ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸಭಾ ಪರ್ವ
ಸಭಾ ಪರ್ವ
ಅಧ್ಯಾಯ 5
ಸಾರ
ನಾರದನ ಆಗಮನ ಮತ್ತು ರಾಜ್ಯಾಡಳಿತದ ಕುರಿತು ಯುಧಿಷ್ಠಿರನನ್ನು ಪ್ರಶ್ನಿಸುವುದು (1-116).
02005001 ವೈಶಂಪಾಯನ ಉವಾಚ।
02005001a ತಥಾ ತತ್ರೋಪವಿಷ್ಟೇಷು ಪಾಂಡವೇಷು ಮಹಾತ್ಮಸು।
02005001c ಮಹತ್ಸು ಚೋಪವಿಷ್ಟೇಷು ಗಂಧರ್ವೇಷು ಚ ಭಾರತ।।
02005002a ಲೋಕಾನನುಚರನ್ಸರ್ವಾನಾಗಮತ್ತಾಂ ಸಭಾಮೃಷಿಃ।
02005002c ನಾರದಃ ಸುಮಹಾತೇಜಾ ಋಷಿಭಿಃ ಸಹಿತಸ್ತದಾ।।
ವೈಶಂಪಾಯನನು ಹೇಳಿದನು: “ಭಾರತ! ಹೀಗೆ ಮಹಾತ್ಮ ಪಾಂಡವರು ಅಲ್ಲಿ ಕುಳಿತಿರಲು ಮತ್ತು ಮಹಾ ಗಂಧರ್ವರೂ ಕೂಡ ಅಲ್ಲಿ ಕುಳಿತುಕೊಂಡಿರಲು ಆ ಸಭೆಗೆ ಸರ್ವ ಲೋಕಗಳನ್ನೂ ಸಂಚರಿಸುವ ಸುಮಹಾತೇಜಸ್ವಿ ಋಷಿ ನಾರದನು ಇತರ ಋಷಿಗಳ ಸಹಿತ ಆಗಮಿಸಿದನು.
02005003a ಪಾರಿಜಾತೇನ ರಾಜೇಂದ್ರ ರೈವತೇನ ಚ ಧೀಮತಾ।
02005003c ಸುಮುಖೇನ ಚ ಸೌಮ್ಯೇನ ದೇವರ್ಷಿರಮಿತದ್ಯುತಿಃ।
02005003e ಸಭಾಸ್ಥಾನ್ಪಾಂಡವಾನ್ದ್ರಷ್ಟುಂ ಪ್ರೀಯಮಾಣೋ ಮನೋಜವಃ।।
ರಾಜೇಂದ್ರ! ಪಾರಿಜಾತ, ಧೀಮಂತ ರೈವತ, ಸುಮುಖ ಮತ್ತು ಸೌಮ್ಯರೊಂದಿಗೆ ಸಂಚರಿಸುತ್ತಿದ್ದ ಮನೋವೇಗಿ ಅಮಿತದ್ಯುತಿ ದೇವರ್ಷಿಯು ತಮ್ಮ ಸಭೆಯಲ್ಲಿದ್ದ ಪಾಂಡವರನ್ನು ಕಾಣಲು ಬಯಸಿದ್ದನು.
02005004a ತಮಾಗತಮೃಷಿಂ ದೃಷ್ಟ್ವಾ ನಾರದಂ ಸರ್ವಧರ್ಮವಿತ್।
02005004c ಸಹಸಾ ಪಾಂಡವಶ್ರೇಷ್ಠಃ ಪ್ರತ್ಯುತ್ಥಾಯಾನುಜೈಃ ಸಹ।
02005004e ಅಭ್ಯವಾದಯತ ಪ್ರೀತ್ಯಾ ವಿನಯಾವನತಸ್ತದಾ।।
02005005a ತದರ್ಹಮಾಸನಂ ತಸ್ಮೈ ಸಂಪ್ರದಾಯ ಯಥಾವಿಧಿ।
02005005c ಅರ್ಚಯಾಮಾಸ ರತ್ನೈಶ್ಚ ಸರ್ವಕಾಮೈಶ್ಚ ಧರ್ಮವಿತ್।।
ಋಷಿಯು ಬರುತ್ತಿರುವುದನ್ನು ನೋಡಿದ ಸರ್ವಧರ್ಮವಿದು ಪಾಂಡವಶ್ರೇಷ್ಠನು ತನ್ನ ಅನುಜರೊಡನೆ ತಕ್ಷಣವೇ ಮೇಲೆದ್ದನು. ವಿನಯಾವನತನಾಗಿ ಪ್ರೀತಿಯಿಂದ ನಮಸ್ಕರಿಸಿದನು ಮತ್ತು ಯಥಾವಿಧಿಯಾಗಿ ಅವನಿಗೆ ಅರ್ಹ ಆಸನವನ್ನು ನೀಡಿದನು. ಆ ಧರ್ಮವಿದುವು ಅವನನ್ನು ರತ್ನಗಳಿಂದ ಮತ್ತು ಸರ್ವಕಾಮಗಳಿಂದ ಅರ್ಚಿಸಿದನು.
02005006a ಸೋಽರ್ಚಿತಃ ಪಾಂಡವೈಃ ಸರ್ವೈರ್ಮಹರ್ಷಿರ್ವೇದಪಾರಗಃ।
02005006c ಧರ್ಮಕಾಮಾರ್ಥಸಮ್ಯುಕ್ತಂ ಪಪ್ರಚ್ಛೇದಂ ಯುಧಿಷ್ಠಿರಂ।
ಈ ರೀತಿ ಸರ್ವ ಪಾಂಡವರಿಂದ ಅರ್ಚಿತ ವೇದಪಾರಗ ಮಹರ್ಷಿಯು ಯುಧಿಷ್ಠಿರನಲ್ಲಿ ಧರ್ಮಕಾಮಾರ್ಥಸಂಯುಕ್ತ ಈ ಪ್ರಶ್ನೆಗಳನ್ನು ಕೇಳಿದನು.
02005007 ನಾರದ ಉವಾಚ।
02005007a ಕಚ್ಚಿದರ್ಥಾಶ್ಚ ಕಲ್ಪಂತೇ ಧರ್ಮೇ ಚ ರಮತೇ ಮನಃ।
02005007c ಸುಖಾನಿ ಚಾನುಭೂಯಂತೇ ಮನಶ್ಚ ನ ವಿಹನ್ಯತೇ।।
ನಾರದನು ಹೇಳಿದನು: “ನಿನ್ನ ಸಂಪತ್ತು ಸಾಕೆನಿಸುತ್ತದೆಯೇ? ಮನಸ್ಸು ಧರ್ಮದಲ್ಲಿ ರಮಿಸುತ್ತಿದೆಯೇ? ಸುಖಗಳನ್ನು ಅನುಭವಿಸುತ್ತಿದ್ದೀಯಾ? ನಿನ್ನ ಮನಸ್ಸು ನೊಂದಿಲ್ಲ ತಾನೆ?
02005008a ಕಚ್ಚಿದಾಚರಿತಾಂ ಪೂರ್ವೈರ್ನರದೇವ ಪಿತಾಮಹೈಃ।
02005008c ವರ್ತಸೇ ವೃತ್ತಿಮಕ್ಷೀಣಾಂ ಧರ್ಮಾರ್ಥಸಹಿತಾಂ ನೃಷು।।
ನರದೇವ! ಪೂರ್ವ ಪಿತಾಮಹರ ಆಚರಣೆಯಲ್ಲಿಯೇ ನಡೆದುಕೊಳ್ಳುತ್ತಿದ್ದೀಯಾ? ಪ್ರಜೆಗಳ ಧರ್ಮ ಮತ್ತು ಅರ್ಥಗಳೆರಡನ್ನೂ ಕ್ಷೀಣಮಾಡದಂತೆ ನಡೆದುಕೊಳ್ಳುತ್ತಿದ್ದೀಯಾ?
02005009a ಕಚ್ಚಿದರ್ಥೇನ ವಾ ಧರ್ಮಂ ಧರ್ಮೇಣಾರ್ಥಮಥಾಪಿ ವಾ।
02005009c ಉಭೌ ವಾ ಪ್ರೀತಿಸಾರೇಣ ನ ಕಾಮೇನ ಪ್ರಬಾಧಸೇ।।
ಅರ್ಥಕ್ಕಾಗಿ ಧರ್ಮವನ್ನು ಅಥವಾ ಧರ್ಮಕ್ಕಾಗಿ ಅರ್ಥವನ್ನು, ಅಥವಾ ಇವೆರಡಕ್ಕಾಗಿ ಪ್ರೀತಿಸಾರ ಕಾಮವನ್ನು ಬಾಧಿಸುತ್ತಿಲ್ಲವಲ್ಲ?
02005010a ಕಚ್ಚಿದರ್ಥಂ ಚ ಧರ್ಮಂ ಚ ಕಾಮಂ ಚ ಜಯತಾಂ ವರ।
02005010c ವಿಭಜ್ಯ ಕಾಲೇ ಕಾಲಜ್ಞ ಸದಾ ವರದ ಸೇವಸೇ।
ವಿಜಯಿಗಳಲ್ಲಿ ಶ್ರೇಷ್ಠ! ವರದ! ಅರ್ಥ, ಧರ್ಮ, ಕಾಮಗಳ ಸಮಯವನ್ನು ತಿಳಿದು1, ಕಾಲಕ್ಕೆ ತಕ್ಕಂತೆ ವಿಭಜಿಸಿ, ಸೇವಿಸುತ್ತಿದ್ದೀಯಾ?
02005011a ಕಚ್ಚಿದ್ರಾಜಗುಣೈಃ ಷಡ್ಭಿಃ ಸಪ್ತೋಪಾಯಾಂಸ್ತಥಾನಘ।
02005011c ಬಲಾಬಲಂ ತಥಾ ಸಮ್ಯಕ್ಚತುರ್ದಶ ಪರೀಕ್ಷಸೇ।
ಅನಘ! ಆರು ರಾಜಗುಣಗಳು2, ಏಳು ಉಪಾಯಗಳು3 ಮತ್ತು ಬಲಾಬಲ - ಈ ಹದಿನಾಲ್ಕು ಅಂಶಗಳನ್ನು ನೀನು ಸರಿಯಾಗಿ ಪರೀಕ್ಷಿಸುತ್ತಿದ್ದೀಯಾ?
02005012a ಕಚ್ಚಿದಾತ್ಮಾನಮನ್ವೀಕ್ಷ್ಯ ಪರಾಂಶ್ಚ ಜಯತಾಂ ವರ।
02005012c ತಥಾ ಸಂಧಾಯ ಕರ್ಮಾಣಿ ಅಷ್ಟೌ ಭಾರತ ಸೇವಸೇ।।
ವಿಜಯಿಗಳಲ್ಲಿ ಶ್ರೇಷ್ಠ ಭಾರತ! ಒಟ್ಟಾಗಿ ಮಾಡುವ ಎಂಟು ಕರ್ಮಗಳನ್ನು4 ತೆಗೆದುಕೊಳ್ಳುವುದಕ್ಕೆ ಮೊದಲು ನಿನ್ನನ್ನು ಮತ್ತು ನಿನ್ನ ಶತ್ರುಗಳನ್ನು ಪರೀಕ್ಷಿಸುತ್ತೀಯಾ?
02005013a ಕಚ್ಚಿತ್ಪ್ರಕೃತಯಃ ಷಟ್ತೇ ನ ಲುಪ್ತಾ ಭರತರ್ಷಭ।
02005013c ಆಢ್ಯಾಸ್ತಥಾವ್ಯಸನಿನಃ ಸ್ವನುರಕ್ತಾಶ್ಚ ಸರ್ವಶಃ।।
ಭರತರ್ಷಭ! ನಿನ್ನ ಆರು ಅಧಿಕಾರಿಗಳು ಲುಪ್ತರಲ್ಲ ತಾನೆ? ಶ್ರೀಮಂತರಾದ ಅವರೆಲ್ಲರೂ ದುರ್ವ್ಯಸನಗಳಿಗೆ ತುತ್ತಾಗದೇ ನಿನಗೆ ವಿಧೇಯರಾಗಿಯೇ ಇದ್ದಾರಲ್ಲವೇ5?
02005014a ಕಚ್ಚಿನ್ನ ತರ್ಕೈರ್ದೂತೈರ್ವಾ ಯೇ ಚಾಪ್ಯಪರಿಶಮ್ಕಿತಾಃ।
02005014c ತ್ವತ್ತೋ ವಾ ತವ ವಾಮಾತ್ಯೈರ್ಭಿದ್ಯತೇ ಜಾತು ಮಂತ್ರಿತಂ।।
ಅವರು ತರ್ಕ ಮತ್ತು ಗೂಢಚರರ ತನಿಖೆಗೊಳಗಾಗಿ ಪರಿಶಂಕಿತರಾಗಿದ್ದಾರೆ ತಾನೆ? ಸದಾ ನಿನ್ನ ಮಂತ್ರಿಗಳು ಗುಟ್ಟನ್ನು ಕೇವಲ ನಿನ್ನಲ್ಲಿ ಅಥವಾ ಅಮಾತ್ಯರಲ್ಲಿ ಇಟ್ಟುಕೊಳ್ಳುತ್ತಾರಲ್ಲವೇ?
02005015a ಕಚ್ಚಿತ್ಸಂಧಿಂ ಯಥಾಕಾಲಂ ವಿಗ್ರಹಂ ಚೋಪಸೇವಸೇ।
02005015c ಕಚ್ಚಿದ್ವೃತ್ತಿಮುದಾಸೀನೇ ಮಧ್ಯಮೇ ಚಾನುವರ್ತಸೇ।।
ನೀನು ಶಾಂತಿ ಮತ್ತು ಯುದ್ಧಗಳನ್ನು ಕಾಲಕ್ಕನುಗುಣವಾಗಿ ಅನುಸರಿಸುತ್ತಿದ್ದೀಯಲ್ಲವೇ? ಉದಾಸೀನರಾದವರ ಮತ್ತು ಯಾರಪಂಗಡವನ್ನೂ ಸೇರಿರದವರೊಡನೆ ನೀನು ಸರಿಯಾಗಿ ನಡೆದು ಕೊಳ್ಳುತ್ತಿದ್ದೀಯಾ?
02005016a ಕಚ್ಚಿದಾತ್ಮಸಮಾ ಬುದ್ಧ್ಯಾ ಶುಚಯೋ ಜೀವಿತಕ್ಷಮಾಃ।
02005016c ಕುಲೀನಾಶ್ಚಾನುರಕ್ತಾಶ್ಚ ಕೃತಾಸ್ತೇ ವೀರ ಮಂತ್ರಿಣಃ।
ವೀರ! ನಿನ್ನ ಮಂತ್ರಿಗಳು ನಿನ್ನ ಹಾಗೆಯೇ ಯೋಚನೆಯಲ್ಲಿ ಶುದ್ಧರಾಗಿ ಜೀವಿಸಲು ಸಮರ್ಥರಿದ್ದಾರೆಯೇ? ನಿನ್ನ ಹಾಗೆಯೇ ಕುಲೀನರೂ, ಅನುರಕ್ತರೂ, ಮತ್ತು ಕೃತಾರ್ಥರೂ ಆಗಿದ್ದಾರೆಯೇ?
