222 ಶಾಂಙೃಕೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಖಾಂಡವದಾಹ ಪರ್ವ

ಅಧ್ಯಾಯ 222

ಸಾರ

ವಿಹ್ವಲರಾದ ಜರಿತೆ ಮತ್ತು ಮಕ್ಕಳು ರೋದಿಸುವುದು (1-18).

01222001 ಜರಿತೋವಾಚ।
01222001a ಅಸ್ಮಾದ್ಬಿಲಾನ್ನಿಷ್ಪತಿತಂ ಶ್ಯೇನ ಆಖುಂ ಜಹಾರ ತಂ।
01222001c ಕ್ಷುದ್ರಂ ಗೃಹೀತ್ವಾ ಪಾದಾಭ್ಯಾಂ ಭಯಂ ನ ಭವಿತಾ ತತಃ।।

ಜರಿತೆಯು ಹೇಳಿದಳು: “ಇಲಿಯು ಈ ಬಿಲದಿಂದ ಹೊರಬಂದಿತು ಮತ್ತು ಒಂದು ಗಿಡುಗವು ತನ್ನ ಪಂಜಗಳಿಂದ ಅದನ್ನು ಎತ್ತಿಕೊಂಡು ಹಾರಿಹೋಯಿತು. ನೀವು ಇನ್ನು ಭಯಪಡಬೇಕಾದುದು ಏನೂ ಇಲ್ಲ.”

01222002 ಶಾಂಙೃಕಾ ಊಚುಃ।
01222002a ನ ಹೃತಂ ತಂ ವಯಂ ವಿದ್ಮಃ ಶ್ಯೇನೇನಾಖುಂ ಕಥಂ ಚನ।
01222002c ಅನ್ಯೇಽಪಿ ಭವಿತಾರೋಽತ್ರ ತೇಭ್ಯೋಽಪಿ ಭಯಮೇವ ನಃ।।

ಸಾರಂಗಗಳು ಹೇಳಿದವು: “ಗಿಡುಗವು ಇಲಿಯನ್ನು ಎತ್ತಿಕೊಂಡು ಹೋಯಿತು ಎನ್ನುವುದು ನಮಗೆ ತಿಳಿಯಲೇ ಇಲ್ಲ. ಈ ಬಿಲದಲ್ಲಿ ಇನ್ನೂ ಇತರ ಇಲಿಗಳು ಇರಬಹುದು. ನಮಗೆ ಅವುಗಳ ಭಯವಾಗುತ್ತದೆ.

01222003a ಸಂಶಯೋ ಹ್ಯಗ್ನಿರಾಗಚ್ಛೇದ್ದೃಷ್ಟಂ ವಾಯೋರ್ನಿವರ್ತನಂ।
01222003c ಮೃತ್ಯುರ್ನೋ ಬಿಲವಾಸಿಭ್ಯೋ ಭವೇನ್ಮಾತರಸಂಶಯಂ।।

ಗಾಳಿಯು ಹಿಂದಿರುಗಿದ ಹಾಗೆ ಕಾಣುತ್ತದೆ. ಅಗ್ನಿಯು ಇಲ್ಲಿಗೇ ಬರುತ್ತಿದ್ದಾನೆ ಎನ್ನುವುದರಲ್ಲಿ ಸಂಶಯವಿಲ್ಲ. ಮಾತಾ! ಬಿಲದಲ್ಲಿ ವಾಸಿಸುವವರಿಂದ ನಮಗೆ ಮೃತ್ಯು ಆಗುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

01222004a ನಿಃಸಂಶಯಾತ್ಸಂಶಯಿತೋ ಮೃತ್ಯುರ್ಮಾತರ್ವಿಶಿಷ್ಯತೇ।
01222004c ಚರ ಖೇ ತ್ವಂ ಯಥಾನ್ಯಾಯಂ ಪುತ್ರಾನ್ವೇತ್ಸ್ಯಸಿ ಶೋಭನಾನ್।

ಮಾತಾ! ಸಂಶಯವಿದ್ದವರನ್ನು ಸಾವು ಗೆಲ್ಲುತ್ತದೆ ಎನ್ನುವುದು ನಿಃಸಂಶಯ. ಈಗ ನೀನು ಆಕಾಶಕ್ಕೆ ಹಾರು. ನಮಗಿಂತಲೂ ಸುಂದರ ಪುತ್ರರನ್ನು ಪಡೆಯುವೆ.”

