ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸಭಾ ಪರ್ವ
ಸಭಾ ಪರ್ವ
ಅಧ್ಯಾಯ 1
ಸಾರ
ಜೀವವುಳಿಸಿದ್ದಕ್ಕೆ ಏನುಮಾಡಬೇಕೆಂದು ಮಯನು ಕೇಳಲು, ಕೃಷ್ಣನು ಪಾಂಡವರಿಗೆ ಒಂದು ಅದ್ಭುತ ಸಭೆಯನ್ನು ನಿರ್ಮಿಸಲು ಹೇಳುವುದು (1-12). ಸಭೆಗೆ ಭೂಮಿಯನ್ನು ಅಳತೆಮಾಡಿದುದು (13-19).
02001001 ವೈಶಂಪಾಯನ ಉವಾಚ।
02001001a ತತೋಽಬ್ರವೀನ್ಮಯಃ ಪಾರ್ಥಂ ವಾಸುದೇವಸ್ಯ ಸನ್ನಿಧೌ।
02001001c ಪ್ರಾಂಜಲಿಃ ಶ್ಲಕ್ಷ್ಣಯಾ ವಾಚಾ ಪೂಜಯಿತ್ವಾ ಪುನಃ ಪುನಃ।।
ವೈಶಂಪಾಯನನು ಹೇಳಿದನು: “ನಂತರ ಮಯ1ನು ಅಂಜಲಿಬದ್ಧನಾಗಿ ಶ್ಲಾಘನೀಯ ಮಾತುಗಳಿಂದ ಪುನಃ ಪುನಃ ಪೂಜಿಸುತ್ತಾ ವಾಸುದೇವನ ಸನ್ನಿಧಿಯಲ್ಲಿ ಪಾರ್ಥನನ್ನು ಉದ್ದೇಶಿಸಿ ಹೇಳಿದನು:
02001002a ಅಸ್ಮಾಚ್ಚ ಕೃಷ್ಣಾತ್ಸಂಕ್ರುದ್ಧಾತ್ಪಾವಕಾಶ್ಚ ದಿಧಕ್ಷತಃ।
02001002c ತ್ವಯಾ ತ್ರಾತೋಽಸ್ಮಿ ಕೌಂತೇಯ ಬ್ರೂಹಿ ಕಿಂ ಕರವಾಣಿ ತೇ।।
“ಕುಂತಿಪುತ್ರ! ಸಂಕೃದ್ಧ ಕೃಷ್ಣ ಮತ್ತು ಧಗಿಸಲು ಸಿದ್ಧ ಪಾವಕನಿಂದ ನನ್ನನ್ನು ರಕ್ಷಿಸಿದ್ದೀಯೆ. ನಿನಗಾಗಿ ನಾನು ಏನು ಮಾಡಲಿ? ಹೇಳು.”
02001003 ಅರ್ಜುನ ಉವಾಚ।
02001003a ಕೃತಮೇವ ತ್ವಯಾ ಸರ್ವಂ ಸ್ವಸ್ತಿ ಗಚ್ಛ ಮಹಾಸುರ।
02001003c ಪ್ರೀತಿಮಾನ್ಭವ ಮೇ ನಿತ್ಯಂ ಪ್ರೀತಿಮಂತೋ ವಯಂ ಚ ತೇ।।
ಅರ್ಜುನನು ಹೇಳಿದನು: “ನೀನು ಸರ್ವವನ್ನೂ ಮಾಡಿದ್ದೀಯೆ2! ಮಂಗಳವಾಗಲಿ! ಇನ್ನು ನೀನು ಹೋಗಬಹುದು. ನಮ್ಮ ಮೇಲೆ ನಿನ್ನ ಪ್ರೀತಿ ಯಾವಾಗಲೂ ಇರಲಿ. ನಿನ್ನ ಮೇಲೆಯೂ ನಮ್ಮ ಪ್ರೀತಿ ಸದಾ ಇರುತ್ತದೆ.”
02001004 ಮಯ ಉವಾಚ।
02001004a ಯುಕ್ತಮೇತತ್ತ್ವಯಿ ವಿಭೋ ಯಥಾತ್ಥ ಪುರುಷರ್ಷಭ।
02001004c ಪ್ರೀತಿಪೂರ್ವಮಹಂ ಕಿಂ ಚಿತ್ಕರ್ತುಮಿಚ್ಛಾಮಿ ಭಾರತ।।
ಮಯನು ಹೇಳಿದನು: “ಸ್ವಾಮೀ! ಭಾರತ! ಪುರುಷರ್ಷಭನಂತೆ ಮಾತನಾಡಿದ್ದೀಯೆ. ಆದರೂ, ಪ್ರೀತಿಪೂರ್ವಕವಾಗಿ ನಿನಗೋಸ್ಕರ ಏನನ್ನಾದರೂ ಮಾಡಲು ಇಚ್ಛಿಸುತ್ತೇನೆ.