02005017a ವಿಜಯೋ ಮಂತ್ರಮೂಲೋ ಹಿ ರಾಜ್ಞಾಂ ಭವತಿ ಭಾರತ।
02005017c ಸುಸಂವೃತೋ ಮಂತ್ರಧನೈರಮಾತ್ಯೈಃ ಶಾಸ್ತ್ರಕೋವಿದೈಃ।।
ಭಾರತ! ಈ ಮಂತ್ರಿಗಳೇ ರಾಜರ ವಿಜಯದ ಮೂಲವಾಗುತ್ತಾರೆ. ಈ ಮಂತ್ರಧನವು ಶಾಸ್ತ್ರಕೋವಿದರಾದ ಅಮಾತ್ಯರಲ್ಲಿ ಸುರಕ್ಷಿತವಾಗಿರುತ್ತದೆ6.
02005018a ಕಚ್ಚಿನ್ನಿದ್ರಾವಶಂ ನೈಷಿ ಕಚ್ಚಿತ್ಕಾಲೇ ವಿಬುಧ್ಯಸೇ।
02005018c ಕಚ್ಚಿಚ್ಚಾಪರರಾತ್ರೇಷು ಚಿಂತಯಸ್ಯರ್ಥಮರ್ಥವಿತ್।
ನೀನು ನಿದ್ರಾವಶಕ್ಕೊಳಗಾಗದೆ ಸರಿಯಾದ ಸಮಯಕ್ಕೆ ಏಳುತ್ತೀಯಾ? ಅರ್ಥಧರ್ಮವಿದುವಾದ ನೀನು ಅಪರ ರಾತ್ರಿಯಲ್ಲಿ ಚಿಂತಿಸುತ್ತಿರುತ್ತೀಯಾ?
02005019a ಕಚ್ಚಿನ್ಮಂತ್ರಯಸೇ ನೈಕಃ ಕಚ್ಚಿನ್ನ ಬಹುಭಿಃ ಸಹ।
02005019c ಕಚ್ಚಿತ್ತೇ ಮಂತ್ರಿತೋ ಮಂತ್ರೋ ನ ರಾಷ್ಟ್ರಮನುಧಾವತಿ।
ನೀನು ಒಬ್ಬನೇ ಅಥವಾ ಬಹು ಜನರೊಟ್ಟಿಗೆ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ತಾನೇ? ಮತ್ತು ನೀನು ತೆಗೆದುಕೊಂಡ ಅಥವಾ ತೆಗೆದುಕೊಳ್ಳುವ ನಿರ್ಧಾರಗಳು ರಾಷ್ಟ್ರದಲ್ಲಿ ಎಲ್ಲರಕಡೆಗೂ ಹೋಗುವುದಿಲ್ಲ ತಾನೆ?
02005020a ಕಚ್ಚಿದರ್ಥಾನ್ವಿನಿಶ್ಚಿತ್ಯ ಲಘುಮೂಲಾನ್ಮಹೋದಯಾನ್।
02005020c ಕ್ಷಿಪ್ರಮಾರಭಸೇ ಕರ್ತುಂ ನ ವಿಘ್ನಯಸಿ ತಾದೃಶಾನ್।
ನೀನು ಕಡಿಮೆ ವೆಚ್ಚದ ಆದರೆ ಉತ್ತಮ ಅಭಿವೃದ್ಧಿಯ ಯೋಜನೆಗಳನ್ನು ಒಪ್ಪಿಕೊಂಡ ನಂತರ ಅದನ್ನು ಶೀಘ್ರವಾಗಿ ನೆರವೇರಿಸಲು ಯಾವುದೇ ವಿಘ್ನಗಳನ್ನು ತರುವುದಿಲ್ಲ ತಾನೇ?
02005021a ಕಚ್ಚಿನ್ನ ಸರ್ವೇ ಕರ್ಮಾಂತಾಃ ಪರೋಕ್ಷಾಸ್ತೇ ವಿಶಂಕಿತಾಃ।
02005021c ಸರ್ವೇ ವಾ ಪುನರುತ್ಸೃಷ್ಟಾಃ ಸಂಸೃಷ್ಟಂ ಹ್ಯತ್ರ ಕಾರಣಂ।।
ನಿನಗೆ ಗೊತ್ತಿಲ್ಲದ, ಅಥವಾ ಸ್ವಲ್ಪವೇ ತಿಳಿದಿರುವ ಅಥವಾ ನಿನಗೆ ಅನುಮಾನವಿರುವ ರಾಜ್ಯದ ಯಾವುದೇ ಆಗುಹೋಗುಗಳು ಇಲ್ಲ ತಾನೇ? ಯಾಕೆಂದರೆ ಅವುಗಳಲ್ಲಿ ಭಾಗವಹಿಸುವುದು ಅಗತ್ಯ.
02005022a ಕಚ್ಚಿದ್ರಾಜನ್ಕೃತಾನ್ಯೇವ ಕೃತಪ್ರಾಯಾಣಿ ವಾ ಪುನಃ।
02005022c ವಿದುಸ್ತೇ ವೀರ ಕರ್ಮಾಣಿ ನಾನವಾಪ್ತಾನಿ ಕಾನಿ ಚಿತ್।।
ರಾಜನ್! ವೀರ! ಜನರು ನೀನು ಏನು ಮಾಡಿಲ್ಲವೋ ಅದನ್ನು ಬಿಟ್ಟು ನೀನು ಸಂಪೂರ್ಣ ಮಾಡಿರುವ ಅಥವಾ ನಿನ್ನಿಂದ ಸಂಪೂರ್ಣವಾಗುತ್ತಿರುವ ಯೋಜನೆ ಕಾರ್ಯಗಳ ಕುರಿತು ಮಾತ್ರ ತಿಳಿದಿದ್ದಾರೆ ತಾನೇ?
02005023a ಕಚ್ಚಿತ್ಕಾರಣಿಕಾಃ ಸರ್ವೇ ಸರ್ವಶಾಸ್ತ್ರೇಷು ಕೋವಿದಾಃ।
02005023c ಕಾರಯಂತಿ ಕುಮಾರಾಂಶ್ಚ ಯೋಧಮುಖ್ಯಾಂಶ್ಚ ಸರ್ವಶಃ।।
ಸರ್ವಶಾಸ್ತ್ರಕೋವಿದ ಕಾರಣಿಕರು ಎಲ್ಲ ಕುಮಾರರಿಗೂ ಮತ್ತು ಯೋಧಪ್ರಮುಖರಿಗೂ ಸಂಪೂರ್ಣವಾಗಿ ತರಬೇತಿಯನ್ನು ನೀಡುತ್ತಿದ್ದಾರೆ ತಾನೇ?
02005024a ಕಚ್ಚಿತ್ಸಹಸ್ರೈರ್ಮೂರ್ಖಾಣಾಮೇಕಂ ಕ್ರೀಣಾಸಿ ಪಂಡಿತಂ।
02005024c ಪಂಡಿತೋ ಹ್ಯರ್ಥಕೃಚ್ಛ್ರೇಷು ಕುರ್ಯಾನ್ನಿಃಶ್ರೇಯಸಂ ಪರಂ।।
ನೀನು ಸಹಸ್ರ ಮೂರ್ಖರಿಗಿಂಥಲೂ ಒಂದು ಪಂಡಿತನನ್ನು ಬಯಸುತ್ತೀಯೆ ತಾನೆ? ಯಾಕೆಂದರೆ ಕಾರ್ಯಕಲಾಪಗಳಲ್ಲಿ ಅಡಚಣೆಗಳೊದಗಿದಾಗ ಪಂಡಿತರೇ ಪರಿಹಾರಗಳನ್ನು ನೀಡುತ್ತಾರೆ.
02005025a ಕಚ್ಚಿದ್ದುರ್ಗಾಣಿ ಸರ್ವಾಣಿ ಧನಧಾನ್ಯಾಯುಧೋದಕೈಃ।
02005025c ಯಂತ್ರೈಶ್ಚ ಪರಿಪೂರ್ಣಾನಿ ತಥಾ ಶಿಲ್ಪಿಧನುರ್ಧರೈಃ।।
ನಿನ್ನ ಸರ್ವ ದುರ್ಗಗಳೂ ಧನ, ಧಾನ್ಯ, ಆಯುಧಗಳು, ನೀರು, ಯಂತ್ರಗಳು, ಶಿಲ್ಪಿಗಳು ಮತ್ತು ಧರುರ್ಧರರಿಂದ ತುಂಬಿ ತುಳುಕುತ್ತಿದೆ ತಾನೆ?
02005026a ಏಕೋಽಪ್ಯಮಾತ್ಯೋ ಮೇಧಾವೀ ಶೂರೋ ದಾಂತೋ ವಿಚಕ್ಷಣಃ।
02005026c ರಾಜಾನಂ ರಾಜಪುತ್ರಂ ವಾ ಪ್ರಾಪಯೇನ್ಮಹತೀಂ ಶ್ರಿಯಂ।।
ಮೇಧಾವಿಯೂ, ಶೂರನೂ, ನಿಯಂತ್ರದಲ್ಲಿರುವವನೂ, ಬುದ್ಧಿವಂತನೂ ಆದ ಒಬ್ಬನೇ ಅಮಾತ್ಯನು ರಾಜನಿಗೆ ಅಥವಾ ರಾಜಕುಮಾರನಿಗೆ ಮಹಾ ಶ್ರೇಯಸ್ಸನ್ನು ತರುತ್ತಾನೆ.
02005027a ಕಚ್ಚಿದಷ್ಟಾದಶಾನ್ಯೇಷು ಸ್ವಪಕ್ಷೇ ದಶ ಪಂಚ ಚ।
02005027c ತ್ರಿಭಿಸ್ತ್ರಿಭಿರವಿಜ್ಞಾತೈರ್ವೇತ್ಸಿ ತೀರ್ಥಾನಿ ಚಾರಕೈಃ।।
ಅನ್ಯರ ಹದಿನೆಂಟು ಮತ್ತು ಸ್ವಪಕ್ಷದ ಹದಿನೈದು ಪದಾಧಿಕಾರಿಗಳನ್ನು ಪರಸ್ಪರರಿಗೆ ಪರಿಚಯವಿಲ್ಲದಿರುವ ಮೂವರು ಗುಪ್ತಚಾರರ ಮೂಲಕ ತಿಳಿದುಕೊಳ್ಳುತ್ತಿದ್ದೀಯಾ?
02005028a ಕಚ್ಚಿದ್ದ್ವಿಷಾಮವಿದಿತಃ ಪ್ರತಿಯತ್ತಶ್ಚ ಸರ್ವದಾ।
02005028c ನಿತ್ಯಯುಕ್ತೋ ರಿಪೂನ್ಸರ್ವಾನ್ವೀಕ್ಷಸೇ ರಿಪುಸೂದನ।।
ರಿಪುಸೂದನ! ಜಾಗರೂಕತೆಯಿಂದ, ಅವರಿಗೆ ತಿಳಿಯದಂತೆ ನೀನು ನಿನ್ನ ಶತ್ರುಗಳ ಮೇಲೆ ಗಮನವಿಟ್ಟಿರುತ್ತೀಯೆ ತಾನೆ?
02005029a ಕಚಿವಿದ್ವಿನಯಸಂಪನ್ನಃ ಕುಲಪುತ್ರೋ ಬಹುಶ್ರುತಃ।
02005029c ಅನಸೂಯುರನುಪ್ರಷ್ಟಾ ಸತ್ಕೃತಸ್ತೇ ಪುರೋಹಿತಃ।।
ನಿನ್ನ ಪುರೋಹಿತನು ವಿನಯಸಂಪನ್ನನೇ? ಉತ್ತಮ ಕುಲದಲ್ಲಿ ಜನಿಸಿದವನೇ? ಬಹಳಷ್ಟು ಪಂಡಿತನೇ? ಅಸೂಯೆಯಿಲ್ಲದೇ ಪ್ರಶ್ನಿಸುವವನೇ? ಮತ್ತು ನೀನು ಅವನನ್ನು ಸತ್ಕರಿಸುತ್ತೀಯಾ?
02005030a ಕಚ್ಚಿದಗ್ನಿಷು ತೇ ಯುಕ್ತೋ ವಿಧಿಜ್ಞೋ ಮತಿಮಾನೃಜುಃ।
02005030c ಹುತಂ ಚ ಹೋಷ್ಯಮಾಣಂ ಚ ಕಾಲೇ ವೇದಯತೇ ಸದಾ।।
ಅವನು ನಿನ್ನ ಅಗ್ನಿಕಾರ್ಯಗಳಲ್ಲಿ ನಿರತನಾಗಿದ್ದಾನೆಯೇ? ವಿಧಿ-ವಿಧಾನಗಳನ್ನು ತಿಳಿದುಕೊಂಡಿದ್ದಾನೆಯೇ? ಮತ್ತು ಅವನು ಯಾವಾಗ ಆಹುತಿಗಳನ್ನು ಕೊಡಬೇಕು ಎನ್ನುವುದನ್ನು ಸದಾ ತಿಳಿದಿದ್ದಾನೆಯೇ?
02005031a ಕಚ್ಚಿದಂಗೇಷು ನಿಷ್ಣಾತೋ ಜ್ಯೋತಿಷಾಂ ಪ್ರತಿಪಾದಕಃ।
02005031c ಉತ್ಪಾತೇಷು ಚ ಸರ್ವೇಷು ದೈವಜ್ಞಃ ಕುಶಲಸ್ತವ।।
ನಿನ್ನ ಜ್ಯೋತಿಷಿಯು ವೇದ ಮತ್ತು ಅದರ ಅಂಗಗಳಲ್ಲಿ ನಿಷ್ಣಾತನಾಗಿದ್ದಾನೆಯೇ? ಎಲ್ಲ ಉತ್ಪಾತಗಳಲ್ಲಿ ಮುಂದೇನಾಗಬಹುದು ಎನ್ನುವುದನ್ನು ಪ್ರತಿಪಾದಿಸುವುದರಲ್ಲಿ ಕುಶಲನಾಗಿದ್ದಾನೆ ತಾನೆ?
02005032a ಕಚ್ಚಿನ್ಮುಖ್ಯಾ ಮಹತ್ಸ್ವೇವ ಮಧ್ಯಮೇಷು ಚ ಮಧ್ಯಮಾಃ।
02005032c ಜಘನ್ಯಾಶ್ಚ ಜಘನ್ಯೇಷು ಭೃತ್ಯಾಃ ಕರ್ಮಸು ಯೋಜಿತಾಃ।।
ನೀನು ಉತ್ತಮರನ್ನು ಉನ್ನತ ಹುದ್ದೆಗೆ, ಮಧ್ಯಮರನ್ನು ಮಧ್ಯಮ ಹುದ್ದೆಗೆ, ಮತ್ತು ವಿನಯಾವಂತರನ್ನು ಕೆಳಹುದ್ದೆಗಳಿಗೆ ನಿಯೋಜಿಸಿದ್ದಿ ತಾನೆ?
