225 ಶಾಂಙೃಕೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಖಾಂಡವದಾಹ ಪರ್ವ

ಅಧ್ಯಾಯ 225

ಸಾರ

ಮಂದಪಾಲನು ಮಕ್ಕಳನ್ನು, ಮಕ್ಕಳ ತಾಯಿಯನ್ನೂ ಮತ್ತು ಪತ್ನಿಯನ್ನೂ ಕರೆದುಕೊಂಡು ಬೇರೆ ಪ್ರದೇಶಕ್ಕೆ ಹೋದುದು (1-4). ಇಂದ್ರನು ಕೃಷ್ಣಾರ್ಜುನರಿಗೆ ವರವನ್ನಿತ್ತುದುದು (5-14). ಪಾವಕನು ಕೃಷ್ಣಾರ್ಜುನರಿಂದ ಬೀಳ್ಕೊಂಡಿದುದು (15-19).

01225001 ಮಂದಪಾಲ ಉವಾಚ।
01225001a ಯುಷ್ಮಾಕಂ ಪರಿರಕ್ಷಾರ್ಥಂ ವಿಜ್ಞಪ್ತೋ ಜ್ವಲನೋ ಮಯಾ।
01225001c ಅಗ್ನಿನಾ ಚ ತಥೇತ್ಯೇವಂ ಪೂರ್ವಮೇವ ಪ್ರತಿಶ್ರುತಂ।।

ಮಂದಪಾಲನು ಹೇಳಿದನು: “ನಿಮ್ಮನ್ನು ಪರಿರಕ್ಷಿಸಲು ನಾನು ಅಗ್ನಿಯಲ್ಲಿ ವಿಜ್ಞಾಪಿಸಿದ್ದೆ. ಹಾಗೆಯೇ ಆಗಲೆಂದು ಈ ಹಿಂದೆಯೇ ಅಗ್ನಿಯು ಉತ್ತರಿಸಿದ್ದನು.

01225002a ಅಗ್ನೇರ್ವಚನಮಾಜ್ಞಾಯ ಮಾತುರ್ಧರ್ಮಜ್ಞತಾಂ ಚ ವಃ।
01225002c ಯುಷ್ಮಾಕಂ ಚ ಪರಂ ವೀರ್ಯಂ ನಾಹಂ ಪೂರ್ವಮಿಹಾಗತಃ।।

ಅಗ್ನಿಯ ವಚನವನ್ನು ನೆನಪಿನಲ್ಲಿಟ್ಟುಕೊಂಡು, ನಿಮ್ಮ ತಾಯಿಯ ಧರ್ಮವೃತ್ತಿಯನ್ನು ತಿಳಿದು ಮತ್ತು ನಿಮ್ಮದೇ ಪರಮ ವೀರ್ಯವನ್ನು ತಿಳಿದು ನಾನು ಇಲ್ಲಿಗೆ ಈ ಮೊದಲೇ ಬರಲಿಲ್ಲ.

01225003a ನ ಸಂತಾಪೋ ಹಿ ವಃ ಕಾರ್ಯಃ ಪುತ್ರಕಾ ಮರಣಂ ಪ್ರತಿ।
01225003c ಋಷೀನ್ವೇದ ಹುತಾಶೋಽಪಿ ಬ್ರಹ್ಮ ತದ್ವಿದಿತಂ ಚ ವಃ।।

ಪುತ್ರರೇ! ಮರಣದ ಕುರಿತು ನೀವು ಸಂತಾಪ ಪಡಬೇಕಾಗಿಲ್ಲ. ನೀವು ವೇದ ಮತ್ತು ಬ್ರಹ್ಮವನ್ನು ತಿಳಿದಿರುವ ಋಷಿಗಳು ಎಂದು ಅಗ್ನಿಯೂ ತಿಳಿದಿದ್ದಾನೆ.””

01225004 ವೈಶಂಪಾಯನ ಉವಾಚ।
01225004a ಏವಮಾಶ್ವಾಸ್ಯ ಪುತ್ರಾನ್ಸ ಭಾರ್ಯಾಂ ಚಾದಾಯ ಭಾರತ।
01225004c ಮಂದಪಾಲಸ್ತತೋ ದೇಶಾದನ್ಯಂ ದೇಶಂ ಜಗಾಮ ಹ।।

ವೈಶಂಪಾಯನನು ಹೇಳಿದನು: “ಭಾರತ! ಈ ರೀತಿ ತನ್ನ ಮಕ್ಕಳಿಗೆ ಆಶ್ವಾಸನೆಯನ್ನಿತ್ತು ಮಂದಪಾಲನು ಅವರು ಮತ್ತು ತನ್ನ ಪತ್ನಿಯೊಡನೆ ಆ ದೇಶವನ್ನು ತೊರೆದು ಇನ್ನೊಂದು ದೇಶಕ್ಕೆ ಹೋದನು.