01222005 ಜರಿತೋವಾಚ।
01222005a ಅಹಂ ವೈ ಶ್ಯೇನಮಾಯಾಂತಮದ್ರಾಕ್ಷಂ ಬಿಲಮಂತಿಕಾತ್।
01222005c ಸಂಚರಂತಂ ಸಮಾದಾಯ ಜಹಾರಾಖುಂ ಬಿಲಾದ್ಬಲೀ।।

ಜರಿತೆಯು ಹೇಳಿದಳು: “ಆ ಬಲಶಾಲಿ ಗಿಡುಗವು ಬಿಲದ ಹತ್ತಿರ ಬಂದಿದ್ದುದನ್ನು, ಹತ್ತಿರ ಸುಳಿದಾಡಿದ್ದುದನ್ನು, ಮತ್ತು ಇಲಿಯನ್ನು ಹಿಡಿದು ಬಿಲದಿಂದ ಎತ್ತಿಕೊಂಡು ಹಾರಿ ಹೋಗಿದ್ದುದನ್ನು ನಾನೇ ನೋಡಿದ್ದೇನೆ.

01222006a ತಂ ಪತಂತಮಹಂ ಶ್ಯೇನಂ ತ್ವರಿತಾ ಪೃಷ್ಠತೋಽನ್ವಗಾಂ।
01222006c ಆಶಿಷೋಽಸ್ಯ ಪ್ರಯುಂಜಾನಾ ಹರತೋ ಮೂಷಕಂ ಬಿಲಾತ್।

ಅದು ಹಾರಿದ ತಕ್ಷಣವೇ ಆ ಗಿಡುಗದ ಹಿಂದೆ ನಾನೂ ಹಾರಿಹೋದೆ ಮತ್ತು ಆ ಬಿಲದಿಂದ ಇಲಿಯನ್ನು ತೆಗೆದುಕೊಂಡು ಹೋಗಿದ್ದುದಕ್ಕೆ ನಾನು ಅದಕ್ಕೆ ಆಶೀರ್ವದಿಸಿದೆ.

01222007a ಯೋ ನೋ ದ್ವೇಷ್ಟಾರಮಾದಾಯ ಶ್ಯೇನರಾಜ ಪ್ರಧಾವಸಿ।
01222007c ಭವ ತ್ವಂ ದಿವಮಾಸ್ಥಾಯ ನಿರಮಿತ್ರೋ ಹಿರಣ್ಮಯಃ।

“ನಮ್ಮ ವೈರಿಯನ್ನು ಎತ್ತಿಕೊಂಡು ಹಾರಿ ಹೋಗುತ್ತಿರುವ ಶ್ವೇನರಾಜನೇ! ನೀನು ನಿರಮಿತ್ರ ಹಿರಣ್ಮಯ ದಿವವನ್ನು ಹೊಂದು!”

01222008a ಯದಾ ಸ ಭಕ್ಷಿತಸ್ತೇನ ಕ್ಷುಧಿತೇನ ಪತತ್ರಿಣಾ।
01222008c ತದಾಹಂ ತಮನುಜ್ಞಾಪ್ಯ ಪ್ರತ್ಯುಪಾಯಾಂ ಗೃಹಾನ್ಪ್ರತಿ।

ಹಸಿವೆಯಿಂದಿದ್ದ ಆ ಪಕ್ಷಿಯು ಅದನ್ನು ತಿಂದ ಬಳಿಕ ಅದರ ಅನುಜ್ಞೆಯನ್ನು ಪಡೆದು ನನ್ನ ಮನೆಗೆ ಹಿಂದಿರುಗಿದೆನು.

01222009a ಪ್ರವಿಶಧ್ವಂ ಬಿಲಂ ಪುತ್ರಾ ವಿಶ್ರಬ್ಧಾ ನಾಸ್ತಿ ವೋ ಭಯಂ।
01222009c ಶ್ಯೇನೇನ ಮಮ ಪಶ್ಯಂತ್ಯಾ ಹೃತ ಆಖುರ್ನ ಸಂಶಯಃ।।

ಪುತ್ರರೇ! ವಿಶ್ವಾಸದಿಂದ ಬಿಲವನ್ನು ಪ್ರವೇಶಿಸಿ. ಭಯಪಡಬೇಕಾದದ್ದು ಏನೂ ಇಲ್ಲ. ಗಿಡುಗವು ಇಲಿಯನ್ನು ಎತ್ತಿಕೊಂಡು ಹೋಗಿದ್ದುದನ್ನು ನಾನು ನೋಡಿದ್ದೇನೆ. ಅದರಲ್ಲಿ ಸಂಶಯವೇ ಇಲ್ಲ.”