02005033a ಅಮಾತ್ಯಾನುಪಧಾತೀತಾನ್ಪಿತೃಪೈತಾಮಹಾಂ ಶುಚೀನ್।
02005033c ಶ್ರೇಷ್ಠಾಂ ಶ್ರೇಷ್ಠೇಷು ಕಚ್ಚಿತ್ತ್ವಂ ನಿಯೋಜಯಸಿ ಕರ್ಮಸು।।
ಪಿತೃ ಪಿತಾಮಹರೂ ಶುಚಿಯಾಗಿರುವ, ಶ್ರೇಷ್ಠರಲ್ಲಿಯೂ ಶ್ರೇಷ್ಠರಾದ, ಮೋಸವನ್ನು ಮೀರಿರುವ ಮಹಾತ್ಮರನ್ನು ನಿನ್ನ ಮುಖ್ಯ ಮಂತ್ರಿಯನ್ನಾಗಿ ನಿಯೋಜಿಸಿದ್ದೀ ತಾನೆ?
02005034a ಕಚ್ಚಿನ್ನೋಗ್ರೇಣ ದಂಡೇನ ಭೃಶಮುದ್ವೇಜಿತಪ್ರಜಾಃ।
02005034c ರಾಷ್ಟ್ರಂ ತವಾನುಶಾಸಂತಿ ಮಂತ್ರಿಣೋ ಭರತರ್ಷಭ।।
ಭರತರ್ಷಭ! ನಿನ್ನ ಮಂತ್ರಿಗಳು ಪ್ರಜೆಗಳನ್ನು ಉಗ್ರ ಶಿಕ್ಷೆಗಳಿಂದ ದಂಡಿಸದೇ ನಿನ್ನ ರಾಷ್ಟ್ರವನ್ನು ಆಳುತ್ತಿದ್ದಾರೆಯೇ?
02005035a ಕಚ್ಚಿತ್ತ್ವಾಂ ನಾವಜಾನಂತಿ ಯಾಜಕಾಃ ಪತಿತಂ ಯಥಾ।
02005035c ಉಗ್ರಪ್ರತಿಗ್ರಹೀತಾರಂ ಕಾಮಯಾನಮಿವ ಸ್ತ್ರಿಯಃ।।
ಯಾಜಕರು ಜಾತಿಯನ್ನು ಕಳೆದುಕೊಂಡವರನ್ನು ಕೀಳಾಗಿ ಕಾಣುವಂತೆ ಮತ್ತು ಪ್ರೀತಿಯುಳ್ಳ ಆದರೆ ಉಗ್ರನಾದ ಪತಿಯನ್ನು ಪತ್ನಿಯು ಹೇಗೋ ಹಾಗೆ ನಿನ್ನ ಜನರು ನಿನ್ನನ್ನು ಕೀಳಾಗಿ ಕಾಣುವುದಿಲ್ಲ ತಾನೆ?
02005036a ಕಚ್ಚಿದ್ಧೃಷ್ಟಶ್ಚ ಶೂರಶ್ಚ ಮತಿಮಾನ್ಧೃತಿಮಾಂ ಶುಚಿಃ।
02005036c ಕುಲೀನಶ್ಚಾನುರಕ್ತಶ್ಚ ದಕ್ಷಃ ಸೇನಾಪತಿಸ್ತವ।।
ನಿನ್ನ ಸೇನಾಪತಿಯು ದೃಷ್ಟಿಯುಳ್ಳವನೂ, ಶೂರನೂ, ಮತಿವಂತನೂ, ಧೃತಿವಂತನೂ, ಶುಚಿಯೂ, ಕುಲೀನನೂ ಸುಂದರನೂ, ಅನುರಕ್ತನೂ, ದಕ್ಷನೂ ಆಗಿದ್ದಾನೆ ತಾನೇ?
02005037a ಕಚ್ಚಿದ್ಬಲಸ್ಯ ತೇ ಮುಖ್ಯಾಃ ಸರ್ವೇ ಯುದ್ಧವಿಶಾರದಾಃ।
02005037c ದೃಷ್ಟಾಪದಾನಾ ವಿಕ್ರಾಂತಾಸ್ತ್ವಯಾ ಸತ್ಕೃತ್ಯ ಮಾನಿತಾಃ।।
ನಿನ್ನ ಸರ್ವ ಸೇನಾಮುಖ್ಯರೂ ಯುದ್ಧವಿಶಾರದರೂ, ಮಹಾಯುದ್ಧಗಳನ್ನು ಮಾಡಿತೋರಿಸಿದವರೂ, ವಿಕ್ರಾಂತರೂ, ಮತ್ತು ನಿನ್ನಿಂದ ಸತ್ಕೃತರೂ ಮಾನಿತರೂ ಆಗಿದ್ದಾರೆ ತಾನೆ?
02005038a ಕಚ್ಚಿದ್ಬಲಸ್ಯ ಭಕ್ತಂ ಚ ವೇತನಂ ಚ ಯಥೋಚಿತಂ।
02005038c ಸಂಪ್ರಾಪ್ತಕಾಲಂ ದಾತವ್ಯಂ ದದಾಸಿ ನ ವಿಕರ್ಷಸಿ।।
ನೀನು ನಿನ್ನ ಸೇನೆಗೆ ಯಥೋಚಿತ ಆಹಾರ, ವೇತನವನ್ನು ಕಾಲಕ್ಕೆ ಸರಿಯಾಗಿ, ಮುಂದೂಡದೇ ಕೊಡುತ್ತಿದ್ದೀಯೆ ತಾನೇ?
02005039a ಕಾಲಾತಿಕ್ರಮಣಾದ್ಧ್ಯೇತೇ ಭಕ್ತವೇತನಯೋರ್ಭೃತಾಃ।
02005039c ಭರ್ತುಃ ಕುಪ್ಯಂತಿ ದೌರ್ಗತ್ಯಾತ್ಸೋಽನರ್ಥಃ ಸುಮಹಾನ್ಸ್ಮೃತಃ।।
ಆಹಾರ-ಸಂಬಳಗಳನ್ನು ಸಮಯಕ್ಕೆ ಸರಿಯಾಗಿ ಕೊಡದೇ ಇದ್ದರೆ ಸೇವಕರು ಒಡೆಯನ ಮೇಲೆ ಸಿಟ್ಟಿಗೇಳುತ್ತಾರೆ. ಅವರಿಗಿದ್ದ ಕೊರತೆಯಿಂದಾಗಿ ಮಹಾ ಅನರ್ಥವೇ ಆಗಬಹುದು ಎಂದು ಹೇಳುತ್ತಾರೆ.
02005040a ಕಚ್ಚಿತ್ಸರ್ವೇಽನುರಕ್ತಾಸ್ತ್ವಾಂ ಕುಲಪುತ್ರಾಃ ಪ್ರಧಾನತಃ।
02005040c ಕಚ್ಚಿತ್ಪ್ರಾಣಾಂಸ್ತವಾರ್ಥೇಷು ಸಂತ್ಯಜಂತಿ ಸದಾ ಯುಧಿ।।
ಮುಖ್ಯವಾಗಿ ಎಲ್ಲ ಕುಲೀನ ಪುತ್ರರೂ ನಿನ್ನಲ್ಲಿಯೇ ಅನುರಕ್ತರಾಗಿದ್ದಾರೆ ತಾನೆ? ಅವರು ಯಾವಾಗಲೂ ಯುದ್ಧದಲ್ಲಿ ನಿನಗೋಸ್ಕರವಾಗಿ ಪ್ರಾಣವನ್ನು ತೊರೆಯಲು ಸಿದ್ಧರಿದ್ದಾರೆ ತಾನೆ?
02005041a ಕಚ್ಚಿನ್ನೈಕೋ ಬಹೂನರ್ಥಾನ್ಸರ್ವಶಃ ಸಾಂಪರಾಯಿಕಾನ್।
02005041c ಅನುಶಾಸ್ಸಿ ಯಥಾಕಾಮಂ ಕಾಮಾತ್ಮಾ ಶಾಸನಾತಿಗಃ।।
ಸೇನೆಯಲ್ಲಿ ತನ್ನ ಸ್ವಾರ್ಥಕ್ಕೋಸ್ಕರ ಶಾಸನವನ್ನು ಮೀರಿ ತನಗಿಷ್ಟಬಂದಂತೆ ಆಳುವ ಯಾರೊಬ್ಬನೂ ಇಲ್ಲ ತಾನೆ?
02005042a ಕಚ್ಚಿತ್ಪುರುಷಕಾರೇಣ ಪುರುಷಃ ಕರ್ಮ ಶೋಭಯನ್।
02005042c ಲಭತೇ ಮಾನಮಧಿಕಂ ಭೂಯೋ ವಾ ಭಕ್ತವೇತನಂ।।
ತನಗೆ ವಹಿಸಿದ ಜವಾಬ್ದಾರಿಗಳನ್ನೂ ಮೀರಿ, ತನ್ನದೇ ಪ್ರೇರಣೆಯಿಂದ ಕೆಲಸವನ್ನು ಸಾಧಿಸಿದವನಿಗೆ ವಿಶೇಷ ಸನ್ಮಾನ, ಅಥವಾ ವೇತನ ಅಥವಾ ಆಹಾರವು ದೊರಕುತ್ತದೆ ತಾನೆ?
02005043a ಕಚ್ಚಿದ್ವಿದ್ಯಾವಿನೀತಾಂಶ್ಚ ನರಾಂ ಜ್ಞಾನವಿಶಾರದಾನ್।
02005043c ಯಥಾರ್ಹಂ ಗುಣತಶ್ಚೈವ ದಾನೇನಾಭ್ಯವಪದ್ಯಸೇ।।
ವಿಧ್ಯಾವಿನೀತರು ಮತ್ತು ಜ್ಞಾನವಿಶಾರದರಿಗೆ ಅವರ ಗುಣಕ್ಕೆ ತಕ್ಕಂತೆ ನೀಡಿ ಸಂತೋಷಪಡಿಸುತ್ತೀಯೆ ತಾನೆ?
02005044a ಕಚ್ಚಿದ್ದಾರಾನ್ಮನುಷ್ಯಾಣಾಂ ತವಾರ್ಥೇ ಮೃತ್ಯುಮೇಯುಷಾಂ।
02005044c ವ್ಯಸನಂ ಚಾಭ್ಯುಪೇತಾನಾಂ ಬಿಭರ್ಷಿ ಭರತರ್ಷಭ।।
ಭರತರ್ಷಭ! ನಿನಗಾಗಿ ಮೃತ್ಯುವನ್ನು ಹೊಂದಿದವರ ಪತ್ನಿಯರಿಗೆ ಅಥವಾ ಬೇರೆ ಯಾವುದೇ ಕಾರಣಕ್ಕೆ ಕಷ್ಟದಲ್ಲಿರುವವರಿಗೆ ಆರ್ಥಿಕ ಬೆಂಬಲವನ್ನು ನೀಡುತ್ತೀಯೆ ತಾನೆ?
02005045a ಕಚ್ಚಿದ್ಭಯಾದುಪನತಂ ಕ್ಲೀಬಂ ವಾ ರಿಪುಮಾಗತಂ।
02005045c ಯುದ್ಧೇ ವಾ ವಿಜಿತಂ ಪಾರ್ಥ ಪುತ್ರವತ್ಪರಿರಕ್ಷಸಿ।।
ಪಾರ್ಥ! ಯುದ್ಧದಲ್ಲಿ ಸೋತ ಅಥವಾ ಹೆದರಿ ಶರಣುಬಂದ ಅಥವಾ ಮನಸ್ಸನ್ನು ಬದಲಾಯಿಸಿ ಶರಣುಬಂದ ಶತ್ರುವನ್ನು ಪುತ್ರನನ್ನು ಹೇಗೋ ಹಾಗೆ ರಕ್ಷಿಸುತ್ತೀಯೆ ತಾನೆ?
02005046a ಕಚ್ಚಿತ್ತ್ವಮೇವ ಸರ್ವಸ್ಯಾಃ ಪೃಥಿವ್ಯಾಃ ಪೃಥಿವೀಪತೇ।
02005046c ಸಮಶ್ಚ ನಾಭಿಶಂಕ್ಯಶ್ಚ ಯಥಾ ಮಾತಾ ಯಥಾ ಪಿತಾ।।
ಪೃಥಿವೀಪತೇ! ಭೂಮಿಯಲ್ಲಿರುವ ಸರ್ವರನ್ನೂ, ತಾಯಿ ಅಥವಾ ತಂದೆಯಂತೆ, ಸಮನಾಗಿ, ಶಂಕಿಸದೇ ನೋಡಿಕೊಳ್ಳುತ್ತಿದ್ದೀಯೆ ತಾನೆ?
02005047a ಕಚ್ಚಿದ್ವ್ಯಸನಿನಂ ಶತ್ರುಂ ನಿಶಮ್ಯ ಭರತರ್ಷಭ।
02005047c ಅಭಿಯಾಸಿ ಜವೇನೈವ ಸಮೀಕ್ಷ್ಯ ತ್ರಿವಿಧಂ ಬಲಂ।।
02005048a ಪಾರ್ಷ್ಣಿಮೂಲಂ ಚ ವಿಜ್ಞಾಯ ವ್ಯವಸಾಯಂ ಪರಾಜಯಂ।
02005048c ಬಲಸ್ಯ ಚ ಮಹಾರಾಜ ದತ್ತ್ವಾ ವೇತನಮಗ್ರತಃ।।
ಭರತರ್ಷಭ! ಮಹಾರಾಜ! ಓರ್ವ ಶತ್ರುವು ತೊಂದರೆಯಲ್ಲಿದ್ದಾನೆ ಎಂದು ಕೇಳಿದಾಗ ನೀನು ತಕ್ಷಣ ನಿನ್ನ ತ್ರಿವಿಧ ಸೇನೆಯನ್ನು ವೀಕ್ಷಿಸಿ, ಜಯ ಮತ್ತು ಅಪಜಯಗಳು ನಂತರ ನಿರ್ಧರಿಸಲ್ಪಡುತ್ತದೆ ಎಂದು ತಿಳಿದೂ, ಮುಂಗಡ ವೇತನವನ್ನಿತ್ತು, ಅವನ ಮೇಲೆ ಧಾಳಿಯಿಡುತ್ತೀಯೆ ತಾನೆ?
02005049a ಕಚ್ಚಿಚ್ಚ ಬಲಮುಖ್ಯೇಭ್ಯಃ ಪರರಾಷ್ಟ್ರೇ ಪರಂತಪ।
02005049c ಉಪಚ್ಛನ್ನಾನಿ ರತ್ನಾನಿ ಪ್ರಯಚ್ಛಸಿ ಯಥಾರ್ಹತಃ।।
ಪರಂತಪ! ಶತ್ರುವಿನ ರಾಷ್ಟ್ರದಲ್ಲಿ ಅಡಗಿರುವ ರತ್ನ ಸಂಪತ್ತುಗಳನ್ನು ನಿನ್ನ ಸೇನಾಪತಿಗಳಲ್ಲಿ ಅವರ ಪದವಿಗೆ ತಕ್ಕಂತೆ ಹಂಚುತ್ತೀಯೆ ತಾನೆ?
