ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಖಾಂಡವದಾಹ ಪರ್ವ
ಅಧ್ಯಾಯ 218
ಸಾರ
ತಕ್ಷಕನ ಮಗ ಅಶ್ವಸೇನನನ್ನು ಉಳಿಸಲು ಇಂದ್ರನು ಅರ್ಜುನನ ಮೇಲೆ ಮಾಯೆಯ ಮಳೆಯನ್ನು ಸುರಿಸಿದುದು (1–9). ಇಂದ್ರಾರ್ಜುನರ ಯುದ್ಧ (10-50).
01218001 ವೈಶಂಪಾಯನ ಉವಾಚ।
01218001a ತಸ್ಯಾಭಿವರ್ಷತೋ ವಾರಿ ಪಾಂಡವಃ ಪ್ರತ್ಯವಾರಯತ್।
01218001c ಶರವರ್ಷೇಣ ಬೀಭತ್ಸುರುತ್ತಮಾಸ್ತ್ರಾಣಿ ದರ್ಶಯನ್।।
ವೈಶಂಪಾಯನನು ಹೇಳಿದನು: “ಬೀಭತ್ಸು ಪಾಂಡವನು ಶರಗಳ ಮಳೆಯನ್ನು ಸುರಿಸಿ ಆ ಮಳೆಯನ್ನು ತಡೆದು ಅಸ್ತ್ರಗಳಲ್ಲಿ ತನಗಿದ್ದ ಉತ್ತಮ ಪ್ರವೀಣತೆಯನ್ನು ತೋರಿಸಿದನು.
01218002a ಶರೈಃ ಸಮಂತತಃ ಸರ್ವಂ ಖಾಂಡವಂ ಚಾಪಿ ಪಾಂಡವಃ।
01218002c ಚಾದಯಾಮಾಸ ತದ್ವರ್ಷಮಪಕೃಷ್ಯ ತತೋ ವನಾತ್।।
ಪಾಂಡವನು ಇಡೀ ಖಾಂಡವವನ್ನು ಶರಗಳಿಂದ ಮುಚ್ಚಿ ಇಂದ್ರನ ಮಳೆಯು ವನವನ್ನು ತಲುಪದಂತೆ ತಡೆಹಿಡಿದನು.
01218003a ನ ಚ ಸ್ಮ ಕಿಂ ಚಿಚ್ಶಕ್ನೋತಿ ಭೂತಂ ನಿಶ್ಚರಿತುಂ ತತಃ।
01218003c ಸಂಚಾದ್ಯಮಾನೇ ಖಗಮೈರಸ್ಯತಾ ಸವ್ಯಸಾಚಿನಾ।।
ಸವ್ಯಸಾಚಿಯು ಆಕಾಶದಲ್ಲಿ ಹಾರುತ್ತಿರುವ ಶರಗಳಿಂದ ಮುಚ್ಚಿದಾಗ ಅಲ್ಲಿಂದ ಯಾವುದೇ ಒಂದು ಜೀವಿಯೂ ತಪ್ಪಿಸಿಕೊಳ್ಳುವಂತಿರಲಿಲ್ಲ.
01218004a ತಕ್ಷಕಸ್ತು ನ ತತ್ರಾಸೀತ್ಸರ್ಪರಾಜೋ ಮಹಾಬಲಃ।
01218004c ದಹ್ಯಮಾನೇ ವನೇ ತಸ್ಮಿನ್ಕುರುಕ್ಷೇತ್ರೇಽಭವತ್ತದಾ।।
ಆದರೆ ಸರ್ಪರಾಜ ಮಹಾಬಲ ತಕ್ಷಕನು ಅಲ್ಲಿರಲಿಲ್ಲ. ವನವು ಸುಡುತ್ತಿರುವಾಗ ಅವನು ಕುರುಕ್ಷೇತ್ರದಲ್ಲಿದ್ದನು.
01218005a ಅಶ್ವಸೇನಸ್ತು ತತ್ರಾಸೀತ್ತಕ್ಷಕಸ್ಯ ಸುತೋ ಬಲೀ।
01218005c ಸ ಯತ್ನಮಕರೋತ್ತೀವ್ರಂ ಮೋಕ್ಷಾರ್ಥಂ ಹವ್ಯವಾಹನಾತ್।।
ಆದರೆ ತಕ್ಷಕನ ಬಲಶಾಲಿ ಮಗ ಅಶ್ವಸೇನನು ಅಲ್ಲಿದ್ದನು. ಅವನು ಹವ್ಯವಾಹನನಿಂದ ತಪ್ಪಿಸಿಕೊಳ್ಳಲು ತೀವ್ರ ಪ್ರಯತ್ನವನ್ನು ಮಾಡಿದನು.
