವರ್ಧನ, ಶತ್ರುತಾಪನ ಶೂರ ಪುರುಜಿತುವು ಮಾತ್ರ ನಿನ್ನನ್ನು ಸ್ನೇಹದಿಂದ ಕಾಣುತ್ತಿದ್ದಾನೆ.

02013017a ಜರಾಸಂಧಂ ಗತಸ್ತ್ವೇವಂ ಪುರಾ ಯೋ ನ ಮಯಾ ಹತಃ।
02013017c ಪುರುಷೋತ್ತಮವಿಜ್ಞಾತೋ ಯೋಽಸೌ ಚೇದಿಷು ದುರ್ಮತಿಃ।।
02013018a ಆತ್ಮಾನಂ ಪ್ರತಿಜಾನಾತಿ ಲೋಕೇಽಸ್ಮಿನ್ಪುರುಷೋತ್ತಮಂ।
02013018c ಆದತ್ತೇ ಸತತಂ ಮೋಹಾದ್ಯಃ ಸ ಚಿಹ್ನಂ ಚ ಮಾಮಕಂ।।
02013019a ವಂಗಪುಂಡ್ರಕಿರಾತೇಷು ರಾಜಾ ಬಲಸಮನ್ವಿತಃ।
02013019c ಪೌಂಡ್ರಕೋ ವಾಸುದೇವೇತಿ ಯೋಽಸೌ ಲೋಕೇಷು ವಿಶ್ರುತಃ।।

ಹಿಂದೆ ನನ್ನಿಂದ ಹತನಾಗದ, ಪುರುಷೋತ್ತಮನೆಂದು ವಿಜ್ಞಾತನಾದ, ಚೇದಿಯಲ್ಲಿರುವ ದುರ್ಮತಿಯು ಈ ಲೋಕದಲ್ಲಿ ಪುರುಷೋತ್ತಮನು ತಾನೇ ಎಂದು ತಿಳಿದು ಮೋಹದಿಂದ ನನ್ನ ಬಿರುದನ್ನು ಇಟ್ಟುಕೊಂಡಿರುವ ವಂಗ, ಪುಂಡ್ರ ಮತ್ತು ಕಿರಾತರ ರಾಜ ಬಲಸಮನ್ವಿತ ವಾಸುದೇವನೆಂದು ಈ ಲೋಕದಲ್ಲಿ ವಿಶ್ರುತ ಪೌಂಡ್ರಕನೂ ಕೂಡ ಜರಾಸಂಧನ ಕಡೆ ಹೋಗಿದ್ದಾನೆ.

02013020a ಚತುರ್ಯುಃ ಸ ಮಹಾರಾಜ ಭೋಜ ಇಂದ್ರಸಖೋ ಬಲೀ।
02013020c ವಿದ್ಯಾಬಲಾದ್ಯೋ ವ್ಯಜಯತ್ಪಾಂಡ್ಯಕ್ರಥಕಕೈಶಿಕಾನ್।।
02013021a ಭ್ರಾತಾ ಯಸ್ಯಾಹೃತಿಃ ಶೂರೋ ಜಾಮದಗ್ನ್ಯಸಮೋ ಯುಧಿ।
02013021c ಸ ಭಕ್ತೋ ಮಾಗಧಂ ರಾಜಾ ಭೀಷ್ಮಕಃ ಪರವೀರಹಾ।।
02013022a ಪ್ರಿಯಾಣ್ಯಾಚರತಃ ಪ್ರಹ್ವಾನ್ಸದಾ ಸಂಬಂಧಿನಃ ಸತಃ।
02013022c ಭಜತೋ ನ ಭಜತ್ಯಸ್ಮಾನಪ್ರಿಯೇಷು ವ್ಯವಸ್ಥಿತಃ।।

ಮಹಾರಾಜ! ಯುದ್ಧದಲ್ಲಿ ಜಾಮದಗ್ನಿ ಪರಶುರಾಮನಂತೆ ಶೂರನಾದ ಆಹೃತಿಯ ಸೋದರ, ತನ್ನ ವಿದ್ಯಾಬಲದಿಂದ ಪಾಂಡ್ಯ, ಕ್ರಥ ಮತ್ತು ಕೈಶಿಕರನ್ನು ಸೋಲಿಸಿದ, ಇಂದ್ರಸಖ ಬಲೀ ಭೋಜ ಚತುರ್ಯು ಭೀಷ್ಮಕನು ರಾಜ ಮಾಗಧನ ಭಕ್ತ. ಆ ಪರವೀರಹನು ಸಂಬಂಧಿಗಳಾದ ನಮ್ಮಲ್ಲಿ ಯಾವಾಗಲೂ ಪ್ರೀತಿಯಿಂದ ನಡೆದುಕೊಳ್ಳಲಿಲ್ಲ. ನಾವು ಅವನನ್ನು ಒಳ್ಳೆಯದಾಗಿ ಕಂಡರೂ ಅವನು ನಮ್ಮನ್ನು ಕೆಟ್ಟುದಾಗಿ ನೋಡುತ್ತಿದ್ದಾನೆ.

02013023a ನ ಕುಲಂ ನ ಬಲಂ ರಾಜನ್ನಭಿಜಾನಂಸ್ತಥಾತ್ಮನಃ।
02013023c ಪಶ್ಯಮಾನೋ ಯಶೋ ದೀಪ್ತಂ ಜರಾಸಂಧಮುಪಾಶ್ರಿತಃ।।

ರಾಜನ್! ತನ್ನ ಕುಲ ಮತ್ತು ಬಲಗಳನ್ನು ಗಮನಿಸದೇ ಬೆಳಗುತ್ತಿರುವ ಯಶಸ್ಸನ್ನು ನೋಡಿ ಅವನು ಜರಾಸಂಧನ ಆಸರೆಯಲ್ಲಿದ್ದಾನೆ.