02005050a ಕಚ್ಚಿದಾತ್ಮಾನಮೇವಾಗ್ರೇ ವಿಜಿತ್ಯ ವಿಜಿತೇಂದ್ರಿಯಃ।
02005050c ಪರಾಂ ಜಿಗೀಷಸೇ ಪಾರ್ಥ ಪ್ರಮತ್ತಾನಜಿತೇಂದ್ರಿಯಾನ್।।
ಪಾರ್ಥ! ಮೊದಲು ನಿನ್ನನ್ನು ನೀನೇ ಗೆದ್ದುಕೊಂಡು ಜಿತೇಂದ್ರಿಯನಾಗಿ ಪ್ರಮತ್ತರೂ ಅಜಿತೇಂದ್ರಿಯರೂ ಆದ ನಿನ್ನ ಶತ್ರುಗಳನ್ನು ಗೆಲ್ಲುತ್ತೀಯೆ ತಾನೇ?
02005051a ಕಚ್ಚಿತ್ತೇ ಯಾಸ್ಯತಃ ಶತ್ರೂನ್ಪೂರ್ವಂ ಯಾಂತಿ ಸ್ವನುಷ್ಠಿತಾಃ।
02005051c ಸಾಮ ದಾನಂ ಚ ಭೇದಶ್ಚ ದಂಡಶ್ಚ ವಿಧಿವದ್ಗುಣಾಃ।।
ನೀನು ಶತ್ರುಗಳ ಮೇಲೆ ಧಾಳಿಯಿಡುವ ಮೊದಲು ಸಾಮ, ದಾನ, ಭೇದ, ಮತ್ತು ದಂಡ ಈ ನೀತಿಗಳನ್ನು ಸರಿಯಾಗಿ ಬಳಸುತ್ತೀಯೆ ತಾನೆ?
02005052a ಕಚ್ಚಿನ್ಮೂಲಂ ದೃಢಂ ಕೃತ್ವಾ ಯಾತ್ರಾಂ ಯಾಸಿ ವಿಶಾಂ ಪತೇ।
02005052c ತಾಂಶ್ಚ ವಿಕ್ರಮಸೇ ಜೇತುಂ ಜಿತ್ವಾ ಚ ಪರಿರಕ್ಷಸಿ।।
ವಿಶಾಂಪತೇ! ನಿನ್ನ ಮೂಲವನ್ನು ದೃಢಪಡಿಸಿಕೊಂಡೇ ಯುದ್ಧಕ್ಕೆ ಹೊರಡುತ್ತೀಯೆ ತಾನೆ? ನೀನು ಗೆಲ್ಲಲೆಂದೇ ಹೋರಾಡುತ್ತೀಯಾ ಮತ್ತು ಗೆದ್ದವರನ್ನು ರಕ್ಷಿಸುತ್ತೀಯಾ?
02005053a ಕಚ್ಚಿದಷ್ಟಾಂಗಸಂಯುಕ್ತಾ ಚತುರ್ವಿಧಬಲಾ ಚಮೂಃ।
02005053c ಬಲಮುಖ್ಯೈಃ ಸುನೀತಾ ತೇ ದ್ವಿಷತಾಂ ಪ್ರತಿಬಾಧನೀ।।
ನಿನ್ನ ಸೇನೆಯು ಚತುರ್ವಿಧವಾಗಿದ್ದು ಎಂಟು ಅಂಗಗಳನ್ನು ಹೊಂದಿದೆಯೇ? ಶತ್ರುವನ್ನು ಸದೆಬಡಿಯಲು ಸೇನಾಪತಿಗಳಿಂದ ಒಳ್ಳೆಯ ರೀತಿಯಲ್ಲಿ ನಡೆಸಲ್ಪಡುತ್ತಿವೆ ತಾನೆ?
02005054a ಕಚ್ಚಿಲ್ಲವಂ ಚ ಮುಷ್ಟಿಂ ಚ ಪರರಾಷ್ಟ್ರೇ ಪರಂತಪ।
02005054c ಅವಿಹಾಯ ಮಹಾರಾಜ ವಿಹಂಸಿ ಸಮರೇ ರಿಪೂನ್।।
ಮಹಾರಾಜ! ಪರಂತಪ! ಶತ್ರುವಿನ ರಾಷ್ಟ್ರದಲ್ಲಿ ಸುಗ್ಗಿ ಮತ್ತು ಬಿತ್ತುವ ಕಾಲವನ್ನು ಬಿಟ್ಟು ಸಮರದಲ್ಲಿ ಶತ್ರುವಿನ ಮೇಲೆ ಆಕ್ರಮಣ ಮಾಡುತ್ತೀಯೆ ತಾನೆ?
02005055a ಕಚ್ಚಿತ್ಸ್ವಪರರಾಷ್ಟ್ರೇಷು ಬಹವೋಽಧಿಕೃತಾಸ್ತವ।
02005055c ಅರ್ಥಾನ್ಸಮನುತಿಷ್ಠಂತಿ ರಕ್ಷಂತಿ ಚ ಪರಸ್ಪರಂ।।
ನಿನ್ನ ಮತ್ತು ಪರ ರಾಷ್ಟ್ರಗಳಲ್ಲಿ ಇರುವ ನಿನ್ನ ಅಧಿಕೃತರಿಗೆ ಹಣದ ಕೊರತೆಯಿಲ್ಲ ತಾನೇ ಮತ್ತು ಪರಸ್ಪರರನ್ನು ರಕ್ಷಿಸುತ್ತಾರೆ ತಾನೆ?
02005056a ಕಚ್ಚಿದಭ್ಯವಹಾರ್ಯಾಣಿ ಗಾತ್ರಸಂಸ್ಪರ್ಶಕಾನಿ ಚ।
02005056c ಘ್ರೇಯಾಣಿ ಚ ಮಹಾರಾಜ ರಕ್ಷಂತ್ಯನುಮತಾಸ್ತವ।।
ಮಹಾರಾಜ! ನಿನ್ನ ಆಹಾರ, ಆಭರಣಗಳು ಮತ್ತು ಸುವಾಸನೆಗಳನ್ನು ಕಾಯುವವರನ್ನು ನೀನೇ ಆರಿಸಿಕೊಂಡಿದ್ದೀಯೆ ತಾನೆ?
02005057a ಕಚ್ಚಿತ್ಕೋಶಂ ಚ ಕೋಷ್ಠಂ ಚ ವಾಹನಂ ದ್ವಾರಮಾಯುಧಂ।
02005057c ಆಯಶ್ಚ ಕೃತಕಲ್ಯಾಣೈಸ್ತವ ಭಕ್ತೈರನುಷ್ಠಿತಃ।।
ನಿನ್ನ ಕೋಶ, ಕೋಷ್ಠ (ಪಣತ), ವಾಹನ, ದ್ವಾರ, ಆಯುಧ, ಮತ್ತು ತೆರಿಗೆಗಳನ್ನು ಕಾಯುತ್ತಿರುವವರು ಒಳ್ಳೆಯವರು, ನಿನ್ನಲ್ಲೇ ನಿರತ ಭಕ್ತರು ತಾನೆ?
02005058a ಕಚ್ಚಿದಾಭ್ಯಂತರೇಭ್ಯಶ್ಚ ಬಾಹ್ಯೇಭ್ಯಶ್ಚ ವಿಶಾಂ ಪತೇ।
02005058c ರಕ್ಷಸ್ಯಾತ್ಮಾನಮೇವಾಗ್ರೇ ತಾಂಶ್ಚ ಸ್ವೇಭ್ಯೋ ಮಿಥಶ್ಚ ತಾನ್।।
ವಿಶಾಂಪತೇ! ಒಳಗಿರಲಿ ಅಥವಾ ಹೊರಗಿರಲಿ, ಮೊದಲು ನಿನ್ನನ್ನು ನೀನು ರಕ್ಷಿಸಿಕೊಳ್ಳುತ್ತೀಯೆ, ನಂತರ ನಿನ್ನ ಸೇವಕರು, ಮತ್ತು ನಿನ್ನ ಬಾಂಧವರು ತಾನೆ?
02005059a ಕಚ್ಚಿನ್ನ ಪಾನೇ ದ್ಯೂತೇ ವಾ ಕ್ರೀಡಾಸು ಪ್ರಮದಾಸು ಚ।
02005059c ಪ್ರತಿಜಾನಂತಿ ಪೂರ್ವಾಹ್ಣೇ ವ್ಯಯಂ ವ್ಯಸನಜಂ ತವ।
ಪಾನ, ದ್ಯೂತ, ವ್ಯೇಶ್ಯೆಯರೊಡನೆ ಸಂಗ ಇತ್ಯಾತಿ ವ್ಯಸನಗಳಿಗೆ ಸಂಬಂಧಿಸಿದ ನಿನ್ನ ಖರ್ಚು ಎಷ್ಟಾಯಿತೆಂದು ನಿನ್ನ ಸೇವಕರು ಪ್ರಾತಃಕಾಲದಲ್ಲಿ ತಿಳಿಸುವುದಿಲ್ಲ ತಾನೆ?
02005060a ಕಚ್ಚಿದಾಯಸ್ಯ ಚಾರ್ಧೇನ ಚತುರ್ಭಾಗೇನ ವಾ ಪುನಃ।
02005060c ಪಾದಭಾಗೈಸ್ತ್ರಿಭಿರ್ವಾಪಿ ವ್ಯಯಃ ಸಂಶೋಧ್ಯತೇ ತವ।
ನಿನ್ನ ಖರ್ಚುವೆಚ್ಚಗಳು ನಿನ್ನ ಆದಾಯದ ಅರ್ಧಭಾಗವೋ ಅಥವಾ ಕಾಲುಭಾಗವೋ ಅಥವಾ ಮುಕ್ಕಾಲುಭಾಗವೋ?
02005061a ಕಚಿವಿಜ್ಜ್ಞಾತೀನ್ಗುರೂನ್ವೃದ್ಧಾನ್ವಣಿಜಃ ಶಿಲ್ಪಿನಃ ಶ್ರಿತಾನ್।
02005061c ಅಭೀಕ್ಷ್ಣಮನುಗೃಹ್ಣಾಸಿ ಧನಧಾನ್ಯೇನ ದುರ್ಗತಾನ್।।
ಕಷ್ಟದಲ್ಲಿರುವ ನಿನ್ನ ಜ್ಞಾತಿ-ಬಾಂಧವರನ್ನೂ, ಆಚಾರ್ಯರನ್ನೂ, ವೃದ್ಧರನ್ನೂ, ವರ್ತಕರನ್ನೂ, ಶಿಲ್ಪಿಗಳನ್ನೂ, ನಿನ್ನ ಇತರ ಆಶ್ರಿತರನ್ನೂ ಧನ-ದಾನ್ಯಗಳನ್ನಿತ್ತು ಸಂತೈಸುವೆ ತಾನೆ?
02005062a ಕಚ್ಚಿದಾಯವ್ಯಯೇ ಯುಕ್ತಾಃ ಸರ್ವೇ ಗಣಕಲೇಖಕಾಃ।
02005062c ಅನುತಿಷ್ಠಂತಿ ಪೂರ್ವಾಹ್ಣೇ ನಿತ್ಯಮಾಯವ್ಯಯಂ ತವ।।
ನಿನ್ನ ಆಯವ್ಯಯ ಪರಿಶೀಲನೆಯಲ್ಲಿ ನಿಯುಕ್ತ ಸರ್ವ ಗಣಕ ಲೇಖಕರೂ ದಿನನಿತ್ಯದ ಆಯವ್ಯಯವನ್ನು ಪೂರ್ವಾಹ್ಣದಲ್ಲಿಯೇ ನಿನಗೆ ವರದಿ ಮಾಡುತ್ತಾರೆ ತಾನೇ?
02005063a ಕಚ್ಚಿದರ್ಥೇಷು ಸಂಪ್ರೌಢಾನ್ ಹಿತಕಾಮಾನನುಪ್ರಿಯಾನ್।
02005063c ನಾಪಕರ್ಷಸಿ ಕರ್ಮಭ್ಯಃ ಪೂರ್ವಮಪ್ರಾಪ್ಯ ಕಿಲ್ಬಿಷಂ।।
ಅರ್ಥಶಾಸ್ತ್ರದಲ್ಲಿ ಅನುಭವಹೊಂದಿದ್ದ ನಿನ್ನ ಹಿತಕಾಮಿ, ಅನುಪ್ರಿಯ ಅಧಿಕಾರಿಗಳನ್ನು, ಮೊದಲು ಯಾವುದೇ ತರಹದ ತಪ್ಪು ಇಲ್ಲದಿದ್ದರೂ ತೆಗೆದುಹಾಕಿಲ್ಲ ತಾನೆ?
02005064a ಕಚ್ಚಿದ್ವಿದಿತ್ವಾ ಪುರುಷಾನುತ್ತಮಾಧಮಮಧ್ಯಮಾನ್।
02005064c ತ್ವಂ ಕರ್ಮಸ್ವನುರೂಪೇಷು ನಿಯೋಜಯಸಿ ಭಾರತ।।
ಭಾರತ! ಉತ್ತಮ, ಮಧ್ಯಮ ಮತ್ತು ಅಧಮ ಪುರುಷರನ್ನು ತಿಳಿದು ನೀನು ಅವರಿಗೆ ಅನುರೂಪ ಕೆಲಸಗಳಲ್ಲಿ ನಿಯೋಜಿಸುತ್ತೀಯೆ ತಾನೆ?
02005065a ಕಚ್ಚಿನ್ನ ಲುಬ್ಧಾಶ್ಚೌರಾ ವಾ ವೈರಿಣೋ ವಾ ವಿಶಾಂ ಪತೇ।
02005065c ಅಪ್ರಾಪ್ತವ್ಯವಹಾರಾ ವಾ ತವ ಕರ್ಮಸ್ವನುಷ್ಠಿತಾಃ।।
ವಿಶಾಂಪತೇ! ಹಣದಾಸೆಯಿರುವವರನ್ನೂ, ಕಳ್ಳರನ್ನೂ, ವೈರಿಗಳನ್ನೂ ಮತ್ತು ವ್ಯವಹಾರದಲ್ಲಿ ಅನುಭವವಿಲ್ಲದವರನ್ನೂ ಅಧಿಕಾರಸ್ಥಾನದಲ್ಲಿ ಇಟ್ಟುಕೊಂಡಿಲ್ಲ ತಾನೆ?
02005066a ಕಚ್ಚಿನ್ನ ಲುಬ್ಧೈಶ್ಚೌರೈರ್ವಾ ಕುಮಾರೈಃ ಸ್ತ್ರೀಬಲೇನ ವಾ।
02005066c ತ್ವಯಾ ವಾ ಪೀಡ್ಯತೇ ರಾಷ್ಟ್ರಂ ಕಚ್ಚಿತ್ಪುಷ್ಟಾಃ ಕೃಷೀವಲಾಃ।।
ಲೋಭಿಗಳಿಂದಲೂ, ಕಳ್ಳರಿಂದಲೂ, ಕುಮಾರರಿಂದಲೂ, ಸ್ತ್ರೀಬಲದಿಂದಲೂ ಅಥವಾ ನಿನ್ನಿಂದಲೂ ರಾಷ್ಟ್ರವು ಪೀಡೆಗೊಳಗಾಗಿಲ್ಲ ತಾನೆ? ಕೃಷಿಕರು ಸಂತುಷ್ಟರಾಗಿದ್ದಾರೆ ತಾನೆ?