02001005a ಅಹಂ ಹಿ ವಿಶ್ವಕರ್ಮಾ ವೈ ದಾನವಾನಾಂ ಮಹಾಕವಿಃ।
02001005c ಸೋಽಹಂ ವೈ ತ್ವತ್ಕೃತೇ ಕಿಂ ಚಿತ್ಕರ್ತುಮಿಚ್ಛಾಮಿ ಪಾಂಡವ।।
ಪಾಂಡವ! ನಾನೊಬ್ಬ ಮಹಾಕವಿ. ದಾನವರ ವಿಶ್ವಕರ್ಮನಿದ್ದಂತೆ3. ಆದ್ದರಿಂದ ನಿನಗೋಸ್ಕರ ಏನನ್ನಾದರೂ ಮಾಡಲು ಇಚ್ಛಿಸುತ್ತೇನೆ.”
02001006 ಅರ್ಜುನ ಉವಾಚ।
02001006a ಪ್ರಾಣಕೃಚ್ಛ್ರಾದ್ವಿಮುಕ್ತಂ ತ್ವಮಾತ್ಮಾನಂ ಮನ್ಯಸೇ ಮಯಾ।
02001006c ಏವಂ ಗತೇ ನ ಶಕ್ಷ್ಯಾಮಿ ಕಿಂ ಚಿತ್ಕಾರಯಿತುಂ ತ್ವಯಾ।।
ಅರ್ಜುನನು ಹೇಳಿದನು: “ನಾನು ನಿನ್ನನ್ನು ಪ್ರಾಣಸಂಕಟದಿಂದ ವಿಮುಕ್ತಗೊಳಿಸಿದೆ ಎಂದು ತಿಳಿದಿರುವೆ. ಹಾಗಿದ್ದರೂ ನಾನು ನಿನ್ನಿಂದ ಏನನ್ನೂ ಮಾಡಿಸಿಕೊಳ್ಳಲು ಶಕ್ಯನಿಲ್ಲ.
02001007a ನ ಚಾಪಿ ತವ ಸಂಕಲ್ಪಂ ಮೋಘಮಿಚ್ಛಾಮಿ ದಾನವ।
02001007c ಕೃಷ್ಣಸ್ಯ ಕ್ರಿಯತಾಂ ಕಿಂ ಚಿತ್ತಥಾ ಪ್ರತಿಕೃತಂ ಮಯಿ।।
ದಾನವ! ಹಾಗೆಂದು ನಿನ್ನ ಇಚ್ಛೆಯನ್ನು ಭಂಗಗೊಳಿಸಲೂ ನನಗೆ ಇಷ್ಟವಿಲ್ಲ. ಕೃಷ್ಣನಿಗೋಸ್ಕರ ಏನನ್ನಾದರೂ ಮಾಡು. ಅದೇ ನನಗೆ ಪ್ರತೀಕಾರ ಮಾಡಿದಂತಾಗುತ್ತದೆ.””
02001008 ವೈಶಂಪಾಯನ ಉವಾಚ।
02001008a ಚೋದಿತೋ ವಾಸುದೇವಸ್ತು ಮಯೇನ ಭರತರ್ಷಭ।
02001008c ಮುಹೂರ್ತಮಿವ ಸಂದಧ್ಯೌ ಕಿಮಯಂ ಚೋದ್ಯತಾಮಿತಿ।।
ವೈಶಂಪಾಯನನು ಹೇಳಿದನು: “ಭರತರ್ಷಭ! ಮಯನು ವಾಸುದೇವನನ್ನು ಒತ್ತಾಯಿಸಲು ಅವನು ಏನನ್ನು ಕೇಳಬೇಕೆಂದು ಮುಹೂರ್ತಕಾಲ ಯೋಚಿಸಿದನು.
