ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಖಾಂಡವದಾಹ ಪರ್ವ
ಅಧ್ಯಾಯ 220
ಸಾರ
ಖಾಂಡವದಹನದಲ್ಲಿ ಸಾರಂಗಗಳು ಏಕೆ ಸಾಯಲಿಲ್ಲ ಎನ್ನುವ ಜನಮೇಜಯನ ಪ್ರಶ್ನೆಗೆ ವೈಶಂಪಾಯನನು ಉತ್ತರಿಸಿದ್ದುದು (1-5). ಸಂತಾನವಿಲ್ಲದೇ ಇರುವುದರಿಂದ ತನಗೆ ಲೋಕಗಳು ದೊರೆಯುತ್ತಿಲ್ಲವೆನ್ನುವುದನ್ನು ಋಷಿ ಮಂದಪಾಲನು ದೇವತೆಗಳಿಂದ ತಿಳಿಯುವುದು (6-14). ಅವನು ಶಾಂಗೃಕೆ ಜರಿತೆಯಲ್ಲಿ ನಾಲ್ವರು ಮಕ್ಕಳನ್ನು ಪಡೆದು, ಖಾಂಡವದಹನದ ಸಮಯದಲ್ಲಿ ಅಗ್ನಿಯನ್ನು ಸ್ತುತಿಸಿದುದು; ಅಗ್ನಿಯು ಅವನ ಮಕ್ಕಳನ್ನು ಸುಡುವುದಿಲ್ಲವೆಂದು ಭರವಸೆಯನ್ನಿತ್ತುದುದು (15-32).
01220001 ಜನಮೇಜಯ ಉವಾಚ।
01220001a ಕಿಮರ್ಥಂ ಶಾಂಙೃಕಾನಗ್ನಿರ್ನ ದದಾಹ ತಥಾಗತೇ।
01220001c ತಸ್ಮಿನ್ವನೇ ದಹ್ಯಮಾನೇ ಬ್ರಹ್ಮನ್ನೇತದ್ವದಾಶು ಮೇ।।
ಜನಮೇಜಯನು ಹೇಳಿದನು: “ಬ್ರಹ್ಮನ್! ಆ ವನವು ಉರಿಯುತ್ತಿರುವಾಗ ಅಗ್ನಿಯು ಸಾರಂಗಗಳನ್ನು ಏಕೆ ಸುಡಲಿಲ್ಲ ಎನ್ನುವುದನ್ನು ನಡೆದಹಾಗೆ ಹೇಳಬೇಕು.
01220002a ಅದಾಹೇ ಹ್ಯಶ್ವಸೇನಸ್ಯ ದಾನವಸ್ಯ ಮಯಸ್ಯ ಚ।
01220002c ಕಾರಣಂ ಕೀರ್ತಿತಂ ಬ್ರಹ್ಮಂಶಾಂಙೃಕಾನಾಂ ನ ಕೀರ್ತಿತಂ।।
ಬ್ರಹ್ಮನ್! ಅಶ್ವಸೇನ ಮತ್ತು ದಾನವ ಮಯರು ಏಕೆ ಸುಟ್ಟುಹೋಗಲಿಲ್ಲ ಎನ್ನುವುದಕ್ಕೆ ಕಾರಣವನ್ನು ಹೇಳಿದ್ದೀಯೆ. ಆದರೆ ಸಾರಂಗಗಳ ಕುರಿತು ಹೇಳಲಿಲ್ಲ.
01220003a ತದೇತದದ್ಭುತಂ ಬ್ರಹ್ಮಂಶಾಂಙೃರ್ನಾಮವಿನಾಶನಂ।
01220003c ಕೀರ್ತಯಸ್ವಾಗ್ನಿಸಮ್ಮರ್ದೇ ಕಥಂ ತೇ ನ ವಿನಾಶಿತಾಃ।।
ಬ್ರಹ್ಮನ್! ಸಾರಂಗಗಳು ನಾಶಹೊಂದದೇ ಇದ್ದುದು ಒಂದು ಅದ್ಭುತವೇ ಸರಿ. ಆ ಅಗ್ನಿಸಮ್ಮರ್ದದಲ್ಲಿ ಅವುಗಳು ಹೇಗೆ ವಿನಾಶವಾಗಲಿಲ್ಲ ಎನ್ನುವುದನ್ನು ಹೇಳು.”
