011 ಬ್ರಹ್ಮಸಭಾವರ್ಣನಂ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸಭಾ ಪರ್ವ

ಸಭಾ ಪರ್ವ

ಅಧ್ಯಾಯ 11

ಸಾರ

ಬ್ರಹ್ಮಸಭೆಯ ವರ್ಣನೆ (1-42). ರಾಜಾ ಹರಿಶ್ಚಂದ್ರನ ರಾಜಸೂಯ ಯಾಗದ ಕೀರ್ತನೆ (43-61). ತಾನೂ ರಾಜಸೂಯವನ್ನು ಮಾಡಬಹುದೆಂದು ಹೇಳಲು ಯುಧಿಷ್ಠಿರನು ಅದರ ಕುರಿತು ಚಿಂತಿಸಿದುದು (62-73).

02011001 ನಾರದ ಉವಾಚ।
02011001a ಪುರಾ ದೇವಯುಗೇ ರಾಜನ್ನಾದಿತ್ಯೋ ಭಗವಾನ್ದಿವಃ।
02011001c ಆಗಚ್ಛನ್ಮಾನುಷಂ ಲೋಕಂ ದಿದೃಕ್ಷುರ್ವಿಗತಕ್ಲಮಃ।।

ನಾರದನು ಹೇಳಿದನು: “ರಾಜನ್! ಹಿಂದೆ ದೇವಯುಗದಲ್ಲಿ ವಿಗತಕ್ಲಮ ಭಗವಾನ್ ಆದಿತ್ಯನು ಮಾನುಷ ಲೋಕವನ್ನು ನೋಡಲು ದಿವದಿಂದ ಆಗಮಿಸಿದನು.

02011002a ಚರನ್ಮಾನುಷರೂಪೇಣ ಸಭಾಂ ದೃಷ್ಟ್ವಾ ಸ್ವಯಂಭುವಃ।
02011002c ಸಭಾಮಕಥಯನ್ಮಹ್ಯಂ ಬ್ರಾಹ್ಮೀಂ ತತ್ತ್ವೇನ ಪಾಂಡವ।।

ಪಾಂಡವ! ಮಾನುಷರೂಪದಲ್ಲಿ ಸಂಚರಿಸುತ್ತಿರುವಾಗ ಅವನು ಸ್ವಯಂಭು ಬ್ರಹ್ಮನ ಮಹಾ ಸಭೆಯನ್ನು ನೋಡಿದ ಹಾಗೆ ನನಗೆ ಹೇಳಿದನು.

02011003a ಅಪ್ರಮೇಯಪ್ರಭಾಂ ದಿವ್ಯಾಂ ಮಾನಸೀಂ ಭರತರ್ಷಭ।
02011003c ಅನಿರ್ದೇಶ್ಯಾಂ ಪ್ರಭಾವೇನ ಸರ್ವಭೂತಮನೋರಮಾಂ।।
02011004a ಶ್ರುತ್ವಾ ಗುಣಾನಹಂ ತಸ್ಯಾಃ ಸಭಾಯಾಃ ಪಾಂಡುನಂದನ।
02011004c ದರ್ಶನೇಪ್ಸುಸ್ತಥಾ ರಾಜನ್ನಾದಿತ್ಯಮಹಮಬ್ರುವಂ।।

ಭರತರ್ಷಭ! ಪಾಂಡುನಂದನ! ರಾಜನ್! ದಿವ್ಯ ಅಪ್ರಮೇಯ ಪ್ರಭೆಯನ್ನು ಹೊಂದಿದ, ಮನಸ್ಸಿಗೆ ಸಂತೋಷವನ್ನು ನೀಡುವ, ತನ್ನ ಅನಿರ್ದೇಶ್ಯ ಪ್ರಭಾವದಿಂದ ಸರ್ವಭೂತಗಳ ಮನೋರಮೆ ಆ ಸಭೆಯ ಗುಣಗಳನ್ನು ಕೇಳಿದ ನಾನು ಅದನ್ನು ನೋಡಲು ಉತ್ಸುಕನಾಗಿ ಆದಿತ್ಯನಲ್ಲಿ ಕೇಳಿಕೊಂಡೆನು.

02011005a ಭಗವನ್ದ್ರಷ್ಟುಮಿಚ್ಛಾಮಿ ಪಿತಾಮಹಸಭಾಮಹಂ।
02011005c ಯೇನ ಸಾ ತಪಸಾ ಶಕ್ಯಾ ಕರ್ಮಣಾ ವಾಪಿ ಗೋಪತೇ।।
02011006a ಔಷಧೈರ್ವಾ ತಥಾ ಯುಕ್ತೈರುತ ವಾ ಮಾಯಯಾ ಯಯಾ।
02011006c ತನ್ಮಮಾಚಕ್ಷ್ವ ಭಗವನ್ಪಶ್ಯೇಯಂ ತಾಂ ಸಭಾಂ ಕಥಂ।।

“ಭಗವನ್! ಪಿತಾಮಹನ ಮಹಾಸಭೆಯನ್ನು ನೋಡಲು ಬಯಸುತ್ತೇನೆ. ಗೋಪತೇ! ಯಾವ ತಪಸ್ಸು, ಕರ್ಮ, ಔಷಧಿ, ಉಪಾಯ ಅಥವಾ ಮಾಯೆಯಿಂದ ಅದನ್ನು ನೋಡಲು ಸಾಧ್ಯವಾಗುತ್ತದೆ? ಭಗವನ್! ನಾನು ಆ ಸಭೆಯನ್ನು ಹೇಗೆ ನೋಡಲಿ ಎಂದು ಹೇಳು.”

02011007a ತತಃ ಸ ಭಗವಾನ್ಸೂರ್ಯೋ ಮಾಮುಪಾದಾಯ ವೀರ್ಯವಾನ್।
02011007c ಅಗಚ್ಛತ್ತಾಂ ಸಭಾಂ ಬ್ರಾಹ್ಮೀಂ ವಿಪಾಪಾಂ ವಿಗತಕ್ಲಮಾಂ।।

ಆಗ ಆ ವೀರ್ಯವಾನ್ ಸೂರ್ಯ ಭಗವಾನನು ಪಾಪವೇ ಇಲ್ಲದ ಆಯಾಸವನ್ನೇ ಅರಿಯದ ಬ್ರಹ್ಮನ ಆ ಸಭೆಗೆ ನನ್ನನ್ನು ಕರೆದುಕೊಂಡು ಆಗಮಿಸಿದನು.

02011008a ಏವಂರೂಪೇತಿ ಸಾ ಶಕ್ಯಾ ನ ನಿರ್ದೇಷ್ಟುಂ ಜನಾಧಿಪ।
02011008c ಕ್ಷಣೇನ ಹಿ ಬಿಭರ್ತ್ಯನ್ಯದನಿರ್ದೇಶ್ಯಂ ವಪುಸ್ತಥಾ।।

ಜನಾಧಿಪ! ಇದೇ ಅದರ ರೂಪವೆಂದು ನಿರ್ದಿಷ್ಠವಾಗಿ ಹೇಳಲು ಶಕ್ಯವಿಲ್ಲ. ಯಾಕೆಂದರೆ ಕ್ಷಣ ಕ್ಷಣಕ್ಕೆ ಅದರ ಅನಿರ್ದೇಶ್ಯ ರೂಪವು ಬದಲಾಗುತ್ತಿರುತ್ತದೆ.

02011009a ನ ವೇದ ಪರಿಮಾಣಂ ವಾ ಸಂಸ್ಥಾನಂ ವಾಪಿ ಭಾರತ।
02011009c ನ ಚ ರೂಪಂ ಮಯಾ ತಾದೃಗ್ದೃಷ್ಟಪೂರ್ವಂ ಕದಾ ಚನ।।

ಭಾರತ! ನನಗೆ ಅದರ ಪರಿಮಾಣವಾಗಲೀ ಸಂಸ್ಥಾನವಾಗಲೀ ಗೊತ್ತಿಲ್ಲ. ಮತ್ತು ಅದಕ್ಕೆ ಮೊದಲು ಎಂದೂ ನಾನು ಅಂಥಹ ರೂಪವನ್ನು ನೋಡಿರಲಿಲ್ಲ.