02005067a ಕಚ್ಚಿದ್ರಾಷ್ಟ್ರೇ ತಡಾಗಾನಿ ಪೂರ್ಣಾನಿ ಚ ಮಹಾಂತಿ ಚ।
02005067c ಭಾಗಶೋ ವಿನಿವಿಷ್ಟಾನಿ ನ ಕೃಷಿರ್ದೇವಮಾತೃಕಾ।।
ನಿನ್ನ ರಾಷ್ಟ್ರದಲ್ಲಿ ಎಲ್ಲಾ ಕಡೆ ತುಂಬಿದ ದೊದ್ದ ದೊಡ್ಡ ಕೆರೆಗಳನ್ನು ನಿರ್ಮಿಸಿದ್ದೀಯೆ ತಾನೇ? ಕೃಷಿಯು ದೈವ ತರುವ ಮಳೆಯ ಮೇಲೆ ಮಾತ್ರ ಅವಲಂಬಿತವಾಗಿಲ್ಲ ತಾನೆ?
02005068a ಕಚ್ಚಿದ್ಬೀಜಂ ಚ ಭಕ್ತಂ ಚ ಕರ್ಷಕಾಯಾವಸೀದತೇ।
02005068c ಪ್ರತಿಕಂ ಚ ಶತಂ ವೃದ್ಧ್ಯಾ ದದಾಸ್ಯೃಣಮನುಗ್ರಹಂ।।
ಕೃಷಿಕರ ಬೀಜಧಾನ್ಯ ಅಥವಾ ಆಹಾರ ಧಾನ್ಯಗಳು ಕಡಿಮೆಯಾದರೆ, ಅವರಿಗೆ ನೂರಕ್ಕೆ ಒಂದರಂತೆ ಮಾಸಿಕವೃದ್ಧಿಯನ್ನು ಪಡೆದುಕೊಂಡು ಸಾಲವನ್ನು ಕೊಡುತ್ತೀಯೆ ತಾನೇ?
02005069a ಕಚ್ಚಿತ್ಸ್ವನುಷ್ಠಿತಾ ತಾತ ವಾರ್ತ್ತಾ ತೇ ಸಾಧುಭಿರ್ಜನೈಃ।
02005069c ವಾರ್ತ್ತಾಯಾಂ ಸಂಶ್ರಿತಸ್ತಾತ ಲೋಕೋಽಯಂ ಸುಖಮೇಧತೇ।।
ಮಗೂ! ನಂಬಿಕೆಗೆ ಅರ್ಹ ಸಾಧು ಜನರು ನಿನ್ನ ಮುಖ್ಯ ಇಲಾಖೆಗಳನ್ನು ನೋಡಿಕೊಳ್ಳುತ್ತಿರುವರು ತಾನೆ? ಏಕೆಂದರೆ ಮುಖ್ಯ ಇಲಾಖೆಗಳು ಸರಿಯಾಗಿ ನಡೆದರೆ ಮಾತ್ರ ಲೋಕವು ಸುಖ ಮತ್ತು ಅಭಿವೃದ್ಧಿಯನ್ನು ಹೊಂದುತ್ತದೆ.
02005070a ಕಚ್ಚಿಚ್ಛುಚಿಕೃತಃ ಪ್ರಾಜ್ಞಾಃ ಪಂಚ ಪಂಚ ಸ್ವನುಷ್ಠಿತಾಃ।
02005070c ಕ್ಷೇಮಂ ಕುರ್ವಂತಿ ಸಂಹತ್ಯ ರಾಜಂ ಜನಪದೇ ತವ।।
ರಾಜನ್! ನಿಷ್ಠರೂ, ಪ್ರಾಜ್ಞರೂ, ನ್ಯಾಯಪರರೂ ಮತ್ತು ನಿನಗೆ ವಿಧೇಯರಾಗಿರುವ ಐದು ಅಧಿಕಾರಿಗಳು7 ನಿನ್ನ ನಗರದ ಪ್ರತಿ ಗ್ರಾಮೀಣ ಪ್ರದೇಶದಲ್ಲಿ ಇರುವರು ತಾನೆ? ಇವರು ಒಗ್ಗಟ್ಟಿನಲ್ಲಿ ಕೆಲಸಮಾಡಿ ಕ್ಷೇಮ ತರುತ್ತಾರೆ ತಾನೇ?
02005071a ಕಚ್ಚಿನ್ನಗರಗುಪ್ತ್ಯರ್ಥಂ ಗ್ರಾಮಾ ನಗರವತ್ಕೃತಾಃ।
02005071c ಗ್ರಾಮವಚ್ಚ ಕೃತಾ ರಕ್ಷಾ ತೇ ಚ ಸರ್ವೇ ತದರ್ಪಣಾಃ।।
ನಗರಗಳ ರಕ್ಷಣೆಗೋಸ್ಕರ ಗ್ರಾಮಗಳಲ್ಲಿಯೂ ನಗರಗಳಲ್ಲಿರುವಂಥೆ ವ್ಯವಸ್ಥೆಮಾಡಲಾಗಿದೆ ತಾನೆ? ಗ್ರಾಮಗಳ ರಕ್ಷೆಗೋಸ್ಕರ ಎಲ್ಲ ಹಳ್ಳಿಗಳಲ್ಲಿಯೂ ಗ್ರಾಮಗಳಲ್ಲಿರುವ ಸೌಕರ್ಯಗಳಿವೆ ತಾನೆ8?
02005072a ಕಚ್ಚಿದ್ಬಲೇನಾನುಗತಾಃ ಸಮಾನಿ ವಿಷಮಾಣಿ ಚ।
02005072c ಪುರಾಣಚೌರಾಃ ಸಾಧ್ಯಕ್ಷಾಶ್ಚರಂತಿ ವಿಷಯೇ ತವ।।
ನಿನ್ನ ದೇಶದಲ್ಲಿ ಸೈನ್ಯವು ಸಮ ಮತ್ತು ವಿಷಮ ಪ್ರದೇಶಗಳಲ್ಲಿಯೂ ನಗರಗಳಲ್ಲಿಯೂ ಸಂಚರಿಸಿ ಕಳ್ಳರನ್ನು ಹುಡುಕುತ್ತಿರುತ್ತಾರೆ ತಾನೆ?
02005073a ಕಚ್ಚಿತ್ ಸ್ತ್ರಿಯಃ ಸಾಂತ್ವಯಸಿ ಕಚ್ಚಿತ್ತಾಶ್ಚ ಸುರಕ್ಷಿತಾಃ।
02005073c ಕಚ್ಚಿನ್ನ ಶ್ರದ್ದಧಾಸ್ಯಾಸಾಂ ಕಚ್ಚಿದ್ಗುಹ್ಯಂ ನ ಭಾಷಸೇ।।
ಸ್ತ್ರೀಯರನ್ನು ಸಂತವಿಸುತ್ತೀಯೆ ಮತ್ತು ಅವರನನ್ನು ರಕ್ಷಿಸುತ್ತಿರುವೆ ತಾನೆ? ಆದರೆ ಅವರ ಮೇಲೆ ತುಂಬಾ ನಂಬಿಕೆಯನ್ನಿಡುವುದಿಲ್ಲ ತಾನೆ? ಅವರೊಂದಿಗೆ ರಹಸ್ಯವಿಷಯಗಳನ್ನು ಹೇಳಿಕೊಳ್ಳುವುದಿಲ್ಲ ತಾನೆ?
02005074a ಕಚ್ಚಿಚ್ಚಾರಾನ್ನಿಶಿ ಶ್ರುತ್ವಾ ತತ್ಕಾರ್ಯಮನುಚಿಂತ್ಯ ಚ।
02005074c ಪ್ರಿಯಾಣ್ಯನುಭವಂ ಶೇಷೇ ವಿದಿತ್ವಾಭ್ಯಂತರಂ ಜನಂ।।
ಗೂಢಚಾರರ ವರದಿಯನ್ನು ಕೇಳಿ ಮಾಡಬೇಕಾದ ಕಾರ್ಯದ ಕುರಿತು ಯೋಚಿಸಿ, ಒಳಗಿರುವವರು ಯಾರೆಂದು ತಿಳಿದು ನಂತರ ಸುಖವಾಗಿ ಸುರಕ್ಷಿತವಾಗಿ ಮಲಗುತ್ತೀಯೆ ತಾನೆ?
02005075a ಕಚ್ಚಿದ್ದ್ವೌ ಪ್ರಥಮೌ ಯಾಮೌ ರಾತ್ರ್ಯಾಂ ಸುಪ್ತ್ವಾ ವಿಶಾಂ ಪತೇ।
02005075c ಸಂಚಿಂತಯಸಿ ಧರ್ಮಾರ್ಥೌ ಯಾಮ ಉತ್ಥಾಯ ಪಶ್ಚಿಮೇ।।
ವಿಶಾಂಪತೇ! ರಾತ್ರಿಯ ಮೊದಲು ಎರಡು ಯಾಮಗಳಲ್ಲಿ ನಿದ್ದೆ ಮಾಡಿ ಕೊನೆಯ ಯಾಮದಲ್ಲಿ ಎದ್ದು ಧರ್ಮಾರ್ಥ ವಿಷಯಗಳ ಕುರಿತು ಚಿಂತಿಸುತ್ತೀಯೆ ತಾನೆ?
02005076a ಕಚ್ಚಿದ್ದರ್ಶಯಸೇ ನಿತ್ಯಂ ಮನುಷ್ಯಾನ್ಸಮಲಂಕೃತಾನ್।
02005076c ಉತ್ಥಾಯ ಕಾಲೇ ಕಾಲಜ್ಞಃ ಸಹ ಪಾಂಡವ ಮಂತ್ರಿಭಿಃ।।
ಪಾಂಡವ! ಸಕಾಲದಲ್ಲಿ ಎದ್ದು, ನಿತ್ಯವಿಧಿಗಳನ್ನು ಪೂರೈಸಿ, ಸಮಲಂಕೃತನಾಗಿ, ಕಾಲಜ್ಞ ಮಂತ್ರಿಗಳೊಂದಿಗೆ ಪುರಜನರ ದರ್ಶನ ಮಾಡುತ್ತೀಯೆ ತಾನೆ?
02005077a ಕಚ್ಚಿದ್ರಕ್ತಾಂಬರಧರಾಃ ಖಡ್ಗಹಸ್ತಾಃ ಸ್ವಲಂಕೃತಾಃ।
02005077c ಅಭಿತಸ್ತ್ವಾಮುಪಾಸಂತೇ ರಕ್ಷಣಾರ್ಥಮರಿಂದಮ।।
ಅರಿಂದಮ! ಕೆಂಪು ಉಡುಗೆಗಳನ್ನು ಧರಿಸಿ ಕಡ್ಗಗಳನ್ನು ಹಿಡಿದಿರುವ, ಅಲಂಕೃತ ಅಂಗರಕ್ಷಕರು ಸುತ್ತಲೂ ಇದ್ದು ಯಾವಾಗಲೂ ನಿನ್ನನ್ನು ರಕ್ಷಿಸಿರುತ್ತಾರೆ ತಾನೆ?
02005078a ಕಚ್ಚಿದ್ದಂಡ್ಯೇಷು ಯಮವತ್ಪೂಜ್ಯೇಷು ಚ ವಿಶಾಂ ಪತೇ।
02005078c ಪರೀಕ್ಷ್ಯ ವರ್ತಸೇ ಸಮ್ಯಗಪ್ರಿಯೇಷು ಪ್ರಿಯೇಷು ಚ।।
ವಿಶಾಂಪತೇ! ನ್ಯಾಯಕ್ಕೆ ಬಂದ ವಿಷಯಗಳಲ್ಲಿ, ಶಿಕ್ಷೆನೀಡಬೇಕಾದವರಿಗೆ ಮತ್ತು ಗೌರವಿಸಬೇಕಾದವರಿಗೆ, ನಿನಗಿಷ್ಟವಾದವರಾಗಿದ್ದರೂ ಇಷ್ಟವಿಲ್ಲದವರಾಗಿದ್ದರೂ ಸಂಪೂರ್ಣವಾಗಿ ಪರೀಕ್ಷಿಸಿ ಯಮನಂತೆ ವರ್ತಿಸುತ್ತೀಯೆ ತಾನೆ?
02005079a ಕಚ್ಚಿಚ್ಛಾರೀರಮಾಬಾಧಮೌಷಧೈರ್ನಿಯಮೇನ ವಾ।
02005079c ಮಾನಸಂ ವೃದ್ಧಸೇವಾಭಿಃ ಸದಾ ಪಾರ್ಥಾಪಕರ್ಷಸಿ।।
ಪಾರ್ಥ! ಶಾರೀರಿಕ ಬಾಧೆಗಳನ್ನು ಔಷಧ ಮತ್ತು ಪಥ್ಯಗಳಿಂದ ಮತ್ತು ಮಾನಸಿಕ ಬಾಧೆಗಳನ್ನು ವೃದ್ಧರ ಸೇವೆ ಮಾಡುವುದರಿಂದ ಸದಾ ಹೋಗಲಾಡಿಸಿಕೊಳ್ಳುತ್ತೀಯೆ ತಾನೆ?
02005080a ಕಚ್ಚಿದ್ವೈದ್ಯಾಶ್ಚಿಕಿತ್ಸಾಯಾಮಷ್ಟಾಂಗಾಯಾಂ ವಿಶಾರದಾಃ।
02005080c ಸುಹೃದಶ್ಚಾನುರಕ್ತಾಶ್ಚ ಶರೀರೇ ತೇ ಹಿತಾಃ ಸದಾ।।
ನಿನ್ನ ಶರೀರ ಹಿತವನ್ನು ನೋಡಿಕೊಳ್ಳುವ ವೈದ್ಯರು ಅಷ್ಟಾಂಗ9 ಚಿಕಿತ್ಸೆಯಲ್ಲಿ ವಿಶಾರದರು, ಸ್ನೇಹಪರರು ಮತ್ತು ಅನುರಕ್ತರು ತಾನೆ?
02005081a ಕಚ್ಚಿನ್ನ ಮಾನಾನ್ಮೋಹಾದ್ವಾ ಕಾಮಾದ್ವಾಪಿ ವಿಶಾಂ ಪತೇ।
02005081c ಅರ್ಥಿಪ್ರತ್ಯರ್ಥಿನಃ ಪ್ರಾಪ್ತಾನಪಾಸ್ಯಸಿ ಕಥಂ ಚನ।।
ವಿಶಾಂಪತೇ! ಲೋಭದಿಂದಲಾಗಲೀ, ಮೋಹದಿಂದಲಾಗಲೀ, ಅಭಿಮಾನದಿಂದಾಗಲೀ ನೀನು ನಿನ್ನಲ್ಲಿಗೆ ಬಂದಿರುವ ಅರ್ಥಿ-ಪ್ರತ್ಯರ್ಥಿಗಳನ್ನು10 ಎಂದೂ ಹಿಂದೆ ಕಳುಹಿಸುವುದಿಲ್ಲ ತಾನೆ?