01218006a ನ ಶಶಾಕ ವಿನಿರ್ಗಂತುಂ ಕೌಂತೇಯಶರಪೀಡಿತಃ।
01218006c ಮೋಕ್ಷಯಾಮಾಸ ತಮ್ಮಾತಾ ನಿಗೀರ್ಯ ಭುಜಗಾತ್ಮಜಾ।।
ಕೌಂತೇಯನ ಶರಗಳಿಂದ ಸುತ್ತುವರೆಯಲ್ಪಟ್ಟ ಅವನಿಗೆ ಹೊರಬರಲು ಸಾಧ್ಯವಾಗಲಿಲ್ಲ. ಅವನ ತಾಯಿ ಭುಜಗಾತ್ಮಜೆಯು ಅವನನ್ನು ನುಂಗಿ ಉಳಿಸಲು ಪ್ರಯತ್ನಿಸಿದಳು.
01218007a ತಸ್ಯ ಪೂರ್ವಂ ಶಿರೋ ಗ್ರಸ್ತಂ ಪುಚ್ಛಮಸ್ಯ ನಿಗೀರ್ಯತೇ।
01218007c ಊರ್ಧ್ವಮಾಚಕ್ರಮೇ ಸಾ ತು ಪನ್ನಗೀ ಪುತ್ರಗೃದ್ಧಿನೀ।।
ಅವಳು ಮೊದಲು ಅವನ ಶಿರವನ್ನು ನುಂಗಿದಳು. ಅವನ ಬಾಲವನ್ನು ನುಂಗುತ್ತಿರುವಾಗ ಆ ಪನ್ನಗಿ ಪುತ್ರಗೃದ್ಧಿನಿಯು ಮೇಲೆ ಹಾರಲು ಪ್ರಯತ್ನಿಸಿದಳು.
01218008a ತಸ್ಯಾಸ್ತೀಕ್ಷ್ಣೇನ ಭಲ್ಲೇನ ಪೃಥುಧಾರೇಣ ಪಾಂಡವಃ।
01218008c ಶಿರಶ್ಚಿಚ್ಛೇದ ಗಚ್ಛಂತ್ಯಾಸ್ತಾಮಪಶ್ಯತ್ಸುರೇಶ್ವರಃ।।
ಆಗ ಪಾಂಡವನು ವಿಶಾಲಧಾರೆಯ ತೀಕ್ಷ್ಣ ಭಲ್ಲದಿಂದ ಅವಳ ಶಿರವನ್ನು ಕತ್ತರಿಸಿದನು ಮತ್ತು ಅದನ್ನು ಸುರೇಶ್ವರನು ನೋಡಿದನು.
01218009a ತಂ ಮುಮೋಚಯಿಷುರ್ವಜ್ರೀ ವಾತವರ್ಷೇಣ ಪಾಂಡವಂ।
01218009c ಮೋಹಯಾಮಾಸ ತತ್ಕಾಲಮಶ್ವಸೇನಸ್ತ್ವಮುಚ್ಯತ।।
ಆಗ ವಜ್ರಿಯು ಅವನನ್ನು ಉಳಿಸಲು ಪ್ರಯತ್ನಿಸಿ ಪಾಂಡವನ ಮೇಲೆ ಮಾಯೆಯ ಭಿರುಗಾಳಿ ಮಳೆಗಳನ್ನು ಸುರಿಸಿದನು. ಅದೇ ಸಮಯದಲ್ಲಿ ಅಶ್ವಸೇನನು ತಪ್ಪಿಸಿಕೊಂಡನು.
01218010a ತಾಂ ಚ ಮಾಯಾಂ ತದಾ ದೃಷ್ಟ್ವಾ ಘೋರಾನ್ನಾಗೇನ ವಂಚಿತಃ।
01218010c ದ್ವಿಧಾ ತ್ರಿಧಾ ಚ ಚಿಚ್ಛೇದ ಖಗತಾನೇವ ಭಾರತ।।
ಭಾರತ! ಆ ಘೋರ ನಾಗಗಳ ಮಾಯೆ ಮತ್ತು ಮೋಸವನ್ನು ಕಂಡ ಅವನು ಆಕಾಶದ ಕಡೆ ಹಾರುತ್ತಿರುವ ನಾಗಗಳನ್ನು ಎರಡು ಮೂರು ಭಾಗಗಳನ್ನಾಗಿ ಕತ್ತರಿಸಿ ತುಂಡುಮಾಡಿದನು.