02011010a ಸುಸುಖಾ ಸಾ ಸಭಾ ರಾಜನ್ನ ಶೀತಾ ನ ಚ ಘರ್ಮದಾ।
02011010c ನ ಕ್ಷುತ್ಪಿಪಾಸೇ ನ ಗ್ಲಾನಿಂ ಪ್ರಾಪ್ಯ ತಾಂ ಪ್ರಾಪ್ನುವಂತ್ಯುತ।।

ರಾಜನ್! ಆ ಸಭೆಯು ಸುಸುಖವಾಗಿದೆ - ಶೀತವೂ ಇಲ್ಲ ಉಷ್ಣವೂ ಇಲ್ಲ. ಅದನ್ನು ಪ್ರವೇಶಿಸಿದವರಿಗೆ ಹಸಿವು, ಬಾಯಾರಿಕೆ, ಆಯಾಸ ಎನ್ನುವುದೇ ಇರುವುದಿಲ್ಲ.

02011011a ನಾನಾರೂಪೈರಿವ ಕೃತಾ ಸುವಿಚಿತ್ರೈಃ ಸುಭಾಸ್ವರೈಃ।
02011011c ಸ್ತಂಭೈರ್ನ ಚ ಧೃತಾ ಸಾ ತು ಶಾಶ್ವತೀ ನ ಚ ಸಾ ಕ್ಷರಾ।।

ಅದು ಬಣ್ಣ ಬಣ್ಣಗಳಿಂದ ಹೊಳೆಯುತ್ತಿದ್ದು ನಾನಾ ರೂಪಗಳಲ್ಲಿ ರಚಿಸಲ್ಪಟ್ಟಿದೆ. ಅದಕ್ಕೆ ಬೆಂಬಲ ನೀಡುವ ಯಾವ ಸ್ತಂಬಗಳೂ ಇರಲಿಲ್ಲ. ಶಾಶ್ವತವಾಗಿದ್ದ ಅದಕ್ಕೆ ಕ್ಷಯವೆಂಬುದೇ ತಿಳಿದಿಲ್ಲ.

02011012a ಅತಿ ಚಂದ್ರಂ ಚ ಸೂರ್ಯಂ ಚ ಶಿಖಿನಂ ಚ ಸ್ವಯಂಪ್ರಭಾ।
02011012c ದೀಪ್ಯತೇ ನಾಕಪೃಷ್ಠಸ್ಥಾ ಭಾಸಯಂತೀವ ಭಾಸ್ಕರಂ।।

ಅದು ಚಂದ್ರ, ಸೂರ್ಯ ಮತ್ತು ಅಗ್ನಿಗೂ ಅಧಿಕ ಸ್ವಯಂಪ್ರಭೆಯನ್ನು ಹೊಂದಿದೆ. ನಾಕದ ಸೂರಿನಲ್ಲಿ ಭಾಸ್ಕರನಿಗೆ ಬೆಳಕನ್ನು ನೀಡುತ್ತಿದೆಯೋ ಎನ್ನುವಂತೆ ಬೆಳಗುತ್ತದೆ.

02011013a ತಸ್ಯಾಂ ಸ ಭಗವಾನಾಸ್ತೇ ವಿದಧದ್ದೇವಮಾಯಯಾ।
02011013c ಸ್ವಯಮೇಕೋಽನಿಶಂ ರಾಜಽಲ್ಲೋಕಾಽಲ್ಲೋಕಪಿತಾಮಹಃ।।

ರಾಜನ್! ಅದರಲ್ಲಿ ದೇವಮಾಯೆಯಿಂದ ನಿಲುವಿಲ್ಲದೇ ಲೋಕಗಳನ್ನು ಸೃಷ್ಟಿಮಾಡುತ್ತಿರುವ ಲೋಕಪಿತಾಮಹ ಭಗವಾನನು ತಾನೊಬ್ಬನೇ ಕುಳಿತಿದ್ದಾನೆ.

02011014a ಉಪತಿಷ್ಠಂತಿ ಚಾಪ್ಯೇನಂ ಪ್ರಜಾನಾಂ ಪತಯಃ ಪ್ರಭುಂ।
02011014c ದಕ್ಷಃ ಪ್ರಚೇತಾಃ ಪುಲಹೋ ಮರೀಚಿಃ ಕಶ್ಯಪಸ್ತಥಾ।।
02011015a ಭೃಗುರತ್ರಿರ್ವಸಿಷ್ಠಶ್ಚ ಗೌತಮಶ್ಚ ತಥಾಂಗಿರಾಃ।
02011015c ಮನೋಽಂತರಿಕ್ಷಂ ವಿದ್ಯಾಶ್ಚ ವಾಯುಸ್ತೇಜೋ ಜಲಂ ಮಹೀ।।
02011016a ಶಬ್ಧಃ ಸ್ಪರ್ಶಸ್ತಥಾ ರೂಪಂ ರಸೋ ಗಂಧಶ್ಚ ಭಾರತ।
02011016c ಪ್ರಕೃತಿಶ್ಚ ವಿಕಾರಶ್ಚ ಯಚ್ಚಾನ್ಯತ್ಕಾರಣಂ ಭುವಃ।।

ಭಾರತ! ಪ್ರಜಾಪತಿಗಳಾದ ದಕ್ಷ, ಪ್ರಚೇತ, ಪುಲಹ, ಮರೀಚಿ, ಕಶ್ಯಪ, ಭೃಗು, ಅತ್ರಿ, ವಸಿಷ್ಠ, ಗೌತಮ, ಅಂಗಿರಸ, ಮನು, ಅಂತರಿಕ್ಷ, ವಿಧ್ಯೆ, ವಾಯು, ಅಗ್ನಿ, ಜಲ, ಭೂಮಿ, ಶಬ್ಧ, ಸ್ಪರ್ಷ, ರೂಪ, ರಸ, ಗಂಧ, ಪ್ರಕೃತಿ, ವಿಕಾರ ಮತ್ತು ವಿಶ್ವದ ಅನ್ಯ ಕಾರಣಗಳು ಆ ಪ್ರಭುವಿನ ಸೇವೆಮಾಡುತ್ತಾರೆ.

02011017a ಚಂದ್ರಮಾಃ ಸಹ ನಕ್ಷತ್ರೈರಾದಿತ್ಯಶ್ಚ ಗಭಸ್ತಿಮಾನ್।
02011017c ವಾಯವಃ ಕ್ರತವಶ್ಚೈವ ಸಂಕಲ್ಪಃ ಪ್ರಾಣ ಏವ ಚ।।
02011018a ಏತೇ ಚಾನ್ಯೇ ಚ ಬಹವಃ ಸ್ವಯಂಭುವಮುಪಸ್ಥಿತಾಃ।
02011018c ಅರ್ಥೋ ಧರ್ಮಶ್ಚ ಕಾಮಶ್ಚ ಹರ್ಷೋ ದ್ವೇಷಸ್ತಪೋ ದಮಃ।।

ನಕ್ಷತ್ರಗಳ ಸಹಿತ ಚಂದ್ರಮ, ಗಭಸ್ತಿಮಾನ ಆದಿತ್ಯ, ವಾಯು, ಋತುಗಳು, ಸಂಕಲ್ಪ, ಪ್ರಾಣ, ಇವು ಮತ್ತು ಅನ್ಯ ಬಹಳಷ್ಟು – ಅರ್ಥ, ಧರ್ಮ, ಕಾಮ, ಹರ್ಷ, ದ್ವೇಶ, ತಪಸ್ಸು, ದಮ - ಎಲ್ಲವೂ ಸ್ವಯಂಭುವಿನ ಉಪಸ್ಥಿತಿಯಲ್ಲಿದ್ದಾರೆ.