01220004 ವೈಶಂಪಾಯನ ಉವಾಚ।
01220004a ಯದರ್ಥಂ ಶಾಂಙೃಕಾನಗ್ನಿರ್ನ ದದಾಹ ತಥಾಗತೇ।
01220004c ತತ್ತೇ ಸರ್ವಂ ಯಥಾವೃತ್ತಂ ಕಥಯಿಷ್ಯಾಮಿ ಭಾರತ।।
ವೈಶಂಪಾಯನನು ಹೇಳಿದನು: “ಭಾರತ! ಆಗ ಅಗ್ನಿಯು ಸಾರಂಗಗಳನ್ನು ಏಕೆ ಸುಡಲಿಲ್ಲ ಎನ್ನುವುದನ್ನು ಸರ್ವವಾಗಿ ಯಥಾವತ್ತಾಗಿ ಹೇಳುತ್ತೇನೆ.
01220005a ಧರ್ಮಜ್ಞಾನಾಂ ಮುಖ್ಯತಮಸ್ತಪಸ್ವೀ ಸಂಶಿತವ್ರತಃ।
01220005c ಆಸೀನ್ಮಹರ್ಷಿಃ ಶ್ರುತವಾನ್ಮಂದಪಾಲ ಇತಿ ಶ್ರುತಃ।।
ಮಂದಪಾಲನೆಂದು ಪ್ರಸಿದ್ಧ ಧರ್ಮಜ್ಞರಲ್ಲಿ ಮುಖ್ಯತಮ ಸಂಶಿತವ್ರತ ತಪಸ್ವಿ ಮಹರ್ಷಿಯು ಇದ್ದನು.
01220006a ಸ ಮಾರ್ಗಮಾಸ್ಥಿತೋ ರಾಜನ್ನೃಷೀಣಾಮೂರ್ಧ್ವರೇತಸಾಂ।
01220006c ಸ್ವಾಧ್ಯಾಯವಾನ್ಧರ್ಮರತಸ್ತಪಸ್ವೀ ವಿಜಿತೇಂದ್ರಿಯಃ।।
ರಾಜನ್! ಊರ್ಧ್ವರೇತಸ ಋಷಿಗಳ ಮಾರ್ಗವನ್ನು ಹಿಡಿದಿದ್ದ ಆ ವಿಜಿತೇಂದ್ರಿಯ ತಪಸ್ವಿಯು ಧರ್ಮರತನಾಗಿ ಸ್ವಾಧ್ಯಾಯದಲ್ಲಿ ನಿರತನಾಗಿದ್ದನು.
01220007a ಸ ಗತ್ವಾ ತಪಸಃ ಪಾರಂ ದೇಹಮುತ್ಸೃಜ್ಯ ಭಾರತ।
01220007c ಜಗಾಮ ಪಿತೃಲೋಕಾಯ ನ ಲೇಭೇ ತತ್ರ ತತ್ಫಲಂ।
ಭಾರತ! ತಪಸ್ಸಿನ ಪರಾಕಾಷ್ಟೆಯನ್ನು ತಲುಪಿದ ಅವನು ದೇಹವನ್ನು ತೊರೆದು ಪಿತೃಲೋಕವನ್ನು ಸೇರಿದನು. ಆದರೆ ಅಲ್ಲಿ ಅವನಿಗೆ ಫಲವು ದೊರೆಯಲಿಲ್ಲ.
