ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಖಾಂಡವದಾಹ ಪರ್ವ
ಅಧ್ಯಾಯ 224
ಸಾರ
ಮಂದಪಾಲ ಮತ್ತು ಅವನ ಪತ್ನಿ ಲಪಿತೆಯ ಸಂವಾದ (1-16). ಮಂದಪಾಲನು ಮಕ್ಕಳನ್ನು, ಮಕ್ಕಳ ತಾಯಿಯನ್ನೂ ಕೂಡಿದ್ದುದು (17-32).
01224001 ವೈಶಂಪಾಯನ ಉವಾಚ।
01224001a ಮಂದಪಾಲೋಽಪಿ ಕೌರವ್ಯ ಚಿಂತಯಾನಃ ಸುತಾಂಸ್ತದಾ।
01224001c ಉಕ್ತವಾನಪ್ಯಶೀತಾಂಶುಂ ನೈವ ಸ ಸ್ಮ ನ ತಪ್ಯತೇ।।
ವೈಶಂಪಾಯನನು ಹೇಳಿದನು: “ಕೌರವ್ಯ! ಮಂದಪಾಲನು ತನ್ನ ಮಕ್ಕಳ ಕುರಿತು ಚಿಂತಿಸತೊಡಗಿದನು. ಶೀತಾಂಶುವೊಂದಿಗೆ ಅವನು ಮಾತನಾಡಿದ್ದರೂ ಅವನು ಉದ್ವಿಗ್ನನಾಗಿದ್ದನು.
01224002a ಸ ತಪ್ಯಮಾನಃ ಪುತ್ರಾರ್ಥೇ ಲಪಿತಾಮಿದಮಬ್ರವೀತ್।
01224002c ಕಥಂ ನ್ವಶಕ್ತಾಃ ಪ್ಲವನೇ ಲಪಿತೇ ಮಮ ಪುತ್ರಕಾಃ।।
ಅವನ ಪುತ್ರರ ಮೇಲಿದ್ದ ಚಿಂತೆಯಿಂದ ಅವನು ಲಪಿತಳಲ್ಲಿ ಹೇಳಿದನು: “ಲಪಿತ! ನನ್ನ ಆ ಸಣ್ಣ ಮಕ್ಕಳು ತಪ್ಪಿಸಿಕೊಂಡು ಹೋಗಲು ಅಶಕ್ತರು.
01224003a ವರ್ಧಮಾನೇ ಹುತವಹೇ ವಾತೇ ಶೀಘ್ರಂ ಪ್ರವಾಯತಿ।
01224003c ಅಸಮರ್ಥಾ ವಿಮೋಕ್ಷಾಯ ಭವಿಷ್ಯಂತಿ ಮಮಾತ್ಮಜಾಃ।।
ಬೆಂಕಿಯು ಹೆಚ್ಚಾಗಿ ಉರಿಯುತ್ತಿದ್ದಾಗ, ಮತ್ತು ಗಾಳಿಯು ಜೋರಾಗಿ ಬೀಸುತ್ತಿರುವಾಗ ನನ್ನ ಮಕ್ಕಳು ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಅಸಮರ್ಥರಾಗುತ್ತಾರೆ.
01224004a ಕಥಂ ನ್ವಶಕ್ತಾ ತ್ರಾಣಾಯ ಮಾತಾ ತೇಷಾಂ ತಪಸ್ವಿನೀ।
01224004c ಭವಿಷ್ಯತ್ಯಸುಖಾವಿಷ್ಟಾ ಪುತ್ರತ್ರಾಣಮಪಶ್ಯತೀ।।
ಅವರ ತಪಸ್ವಿನಿ ತಾಯಿಯೂ ಕೂಡ ಅವರನ್ನು ಉಳಿಸಲು ಅಶಕ್ತಳಾಗುತ್ತಾಳೆ. ಪುತ್ರರನ್ನು ಉಳಿಸಲು ಸಾಧ್ಯವಾಗಲಿಲ್ಲವೆಂದು ಅವಳು ತುಂಬಾ ದುಃಖಿಯಾಗಿರಬಹುದು.