02013024a ಉದೀಚ್ಯಭೋಜಾಶ್ಚ ತಥಾ ಕುಲಾನ್ಯಷ್ಟಾದಶಾಭಿಭೋ।
02013024c ಜರಾಸಂಧಭಯಾದೇವ ಪ್ರತೀಚೀಂ ದಿಶಮಾಶ್ರಿತಾಃ।।

ವಿಭೋ! ಜರಾಸಂಧನಿಂದ ಭಯಗೊಂಡು ಉತ್ತರದ ಭೋಜರೂ ಮತ್ತು ಇತರ ಹದಿನೆಂಟು ಕುಲಗಳೂ ಪಶ್ಚಿಮದ ಕಡೆ ಪಲಾಯನ ಮಾಡಿದ್ದಾರೆ.

02013025a ಶೂರಸೇನಾ ಭದ್ರಕಾರಾ ಬೋಧಾಃ ಶಾಲ್ವಾಃ ಪಟಚ್ಚರಾಃ।
02013025c ಸುಸ್ಥರಾಶ್ಚ ಸುಕುಟ್ಟಾಶ್ಚ ಕುಣಿಂದಾಃ ಕುಂತಿಭಿಃ ಸಹ।।
02013026a ಶಾಲ್ವೇಯಾನಾಂ ಚ ರಾಜಾನಃ ಸೋದರ್ಯಾನುಚರೈಃ ಸಹ।
02013026c ದಕ್ಷಿಣಾ ಯೇ ಚ ಪಾಂಚಾಲಾಃ ಪೂರ್ವಾಃ ಕುಂತಿಷು ಕೋಶಲಾಃ।।

ಅವರಂತೆ ಶೂರಸೇನರು, ಭದ್ರಕಾರರು, ಬೋಧರು, ಶಾಲ್ವರು, ಪಟಚರರು, ಸುಸ್ಥರರು, ಸುಕುಟ್ಟರು, ಕುಣಿಂದರು, ಕುಂತರು, ಮತ್ತು ತಮ್ಮ ರಕ್ತಸಂಬಂಧಿಗಳೊಡನೆ ಶಾಲ್ವೇಯ ರಾಜರು, ದಕ್ಷಿಣ ಪಾಂಚಾಲರು ಮತ್ತು ಪೂರ್ವ ಕುಂತಳದ ಕೋಶಲರು ಪಲಾಯನ ಮಾಡಿದ್ದಾರೆ.

02013027a ತಥೋತ್ತರಾಂ ದಿಶಂ ಚಾಪಿ ಪರಿತ್ಯಜ್ಯ ಭಯಾರ್ದಿತಾಃ।
02013027c ಮತ್ಸ್ಯಾಃ ಸನ್ಯಸ್ತಪಾದಾಶ್ಚ ದಕ್ಷಿಣಾಂ ದಿಶಮಾಶ್ರಿತಾಃ।।

ಭಯಾರ್ದಿತರಾಗಿ ಮತ್ಸ್ಯರೂ ಮತ್ತು ಸಂನ್ಯಸ್ತಪಾದರೂ ಉತ್ತರದಿಶೆಯನ್ನು ತೊರೆದು ದಕ್ಷಿಣ ದಿಕ್ಕಿನಲ್ಲಿ ವಾಸಿಸುತ್ತಿದ್ದಾರೆ.

02013028a ತಥೈವ ಸರ್ವಪಾಂಚಾಲಾ ಜರಾಸಂಧಭಯಾರ್ದಿತಾಃ।
02013028c ಸ್ವರಾಷ್ಟ್ರಂ ಸಂಪರಿತ್ಯಜ್ಯ ವಿದ್ರುತಾಃ ಸರ್ವತೋದಿಶಂ।।

ಅದೇ ರೀತಿ ಸರ್ವ ಪಾಂಚಾಲರೂ ಜರಾಸಂಧನ ಭಯಾರ್ದಿತರಾಗಿ ತಮ್ಮ ರಾಷ್ಟ್ರಗಳನ್ನು ಸಂಪೂರ್ಣವಾಗಿ ತೊರೆದು ಎಲ್ಲ ದಿಕ್ಕುಗಳಲ್ಲಿ ಚದುರಿ ಹೋಗಿದ್ದಾರೆ.

02013029a ಕಸ್ಯ ಚಿತ್ತ್ವಥ ಕಾಲಸ್ಯ ಕಂಸೋ ನಿರ್ಮಥ್ಯ ಬಾಂಧವಾನ್।
02013029c ಬಾರ್ಹದ್ರಥಸುತೇ ದೇವ್ಯಾವುಪಾಗಚ್ಛದ್ವೃಥಾಮತಿಃ।।
02013030a ಅಸ್ತಿಃ ಪ್ರಾಪ್ತಿಶ್ಚ ನಾಮ್ನಾ ತೇ ಸಹದೇವಾನುಜೇಽಬಲೇ।
02013030c ಬಲೇನ ತೇನ ಸ ಜ್ಞಾತೀನಭಿಭೂಯ ವೃಥಾಮತಿಃ।।

ಕೆಲವೇ ಸಮಯದ ಹಿಂದೆ ತನ್ನ ಬಾಂಧವರನ್ನೇ ತುಳಿದ ಕಂಸನು ಬಾರ್ಹದ್ರಥ ಜರಾಸಂಧನ ಇಬ್ಬರು ಪುತ್ರಿಯರನ್ನು, ಅಂದರೆ ಸಹದೇವನ ಸಹೋದರಿಯರಾದ ಅಸ್ತಿ ಮತ್ತು ಪ್ರಾಪ್ತಿಯರನ್ನು ಮದುವೆಯಾಗಿದ್ದ. ಆ ವೃಥಾಮತಿಯು ತನ್ನವರನ್ನೇ ಬಲತ್ಕಾರದಿಂದ ವಶದಲ್ಲಿರಿಸಿಕೊಂಡಿದ್ದ.