01225005a ಭಗವಾನಪಿ ತಿಗ್ಮಾಂಶುಃ ಸಮಿದ್ಧಂ ಖಾಂಡವಂ ವನಂ।
01225005c ದದಾಹ ಸಹ ಕೃಷ್ಣಾಭ್ಯಾಂ ಜನಯಂ ಜಗತೋಽಭಯಂ।।

ತಿಗ್ಮಾಂಶು ಭಗವಾನನಾದರೂ ಜಗತ್ತಿಗೇ ಭಯವನ್ನುಂಟುಮಾಡುವಂತೆ ಇಡೀ ಖಾಂಡವವನವನ್ನು ಕೃಷ್ಣರಿಬ್ಬರ ಸಹಾಯದಿಂದ ಸುಟ್ಟನು.

01225006a ವಸಾಮೇದೋವಹಾಃ ಕುಲ್ಯಾಸ್ತತ್ರ ಪೀತ್ವಾ ಚ ಪಾವಕಃ।
01225006c ಅಗಚ್ಛತ್ಪರಮಾಂ ತೃಪ್ತಿಂ ದರ್ಶಯಾಮಾಸ ಚಾರ್ಜುನಂ।।

ಮಾಂಸ, ಮೇದ ಮತ್ತು ರಕ್ತವನ್ನು ಕುಡಿದ ಪಾವಕನು ಪರಪ ತೃಪ್ತನಾಗಿ ಬಂದು ಅರ್ಜುನನನಿಗೆ ಕಾಣಿಸಿಕೊಂಡನು.

01225007a ತತೋಽಂತರಿಕ್ಷಾದ್ಭಗವಾನವತೀರ್ಯ ಸುರೇಶ್ವರಃ।
01225007c ಮರುದ್ಗಣವೃತಃ ಪಾರ್ಥಂ ಮಾಧವಂ ಚಾಬ್ರವೀದಿದಂ।।

ಆಗ ಮರುದ್ಗಣಗಳಿಂದ ಆವೃತ ಭಗವಾನ್ ಸುರೇಶ್ವರನು ಅಂತರಿಕ್ಷದಿಂದ ಕೆಳಗಿಳಿದುಬಂದು ಪಾರ್ಥ-ಮಾಧವರನ್ನುದ್ದೇಶಿಸಿ ಮಾತನಾಡಿದನು:

01225008a ಕೃತಂ ಯುವಾಭ್ಯಾಂ ಕರ್ಮೇದಮಮರೈರಪಿ ದುಷ್ಕರಂ।
01225008c ವರಾನ್ವೃಣೀತಂ ತುಷ್ಟೋಽಸ್ಮಿ ದುರ್ಲಭಾನಪ್ಯಮಾನುಷಾನ್।।

“ಅಮರರಿಗೂ ದುಷ್ಕರವಾಗಿರುವ ಕೃತ್ಯವನ್ನು ನೀವಿಬ್ಬರೂ ಮಾಡಿದ್ದೀರಿ. ನಾನು ಸಂತುಷ್ಟನಾಗಿದ್ದೇನೆ. ದುರ್ಲಭ ಅಮಾನುಷ ವರಗಳನ್ನು ಕೇಳಿ.”

01225009a ಪಾರ್ಥಸ್ತು ವರಯಾಮಾಸ ಶಕ್ರಾದಸ್ತ್ರಾಣಿ ಸರ್ವಶಃ।
01225009c ಗ್ರಹೀತುಂ ತಚ್ಚ ಶಕ್ರೋಽಸ್ಯ ತದಾ ಕಾಲಂ ಚಕಾರ ಹ।।

ಪಾರ್ಥನಾದರೋ ಶಕ್ರನಿಂದ ಸರ್ವ ಶಸ್ತ್ರಗಳನ್ನು ಕೇಳಿದನು. ಆದರೆ ಶಕ್ರನು ಅವುಗಳನ್ನು ಪಡೆಯುವ ಕಾಲದ ಕುರಿತು ಹೇಳಿದನು.