01222010 ಶಾಂಙೃಕಾ ಊಚುಃ।
01222010a ನ ವಿದ್ಮ ವೈ ವಯಂ ಮಾತರ್ಹೃತಮಾಖುಮಿತಃ ಪುರಾ।
01222010c ಅವಿಜ್ಞಾಯ ನ ಶಕ್ಷ್ಯಾಮೋ ಬಿಲಮಾವಿಶತುಂ ವಯಂ।।

ಸಾರಂಗಗಳು ಹೇಳಿದವು: “ಮಾತಾ! ಇಲಿಯನ್ನು ಎತ್ತಿಕೊಂಡು ಹೋಗಿದ್ದುದು ನಮಗೆ ತಿಳಿದಿಲ್ಲ. ಅದನ್ನು ತಿಳಿಯದೇ ನಾವು ಬಿಲವನ್ನು ಪ್ರವೇಶಿಸುವುದು ಅಶಖ್ಯ.”

01222011 ಜರಿತೋವಾಚ।
01222011a ಅಹಂ ಹಿ ತಂ ಪ್ರಜಾನಾಮಿ ಹೃತಂ ಶ್ಯೇನೇನ ಮೂಷಕಂ।
01222011c ಅತ ಏವ ಭಯಂ ನಾಸ್ತಿ ಕ್ರಿಯತಾಂ ವಚನಂ ಮಮ।।

ಜರಿತೆಯು ಹೇಳಿದಳು: “ಆದರೆ ಗಿಡುಗವು ಇಲಿಯನ್ನು ಎತ್ತಿಕೊಂಡು ಹೋಯಿತು ಎಂದು ನನಗೆ ಸಂಪೂರ್ಣ ತಿಳಿದಿದೆ. ಆದುದರಿಂದ ಭಯಪಡಬೇಕಾಗಿದ್ದುದು ಇಲ್ಲ. ನಾನು ಹೇಳಿದಂತೆ ಮಾಡಿರಿ.”

01222012 ಶಾಂಙೃಕಾ ಊಚುಃ।

01222012a ನ ತ್ವಂ ಮಿಥ್ಯೋಪಚಾರೇಣ ಮೋಕ್ಷಯೇಥಾ ಭಯಂ ಮಹತ್।

01222012c ಸಮಾಕುಲೇಷು ಜ್ಞಾನೇಷು ನ ಬುದ್ಧಿಕೃತಮೇವ ತತ್।।

ಸಾರಂಗಗಳು ಹೇಳಿದವು: “ಮಿಥ್ಯೋಪಚಾರದಿಂದ ನೀನು ನಮ್ಮ ಈ ಮಹಾಭಯವನ್ನು ಹೋಗಲಾಡಿಸಲಾರೆ. ಒಂದೇ ಕುಲದ ಬಾಂಧವರೊಡನೆ ಬುದ್ಧಿವಂತಿಕೆಯನ್ನು ತೋರಿಸಬೇಡ.

01222013a ನ ಚೋಪಕೃತಮಸ್ಮಾಭಿರ್ನ ಚಾಸ್ಮಾನ್ವೇತ್ಥ ಯೇ ವಯಂ।
01222013c ಪೀಡ್ಯಮಾನಾ ಭರಸ್ಯಸ್ಮಾನ್ಕಾ ಸತೀ ಕೇ ವಯಂ ತವ।।

ನಾವು ನಿನಗೆ ಉಪಕಾರವೇನನ್ನೂ ಮಾಡಿಲ್ಲ. ನೀನು ನಮ್ಮನ್ನು ಸರಿಯಾಗಿ ತಿಳಿದೂ ಇಲ್ಲ. ಪೀಡಿತರಾದ ನಮ್ಮನ್ನು ನೋಡಿಕೊಳ್ಳುತ್ತಿರುವ ಸತೀ ನೀನು ಯಾರು?

01222014a ತರುಣೀ ದರ್ಶನೀಯಾಸಿ ಸಮರ್ಥಾ ಭರ್ತುರೇಷಣೇ।
01222014c ಅನುಗಚ್ಛ ಸ್ವಭರ್ತಾರಂ ಪುತ್ರಾನಾಪ್ಸ್ಯಸಿ ಶೋಭನಾನ್।

ತರುಣಿಯಾಗಿದ್ದೀಯೆ, ಸುಂದರಿಯಾಗಿದ್ದೀಯೆ ಮತ್ತು ಭರ್ತುವಿನ ಅರ್ಹಳಾಗಿರುವೆ. ನಿನ್ನ ಪತಿಯ ಹಿಂದೆ ಹೋಗು. ಸುಂದರ ಪುತ್ರರನ್ನು ಪಡೆಯುವೆ.

