012 ವಾಸುದೇವಾಗಮನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸಭಾ ಪರ್ವ

ಮಂತ್ರ ಪರ್ವ

ಅಧ್ಯಾಯ 12

ಸಾರ

ರಾಜಸೂಯದ ಕುರಿತು ಯುಧಿಷ್ಠಿರನು ಬಹಳಷ್ಟು ಚಿಂತಿಸಿದುದು ಮತ್ತು ಎಲ್ಲರೊಡನೆ ಸಮಾಲೋಚನೆ ಮಾಡಿದುದು (1-23). ಶ್ರೀಕೃಷ್ಣನನ್ನು ನೆನೆಯಿಸಿಕೊಂಡು ಅವನನ್ನು ಕರೆತರಿಸಿಕೊಂಡಿದ್ದುದು (24-29). ಶ್ರೀಕೃಷ್ಣನ ಆಗಮನ ಮತ್ತು ಅವನೊಂದಿಗೆ ಸಮಾಲೋಚನೆ (30-40).

02012001 ವೈಶಂಪಾಯನ ಉವಾಚ।
02012001a ಋಷೇಸ್ತದ್ವಚನಂ ಶ್ರುತ್ವಾ ನಿಶಶ್ವಾಸ ಯುಧಿಷ್ಠಿರಃ।
02012001c ಚಿಂತಯನ್ ರಾಜಸೂಯಾಪ್ತಿಂ ನ ಲೇಭೇ ಶರ್ಮ ಭಾರತ।।

ವೈಶಂಪಾಯನನು ಹೇಳಿದನು: “ಭಾರತ! ಋಷಿಯ ಈ ಮಾತನ್ನು ಕೇಳಿ ಯುಧಿಷ್ಠಿರನು ನಿಟ್ಟುಸಿರೆಳೆದು, ರಾಜಸೂಯವನ್ನು ಹೇಗೆ ನೆರವೇರಿಸಬಹುದು ಎಂದು ಚಿಂತಿಸಿದನು ಮತ್ತು ಯಾವುದೇ ರೀತಿಯ ಸಾಂತ್ವನವನ್ನು ಪಡೆಯಲಿಲ್ಲ.

02012002a ರಾಜರ್ಷೀಣಾಂ ಹಿ ತಂ ಶ್ರುತ್ವಾ ಮಹಿಮಾನಂ ಮಹಾತ್ಮನಾಂ।
02012002c ಯಜ್ವನಾಂ ಕರ್ಮಭಿಃ ಪುಣ್ಯೈರ್ಲೋಕಪ್ರಾಪ್ತಿಂ ಸಮೀಕ್ಷ್ಯ ಚ।।
02012003a ಹರಿಶ್ಚಂದ್ರಂ ಚ ರಾಜರ್ಷಿಂ ರೋಚಮಾನಂ ವಿಶೇಷತಃ।
02012003c ಯಜ್ವಾನಂ ಯಜ್ಞಮಾಹರ್ತುಂ ರಾಜಸೂಯಮಿಯೇಷ ಸಃ।।

ಮಹಾತ್ಮ ರಾಜರ್ಷಿಗಳ ಮಹಿಮೆಗಳನ್ನು ಕೇಳಿ ಮತ್ತು ಈ ಯಾಗಕರ್ಮದಿಂದ ಅವರಿಗೆ ಪುಣ್ಯಲೋಕ ಪ್ರಾಪ್ತಿಯಾದುದನ್ನು ನೋಡಿ, ಅದರಲ್ಲೂ ವಿಶೇಷವಾಗಿ ರಾಜರ್ಷಿ ಹರಿಶ್ಚಂದ್ರನು ಯಜಿಸಿದ ರಾಜಸೂಯ ಯಜ್ಞವನ್ನು ಕೈಗೊಳ್ಳಲು ಬಯಸಿದನು.

02012004a ಯುಧಿಷ್ಠಿರಸ್ತತಃ ಸರ್ವಾನರ್ಚಯಿತ್ವಾ ಸಭಾಸದಃ।
02012004c ಪ್ರತ್ಯರ್ಚಿತಶ್ಚ ತೈಃ ಸರ್ವೈರ್ಯಜ್ಞಾಯೈವ ಮನೋ ದಧೇ।।

ನಂತರ ಯುಧಿಷ್ಠಿರನು ಸಭಾಸದರೆಲ್ಲರನ್ನೂ ಅರ್ಚಿಸಿ, ತಿರುಗಿ ಅವರೆಲ್ಲರಿಂದ ಗೌರವವಿಸಲ್ಪಟ್ಟು, ಯಜ್ಞದ ಕುರಿತು ಯೋಚಿಸತೊಡಗಿದನು.

