221 ಶಾಂಙೃಕೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಖಾಂಡವದಾಹ ಪರ್ವ

ಅಧ್ಯಾಯ 221

ಸಾರ

ವಿಹ್ವಲರಾದ ಜರಿತೆ ಮತ್ತು ಮಕ್ಕಳು ರೋದಿಸುವುದು (1-21).

01221001 ವೈಶಂಪಾಯನ ಉವಾಚ।
01221001a ತತಃ ಪ್ರಜ್ವಲಿತೇ ಶುಕ್ರೇ ಶಾಂಙ್ರಕಾಸ್ತೇ ಸುದುಃಖಿತಾಃ।
01221001c ವ್ಯಥಿತಾಃ ಪರಮೋದ್ವಿಗ್ನಾ ನಾಧಿಜಗ್ಮುಃ ಪರಾಯಣಂ।।

ವೈಶಂಪಾಯನನು ಹೇಳಿದನು: “ಅಗ್ನಿಯು ಪ್ರಜ್ವಲಿಸುತ್ತಿರುವಾಗ ಸುದುಃಖಿತ ಸಾರಂಗಗಳು ವ್ಯಥಿತ-ಪರಮೋದ್ವಿಗ್ನರಾಗಿ ವಿಮೋಚನೆಯ ದಾರಿಯನ್ನೇ ಕಾಣದಾದರು.

01221002a ನಿಶಾಮ್ಯ ಪುತ್ರಕಾನ್ಬಾಲಾನ್ಮಾತಾ ತೇಷಾಂ ತಪಸ್ವಿನೀ।
01221002c ಜರಿತಾ ದುಃಖಸಂತಪ್ತಾ ವಿಲಲಾಪ ನರೇಶ್ವರ।।

ನರೇಶ್ವರ! ಬಾಲ ಪುತ್ರರನ್ನು ನೋಡಿ ಅವರ ಮಾತೆ ತಪಸ್ವಿನೀ ಜರಿತೆಯು ದುಃಖಸಂತಪ್ತಳಾಗಿ ವಿಲಪಿಸಿದಳು.

01221003a ಅಯಮಗ್ನಿರ್ದಹನ್ಕಕ್ಷಮಿತ ಆಯಾತಿ ಭೀಷಣಃ।
01221003c ಜಗತ್ಸಂದೀಪಯನ್ಭೀಮೋ ಮಮ ದುಃಖವಿವರ್ಧನಃ।।

“ಈ ಭೀಷಣ ಅಗ್ನಿಯು ಹುಲ್ಲುಗಳನ್ನು ಸುಡುತ್ತಾ, ಜಗತ್ತನೇ ಉರಿಸುತ್ತಾ ಭಯಂಕರನಾಗಿ ಇಲ್ಲಿಗೇ ಬರುತ್ತಿದ್ದಾನೆ ಮತ್ತು ನನ್ನ ದುಃಖವನ್ನು ಹೆಚ್ಚಿಸುತ್ತಿದ್ದಾನೆ.

01221004a ಇಮೇ ಚ ಮಾಂ ಕರ್ಷಯಂತಿ ಶಿಶವೋ ಮಂದಚೇತಸಃ।
01221004c ಅಬರ್ಹಾಶ್ಚರಣೈರ್ಹೀನಾಃ ಪೂರ್ವೇಷಾಂ ನಃ ಪರಾಯಣಂ।
01221004e ತ್ರಾಸಯಂಶ್ಚಾಯಮಾಯಾತಿ ಲೇಲಿಹಾನೋ ಮಹೀರುಹಾನ್।।

ಕೈಕಾಲುಗಳಿಲ್ಲದ ಆದರೂ ನಮ್ಮ ಪೂರ್ವಜರ ಪರಾಯಣರಾದ ಈ ಮಂದಚೇತಸ ಶಿಶುಗಳು ನನ್ನನ್ನು ಎಳೆಯುತ್ತಿವೆ. ಇಗೋ! ಮರಗಳನ್ನು ನೆಕ್ಕುತ್ತಾ ಈ ಭೀಷಣ ಅಗ್ನಿಯು ಬರುತ್ತಿದೆ!