01222015a ವಯಮಪ್ಯಗ್ನಿಮಾವಿಶ್ಯ ಲೋಕಾನ್ಪ್ರಾಪ್ಸ್ಯಾಮಹೇ ಶುಭಾನ್।
01222015c ಅಥಾಸ್ಮಾನ್ನ ದಹೇದಗ್ನಿರಾಯಾಸ್ತ್ವಂ ಪುನರೇವ ನಃ।।

ನಾವು ಅಗ್ನಿಯನ್ನು ಪ್ರವೇಶಿಸಿ ಶುಭಲೋಕಗಳನ್ನು ಪಡೆಯುತ್ತೇವೆ. ಅಥವಾ ಒಂದುವೇಳೆ ಅಗ್ನಿಯು ನಮ್ಮನ್ನು ಸುಡದಿದ್ದರೆ ನೀನು ಪುನಃ ನಮ್ಮಲ್ಲಿಗೆ ಹಿಂದಿರುಗಿ ಬರಬಹುದು.””

01222016 ವೈಶಂಪಾಯನ ಉವಾಚ।
01222016a ಏವಮುಕ್ತಾ ತತಃ ಶಾಂಙ್ರೀ ಪುತ್ರಾನುತ್ಸೃಜ್ಯ ಖಾಂಡವೇ।
01222016c ಜಗಾಮ ತ್ವರಿತಾ ದೇಶಂ ಕ್ಷೇಮಮಗ್ನೇರನಾಶ್ರಯಂ।।

ವೈಶಂಪಾಯನನು ಹೇಳಿದನು: “ಈ ಮಾತುಗಳನ್ನು ಕೇಳಿದ ಆ ಸಾರಂಗಿಯು ಪುತ್ರರನ್ನು ಖಾಂಡವದಲ್ಲಿಯೇ ಬಿಟ್ಟು ಅಗ್ನಿಯಿಲ್ಲದ ಸುರಕ್ಷಿತ ಸ್ಥಳಕ್ಕೆ ಹಾರಿ ಹೋದಳು.

01222017a ತತಸ್ತೀಕ್ಷ್ಣಾರ್ಚಿರಭ್ಯಾಗಾಜ್ಜ್ವಲಿತೋ ಹವ್ಯವಾಹನಃ।
01222017c ಯತ್ರ ಶಾಙೃ ಬಭೂವುಸ್ತೇ ಮಂದಪಾಲಸ್ಯ ಪುತ್ರಕಾಃ।।

ನಂತರ ತೀಕ್ಷ್ಣ ಜ್ವಾಲೆಗಳಿಂದ ಉರಿಯುತ್ತಿರುವ ಹವ್ಯವಾಹನನು ಮಂದಪಾಲನ ಪುತ್ರರಾದ ಸಾರಂಗಗಳು ಇರುವಲ್ಲಿಗೆ ಬಂದನು.

01222018a ತೇ ಶಾಙೃ ಜ್ವಲನಂ ದೃಷ್ಟ್ವಾ ಜ್ವಲಿತಂ ಸ್ವೇನ ತೇಜಸಾ।
01222018c ಜರಿತಾರಿಸ್ತತೋ ವಾಚಂ ಶ್ರಾವಯಾಮಾಸ ಪಾವಕಂ।।

ತನ್ನ ತೇಜಸ್ಸಿನಿಂದ ಜ್ವಲಿಸುತ್ತಿರುವ ಜ್ವಲನನನ್ನು ನೋಡಿ ಸಾರಂಗ ಜರಿತಾರನು ಪಾವಕನಿಗೆ ಕೇಳುವಹಾಗೆ ಈ ಮಾತುಗಳನ್ನಾಡಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಖಾಂಡವದಾಹಪರ್ವಣಿ ಶಾಂಙೃಕೋಪಾಖ್ಯಾನೇ ದ್ವಾವಿಂಶತ್ಯಾಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಖಾಂಡವದಾಹಪರ್ವದಲ್ಲಿ ಶಾಂಙೃಕೋಪಾಖ್ಯಾನದಲ್ಲಿ ಇನ್ನೂರಾ ಇಪ್ಪತ್ತೆರಡನೆಯ ಅಧ್ಯಾಯವು.