01220008a ಸ ಲೋಕಾನಫಲಾನ್ದೃಷ್ಟ್ವಾ ತಪಸಾ ನಿರ್ಜಿತಾನಪಿ।
01220008c ಪಪ್ರಚ್ಛ ಧರ್ಮರಾಜಸ್ಯ ಸಮೀಪಸ್ಥಾನ್ದಿವೌಕಸಃ।।
ಗಳಿಸಿದ್ದರೂ ತನ್ನ ತಪಸ್ಸಿನಿಂದ ಫಲವು ದೊರೆಯದೇ ಇದ್ದ ಲೋಕಗಳನ್ನು ಕಂಡ ಅವನು ಧರ್ಮರಾಜನ ಸಮೀಪದಲ್ಲಿ ಕುಳಿತಿದ್ದ ದಿವೌಕಸರಿಗೆ ಕೇಳಿದನು:
01220009a ಕಿಮರ್ಥಮಾವೃತಾ ಲೋಕಾ ಮಮೈತೇ ತಪಸಾರ್ಜಿತಾಃ।
01220009c ಕಿಂ ಮಯಾ ನ ಕೃತಂ ತತ್ರ ಯಸ್ಯೇದಂ ಕರ್ಮಣಃ ಫಲಂ।।
“ನಾನು ತಪಸ್ಸಿನಿಂದ ಗಳಿಸಿದ ಈ ಲೋಕಗಳು ನನಗೆ ಏಕೆ ಮುಚ್ಚಿಹೋಗಿವೆ? ನಾನು ಏನನ್ನು ಮಾಡಿಲ್ಲವೆಂದು ಇದು ನನ್ನ ಕರ್ಮ ಫಲವಾಗಿದೆ?
01220010a ತತ್ರಾಹಂ ತತ್ಕರಿಷ್ಯಾಮಿ ಯದರ್ಥಮಿದಮಾವೃತಂ।
01220010c ಫಲಮೇತಸ್ಯ ತಪಸಃ ಕಥಯಧ್ವಂ ದಿವೌಕಸಃ।।
ಯಾವುದರಿಂದಾಗಿ ನನ್ನ ತಪಸ್ಸಿನ ಫಲವು ದೊರೆಯದೇ ಇದೆಯೋ ಅದನ್ನು ಮಾಡುತ್ತೇನೆ. ದಿವೌಕಸರೇ! ಹೇಳಿರಿ.”
01220011 ದೇವಾ ಊಚುಃ।
01220011a ಋಣಿನೋ ಮಾನವಾ ಬ್ರಹ್ಮಂಜಾಯಂತೇ ಯೇನ ತಚ್ಶೃಣು।
01220011c ಕ್ರಿಯಾಭಿರ್ಬ್ರಹ್ಮಚರ್ಯೇಣ ಪ್ರಜಯಾ ಚ ನ ಸಂಶಯಃ।।
ದೇವತೆಗಳು ಹೇಳಿದರು: “ಬ್ರಹ್ಮನ್! ಮಾನವರು ಯಾವುದಕ್ಕೆ ಋಣಿಗಳಾಗಿ ಹುಟ್ಟುತ್ತಾರೆ ಎನ್ನುವುದನ್ನು ಕೇಳು: ಕ್ರಿಯೆ, ಬ್ರಹ್ಮಚರ್ಯ ಮತ್ತು ಸಂತಾನ. ಇದರಲ್ಲಿ ಸಂಶಯವಿಲ್ಲ.
