ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸಭಾ ಪರ್ವ
ಸಭಾ ಪರ್ವ
ಅಧ್ಯಾಯ 6
ಸಾರ
ಮಯಸಭೆಗಿಂತಲೂ ಉತ್ತಮವಾದ ಸಭೆಯಾವುದನ್ನಾದರೂ ನೋಡಿದ್ದೀರಾ ಎಂದು ಯುಧಿಷ್ಠಿರನು ಕೇಳಲು ನಾರದನು ಲೋಕಪಾಲರ ಸಭೆಗಳನ್ನು ವರ್ಣಿಸಿದುದು (1-18).
02006001 ವೈಶಂಪಾಯನ ಉವಾಚ।
02006001a ಸಂಪೂಜ್ಯಾಥಾಭ್ಯನುಜ್ಞಾತೋ ಮಹರ್ಷೇರ್ವಚನಾತ್ಪರಂ।
02006001c ಪ್ರತ್ಯುವಾಚಾನುಪೂರ್ವ್ಯೇಣ ಧರ್ಮರಾಜೋ ಯುಧಿಷ್ಠಿರಃ।।
ವೈಶಂಪಾಯನನು ಹೇಳಿದನು: “ಮಹರ್ಷಿಯ ವಚನಗಳಿಂದ ಪರಮಸಂತುಷ್ಟನಾದ ಧರ್ಮರಾಜ ಯುಧಿಷ್ಠಿರನು ಅವನನ್ನು ಪೂಜಿಸಿ, ಅನುಜ್ಞೆಯನ್ನು ಪಡೆದು ಈ ಮಾತುಗಳನ್ನಾಡಿದನು:
02006002a ಭಗವನ್ನ್ಯಾಯ್ಯಮಾಹೈತಂ ಯಥಾವದ್ಧರ್ಮನಿಶ್ಚಯಂ।
02006002c ಯಥಾಶಕ್ತಿ ಯಥಾನ್ಯಾಯಂ ಕ್ರಿಯತೇಽಯಂ ವಿಧಿರ್ಮಯಾ।।
“ಭಗವನ್! ನೀವು ಹೇಳಿದ ಧರ್ಮನಿಶ್ಚಯವೂ ಅನುಸರಣೀಯವೂ ಆದುದನ್ನು ಯಥಾಶಕ್ತಿಯಾಗಿ, ಯಥಾನ್ಯಾಯವಾಗಿ ಮತ್ತು ವಿಧಿವತ್ತಾಗಿ ಮಾಡುತ್ತೇನೆ.
02006003a ರಾಜಭಿಯದ್ಯಥಾ ಕಾರ್ಯಂ ಪುರಾ ತತ್ತನ್ನ ಸಂಶಯಃ।
02006003c ಯಥಾನ್ಯಾಯೋಪನೀತಾರ್ಥಂ ಕೃತಂ ಹೇತುಮದರ್ಥವತ್।।
ಹಿಂದಿನ ರಾಜರು ಇವೆಲ್ಲವನ್ನೂ ಯಥಾನ್ಯಾಯವಾಗಿ ಅರ್ಥವತ್ತಾಗಿ ವಿಚಾರಿಸಿ ಆಚರಿಸಿ ಫಲಗಳನ್ನು ಪಡೆದರು.
02006004a ವಯಂ ತು ಸತ್ಪಥಂ ತೇಷಾಂ ಯಾತುಮಿಚ್ಛಾಮಹೇ ಪ್ರಭೋ।
02006004c ನ ತು ಶಕ್ಯಂ ತಥಾ ಗಂತುಂ ಯಥಾ ತೈರ್ನಿಯತಾತ್ಮಭಿಃ।।
ಪ್ರಭೋ! ನಾವೂ ಕೂಡ ನಿನ್ನ ಈ ಸತ್ಪಥದಲ್ಲಿ ನಡೆಯಲು ಇಚ್ಛಿಸುತ್ತೇವೆ. ಆದರೆ ನಿಯತಾತ್ಮರಾದ ಹಿಂದಿನವರು ನಡೆದುಕೊಂಡಂತೆ ನಡೆದುಕೊಳ್ಳಲು ಶಕ್ಯವಿಲ್ಲದಿರಬಹುದು.”