01224005a ಕಥಂ ನು ಸರಣೇಽಶಕ್ತಾನ್ಪತನೇ ಚ ಮಮಾತ್ಮಜಾನ್।
01224005c ಸಂತಪ್ಯಮಾನಾ ಅಭಿತೋ ವಾಶಮಾನಾಭಿಧಾವತೀ।।
ನನ್ನ ಪುತ್ರರಿಗಾಗಿ ಚಡಪಡಿಸುತ್ತಾ, ಓಡಲಿಕ್ಕೂ ಆಗದೇ, ಹಾರಿಹೋಗಲಿಕ್ಕೂ ಆಗದೇ ತಪಿಸುತ್ತಾ ಅಲ್ಲಿಯೇ ಕಿರುಚುತ್ತಾ ಹಾರಾಡುತ್ತಾ ಇರಬಹುದು!
01224006a ಜರಿತಾರಿಃ ಕಥಂ ಪುತ್ರಃ ಸಾರಿಸೃಕ್ವಃ ಕಥಂ ಚ ಮೇ।
01224006c ಸ್ತಂಬಮಿತ್ರಃ ಕಥಂ ದ್ರೋಣಃ ಕಥಂ ಸಾ ಚ ತಪಸ್ವಿನೀ।।
ಪುತ್ರ ಜರಿತಾರಿಯು ಹೇಗಿರಬಹುದು? ನನ್ನ ಸಾರಿಸೃಕ್ವನು ಹೇಗಿರಬಹುದು? ಸ್ತಂಬಮಿತ್ರನು ಹೇಗಿರಬಹುದು? ಮತ್ತು ಆ ತಪಸ್ವಿನೀ ದ್ರೋಣನು ಹೇಗಿರಬಹುದು?”
01224007a ಲಾಲಪ್ಯಮಾನಂ ತಂ ಋಷಿಂ ಮಂದಪಾಲಂ ತಥಾ ವನೇ।
01224007c ಲಪಿತಾ ಪ್ರತ್ಯುವಾಚೇದಂ ಸಾಸೂಯಮಿವ ಭಾರತ।।
ಭಾರತ! ಈ ರೀತಿ ವನದಲ್ಲಿ ಋಷಿ ಮಂದಪಾಲನು ವಿಲಪಿಸುತ್ತಿರಲು ಲಪಿತೆಯು ಅಸೂಯೆಯಿಂದ ಅವನಿಗೆ ಹೇಳಿದಳು:
01224008a ನ ತೇ ಸುತೇಷ್ವವೇಕ್ಷಾಸ್ತಿ ತಾನೃಷೀನುಕ್ತವಾನಸಿ।
01224008c ತೇಜಸ್ವಿನೋ ವೀರ್ಯವಂತೋ ನ ತೇಷಾಂ ಜ್ವಲನಾದ್ಭಯಂ।।
“ನೀನು ನಿನ್ನ ಸುತರ ರಕ್ಷಣೆಮಾಡುತ್ತಿಲ್ಲ! ಅವರು ತೇಜಸ್ವಿ, ವೀರ್ಯವಂತ ಋಷಿಗಳೆಂದೂ ಅವರಿಗೆ ಅಗ್ನಿಯ ಭಯವಿಲ್ಲ ಎಂದು ನೀನೇ ಹೇಳಿದ್ದೆ.
01224009a ತಥಾಗ್ನೌ ತೇ ಪರೀತ್ತಾಶ್ಚ ತ್ವಯಾ ಹಿ ಮಮ ಸನ್ನಿಧೌ।
01224009c ಪ್ರತಿಶ್ರುತಂ ತಥಾ ಚೇತಿ ಜ್ವಲನೇನ ಮಹಾತ್ಮನಾ।।
ಹಾಗೆಯೇ ನನ್ನ ಸನ್ನಿಧಿಯಲ್ಲಿಯೇ ನೀನು ಅವರನ್ನು ಅಗ್ನಿಯ ರಕ್ಷಣೆಯಲ್ಲಿ ಇಟ್ಟಿದ್ದೆ ಮತ್ತು ಆ ಮಹಾತ್ಮನು ಭರವಸೆಯನ್ನು ನೀಡಿದ್ದನು.