01220012a ತದಪಾಕ್ರಿಯತೇ ಸರ್ವಂ ಯಜ್ಞೇನ ತಪಸಾ ಸುತೈಃ।
01220012c ತಪಸ್ವೀ ಯಜ್ಞಕೃಚ್ಚಾಸಿ ನ ತು ತೇ ವಿದ್ಯತೇ ಪ್ರಜಾ।।
01220013a ತ ಇಮೇ ಪ್ರಸವಸ್ಯಾರ್ಥೇ ತವ ಲೋಕಾಃ ಸಮಾವೃತಾಃ।
01220013c ಪ್ರಜಾಯಸ್ವ ತತೋ ಲೋಕಾನುಪಭೋಕ್ತಾಸಿ ಶಾಶ್ವತಾನ್।।
ಇವೆಲ್ಲವುಗಳನ್ನೂ ಯಜ್ಞ, ತಪಸ್ಸು ಮತ್ತು ಸುತರಿಂದ ತೀರಿಸಬಹುದು. ನೀನು ತಪಸ್ವಿ ಮತ್ತು ಯಜ್ಞಕರ್ತೃವಾಗಿದ್ದೀಯೆ. ಆದರೆ ನಿನಗೆ ಮಕ್ಕಳಿಲ್ಲ.
01220014a ಪುನ್ನಾಮ್ನೋ ನರಕಾತ್ಪುತ್ರಸ್ತ್ರಾತೀತಿ ಪಿತರಂ ಮುನೇ।
01220014c ತಸ್ಮಾದಪತ್ಯಸಂತಾನೇ ಯತಸ್ವ ದ್ವಿಜಸತ್ತಮ।।
ಮುನಿ! ಪು ಎಂಬ ಹೆಸರಿನ ನರಕದಿಂದ ಪಿತೃಗಳನ್ನು ಪಾರುಮಾಡುವನನ್ನು ಪುತ್ರ ಎಂದು ಕರೆಯುತ್ತಾರೆ. ದ್ವಿಜಸತ್ತಮ! ಆದುದರಿಂದ ಕುಲವನ್ನು ಮುಂದುವರೆಸಿಕೊಂಡು ಹೋಗುವ ಸಂತಾನಕ್ಕೆ ಪ್ರಯತ್ನಿಸು.””
01220015 ವೈಶಂಪಾಯನ ಉವಾಚ।
01220015a ತಚ್ಛೃತ್ವಾ ಮಂದಪಾಲಸ್ತು ತೇಷಾಂ ವಾಕ್ಯಂ ದಿವೌಕಸಾಂ।
01220015c ಕ್ವ ನು ಶೀಘ್ರಮಪತ್ಯಂ ಸ್ಯಾದ್ಬಹುಲಂ ಚೇತ್ಯಚಿಂತಯತ್।।
ವೈಶಂಪಾಯನನು ಹೇಳಿದನು: “ದಿವೌಕಸರ ಆ ಮಾತುಗಳನ್ನು ಕೇಳಿದ ಮಂದಪಾಲನು ನಾನು ಎಲ್ಲಿ ಶೀಘ್ರವಾಗಿ ಬಹಳ ಮಕ್ಕಳನ್ನು ಪಡೆಯಬಹುದು ಎಂದು ಯೋಚಿಸಿದನು.
01220016a ಸ ಚಿಂತಯನ್ನಭ್ಯಗಚ್ಛದ್ಬಹುಲಪ್ರಸವಾನ್ಖಗಾನ್।
01220016c ಶಾರ್ಙ್ಗಿಕಾಂ ಶಾರ್ಙ್ಗಕೋ ಭೂತ್ವಾ ಜರಿತಾಂ ಸಮುಪೇಯಿವಾನ್।।
ಹೀಗೆ ಯೋಚಿಸುತ್ತಿರುವಾಗ ಪಕ್ಷಿಗಳಿಗೆ ಬಹಳ ಮಕ್ಕಳು ಆಗುತ್ತವೆ ಎಂಬ ಯೋಚನೆಯು ಅವನಿಗೆ ಬಂದಿತು. ಅವನು ಸಾರಂಗನಾಗಿ ಜರಿತಾ ಎನ್ನುವ ಸಾರಂಗಿಯೊಡನೆ ಸೇರಿದನು.