02012005a ಸ ರಾಜಸೂಯಂ ರಾಜೇಂದ್ರ ಕುರೂಣಾಂ ಋಷಭಃ ಕ್ರತುಂ।
02012005c ಆಹರ್ತುಂ ಪ್ರವಣಂ ಚಕ್ರೇ ಮನಃ ಸಂಚಿಂತ್ಯ ಸೋಽಸಕೃತ್।।

ಬಹಳಷ್ಟು ಯೋಚನೆಮಾಡಿದ ನಂತರ ಆ ಕುರುವೃಷಭ ರಾಜೇಂದ್ರನು ರಾಜಸೂಯ ಕ್ರತುವನ್ನು ಕೈಗೊಳ್ಳಲು ಮನಸ್ಸು ಮಾಡಿದನು,

02012006a ಭೂಯಶ್ಚಾದ್ಭುತವೀರ್ಯೌಜಾ ಧರ್ಮಮೇವಾನುಪಾಲಯನ್।
02012006c ಕಿಂ ಹಿತಂ ಸರ್ವಲೋಕಾನಾಂ ಭವೇದಿತಿ ಮನೋ ದಧೇ।।

ಪುನಃ ಧರ್ಮವನ್ನೇ ಅನುಪಾಲಿಸುತ್ತಿದ್ದ ಆ ಅದ್ಭುತವೀರ್ಯಜನು ಇದು ಸರ್ವಲೋಕಗಳಿಗೂ ಹಿತವಾದದ್ದುದೇ ಎಂದು ಯೋಚಿಸಿದನು.

02012007a ಅನುಗೃಹ್ಣನ್ಪ್ರಜಾಃ ಸರ್ವಾಃ ಸರ್ವಧರ್ಮವಿದಾಂ ವರಃ।
02012007c ಅವಿಶೇಷೇಣ ಸರ್ವೇಷಾಂ ಹಿತಂ ಚಕ್ರೇ ಯುಧಿಷ್ಠಿರಃ।।

ಸರ್ವ ಧರ್ಮವಿದರಲ್ಲಿ ವರಿಷ್ಠ ಯುಧಿಷ್ಠಿರನು ಸರ್ವ ಪ್ರಜೆಗಳನ್ನೂ ಗಮನದಲ್ಲಿಟ್ಟುಕೊಂಡು ಯಾರನ್ನೂ ಬಿಡದೇ ಎಲ್ಲರಿಗೂ ಹಿತವಾದುದನ್ನು ಕೈಗೊಂಡನು.

02012008a ಏವಂ ಗತೇ ತತಸ್ತಸ್ಮಿನ್ಪಿತರೀವಾಶ್ವಸಂ ಜನಾಃ।
02012008c ನ ತಸ್ಯ ವಿದ್ಯತೇ ದ್ವೇಷ್ಟಾ ತತೋಽಸ್ಯಾಜಾತಶತ್ರುತಾ।।

ಹೀಗೆ ಮುಂದುವರೆದು ಅವನು ತನ್ನ ಜನರಿಗೆ ತಂದೆಯಂತೆ ಆಶ್ವಾಸನೆಗಳನ್ನಿತ್ತನು ಮತ್ತು ಅವನನ್ನು ದ್ವೇಷಿಸುವವರು ಯಾರೂ ಇಲ್ಲದೇ ಹೋದುದರಿಂದ ಅವನು ಅಜಾತಶತ್ರು ಎಂದು ಕರೆಯಿಸಿಕೊಂಡನು.

02012009a ಸ ಮಂತ್ರಿಣಃ ಸಮಾನಾಯ್ಯ ಭ್ರಾತೄಂಶ್ಚ ವದತಾಂ ವರಃ।
02012009c ರಾಜಸೂಯಂ ಪ್ರತಿ ತದಾ ಪುನಃ ಪುನರಪೃಚ್ಛತ।।

ಮಾತನಾಡುವವರಲ್ಲಿ ಶ್ರೇಷ್ಠ ಅವನು ತನ್ನ ಮಂತ್ರಿಗಳು ಮತ್ತು ಭ್ರಾತೃಗಳನ್ನು ಕರೆಯಿಸಿ ರಾಜಸೂಯದ ಕುರಿತು ಪುನಃ ಪುನಃ ಕೇಳುತ್ತಿದ್ದನು.