01224010a ಲೋಕಪಾಲೋಽನೃತಾಂ ವಾಚಂ ನ ತು ವಕ್ತಾ ಕಥಂ ಚನ।
01224010c ಸಮರ್ಥಾಸ್ತೇ ಚ ವಕ್ತಾರೋ ನ ತೇ ತೇಷ್ವಸ್ತಿ ಮಾನಸಂ।।
ಲೋಕಪಾಲಕರು ಎಂದೂ ಸುಳ್ಳನ್ನು ಹೇಳುವುದಿಲ್ಲ. ಮತ್ತು ಅವರು ಸಮರ್ಥ ವಾಗ್ಮಿಗಳು. ಇಲ್ಲ. ಅವರ ಮೇಲೆ ನಿನ್ನ ಮನಸ್ಸಿಲ್ಲ.
01224011a ತಾಮೇವ ತು ಮಮಾಮಿತ್ರೀಂ ಚಿಂತಯನ್ಪರಿತಪ್ಯಸೇ।
01224011c ಧ್ರುವಂ ಮಯಿ ನ ತೇ ಸ್ನೇಹೋ ಯಥಾ ತಸ್ಯಾಂ ಪುರಾಭವತ್।
ನೀನು ನನ್ನ ಸವತಿಯ ಕುರಿತು ಚಿಂತಿಸಿ ಪರಿತಪಿಸುತ್ತಿದ್ದೀಯೆ! ಹಿಂದೆ ನೀನು ಅವಳನ್ನು ಎಷ್ಟು ಪ್ರೀತಿಸುತ್ತಿದ್ದೆಯೋ ಅಷ್ಟು ನನ್ನನ್ನು ಪ್ರೀತಿಸುತ್ತಿಲ್ಲ ಎನ್ನುವುದು ಸತ್ಯ.
01224012a ನ ಹಿ ಪಕ್ಷವತಾ ನ್ಯಾಯ್ಯಂ ನಿಃಸ್ನೇಹೇನ ಸುಹೃಜ್ಜನೇ।
01224012c ಪೀಡ್ಯಮಾನ ಉಪದ್ರಷ್ಟುಂ ಶಕ್ತೇನಾತ್ಮಾ ಕಥಂ ಚನ।।
ಸುಹೃಜ್ಜನರಲ್ಲಿ ನಿಃಸ್ನೇಹದಿಂದ ಎಂದೂ ನ್ಯಾಯ ಮತ್ತು ಪಕ್ಷಪಾತವನ್ನು ಮಾಡಬಾರದು. ಚಡಪಡಿಸುತ್ತಿರುವವನನ್ನು ನೋಡಲು ನನಗೆ ಎಂದೂ ಶಕ್ಯವಿಲ್ಲ.
01224013a ಗಚ್ಛ ತ್ವಂ ಜರಿತಾಮೇವ ಯದರ್ಥಂ ಪರಿತಪ್ಯಸೇ।
01224013c ಚರಿಷ್ಯಾಮ್ಯಹಮಪ್ಯೇಕಾ ಯಥಾ ಕಾಪುರುಷೇ ತಥಾ।।
ನೀನು ಯಾರ ಕುರಿತು ಪರಿತಪಿಸುತ್ತಿದ್ದೀಯೋ ಆ ನಿನ್ನ ಜರಿತೆಯ ಬಳಿ ಹೋಗು. ನಾನು ಕಾಪುರುಷನೊಂದಿಗಿರುವವಳಂತೆ ಏಕಾಂಗಿಯಾಗಿ ಅಲೆಯುತ್ತಿರುತ್ತೇನೆ.”
01224014 ಮಂದಪಾಲ ಉವಾಚ।
01224014a ನಾಹಮೇವಂ ಚರೇ ಲೋಕೇ ಯಥಾ ತ್ವಮಭಿಮನ್ಯಸೇ।
01224014c ಅಪತ್ಯಹೇತೋರ್ವಿಚರೇ ತಚ್ಚ ಕೃಚ್ಛ್ರಗತಂ ಮಮ।।
ಮಂದಪಾಲನು ಹೇಳಿದನು: “ನೀನು ಕಲ್ಪಿಸಿದ ಕಾರಣಕ್ಕಾಗಿ ನಾನು ಲೋಕದಲ್ಲಿ ಸಂಚರಿಸುತ್ತಿದ್ದೇನೆ ಎಂದು ತಿಳಿಯಬೇಡ! ನಾನು ಸಂತಾನಕ್ಕೆಂದು ಈ ಲೋಕದಲ್ಲಿ ಸಂಚರಿಸುತ್ತಿದ್ದೇನೆ ಮತ್ತು ಈ ಸಮಯದಲ್ಲಿ ನನ್ನ ಮಕ್ಕಳು ಕಷ್ಟದಲ್ಲಿದ್ದಾರೆ.