02005082a ಕಚ್ಚಿನ್ನ ಲೋಭಾನ್ಮೋಹಾದ್ವಾ ವಿಶ್ರಂಭಾತ್ಪ್ರಣಯೇನ ವಾ।
02005082c ಆಶ್ರಿತಾನಾಂ ಮನುಷ್ಯಾಣಾಂ ವೃತ್ತಿಂ ತ್ವಂ ಸಂರುಣತ್ಸಿ ಚ।।
ಲೋಭದಿಂದಾಗಲೀ, ಮೋಹದಿಂದಾಗಲೀ, ಗೊಂದಲದಿಂದಾಗಲೀ, ಅಥವಾ ಪ್ರೀತಿಯಿಂದಾಗಲೀ ನಿನ್ನ ಆಶ್ರಿತರಾಗಿರುವ ಮನುಷ್ಯರ ಜೀವನವೃತ್ತಿಯನ್ನು ನಿಲ್ಲಿಸುವುದಿಲ್ಲ ತಾನೆ?
02005083a ಕಚ್ಚಿತ್ಪೌರಾ ನ ಸಹಿತಾ ಯೇ ಚ ತೇ ರಾಷ್ಟ್ರವಾಸಿನಃ।
02005083c ತ್ವಯಾ ಸಹ ವಿರುಧ್ಯಂತೇ ಪರೈಃ ಕ್ರೀತಾಃ ಕಥಂ ಚನ।।
ನಗರದಲ್ಲಿ ವಾಸಿಸುವವರ ಸಹಿತ ನಿನ್ನ ರಾಷ್ಟ್ರದಲ್ಲಿ ವಾಸಿಸಿರುವವರು ಶತ್ರುಗಳ ಪ್ರೇರಣೆಯಿಂದ ನಿನ್ನ ವಿರುದ್ಧ ಒಟ್ಟಿಗೆ ಪ್ರತಿಭಟಿಸುತ್ತಿಲ್ಲ ತಾನೆ?
02005084a ಕಚ್ಚಿತ್ತೇ ದುರ್ಬಲಃ ಶತ್ರುರ್ಬಲೇನೋಪನಿಪೀಡಿತಃ।
02005084c ಮಂತ್ರೇಣ ಬಲವಾನ್ಕಶ್ಚಿದುಭಾಭ್ಯಾಂ ವಾ ಯುಧಿಷ್ಠಿರ।।
ಯುಧಿಷ್ಠಿರ! ನಿನ್ನ ದುರ್ಬಲಶತ್ರುವನ್ನು ಬಲಪ್ರಯೋಗಿಸಿ ನಿಯಂತ್ರಣದಲ್ಲಿಟ್ಟುಕೊಂಡಿದ್ದೀಯೆ ತಾನೆ? ಮತ್ತು ನಿನಗಿಂಥ ಹೆಚ್ಚು ಬಲಶಾಲಿಯಾಗಿರುವವರನ್ನು ಪರಸ್ಪರ ವಿಚಾರವಿನಿಮಯದಿಂದ ತೊಂದರೆಕೊಡದ ಹಾಗೆ ನೋಡಿಕೊಳ್ಳುತ್ತಿದ್ದೀಯೆ ತಾನೆ?
02005085a ಕಚ್ಚಿತ್ಸರ್ವೇಽನುರಕ್ತಾಸ್ತ್ವಾಂ ಭೂಮಿಪಾಲಾಃ ಪ್ರಧಾನತಃ।
02005085c ಕಚ್ಚಿತ್ಪ್ರಾಣಾಂಸ್ತ್ವದರ್ಥೇಷು ಸಂತ್ಯಜಂತಿ ತ್ವಯಾ ಹೃತಾಃ।।
ನಿನ್ನ ಅಧೀನದಲ್ಲಿರುವ ಭೂಮಿಪಾಲರೆಲ್ಲರೂ ನಿನ್ನಲ್ಲಿಯೇ ಅನುರಕ್ತರಾಗಿದ್ದಾರೆ ತಾನೆ? ಮತ್ತು ನಿನಗಾಗಿ ಪ್ರಾಣವನ್ನು ತೊರೆಯಲೂ ಸಿದ್ಧರಿದ್ದಾರೆ ತಾನೆ?
02005086a ಕಚ್ಚಿತ್ತೇ ಸರ್ವವಿದ್ಯಾಸು ಗುಣತೋಽರ್ಚಾ ಪ್ರವರ್ತತೇ।
02005086c ಬ್ರಾಹ್ಮಣಾನಾಂ ಚ ಸಾಧೂನಾಂ ತವ ನಿಃಶ್ರೇಯಸೇ ಶುಭಾ।।
ನೀನು ನಿನ್ನ ಒಳ್ಳೆಯದಕ್ಕಾಗಿಯೇ ಸರ್ವ ವಿಧ್ಯೆಗಳಲ್ಲಿ ಅವರಿಗಿರುವ ಗುಣಮಟ್ಟಕ್ಕನುಗುಣವಾಗಿ ಬ್ರಾಹ್ಮಣರು ಮತ್ತು ಸಾಧುಗಳನ್ನು ಗೌರವಿಸುತ್ತೀಯೆ ತಾನೆ?
02005087a ಕಚ್ಚಿದ್ಧರ್ಮೇ ತ್ರಯೀಮೂಲೇ ಪೂರ್ವೈರಾಚರಿತೇ ಜನೈಃ।
02005087c ವರ್ತಮಾನಸ್ತಥಾ ಕರ್ತುಂ ತಸ್ಮಿನ್ಕರ್ಮಣಿ ವರ್ತಸೇ।।
ನಿನ್ನ ಪೂರ್ವಜ ಜನರಿಂದ ಆಚರಿತಗೊಂಡ ಮೂರುವೇದಗಳೇ ಮೂಲ ಧರ್ಮದಂತೆ ನಡೆದುಕೊಳ್ಳುತ್ತಿದ್ದೇಯೆ ಮತ್ತು ಕರ್ಮಗಳಲ್ಲಿ ನಿರತನಾಗಿದ್ದೀಯೆ ತಾನೆ?
02005088a ಕಚ್ಚಿತ್ತವ ಗೃಹೇಽನ್ನಾನಿ ಸ್ವಾದೂನ್ಯಶ್ನಂತಿ ವೈ ದ್ವಿಜಾಃ।
02005088c ಗುಣವಂತಿ ಗುಣೋಪೇತಾಸ್ತವಾಧ್ಯಕ್ಷಂ ಸದಕ್ಷಿಣಂ।।
ನಿನ್ನ ಮನೆಯಲ್ಲಿ ನಿನ್ನ ಸಮ್ಮುಖದಲ್ಲಿ ಗುಣವಂತ ದ್ವಿಜರು ದಕ್ಷಿಣೆಗಳನ್ನು ಪಡೆದು ಸ್ವಾದಯುಕ್ತ ಉತ್ತಮ ಊಟವನ್ನು ಉಣ್ಣುತ್ತಾರೆ ತಾನೆ?
02005089a ಕಚ್ಚಿತ್ಕ್ರತೂನೇಕಚಿತ್ತೋ ವಾಜಪೇಯಾಂಶ್ಚ ಸರ್ವಶಃ।
02005089c ಪುಂಡರೀಕಾಂಶ್ಚ ಕಾರ್ತ್ಸ್ನ್ಯೆನ ಯತಸೇ ಕರ್ತುಮಾತ್ಮವಾನ್।।
ಏಕಚಿತ್ತನಾಗಿ ಆತ್ಮವನ್ನು ಜಯಿಸಿ, ವಾಜಪೇಯ ಮತ್ತು ಪುಂಡರೀಕ ಕ್ರತುಗಳನ್ನು ಸಂಪೂರ್ಣವಾಗಿ ಮಾಡಲು ಪ್ರಯತ್ನಿಸುತ್ತಿರುವೆ ತಾನೆ?
02005090a ಕಚ್ಚಿಜ್ಜ್ಞಾತೀನ್ಗುರೂನ್ವೃದ್ಧಾನ್ದೈವತಾಂಸ್ತಾಪಸಾನಪಿ।
02005090c ಚೈತ್ಯಾಂಶ್ಚ ವೃಕ್ಷಾನ್ಕಲ್ಯಾಣಾನ್ಬ್ರಾಹ್ಮಣಾಂಶ್ಚ ನಮಸ್ಯಸಿ।।
ನೀನು ಜ್ಞಾತಿ-ಬಾಂಧವರನ್ನು, ಗುರುಗಳನ್ನು, ವೃದ್ಧರನ್ನು, ದೇವತೆಗಳನ್ನು, ತಾಪಸರನ್ನು, ಚೈತ್ಯಗಳನ್ನು, ಮಂಗಳಕರ ವೃಕ್ಷಗಳನ್ನು, ಬ್ರಾಹ್ಮಣರನ್ನು ನಮಸ್ಕರಿಸುತ್ತೀಯೆ ತಾನೆ?
02005091a ಕಚ್ಚಿದೇಷಾ ಚ ತೇ ಬುದ್ಧಿರ್ವೃತ್ತಿರೇಷಾ ಚ ತೇಽನಘ।
02005091c ಆಯುಷ್ಯಾ ಚ ಯಶಸ್ಯಾ ಚ ಧರ್ಮಕಾಮಾರ್ಥದರ್ಶಿನೀ।।
11ಅನಘ! ಆಯುಸ್ಸನ್ನೂ ಯಶವನ್ನೂ ವೃದ್ಧಿಸುವ, ಧರ್ಮಕಾಮಾರ್ಥಗಳನ್ನು ತೋರಿಸುವ ಇದರಂತೆಯೇ ಬುದ್ಧಿ ಮತ್ತು ನಡತೆಗಳಿಂದ ನಿನ್ನ ದೇಶವನ್ನು ಆಳುತ್ತಿದ್ದೀಯೆ ತಾನೆ?
02005092a ಏತಯಾ ವರ್ತಮಾನಸ್ಯ ಬುದ್ಧ್ಯಾ ರಾಷ್ಟ್ರಂ ನ ಸೀದತಿ।
02005092c ವಿಜಿತ್ಯ ಚ ಮಹೀಂ ರಾಜಾ ಸೋಽತ್ಯಂತಂ ಸುಖಮೇಧತೇ।।
ಈ ರೀತಿ ಬುದ್ಧಿಯುಕ್ತನಾಗಿ ನಡೆದುಕೊಳ್ಳುವವನ ರಾಷ್ಟ್ರವು ನಾಶವಾಗುವುದಿಲ್ಲ ಮತ್ತು ಅಂಥಹ ರಾಜನು ಮಹಿಯನ್ನು ಗೆದ್ದು ಅತ್ಯಂತ ಸುಖವನ್ನು ಹೊಂದುತ್ತಾನೆ.
02005093a ಕಚ್ಚಿದಾರ್ಯೋ ವಿಶುದ್ಧಾತ್ಮಾ ಕ್ಷಾರಿತಶ್ಚೌರಕರ್ಮಣಿ।
02005093c ಅದೃಷ್ಟಶಾಸ್ತ್ರಕುಶಲೈರ್ನ ಲೋಭಾದ್ವಧ್ಯತೇ ಶುಚಿಃ।।
ಆರ್ಯ ವಿಶುದ್ಧಾತ್ಮರ ಮೇಲೆ ಕಳ್ಳತನದ ಅಪವಾದನ್ನು ಹೊರಿಸಿ ಲೋಭದಿಂದಲೋ ಮಂದಬುದ್ಧಿಯಿಂದಲೋ ವಧೆಯಾಗದ ಹಾಗೆ ನೋಡಿಕೊಳ್ಳುತ್ತೀಯೆ ತಾನೆ?
02005094a ಪೃಷ್ಟೋ ಗೃಹೀತಸ್ತತ್ಕಾರೀ ತಜ್ಜ್ಞೈರ್ದೃಷ್ಟಃ ಸಕಾರಣಃ।
02005094c ಕಚ್ಚಿನ್ನ ಮುಚ್ಯತೇ ಸ್ತೇನೋ ದ್ರವ್ಯಲೋಭಾನ್ನರರ್ಷಭ।।
ನರರ್ಷಭ! ಪ್ರಶ್ನೆಗಳಿಗೊಳಗಾಗಿ, ಅವನನ್ನು ಸಲಕರಣೆಗಳೊಡನೆ ನೋಡಿದವರ ಸಾಕ್ಷಿಯ ಪ್ರಕಾರ ಸೆರೆಹಿಡಿದು ಬಂಧನದಲ್ಲಿಟ್ಟ ಅಪರಾಧಿಯು ಲಂಚದ ಕಾರಣದಿಂದ ಬಿಡುಗಡೆ ಹೊಂದಬಹುದೇ?
02005095a ವ್ಯುತ್ಪನ್ನೇ ಕಚ್ಚಿದಾಢ್ಯಸ್ಯ ದರಿದ್ರಸ್ಯ ಚ ಭಾರತ।
02005095c ಅರ್ಥಾನ್ನ ಮಿಥ್ಯಾ ಪಶ್ಯಂತಿ ತವಾಮಾತ್ಯಾ ಹೃತಾ ಧನೈಃ।।
ಭಾರತ! ಒಂದುವೇಳೆ ಧನಿಕ ಮತ್ತು ಬಡವನ ಮಧ್ಯೆ ಜಗಳ ಬಂದಾಗ ನಿನ್ನ ಅಮಾತ್ಯರು ಲಂಚವನ್ನು ತೆಗೆದುಕೊಂಡು ಸುಳ್ಳು ನಿರ್ಧಾರಗಳನ್ನು ನೀಡುತ್ತಾರೆಯೇ?