02011019a ಆಯಾಂತಿ ತಸ್ಯಾಂ ಸಹಿತಾ ಗಂಧರ್ವಾಪ್ಸರಸಸ್ತಥಾ।
02011019c ವಿಂಶತಿಃ ಸಪ್ತ ಚೈವಾನ್ಯೇ ಲೋಕಪಾಲಾಶ್ಚ ಸರ್ವಶಃ।।
02011020a ಶುಕ್ರೋ ಬೃಹಸ್ಪತಿಶ್ಚೈವ ಬುಧೋಽಂಗಾರಕ ಏವ ಚ।
02011020c ಶನೈಶ್ಚರಶ್ಚ ರಾಹುಶ್ಚ ಗ್ರಹಾಃ ಸರ್ವೇ ತಥೈವ ಚ।।
02011021a ಮಂತ್ರೋ ರಥಂತರಶ್ಚೈವ ಹರಿಮಾನ್ ವಸುಮಾನಪಿ।
02011021c ಆದಿತ್ಯಾಃ ಸಾಧಿರಾಜಾನೋ ನಾನಾದ್ವಂದ್ವೈರುದಾಹೃತಾಃ।।
02011022a ಮರುತೋ ವಿಶ್ವಕರ್ಮಾ ಚ ವಸವಶ್ಚೈವ ಭಾರತ।
02011022c ತಥಾ ಪಿತೃಗಣಾಃ ಸರ್ವೇ ಸರ್ವಾಣಿ ಚ ಹವೀಂಷ್ಯಥ।।
02011023a ಋಗ್ವೇದಃ ಸಾಮವೇದಶ್ಚ ಯಜುರ್ವೇದಶ್ಚ ಪಾಂಡವ।
02011023c ಅಥರ್ವವೇದಶ್ಚ ತಥಾ ಪರ್ವಾಣಿ ಚ ವಿಶಾಂ ಪತೇ।।
02011024a ಇತಿಹಾಸೋಪವೇದಾಶ್ಚ ವೇದಾಂಗಾನಿ ಚ ಸರ್ವಶಃ।
02011024c ಗ್ರಹಾ ಯಜ್ಞಾಶ್ಚ ಸೋಮಶ್ಚ ದೈವತಾನಿ ಚ ಸರ್ವಶಃ।।
02011025a ಸಾವಿತ್ರೀ ದುರ್ಗತರಣೀ ವಾಣೀ ಸಪ್ತವಿಧಾ ತಥಾ।
02011025c ಮೇಧಾ ಧೃತಿಃ ಶ್ರುತಿಶ್ಚೈವ ಪ್ರಜ್ಞಾ ಬುದ್ಧಿರ್ಯಶಃ ಕ್ಷಮಾ।।
02011026a ಸಾಮಾನಿ ಸ್ತುತಿಶಸ್ತ್ರಾಣಿ ಗಾಥಾಶ್ಚ ವಿವಿಧಾಸ್ತಥಾ।
02011026c ಭಾಷ್ಯಾಣಿ ತರ್ಕಯುಕ್ತಾನಿ ದೇಹವಂತಿ ವಿಶಾಂ ಪತೇ।।
02011027a ಕ್ಷಣಾ ಲವಾ ಮುಹೂರ್ತಾಶ್ಚ ದಿವಾ ರಾತ್ರಿಸ್ತಥೈವ ಚ।
02011027c ಅರ್ಧಮಾಸಾಶ್ಚ ಮಾಸಾಶ್ಚ ಋತವಃ ಷಟ್ ಚ ಭಾರತ।।
02011028a ಸಂವತ್ಸರಾಃ ಪಂಚಯುಗಮಹೋರಾತ್ರಾಶ್ಚತುರ್ವಿಧಾಃ।
02011028c ಕಾಲಚಕ್ರಂ ಚ ಯದ್ದಿವ್ಯಂ ನಿತ್ಯಮಕ್ಷಯಮವ್ಯಯಂ।।
02011029a ಅದಿತಿರ್ದಿತಿರ್ದನುಶ್ಚೈವ ಸುರಸಾ ವಿನತಾ ಇರಾ।
02011029c ಕಾಲಕಾ ಸುರಭಿರ್ದೇವೀ ಸರಮಾ ಚಾಥ ಗೌತಮೀ।।
02011030a ಆದಿತ್ಯಾ ವಸವೋ ರುದ್ರಾ ಮರುತಶ್ಚಾಶ್ವಿನಾವಪಿ।
02011030c ವಿಶ್ವೇದೇವಾಶ್ಚ ಸಾಧ್ಯಾಶ್ಚ ಪಿತರಶ್ಚ ಮನೋಜವಾಃ।।
02011031a ರಾಕ್ಷಸಾಶ್ಚ ಪಿಶಾಚಾಶ್ಚ ದಾನವಾ ಗುಃಯಕಾಸ್ತಥಾ।
02011031c ಸುಪರ್ಣನಾಗಪಶವಃ ಪಿತಾಮಹಮುಪಾಸತೇ।।

ಭಾರತ! ಪಾಂಡವ! ವಿಶಾಂಪತೇ! ಅಲ್ಲಿಗೆ ಗಂಧರ್ವರು-ಅಪ್ಸರೆಯರು ಒಟ್ಟಿಗೇ ಬರುತ್ತಾರೆ. ಇಪ್ಪತ್ತೇಳು ಮತ್ತು ಅನ್ಯ ಲೋಕಪಾಲರೆಲ್ಲರೂ, ಶುಕ್ರ, ಬೃಹಸ್ಪತಿ, ಬುಧ, ಅಂಗಾರಕ, ಶನೈಶ್ಚರ, ರಾಹು ಮೊದಲಾದ ಗ್ರಹಗಳೆಲ್ಲರೂ, ಮಂತ್ರ, ರಥಂತರ, ಹರಿಮಾನ್, ವಸುಮಾನ್, ಅವರ ರಾಜನೊಂದಿಗೆ ಆದಿತ್ಯರು, ಎರಡೆರಡು ಹೆಸರುಗಳಿಂದ ಕರೆಯಲ್ಪಡುವ ಎಲ್ಲ ದೇವತೆಗಳೂ, ಮರುತ, ವಿಶ್ವಕರ್ಮ, ವಸವ, ಎಲ್ಲ ಪಿತೃಗಣಗಳು, ಸರ್ವ ಹವಿಸ್ಸುಗಳು, ಋಗ್ವೇದ, ಸಾಮವೇದ, ಯಜುರ್ವೇದ, ಅಥರ್ವವೇದ, ಪರ್ವಗಳು, ಸರ್ವ ಇತಿಹಾಸಗಳು, ಉಪವೇದಗಳು, ವೇದಾಂಗಗಳು, ಗ್ರಹಗಳು, ಯಜ್ಞಗಳು, ಸೋಮಗಳು, ಸರ್ವ ದೇವತೆಗಳು, ದುರ್ಗತರಣೀ ಸಾವಿತ್ರೀ, ಸಪ್ತವಿಧ ವಾಣೀ, ಮೇಧಾ, ಧೃತಿ, ಶ್ರುತಿ, ಪ್ರಜ್ಞಾ, ಬುದ್ಧಿ, ಯಶಸ್ಸು, ಕ್ಷಮಾ, ಸಾಮ, ಸ್ತುತಿ, ಶಸ್ತ್ರಗಳು, ಗಾಥಗಳು, ವಿವಿಧ ಭಾಷೆಗಳು, ತರ್ಕಯುಕ್ತ ಭಾಗಗಳು, ಕ್ಷಣ, ಲವ, ಮುಹೂರ್ತ, ಹಗಲು, ರಾತ್ರಿ, ಮತ್ತು ಅರ್ಧಮಾಸ, ಮಾಸ, ಆರೂ ಋತುಗಳು, ಸಂವತ್ಸರಗಳು, ಪಂಚಯುಗಗಳು, ಚತುರ್ವಿಧ ಆಹೋರಾತ್ರಿಗಳು, ದಿವ್ಯ, ನಿತ್ಯವೂ ಅಕ್ಷಯ ಮತ್ತು ಅವ್ಯಯ ಕಾಲಚಕ್ರ, ಅದಿತಿ, ದಿತಿ, ದನು, ವಿನತ, ಇರಾ, ಕದ್ರು, ಕಾಲಕ, ಸುರಭಿ, ದೇವಿ ಸರಮಾ, ಗೌತಮೀ, ಆದಿತ್ಯ, ವಸವ, ರುದ್ರ, ಮರುತ, ಅಶ್ವಿನೀ ದೇವತೆಗಳು, ವಿಶ್ವೇದೇವರು, ಸಾದ್ಯರು, ಪಿತೃಗಳು, ಮನಸ್ಸಿನಲ್ಲಿಯೇ ಹುಟ್ಟಿದವರು, ರಾಕ್ಷಸರು, ಪಿಶಾಚರು, ದಾನವರು, ಗುಹ್ಯಕರು, ಸುಪರ್ಣ, ನಾಗ ಮತ್ತು ಇತರ ಪಶುಗಳು ಪಿತಾಮಹನ ಸೇವೆ ಮಾಡುತ್ತಾರೆ.