02013031a ಶ್ರೈಷ್ಠ್ಯಂ ಪ್ರಾಪ್ತಃ ಸ ತಸ್ಯಾಸೀದತೀವಾಪನಯೋ ಮಹಾನ್।
02013031c ಭೋಜರಾಜನ್ಯವೃದ್ಧೈಸ್ತು ಪೀಡ್ಯಮಾನೈರ್ದುರಾತ್ಮನಾ।।

ಆ ದುರಾತ್ಮನು ಭೋಜರಾಜ ವೃದ್ಧರನ್ನು ಅತಿಯಾಗಿ ಪೀಡಿಸುತ್ತಿದ್ದಾಗ ಅವರು, ತಮ್ಮನ್ನು ಉಳಿಸಿಕೊಳ್ಳುವುದಕ್ಕೋಸ್ಕರ ನಮ್ಮೊಂದಿಗೆ ಒಂದು ಒಪ್ಪಂದ ಮಾಡಿಕೊಂಡರು.

02013032a ಜ್ಞಾತಿತ್ರಾಣಮಭೀಪ್ಸದ್ಭಿರಸ್ಮತ್ಸಂಭಾವನಾ ಕೃತಾ।
02013032c ದತ್ತ್ವಾಕ್ರೂರಾಯ ಸುತನುಂ ತಾಮಾಹುಕಸುತಾಂ ತದಾ।।
02013033a ಸಂಕರ್ಷಣದ್ವಿತೀಯೇನ ಜ್ಞಾತಿಕಾರ್ಯಂ ಮಯಾ ಕೃತಂ।
02013033c ಹತೌ ಕಂಸಸುನಾಮಾನೌ ಮಯಾ ರಾಮೇಣ ಚಾಪ್ಯುತ।।

ಆಹುಕನ ಮಗಳು ಸುತನುವನ್ನು ಅಕ್ರೂರನಿಗಿತ್ತು, ಸಂಕರ್ಷಣ ರಾಮನೊಡನೆ ಅವನ ಬೆಂಬಲದಿಂದ ನಾನು ಕಂಸ ಮತ್ತು ಸುನಾಮರನ್ನು ಕೊಂದು ನಮ್ಮವರ ಕಷ್ಟಗಳನ್ನು ಕಡೆಗಾಣಿಸಿದೆ.

02013034a ಭಯೇ ತು ಸಮುಪಕ್ರಾಂತೇ ಜರಾಸಂಧೇ ಸಮುದ್ಯತೇ।
02013034c ಮಂತ್ರೋಽಯಂ ಮಂತ್ರಿತೋ ರಾಜನ್ಕುಲೈರಷ್ಟಾದಶಾವರೈಃ।।

ರಾಜನ್! ಆ ಭಯದಿಂದ ವಿಮುಕ್ತರಾದ ಈ ಹದಿನೆಂಟು ಕುಲಗಳು ಜರಾಸಂಧನ ವಿರುದ್ಧ ಬಂಡಾಯಕ್ಕೆಂದು ತಮ್ಮೊಳಗೇ ಮಂತ್ರಾಲೋಚನೆ ಮಾಡಿದರು.

02013035a ಅನಾರಮಂತೋ ನಿಘ್ನಂತೋ ಮಹಾಸ್ತ್ರೈಃ ಶತಘಾತಿಭಿಃ।
02013035c ನ ಹನ್ಯಾಮ ವಯಂ ತಸ್ಯ ತ್ರಿಭಿರ್ವರ್ಷಶತೈರ್ಬಲಂ।।

ಒಂದೇ ಏಟಿಗೆ ನೂರರನ್ನು ಒಮ್ಮೆಲೇ ಕೊಲ್ಲಬಹುದಾದ ಮಹಾಸ್ತ್ರಗಳಿಂದ, ಮುನ್ನೂರು ವರ್ಷಗಳು ಸತತವಾಗಿ ವಿಶ್ರಾಂತಿಯಿಲ್ಲದೇ ಹೋರಾಡಿದರೂ ನಾವು ಅವನನ್ನು ಸಂಹರಿಸಲಾರೆವು ಎಂಬ ನಿರ್ಧಾರಕ್ಕೆ ಬಂದರು.

02013036a ತಸ್ಯ ಹ್ಯಮರಸಂಕಾಶೌ ಬಲೇನ ಬಲಿನಾಂ ವರೌ।
02013036c ನಾಮಭ್ಯಾಂ ಹಂಸಡಿಭಕಾವಿತ್ಯಾಸ್ತಾಂ ಯೋಧಸತ್ತಮೌ।।

ಯಾಕೆಂದರೆ ಅವನ ಜೊತೆ ಬಲಶಾಲಿಗಳಲ್ಲಿಯೇ ಬಲಶಾಲಿ ಶ್ರೇಷ್ಠರಾದ ಹಂಸ ಮತ್ತು ಡಿಭಕರೆಂಬ ಹೆಸರಿನ ಅಮರಸಮ ಯೋಧಸತ್ತಮರಿದ್ದರು.