02001009a ಚೋದಯಾಮಾಸ ತಂ ಕೃಷ್ಣಃ ಸಭಾ ವೈ ಕ್ರಿಯತಾಮಿತಿ।
02001009c ಧರ್ಮರಾಜಸ್ಯ ದೈತೇಯ ಯಾದೃಶೀಮಿಹ ಮನ್ಯಸೇ।।
ನಂತರ ಕೃಷ್ಣನು ಅವನಿಗೆ ಪ್ರಚೋದಿಸಿದನು: “ದೈತ್ಯ! ಧರ್ಮರಾಜನಿಗೆ ತಕ್ಕದು ಎಂದು ನಿನಗನ್ನಿಸುವ ಒಂದು ಸಭಾಭವನವನ್ನು ನಿರ್ಮಿಸು!
02001010a ಯಾಂ ಕೃತಾಂ ನಾನುಕುರ್ಯುಸ್ತೇ ಮಾನವಾಃ ಪ್ರೇಕ್ಷ್ಯ ವಿಸ್ಮಿತಾಃ।
02001010c ಮನುಷ್ಯಲೋಕೇ ಕೃತ್ಸ್ನೇಽಸ್ಮಿಂಸ್ತಾದೃಶೀಂ ಕುರು ವೈ ಸಭಾಂ।।
ನೋಡಿ ವಿಸ್ಮಿತರಾದ ಈ ಮನುಷ್ಯಲೋಕದ ಯಾವ ಮಾನವರಿಂದಲೂ ಅದರಂಥಹುದನ್ನು ಕಟ್ಟಿಸಲು ಅಸಾಧ್ಯವಾಗುವ ಅದ್ಭುತ ಸಭಾಭವನವನ್ನು ನಿರ್ಮಿಸು.
02001011a ಯತ್ರ ದಿವ್ಯಾನಭಿಪ್ರಾಯಾನ್ಪಶ್ಯೇಮ ವಿಹಿತಾಂಸ್ತ್ವಯಾ।
02001011c ಆಸುರಾನ್ಮಾನುಷಾಂಶ್ಚೈವ ತಾಂ ಸಭಾಂ ಕುರು ವೈ ಮಯ।।
ಮಯ! ದೇವತೆಗಳ, ಅಸುರರ ಮತ್ತು ಮನುಷ್ಯರ ವಿನ್ಯಾಸಗಳು ಕಂಡುಬರುವಂತಹ ಒಂದು ಸಭಾಭವನನ್ನು4 ನಿರ್ಮಾಣಮಾಡು!”
02001012a ಪ್ರತಿಗೃಹ್ಯ ತು ತದ್ವಾಕ್ಯಂ ಸಂಪ್ರಹೃಷ್ಟೋ ಮಯಸ್ತದಾ।
02001012c ವಿಮಾನಪ್ರತಿಮಾಂ ಚಕ್ರೇ ಪಾಂಡವಸ್ಯ ಸಭಾಂ ಮುದಾ।।
ಈ ಮಾತನ್ನು ಕೇಳಿದ ಮಯನು ಸಂತುಷ್ಟನಾಗಿ, ದೇವತೆಗಳ ವಿಮಾನದಂತಿರುವ ಸಭಾಭವನವನ್ನು ಪಾಂಡವರಿಗಾಗಿ ನಿರ್ಮಿಸಲು ಸಂತೋಷದಿಂದ ಒಪ್ಪಿಕೊಂಡನು.
02001013a ತತಃ ಕೃಷ್ಣಶ್ಚ ಪಾರ್ಥಶ್ಚ ಧರ್ಮರಾಜೇ ಯುಧಿಷ್ಠಿರೇ।
02001013c ಸರ್ವಮೇತದ್ಯಥಾವೇದ್ಯ ದರ್ಶಯಾಮಾಸತುರ್ಮಯಂ।।
ಅನಂತರ, ಕೃಷ್ಣ ಮತ್ತು ಪಾರ್ಥರು ನಡೆದುದೆಲ್ಲವನ್ನೂ ಯಥಾವತ್ತಾಗಿ ಧರ್ಮರಾಜ ಯುಧಿಷ್ಠಿರನಿಗೆ ವರದಿ ಮಾಡಿದರು ಮತ್ತು ಮಯನಿಗೆ ಭೆಟ್ಟಿ ಮಾಡಿಸಿದರು.