01220017a ತಸ್ಯಾಂ ಪುತ್ರಾನಜನಯಚ್ಚತುರೋ ಬ್ರಹ್ಮವಾದಿನಃ।
01220017c ತಾನಪಾಸ್ಯ ಸ ತತ್ರೈವ ಜಗಾಮ ಲಪಿತಾಂ ಪ್ರತಿ।
01220017e ಬಾಲಾನ್ಸುತಾನಂಡಗತಾನ್ಮಾತ್ರಾ ಸಹ ಮುನಿರ್ವನೇ।।
ಅವಳಲ್ಲಿ ಅವನು ಬ್ರಹ್ಮವಾದಿಗಳಾದ ನಾಲ್ಕು ಪುತ್ರರನ್ನು ಪಡೆದನು. ಇನ್ನೂ ಅಂಡದಲ್ಲಿಯೇ ಇದ್ದ ತನ್ನ ಬಾಲ ಸುತರನ್ನು ತಾಯಿಯೊಡನೆ ವನದಲ್ಲಿಯೇ ಬಿಟ್ಟು ಆ ಮುನಿಯು ಲಪಿತಳ ಕಡೆ ಹೊರಟುಹೋದನು.
01220018a ತಸ್ಮಿನ್ಗತೇ ಮಹಾಭಾಗೇ ಲಪಿತಾಂ ಪ್ರತಿ ಭಾರತ।
01220018c ಅಪತ್ಯಸ್ನೇಹಸಂವಿಗ್ನಾ ಜರಿತಾ ಬಹ್ವಚಿಂತಯತ್।।
ಭಾರತ! ಆ ಮಹಾಭಾಗನು ಲಪಿತೆಯ ಕಡೆ ಹೊರಟುಹೋದ ನಂತರ ಜರಿತೆಯು ಮಕ್ಕಳ ಮೇಲಿನ ಪ್ರೀತಿಯಿಂದಾಗಿ ಬಹಳ ಚಿಂತಿಸಿದಳು.
01220019a ತೇನ ತ್ಯಕ್ತಾನಸಂತ್ಯಾಜ್ಯಾನೃಷೀನಂಡಗತಾನ್ವನೇ।
01220019c ನಾಜಹತ್ಪುತ್ರಕಾನಾರ್ತಾ ಜರಿತಾ ಖಾಂಡವೇ ನೃಪ।
01220019e ಬಭಾರ ಚೈತಾನ್ಸಂಜಾತಾನ್ಸ್ವವೃತ್ತ್ಯಾ ಸ್ನೇಹವಿಕ್ಲವಾ।।
ನೃಪ! ಇನ್ನೂ ಹುಟ್ಟದೇ ಅಂಡದಲ್ಲಿಯೇ ಇದ್ದ ಆ ಪುತ್ರ ಋಷಿಗಳನ್ನು ಖಾಂಡವವನದಲ್ಲಿ ಆರ್ತ ಜರಿತೆಯು ಬಿಟ್ಟು ಹೋಗಲಾರದೇ ಸ್ನೇಹವಿಕ್ಲವಳಾಗಿ ಹುಟ್ಟಿದ ಅವರನ್ನು ಪಾಲಿಸಿದಳು.
01220020a ತತೋಽಗ್ನಿಂ ಖಾಂಡವಂ ದಗ್ಧುಮಾಯಾಂತಂ ದೃಷ್ಟವಾನೃಷಿಃ।
01220020c ಮಂದಪಾಲಶ್ಚರಂಸ್ತಸ್ಮಿನ್ವನೇ ಲಪಿತಯಾ ಸಹ।।
ನಂತರ ಅಗ್ನಿಯು ಖಾಂಡವವನ್ನು ಸುಡಲು ಬರುತ್ತಿರುವುದನ್ನು ನೋಡಿದ ಋಷಿ ಮಂದಪಾಲನು ಲಪಿತಳೊಡನೆ ಆ ವನಕ್ಕೆ ಧಾವಿಸಿದನು.