01218011a ಶಶಾಪ ತಂ ಚ ಸಂಕ್ರುದ್ಧೋ ಬೀಭತ್ಸುರ್ಜಿಃಮಗಾಮಿನಂ।
01218011c ಪಾವಕೋ ವಾಸುದೇವಶ್ಚ ಅಪ್ರತಿಷ್ಠೋ ಭವೇದಿತಿ।।
ಸಂಕೃದ್ಧ ಬೀಭತ್ಸು, ಪಾವಕ ಮತ್ತು ವಾಸುದೇವರು ಆ ನಾಗಕ್ಕೆ “ಅಪ್ರತಿಷ್ಠನಾಗು!” ಎಂದು ಶಪಿಸಿದರು.
01218012a ತತೋ ಜಿಷ್ಣುಃ ಸಹಸ್ರಾಕ್ಷಂ ಖಂ ವಿತತ್ಯೇಷುಭಿಃ ಶಿತೈಃ।
01218012c ಯೋಧಯಾಮಾಸ ಸಂಕ್ರುದ್ಧೋ ವಂಚನಾಂ ತಾಮನುಸ್ಮರನ್।।
ಆಗ ಜಿಷ್ಣುವು ಸಹಸ್ರಾಕ್ಷನು ಮಾಡಿದ ವಂಚನೆಯಿಂದ ಸಂಕೃದ್ಧನಾಗಿ ಆಕಾಶವನ್ನು ಶರಗಳಿಂದ ತುಂಬಿ ಅವನೊಡನೆ ಯುದ್ಧ ಮಾಡಿದನು.
01218013a ದೇವರಾಡಪಿ ತಂ ದೃಷ್ಟ್ವಾ ಸಂರಬ್ಧಮಿವ ಫಲ್ಗುನಂ।
01218013c ಸ್ವಮಸ್ತ್ರಮಸೃಜದ್ದೀಪ್ತಂ ಯತ್ತತಾನಾಖಿಲಂ ನಭಃ।।
ಕುಪಿತ ಫಲ್ಗುನನನ್ನು ನೋಡಿ ದೇವರಾಜನು ಇಡೀ ನಭವನ್ನೇ ಬೆಳಗಿಸುವಂತಿದ್ದ ಉರಿಯುತ್ತಿರುವ ತನ್ನ ಅಸ್ತ್ರವನ್ನು ಪ್ರಯೋಗಿಸಿದನು.
01218014a ತತೋ ವಾಯುರ್ಮಹಾಘೋಷಃ ಕ್ಷೋಭಯನ್ಸರ್ವಸಾಗರಾನ್।
01218014c ವಿಯತ್ಸ್ಥೋಽಜನಯನ್ಮೇಘಾಂಜಲಧಾರಾಮುಚೋಽಕುಲಾನ್।।
ಆಗ ವಾಯುವು ಮಹಾಘೋಷದೊಂದಿಗೆ ಸರ್ವಸಾಗರಗಳನ್ನು ಕ್ಷೋಭಿಸುತ್ತಾ ಭಾರೀ ಮಳೆಯನ್ನು ತರುವ ಗಿರಿಗಳಂತಿರುವ ಮೋಡಗಳ ಸಂಕುಲವನ್ನೇ ಉಂಟುಮಾಡಿದನು.
01218015a ತದ್ವಿಘಾತಾರ್ಥಮಸೃಜದರ್ಜುನೋಽಪ್ಯಸ್ತ್ರಮುತ್ತಮಂ।
01218015c ವಾಯವ್ಯಮೇವಾಭಿಮಂತ್ರ್ಯ ಪ್ರತಿಪತ್ತಿವಿಶಾರದಃ।।
ತನ್ನ ರಕ್ಷಣೆಯನ್ನು ಅರಿತಿದ್ದ ಅರ್ಜುನನು ಅವನನ್ನು ತಡೆಯಲು ಉತ್ತಮ ವಾಯವ್ಯಾಸ್ತ್ರವನ್ನು ಪ್ರಯೋಗಿಸಿದನು.
01218016a ತೇನೇಂದ್ರಾಶನಿಮೇಘಾನಾಂ ವೀರ್ಯೌಜಸ್ತದ್ವಿನಾಶಿತಂ।
01218016c ಜಲಧಾರಾಶ್ಚ ತಾಃ ಶೋಷಂ ಜಗ್ಮುರ್ನೇಶುಶ್ಚ ವಿದ್ಯುತಃ।।
ಅದರಿಂದ ಇಂದ್ರನ ಮಳೆ-ಮೋಡಗಳ ವೀರ್ಯ ಓಜಸ್ಸನ್ನು ನಾಶಮಾಡಿದನು. ಮೋಡಗಳು ಬತ್ತಿಹೋದವು. ಮಿಂಚು ನಿಂತುಹೋಯಿತು.