02006005a ಏವಮುಕ್ತ್ವಾ ಸ ಧರ್ಮಾತ್ಮಾ ವಾಕ್ಯಂ ತದಭಿಪೂಜ್ಯ ಚ।
02006005c ಮುಹೂರ್ತಾತ್ಪ್ರಾಪ್ತಕಾಲಂ ಚ ದೃಷ್ಟ್ವಾ ಲೋಕಚರಂ ಮುನಿಂ।।
02006006a ನಾರದಂ ಸ್ವಸ್ಥಮಾಸೀನಮುಪಾಸೀನೋ ಯುಧಿಷ್ಠಿರಃ।
02006006c ಅಪೃಚ್ಛತ್ಪಾಂಡವಸ್ತತ್ರ ರಾಜಮಧ್ಯೇ ಮಹಾಮತಿಃ।।
ಹೀಗೆ ಮಾತನಾಡಿದ ಆ ಧರ್ಮಾತ್ಮ ಮಹಾಮತಿ ಪಾಂಡವ ಯುಧಿಷ್ಠಿರನು ಅವನನ್ನು ಪೂಜಿಸಿ, ಒಂದು ಕ್ಷಣ ಕಾದು, ಸಮಯ ಪ್ರಾಪ್ತಿಯಾದಾಗ, ಆ ಲೋಕಚರ ಮುನಿ ನಾರದನು ತನ್ನ ಆಸನದಲ್ಲಿ ಕುಳಿತುಕೊಂಡಿದ್ದುದನ್ನು ನೋಡಿ, ರಾಜರ ಮಧ್ಯದಲ್ಲಿ ಕೇಳಿದನು:
02006007a ಭವಾನ್ಸಂಚರತೇ ಲೋಕಾನ್ಸದಾ ನಾನಾವಿಧಾನ್ಬಹೂನ್।
02006007c ಬ್ರಹ್ಮಣಾ ನಿರ್ಮಿತಾನ್ಪೂರ್ವಂ ಪ್ರೇಕ್ಷಮಾಣೋ ಮನೋಜವಃ।।
“ಮನೋವೇಗದಲ್ಲಿ ಪ್ರಯಾಣಿಸಬಲ್ಲ ನೀನು ಸದಾ ಪೂರ್ವದಲ್ಲಿ ಬ್ರಹ್ಮನು ನಿರ್ಮಿಸಿದ ಪ್ರೇಕ್ಷಣೀಯ ನಾನಾ ವಿಧದ ಬಹಳಷ್ಟು ಲೋಕಗಳನ್ನು ಸಂಚರಿಸುತ್ತಿರುತ್ತೀಯೆ.
02006008a ಈದೃಶೀ ಭವತಾ ಕಾ ಚಿದ್ದೃಷ್ಟಪೂರ್ವಾ ಸಭಾ ಕ್ವ ಚಿತ್।
02006008c ಇತೋ ವಾ ಶ್ರೇಯಸೀ ಬ್ರಹ್ಮಂಸ್ತನ್ಮಮಾಚಕ್ಷ್ವ ಪೃಚ್ಛತಃ।।
ಬ್ರಹ್ಮನ್! ಈ ರೀತಿಯ ಅಥವಾ ಇದಕ್ಕಿಂತಲೂ ಉತ್ತಮ ಸಭಾಭವನವನ್ನು ನೀನು ಇದಕ್ಕೂ ಮೊದಲು ಎಲ್ಲಿಯಾದರೂ ನೋಡಿದ್ದೆಯಾ? ನನ್ನ ಈ ಪ್ರಶ್ನೆಗೆ ಉತ್ತರಿಸು!”