02012010a ತೇ ಪೃಚ್ಛ್ಯಮಾನಾಃ ಸಹಿತಾ ವಚೋಽರ್ಥ್ಯಂ ಮಂತ್ರಿಣಸ್ತದಾ।
02012010c ಯುಧಿಷ್ಠಿರಂ ಮಹಾಪ್ರಾಜ್ಞಂ ಯಿಯಕ್ಷುಮಿದಮಬ್ರುವನ್।।

ಈ ರೀತಿಯ ಪ್ರಶ್ನೆ ಬರಲು ಅಲ್ಲಿ ಸೇರಿದ್ದ ಮಂತ್ರಿಗಳು ಯಜ್ಞವನ್ನು ಕೈಗೊಳ್ಳಲು ಉತ್ಸುಕನಾಗಿದ್ದ ಮಹಾಪ್ರಾಜ್ಞ ಯುಧಿಷ್ಠಿರನಿಗೆ ಹೇಳಿದರು:

02012011a ಯೇನಾಭಿಷಿಕ್ತೋ ನೃಪತಿರ್ವಾರುಣಂ ಗುಣಮೃಚ್ಛತಿ।
02012011c ತೇನ ರಾಜಾಪಿ ಸನ್ ಕೃತ್ಸ್ನಂ ಸಮ್ರಾಡ್ಗುಣಮಭೀಪ್ಸತಿ।।

“ಈ ರೀತಿ ಅಭಿಷಿಕ್ತನಾಗುವುದರಿಂದ ನೃಪತಿಯು ವರುಣನ ಸ್ಥಾನವನ್ನು ಪಡೆಯುತ್ತಾನೆ. ಅವನು ಆಗ ರಾಜನಾಗಿದ್ದರೂ ಸಂಪೂರ್ಣ ಸಮ್ರಾಟನ ಸ್ಥಾನವನ್ನು ಪಡೆಯುತ್ತಾನೆ.

02012012a ತಸ್ಯ ಸಮ್ರಾಡ್ಗುಣಾರ್ಹಸ್ಯ ಭವತಃ ಕುರುನಂದನ।
02012012c ರಾಜಸೂಯಸ್ಯ ಸಮಯಂ ಮನ್ಯಂತೇ ಸುಹೃದಸ್ತವ।।

ಕುರುನಂದನ! ನೀನು ಅಂಥಹ ಸಮ್ರಾಟ ಸ್ಥಾನಕ್ಕೆ ಅರ್ಹನಾಗಿದ್ದುದರಿಂದ ರಾಜಸೂಯದ ಸಮಯ ಪ್ರಾಪ್ತವಾಗಿದೆ ಎಂದು ನಿನ್ನ ಸುಹೃದಯರು ಅಭಿಪ್ರಾಯ ಪಡುತ್ತಾರೆ.

02012013a ತಸ್ಯ ಯಜ್ಞಸ್ಯ ಸಮಯಃ ಸ್ವಾಧೀನಃ ಕ್ಷತ್ರಸಂಪದಾ।
02012013c ಸಾಮ್ನಾ ಷಡಗ್ನಯೋ ಯಸ್ಮಿಂಶ್ಚೀಯಂತೇ ಸಂಶಿತವ್ರತೈಃ।।

ಸಂಶಿತವ್ರತರು ಸಾಮವೇದದ ಮೂಲಕ ಆರು ಅಗ್ನಿಗಳನ್ನು ಸ್ಥಾಪಿಸುವ ಈ ಯಜ್ಞಕ್ಕೆ ಕ್ಷತ್ರಿಯರ ಸಮ್ಮತವಿರಬೇಕಾಗಿದ್ದುದರಿಂದ ತನ್ನದೇ ಆದ ಸಮಯವೆಂದಿಲ್ಲ.

02012014a ದರ್ವೀಹೋಮಾನುಪಾದಾಯ ಸರ್ವಾನ್ಯಃ ಪ್ರಾಪ್ನುತೇ ಕ್ರತೂನ್।
02012014c ಅಭಿಷೇಕಂ ಚ ಯಜ್ಞಾಂತೇ ಸರ್ವಜಿತ್ತೇನ ಚೋಚ್ಯತೇ।।

ಎಲ್ಲ ಕ್ರಮಗಳನ್ನೂ ಆಹುತಿಗಳನ್ನೂ ನಡೆಸಿ ಕ್ರತುವನ್ನು ಪೂರೈಸಿ ಅಭಿಷಿಕ್ತನಾದ ನಂತರವೇ ಅವನನ್ನು ಸರ್ವಜಿತುವೆಂದು ಕರೆಯಲಾಗುತ್ತದೆ.

02012015a ಸಮರ್ಥೋಽಸಿ ಮಹಾಬಾಹೋ ಸರ್ವೇ ತೇ ವಶಗಾ ವಯಂ।
02012015c ಅವಿಚಾರ್ಯ ಮಹಾರಾಜ ರಾಜಸೂಯೇ ಮನಃ ಕುರು।।

ಮಹಾರಾಜ! ಮಹಾಬಾಹೋ! ನಾವೆಲ್ಲರೂ ನಿನ್ನ ವಶದಲ್ಲಿದ್ದೇವೆ. ನೀನು ಸಮರ್ಥನಾಗಿದ್ದೀಯೆ. ವಿಚಾರಮಾಡದೇ ರಾಜಸೂಯಕ್ಕೆ ಮನಸ್ಸು ಮಾಡು.”