02013037a ತಾವುಭೌ ಸಹಿತೌ ವೀರೌ ಜರಾಸಂಧಶ್ಚ ವೀರ್ಯವಾನ್।
02013037c ತ್ರಯಸ್ತ್ರಯಾಣಾಂ ಲೋಕಾನಾಂ ಪರ್ಯಾಪ್ತಾ ಇತಿ ಮೇ ಮತಿಃ।।

ಆ ಇಬ್ಬರು ವೀರರೂ ಮತ್ತು ವೀರ್ಯವಾನ್ ಜರಾಸಂಧನೂ ಸೇರಿ ಈ ಮೂವರೂ ಮೂರುಲೋಕಗಳಿಗೂ ಸಾಕು ಎನ್ನುವುದು ನನ್ನ ಮತ.

02013038a ನ ಹಿ ಕೇವಲಮಸ್ಮಾಕಂ ಯಾವಂತೋಽನ್ಯೇ ಚ ಪಾರ್ಥಿವಾಃ।
02013038c ತಥೈವ ತೇಷಾಮಾಸೀಚ್ಚ ಬುದ್ಧಿರ್ಬುದ್ಧಿಮತಾಂ ವರ।।

ಬುದ್ಧಿವಂತರಲ್ಲಿ ಶ್ರೇಷ್ಠ! ಇದು ಕೇವಲ ನಮ್ಮ ನಂಬಿಕೆ ಮಾತ್ರವಲ್ಲ. ಈಗ ಎಷ್ಟುಮಂದಿ ರಾಜರಿದ್ದಾರೋ ಅವರೆಲ್ಲರ ಅಭಿಪ್ರಾಯ.

02013039a ಅಥ ಹಂಸ ಇತಿ ಖ್ಯಾತಃ ಕಶ್ಚಿದಾಸೀನ್ಮಹಾನ್ನೃಪಃ।
02013039c ಸ ಚಾನ್ಯೈಃ ಸಹಿತೋ ರಾಜನ್ಸಂಗ್ರಾಮೇಽಷ್ಟಾದಶಾವರೈಃ।।

ರಾಜನ್! ಆಗ ಒಮ್ಮೆ ಹಂಸನೆಂದು ಖ್ಯಾತ ಮಹಾನೃಪನು ಅನ್ಯರಸಹಿತ ಆ ಹದಿನೆಂಟು ಕುಲಗಳಮೇಲೆ ಧಾಳಿಯಿಟ್ಟನು.

02013040a ಹತೋ ಹಂಸ ಇತಿ ಪ್ರೋಕ್ತಮಥ ಕೇನಾಪಿ ಭಾರತ।
02013040c ತಚ್ಛೃತ್ವಾ ಡಿಭಕೋ ರಾಜನ್ಯಮುನಾಂಭಸ್ಯಮಜ್ಜತ।।

ರಾಜನ್! ಭಾರತ! ಯಾರೋ ಹಂಸನು ಹತನಾದನೆಂಬ ಸುಳ್ಳನ್ನು ಹರಡಿಸಿದರು ಮತ್ತು ಅದನ್ನು ಕೇಳಿದ ಡಿಭಕನು ಯಮುನಾ ನದಿಯಲ್ಲಿ ಮುಳುಗಿದನು.

02013041a ವಿನಾ ಹಂಸೇನ ಲೋಕೇಽಸ್ಮಿನ್ನಾಹಂ ಜೀವಿತುಮುತ್ಸಹೇ।
02013041c ಇತ್ಯೇತಾಂ ಮತಿಮಾಸ್ಥಾಯ ಡಿಭಕೋ ನಿಧನಂ ಗತಃ।।

ಹಂಸನ ಹೊರತಾಗಿ ಈ ಲೋಕದಲ್ಲಿ ಜೀವಿಸುವ ಬಯಕೆಯಿಲ್ಲ ಎಂದು ನಿರ್ಧರಿಸಿ ಡಿಭಕನು ಸಾವನ್ನಪ್ಪಿದನು.

02013042a ತಥಾ ತು ಡಿಭಕಂ ಶ್ರುತ್ವಾ ಹಂಸಃ ಪರಪುರಂಜಯಃ।
02013042c ಪ್ರಪೇದೇ ಯಮುನಾಮೇವ ಸೋಽಪಿ ತಸ್ಯಾಂ ನ್ಯಮಜ್ಜತ।।

ಡಿಭಕನ ಕುರಿತು ಕೇಳಿ ಪರಪುರಂಜಯ ಹಂಸನೂ ಕೂಡ ಯಮುನೆಯನ್ನು ತಲುಪಿ ಅಲ್ಲಿ ಮುಳುಗಿ ಸತ್ತನು.

02013043a ತೌ ಸ ರಾಜಾ ಜರಾಸಂಧಃ ಶ್ರುತ್ವಾಪ್ಸು ನಿಧನಂ ಗತೌ।
02013043c ಸ್ವಪುರಂ ಶೂರಸೇನಾನಾಂ ಪ್ರಯಯೌ ಭರತರ್ಷಭ।।

ಭರತರ್ಷಭ! ಅವರಿಬ್ಬರೂ ನಿಧನ ಹೊಂದಿದರು ಎನ್ನುವುದನ್ನು ಕೇಳಿದ ರಾಜಾ ಜರಾಸಂಧನು ಶೂರಸೇನನ ಕಡೆಯಿಂದ ತನ್ನ ಪುರಕ್ಕೆ ಹಿಂದಿರುಗಿದನು.