01220021a ತಂ ಸಂಕಲ್ಪಂ ವಿದಿತ್ವಾಸ್ಯ ಜ್ಞಾತ್ವಾ ಪುತ್ರಾಂಶ್ಚ ಬಾಲಕಾನ್।
01220021c ಸೋಽಭಿತುಷ್ಟಾವ ವಿಪ್ರರ್ಷಿರ್ಬ್ರಾಹ್ಮಣೋ ಜಾತವೇದಸಂ।
01220021e ಪುತ್ರಾನ್ಪರಿದದದ್ಭೀತೋ ಲೋಕಪಾಲಂ ಮಹೌಜಸಂ।।
ಅವನ ಸಂಕಲ್ಪವನ್ನು ತಿಳಿದು ಮತ್ತು ಪುತ್ರರು ಬಾಲಕರೆಂದು ತಿಳಿದು ಆ ವಿಪ್ರರ್ಷಿ ಬ್ರಾಹ್ಮಣನು ತನ್ನ ಪುತ್ರರ ರಕ್ಷಣೆಗೆ ಭೀತನಾಗಿ ಮಹೌಜಸ ಲೋಕಪಾಲ ಜಾತವೇದಸನನ್ನು ಸ್ತುತಿಸ ತೊಡಗಿದನು.
01220022 ಮಂದಪಾಲ ಉವಾಚ।
01220022a ತ್ವಮಗ್ನೇ ಸರ್ವದೇವಾನಾಂ ಮುಖಂ ತ್ವಮಸಿ ಹವ್ಯವಾಟ್।
01220022c ತ್ವಮಂತಃ ಸರ್ವಭೂತಾನಾಂ ಗೂಢಶ್ಚರಸಿ ಪಾವಕ।।
ಮಂದಪಾಲನು ಹೇಳಿದನು: “ಅಗ್ನಿ! ನೀನು ಸರ್ವದೇವತೆಗಳ ಬಾಯಿ! ನೀನು ಹವ್ಯವನ್ನು ಸಾಗಿಸುವವನು! ನೀನು ಸರ್ವಭೂತಗಳ ಅಂತರಾಳದಲ್ಲಿ ಗೂಢವಾಗಿದ್ದೀಯೆ!
01220023a ತ್ವಾಮೇಕಮಾಹುಃ ಕವಯಸ್ತ್ವಾಮಾಹುಸ್ತ್ರಿವಿಧಂ ಪುನಃ।
01220023c ತ್ವಾಮಷ್ಟಧಾ ಕಲ್ಪಯಿತ್ವಾ ಯಜ್ಞವಾಹಮಕಲ್ಪಯನ್।।
ಕವ್ಯರು ನಿನ್ನನ್ನು ಒಂದೇ ಎಂದು ಕರೆಯುತ್ತಾರೆ ಆದರೆ ಪುನಃ ತ್ರಿವಿಧವೆಂದೂ ಕರೆಯುತ್ತಾರೆ. ನಿನ್ನನ್ನು ಅಷ್ಟಧಾ ಎಂದು ಕಲ್ಪಿಸಿ ಯಜ್ಞವಾಹನನೆಂದೂ ಕಲ್ಪಿಸುತ್ತಾರೆ.
01220024a ತ್ವಯಾ ಸೃಷ್ಟಮಿದಂ ವಿಶ್ವಂ ವದಂತಿ ಪರಮರ್ಷಯಃ।
01220024c ತ್ವದೃತೇ ಹಿ ಜಗತ್ ಕೃತ್ಸ್ನಂ ಸದ್ಯೋ ನ ಸ್ಯಾದ್ಹುತಾಶನ।।
ನೀನು ಈ ವಿಶ್ವವನ್ನು ಸೃಷ್ಟಿಸಿದವನು ಎಂದು ಪರಮಋಷಿಗಳು ಹೇಳುತ್ತಾರೆ. ಹುತಾಶನ! ನೀನಿಲ್ಲದೇ ಈ ಜಗತ್ತು ಕ್ಷಣಮಾತ್ರದಲ್ಲಿ ಅದೃಶ್ಯವಾಗಿಬಿಡುತ್ತದೆ!