01221005a ಅಶಕ್ತಿಮತ್ತ್ವಾಚ್ಚ ಸುತಾ ನ ಶಕ್ತಾಃ ಸರಣೇ ಮಮ।
01221005c ಆದಾಯ ಚ ನ ಶಕ್ತಾಸ್ಮಿ ಪುತ್ರಾನ್ಸರಿತುಮನ್ಯತಃ।।

ಅಶಕ್ತರಾದ ನನ್ನ ಈ ಮಕ್ಕಳು ತಪ್ಪಿಸಿಕೊಳ್ಳಲು ಶಕ್ತರಿಲ್ಲ. ನಾನೇ ಈ ಮಕ್ಕಳನ್ನು ಎತ್ತಿಕೊಂಡು ಹೋಗೋಣವೆಂದರೆ ನನಗೂ ದಾರಿಯಿಲ್ಲ!

01221006a ನ ಚ ತ್ಯಕ್ತುಮಹಂ ಶಕ್ತಾ ಹೃದಯಂ ದೂಯತೀವ ಮೇ।
01221006c ಕಂ ನು ಜಹ್ಯಾಮಹಂ ಪುತ್ರಂ ಕಮಾದಾಯ ವ್ರಜಾಮ್ಯಹಂ।।

ನಾನು ಇವರನ್ನು ಇಲ್ಲಿಯೇ ಬಿಟ್ಟುಹೋಗಲೂ ಸಾಧ್ಯವಿಲ್ಲ. ನನ್ನ ಹೃದಯವು ಎರಡಾಗಿದೆ. ನನ್ನ ಮಕ್ಕಳಲ್ಲಿ ಯಾರನ್ನು ಬಿಟ್ಟು ಹೋಗಲಿ ಯಾರನ್ನು ಕರೆದುಕೊಂಡು ಹೋಗಲಿ?

01221007a ಕಿಂ ನು ಮೇ ಸ್ಯಾತ್ಕೃತಂ ಕೃತ್ವಾ ಮನ್ಯಧ್ವಂ ಪುತ್ರಕಾಃ ಕಥಂ।
01221007c ಚಿಂತಯಾನಾ ವಿಮೋಕ್ಷಂ ವೋ ನಾಧಿಗಚ್ಛಾಮಿ ಕಿಂ ಚನ।
01221007e ಚಾದಯಿತ್ವಾ ಚ ವೋ ಗಾತ್ರೈಃ ಕರಿಷ್ಯೇ ಮರಣಂ ಸಹ।।

ನಾನು ಏನುತಾನೆ ಮಾಡಬಲ್ಲೆ? ಪುತ್ರರೇ! ನಿಮ್ಮ ಅಭಿಪ್ರಾಯಗಳೇನು? ನಿಮ್ಮ ವಿಮೋಚನೆಗೆ ಎಷ್ಟು ಚಿಂತಿಸಿದರೂ ನನಗೆ ದಾರಿಯೇ ತೋಚುತ್ತಿಲ್ಲ. ನನ್ನ ದೇಹದಿಂದ ನಿಮ್ಮನ್ನು ಮುಚ್ಚಿ ನಿಮ್ಮೊಂದಿಗೆ ನಾನೂ ಸಾಯುತ್ತೇನೆ.

01221008a ಜರಿತಾರೌ ಕುಲಂ ಹೀದಂ ಜ್ಯೇಷ್ಠತ್ವೇನ ಪ್ರತಿಷ್ಠಿತಂ।
01221008c ಸಾರಿಸೃಕ್ವಃ ಪ್ರಜಾಯೇತ ಪಿತೄಣಾಂ ಕುಲವರ್ಧನಃ।।
01221009a ಸ್ತಂಬಮಿತ್ರಸ್ತಪಃ ಕುರ್ಯಾದ್ದ್ರೋಣೋ ಬ್ರಹ್ಮವಿದುತ್ತಮಃ।
01221009c ಇತ್ಯೇವಮುಕ್ತ್ವಾ ಪ್ರಯಯೌ ಪಿತಾ ವೋ ನಿರ್ಘೃಣಃ ಪುರಾ।।

ಜ್ಯೇಷ್ಠ ಜರಿತಾರಿಯ ಮೇಲೆ ಈ ಕುಲವು ನಿಂತಿದೆ. ಸಾರಿಸೃಕ್ವನು ಪುತ್ರರನ್ನು ಪಡೆದು ಪಿತೃಗಳ ಕುಲವನ್ನು ವರ್ಧಿಸುತ್ತಾನೆ. ಸ್ತಂಬಮಿತ್ರನು ತಪಸ್ವಿಯಾಗುತ್ತಾನೆ ಮತ್ತು ದ್ರೋಣನು ಉತ್ತಮ ಬ್ರಹ್ಮವಿದ್ವಾಂಸನಾಗುತ್ತಾನೆ. ಹಿಂದೆ ಇದೇ ಮಾತುಗಳನ್ನು ಹೇಳಿ ನಿಮ್ಮ ಆ ಕಠೋರ ತಂದೆಯು ಹೊರಟುಹೋದನು.