02011032a ದೇವೋ ನಾರಾಯಣಸ್ತಸ್ಯಾಂ ತಥಾ ದೇವರ್ಷಯಶ್ಚ ಯೇ।
02011032c ಋಷಯೋ ವಾಲಖಿಲ್ಯಾಶ್ಚ ಯೋನಿಜಾಯೋನಿಜಾಸ್ತಥಾ।।

ಅಲ್ಲಿ ದೇವ ನಾರಾಯಣನಿದ್ದಾನೆ, ದೇವರ್ಷಿಗಳು, ವಾಲಖಿಲ್ಯ ಋಷಿಗಳು, ಯೋನಿಗಳಲ್ಲಿ ಹುಟ್ಟಿದವರು, ಅಯೋನಿಜರು ಎಲ್ಲರೂ ಇದ್ದಾರೆ.

02011033a ಯಚ್ಚ ಕಿಂ ಚಿತ್ತ್ರಿಲೋಕೇಽಸ್ಮಿನ್ದೃಶ್ಯತೇ ಸ್ಥಾಣುಜಂಗಮಂ।
02011033c ಸರ್ವಂ ತಸ್ಯಾಂ ಮಯಾ ದೃಷ್ಟಂ ತದ್ವಿದ್ಧಿ ಮನುಜಾಧಿಪ।।

ಮನುಜಾಧಿಪ! ಈ ತ್ರಿಲೋಕದಲ್ಲಿ ಕಾಣುತ್ತಿರುವ ಏನೆಲ್ಲ ಸ್ಥಾವರ ಜಂಗಮಗಳಿವೆಯೋ ಅವೆಲ್ಲವನ್ನೂ ನಾನು ಅಲ್ಲಿ ನೋಡಿದ್ದೇನೆ ಎಂದು ತಿಳಿ.

02011034a ಅಷ್ಟಾಶೀತಿಸಹಸ್ರಾಣಿ ಯತೀನಾಮೂರ್ಧ್ವರೇತಸಾಂ।
02011034c ಪ್ರಜಾವತಾಂ ಚ ಪಂಚಾಶದೃಷೀಣಾಮಪಿ ಪಾಂಡವ।।
02011035a ತೇ ಸ್ಮ ತತ್ರ ಯಥಾಕಾಮಂ ದೃಷ್ಟ್ವಾ ಸರ್ವೇ ದಿವೌಕಸಃ।
02011035c ಪ್ರಣಮ್ಯ ಶಿರಸಾ ತಸ್ಮೈ ಪ್ರತಿಯಾಂತಿ ಯಥಾಗತಂ।।

ಪಾಂಡವ! ಎಂಭತ್ತು ಸಾವಿರ ಊರ್ಧ್ವರೇತಸ ಯತಿಗಳು, ಮಕ್ಕಳನ್ನು ಪಡೆದಿರುವ ಐವತ್ತು ಸಾವಿರ ಋಷಿಗಳು, ಮತ್ತು ಸರ್ವ ದಿವೌಕಸರೂ ತಮಗಿಷ್ಟ ಬಂದಂತೆ ಅಲ್ಲಿಗೆ ಬಂದು ಅವನಿಗೆ ಶಿರಸಾ ವಂದಿಸಿ ಬಂದಹಾಗೆ ಮರಳಿ ಹೋಗುವವರನ್ನು ಕಂಡಿದ್ದೇನೆ.

02011036a ಅತಿಥೀನಾಗತಾನ್ದೇವಾನ್ದೈತ್ಯಾನ್ನಾಗಾನ್ಮುನೀಂಸ್ತಥಾ।
02011036c ಯಕ್ಷಾನ್ಸುಪರ್ಣಾನ್ಕಾಲೇಯಾನ್ಗಂಧರ್ವಾಪ್ಸರಸಸ್ತಥಾ।।
02011037a ಮಹಾಭಾಗಾನಮಿತಧೀರ್ಬ್ರಹ್ಮಾ ಲೋಕಪಿತಾಮಹಃ।
02011037c ದಯಾವಾನ್ಸರ್ವಭೂತೇಷು ಯಥಾರ್ಹಂ ಪ್ರತಿಪದ್ಯತೇ।।

ಅತಿಥಿಗಳಾಗಿ ಆಗಮಿಸಿದ ದೇವತೆಗಳು, ದೈತ್ಯರು, ನಾಗಗಳು, ಮುನಿಗಳು, ಯಕ್ಷರು, ಸುಪರ್ಣರು, ಕಾಲೇಯರು, ಗಂಧರ್ವರು, ಅಪ್ಸರೆಯರಿಗೆ ಅಮಿತಬುದ್ಧಿ ಮಹಾಭಾಗ ಲೋಕಪಿತಾಮಹ ಸರ್ವಭೂತಗಳಿಗೂ ದಯಾವಂತ ಬ್ರಹ್ಮನು ಯಥಾರ್ಹವಾಗಿ ಪ್ರೀತಿ ತೋರಿಸುತ್ತಾನೆ.

02011038a ಪ್ರತಿಗೃಹ್ಯ ಚ ವಿಶ್ವಾತ್ಮಾ ಸ್ವಯಂಭೂರಮಿತಪ್ರಭಃ।
02011038c ಸಾಂತ್ವಮಾನಾರ್ಥಸಂಭೋಗೈರ್ಯುನಕ್ತಿ ಮನುಜಾಧಿಪ।।

ಮನುಜಾಧಿಪ! ಆ ವಿಶ್ವಾತ್ಮ ಸ್ವಯಂಭು ಅಮಿತಪ್ರಭನು ಅವರನ್ನು ಬರಮಾಡಿಕೊಂಡು ಸಾಂತ್ವನದಾಯಕ ಆನಂದವನ್ನು ನೀಡುತ್ತಾನೆ.

02011039a ತಥಾ ತೈರುಪಯಾತೈಶ್ಚ ಪ್ರತಿಯಾತೈಶ್ಚ ಭಾರತ।
02011039c ಆಕುಲಾ ಸಾ ಸಭಾ ತಾತ ಭವತಿ ಸ್ಮ ಸುಖಪ್ರದಾ।।

ಭಾರತ! ತಾತ! ಬರುವ ಮತ್ತು ಹೋಗುತ್ತಿರುವ ಅತಿಥಿಗಳಿಂದ ಆ ಸುಖಪ್ರದ ಸಭೆಯು ಸದಾ ಅತ್ಯಂತ ಬಿಡುವಿಲ್ಲದಂತಿರುತ್ತದೆ.

02011040a ಸರ್ವತೇಜೋಮಯೀ ದಿವ್ಯಾ ಬ್ರಹ್ಮರ್ಷಿಗಣಸೇವಿತಾ।
02011040c ಬ್ರಾಹ್ಮ್ಯಾ ಶ್ರಿಯಾ ದೀಪ್ಯಮಾನಾ ಶುಶುಭೇ ವಿಗತಕ್ಲಮಾ।।

ಬ್ರಹ್ಮರ್ಷಿಗಣಸೇವಿತ, ಸರ್ವತೇಜೋಮಯಿ, ಆಯಾಸವನ್ನು ದೂರಮಾಡುವ, ಬ್ರಹ್ಮನ ಶ್ರೀಯಿಂದ ದೀಪ್ಯಮಾನವಾಗಿರುವ ಆ ದಿವ್ಯ ಸಭೆಯು ಮಂಗಳಕರವಾದುದು.

02011041a ಸಾ ಸಭಾ ತಾದೃಶೀ ದೃಷ್ಟಾ ಸರ್ವಲೋಕೇಷು ದುರ್ಲಭಾ।
02011041c ಸಭೇಯಂ ರಾಜಶಾರ್ದೂಲ ಮನುಷ್ಯೇಷು ಯಥಾ ತವ।।

ರಾಜಶಾರ್ದೂಲ! ಸರ್ವಲೋಕದಲ್ಲಿ ಅದರಂತೆ ಕಾಣುವ ಸಭೆಯು ಹೇಗೆ ದುರ್ಲಭವೋ ಹಾಗೆ ಮನುಷ್ಯರಲ್ಲಿ ನಿನ್ನ ಈ ಸಭೆಯು ದುರ್ಲಭ.