02006009a ತಚ್ಛೃತ್ವಾ ನಾರದಸ್ತಸ್ಯ ಧರ್ಮರಾಜಸ್ಯ ಭಾಷಿತಂ।
02006009c ಪಾಂಡವಂ ಪ್ರತ್ಯುವಾಚೇದಂ ಸ್ಮಯನ್ಮಧುರಯಾ ಗಿರಾ।।
ಧರ್ಮರಾಜನಾಡಿದ ಮಾತುಗಳನ್ನು ಕೇಳಿ ನಾರದನು ಮುಗುಳ್ನಗುತ್ತಾ ಪಾಂಡವನಿಗೆ ಮಧುರ ವಾಣಿಯಲ್ಲಿ ಉತ್ತರಿಸಿದನು:
02006010a ಮಾನುಷೇಷು ನ ಮೇ ತಾತ ದೃಷ್ಟಪೂರ್ವಾ ನ ಚ ಶ್ರುತಾ।
02006010c ಸಭಾ ಮಣಿಮಯೀ ರಾಜನ್ಯಥೇಯಂ ತವ ಭಾರತ।।
“ರಾಜನ್! ಭಾರತ! ಮಗೂ! ಮನುಷ್ಯರಲ್ಲಿ ಇದರಂಥಹ ಮಣಿಮಯ ಸಭೆಯನ್ನು ಇದಕ್ಕೂ ಮೊದಲು ನೋಡಿರಲಿಲ್ಲ ಕೇಳಿರಲಿಲ್ಲ.
02006011a ಸಭಾಂ ತು ಪಿತೃರಾಜಸ್ಯ ವರುಣಸ್ಯ ಚ ಧೀಮತಃ।
02006011c ಕಥಯಿಷ್ಯೇ ತಥೇಂದ್ರಸ್ಯ ಕೈಲಾಸನಿಲಯಸ್ಯ ಚ।।
02006012a ಬ್ರಹ್ಮಣಶ್ಚ ಸಭಾಂ ದಿವ್ಯಾಂ ಕಥಯಿಷ್ಯೇ ಗತಕ್ಲಮಾಂ।
02006012c ಯದಿ ತೇ ಶ್ರವಣೇ ಬುದ್ಧಿರ್ವರ್ತತೇ ಭರತರ್ಷಭ।।
ಭರತರ್ಷಭ! ಆದರೆ ನಿನಗೆ ಕೇಳಲು ಮನಸ್ಸಿದ್ದರೆ ನಾನು ಪಿತೃರಾಜ ಯಮನ, ಧೀಮತ ವರುಣನ, ಇಂದ್ರನ, ಕೈಲಾಸನಿಲಯ ಕುಬೇರನ, ಮತ್ತು ಬ್ರಹ್ಮನ ದಿವ್ಯ ದುಃಖವನ್ನು ಹೋಗಲಾಡಿಸುವ ಸಭೆಗಳ ಕುರಿತು ಹೇಳುತ್ತೇನೆ.”
02006013a ನಾರದೇನೈವಮುಕ್ತಸ್ತು ಧರ್ಮರಾಜೋ ಯುಧಿಷ್ಠಿರಃ।
02006013c ಪ್ರಾಂಜಲಿರ್ಭ್ರಾತೃಭಿಃ ಸಾರ್ಧಂ ತೈಶ್ಚ ಸರ್ವೈರ್ನೃಪೈರ್ವೃತಃ।।
02006014a ನಾರದಂ ಪ್ರತ್ಯುವಾಚೇದಂ ಧರ್ಮರಾಜೋ ಮಹಾಮನಾಃ।
02006014c ಸಭಾಃ ಕಥಯ ತಾಃ ಸರ್ವಾಃ ಶ್ರೋತುಮಿಚ್ಛಾಮಹೇ ವಯಂ।।
ನಾರದನ ಈ ಮಾತುಗಳನ್ನು ಕೇಳಿ ಧರ್ಮರಾಜ ಮಹಾಮನಸ್ವಿ ಯುಧಿಷ್ಠಿರನು ಸಹೋದರರೊಂದಿಗೆ ಸರ್ವ ನೃಪರ ಮಧ್ಯದಲ್ಲಿ ಅಂಜಲೀಬದ್ಧನಾಗಿ ಉತ್ತರಿಸಿದನು: “ನಾವು ಆ ಎಲ್ಲ ಸಭೆಗಳ ಕುರಿತು ಕೇಳಲು ಬಯಸುತ್ತೇವೆ. ಹೇಳಿ.