02013044a ತತೋ ವಯಮಮಿತ್ರಘ್ನ ತಸ್ಮಿನ್ಪ್ರತಿಗತೇ ನೃಪೇ।
02013044c ಪುನರಾನಂದಿತಾಃ ಸರ್ವೇ ಮಥುರಾಯಾಂ ವಸಾಮಹೇ।।

ಅಮಿತ್ರಘ್ನ! ಆ ರಾಜನು ಹಿಂದಿರುಗಿದ ನಂತರ ನಾವೆಲ್ಲರೂ ಪುನಃ ಸಂತೋಷದಿಂದ ಮಥುರೆಯಲ್ಲಿ ವಾಸಿಸುತ್ತಿದ್ದೇವೆ.

02013045a ಯದಾ ತ್ವಭ್ಯೇತ್ಯ ಪಿತರಂ ಸಾ ವೈ ರಾಜೀವಲೋಚನಾ।
02013045c ಕಂಸಭಾರ್ಯಾ ಜರಾಸಂಧಂ ದುಹಿತಾ ಮಾಗಧಂ ನೃಪಂ।।
02013046a ಚೋದಯತ್ಯೇವ ರಾಜೇಂದ್ರ ಪತಿವ್ಯಸನದುಃಖಿತಾ।
02013046c ಪತಿಘ್ನಂ ಮೇ ಜಹೀತ್ಯೇವಂ ಪುನಃ ಪುನರರಿಂದಮ।।

ಅರಿಂದಮ! ರಾಜೇಂದ್ರ! ನಂತರ ರಾಜೀವಲೋಚನೆ ಕಂಸನ ಪತ್ನಿ ಮತ್ತು ಜರಾಸಂಧನ ಮಗಳು ತನ್ನ ಪತಿಯನ್ನು ಕಳೆದುಕೊಂಡ ದುಃಖದಲ್ಲಿ ತಂದೆ ಮಗಧ ನೃಪತಿಯಲ್ಲಿಗೆ ಹೋಗಿ ಅವಳ ಗಂಡನನ್ನು ಕೊಂದವನನ್ನು ಕೊಲ್ಲುವ ಪ್ರತಿಜ್ಞೆಗೈಯುವಂತೆ ಪ್ರಚೋದಿಸಿದಳು.

02013047a ತತೋ ವಯಂ ಮಹಾರಾಜ ತಂ ಮಂತ್ರಂ ಪೂರ್ವಮಂತ್ರಿತಂ।
02013047c ಸಂಸ್ಮರಂತೋ ವಿಮನಸೋ ವ್ಯಪಯಾತಾ ನರಾಧಿಪ।।

ಮಹಾರಾಜ! ನರಾಧಿಪ! ಆಗ ನಾವು ಹಿಂದೆ ಮಾಡಿದ ಮಂತ್ರಾಲೋಚನೆಯನ್ನು ನೆನಪಿಸಿಕೊಂಡು ವಿಮನಸ್ಕರಾಗಿ ಹಿಂದೆ ಸರಿದೆವು.

02013048a ಪೃಥಕ್ತ್ವೇನ ದ್ರುತಾ ರಾಜನ್ಸಂಕ್ಷಿಪ್ಯ ಮಹತೀಂ ಶ್ರಿಯಂ।
02013048c ಪ್ರಪತಾಮೋ ಭಯಾತ್ತಸ್ಯ ಸಧನಜ್ಞಾತಿಬಾಂಧವಾಃ।।

ರಾಜನ್! ಅವನ ಭಯದಿಂದ ನಮ್ಮ ಮಹಾ ಸಂಪತ್ತನ್ನು ದೋಚಿಕೊಂಡು ಧನ ಮತ್ತು ಬಾಂಧವರೊಡಗೂಡಿ ಚದುರಿ ಪಲಾಯನ ಮಾಡಿದೆವು.

02013049a ಇತಿ ಸಂಚಿಂತ್ಯ ಸರ್ವೇ ಸ್ಮ ಪ್ರತೀಚೀಂ ದಿಶಮಾಶ್ರಿತಾಃ।
02013049c ಕುಶಸ್ಥಲೀಂ ಪುರೀಂ ರಮ್ಯಾಂ ರೈವತೇನೋಪಶೋಭಿತಾಂ।।

ಎಲ್ಲರೂ ಆಲೋಚನೆ ಮಾಡಿ ಪಶ್ಚಿಮ ದಿಕ್ಕಿನಲ್ಲಿ ರೈವತ ಶೋಭಿತ ರಮ್ಯ ಕುಶಸ್ಥಲೀ ಪುರದಲ್ಲಿ ನೆಲೆ ಮಾಡಿದೆವು.

02013050a ಪುನರ್ನಿವೇಶನಂ ತಸ್ಯಾಂ ಕೃತವಂತೋ ವಯಂ ನೃಪ।
02013050c ತಥೈವ ದುರ್ಗಸಂಸ್ಕಾರಂ ದೇವೈರಪಿ ದುರಾಸದಂ।।

ನೃಪ! ಅಲ್ಲಿ ನಾವು ದೇವತೆಗಳಿಗೂ ಅಸಾಧ್ಯ ಕೋಟೆಗಳನ್ನು ಕಟ್ಟಿ ಪುನರ್ವಸತಿ ಮಾಡಿದೆವು.