01221010a ಕಮುಪಾದಾಯ ಶಕ್ಯೇತ ಗಂತುಂ ಕಸ್ಯಾಪದುತ್ತಮಾ।
01221010c ಕಿಂ ನು ಕೃತ್ವಾ ಕೃತಂ ಕಾರ್ಯಂ ಭವೇದಿತಿ ಚ ವಿಃವಲಾ।।
01221011a ನಾಪಶ್ಯತ್ಸ್ವಧಿಯಾ ಮೋಕ್ಷಂ ಸ್ವಸುತಾನಾಂ ತದಾನಲಾತ್।
01221011c ಏವಂ ಬ್ರುವಂತೀಂ ಶಾಂಙೃಸ್ತೇ ಪ್ರತ್ಯೂಚುರಥ ಮಾತರಂ।।

ಯಾರನ್ನು ತೆಗೆದುಕೊಂಡು ಓಡಿ ಹೋಗಲಿ? ಯಾರ ಮೇಲೆ ಈ ಅತಿ ದೊಡ್ಡ ಆಪತ್ತು ಬರುತ್ತದೆ?” ಈ ರೀತಿ ಯಾವುದನ್ನು ಮಾಡುವುದು ಒಳ್ಳೆಯದು ಎಂದು ವಿಹ್ವಲಳಾಗಿ ಅನಲನಿಂದ ತನ್ನ ಸುತರು ಹೇಗೆ ಬಿಡಿಸಿಕೊಳ್ಳಬಹುದು ಎನ್ನುವುದನ್ನು ಕಾಣಲಾರದೇ ಹೋದಳು. ಈ ರೀತಿ ಅವಳು ಹೇಳುತ್ತಿರಲು ಆ ಸಾರಂಗ ಪಕ್ಷಿಗಳು ತಾಯಿಗೆ ಉತ್ತರಿಸಿದವು:

01221012a ಸ್ನೇಹಮುತ್ಸೃಜ್ಯ ಮಾತಸ್ತ್ವಂ ಪತ ಯತ್ರ ನ ಹವ್ಯವಾಟ್।
01221012c ಅಸ್ಮಾಸು ಹಿ ವಿನಷ್ಟೇಷು ಭವಿತಾರಃ ಸುತಾಸ್ತವ।
01221012e ತ್ವಯಿ ಮಾತರ್ವಿನಷ್ಟಾಯಾಂ ನ ನಃ ಸ್ಯಾತ್ಕುಲಸಂತತಿಃ।।

“ಮಾತಾ! ನೀನು ಸ್ನೇಹಭಾವವನ್ನು ತೊರೆದು ಹವ್ಯವಾಹನನು ಇಲ್ಲದೇ ಇರುವ ಸ್ಥಳಕ್ಕೆ ಹೋಗು. ನಾವು ವಿನಷ್ಟರಾದರೂ ನಿನಗೆ ಇನ್ನೂ ಮಕ್ಕಳಾಗುತ್ತವೆ. ಆದರೆ ಮಾತೆಯಾದ ನೀನೇ ವಿನಷ್ಟಳಾದರೆ ಕುಲಸಂತತಿಯು ಇಲ್ಲದಂತಾಗುತ್ತದೆ.

01221013a ಅನ್ವವೇಕ್ಷ್ಯೈತದುಭಯಂ ಕ್ಷಮಂ ಸ್ಯಾದ್ಯತ್ಕುಲಸ್ಯ ನಃ।
01221013c ತದ್ವೈ ಕರ್ತುಂ ಪರಃ ಕಾಲೋ ಮಾತರೇಷ ಭವೇತ್ತವ।।

ಮಾತಾ! ಈ ಎರಡು ಪರಿಣಾಮಗಳ ಕುರಿತು ಯೋಚಿಸಿ ಕುಲದ ಒಳಿತಿಗೆ ಏನನ್ನು ಮಾಡುವುದು ಸರಿಯೆನಿಸುತ್ತದೆಯೋ ಅದನ್ನು ಮಾಡು. ಇದಕ್ಕೆ ಸರಿಯಾದ ಕಾಲವು ಬಂದಿದೆ.