02012016a ಇತ್ಯೇವಂ ಸುಹೃದಃ ಸರ್ವೇ ಪೃಥಕ್ಚ ಸಹ ಚಾಬ್ರುವನ್।
02012016c ಸ ಧರ್ಮ್ಯಂ ಪಾಂಡವಸ್ತೇಷಾಂ ವಚಃ ಶ್ರುತ್ವಾ ವಿಶಾಂ ಪತೇ।
02012016e ಧೃಷ್ಟಮಿಷ್ಟಂ ವರಿಷ್ಠಂ ಚ ಜಗ್ರಾಹ ಮನಸಾರಿಹಾ।।

ಹೀಗೆ ಅವನ ಸರ್ವ ಸುಹೃದಯರೂ ಪುನಃ ಪುನಃ ಹೇಳಿದರು. ಅಂಥಹ ಧಾರ್ಮಿಕ, ಧೃಷ್ಟ, ಇಷ್ಟ, ಮತ್ತು ವರಿಷ್ಠ ಮಾತುಗಳನ್ನು ಅವರಿಂದ ಕೇಳಿದ ವಿಶಾಂಪತಿ ಪಾಂಡವನು ಅದನ್ನು ಸ್ವೀಕರಿಸಿದನು.

02012017a ಶ್ರುತ್ವಾ ಸುಹೃದ್ವಚಸ್ತಚ್ಚ ಜಾನಂಶ್ಚಾಪ್ಯಾತ್ಮನಃ ಕ್ಷಮಂ।
02012017c ಪುನಃ ಪುನರ್ಮನೋ ದಧ್ರೇ ರಾಜಸೂಯಾಯ ಭಾರತ।।

ಭಾರತ! ಸುಹೃದಯರ ಮಾತುಗಳನ್ನು ಕೇಳಿ ಮತ್ತು ತಾನು ಸಮರ್ಥನೆಂದು ತಿಳಿದ ಅವನು ಪುನಃ ಪುನಃ ಮನಸ್ಸಿನಲ್ಲಿಯೇ ರಾಜಸೂಯದ ಕುರಿತು ಯೋಚಿಸಿದನು.

02012018a ಸ ಭ್ರಾತೃಭಿಃ ಪುನರ್ಧೀಮಾನೃತ್ವಿಗ್ಭಿಶ್ಚ ಮಹಾತ್ಮಭಿಃ।
02012018c ಧೌಮ್ಯದ್ವೈಪಾಯನಾದ್ಯೈಶ್ಚ ಮಂತ್ರಯಾಮಾಸ ಮಂತ್ರಿಭಿಃ।।

ಆ ಮಹಾತ್ಮನು ಪುನಃ ಪುನಃ ಭ್ರಾತೃಗಳೊಡನೆ, ಧೌಮ್ಯ-ದ್ವೈಪಾಯನರಂಥಹ ಧೀಮಂತ ಋತ್ವಿಗರೊಡನೆ, ಮತ್ತು ಮಂತಿಗಳೊಡನೆ ಮಂತ್ರಾಲೋಚನೆ ಮಾಡಿದನು.

02012019 ಯುಧಿಷ್ಠಿರ ಉವಾಚ।
02012019a ಇಯಂ ಯಾ ರಾಜಸೂಯಸ್ಯ ಸಮ್ರಾಡರ್ಹಸ್ಯ ಸುಕ್ರತೋಃ।
02012019c ಶ್ರದ್ದಧಾನಸ್ಯ ವದತಃ ಸ್ಪೃಹಾ ಮೇ ಸಾ ಕಥಂ ಭವೇತ್।।

ಯುಧಿಷ್ಠಿರನು ಹೇಳಿದನು: “ಶ್ರದ್ಧೆಯಿಂದ ಹೇಳುತ್ತಿರುವ ಈ ಸಮ್ರಾಟಸ್ಥಾನವನ್ನು ನೀಡುವ ಸುಕ್ರತು ರಾಜಸೂಯವು ಹೇಗೆ ನಡೆಯಬಹುದು?””