01224015a ಭೂತಂ ಹಿತ್ವಾ ಭವಿಷ್ಯೇಽರ್ಥೇ ಯೋಽವಲಂಬೇತ ಮಂದಧೀಃ।
01224015c ಅವಮನ್ಯೇತ ತಂ ಲೋಕೋ ಯಥೇಚ್ಛಸಿ ತಥಾ ಕುರು।
ಇರುವುದನ್ನು ತೊರೆದು ಭವಿಷ್ಯದಲ್ಲಿ ಆಗಬಹುದಾದುದನ್ನು ಅವಲಂಬಿಸಿರುವವನು ಮೂಢ. ಅಂಥವವನ್ನು ಲೋಕವು ಕೀಳಾಗಿ ಕಾಣುತ್ತದೆ. ನಿನಗೆ ಇಷ್ಟಬಂದಹಾಗೆ ಮಾಡು.
01224016a ಏಷ ಹಿ ಜ್ವಲಮಾನೋಽಗ್ನಿರ್ಲೇಲಿಹಾನೋ ಮಹೀರುಹಾನ್।
01224016c ದ್ವೇಷ್ಯಂ ಹಿ ಹೃದಿ ಸಂತಾಪಂ ಜನಯತ್ಯಶಿವಂ ಮಮ।।
ಈ ಜ್ವಲಿಸುತ್ತಿರುವ ಮಹಾ ವೃಕ್ಷಗಳನ್ನು ನೆಕ್ಕುತ್ತಾ ಕೆಟ್ಟದನ್ನು ತರುವ ಈ ಅಗ್ನಿಯು ನನ್ನ ಹೃದಯದಲ್ಲಿ ಅಶುಭ ಸಂತಾಪವನ್ನು ಹುಟ್ಟಿಸುತ್ತಿದ್ದಾನೆ.””
01224017 ವೈಶಂಪಾಯನ ಉವಾಚ।
01224017a ತಸ್ಮಾದ್ದೇಶಾದತಿಕ್ರಾಂತೇ ಜ್ವಲನೇ ಜರಿತಾ ತತಃ।
01224017c ಜಗಾಮ ಪುತ್ರಕಾನೇವ ತ್ವರಿತಾ ಪುತ್ರಗೃದ್ಧಿನೀ।।
ವೈಶಂಪಾಯನನು ಹೇಳಿದನು: “ಅಗ್ನಿಯು ತನ್ನ ಪುತ್ರರಿರುವ ಆ ಸ್ಥಳವನ್ನು ದಾಟಿ ಹೋದನಂತರ ತಕ್ಷಣವೇ ಪುತ್ರರ ಮೇಲಿನ ಪ್ರೀತಿಯಿಂದ ಜರಿತೆಯು ಅಲ್ಲಿಗೆ ಬಂದಳು.
01224018a ಸಾ ತಾನ್ಕುಶಲಿನಃ ಸರ್ವಾನ್ನಿರ್ಮುಕ್ತಾಂಜಾತವೇದಸಃ।
01224018c ರೋರೂಯಮಾಣಾ ಕೃಪಣಾ ಸುತಾನ್ದೃಷ್ಟವತೀ ವನೇ।।
ದುಃಖದಿಂದ ರೋದಿಸುತ್ತಿರುವ ಅವಳು ಆ ವನದಲ್ಲಿ ಜಾತವೇದಸ ಅಗ್ನಿಯಿಂದ ಮುಕ್ತರಾಗಿ ಕುಶಲರಾಗಿದ್ದ ತನ್ನ ಸುತರನ್ನು ಕಂಡಳು.
01224019a ಅಶ್ರದ್ಧೇಯತಮಂ ತೇಷಾಂ ದರ್ಶನಂ ಸಾ ಪುನಃ ಪುನಃ।
01224019c ಏಕೈಕಶಶ್ಚ ತಾನ್ಪುತ್ರಾನ್ಕ್ರೋಶಮಾನಾನ್ವಪದ್ಯತ।।
ನೋಡಲಿಕ್ಕೆ ಅದೊಂದು ಅದ್ಭುತ ದೃಶ್ಯವಾಗಿತ್ತು. ಪುನಃ ಪುನಃ ಅವಳು ಆ ಪುತ್ರರನ್ನು ಒಬ್ಬೊಬ್ಬರನ್ನಾಗಿಯೇ ಅಪ್ಪಿಕೊಂಡು ರೋದಿಸಿದಳು.