01221014a ಮಾ ವೈ ಕುಲವಿನಾಶಾಯ ಸ್ನೇಹಂ ಕಾರ್ಷೀಃ ಸುತೇಷು ನಃ।
01221014c ನ ಹೀದಂ ಕರ್ಮ ಮೋಘಂ ಸ್ಯಾಲ್ಲೋಕಕಾಮಸ್ಯ ನಃ ಪಿತುಃ।।

ನಿನ್ನ ಸುತರ ಮೇಲಿನ ಸ್ನೇಹದಿಂದ ನಿನ್ನ ಕುಲವಿನಾಶದ ಕಡೆ ಎಳೆದೊಯ್ಯಲ್ಪಡಬೇಡ. ಲೋಕಕಾಮಕ್ಕಾಗಿ ಮಾಡಿದ ಈ ಕಾರ್ಯವು ಎಂದೂ ನಿಷ್ಫಲವಾಗುವುದಿಲ್ಲ.”

01221015 ಜರಿತೋವಾಚ।
01221015a ಇದಮಾಖೋರ್ಬಿಲಂ ಭೂಮೌ ವೃಕ್ಷಸ್ಯಾಸ್ಯ ಸಮೀಪತಃ।
01221015c ತದಾವಿಶಧ್ವಂ ತ್ವರಿತಾ ವಃನೇರತ್ರ ನ ವೋ ಭಯಂ।।

ಜರಿತೆಯು ಹೇಳಿದಳು: “ಈ ವೃಕ್ಷದ ಸಮೀಪದಲ್ಲಿ ಭೂಮಿಯೊಳಗೆ ಒಂದು ಇಲಿಯ ಬಿಲವಿದೆ. ತಕ್ಷಣವೇ ಅದನ್ನು ಪ್ರವೇಶಿಸಿ. ಅಲ್ಲಿ ನಿಮಗೆ ಅಗ್ನಿಯ ಭಯವಿರುವುದಿಲ್ಲ.

01221016a ತತೋಽಹಂ ಪಾಂಸುನಾ ಚಿದ್ರಮಪಿಧಾಸ್ಯಾಮಿ ಪುತ್ರಕಾಃ।
01221016c ಏವಂ ಪ್ರತಿಕೃತಂ ಮನ್ಯೇ ಜ್ವಲತಃ ಕೃಷ್ಣವರ್ತ್ಮನಃ।।

ಮಕ್ಕಳೇ! ಆಗ ನಾನು ಮಣ್ಣಿನಿಂದ ಬಿಲದ ಬಾಯಿಯನ್ನು ಮುಚ್ಚುತ್ತೇನೆ. ಹೀಗೆ ಜ್ವಲಿಸುತ್ತಿರುವ ಕೃಷ್ಣವರ್ತ್ಮನನಿಂದ ತಪ್ಪಿಸಿಕೊಳ್ಳಬಹುದು.

01221017a ತತ ಏಷ್ಯಾಮ್ಯತೀತೇಽಗ್ನೌ ವಿಹರ್ತುಂ ಪಾಂಸುಸಂಚಯಂ।
01221017c ರೋಚತಾಮೇಷ ವೋಪಾಯೋ ವಿಮೋಕ್ಷಾಯ ಹುತಾಶನಾತ್।।

ಅಗ್ನಿಯು ಆರಿಹೋದ ನಂತರ ಮಣ್ಣಿನ ರಾಶಿಯನ್ನು ತೆಗೆಯಲು ನಾನು ಹಿಂದಿರುಗಿ ಬರುತ್ತೇನೆ. ಹುತಾಶನನಿಂದ ತಪ್ಪಿಸಿಕೊಳ್ಳಲು ಈ ಉಪಾಯವನ್ನು ನೀವು ಒಪ್ಪಿಕೊಳ್ಳುತ್ತೀರಾ?”