01225010a ಯದಾ ಪ್ರಸನ್ನೋ ಭಗವಾನ್ಮಹಾದೇವೋ ಭವಿಷ್ಯತಿ।
01225010c ತುಭ್ಯಂ ತದಾ ಪ್ರದಾಸ್ಯಾಮಿ ಪಾಂಡವಾಸ್ತ್ರಾಣಿ ಸರ್ವಶಃ।।

“ಪಾಂಡವ! ಭಗವಾನ್ ಮಹಾದೇವನು ನಿನ್ನ ಮೇಲೆ ಯಾವಾಗ ಪ್ರಸನ್ನನಾಗುತ್ತಾನೋ ಆಗ ಸರ್ವ ಅಸ್ತ್ರಗಳನ್ನು ನಿನಗೆ ನೀಡುತ್ತೇನೆ.

01225011a ಅಹಮೇವ ಚ ತಂ ಕಾಲಂ ವೇತ್ಸ್ಯಾಮಿ ಕುರುನಂದನ।
01225011c ತಪಸಾ ಮಹತಾ ಚಾಪಿ ದಾಸ್ಯಾಮಿ ತವ ತಾನ್ಯಹಂ।।

ಕುರುನಂದನ! ನನಗೇ ಆ ಕಾಲವು ತಿಳಿಯುತ್ತದೆ. ನಿನ್ನ ಮಹಾ ತಪಸ್ಸಿನ ಪರಿಣಾಮವಾಗಿ ನಾನು ನಿನಗೆ ಅವೆಲ್ಲವನ್ನೂ ಕೊಡುತ್ತೇನೆ.

01225012a ಆಗ್ನೇಯಾನಿ ಚ ಸರ್ವಾಣಿ ವಾಯವ್ಯಾನಿ ತಥೈವ ಚ।
01225012c ಮದೀಯಾನಿ ಚ ಸರ್ವಾಣಿ ಗ್ರಹೀಷ್ಯಸಿ ಧನಂಜಯ।।

ಧನಂಜಯ! ಆಗ್ನೇಯ, ವಾಯವ್ಯ ಮೊದಲಾದ ಸರ್ವವನ್ನೂ ಮತ್ತು ನನ್ನ ಸರ್ವವನ್ನೂ ಪಡೆಯುವೆ.”

01225013a ವಾಸುದೇವೋಽಪಿ ಜಗ್ರಾಹ ಪ್ರೀತಿಂ ಪಾರ್ಥೇನ ಶಾಶ್ವತೀಂ।
01225013c ದದೌ ಚ ತಸ್ಮೈ ದೇವೇಂದ್ರಸ್ತಂ ವರಂ ಪ್ರೀತಿಮಾಂಸ್ತದಾ।।

ವಾಸುದೇವನು ಪಾರ್ಥನಲ್ಲಿದ್ದ ಪ್ರೀತಿಯು ಶಾಶ್ವತವಾಗಿರುವಂತೆ ಕೇಳಿಕೊಂಡನು. ದೇವೇಂದ್ರನು ಪ್ರೀತಿಯಿಂದ ಆ ವರವನ್ನಿತ್ತನು.

01225014a ದತ್ತ್ವಾ ತಾಭ್ಯಾಂ ವರಂ ಪ್ರೀತಃ ಸಹ ದೇವೈರ್ಮರುತ್ಪತಿಃ।
01225014c ಹುತಾಶನಮನುಜ್ಞಾಪ್ಯ ಜಗಾಮ ತ್ರಿದಿವಂ ಪುನಃ।।

ಅವರಿಬ್ಬರಿಗೆ ವರವನ್ನಿತ್ತು ಪ್ರೀತನಾದ ಮರುತ್ಪತಿಯು ದೇವತೆಗಳೊಂದಿಗೆ ಹುತಾಶನನನ್ನು ಬೀಳ್ಕೊಂಡು ತ್ರಿದಿವಕ್ಕೆ ಹಿಂದಿರುಗಿದನು.