02011042a ಏತಾ ಮಯಾ ದೃಷ್ಟಪೂರ್ವಾಃ ಸಭಾ ದೇವೇಷು ಪಾಂಡವ।
02011042c ತವೇಯಂ ಮಾನುಷೇ ಲೋಕೇ ಸರ್ವಶ್ರೇಷ್ಠತಮಾ ಸಭಾ।।

ಪಾಂಡವ! ದೇವತೆಗಳಲ್ಲಿ ನಾನು ಇದಕ್ಕೂ ಮೊದಲು ನೋಡಿದ ಸಭೆಗಳಿವು. ನಿನ್ನ ಈ ಸಭೆಯು ಮನುಷ್ಯ ಲೋಕದಲ್ಲಿ ಸರ್ವಶ್ರೇಷ್ಠತಮವಾದದ್ದು.”

02011043 ಯುಧಿಷ್ಠಿರ ಉವಾಚ।
02011043a ಪ್ರಾಯಶೋ ರಾಜಲೋಕಸ್ತೇ ಕಥಿತೋ ವದತಾಂ ವರ।
02011043c ವೈವಸ್ವತಸಭಾಯಾಂ ತು ಯಥಾ ವದಸಿ ವೈ ಪ್ರಭೋ।।

ಯುಧಿಷ್ಠಿರನು ಹೇಳಿದನು: “ಮಾತನಾಡುವವರಲ್ಲಿ ಶ್ರೇಷ್ಠ! ಪ್ರಭೋ! ನೀನು ಹೇಳಿದಂತೆ ವೈವಸ್ವತನ ಸಭೆಯಲ್ಲಿ ಪ್ರಾಯಷಃ ಲೋಕದ ರಾಜರುಗಳೆಲ್ಲರೂ ಇದ್ದಾರೆ ಎಂದಾಯಿತು.

02011044a ವರುಣಸ್ಯ ಸಭಾಯಾಂ ತು ನಾಗಾಸ್ತೇ ಕಥಿತಾ ವಿಭೋ।
02011044c ದೈತ್ಯೇಂದ್ರಾಶ್ಚೈವ ಭೂಯಿಷ್ಠಾಃ ಸರಿತಃ ಸಾಗರಾಸ್ತಥಾ।।

ವರುಣನ ಸಭೆಯಲ್ಲಿ ನಾಗಗಳು, ದೈತ್ಯೇಂದ್ರರು, ನದಿಗಳು ಮತ್ತು ಸಾಗರಗಳು ಇದ್ದಾರೆ ಎಂದು ನೀನು ಹೇಳಿದೆ.

02011045a ತಥಾ ಧನಪತೇರ್ಯಕ್ಷಾ ಗುಹ್ಯಕಾ ರಾಕ್ಷಸಾಸ್ತಥಾ।
02011045c ಗಂಧರ್ವಾಪ್ಸರಸಶ್ಚೈವ ಭಗವಾಂಶ್ಚ ವೃಷಧ್ವಜಃ।।

ಹಾಗೆಯೇ ಧನಪತಿಯ ಸಭೆಯಲ್ಲಿ ಯಕ್ಷರು, ಗುಹ್ಯಕರು, ರಾಕ್ಷಸರು, ಗಂಧರ್ವರು, ಅಪ್ಸರೆಯರು ಮತ್ತು ಭಗವಾನ್ ವೃಷಧ್ವಜನು ಇದ್ದಾರೆ.

02011046a ಪಿತಾಮಹಸಭಾಯಾಂ ತು ಕಥಿತಾಸ್ತೇ ಮಹರ್ಷಯಃ।
02011046c ಸರ್ವದೇವನಿಕಾಯಾಶ್ಚ ಸರ್ವಶಾಸ್ತ್ರಾಣಿ ಚೈವ ಹಿ।।

ಮತ್ತು ಪಿತಾಮಹನ ಸಭೆಯಲ್ಲಿ ಮಹರ್ಷಿಗಳು, ಸರ್ವ ದೇವತೆಗಳು ಮತ್ತು ಸರ್ವ ಶಾಸ್ತ್ರಗಳು ಇವೆಯೆಂದು ಹೇಳಿದೆ.

02011047a ಶತಕ್ರತುಸಭಾಯಾಂ ತು ದೇವಾಃ ಸಂಕೀರ್ತಿತಾ ಮುನೇ।
02011047c ಉದ್ದೇಶತಶ್ಚ ಗಂಧರ್ವಾ ವಿವಿಧಾಶ್ಚ ಮಹರ್ಷಯಃ।।

ಶತಕ್ರತುವಿನ ಸಭೆಯಲ್ಲಿ ದೇವತೆಗಳು, ಮುನಿಗಳು, ನಿರ್ದಿಷ್ಟ ಗಂಧರ್ವರು ಮತ್ತು ವಿವಿಧ ಮಹರ್ಷಿಗಳು ಇದ್ದಾರೆಂದು ಹೇಳಿದೆ.

02011048a ಏಕ ಏವ ತು ರಾಜರ್ಷಿರ್ಹರಿಶ್ಚಂದ್ರೋ ಮಹಾಮುನೇ।
02011048c ಕಥಿತಸ್ತೇ ಸಭಾನಿತ್ಯೋ ದೇವೇಂದ್ರಸ್ಯ ಮಹಾತ್ಮನಃ।।

ಮಹಾಮುನೇ! ಆದರೆ ನೀನು ಮಹಾತ್ಮ ದೇವೇಂದ್ರನ ಸಭೆಯಲ್ಲಿ ಒಬ್ಬನೇ ರಾಜರ್ಷಿ ಹರಿಶ್ಚಂದ್ರನು ಇದ್ದಾನೆಂದು ಹೇಳಿದೆ.

02011049a ಕಿಂ ಕರ್ಮ ತೇನಾಚರಿತಂ ತಪೋ ವಾ ನಿಯತವ್ರತಂ।
02011049c ಯೇನಾಸೌ ಸಹ ಶಕ್ರೇಣ ಸ್ಪರ್ಧತೇ ಸ್ಮ ಮಹಾಯಶಾಃ।।

ಅವನು ಏನು ಮಾಡಿದನು ಅಥವಾ ತಪಸ್ಸನ್ನು ಮಾಡಿದನೇ ಅಥವಾ ವ್ರತಗಳನ್ನು ಮಾಡಿದನೇ? ಯಾವುದರಿಂದ ಆ ಮಹಾಯಶನು ಶಕ್ರನೊಂದಿಗೆ ಸ್ಪರ್ಧಿಸುತ್ತಿದ್ದಾನೆ?

02011050a ಪಿತೃಲೋಕಗತಶ್ಚಾಪಿ ತ್ವಯಾ ವಿಪ್ರ ಪಿತಾ ಮಮ।
02011050c ದೃಷ್ಟಃ ಪಾಂಡುರ್ಮಹಾಭಾಗಃ ಕಥಂ ಚಾಸಿ ಸಮಾಗತಃ।।

ವಿಪ್ರ! ಮತ್ತು ಪಿತೃಲೋಕಕ್ಕೆ ಹೋದಾಗ ನೀನು ನನ್ನ ತಂದೆ ಮಹಾಭಾಗ ಪಾಂಡುವನ್ನು ನೋಡಿದೆ. ಅವನೊಂದಿಗೆ ಭೇಟಿಯು ಹೇಗಿತ್ತು?

02011051a ಕಿಮುಕ್ತವಾಂಶ್ಚ ಭಗವನ್ನೇತದಿಚ್ಛಾಮಿ ವೇದಿತುಂ।
02011051c ತ್ವತ್ತಃ ಶ್ರೋತುಮಹಂ ಸರ್ವಂ ಪರಂ ಕೌತೂಹಲಂ ಹಿ ಮೇ।।

ಭಗವನ್! ಅವನು ನಿನ್ನಲ್ಲಿ ಏನು ಹೇಳಿದನು ಎನ್ನುವುದನ್ನು ತಿಳಿಯಲು ಬಯಸುತ್ತೇನೆ. ನಿನ್ನಿಂದ ಸರ್ವವನ್ನೂ ಕೇಳಿ ತಿಳಿದುಕೊಳ್ಳಬೇಕೆಂಬ ಕುತೂಹಲವಾಗಿದೆ.”