02012020 ವೈಶಂಪಾಯನ ಉವಾಚ।
02012020a ಏವಮುಕ್ತಾಸ್ತು ತೇ ತೇನ ರಾಜ್ಞಾ ರಾಜೀವಲೋಚನ।
02012020c ಇದಮೂಚುರ್ವಚಃ ಕಾಲೇ ಧರ್ಮಾತ್ಮಾನಂ ಯುಧಿಷ್ಠಿರಂ।
02012020e ಅರ್ಹಸ್ತ್ವಮಸಿ ಧರ್ಮಜ್ಞ ರಾಜಸೂಯಂ ಮಹಾಕ್ರತುಂ।।

ವೈಶಂಪಾಯನನು ಹೇಳಿದನು: “ರಾಜೀವಲೋಚನ! ಆ ರಾಜನು ಹೀಗೆ ಹೇಳಲು ಧರ್ಮಾತ್ಮ ಯುಧಿಷ್ಠಿರನಿಗೆ ಪ್ರತಿಸಲವೂ “ಧರ್ಮಜ್ಞ! ರಾಜಸೂಯ ಮಹಾಕ್ರತುವಿಗೆ ನೀನು ಅರ್ಹ!” ಎಂದು ಹೇಳುತ್ತಿದ್ದರು.

02012021a ಅಥೈವಮುಕ್ತೇ ನೃಪತಾವೃತ್ವಿಗ್ಭಿರೃಷಿಭಿಸ್ತಥಾ।
02012021c ಮಂತ್ರಿಣೋ ಭ್ರಾತರಶ್ಚಾಸ್ಯ ತದ್ವಚಃ ಪ್ರತ್ಯಪೂಜಯನ್।।
02012022a ಸ ತು ರಾಜಾ ಮಹಾಪ್ರಾಜ್ಞಃ ಪುನರೇವಾತ್ಮನಾತ್ಮವಾನ್।
02012022c ಭೂಯೋ ವಿಮಮೃಶೇ ಪಾರ್ಥೋ ಲೋಕಾನಾಂ ಹಿತಕಾಮ್ಯಯಾ।।

ಋತ್ವಿಗ ಋಷಿಗಳು ಈ ರೀತಿ ನೃಪತಿಗೆ ಹೇಳಲು ಮಂತ್ರಿಗಳು ಮತ್ತು ಸಹೋದರರು ಆ ಮಾತನ್ನು ಸನ್ಮಾನಿಸಿ ಸ್ವಾಗತಿಸಿದರು. ಮಹಾಪ್ರಜ್ಞ ರಾಜ ಪಾರ್ಥನಾದರೂ ಲೋಕಗಳ ಹಿತವನ್ನೇ ಬಯಸಿ ಪುನಃ ತನ್ನ ಮನಸ್ಸಿನಲ್ಲಿಯೇ ವಿಮರ್ಶಿಸಿದನು.

02012023a ಸಾಮರ್ಥ್ಯಯೋಗಂ ಸಂಪ್ರೇಕ್ಷ್ಯ ದೇಶಕಾಲೌ ವ್ಯಯಾಗಮೌ।
02012023c ವಿಮೃಶ್ಯ ಸಮ್ಯಕ್ಚ ಧಿಯಾ ಕುರ್ವನ್ಪ್ರಾಜ್ಞೋ ನ ಸೀದತಿ।।

ತನ್ನ ಸಾಮರ್ಥ್ಯವನ್ನು ಪರಿಗಣಿಸಿ, ದೇಶ ಕಾಲಗಳನ್ನು ತುಲನೆ ಮಾಡಿ, ಆದಾಯ ವ್ಯಯಗಳನ್ನು ಪರಿಶೀಲಿಸಿ ಕಾರ್ಯವನ್ನು ಕೈಗೊಳ್ಳುವ ಪ್ರಾಜ್ಞನು ಎಂದೂ ನಾಶವಾಗುವುದಿಲ್ಲ.

02012024a ನ ಹಿ ಯಜ್ಞಸಮಾರಂಭಃ ಕೇವಲಾತ್ಮವಿಪತ್ತಯೇ।
02012024c ಭವತೀತಿ ಸಮಾಜ್ಞಾಯ ಯತ್ನತಃ ಕಾರ್ಯಮುದ್ವಹನ್।।
02012025a ಸ ನಿಶ್ಚಯಾರ್ಥಂ ಕಾರ್ಯಸ್ಯ ಕೃಷ್ಣಮೇವ ಜನಾರ್ದನಂ।
02012025c ಸರ್ವಲೋಕಾತ್ಪರಂ ಮತ್ವಾ ಜಗಾಮ ಮನಸಾ ಹರಿಂ।।

ತನ್ನನ್ನು ಆಪತ್ತಿನಲ್ಲಿ ತಂದುಕೊಳ್ಳಲು ಯಜ್ಞ ಸಮಾರಂಭವನ್ನು ಕೈಗೊಳ್ಳಬಾರದು ಮತ್ತು ಈ ಕಾರ್ಯದಲ್ಲಿ ಪ್ರಯತ್ನ ಬೇಕು ಎಂದು ತಿಳಿದ ಅವನು ಆ ಕಾರ್ಯದ ನಿಶ್ಚಿತಾರ್ಥಕ್ಕಾಗಿ ಮನಸ್ಸಿನಲ್ಲಿಯೇ ಸರ್ವಲೋಕಗಳಲ್ಲಿ ಶ್ರೇಷ್ಠನೆಂದು ತಿಳಿದ ಜನಾರ್ದನ ಹರಿ ಕೃಷ್ಣನಲ್ಲಿಗೆ ಹೋದನು.