02013051a ಸ್ತ್ರಿಯೋಽಪಿ ಯಸ್ಯಾಂ ಯುಧ್ಯೇಯುಃ ಕಿಂ ಪುನರ್ವೃಷ್ಣಿಪುಂಗವಾಃ।
02013051c ತಸ್ಯಾಂ ವಯಮಮಿತ್ರಘ್ನ ನಿವಸಾಮೋಽಕುತೋಭಯಾಃ।।
02013052a ಆಲೋಕ್ಯ ಗಿರಿಮುಖ್ಯಂ ತಂ ಮಾಧವೀತೀರ್ಥಮೇವ ಚ।
02013052c ಮಾಧವಾಃ ಕುರುಶಾರ್ದೂಲ ಪರಾಂ ಮುದಮವಾಪ್ನುವನ್।।

ಅಲ್ಲಿ ಸ್ತ್ರೀಯರೂ ಯುದ್ಧಮಾಡಬಲ್ಲರು. ಇನ್ನು ವೃಷ್ಣಿಪುಂಗವರೇನು! ಅಮಿತ್ರಘ್ನ! ಕುರುಶಾರ್ದೂಲ! ಮಾಧವೀತೀರ್ಥದ ಮುಖ್ಯ ಪರ್ವತವನ್ನು ನೋಡುತ್ತಿರುವ ಆ ಪ್ರದೇಶದಲ್ಲಿ ನಾವು ಯಾರದ್ದೂ ಭಯವಿಲ್ಲದೇ ವಾಸಿಸುತ್ತಿದ್ದೇವೆ.

02013053a ಏವಂ ವಯಂ ಜರಾಸಂಧಾದಾದಿತಃ ಕೃತಕಿಲ್ಬಿಷಾಃ।
02013053c ಸಾಮರ್ಥ್ಯವಂತಃ ಸಂಬಂಧಾದ್ಭವಂತಂ ಸಮುಪಾಶ್ರಿತಾಃ।।

ಈ ರೀತಿ ಜರಾಸಂಧನಿಂದ ಸತತ ಕಿರುಕುಳಕ್ಕೊಳಪಟ್ಟು ನಾವು ಸಾಮರ್ಥ್ಯವಂತರೂ ಸಂಬಂಧಿಗಳೂ ಆದ ನಿಮ್ಮ ಆಶ್ರಯದಲ್ಲಿ ಇದ್ದೇವೆ.

02013054a ತ್ರಿಯೋಜನಾಯತಂ ಸದ್ಮ ತ್ರಿಸ್ಕಂಧಂ ಯೋಜನಾದಧಿ।
02013054c ಯೋಜನಾಂತೇ ಶತದ್ವಾರಂ ವಿಕ್ರಮಕ್ರಮತೋರಣಂ।
02013054e ಅಷ್ಟಾದಶಾವರೈರ್ನದ್ಧಂ ಕ್ಷತ್ರಿಯೈರ್ಯುದ್ಧದುರ್ಮದೈಃ।।

ಒಂದೊಂದು ಯೋಜನೆಯ ಅಂತರದಲ್ಲಿಯೂ ಗೋಡೆಗಳಿಂದ ಆವೃತವಾಗಿ ನಮ್ಮ ಸ್ಥಳವು ಮೂರು ಯೋಜನೆ ಆಳದಲ್ಲಿದೆ. ಒಂದೊಂದು ಯೋಜನೆಯ ಅಂತರದಲ್ಲಿಯೂ ಸೇನೆಯನ್ನಿರಿಸಲಾಗಿದೆ ಮತ್ತು ಮಧ್ಯದಲ್ಲಿ ನೂರು ಬಾಗಿಲುಗಳ ಕೋಟೆ ಮತ್ತು ನಿರೀಕ್ಷಣಾ ಗೋಪುರಗಳನ್ನು ನಿರ್ಮಿಸಲಾಗಿದೆ. ಇವೆಲ್ಲವೂ ಹದಿನೆಂಟು ಕುಲಗಳ ಯುದ್ಧದುರ್ಮದ ಕ್ಷತ್ರಿಯರಿಂದ ರಕ್ಷಿಸಲ್ಪಟ್ಟಿದೆ.

02013055a ಅಷ್ಟಾದಶ ಸಹಸ್ರಾಣಿ ವ್ರಾತಾನಾಂ ಸಂತಿ ನಃ ಕುಲೇ।
02013055c ಆಹುಕಸ್ಯ ಶತಂ ಪುತ್ರಾ ಏಕೈಕಸ್ತ್ರಿಶತಾವರಃ।।

ನಮ್ಮ ಕುಲದಲ್ಲಿ ಹದಿನೆಂಟು ಸಾವಿರ ಸೇನೆಗಳಿವೆ. ಆಹುಕನಿಗೆ ನೂರು ಮಕ್ಕಳಿದ್ದಾರೆ. ಪ್ರತಿಯೊಬ್ಬರಲ್ಲಿಯೂ ಮೂರುನೂರು ಜನರಿದ್ದಾರೆ.