02011052 ನಾರದ ಉವಾಚ।
02011052a ಯನ್ಮಾಂ ಪೃಚ್ಛಸಿ ರಾಜೇಂದ್ರ ಹರಿಶ್ಚಂದ್ರಂ ಪ್ರತಿ ಪ್ರಭೋ।
02011052c ತತ್ತೇಽಹಂ ಸಂಪ್ರವಕ್ಷ್ಯಾಮಿ ಮಾಹಾತ್ಮ್ಯಂ ತಸ್ಯ ಧೀಮತಃ।।

ನಾರದನು ಹೇಳಿದನು: “ಪ್ರಭು ರಾಜೇಂದ್ರ! ಹರಿಶ್ಚಂದ್ರನ ಕುರಿತು ಕೇಳಿದ್ದೀಯಾದ್ದರಿಂದ ನಿನಗೆ ಆ ಧೀಮಂತನ ಮಹಾತ್ಮೆಯನ್ನು ಹೇಳುತ್ತೇನೆ1.

02011053a ಸ ರಾಜಾ ಬಲವಾನಾಸೀತ್ಸಮ್ರಾಟ್ಸರ್ವಮಹೀಕ್ಷಿತಾಂ।
02011053c ತಸ್ಯ ಸರ್ವೇ ಮಹೀಪಾಲಾಃ ಶಾಸನಾವನತಾಃ ಸ್ಥಿತಾಃ।।

ಆ ಬಲವಂತ ರಾಜನು ಸರ್ವಮಹೀಕ್ಷಿತರ ಸಾಮ್ರಾಟನಾಗಿದ್ದು ಸರ್ವ ಮಹೀಪಾಲರೂ ಅವನ ಆಜ್ಞೆಯನ್ನು ಪಾಲಿಸುತ್ತಿದ್ದರು.

02011054a ತೇನೈಕಂ ರಥಮಾಸ್ಥಾಯ ಜೈತ್ರಂ ಹೇಮವಿಭೂಷಿತಂ।
02011054c ಶಸ್ತ್ರಪ್ರತಾಪೇನ ಜಿತಾ ದ್ವೀಪಾಃ ಸಪ್ತ ನರೇಶ್ವರ।।

ನರೇಶ್ವರ! ಅವನು ಏಕಾಂಗಿಯಾಗಿ ಹೇಮವಿಭೂಷಿತ ರಥವನ್ನೇರಿ ಎಳೂ ದ್ವೀಪಗಳನ್ನು ತನ್ನ ಶಸ್ತ್ರಪ್ರತಾಪದಿಂದ ಗೆದ್ದನು.

02011055a ಸ ವಿಜಿತ್ಯ ಮಹೀಂ ಸರ್ವಾಂ ಸಶೈಲವನಕಾನನಾಂ।
02011055c ಆಜಹಾರ ಮಹಾರಾಜ ರಾಜಸೂಯಂ ಮಹಾಕ್ರತುಂ।।

ಮಹಾರಾಜ! ಶೈಲವನಕಾನನಗಳ ಸಹಿತ ಸರ್ವ ಮಹಿಯನ್ನೂ ಗೆದ್ದು ಅವನು ಮಹಾಕ್ರತು ರಾಜಸೂಯವನ್ನು ನೆರವೇರಿಸಿದನು.

02011056a ತಸ್ಯ ಸರ್ವೇ ಮಹೀಪಾಲಾ ಧನಾನ್ಯಾಜಹ್ರುರಾಜ್ಞಯಾ।
02011056c ದ್ವಿಜಾನಾಂ ಪರಿವೇಷ್ಟಾರಸ್ತಸ್ಮಿನ್ಯಜ್ಞೇ ಚ ತೇಽಭವನ್।।

ಅವನ ಆಜ್ಞೆಯಂತೆ ಸರ್ವ ಮಹೀಪಾಲರೂ ಧನ ಮತ್ತು ಅನ್ಯ ಸಂಪತ್ತುಗಳನ್ನು ತಂದು ಆ ಯಜ್ಞದಲ್ಲಿ ದ್ವಿಜರ ಸೇವೆ ಮಾಡಿದರು.

02011057a ಪ್ರಾದಾಚ್ಚ ದ್ರವಿಣಂ ಪ್ರೀತ್ಯಾ ಯಾಜಕಾನಾಂ ನರೇಶ್ವರಃ।
02011057c ಯಥೋಕ್ತಂ ತತ್ರ ತೈಸ್ತಸ್ಮಿಂಸ್ತತಃ ಪಂಚಗುಣಾಧಿಕಂ।।

ಆ ನರೇಶ್ವರನು ಯಾಜಕರಿಗೆ ಪ್ರೀತಿಯಿಂದ ಅವರು ಕೇಳಿದುದಕ್ಕಿಂತಲೂ ಐದು ಪಟ್ಟು ಧನವನ್ನು ಅಲ್ಲಿಯೇ ಅದೇ ಸಮಯದಲ್ಲಿಯೇ ದಾನವನ್ನಾಗಿತ್ತನು.

02011058a ಅತರ್ಪಯಚ್ಚ ವಿವಿಧೈರ್ವಸುಭಿರ್ಬ್ರಾಹ್ಮಣಾಂಸ್ತಥಾ।
02011058c ಪ್ರಾಸರ್ಪಕಾಲೇ ಸಂಪ್ರಾಪ್ತೇ ನಾನಾದಿಗ್ಭ್ಯಃ ಸಮಾಗತಾನ್।।

ಯಜ್ಞವು ಮುಗಿದ ನಂತರ ಅವನು ನಾನಾ ದಿಕ್ಕುಗಳಿಂದ ಬಂದು ಸೇರಿದ್ದ ಬ್ರಾಹ್ಮಣರನ್ನು ವಿವಿಧ ಸಂಪತ್ತುಗಳನ್ನಿತ್ತು ತೃಪ್ತಿಪಡಿಸಿದನು.

02011059a ಭಕ್ಷ್ಯೈರ್ಭೋಜ್ಯೈಶ್ಚ ವಿವಿಧೈರ್ಯಥಾಕಾಮಪುರಸ್ಕೃತೈಃ।
02011059c ರತ್ನೌಘತರ್ಪಿತೈಸ್ತುಷ್ಟೈರ್ದ್ವಿಜೈಶ್ಚ ಸಮುದಾಹೃತಂ।
02011059e ತೇಜಸ್ವೀ ಚ ಯಶಸ್ವೀ ಚ ನೃಪೇಭ್ಯೋಽಭ್ಯಧಿಕೋಽಭವತ್।।

ವಿವಿಧ ಭಕ್ಷ್ಯ ಭೋಜ್ಯಗಳಿಂದ ರತ್ನಗಳ ರಾಶಿಗಳಿಂದ ಮುದಿತಗೊಂಡ ದ್ವಿಜರು ಸಂತೋಷದಿಂದ ನೃಪರೆಲ್ಲರಲ್ಲಿ ನೀನು ಅಧಿಕ ತೇಜಸ್ವಿ ಮತ್ತು ಯಶಸ್ವಿ ಎಂದು ಹೇಳಿದರು.

02011060a ಏತಸ್ಮಾತ್ಕಾರಣಾತ್ಪಾರ್ಥ ಹರಿಶ್ಚಂದ್ರೋ ವಿರಾಜತೇ।
02011060c ತೇಭ್ಯೋ ರಾಜಸಹಸ್ರೇಭ್ಯಸ್ತದ್ವಿದ್ಧಿ ಭರತರ್ಷಭ।।

ಪಾರ್ಥ! ಭರತರ್ಷಭ! ಈ ಕಾರಣಗಳಿಂದ ಹರಿಶ್ಚಂದ್ರನು ಸಹಸ್ರಾರು ರಾಜರುಗಳನ್ನೂ ಮೀರಿ ಬೆಳಗುತ್ತಾನೆ ಎನ್ನುವುದನ್ನು ತಿಳಿ.