01225015a ಪಾವಕಶ್ಚಾಪಿ ತಂ ದಾವಂ ದಗ್ಧ್ವಾ ಸಮೃಗಪಕ್ಷಿಣಂ।
01225015c ಅಹಾನಿ ಪಂಚ ಚೈಕಂ ಚ ವಿರರಾಮ ಸುತರ್ಪಿತಃ।

ಪಾವಕನಾದರೂ ಮೃಗಪಕ್ಷಿಗಳ ಸಹಿತ ಆ ವನವನ್ನು ಆರು ದಿನಗಳು ಸುಟ್ಟು ಸುತರ್ಪಿತನಾಗಿ ನಿಂತನು.

01225016a ಜಗ್ಧ್ವಾ ಮಾಂಸಾನಿ ಪೀತ್ವಾ ಚ ಮೇದಾಂಸಿ ರುಧಿರಾಣಿ ಚ।
01225016c ಯುಕ್ತಃ ಪರಮಯಾ ಪ್ರೀತ್ಯಾ ತಾವುವಾಚ ವಿಶಾಂ ಪತೇ।।

ವಿಶಾಂಪತೇ! ಮಾಂಸವನ್ನು ತಿಂದು ಮೇದ ರುಧಿರಗಳನ್ನು ಕುಡಿದು ಪರಮಪ್ರೀತನಾದ ಅವನು ಹೇಳಿದನು:

01225017a ಯುವಾಭ್ಯಾಂ ಪುರುಷಾಗ್ರ್ಯಾಭ್ಯಾಂ ತರ್ಪಿತೋಽಸ್ಮಿ ಯಥಾಸುಖಂ।
01225017c ಅನುಜಾನಾಮಿ ವಾಂ ವೀರೌ ಚರತಂ ಯತ್ರ ವಾಂಚಿತಂ।।

“ನೀವಿಬ್ಬರೂ ಪುರುಷವ್ಯಾಘ್ರರು ಯಥಾಸುಖವಾಗಿ ನನಗೆ ತೃಪ್ತಿನೀಡಿದ್ದೀರಿ. ವೀರರೇ! ನಿಮ್ಮನ್ನು ಬೀಳ್ಕೊಡುತ್ತೇನೆ. ಇಷ್ಟಬಂದಲ್ಲಿ ಹೋಗಿರಿ.”

01225018a ಏವಂ ತೌ ಸಮನುಜ್ಞಾತೌ ಪಾವಕೇನ ಮಹಾತ್ಮನಾ।
01225018c ಅರ್ಜುನೋ ವಾಸುದೇವಶ್ಚ ದಾನವಶ್ಚ ಮಯಸ್ತಥಾ।।
01225019a ಪರಿಕ್ರಮ್ಯ ತತಃ ಸರ್ವೇ ತ್ರಯೋಽಪಿ ಭರತರ್ಷಭ।
01225019c ರಮಣೀಯೇ ನದೀಕೂಲೇ ಸಹಿತಾಃ ಸಮುಪಾವಿಶನ್।।

ಭರತರ್ಷಭ! ಅರ್ಜುನ, ವಾಸುದೇವ ಮತ್ತು ದಾನವ ಮಯ ಈ ಮೂವರೂ ಮಹಾತ್ಮ ಪಾವಕನನ್ನು ಬೀಳ್ಕೊಂಡು ಸುತ್ತಾಡಿ ರಮಣೀಯ ನದೀತೀರದಲ್ಲಿ ಒಟ್ಟಿಗೇ ಕುಳಿತುಕೊಂಡರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಖಾಂಡವದಾಹಪರ್ವಣಿ ಶಾಂಙೃಕೋಪಾಖ್ಯಾನೇ ಪಂಚವಿಂಶತ್ಯಾಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಖಾಂಡವದಾಹಪರ್ವದಲ್ಲಿ ಶಾಂಙೃಕೋಪಾಖ್ಯಾನದಲ್ಲಿ ಇನ್ನೂರಾ ಇಪ್ಪತ್ತೈದನೆಯ ಅಧ್ಯಾಯವು. ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಖಾಂಡವದಾಹಪರ್ವಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಖಾಂಡವದಾಹಪರ್ವವು. ಇತಿ ಶ್ರೀ ಮಹಾಭಾರತೇ ಆದಿಪರ್ವಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವವು. ಇದೂವರೆಗಿನ ಒಟ್ಟು ಮಹಾಪರ್ವಗಳು-1/18, ಉಪಪರ್ವಗಳು-19/100, ಅಧ್ಯಾಯಗಳು-225/1995, ಶ್ಲೋಕಗಳು-7190/73784.