02012026a ಅಪ್ರಮೇಯಂ ಮಹಾಬಾಹುಂ ಕಾಮಾಜ್ಜಾತಮಜಂ ನೃಷು।
02012026c ಪಾಂಡವಸ್ತರ್ಕಯಾಮಾಸ ಕರ್ಮಭಿರ್ದೇವಸಮ್ಮಿತೈಃ।।

ಪಾಂಡವನು ದೇವಕರ್ಮಗಳಿಗೆ ಸಮ ಕಾರ್ಯಗಳನ್ನೆಸಗಿದ ಆ ಮಹಾಬಾಹು, ಹುಟ್ಟಿಲ್ಲದ ಆದರೂ ಸ್ವ ಇಚ್ಛೆಯಿಂದ ಮನುಷ್ಯರಲ್ಲಿ ಜನ್ಮ ತಾಳಿದ ಅಪ್ರಮೇಯನನ್ನು ನೆನೆದನು.

02012027a ನಾಸ್ಯ ಕಿಂ ಚಿದವಿಜ್ಞಾತಂ ನಾಸ್ಯ ಕಿಂ ಚಿದಕರ್ಮಜಂ।
02012027c ನ ಸ ಕಿಂ ಚಿನ್ನ ವಿಷಹೇದಿತಿ ಕೃಷ್ಣಮಮನ್ಯತ।।

ಅವನಿಗೆ ತಿಳಿಯದೇ ಇದ್ದದ್ದು ಏನೂ ಇಲ್ಲ. ಅವನ ಕರ್ಮದಿಂದ ಹುಟ್ಟದೇ ಇರುವಂಥಹುದು ಏನೂ ಇಲ್ಲ. ಅವನು ಸಹಿಸದೇ ಇರುವಂಥಹುದು ಯಾವುದೂ ಇಲ್ಲ ಎಂದು ಕೃಷ್ಣನ ಕುರಿತು ಅವನು ಯೋಚಿಸಿದನು.

02012028a ಸ ತು ತಾಂ ನೈಷ್ಠಿಕೀಂ ಬುದ್ಧಿಂ ಕೃತ್ವಾ ಪಾರ್ಥೋ ಯುಧಿಷ್ಠಿರಃ।
02012028c ಗುರುವದ್ಭೂತಗುರವೇ ಪ್ರಾಹಿಣೋದ್ದೂತಮಂಜಸಾ।।

ಅಂತಿಮ ನಿರ್ಧಾರಕ್ಕೆ ಬಂದ ನಂತರ ಪಾರ್ಥ ಯುಧಿಷ್ಠಿರನು ಬೇಗನೆ ಗುರುವಿಗೆ ಕಳುಹಿಸುವಂತೆ ದೂತನನ್ನು ಆ ಸರ್ವ ಭೂತಗಳ ಗುರುವಿಗೆ ಕಳುಹಿಸಿದನು.

02012029a ಶೀಘ್ರಗೇನ ರಥೇನಾಶು ಸ ದೂತಃ ಪ್ರಾಪ್ಯ ಯಾದವಾನ್।
02012029c ದ್ವಾರಕಾವಾಸಿನಂ ಕೃಷ್ಣಂ ದ್ವಾರವತ್ಯಾಂ ಸಮಾಸದತ್।।

ಶೀಘ್ರರಥದಲ್ಲಿ ಬೇಗನೇ ಯಾದವರನ್ನು ತಲುಪಿದ ದೂತನು ದ್ವಾರಕಾವಾಸಿ ಕೃಷ್ಣನನ್ನು ದ್ವಾರವತಿಯ ಮನೆಯಲ್ಲಿ ಕಂಡನು.

02012030a ದರ್ಶನಾಕಾಂಕ್ಷಿಣಂ ಪಾರ್ಥಂ ದರ್ಶನಾಕಾಂಕ್ಷಯಾಚ್ಯುತಃ।
02012030c ಇಂದ್ರಸೇನೇನ ಸಹಿತ ಇಂದ್ರಪ್ರಸ್ಥಂ ಯಯೌ ತದಾ।।

ತನ್ನನ್ನು ನೋಡಲು ಬಯಸಿದ ಪಾರ್ಥನನ್ನು ನೋಡುವ ಆಸೆಯಿಂದ ಅಚ್ಯುತನು ಇಂದ್ರಸೇನನನ್ನೊಡಗೊಂಡು ಇಂದ್ರಪ್ರಸ್ಥಕ್ಕೆ ಹೊರಟನು.