02011061a ಸಮಾಪ್ಯ ಚ ಹರಿಶ್ಚಂದ್ರೋ ಮಹಾಯಜ್ಞಂ ಪ್ರತಾಪವಾನ್।
02011061c ಅಭಿಷಿಕ್ತಃ ಸ ಶುಶುಭೇ ಸಾಮ್ರಾಜ್ಯೇನ ನರಾಧಿಪ।।

ನರಾಧಿಪ! ಆ ಮಹಾಯಜ್ಞವನ್ನು ಮುಗಿಸಿದ ಪ್ರತಾಪವಾನ್ ಹರಿಶ್ಚಂದ್ರನು ಆ ಶುಭಸಾಮ್ರಾಜ್ಯದ ಅಭಿಷಿಕ್ತನಾದನು.

02011062a ಯೇ ಚಾನ್ಯೇಽಪಿ ಮಹೀಪಾಲಾ ರಾಜಸೂಯಂ ಮಹಾಕ್ರತುಂ।
02011062c ಯಜಂತೇ ತೇ ಮಹೇಂದ್ರೇಣ ಮೋದಂತೇ ಸಹ ಭಾರತ।।
02011063a ಯೇ ಚಾಪಿ ನಿಧನಂ ಪ್ರಾಪ್ತಾಃ ಸಂಗ್ರಾಮೇಷ್ವಪಲಾಯಿನಃ।
02011063c ತೇ ತತ್ಸದಃ ಸಮಾಸಾದ್ಯ ಮೋದಂತೇ ಭರತರ್ಷಭ।।
02011064a ತಪಸಾ ಯೇ ಚ ತೀವ್ರೇಣ ತ್ಯಜಂತೀಹ ಕಲೇವರಂ।
02011064c ತೇಽಪಿ ತತ್ಸ್ಥಾನಮಾಸಾದ್ಯ ಶ್ರೀಮಂತೋ ಭಾಂತಿ ನಿತ್ಯಶಃ।।

ಭಾರತ! ಮಹಾಕ್ರತು ರಾಜಸೂಯವನ್ನು ಯಾಜಿಸುವ ಅನ್ಯ ಮಹೀಪಾಲರೂ ಮಹೇಂದ್ರನೊಂದಿಗೆ ಸಂತೋಷಪಡುತ್ತಾರೆ. ಭರತರ್ಷಭ! ಯಾರು ಸಂಗ್ರಾಮದಲ್ಲಿ ಪಲಾಯನಮಾಡದೇ ನಿಧನವನ್ನು ಹೊಂದುತ್ತಾರೋ ಅವರೂ ಕೂಡ ಅವನ ಸಭೆಯನ್ನು ಸೇರಿ ಆನಂದಿಸುತ್ತಾರೆ. ಮತ್ತು ಯಾರು ತೀವ್ರ ತಪಸ್ಸಿನ ಮೂಲಕ ಇಲ್ಲಿ ದೇಹವನ್ನು ತ್ಯಜಿಸುತ್ತಾರೋ ಅವರೂ ಕೂಡ ಅವನ ಆಸ್ಥಾನವನ್ನು ಸೇರಿ ನಿತ್ಯವೂ ಶ್ರೀಮಂತರಾಗಿ ಬೆಳಗುತ್ತಾರೆ.

02011065a ಪಿತಾ ಚ ತ್ವಾಹ ಕೌಂತೇಯ ಪಾಂಡುಃ ಕೌರವನಂದನಃ।
02011065c ಹರಿಶ್ಚಂದ್ರೇ ಶ್ರಿಯಂ ದೃಷ್ಟ್ವಾ ನೃಪತೌ ಜಾತವಿಸ್ಮಯಃ।।

ಕೌರವನಂದನ! ಕೌಂತೇಯ! ಹರಿಶ್ಚಂದ್ರನ ಶ್ರೀಯನ್ನು ನೋಡಿದ ನೃಪತಿ ಪಾಂಡುವು ವಿಸ್ಮಿತನಾದನು.

02011066a ಸಮರ್ಥೋಽಸಿ ಮಹೀಂ ಜೇತುಂ ಭ್ರಾತರಸ್ತೇ ವಶೇ ಸ್ಥಿತಾಃ।
02011066c ರಾಜಸೂಯಂ ಕ್ರತುಶ್ರೇಷ್ಠಮಾಹರಸ್ವೇತಿ ಭಾರತ।।

ಭಾರತ! ನಿನ್ನ ವಶದಲ್ಲಿರುವ ಭ್ರಾತರ ಮೂಲಕ ಮಹಿಯನ್ನು ಗೆಲ್ಲಲು ಸಮರ್ಥನಾಗಿದ್ದೀಯೆ. ರಾಜಸೂಯ ಕ್ರತುವನ್ನು ಕೈಗೊಳ್ಳತಕ್ಕದ್ದು ಎಂದು ಅವನು ಹೇಳಿದನು.

02011067a ತಸ್ಯ ತ್ವಂ ಪುರುಷವ್ಯಾಘ್ರ ಸಂಕಲ್ಪಂ ಕುರು ಪಾಂಡವ।
02011067c ಗಂತಾರಸ್ತೇ ಮಹೇಂದ್ರಸ್ಯ ಪೂರ್ವೈಃ ಸಹ ಸಲೋಕತಾಂ।।

ಪುರುಷವ್ಯಾಘ್ರ ಪಾಂಡವ! ಅವನ ಸಂಕಲ್ಪದಂತೆ ಮಾಡು. ಪೂರ್ವಜರ ಸಹಿತ ಅವನು ಮಹೇಂದ್ರನ ಲೋಕವನ್ನು ಸೇರುತ್ತಾನೆ.

02011068a ಬಹುವಿಘ್ನಶ್ಚ ನೃಪತೇ ಕ್ರತುರೇಷ ಸ್ಮೃತೋ ಮಹಾನ್।
02011068c ಚಿದ್ರಾಣ್ಯತ್ರ ಹಿ ವಾಂಚಂತಿ ಯಜ್ಞಘ್ನಾ ಬ್ರಹ್ಮರಾಕ್ಷಸಾಃ।।

ನೃಪತೇ! ಈ ಕ್ರತುವಿನಲ್ಲಿ ಮಹಾ ವಿಘ್ನಗಳು ಬಂದೊದಗುತ್ತವೆ ಎಂದು ನಂಬಿಕೆಯಿದೆ. ಯಜ್ಞಗಳನ್ನು ನಾಶಪಡಿಸುವ ಬ್ರಹ್ಮರಾಕ್ಷಸರು ಇದರಲ್ಲಿರುವ ದುರ್ಬಲತೆಯನ್ನು ಹುಡುಕಿಕೊಂಡಿರುತ್ತಾರೆ.

02011069a ಯುದ್ಧಂ ಚ ಪೃಷ್ಠಗಮನಂ ಪೃಥಿವೀಕ್ಷಯಕಾರಕಂ।
02011069c ಕಿಂ ಚಿದೇವ ನಿಮಿತ್ತಂ ಚ ಭವತ್ಯತ್ರ ಕ್ಷಯಾವಹಂ।।

ಪೃಥ್ವಿಕ್ಷಯಕಾರಕ ಯುದ್ಧವು ಮುಂದೆಬರುತ್ತದೆ ಮತ್ತು ಅಂಥಹ ಕ್ಷಯವನ್ನು ಸೂಚಿಸುವ ನಿಮಿತ್ತಗಳು ಕೆಲವು ಕಂಡುಬರುತ್ತವೆ.

02011070a ಏತತ್ಸಂಚಿಂತ್ಯ ರಾಜೇಂದ್ರ ಯತ್ ಕ್ಷಮಂ ತತ್ಸಮಾಚರ।
02011070c ಅಪ್ರಮತ್ತೋತ್ಥಿತೋ ನಿತ್ಯಂ ಚಾತುರ್ವರ್ಣ್ಯಸ್ಯ ರಕ್ಷಣೇ।
02011070e ಭವ ಏಧಸ್ವ ಮೋದಸ್ವ ದಾನೈಸ್ತರ್ಪಯ ಚ ದ್ವಿಜಾನ್।।

ರಾಜೇಂದ್ರ! ಇದರ ಕುರಿತು ಚೆನ್ನಾಗಿ ಯೋಚಿಸು. ಯಾವುದು ಕ್ಷೇಮವೆನಿಸುತ್ತದೆಯೋ ಅದನ್ನು ಮಾಡು. ನಿತ್ಯವೂ ಚಾತುರ್ವರ್ಣ್ಯದ ರಕ್ಷಣೆಯನ್ನು ಮರೆಯಬೇಡ. ನೀನು ಕೂಡ ವೃದ್ಧಿ ಹೊಂದು, ಸಂತೋಷಪಡು, ಮತ್ತು ದ್ವಿಜರಿಗೆ ದಾನಗಳನ್ನಿತ್ತು ತೃಪ್ತಿಪಡಿಸು.