02005096a ನಾಸ್ತಿಕ್ಯಮನೃತಂ ಕ್ರೋಧಂ ಪ್ರಮಾದಂ ದೀರ್ಘಸೂತ್ರತಾಂ।
02005096c ಅದರ್ಶನಂ ಜ್ಞಾನವತಾಮಾಲಸ್ಯಂ ಕ್ಷಿಪ್ತಚಿತ್ತತಾಂ।।
02005097a ಏಕಚಿಂತನಮರ್ಥಾನಾಮನರ್ಥಜ್ಞೈಶ್ಚ ಚಿಂತನಂ।
02005097c ನಿಶ್ಚಿತಾನಾಮನಾರಂಭಂ ಮಂತ್ರಸ್ಯಾಪರಿರಕ್ಷಣಂ।।
02005098a ಮಂಗಲ್ಯಸ್ಯಾಪ್ರಯೋಗಂ ಚ ಪ್ರಸಂಗಂ ವಿಷಯೇಷು ಚ।
02005098c ಕಚ್ಚಿತ್ತ್ವಂ ವರ್ಜಯಸ್ಯೇತಾನ್ರಾಜದೋಷಾಂಶ್ಚತುರ್ದಶ।।
ನಾಸ್ತಿಕ್ಯ (ದೇವರಲ್ಲಿ ನಂಬಿಕೆಯನ್ನಿಡದಿರುವುದು), ಅನೃತ (ಸುಳ್ಳು ಹೇಳುವುದು), ಕ್ರೋಧ (ಸಿಟ್ಟು), ಪ್ರಮಾದ (ಅಜಾಗರೂಕತೆ), ದೀರ್ಘಸೂತ್ರತೆ (ಸುತ್ತುಬಳಸಿ ಯೋಜಿಸುವುದು, ಕೆಲಸ ಮಾಡುವುದು), ಜ್ಞಾನವನ್ನು ಕಾಣದಿರುವುದು (ವಿವೇಕತೆಯನ್ನು ಅಲಕ್ಷಿಸುವುದು), ಆಲಸ್ಯ (ಸೋಮಾರಿತನ), ಕ್ಷಿಪ್ತಚಿತ್ತತೆ (ಸದಾ ಮರೆಯುವಿಕೆ), ಒಬ್ಬನಿಂದಲೇ ಸಲಹೆ ಸೂಚನೆಗಳನ್ನು ಸ್ವೀಕರಿಸುವುದು, ಅಭಿವೃದ್ಧಿ ಯೋಜನೆಗಳ ಕುರಿತು ಅವುಗಳ ಬಗ್ಗೆ ತಿಳಿಯದಿದ್ದವರಿಂದ ಸಲಹೆ ಸೂಚನೆಗಳನ್ನು ಪಡೆಯುವುದು, ನಿರ್ಧರಿಸಿದ ಕಾರ್ಯಗಳನ್ನು ತಡವಾಗಿ ಆರಂಭಿಸುವುದು, ಮಂತ್ರಾಲೋಚನೆಗಳನ್ನು ಗೌಪ್ಯವಾಗಿ ಇಡದೇ ಇರುವುದು, ಮಂಗಲಕಾರ್ಯಗಳನ್ನು ಕೈಗೊಳ್ಳದೇ ಇರುವುದು, ಮತ್ತು ಸುಖಭೋಗಗಳಲ್ಲಿಯೇ ತೊಡಗಿರುವುದು ಇವೇ ಹದಿನಾಲ್ಜು ರಾಜದೋಷಗಳನ್ನು ನೀನು ವರ್ಜಿಸಿದ್ದೀಯೆ ತಾನೇ?
02005099a ಕಚ್ಚಿತ್ತೇ ಸಫಲಾ ವೇದಾಃ ಕಚ್ಚಿತ್ತೇ ಸಫಲಂ ಧನಂ।
02005099c ಕಚ್ಚಿತ್ತೇ ಸಫಲಾ ದಾರಾಃ ಕಚ್ಚಿತ್ತೇ ಸಫಲಂ ಶ್ರುತಂ।।
ವೇದಗಳು ಸಫಲವಾಗಿವೆಯೇ? ಧನವು ಸಫಲವಾಗಿದೆಯೇ? ಹೆಂಡತಿಯರು ಸಫಲವಾಗಿದ್ದಾರೆಯೇ? ಮತ್ತು ಕಲಿತಿದ್ದಿದು ಸಫಲವಾಗಿದೆಯೇ?”
02005100 ಯುಧಿಷ್ಠಿರ ಉವಾಚ।
02005100a ಕಥಂ ವೈ ಸಫಲಾ ವೇದಾಃ ಕಥಂ ವೈ ಸಫಲಂ ಧನಂ।
02005100c ಕಥಂ ವೈ ಸಫಲಾ ದಾರಾಃ ಕಥಂ ವೈ ಸಫಲಂ ಶ್ರುತಂ।।
ಯುಧಿಷ್ಠಿರನು ಹೇಳಿದನು: “ವೇದಗಳು ಹೇಗೆ ಸಫಲವಾಗುತ್ತವೆ? ಧನವು ಹೇಗೆ ಸಫಲವಾಗುತ್ತದೆ? ಪತ್ನಿಯರು ಹೇಗೆ ಸಫಲವಾಗುತ್ತಾರೆ? ಮತ್ತು ಕಲಿತಿದ್ದಿದು ಹೇಗೆ ಸಫಲವಾಗುತ್ತದೆ?”
02005101 ನಾರದ ಉವಾಚ।
02005101a ಅಗ್ನಿಹೋತ್ರಫಲಾ ವೇದಾ ದತ್ತಭುಕ್ತಫಲಂ ಧನಂ।
02005101c ರತಿಪುತ್ರಫಲಾ ದಾರಾಃ ಶೀಲವೃತ್ತಫಲಂ ಶ್ರುತಂ।।
ನಾರದನು ಹೇಳಿದನು: “ವೇದಗಳು ಅಗ್ನಿಹೋತ್ರದಲ್ಲಿ ಫಲವನ್ನು ನೀಡುತ್ತವೆ. ಧನವು ಭೋಗ ಮತ್ತು ದಾನಗಳಲ್ಲಿ ಸಫಲವಾಗುತ್ತದೆ. ಪತ್ನಿಯರು ರತಿಕ್ರೀಡೆಯಲ್ಲಿ ಮತ್ತು ಸಂತಾನದಲ್ಲಿ ಫಲವನ್ನು ನೀಡುತ್ತಾರೆ. ಮತ್ತು ಕಲಿತಿದ್ದಿದು ಶೀಲ ಮತ್ತು ನಡವಳಿಕೆಯಲ್ಲಿ ಸಫಲವಾಗುತ್ತದೆ.””
02005102 ವೈಶಂಪಾಯನ ಉವಾಚ।
02005102a ಏತದಾಖ್ಯಾಯ ಸ ಮುನಿರ್ನಾರದಃ ಸುಮಹಾತಪಾಃ।
02005102c ಪಪ್ರಚ್ಛಾನಂತರಮಿದಂ ಧರ್ಮಾತ್ಮಾನಂ ಯುಧಿಷ್ಠಿರಂ।।
ವೈಶಂಪಾಯನನು ಹೇಳಿದನು: “ಆ ಸುಮಹಾತಪ ನಾರದನು ಈ ರೀತಿ ಹೇಳಿದ ನಂತರ ಅರಿಂದಮ ಧರ್ಮಾತ್ಮ ಯುಧಿಷ್ಠಿರನನ್ನು ಕೇಳಿದನು:
02005103 ನಾರದ ಉವಾಚ।
02005103a ಕಚ್ಚಿದಭ್ಯಾಗತಾ ದೂರಾದ್ವಣಿಜೋ ಲಾಭಕಾರಣಾತ್।
02005103c ಯಥೋಕ್ತಮವಹಾರ್ಯಂತೇ ಶುಲ್ಕಂ ಶುಲ್ಕೋಪಜೀವಿಭಿಃ।।
ನಾರದನು ಹೇಳಿದನು: “ತೆರಿಗೆಯ ಅಧಿಕಾರಿಗಳು ದೂರದೇಶಗಳಿಂದ ಲಾಭಗಳಿಸಲೆಂದು ಬಂದಿರುವ ವರ್ತಕರಿಂದ ಯಥೋಕ್ತ ಶುಲ್ಕವನ್ನು ತೆಗೆದುಕೊಳ್ಳುತ್ತಾರೆ ತಾನೆ?
02005104a ಕಚ್ಚಿತ್ತೇ ಪುರುಷಾ ರಾಜನ್ಪುರೇ ರಾಷ್ಟ್ರೇ ಚ ಮಾನಿತಾಃ।
02005104c ಉಪಾನಯಂತಿ ಪಣ್ಯಾನಿ ಉಪಧಾಭಿರವಂಚಿತಾಃ।।
ರಾಜನ್! ತಮ್ಮ ದ್ರವ್ಯಗಳನ್ನು ತಂದ ಅವರನ್ನು ನಿನ್ನ ರಾಷ್ಟ್ರದ ನಗರಗಳಲ್ಲಿ ಮೋಸಮಾಡದೇ ವಂಚನೆ ಮಾಡದೇ ಗೌರವದಿಂದ ಕಾಣುತ್ತಾರೆ ತಾನೆ?
02005105a ಕಚ್ಚಿಚ್ಛೃಣೋಷಿ ವೃದ್ಧಾನಾಂ ಧರ್ಮಾರ್ಥಸಹಿತಾ ಗಿರಃ।
02005105c ನಿತ್ಯಮರ್ಥವಿದಾಂ ತಾತ ತಥಾ ಧರ್ಮಾನುದರ್ಶಿನಾಂ।।
ಮಗೂ! ಅರ್ಥವಿದ, ಧರ್ಮಾನುದರ್ಶಿಗಳಾದ ವೃದ್ಧರಿಂದ ನೀನು ನಿತ್ಯವೂ ಧರ್ಮಾರ್ಥಸಹಿತ ಮಾತುಗಳನ್ನು ಕೇಳುತ್ತಿರುತ್ತೀಯೆ ತಾನೆ?
02005106a ಕಚ್ಚಿತ್ತೇ ಕೃಷಿತಂತ್ರೇಷು ಗೋಷು ಪುಷ್ಪಫಲೇಷು ಚ।
02005106c ಧರ್ಮಾರ್ಥಂ ಚ ದ್ವಿಜಾತಿಭ್ಯೋ ದೀಯತೇ ಮಧುಸರ್ಪಿಷೀ।।
ಸುಗ್ಗಿಯ ಕಾಲದಲ್ಲಿ, ಗೋವುಗಳು ಕರುಹಾಕುವ ಕಾಲದಲ್ಲಿ, ಮರಗಳು ಹೂಬಿಡುವ ಮತ್ತು ಹಣ್ಣುಗಳನ್ನು ಪಡೆಯುವ ಕಾಲದಲ್ಲಿ ಧರ್ಮಾರ್ಥ ವೃದ್ಧಿಗೋಸ್ಕರ ದ್ವಿಜರಿಗೆ ಜೇನು ಮತ್ತು ತುಪ್ಪಗಳ ದಾನ ಮಾಡುತ್ತೀಯೆ ತಾನೆ?
02005107a ದ್ರವ್ಯೋಪಕರಣಂ ಕಚ್ಚಿತ್ಸರ್ವದಾ ಸರ್ವಶಿಲ್ಪಿನಾಂ।
02005107c ಚಾತುರ್ಮಾಸ್ಯಾವರಂ ಸಮ್ಯಮ್ನಿಯತಂ ಸಂಪ್ರಯಚ್ಛಸಿ।।
ನೀನು ಯಾವಾಗಲೂ ಎಲ್ಲ ಶಿಲ್ಪಿಗಳಿಗೂ ನಾಲ್ಕುತಿಂಗಳ ಮುಂಗಡ ದ್ರವ್ಯೋಪಕರಣಗಳನ್ನು ಕೊಡುತ್ತೀಯೆ ತಾನೆ?
02005108a ಕಚ್ಚಿತ್ಕೃತಂ ವಿಜಾನೀಷೇ ಕರ್ತಾರಂ ಚ ಪ್ರಶಂಸಸಿ।
02005108c ಸತಾಂ ಮಧ್ಯೇ ಮಹಾರಾಜ ಸತ್ಕರೋಷಿ ಚ ಪೂಜಯನ್।।
ಮಹಾರಾಜ! ಕಾರ್ಯ ಮತ್ತು ಕರ್ತಾರರನ್ನು ಗುರುತಿಸಿ, ಪ್ರಶಂಸಿಸಿ, ಸಾತ್ವಿಕರ ಮಧ್ಯೆ ಪೂಜಿಸಿ ಸತ್ಕರಿಸುತ್ತೀಯೆ ತಾನೆ?
02005109a ಕಚ್ಚಿತ್ಸೂತ್ರಾಣಿ ಸರ್ವಾಣಿ ಗೃಹ್ಣಾಸಿ ಭರತರ್ಷಭ।
02005109c ಹಸ್ತಿಸೂತ್ರಾಶ್ವಸೂತ್ರಾಣಿ ರಥಸೂತ್ರಾಣಿ ಚಾಭಿಭೋ।।
ಭರತರ್ಷಭ! ವಿಭೋ! ಸರ್ವ ಸೂತ್ರಗಳನ್ನು-ಹಸ್ತಿಸೂತ್ರ, ಅಶ್ವಸೂತ್ರ, ರಥ ಸೂತ್ರಗಳನ್ನು ಪಡೆದಿದ್ದೀಯೆ ತಾನೆ?
02005110a ಕಚ್ಚಿದಭ್ಯಸ್ಯತೇ ಶಶ್ವದ್ಗೃಹೇ ತೇ ಭರತರ್ಷಭ।
02005110c ಧನುರ್ವೇದಸ್ಯ ಸೂತ್ರಂ ಚ ಯಂತ್ರಸೂತ್ರಂ ಚ ನಾಗರಂ।।
ಭರತರ್ಷಭ! ನಿನ್ನ ಮನೆಯಲ್ಲಿ ಧನುರ್ವೇದ ಸೂತ್ರ, ನಗರ ನಿರ್ಮಾಣ ಯಂತ್ರ ಸೂತ್ರಗಳ ಅಧ್ಯಯನವು ಸದಾ ನಡೆಯುತ್ತದೆ ತಾನೆ?
02005111a ಕಚ್ಚಿದಸ್ತ್ರಾಣಿ ಸರ್ವಾಣಿ ಬ್ರಹ್ಮದಂಡಶ್ಚ ತೇಽನಘ।
02005111c ವಿಷಯೋಗಾಶ್ಚ ತೇ ಸರ್ವೇ ವಿದಿತಾಃ ಶತ್ರುನಾಶನಾಃ।।
ಅನಘ! ನಿನಗೆ ಶತ್ರುಗಳನ್ನು ನಾಶಪಡಿಸಬಲ್ಲ ಸರ್ವ ಅಸ್ತ್ರಗಳ, ಬ್ರಹ್ಮದಂಡದ ಮತ್ತು ವಿಷಯೋಗ ಪ್ರಯೋಗಗಳೆಲ್ಲವೂ ತಿಳಿದಿದೆ ತಾನೆ?
02005112a ಕಚ್ಚಿದಗ್ನಿಭಯಾಚ್ಚೈವ ಸರ್ಪವ್ಯಾಲಭಯಾತ್ತಥಾ।
02005112c ರೋಗರಕ್ಷೋಭಯಾಚ್ಚೈವ ರಾಷ್ಟ್ರಂ ಸ್ವಂ ಪರಿರಕ್ಷಸಿ।।
ನೀನು ನಿನ್ನ ರಾಷ್ಟ್ರವನ್ನು ಅಗ್ನಿಭಯ, ಸರ್ಪ ಭಯ, ವ್ಯಾಲಭಯ, ರೋಗಭಯ ಮತ್ತು ರಾಕ್ಷಸಭಯಗಳಿಂದ ರಕ್ಷಿಸುತ್ತಿದ್ದೀಯೆ ತಾನೆ?