01220025a ತುಭ್ಯಂ ಕೃತ್ವಾ ನಮೋ ವಿಪ್ರಾಃ ಸ್ವಕರ್ಮವಿಜಿತಾಂ ಗತಿಂ।
01220025c ಗಚ್ಛಂತಿ ಸಹ ಪತ್ನೀಭಿಃ ಸುತೈರಪಿ ಚ ಶಾಶ್ವತೀಂ।।
ವಿಪ್ರರು ಪತ್ನಿ ಮತ್ತು ಸುತರ ಸಹಿತ ನಿನ್ನನ್ನು ನಮಸ್ಕರಿಸಿಯೇ ಸ್ವಕರ್ಮಗಳನ್ನು ಮಾಡಲು ಶಾಶ್ವತ ಜಯದ ದಾರಿಯಲ್ಲಿ ನಡೆಯುತ್ತಾರೆ.
01220026a ತ್ವಾಮಗ್ನೇ ಜಲದಾನಾಹುಃ ಖೇ ವಿಷಕ್ತಾನ್ಸವಿದ್ಯುತಃ।
01220026c ದಹಂತಿ ಸರ್ವಭೂತಾನಿ ತ್ವತ್ತೋ ನಿಷ್ಕ್ರಮ್ಯ ಹಾಯನಾಃ।।
ನೀನು ತಮ್ಮ ಮಿಂಚುಗಳಿಂದ ಪೂರ್ವದಿಕ್ಕಿನ ಆಕಾಶವನ್ನು ಮುಟ್ಟುವ ಮೋಡಗಳೆಂದು ಹೇಳುತ್ತಾರೆ. ನಿನ್ನ ಮುಖದಿಂದ ಹೊರಬರುವ ಜ್ವಾಲೆಯು ಸರ್ವಭೂತಗಳನ್ನು ಸುಡುತ್ತದೆ.
01220027a ಜಾತವೇದಸ್ತವೈವೇಯಂ ವಿಶ್ವಸೃಷ್ಟಿರ್ಮಹಾದ್ಯುತೇ।
01220027c ತವೈವ ಕರ್ಮ ವಿಹಿತಂ ಭೂತಂ ಸರ್ವಂ ಚರಾಚರಂ।।
ಮಹಾದ್ಯುತೇ! ಜಾತವೇದ! ಈ ವಿಶ್ವವು ನಿನ್ನದೇ ಸೃಷ್ಟಿ! ಸರ್ವ ಕರ್ಮಗಳೂ ಚರಾಚರ ಭೂತಗಳೂ ನಿನ್ನಿಂದಲೇ ವಿಹಿತವಾಗಿವೆ.
01220028a ತ್ವಯಾಪೋ ವಿಹಿತಾಃ ಪೂರ್ವಂ ತ್ವಯಿ ಸರ್ವಮಿದಂ ಜಗತ್।
01220028c ತ್ವಯಿ ಹವ್ಯಂ ಚ ಕವ್ಯಂ ಚ ಯಥಾವತ್ಸಂಪ್ರತಿಷ್ಠಿತಂ।
ಹಿಂದೆ ನೀರು ನಿನ್ನಿಂದಲೇ ವಿಹಿತವಾಗಿತ್ತು. ಈ ಸರ್ವ ಜಗತ್ತೂ ನಿನ್ನಿಂದಲೇ ವಿಹಿತವಾಗಿದೆ. ಹವ್ಯ ಕವ್ಯಗಳೆಲ್ಲವೂ ಯಥಾವತ್ತಾಗಿ ನಿನ್ನನ್ನೇ ಆಧರಿಸಿವೆ.