02012031a ವ್ಯತೀತ್ಯ ವಿವಿಧಾನ್ದೇಶಾಂಸ್ತ್ವರಾವಾನ್ ಕ್ಷಿಪ್ರವಾಹನಃ।
02012031c ಇಂದ್ರಪ್ರಸ್ಥಗತಂ ಪಾರ್ಥಮಭ್ಯಗಚ್ಛಜ್ಜನಾರ್ದನಃ।।

ಕ್ಷಿಪ್ರವಾಹನವನ್ನೇರಿ ವಿವಿಧದೇಶಗಳನ್ನು ವೇಗವಾಗಿ ದಾಟಿ ಜನಾರ್ದನನು ಇಂದ್ರಪ್ರಸ್ಥವನ್ನು ಸೇರಿ ಪಾರ್ಥನನ್ನು ಭೇಟಿಯಾದನು.

02012032a ಸ ಗೃಹೇ ಭ್ರಾತೃವದ್ಭ್ರಾತ್ರಾ ಧರ್ಮರಾಜೇನ ಪೂಜಿತಃ।
02012032c ಭೀಮೇನ ಚ ತತೋಽಪಶ್ಯತ್ಸ್ವಸಾರಂ ಪ್ರೀತಿಮಾನ್ಪಿತುಃ।।

ಭ್ರಾತೃವಿನ ಮನೆಗೆ ಭ್ರಾತೃವನ್ನು ಸ್ವಾಗತಿಸುವಂತೆ ಧರ್ಮರಾಜ- ಭೀಮಸೇನರು ಸ್ವಾಗತಿಸಲು ಅವನು ತನ್ನ ತಂದೆಯ ತಂಗಿಯನ್ನು ಪ್ರೀತಿಯಿಂದ ಕಂಡನು.

02012033a ಪ್ರೀತಃ ಪ್ರಿಯೇಣ ಸುಹೃದಾ ರೇಮೇ ಸ ಸಹಿತಸ್ತದಾ।
02012033c ಅರ್ಜುನೇನ ಯಮಾಭ್ಯಾಂ ಚ ಗುರುವತ್ಪರ್ಯುಪಸ್ಥಿತಃ।।

ತನ್ನ ಪ್ರೀತಿಯ ಸುಹೃದ ಅರ್ಜುನನೊಡನೆ ರಮಿಸಿದನು ಮತ್ತು ಯಮಳರಿಂದ ಗುರುವಿಗೆ ತಕ್ಕ ಗೌರವವನ್ನು ಪಡೆದನು.

02012034a ತಂ ವಿಶ್ರಾಂತಂ ಶುಭೇ ದೇಶೇ ಕ್ಷಣಿನಂ ಕಲ್ಯಮಚ್ಯುತಂ।
02012034c ಧರ್ಮರಾಜಃ ಸಮಾಗಮ್ಯ ಜ್ಞಾಪಯತ್ಸ್ವಂ ಪ್ರಯೋಜನಂ।।

ಅವನು ವಿಶ್ರಾಂತಿಯನ್ನು ಹೊಂದ ನಂತರ ಸಮಯ ಮಾಡಿಕೊಂಡು ಶುಭದೇಶದಲ್ಲಿ ಧರ್ಮರಾಜನು ಅವನನ್ನು ಬೇಟಿಮಾಡಿ ತನ್ನ ಯೋಜನೆಯ ಕುರಿತು ಹೇಳಿಕೊಂಡನು.

02012035 ಯುಧಿಷ್ಠಿರ ಉವಾಚ।
02012035a ಪ್ರಾರ್ಥಿತೋ ರಾಜಸೂಯೋ ಮೇ ನ ಚಾಸೌ ಕೇವಲೇಪ್ಸಯಾ।
02012035c ಪ್ರಾಪ್ಯತೇ ಯೇನ ತತ್ತೇ ಹ ವಿದಿತಂ ಕೃಷ್ಣ ಸರ್ವಶಃ।।

ಯುಧಿಷ್ಠಿರನು ಹೇಳಿದನು: “ರಾಜಸೂಯವನ್ನು ಕೈಗೊಳ್ಳುವ ಮನಸ್ಸಾಗಿದೆ. ಆದರೆ ಕೃಷ್ಣ! ನಿನಗೆ ತಿಳಿದಿದೆ ಇದನ್ನು ಕೇವಲ ಇಚ್ಛಿಸುವುದರಿಂದ ಮಾತ್ರ ನೆರವೇರಿಸಿದಂತಾಗುವುದಿಲ್ಲ.