02001014a ತಸ್ಮೈ ಯುಧಿಷ್ಠಿರಃ ಪೂಜಾಂ ಯಥಾರ್ಹಮಕರೋತ್ತದಾ।
02001014c ಸ ತು ತಾಂ ಪ್ರತಿಜಗ್ರಾಹ ಮಯಃ ಸತ್ಕೃತ್ಯ ಸತ್ಕೃತಃ।।
ಯುಧಿಷ್ಠಿರನು ಅವನಿಗೆ ಯಥಾರ್ಹ ಪೂಜಿಸಿದನು ಮತ್ತು ಮಯನೂ ಎಲ್ಲ ಸತ್ಕಾರಗಳನ್ನೂ ಸತ್ಕೃತನಾಗಿ ಸ್ವೀಕರಿಸಿದನು.
02001015a ಸ ಪೂರ್ವದೇವಚರಿತಂ ತತ್ರ ತತ್ರ ವಿಶಾಂ ಪತೇ।
02001015c ಕಥಯಾಮಾಸ ದೈತೇಯಃ ಪಾಂಡುಪುತ್ರೇಷು ಭಾರತ।।
ಭಾರತ! ವಿಶಾಂಪತೇ! ನಂತರ ಆ ದೈತ್ಯನು ಪಾಂಡುಪುತ್ರರಿಗೆ ಪೂರ್ವಕಾಲದಲ್ಲಿ ಅಲ್ಲಲ್ಲಿ ನಡೆದ ದೇವಚರಿತ್ರೆಯನ್ನು ತಿಳಿಸಿದನು.
02001016a ಸ ಕಾಲಂ ಕಂ ಚಿದಾಶ್ವಸ್ಯ ವಿಶ್ವಕರ್ಮಾ ಪ್ರಚಿಂತ್ಯ ಚ।
02001016c ಸಭಾಂ ಪ್ರಚಕ್ರಮೇ ಕರ್ತುಂ ಪಾಂಡವಾನಾಂ ಮಹಾತ್ಮನಾಂ।।
ಸ್ವಲ್ಪ ಕಾಲ ವಿಶ್ರಾಂತಿ ಪಡೆದ ಆ ವಿಶ್ವಕರ್ಮನು ಮಹಾತ್ಮ ಪಾಂಡವರಿಗೋಸ್ಕರ ಸಭಾಭವನದ ಯೋಜನೆಯನ್ನು ತಯಾರಿಸಿ ಕಟ್ಟಲು ಪ್ರಾರಂಭಿಸಿದನು.
02001017a ಅಭಿಪ್ರಾಯೇಣ ಪಾರ್ಥಾನಾಂ ಕೃಷ್ಣಸ್ಯ ಚ ಮಹಾತ್ಮನಃ।
02001017c ಪುಣ್ಯೇಽಹನಿ ಮಹಾತೇಜಾಃ ಕೃತಕೌತುಕಮಂಗಲಃ।।
02001018a ತರ್ಪಯಿತ್ವಾ ದ್ವಿಜಶ್ರೇಷ್ಠಾನ್ಪಾಯಸೇನ ಸಹಸ್ರಶಃ।
02001018c ಧನಂ ಬಹುವಿಧಂ ದತ್ತ್ವಾ ತೇಭ್ಯ ಏವ ಚ ವೀರ್ಯವಾನ್।।
02001019a ಸರ್ವಋತುಗುಣಸಂಪನ್ನಾಂ ದಿವ್ಯರೂಪಾಂ ಮನೋರಮಾಂ।
02001019c ದಶಕಿಷ್ಕುಸಹಸ್ರಾಂ ತಾಂ ಮಾಪಯಾಮಾಸ ಸರ್ವತಃ।।
ಪಾರ್ಥರ ಮತ್ತು ಮಹಾತ್ಮ ಕೃಷ್ಣನ ಅಭಿಪ್ರಾಯದಂತೆ ಆ ಮಹಾತೇಜಸ್ವಿ, ಕೃತಕೌತಕಿ, ಮಂಗಲಕರ, ವೀರ್ಯವಂತ ಅಸುರನು ಪುಣ್ಯಕಾಲದಲ್ಲಿ ಸಾವಿರಾರು ದ್ವಿಜಶ್ರೇಷ್ಠರಿಗೆ ಪಾಯಸ ಮತ್ತು ಬಹುವಿಧ ಧನವನ್ನಿತ್ತು ತೃಪ್ತಿಪಡಿಸಿ ಸರ್ವಋತುಗುಣಸಂಪನ್ನ, ದಿವ್ಯರೂಪಿ ಹತ್ತು ಸಾವಿರ ಕಿಷ್ಕು ಮನೋಹರ ಭೂಮಿಯನ್ನು ಅಳತೆಮಾಡಿದನು5.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಸಭಾಪರ್ವಣಿ ಸಭಾಸ್ಥಾನನಿರ್ಣಯೇ ಪಥಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದ ಸಭಾಪರ್ವದಲ್ಲಿ ಸಭಾಪರ್ವದಲ್ಲಿ ಸಭಾಸ್ಥಾನನಿರ್ಣಯವೆನ್ನುವ ಮೊದಲನೆಯ ಅಧ್ಯಾಯವು.