01220029a ಅಗ್ನೇ ತ್ವಮೇವ ಜ್ವಲನಸ್ತ್ವಂ ಧಾತಾ ತ್ವಂ ಬೃಹಸ್ಪತಿಃ।
01220029c ತ್ವಮಶ್ವಿನೌ ಯಮೌ ಮಿತ್ರಃ ಸೋಮಸ್ತ್ವಮಸಿ ಚಾನಿಲಃ।।
ಅಗ್ನಿ! ನೀನೇ ಜ್ವಲನ! ನೀನೇ ಧಾತಾ ಮತ್ತು ಬೃಹಸ್ಪತಿ! ನೀನೆ ಅಶ್ವಿನೀ ದೇವತೆಗಳು! ಯಮ, ಮಿತ್ರ, ಸೋಮ ಮತ್ತು ಅನಿಲನೂ ನೀನೇ!””
01220030 ವೈಶಂಪಾಯನ ಉವಾಚ।
01220030a ಏವಂ ಸ್ತುತಸ್ತತಸ್ತೇನ ಮಂದಪಾಲೇನ ಪಾವಕಃ।
01220030c ತುತೋಷ ತಸ್ಯ ನೃಪತೇ ಮುನೇರಮಿತತೇಜಸಃ।
01220030e ಉವಾಚ ಚೈನಂ ಪ್ರೀತಾತ್ಮಾ ಕಿಮಿಷ್ಟಂ ಕರವಾಣಿ ತೇ।।
ವೈಶಂಪಾಯನನು ಹೇಳಿದನು: “ನೃಪ! ಮಂದಪಾಲನ ಈ ಸ್ತುತಿಯಿಂದ ಪಾವಕನು ಆ ಅಮಿತತೇಜಸ ಮುನಿಯಲ್ಲಿ ಸಂತುಷ್ಟನಾದನು. ಪ್ರೀತಾತ್ಮನಾಗಿ ಅವನಲ್ಲಿ “ನಿನಗಿಷ್ಟವಾದ ಏನನ್ನು ಮಾಡಲಿ?” ಎಂದು ಕೇಳಿದನು.
01220031a ತಮಬ್ರವೀನ್ಮಂದಪಾಲಃ ಪ್ರಾಂಜಲಿರ್ಹವ್ಯವಾಹನಂ।
01220031c ಪ್ರದಹನ್ಖಾಂಡವಂ ದಾವಂ ಮಮ ಪುತ್ರಾನ್ವಿಸರ್ಜಯ।।
ಮಂದಪಾಲನು ಅಂಜಲೀಬದ್ಧನಾಗಿ ಹವ್ಯವಾಹನನಿಗೆ ಹೇಳಿದನು: “ಖಾಂಡವವನವನ್ನು ದಹಿಸುವಾಗ ನನ್ನ ಪುತ್ರರನ್ನು ಬಿಟ್ಟುಬಿಡು!”
01220032a ತಥೇತಿ ತತ್ಪ್ರತಿಶ್ರುತ್ಯ ಭಗವಾನ್ ಹವ್ಯವಾಹನಃ।
01220032c ಖಾಂಡವೇ ತೇನ ಕಾಲೇನ ಪ್ರಜಜ್ವಾಲ ದಿಧಕ್ಷಯಾ।।
ಭಗವಾನ್ ಹವ್ಯವಾಹನನು ಹಾಗೆಯೇ ಆಗಲೆಂದು ಉತ್ತರಿಸಿ, ಅದೇ ಸಮಯದಲ್ಲಿ ಖಾಂಡವವನವನ್ನು ಸುಡುವ ಇಚ್ಛೆಯಿಂದ ತನ್ನ ಜ್ವಾಲೆಗಳನ್ನು ಪಸರಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಖಾಂಡವದಾಹಪರ್ವಣಿ ಶಾಂಙೃಕೋಪಾಖ್ಯಾನೇ ವಿಂಶತ್ಯಾಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಖಾಂಡವದಾಹಪರ್ವದಲ್ಲಿ ಶಾಂಙೃಕೋಪಾಖ್ಯಾನ ಎನ್ನುವ ಇನ್ನೂರಾ ಇಪ್ಪತ್ತನೆಯ ಅಧ್ಯಾಯವು.