02013056a ಚಾರುದೇಷ್ಣಃ ಸಹ ಭ್ರಾತ್ರಾ ಚಕ್ರದೇವೋಽಥ ಸಾತ್ಯಕಿಃ।
02013056c ಅಹಂ ಚ ರೌಹಿಣೇಯಶ್ಚ ಸಾಂಬಃ ಶೌರಿಸಮೋ ಯುಧಿ।।
02013057a ಏವಮೇತೇ ರಥಾಃ ಸಪ್ತ ರಾಜನ್ನನ್ಯಾನ್ನಿಬೋಧ ಮೇ।
02013057c ಕೃತವರ್ಮಾ ಅನಾಧೃಷ್ಟಿಃ ಸಮೀಕಃ ಸಮಿತಿಂಜಯಃ।।
02013058a ಕಹ್ವಃ ಶಂಕುರ್ನಿದಾಂತಶ್ಚ ಸಪ್ತೈವೈತೇ ಮಹಾರಥಾಃ।
02013058c ಪುತ್ರೌ ಚಾಂಧಕಭೋಜಸ್ಯ ವೃದ್ಧೋ ರಾಜಾ ಚ ತೇ ದಶ।।

ಸಹೋದರನೊಂದಿಗೆ ಚಾರುದೇಷ್ಣ, ಚಕ್ರದೇವ, ಸಾತ್ಯಕಿ, ನಾನು, ರೌಹಿಣೇಯ, ಯುದ್ಧದಲ್ಲಿ ಶೌರಿಯ ಸಮ ಸಾಂಬ - ಇವರೆಲ್ಲರೂ ಏಳು ರಥಿಗಳು. ಇನ್ನು ಇತರರ ಕುರಿತು ನನ್ನನ್ನು ಕೇಳು ರಾಜನ್! ಕೃತವರ್ಮ, ಅನಾಧೃಷ್ಟಿ, ಸಮೀಕ, ಸಮಿತಿಂಜಯ, ಕಹ್ವ, ಶಂಕು, ನಿದಾಂತ ಇವರು ಅನ್ಯ ಏಳು ಮಹಾರಥಿಗಳು ಮತ್ತು ಭೋಜ ಅಂಧಕನ ಈರ್ವರು ಪುತ್ರರು ಮತ್ತು ವೃದ್ಧ ರಾಜನೂ ಸೇರಿ ಹತ್ತು ಮಹಾರಥಿಗಳು.

02013059a ಲೋಕಸಂಹನನಾ ವೀರಾ ವೀರ್ಯವಂತೋ ಮಹಾಬಲಾಃ।
02013059c ಸ್ಮರಂತೋ ಮಧ್ಯಮಂ ದೇಶಂ ವೃಷ್ಣಿಮಧ್ಯೇ ಗತವ್ಯಥಾಃ।।

ಲೋಕಗಳನ್ನೇ ನಾಶಪಡಿಸಬಲ್ಲ ಈ ವೀರ್ಯವಂತ ವೀರ ಮಹಾಬಲರು ಮಧ್ಯಮ ದೇಶವನ್ನು ನೆನಪಿಸಿಕೊಡುತ್ತಾ ವೃಷ್ಣಿಗಳ ಮಧ್ಯದಲ್ಲಿ ವ್ಯಥೆಯನ್ನು ಕಳೆದುಕೊಂಡು ವಾಸಿಸುತ್ತಿದ್ದಾರೆ.

02013060a ಸ ತ್ವಂ ಸಮ್ರಾಡ್ಗುಣೈರ್ಯುಕ್ತಃ ಸದಾ ಭರತಸತ್ತಮ।
02013060c ಕ್ಷತ್ರೇ ಸಮ್ರಾಜಮಾತ್ಮಾನಂ ಕರ್ತುಮರ್ಹಸಿ ಭಾರತ।।

ಭಾರತ! ಭರತಸತ್ತಮ! ಸದಾ ಸಂಗ್ರಾಮಗುಣಯುಕ್ತ ನೀನು ಕ್ಷತ್ರಿಯರಲ್ಲಿ ನಿನ್ನನ್ನು ಸಾಮ್ರಾಟನನ್ನಾಗಿ ಮಾಡಿಕೊಳ್ಳಲು ಅರ್ಹನಾಗಿದ್ದೀಯೆ.

02013061a ನ ತು ಶಕ್ಯಂ ಜರಾಸಂಧೇ ಜೀವಮಾನೇ ಮಹಾಬಲೇ।
02013061c ರಾಜಸೂಯಸ್ತ್ವಯಾ ಪ್ರಾಪ್ತುಮೇಷಾ ರಾಜನ್ಮತಿರ್ಮಮ।।

ರಾಜನ್! ಆದರೆ ಮಹಾಬಲ ಜರಾಸಂಧನು ಜೀವಿತವಾಗಿರುವವರೆಗೆ ರಾಜಸೂಯವನ್ನು ಮಾಡಲು ನಿನ್ನಿಂದ ಶಕ್ಯವಿಲ್ಲ ಎಂದು ನನ್ನ ಅನಿಸಿಕೆ.

02013062a ತೇನ ರುದ್ಧಾ ಹಿ ರಾಜಾನಃ ಸರ್ವೇ ಜಿತ್ವಾ ಗಿರಿವ್ರಜೇ।
02013062c ಕಂದರಾಯಾಂ ಗಿರೀಂದ್ರಸ್ಯ ಸಿಂಹೇನೇವ ಮಹಾದ್ವಿಪಾಃ।।

ಮಹಾ ಆನೆಗಳನ್ನು ಸಿಂಹವು ಹಿಮಾಲಯದ ಕಂದರಗಳಲ್ಲಿ ಅಡಗಿಸಿಟ್ಟುಕೊಳ್ಳುವಂತೆ ಸರ್ವ ರಾಜರುಗಳನ್ನೂ ಗೆದ್ದು ಅವನು ಗಿರಿವ್ರಜದಲ್ಲಿ ಸೆರೆಹಿಡಿದಿಟ್ಟಿದ್ದಾನೆ.