01224020a ತತೋಽಭ್ಯಗಚ್ಛತ್ಸಹಸಾ ಮಂದಪಾಲೋಽಪಿ ಭಾರತ।
01224020c ಅಥ ತೇ ಸರ್ವ ಏವೈನಂ ನಾಭ್ಯನಂದಂತ ವೈ ಸುತಾಃ।।
ಭಾರತ! ಆಗ ತಕ್ಷಣವೇ ಅಲ್ಲಿಗೆ ಮಂದಪಾಲನೂ ಬಂದನು. ಆದರೆ ಅವನ ಮಕ್ಕಳೆಲ್ಲರಲ್ಲಿ ಯಾರೊಬ್ಬನೂ ಅವನನ್ನು ಅಭಿನಂದಿಸಲಿಲ್ಲ.
01224021a ಲಾಲಪ್ಯಮಾನಮೇಕೈಕಂ ಜರಿತಾಂ ಚ ಪುನಃ ಪುನಃ।
01224021c ನೋಚುಸ್ತೇ ವಚನಂ ಕಿಂ ಚಿತ್ತಮೃಷಿಂ ಸಾಧ್ವಸಾಧು ವಾ।।
ಅವನು ಪುನಃ ಪುನಃ ಒಬ್ಬೊಬ್ಬರಲ್ಲಿಯೂ ಜರಿತೆಯಲ್ಲಿಯೂ ಮಾತನ್ನಾಡುತ್ತಿರಲು ಅವರು ಯಾರೂ ಆ ಋಷಿಯನ್ನು ಕುರಿತು ಒಳ್ಳೆಯ ಅಥವಾ ಕೆಟ್ಟ ಮಾತುಗಳನ್ನು ಆಡಲಿಲ್ಲ.
01224022 ಮಂದಪಾಲ ಉವಾಚ।
01224022a ಜ್ಯೇಷ್ಠಃ ಸುತಸ್ತೇ ಕತಮಃ ಕತಮಸ್ತದನಂತರಃ।
01224022c ಮಧ್ಯಮಃ ಕತಮಃ ಪುತ್ರಃ ಕನಿಷ್ಠಃ ಕತಮಶ್ಚ ತೇ।।
ಮಂದಪಾಲನು ಹೇಳಿದನು: “ನಿಮ್ಮಲ್ಲಿ ಯಾರು ನನ್ನ ಜ್ಯೇಷ್ಠ ಪುತ್ರ? ಯಾರು ಅವನ ನಂತರದವನು? ನಿಮ್ಮಲ್ಲಿ ಯಾರು ಮಧ್ಯಮ ಪುತ್ರ ಮತ್ತು ಕನಿಷ್ಠನು ಯಾರು?
01224023a ಏವಂ ಬ್ರುವಂತಂ ದುಃಖಾರ್ತಂ ಕಿಂ ಮಾಂ ನ ಪ್ರತಿಭಾಷಸೇ।
01224023c ಕೃತವಾನಸ್ಮಿ ಹವ್ಯಾಶೇ ನೈವ ಶಾಂತಿಮಿತೋ ಲಭೇ।।
ಹೀಗೆ ದುಃಖಾರ್ತನಾಗಿ ಮಾತನಾಡುತ್ತಿರುವ ನನ್ನಲ್ಲಿ ನೀವು ಯಾಕೆ ಪ್ರತಿಯಾಗಿ ಮಾತನಾಡುತ್ತಿಲ್ಲ? ಹವ್ಯವಾಹನನಿಗೆ ನಿಮ್ಮನ್ನು ಒಪ್ಪಿಸಿ ಹೋಗಿದ್ದರೂ ನನಗೆ ಶಾಂತಿಯೇ ದೊರೆಯಲಿಲ್ಲ.”