01221018 ಶಾಂಙೃಕಾ ಊಚುಃ।
01221018a ಅಬರ್ಹಾನ್ಮಾಂಸಭೂತಾನ್ನಃ ಕ್ರವ್ಯಾದಾಖುರ್ವಿನಾಶಯೇತ್।
01221018c ಪಶ್ಯಮಾನಾ ಭಯಮಿದಂ ನ ಶಕ್ಷ್ಯಾಮೋ ನಿಷೇವಿತುಂ।।

ಸಾರಂಗಗಳು ಹೇಳಿದವು: “ರೆಕ್ಕೆಗಳೇ ಇಲ್ಲದ ಮಾಂಸದ ಮುದ್ದೆಗಳು ನಾವು. ಮಾಂಸಾಹಾರಿ ಇಲಿಯು ನಮ್ಮನ್ನು ವಿನಾಶಗೊಳಿಸುತ್ತದೆ. ಈ ಭಯವನ್ನು ಕಂಡರೆ ಅಲ್ಲಿ ನಾವು ಉಳಿಯಲು ಸಾಧ್ಯವಿಲ್ಲ.

01221019a ಕಥಮಗ್ನಿರ್ನ ನೋ ದಹ್ಯಾತ್ಕಥಮಾಖುರ್ನ ಭಕ್ಷಯೇತ್।
01221019c ಕಥಂ ನ ಸ್ಯಾತ್ಪಿತಾ ಮೋಘಃ ಕಥಂ ಮಾತಾ ಧ್ರಿಯೇತ ನಃ।।

ಅಗ್ನಿಯು ನಮ್ಮನ್ನು ಹೇಗೆ ಸುಡದೇ ಇರುತ್ತಾನೆ ಅಥವಾ ಹೇಗೆ ಇಲಿಯು ನಮ್ಮನ್ನು ಭಕ್ಷಿಸದೇ ಇರುತ್ತದೆ? ತಂದೆಗೆ ಸೋಲಲ್ಲದೇ ಇನ್ನೇನಾದರೂ ಆಗುವುದು ಹೇಗೆ? ತಾಯಿಯು ಉಳಿಯುವುದಾದರೂ ಹೇಗೆ?

01221020a ಬಿಲ ಆಖೋರ್ವಿನಾಶಃ ಸ್ಯಾದಗ್ನೇರಾಕಾಶಚಾರಿಣಾಂ।
01221020c ಅನ್ವವೇಕ್ಷ್ಯೈತದುಭಯಂ ಶ್ರೇಯಾನ್ದಾಹೋ ನ ಭಕ್ಷಣಂ।।

ಪಕ್ಷಿಗಳು ಬೆಂಕಿಯಲ್ಲಿ ಅಥವಾ ಬಿಲದಲ್ಲಿ ಇಲಿಯಿಂದ ಸಾವನ್ನು ಕಾಣುತ್ತವೆ. ಇವೆರಡನ್ನೂ ನೋಡಿದರೆ ಸುಟ್ಟುಹೋಗುವುದು ತಿನ್ನಲ್ಪಡುವುದಕ್ಕಿಂತ ಒಳ್ಳೆಯದು.

01221021a ಗರ್ಹಿತಂ ಮರಣಂ ನಃ ಸ್ಯಾದಾಖುನಾ ಖಾದತಾ ಬಿಲೇ।
01221021c ಶಿಷ್ಟಾದಿಷ್ಟಃ ಪರಿತ್ಯಾಗಃ ಶರೀರಸ್ಯ ಹುತಾಶನಾತ್।।

ಬಿಲದಲ್ಲಿ ಇಲಿಯಿಂದ ತಿನ್ನಲ್ಪಟ್ಟು ಸತ್ತರೆ ಅದು ಹೀನ ಮರಣವಾಗುತ್ತದೆ. ಆದರೆ ಹುತಾಶನನಲ್ಲಿ ಶರೀರ ಪರಿತ್ಯಾಗವನ್ನು ಶಿಷ್ಟರು ಒಳ್ಳೆಯದೆಂದು ಹೇಳುತ್ತಾರೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಖಾಂಡವದಾಹಪರ್ವಣಿ ಶಾಂಙೃಕೋಪಾಖ್ಯಾನೇ ಏಕವಿಶಂತ್ಯಾಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಖಾಂಡವದಾಹಪರ್ವದಲ್ಲಿ ಶಾಂಙೃಕೋಪಾಖ್ಯಾನದಲ್ಲಿ ಇನ್ನೂರಾ ಇಪ್ಪತ್ತೊಂದನೆಯ ಅಧ್ಯಾಯವು.