02005113a ಕಚ್ಚಿದಂಧಾಂಶ್ಚ ಮೂಕಾಂಶ್ಚ ಪಂಗೂನ್ವ್ಯಂಗಾನಬಾಂಧವಾನ್।
02005113c ಪಿತೇವ ಪಾಸಿ ಧರ್ಮಜ್ಞ ತಥಾ ಪ್ರವ್ರಜಿತಾನಪಿ।।
ಧರ್ಮಜ್ಞ! ಅಂಧರನ್ನೂ, ಮೂಕರನ್ನೂ, ಕುಂಟರನ್ನೂ, ವಿಕಲಾಂಗರನ್ನೂ, ಅನಾಥರನ್ನೂ, ಪರಿವ್ರಾಜಕರನ್ನೂ ತಂದೆಯೋಪಾದಿಯಲ್ಲಿ ಪರಿರಕ್ಷಿಸುತ್ತಿರುವ ತಾನೆ?””
02005114 12ವೈಶಂಪಾಯನ ಉವಾಚ।
02005114a ಏತಾಃ ಕುರೂಣಾಂ ಋಷಭೋ ಮಹಾತ್ಮಾ। ಶ್ರುತ್ವಾ ಗಿರೋ ಬ್ರಾಹ್ಮಣಸತ್ತಮಸ್ಯ।
02005114c ಪ್ರಣಮ್ಯ ಪಾದಾವಭಿವಾದ್ಯ ಹೃಷ್ಟೋ। ರಾಜಾಬ್ರವೀನ್ನಾರದಂ ದೇವರೂಪಂ।।
ವೈಶಂಪಾಯನನು ಹೇಳಿದನು: “ಆ ಮಹಾತ್ಮ ಬ್ರಾಹ್ಮಣಸತ್ತಮನ ಮಾತುಗಳನ್ನು ಕೇಳಿ ಸಂತೋಷಗೊಂಡ ಕುರುವೃಷಭ ರಾಜನು ಆ ದೇವರೂಪಿ ನಾರದನ ಪಾದಗಳಿಗೆ ಅಭಿವಂದಿಸಿ ನಮಸ್ಕರಿಸಿ ಹೇಳಿದನು:
02005115a ಏವಂ ಕರಿಷ್ಯಾಮಿ ಯಥಾ ತ್ವಯೋಕ್ತಂ। ಪ್ರಜ್ಞಾ ಹಿ ಮೇ ಭೂಯ ಏವಾಭಿವೃದ್ಧಾ।
02005115c ಉಕ್ತ್ವಾ ತಥಾ ಚೈವ ಚಕಾರ ರಾಜಾ। ಲೇಭೇ ಮಹೀಂ ಸಾಗರಮೇಖಲಾಂ ಚ।।
“ನನ್ನ ಪ್ರಜ್ಞೆಯನ್ನು ಇನ್ನೂ ವೃದ್ಧಿಗೊಳಿಸಿದ ನೀನು ಹೇಳಿದ ಮಾತುಗಳಂತೆಯೇ ನಡೆದುಕೊಳ್ಳುತ್ತೇನೆ.” ಆ ರಾಜನು ಹಾಗೆ ಹೇಳಿದುದಲ್ಲದೇ ಅದರಂತೆಯೇ ಮಾಡಿ ಸಾಗರದಿಂದ ಆವೃತ ಮಹಿಯನ್ನು ಪಡೆದನು.
02005116 ನಾರದ ಉವಾಚ।
02005116a ಏವಂ ಯೋ ವರ್ತತೇ ರಾಜಾ ಚಾತುರ್ವರ್ಣ್ಯಸ್ಯ ರಕ್ಷಣೇ।
02005116c ಸ ವಿಹೃತ್ಯೇಹ ಸುಸುಖೀ ಶಕ್ರಸ್ಯೈತಿ ಸಲೋಕತಾಂ।।
ನಾರದನು ಹೇಳಿದನು: “ಈ ರೀತಿಯಲ್ಲಿ ಯಾವ ರಾಜನು ನಡೆದುಕೊಳ್ಳುತ್ತಾನೋ ಅವನು ಚಾತುರ್ವರ್ಣ್ಯದವರನ್ನು ರಕ್ಷಿಸಿ, ಈ ಭೂಮಿಯಲ್ಲಿ ಸುಖೀ ಜೀವನವನ್ನು ಪಡೆದು ಶಕ್ರನ ಲೋಕವನ್ನು ಹೊಂದುತ್ತಾನೆ.””
ಸಮಾಪ್ತಿ
ಶ್ರೀ ಮಹಾಭಾರತೇ ಸಭಾಪರ್ವಣಿ ಸಭಾಪರ್ವಣಿ ನಾರದಪ್ರಶ್ನಮುಖೇನ ರಾಜಧರ್ಮಾನುಶಾಸನೇ ಪಂಚಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸಭಾಪರ್ವದಲ್ಲಿ ಸಭಾಪರ್ವದಲ್ಲಿ ನಾರದನಿಂದ ಪ್ರಶ್ನೆಗಳ ಮೂಲಕ ರಾಜಧರ್ಮದ ಕುರಿತು ಉಪದೇಶ ಎನ್ನುವ ಐದನೆಯ ಅಧ್ಯಾಯವು.
-
ಪ್ರಾತಃಕಾಲದಲ್ಲಿ ಧರ್ಮಸಾಧನೆಯನ್ನೂ ಮದ್ಯಾಹ್ನದಲ್ಲಿ ಅರ್ಥಸಾಧನೆಯನ್ನೂ, ರಾತ್ರಿಯಲ್ಲಿ ಕಾಮಸಾಧನೆಯನ್ನೂ ಮಾಡಬೇಕೆಂದು ಹೇಳುತ್ತಾರೆ. ↩︎
-
ವಕ್ತಾ ಪ್ರಗಲ್ಭೋ ಮೇಧಾವೀ ಸ್ಮೃತಿಮಾನ್ ನಯವಿತ್ಕವಿಃ ಎಂದು ಆರು ರಾಜಗುಣಗಳನ್ನು ವಿವರಿಸುತ್ತಾರೆ. ವಕ್ತಾ -ಬೇರೆ ಬೇರೆ ಜನರೊಂದಿಗೆ, ಅಮಾತ್ಯರೊಡನೆ, ಚಾರರೊಡನೆ, ಗೂಢಚಾರರೊಡನೆ, ಹೇಗೆ ಮಾತನಾಡಬೇಕು ಎನ್ನವ ಸರಿಯಾದ ತಿಳುವಳಿಕೆಯುಳ್ಳವನು. ಪ್ರಗಲ್ಭಃ -ಶತ್ರುಗಳ ವಿನಾಶದ ವಿಷಯದಲ್ಲಿ ಕ್ಷಿಪ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವವನು. ಮೇಧಾವೀ -ತರ್ಕಬುದ್ಧಿಯುಳ್ಳವನು, ವಿವೇಕಿ. ಸ್ಮೃತಿಮಾನ್ -ಹಿಂದೇನಾಯಿತು ಎನ್ನುವುದನ್ನು ವಿಮರ್ಶಿಸಿ ಮುಂದೇನಾಗಬೇಕು, ಆಗಬಹುದು ಎನ್ನುವ ಪರಾಮರ್ಶೆಯುಳ್ಳವನು. ನಯವಿತ್ -ನೀತಿಶಾಸ್ತ್ರವನ್ನು ಚೆನ್ನಾಗಿ ತಿಳಿದಿರುವವನು. ಕವಿಃ -ಶುಕ್ರಾಚಾರ್ಯನಂತೆ ಪಾಂಡಿತ್ಯವುಳ್ಳವನು. ↩︎
-
ಸಾಮ, ದಾನ, ಭೇದ, ದಂಡ, ಮಂತ್ರ, ಔಷಧ, ಮತ್ತು ಇಂದ್ರಜಾಲ ಇವು ಶತ್ರುಗಳನ್ನು ಗೆಲ್ಲಲು ಅನುಸರಿಸಬೇಕಾದ ಏಳು ಉಪಾಯಗಳು. ↩︎
-
ಕೃಷಿ, ವಾಣಿಜ್ಯ, ಮಾರ್ಗನಿರ್ಮಾಣ, ಸೇತುನಿರ್ಮಾಣ, ಕೋಟೆಗಳ ನಿರ್ಮಾಣ, ಆಹಾರಧಾನ್ಯಗಳ ಸಂರಕ್ಷಣೆ, ಮತ್ತು ಖನಿಜಗಳನ್ನು ತೆಗೆಯುವ ಗಣಿಗಳ ನಿರ್ಮಾಣ ಇವೇ ರಾಜರು ಮಾಡಬೇಕಾದ ಎಂಟು ಕಾರ್ಯಯೋಜನೆಗಳು. ↩︎
-
ಕಶ್ಚಿನ್ಪ್ರಕೃತಯಃ ಸಪ್ತ ಲುಪ್ತಾ ನ ಭರತರ್ಷಭ ಎನ್ನುವ ಶ್ಲೋಕವೂ ಇದೆ. ಸಪ್ತ್ರಪ್ರಕೃತಿಗಳನ್ನು ಸಪ್ತ ರಾಜ್ಯಾಂಗಗಳು ಎಂದೂ ಪರಿಗಣಿಸುತ್ತಾರೆ: ಸ್ವಾಮೀ, ಸುಹೃತ್, ಕೋಶ, ರಾಷ್ಟ್ರ, ದುರ್ಗ, ಬಲ. ಅಧಿಕಾರಿಗಳ ರೂಪದಲ್ಲಿ ಏಳು ಪ್ರಕೃತಿಗಳು ದುರ್ಗಾಧ್ಯಕ್ಷ, ಬಲಾಧ್ಯಕ್ಷ, ಧರ್ಮಾಧ್ಯಕ್ಷ, ಚಮೂಪತಿ, ಪುರೋಹಿತ, ವೈದ್ಯ, ಮತ್ತು ಜ್ಯೌತಿಷಿಕ. ↩︎
-
ಮಂತ್ರಿಗಳಲ್ಲಿರಬೇಕಾದ ಗುಣಗಳು: ಶುದ್ದಾಚಾರವುಳ್ಳವರು, ಕುಲೀನರು, ಅಸಾಧಾರಣ ಮನೋನೈರ್ಮಲ್ಯವಿರವವರು, ಆತ್ಮಸಮಾನರು, ವೃದ್ಧರು, ರಾಜನೀತಿಯಲ್ಲಿ ಬೋಧನೆಮಾಡಲು ಸಮರ್ಥರಾದವರು, ಮತ್ತು ರಾಜನಲ್ಲಿಯೇ ಅನುರಕ್ತರಾಗಿರುವವರು. ↩︎
-
ಐದು ಅಧಿಕಾರಿಗಳು ಪ್ರಶಾಸ್ತಾ (ಗ್ರಾಮರಕ್ಷಕ), ಸಮಾಹರ್ತಾ (ವ್ಯವಸಾಯ ವಾಣಿಜ್ಯಗಳ ಮೇಲ್ವಿಚಾರಣೆ), ಸಂವಿಧಾತಾ (ನಿಯಮಗಳನ್ನು ಜಾರಿಗೊಳಿಸುವ), ಲೇಖಕ (ಲೆಕ್ಕಪತ್ರಗಳನ್ನು ನೋಡಿಕೊಳ್ಳುವವನು) ಮತ್ತು ಸಾಕ್ಷಿ. ↩︎
-
ಗ್ರಾಮಗಳಲ್ಲಿಯೂ ನಗರಗಳಲ್ಲಿರುವ ಸೌಕರ್ಯಗಳಿವೆಯೇ? ಹಳ್ಳಿಗಳು ಗ್ರಾಮಗಳಾಗಿಯೂ, ಗ್ರಾಮಗಳು ಪುರಗಳಾಗಿಯೂ, ಮತ್ತು ಪುರಗಳು ನಗರಗಳಾಗಿಯೂ ಅಭಿವೃದ್ಧಿ ಹೊಂದುತ್ತಿವೆಯೇ? ↩︎
-
ಿದಾನ, ಪೂರ್ವಲಿಂಗ, ರೂಪ, ಅಪಶಯ, ಸಂಪ್ರಾಪ್ತಿ, ಔಷಧ, ರೋಗ, ಪರಿಚಾರಕ - ಇವು ಅಷ್ಟಾಂಗಗಳು. ನಾಡೀ, ಮಲ, ಮೂತ್ರ, ಜಿಹ್ವಾ, ನೇತ್ರ, ರೂಪ, ಶಬ್ಧ, ಸ್ಪರ್ಷ ಇವೂ ಕೂಡ ಅಷ್ಟಾಂಗಗಳು. ↩︎
-
ವ್ಯಾಜ್ಯವನ್ನು ತೆಗೆದುಕೊಂಡು ಬಂದಿರುವ ವಾದಿ-ಪ್ರತಿವಾದಿಗಳು ↩︎
-
ಭಾರತದರ್ಶನ ಸಂಪುಟದಲ್ಲಿ ಇನ್ನೊಂದು ಶ್ಲೋಕವಿದೆ: ಕಶ್ಚಿಚ್ಛೋಕೋ ನ ಮನುರ್ವಾ ತ್ವಯಾ ಪ್ರೋತ್ಸಾದ್ಯತೇಽನಘ । ಅಪಿ ಮಂಗಲಹಸ್ತಶ್ಚ ಜನಃ ಪಾರ್ಶ್ವೇ ನು ತಿಷ್ಠತಿ ।। ಅರ್ಥಾತ್ - ಅನಘ! ನಿಷ್ಕಾರಣವಾಏ ನೀನು ಯಾರಿಗೂ ದುಃಖ-ಕೋಪಗಳನ್ನು ಉಂಟುಮಾಡುತ್ತಿಲ್ಲ ತಾನೆ? ಮತ್ತು ಮಂಗಲ ವಸ್ತುಗಳನ್ನು ಹಿಡಿದ ಜನರು ನಿನ್ನ ಪಕ್ಕದಲ್ಲಿ ನಿಂತಿರುತ್ತಾರೆ ತಾನೆ? ↩︎
-
ಇದಕ್ಕೂ ಮೊದಲು ಇನ್ನೂ ಒಂದು ಶ್ಲೋಕವು ಭಾರತದರ್ಶನ ಸಂಪುಟದಲ್ಲಿದೆ - ಷಡನರ್ಥಾ ಮಹಾರಾಜ ಕಚ್ಚಿತ್ತೇ ಪೃಷ್ಠತಃ ಕೃತಾಃ । ನಿದ್ರಾಲಸ್ಯಂ ಭಯಂ ಕ್ರೋಧೋಽಮಾರ್ದವಂ ದೀರ್ಘಸೂತ್ರತಾ ।। ಅರ್ಥಾತ್ - ಮಹಾರಾಜ! ಅತಿನಿದ್ರೆ, ಸೋಮಾರಿತನ, ಭಯ, ಕೋಪ, ಕಠೋರತೆ, ಮತ್ತು ಕಾರ್ಯಗಳನ್ನು ನಿಧಾನವಾಗಿ ಮಾಡುವುದು - ಈ ಅನರ್ಥಕಾರಿ ಆರು ದೋಷಗಳನ್ನು ದೂರವಿಟ್ಟಿರುವೆ ತಾನೆ? ↩︎