02011071a ಏತತ್ತೇ ವಿಸ್ತರೇಣೋಕ್ತಂ ಯನ್ಮಾಂ ತ್ವಂ ಪರಿಪೃಚ್ಛಸಿ।
02011071c ಆಪೃಚ್ಛೇ ತ್ವಾಂ ಗಮಿಷ್ಯಾಮಿ ದಾಶಾರ್ಹನಗರೀಂ ಪ್ರತಿ।।

ನೀನು ಕೇಳಿದ್ದುದೆಲ್ಲವನ್ನೂ ವಿಸ್ತಾರವಾಗಿ ನಾನು ನಿನಗೆ ಹೇಳಿದ್ದೇನೆ. ನಿನ್ನಿಂದ ಬೀಳ್ಕೊಂಡು ನಾನು ಈಗ ದಾಶಾರ್ಹನಗರಿಯ ಕಡೆ ಹೋಗುತ್ತೇನೆ2. ””

02011072 ವೈಶಂಪಾಯನ ಉವಾಚ।
02011072a ಏವಮಾಖ್ಯಾಯ ಪಾರ್ಥೇಭ್ಯೋ ನಾರದೋ ಜನಮೇಜಯ।
02011072c ಜಗಾಮ ತೈರ್ವೃತೋ ರಾಜನ್ನೃಷಿಭಿರ್ಯೈಃ ಸಮಾಗತಃ।।

ವೈಶಂಪಾಯನನು ಹೇಳಿದನು: “ಜನಮೇಜಯ! ರಾಜನ್! ಪಾರ್ಥನಿಗೆ ಈ ರೀತಿ ಹೇಳಿ ನಾರದನು ತನ್ನ ಜೊತೆಗಿದ್ದ ಋಷಿಗಳೊಂದಿಗೆ ಹೊರಟು ಹೋದನು.

02011073a ಗತೇ ತು ನಾರದೇ ಪಾರ್ಥೋ ಭ್ರಾತೃಭಿಃ ಸಹ ಕೌರವ।
02011073c ರಾಜಸೂಯಂ ಕ್ರತುಶ್ರೇಷ್ಠಂ ಚಿಂತಯಾಮಾಸ ಭಾರತ।।

ಭಾರತ! ಕೌರವ! ನಾರದನು ಹೋದ ನಂತರ ಪಾರ್ಥನು ಭ್ರಾತೃಗಳ ಸಹಿತ ಕ್ರತುಶ್ರೇಷ್ಠ ರಾಜಸೂಯದ ಕುರಿತು ಚಿಂತನೆಮಾಡಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಸಭಾಪರ್ವಣಿ ಬ್ರಹ್ಮಸಭಾವರ್ಣನಂ ನಾಮ ಏಕಾದಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸಭಾಪರ್ವದಲ್ಲಿ ಸಭಾಪರ್ವದಲ್ಲಿ ಬ್ರಹ್ಮಸಭಾವರ್ಣನೆ ಎನ್ನುವ ಹನ್ನೊಂದನೆಯ ಅಧ್ಯಾಯವು. ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಸಭಾಪರ್ವಃ ।।
ಇದು ಶ್ರೀಮಹಾಭಾರತದಲ್ಲಿ ಸಭಾಪರ್ವದಲ್ಲಿ ಸಭಾಪರ್ವವು. ಇದೂವರೆಗಿನ ಒಟ್ಟು ಮಹಾಪರ್ವಗಳು-1/18, ಉಪಪರ್ವಗಳು-20/100, ಅಧ್ಯಾಯಗಳು-236/1995, ಶ್ಲೋಕಗಳು-7619/73784.


  1. ಗೋರಖಪುರ ಸಂಪುಟದಲ್ಲಿ ಹರಿಶ್ಚಂದ್ರನ ಕುರಿತು ನಾರದನು ಹೇಳಿದ ಇನ್ನೂ ಕೆಲವು ಶ್ಲೋಕಗಳಿವೆ: ಇಕ್ಷ್ವಾಕೂಣಾಂ ಕುಲೇ ಜಾತಸ್ತ್ರಿಶಂಕುರ್ನಾಮ ಪಾರ್ಥಿವಃ। ಅಯೋಧ್ಯಾಧಿಪತಿರ್ವೀರೋ ವಿಶ್ವಾಮಿತ್ರೇಣ ಸಂಸ್ಥಿತಃ।। ತಸ್ಯ ಸತ್ಯವತೀ ನಾಮ ಪತ್ನೀ ಕೇಕಯವಂಶಜಾ। ತಸ್ಯಾಂ ಗರ್ಭಃ ಸಮಭವದ್ ಧರ್ಮೇಣ ಕುರುನಂದನ।। ಸಾ ಚ ಕಾಲೇ ಮಹಾಭಾಗಾ ಜನ್ಮಮಾಸಂ ಪ್ರವಿಶ್ಯ ವೈ। ಕುಮಾರಂ ಜನಯಾಮಾಸ ಹರಿಶ್ಚಂದ್ರಮಕಲ್ಮಷಂ।। ಸ ವೈ ರಾಜಾ ಹರಿಶ್ಚಂದ್ರಸ್ತ್ರೈಶಂಕವ ಇತಿ ಸ್ಮೃತಃ।। ಅರ್ಥಾತ್: ಇಕ್ಷ್ವಾಕು ಕುಲದಲ್ಲಿ ಹುಟ್ಟಿದ ತ್ರಿಶಂಕು ಎಂಬ ಹೆಸರಿನ ರಾಜ ವೀರನು ಅಯೋಧ್ಯಾಧಿಪತಿಯಾಗಿ ವಿಶ್ವಾಮಿತ್ರನಿಂದ ಸ್ಥಾಪಿಸಲ್ಪಟ್ಟಿದ್ದನು. ಕುರುನಂದನ! ಅವನ ಪತ್ನೀ ಸತ್ಯವತೀ ಎಂಬ ಹೆಸರಿನ ಕೇಕಯವಂಶಜೆಯು ಧರ್ಮಪ್ರಕಾರವಾಗಿ ಗರ್ಭವತಿಯಾದಳು. ಆ ಮಹಾಭಾಗೆಯು ಜನ್ಮಮಾಸವನ್ನು ತಲುಪಿದಾಗ ಅವಳಲ್ಲಿ ಅಕಲ್ಮಷನಾದ ಹರಿಶ್ಚಂದ್ರ ಎಂಬ ಹೆಸರಿನ ಕುಮಾರನು ಜನ್ಮತಾಳಿದನು. ಅವನೇ ತ್ರೈಶಂಕು ರಾಜಾ ಹರಿಶ್ಚಂದ್ರನೆಂದು ಪ್ರಸಿದ್ಧನಾಗಿದ್ದಾನೆ. ಶ್ರೀ ಮಾರ್ಕಂಡೇಯ ಪುರಾಣದಲ್ಲಿ ರಾಜಾ ಹರಿಶ್ಚಂದ್ರನ ಕಥೆಯು ಬರುತ್ತದೆ. ↩︎

  2. ಶ್ರೀಮದ್ಭಾಗವತದಲ್ಲಿ ನಾರದನು ಶ್ರೀಕೃಷ್ಣನ ಸುಧರ್ಮ ಸಭೆಗೆ ಹೋಗಿ ಅಲ್ಲಿ ಯುಧಿಷ್ಠಿರನು ರಾಜಸೂಯ ಯಾಗವನ್ನು ಮಾಡಲು ಬಯಸುತ್ತಾನೆ ಎನ್ನುವುದನ್ನು ಹೇಳಿದ ಪ್ರಸಂಗವಿದೆ. ↩︎