01224024 ಜರಿತೋವಾಚ।
01224024a ಕಿಂ ತೇ ಜ್ಯೇಷ್ಠೇ ಸುತೇ ಕಾರ್ಯಂ ಕಿಮನಂತರಜೇನ ವಾ।
01224024c ಕಿಂ ಚ ತೇ ಮಧ್ಯಮೇ ಕಾರ್ಯಂ ಕಿಂ ಕನಿಷ್ಠೇ ತಪಸ್ವಿನಿ।
ಜರಿತಾಳು ಹೇಳಿದಳು: “ನಿನ್ನ ಜ್ಯೇಷ್ಠ ಸುತ ಯಾರಾದರೆ ನಿನಗೇನು? ಅನಂತರದವನು ಯಾರಾದರೆ ನಿನಗೇನು? ನಿನ್ನ ಮಧ್ಯಮನಲ್ಲಿ ನಿನಗೇನು ಕೆಲಸ ಮತ್ತು ತಪಸ್ವಿನಿ ಕನಿಷ್ಠನಲ್ಲಿ ಏನು ಕೆಲಸ?
01224025a ಯಸ್ತ್ವಂ ಮಾಂ ಸರ್ವಶೋ ಹೀನಾಮುತ್ಸೃಜ್ಯಾಸಿ ಗತಃ ಪುರಾ।
01224025c ತಾಮೇವ ಲಪಿತಾಂ ಗಚ್ಛ ತರುಣೀಂ ಚಾರುಹಾಸಿನೀಂ।।
ಹಿಂದೆ ನನ್ನನ್ನು ಸಂಪೂರ್ಣವಾಗಿ ತೊರೆದು ನೀನು ಹೊರಟುಹೋದೆ. ನಿನ್ನ ಆ ತರುಣಿ ಚಾರುಹಾಸಿನಿ ಲಪಿತೆಯ ಬಳಿ ಹೋಗು.”
01224026 ಮಂದಪಾಲ ಉವಾಚ।
01224026a ನ ಸ್ತ್ರೀಣಾಂ ವಿದ್ಯತೇ ಕಿಂ ಚಿದನ್ಯತ್ರ ಪುರುಷಾಂತರಾತ್।
01224026c ಸಾಪತ್ನಕಮೃತೇ ಲೋಕೇ ಭವಿತವ್ಯಂ ಹಿ ತತ್ತಥಾ।।
ಮಂದಪಾಲನು ಹೇಳಿದನು: “ಇನ್ನೊಬ್ಬ ಪುರುಷನನ್ನು ಬಿಟ್ಟು ಬೇರೆ ಯಾವುದೂ ಒಬ್ಬ ಸ್ತ್ರೀಗೆ ಸವತಿಯ ಜೊತೆಗಿರುವ ಪೈಪೋಟಿಯಷ್ಟು ಮಾರಕವಲ್ಲ.
01224027a ಸುವ್ರತಾಪಿ ಹಿ ಕಲ್ಯಾಣೀ ಸರ್ವಲೋಕಪರಿಶ್ರುತಾ।
01224027c ಅರುಂಧತೀ ಪರ್ಯಶಂಕದ್ವಸಿಷ್ಠಮೃಷಿಸತ್ತಮಂ।।
ಯಾಕೆಂದರೆ ಸುವ್ರತ, ಕಲ್ಯಾಣಿ, ಸರ್ವಲೋಕಪರಿಶ್ರುತ ಅರುಂಧತಿಯೂ ಕೂಡ ಋಷಿಸತ್ತಮ ವಸಿಷ್ಠನನ್ನು ಶಂಕಿಸಿದಳು.
01224028a ವಿಶುದ್ಧಭಾವಮತ್ಯಂತಂ ಸದಾ ಪ್ರಿಯಹಿತೇ ರತಂ।
01224028c ಸಪ್ತರ್ಷಿಮಧ್ಯಗಂ ವೀರಮವಮೇನೇ ಚ ತಂ ಮುನಿಂ।।
ಸಪ್ತರ್ಷಿಮಧ್ಯಗ ಅವನು ಸದಾ ಅತ್ಯಂತ ವಿಶುದ್ಧಭಾವದಿಂದ ಅವಳ ಪ್ರಿಯಹಿತರತನಾಗಿದ್ದನು. ಆದರೂ ಅವಳು ಆ ಮುನಿಯನ್ನು ಹೀಯಾಳಿಸಿದಳು.