02012036a ಯಸ್ಮಿನ್ಸರ್ವಂ ಸಂಭವತಿ ಯಶ್ಚ ಸರ್ವತ್ರ ಪೂಜ್ಯತೇ।
02012036c ಯಶ್ಚ ಸರ್ವೇಶ್ವರೋ ರಾಜಾ ರಾಜಸೂಯಂ ಸ ವಿಂದತಿ।।

ಯಾವುದರಿಂದ ಎಲ್ಲವೂ ಸಂಭವಿಸುತ್ತವೆಯೋ ಯಾವುದನ್ನು ಎಲ್ಲೆಡೆಯೂ ಪೂಜಿಸುತ್ತಾರೋ ಮತ್ತು ಯಾವ ರಾಜನನ್ನು ಸರ್ವೇಶ್ವರನೆಂದು ಪರಿಗಣಿಸುತ್ತಾರೋ ಅದೇ ರಾಜಸೂಯ.

02012037a ತಂ ರಾಜಸೂಯಂ ಸುಹೃದಃ ಕಾರ್ಯಮಾಹುಃ ಸಮೇತ್ಯ ಮೇ।
02012037c ತತ್ರ ಮೇ ನಿಶ್ಚಿತತಮಂ ತವ ಕೃಷ್ಣ ಗಿರಾ ಭವೇತ್।।

ಸಭೆಯಲ್ಲಿ ನನ್ನ ಮಿತ್ರರು ನಾನು ರಾಜಸೂಯವನ್ನು ಮಾಡಲು ಅರ್ಹ ಎಂದಿದ್ದಾರೆ. ಆದರೆ ಕೃಷ್ಣ! ಇದರ ಕುರಿತು ನಿನ್ನ ಮಾತುಗಳನ್ನು ಕೇಳಿಯೇ ನಿಶ್ಚಯಿಸಬೇಕೆಂದಿದ್ದೇನೆ.

02012038a ಕೇ ಚಿದ್ಧಿ ಸೌಹೃದಾದೇವ ದೋಷಂ ನ ಪರಿಚಕ್ಷತೇ।
02012038c ಅರ್ಥಹೇತೋಸ್ತಥೈವಾನ್ಯೇ ಪ್ರಿಯಮೇವ ವದಂತ್ಯುತ।।
02012039a ಪ್ರಿಯಮೇವ ಪರೀಪ್ಸಂತೇ ಕೇ ಚಿದಾತ್ಮನಿ ಯದ್ಧಿತಂ।
02012039c ಏವಂಪ್ರಾಯಾಶ್ಚ ದೃಶ್ಯಂತೇ ಜನವಾದಾಃ ಪ್ರಯೋಜನೇ।।

ಕೆಲವರು ಮಿತ್ರತ್ವದಿಂದಾಗಿ ದೋಷವನ್ನು ಪರಿಗಣಿಸುವುದಿಲ್ಲ. ಇನ್ನು ಕೆಲವರು ಲಾಭದ ಪ್ರತೀಕ್ಷೆಯಿಂದ ಪ್ರಿಯ ಮಾತುಗಳನ್ನೇ ಆಡುತ್ತಾರೆ. ಹಾಗಾಗಿ ಜನರ ಅಭಿಪ್ರಾಯಗಳು ಅಷ್ಟೇ ಪ್ರಯೋಜನವಾಗಿರುತ್ತವೆ.

02012040a ತ್ವಂ ತು ಹೇತೂನತೀತ್ಯೈತಾನ್ಕಾಮಕ್ರೋಧೌ ವ್ಯತೀತ್ಯ ಚ।
02012040c ಪರಮಂ ನಃ ಕ್ಷಮಂ ಲೋಕೇ ಯಥಾವದ್ವಕ್ತುಮರ್ಹಸಿ।।

ಆದರೆ ನೀನು ಕಾಮ ಕ್ರೋಧಗಳನ್ನು ತೊರೆದು ಈ ಎಲ್ಲ ಆಕಾಂಕ್ಷೆಗಳನ್ನೂ ಮೀರಿದ್ದೀಯೆ. ಈ ಲೋಕಕ್ಕೆ ಶ್ರೇಷ್ಠವಾದುದು ಏನು ಎನ್ನುವುದನ್ನು ನೀನು ಹೇಳಬೇಕು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಮಂತ್ರಪರ್ವಣಿ ವಾಸುದೇವಾಗಮನೇ ದ್ವಾದಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸಭಾಪರ್ವದಲ್ಲಿ ಮಂತ್ರಪರ್ವದಲ್ಲಿ ವಾಸುದೇವನ ಆಗಮನ ಎನ್ನುವ ಹನ್ನೆರಡನೆಯ ಅಧ್ಯಾಯವು.