-
ಮಯನು ಈಗಿನ ಇರಾನ್ ಅಥವಾ ಮಧ್ಯಪೂರ್ವ ಏಷಿಯಾ ಪ್ರದೇಶದ ಶಿಲ್ಪಿಯೆಂದು ವಾನ್ ಬ್ಯೂಟಿನೆನ್ ನ ವಿಚಾರ. ↩︎
-
ಅರ್ಜುನನಿಗಾಗಿ ಮಯನು ಮಾಡಿದ್ದುದರ ಕುರಿತು ಇದೂವರೆಗೆ ಉಲ್ಲೇಖವಾಗಿಲ್ಲ. ↩︎
-
ವಿಶ್ವಕರ್ಮನು ದೇವತೆಗಳ ಶಿಲ್ಪಿ. ಹಾಗೆ ಮಯನು ದಾನವರ ಶಿಲ್ಪಿ ಎಂದರ್ಥ. ದಕ್ಷಿಣಾತ್ಯ ಸಂಪುಟದಲ್ಲಿ ಮಯನ ಮಾತಿನಲ್ಲಿಯೇ ಅವನು ಅವನು ದಾನವರಿಗಾಗಿ ಮಾಡಿಕೊಟ್ಟ ಕೆಲಸಗಳ ವರ್ಣನೆಯು ಈ ನಾಲ್ಕು ಶ್ಲೋಕಗಳಲ್ಲಿವೆ: ದಾನವಾನಾಂ ಪುರಾ ಪಾರ್ಥ ಪ್ರಾಸಾದಾ ಹಿ ಮಯಾ ಕೃತಾಃ। ರಮ್ಯಾಣಿ ಸುಖಗರ್ಭಾಣಿ ಭೋಗಾಢ್ಯಾನಿ ಸಹಸ್ರಶಃ।। ಉದ್ಯಾನಾನಿ ಚ ರಮ್ಯಾಣಿ ರಸಾಂಸಿ ವಿವಿಧಾನಿ ಚ। ವಿಚಿತ್ರಾಣಿ ಚ ಶಸ್ತ್ರಾಣಿ ರಥಾಃ ಕಾಮಗಮಾಸ್ತಥಾ।। ನಗರಾಣಿ ವಿಶಾಲಾನಿ ಸಾಟ್ಟಪ್ರಾಕಾರತೋರಣೈಃ। ವಾಹನಾನಿ ಚ ಮುಖ್ಯಾನಿ ವಿಚಿತ್ರಾಣಿ ಸಹಸ್ರಶಃ।। ಬಿಲಾನಿ ರಮಣೀಯಾನಿ ಸುಖಯುಕ್ತಾನಿ ವೈ ಭೃಷಂ। ಏತತ್ ಕೃತಂ ಮಯಾ ಸರ್ವಂ ತಸ್ಮಾದಿಚ್ಛಾಮಿ ಫಾಲ್ಗುನ।। ↩︎
-
ಶ್ರೀಕೃಷ್ಣನು ಯೋಚಿಸಿ ಸೂಚಿಸಿದ ಈ ಸಭಾಭವನವೇ ಮುಂದೆ ದುರ್ಯೋಧನನಿಗಾದ ಅಪಮಾನ-ಅಸೂಯೆಗಳು, ಪಾಂಡವ-ಕೌರವರೊಡನೆ ದ್ಯೂತ, ಮತ್ತು ಮಹಾಭಾರತ ಯುದ್ಧದಲ್ಲಾದ ಸರ್ವ ಕ್ಷತ್ರಿಯರ ನಾಶ ಇವೆಲ್ಲವಕ್ಕೆ ಕಾರಣವಾಯಿತು. ↩︎
-
ಭೂಮಿಯ ಅಳತೆಯ ಪ್ರಮಾಣ? ಒಂದು ಸಾವಿರ ಮೊಳ ಉದ್ದ ಮತ್ತು ಒಂದು ಸಾವಿರ ಮೊಳ ಅಗಲ? ↩︎