01224029a ಅಪಧ್ಯಾನೇನ ಸಾ ತೇನ ಧೂಮಾರುಣಸಮಪ್ರಭಾ।
01224029c ಲಕ್ಷ್ಯಾಲಕ್ಷ್ಯಾ ನಾಭಿರೂಪಾ ನಿಮಿತ್ತಮಿವ ಲಕ್ಷ್ಯತೇ।।
ಈ ರೀತಿ ಅಸಡ್ಡೆತನ ತೋರಿಸಿದ್ದುದಕ್ಕಾಗಿ ಅವಳು ಧೂಮದಿಂದ ಆವೃತ ಅರುಣನ ಸಮಪ್ರಭೆಯಾಗಿ, ಅಷ್ಟೊಂದು ಸುಂದರವಾಗಿ ಕಾಣದೇ, ಒಮ್ಮೆ ಕಾಣಿಸಿಕೊಳ್ಳುತ್ತಾ ಇನ್ನೊಮ್ಮೆ ಕಾಣಿಸಿಕೊಳ್ಳದೆಯೇ, ನಿಮಿತ್ತದಂತೆ ತೋರಿಸಿಕೊಳ್ಳುತ್ತಾಳೆ.
01224030a ಅಪತ್ಯಹೇತೋಃ ಸಂಪ್ರಾಪ್ತಂ ತಥಾ ತ್ವಮಪಿ ಮಾಮಿಹ।
01224030c ಇಷ್ಟಮೇವಂಗತೇ ಹಿತ್ವಾ ಸಾ ತಥೈವ ಚ ವರ್ತಸೇ।।
ನೀನೂ ಕೂಡ ಸಂತಾನಕ್ಕೆಂದೇ ನನ್ನನು ಕೂಡಿದೆ ಮತ್ತು ನಿನಗಿಷ್ಟವಾದವನನ್ನು ತೊರೆದೆ. ಈಗ ನೀನು ಅವಳಂತೆಯೇ ವರ್ತಿಸುತ್ತಿದ್ದೀಯೆ.
01224031a ನೈವ ಭಾರ್ಯೇತಿ ವಿಶ್ವಾಸಃ ಕಾರ್ಯಃ ಪುಂಸಾ ಕಥಂ ಚನ।
01224031c ನ ಹಿ ಕಾರ್ಯಮನುಧ್ಯಾತಿ ಭಾರ್ಯಾ ಪುತ್ರವತೀ ಸತೀ।।
ಪುರುಷನು ಎಂದೂ ತನ್ನ ಭಾರ್ಯೆಯಲ್ಲಿ ಹೆಂಡತಿಯೆಂದು ವಿಶ್ವಾಸವನ್ನು ಇಡುವ ಕೆಲಸ ಮಾಡಬಾರದು. ಯಾಕೆಂದರೆ ಪುತ್ರವತಿಯಾದ ಸತಿಯು ತನ್ನ ಕೆಲಸವನ್ನು ಅನುಸರಿಸುವುದಿಲ್ಲ.””
01224032 ವೈಶಂಪಾಯನ ಉವಾಚ।
01224032a ತತಸ್ತೇ ಸರ್ವ ಏವೈನಂ ಪುತ್ರಾಃ ಸಮ್ಯಗುಪಾಸಿರೇ।
01224032c ಸ ಚ ತಾನಾತ್ಮಜಾನ್ರಾಜನ್ನಾಶ್ವಾಸಯಿತುಮಾರಭತ್।।
ವೈಶಂಪಾಯನನು ಹೇಳಿದನು: “ರಾಜನ್! ಅದರ ನಂತರ ಅವನ ಪುತ್ರರೆಲ್ಲರೂ ಅವನನ್ನು ಸರಿಯಾಗಿ ಉಪಾಸಿಸಿದರು ಮತ್ತು ಅವನೂ ತನ್ನ ಮಕ್ಕಳಿಗೆ ಅಶ್ವಾಸನೆಯನ್ನಿತ್ತು ಪಾಲಿಸಿದನು.
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಖಾಂಡವದಾಹಪರ್ವಣಿ ಶಾಂಙೃಕೋಪಾಖ್ಯಾನೇ ಚತುರ್ವಿಂಶತ್ಯಾಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಖಾಂಡವದಾಹಪರ್ವದಲ್ಲಿ ಶಾಂಙೃಕೋಪಾಖ್ಯಾನದಲ್ಲಿ ಇನ್ನೂರಾ ಇಪ್ಪತ್ತ್ನಾಲ್ಕನೆಯ ಅಧ್ಯಾಯವು.