02006015a ಕಿಂದ್ರವ್ಯಾಸ್ತಾಃ ಸಭಾ ಬ್ರಹ್ಮನ್ಕಿಂವಿಸ್ತಾರಾಃ ಕಿಮಾಯತಾಃ।
02006015c ಪಿತಾಮಹಂ ಚ ಕೇ ತಸ್ಯಾಂ ಸಭಾಯಾಂ ಪರ್ಯುಪಾಸತೇ।।
02006016a ವಾಸವಂ ದೇವರಾಜಂ ಚ ಯಮಂ ವೈವಸ್ವತಂ ಚ ಕೇ।
02006016c ವರುಣಂ ಚ ಕುಬೇರಂ ಚ ಸಭಾಯಾಂ ಪರ್ಯುಪಾಸತೇ।।
ಬ್ರಹ್ಮನ್! ಆ ಸಭೆಗಳು ಯಾವ ದ್ರವ್ಯದಿಂದ ಮಾಡಲ್ಪಟ್ಟಿವೆ? ಅವುಗಳ ವಿಸ್ತಾರ ಮತ್ತು ಅಳತೆ ಏನು? ಅವನ ಸಭೆಯಲ್ಲಿ ಪಿತಾಮಹನನ್ನು ಯಾರು ಉಪಾಸಿಸುತ್ತಾರೆ? ಹಾಗೆಯೇ ದೇವರಾಜ ವಾಸವನ, ವೈವಸ್ವತ ಯಮನ, ವರುಣನ, ಕುಬೇರನ ಸಭೆಗಳಲ್ಲಿ ಯಾರು ಯಾರು ಉಪಸ್ಥಿತರಿರುತ್ತಾರೆ?
02006017a ಏತತ್ಸರ್ವಂ ಯಥಾತತ್ತ್ವಂ ದೇವರ್ಷೇ ವದತಸ್ತವ।
02006017c ಶ್ರೋತುಮಿಚ್ಛಾಮ ಸಹಿತಾಃ ಪರಂ ಕೌತೂಹಲಂ ಹಿ ನಃ।।
ದೇವರ್ಷಿ! ಇವೆಲ್ಲವನ್ನು ನೀನು ಹೇಳಿದಂತೆ ಕೇಳಲು ಬಯಸುತ್ತೇವೆ. ಇದರ ಕುತೂಹಲವು ಅತ್ಯಧಿಕವಾಗಿದೆ.”
02006018a ಏವಮುಕ್ತಃ ಪಾಂಡವೇನ ನಾರದಃ ಪ್ರತ್ಯುವಾಚ ತಂ।
02006018c ಕ್ರಮೇಣ ರಾಜನ್ದಿವ್ಯಾಸ್ತಾಃ ಶ್ರೂಯಂತಾಮಿಹ ನಃ ಸಭಾಃ।।
ಪಾಂಡವನು ಈ ರೀತಿ ಹೇಳಲು ನಾರದನು ಅವನಿಗೆ ಉತ್ತರಿಸಿದನು: “ರಾಜನ್! ಒಂದೊಂದಾಗಿ ಆ ಸಭೆಗಳ ಕುರಿತು ಹೇಳುತ್ತೇನೆ. ಕೇಳು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಸಭಾಪರ್ವಣಿ ಯುಧಿಷ್ಠಿರ ಸಭಾಜಿಜ್ಞಾಸಾಯಾಂ ಷಷ್ಠೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸಭಾಪರ್ವದಲ್ಲಿ ಸಭಾ ಪರ್ವದಲ್ಲಿ ಯುಧಿಷ್ಠಿರನಿಂದ ಸಭೆಗಳ ಜಿಜ್ಞಾಸೆ ಎನ್ನುವ ಆರನೆಯ ಅಧ್ಯಾಯವು.