02013063a ಸೋಽಪಿ ರಾಜಾ ಜರಾಸಂಧೋ ಯಿಯಕ್ಷುರ್ವಸುಧಾಧಿಪೈಃ।
02013063c ಆರಾಧ್ಯ ಹಿ ಮಹಾದೇವಂ ನಿರ್ಜಿತಾಸ್ತೇನ ಪಾರ್ಥಿವಾಃ।।

ಮಹಾದೇವನನ್ನು ಆರಾಧಿಸಲೆಂದೇ ಆ ಪಾರ್ಥಿವರನ್ನು ಗೆದ್ದ ರಾಜ ಜರಾಸಂಧನು ವಸುಧಾಧಿಪರನ್ನು ಬಲಿಕೊಡಲು ಬಯಸುತ್ತಿದ್ದಾನೆ.

02013064a ಸ ಹಿ ನಿರ್ಜಿತ್ಯ ನಿರ್ಜಿತ್ಯ ಪಾರ್ಥಿವಾನ್ಪೃತನಾಗತಾನ್।
02013064c ಪುರಮಾನೀಯ ಬದ್ಧ್ವಾ ಚ ಚಕಾರ ಪುರುಷವ್ರಜಂ।।

ಪಾರ್ಥಿವರನ್ನು ಸೋಲಿಸಿದಾಗಲೆಲ್ಲ ಅವನು ತನ್ನ ಪುರಕ್ಕೆ ಕರೆದುಕೊಂಡು ಹೋಗಿ ಬಂಧಿಸಿ ಸೇನೆಯ ಕಾವಲಿನಲ್ಲಿರಿಸಿದ್ದಾನೆ.

02013065a ವಯಂ ಚೈವ ಮಹಾರಾಜ ಜರಾಸಂಧಭಯಾತ್ತದಾ।
02013065c ಮಥುರಾಂ ಸಂಪರಿತ್ಯಜ್ಯ ಗತಾ ದ್ವಾರವತೀಂ ಪುರೀಂ।।

ಮಹಾರಾಜ! ನಾವೂ ಕೂಡ ಜರಾಸಂಧನ ಭಯದಿಂದ ಮಥುರೆಯನ್ನು ತೊರೆದು ದ್ವಾರವತೀ ಪುರಕ್ಕೆ ಹೋಗಬೇಕಾಯಿತು.

02013066a ಯದಿ ತ್ವೇನಂ ಮಹಾರಾಜ ಯಜ್ಞಂ ಪ್ರಾಪ್ತುಮಿಹೇಚ್ಛಸಿ।
02013066c ಯತಸ್ವ ತೇಷಾಂ ಮೋಕ್ಷಾಯ ಜರಾಸಂಧವಧಾಯ ಚ।।

ಮಹಾರಾಜ! ಒಂದು ವೇಳೆ ನೀನು ಯಜ್ಞವನ್ನು ನೆರವೇರಿಸಲು ಇಚ್ಛಿಸುವೆಯಾದರೆ ಜರಾಸಂಧನನ್ನು ವಧಿಸಿ ಅವರನ್ನು ಬಿಡುಗಡೆಮಾಡಲು ಪ್ರಯತ್ನಿಸು.

02013067a ಸಮಾರಂಭೋ ಹಿ ಶಕ್ಯೋಽಯಂ ನಾನ್ಯಥಾ ಕುರುನಂದನ।
02013067c ರಾಜಸೂಯಸ್ಯ ಕಾರ್ತ್ಸ್ನ್ಯೆನ ಕರ್ತುಂ ಮತಿಮತಾಂ ವರ।।

ಕುರುನಂದನ! ಮತಿವಂತರಲ್ಲಿ ಶ್ರೇಷ್ಠ! ಹೀಗೆಯೇ ರಾಜಸೂಯದ ಸೂಕ್ತ ಆರಂಭವು ಸಾಧ್ಯ. ಬೇರೆ ಯಾವುದರಿಂದಲೂ ಅಲ್ಲ.

02013068a ಇತ್ಯೇಷಾ ಮೇ ಮತೀ ರಾಜನ್ಯಥಾ ವಾ ಮನ್ಯಸೇಽನಘ।
02013068c ಏವಂ ಗತೇ ಮಮಾಚಕ್ಷ್ವ ಸ್ವಯಂ ನಿಶ್ಚಿತ್ಯ ಹೇತುಭಿಃ।।

ರಾಜನ್! ಅನಘ! ಇದು ನನ್ನ ಅಭಿಪ್ರಾಯ. ಅಥವಾ ನೀನು ಬೇರೆ ಏನನ್ನಾದರೂ ಯೋಚಿಸುತ್ತಿದ್ದೀಯಾ? ಇದು ಹೀಗಿರಲು ಸ್ವಯಂ ನೀನೇ ನನ್ನ ಅಭಿಪ್ರಾಯಗಳ ಕುರಿತು ನಿರ್ಧರಿಸು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಮಂತ್ರಪರ್ವಣಿ ಕೃಷ್ಣವಾಕ್ಯೇ ತ್ರಯೋದಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸಭಾಪರ್ವದಲ್ಲಿ ಮಂತ್ರಪರ್ವದಲ್ಲಿ ಕೃಷ್ಣವಾಕ್ಯ ಎನ್ನುವ ಹದಿಮೂರನೆಯ ಅಧ್ಯಾಯವು.