01218017a ಕ್ಷಣೇನ ಚಾಭವದ್ವ್ಯೋಮ ಸಂಪ್ರಶಾಂತರಜಸ್ತಮಃ।
01218017c ಸುಖಶೀತಾನಿಲಗುಣಂ ಪ್ರಕೃತಿಸ್ಥಾರ್ಕಮಂಡಲಂ।।
ಕ್ಷಣದಲ್ಲಿ ಆಕಾಶದಲ್ಲಿಯ ರಜ ಮತ್ತು ತಮಗಳು ಪ್ರಶಾಂತವಾಗಿ, ಸುಖಶೀತಲವು ಬೀಸಿ ಅರ್ಕಮಂಡಲವು ಸ್ವಭಾವಕ್ಕೆ ತೆರಳಿತು.
01218018a ನಿಷ್ಪ್ರತೀಕಾರಹೃಷ್ಟಶ್ಚ ಹುತಭುಗ್ವಿವಿಧಾಕೃತಿಃ।
01218018c ಪ್ರಜಜ್ವಾಲಾತುಲಾರ್ಚಿಷ್ಮಾನ್ಸ್ವನಾದೈಃ ಪೂರಯಂಜಗತ್।।
ವಿರೋಧಗಳೇನೂ ಇಲ್ಲದೇ ಪ್ರಹೃಷ್ಟ ಅಗ್ನಿಯು ವಿವಿಧಾಕೃತಿಯಲ್ಲಿ ಪ್ರಜ್ವಲಿಸಿ ತನ್ನ ನಾದದಿಂದ ಜಗತ್ತನ್ನು ತುಂಬಿ ಸುಡತೊಡಗಿದನು.
01218019a ಕೃಷ್ಣಾಭ್ಯಾಂ ರಕ್ಷಿತಂ ದೃಷ್ಟ್ವಾ ತಂ ಚ ದಾವಮಹಂಕೃತಾಃ।
01218019c ಸಮುತ್ಪೇತುರಥಾಕಾಶಂ ಸುಪರ್ಣಾದ್ಯಾಃ ಪತತ್ರಿಣಃ।।
ಕೃಷ್ಣರಿಬ್ಬರೂ ಆ ಕಾಡ್ಗಿಚ್ಚನ್ನು ರಕ್ಷಿಸುತ್ತಿರುವುದನ್ನು ನೋಡಿದ ಗರುಡನೇ ಮೊದಲಾದ ಪಕ್ಷಿಗಳು ಆಕಾಶಕ್ಕೆ ಹಾರಿದವು.
01218020a ಗರುಡಾ ವಜ್ರಸದೃಶೈಃ ಪಕ್ಷತುಂಡನಖೈಸ್ತಥಾ।
01218020c ಪ್ರಹರ್ತುಕಾಮಾಃ ಸಂಪೇತುರಾಕಾಶಾತ್ ಕೃಷ್ಣಪಾಂಡವೌ।।
ಗರುಡನು ಅವರನ್ನು ಹೊಡೆಯಲೋಸುಗ ತನ್ನ ವಜ್ರಸದೃಶ ರೆಕ್ಕೆ, ಕೊಕ್ಕು ಮತ್ತು ಪಂಜಗಳಿಂದ ಕೃಷ್ಣ-ಪಾಂಡವರ ಮೇಲೆ ಎರಗಿದನು.
01218021a ತಥೈವೋರಗಸಂಘಾತಾಃ ಪಾಂಡವಸ್ಯ ಸಮೀಪತಃ।
01218021c ಉತ್ಸೃಜಂತೋ ವಿಷಂ ಘೋರಂ ನಿಶ್ಚೇರುರ್ಜ್ವಲಿತಾನನಾಃ।।
ಹಾಗೆಯೇ ಉರಗಸಂಘಾತಗಳು ತಮ್ಮ ಜ್ವಲಿಸುತ್ತಿರುವ ಬಾಯಿಗಳಿಂದ ಘೋರ ವಿಷವನ್ನು ಕಾರುತ್ತಾ ಪಾಂಡವನ ಸಮೀಪಕ್ಕೆ ಧಾವಿಸಿದವು.
01218022a ತಾಂಶ್ಚಕರ್ತ ಶರೈಃ ಪಾರ್ಥಃ ಸರೋಷಾನ್ದೃಶ್ಯ ಖೇಚರಾನ್।
01218022c ವಿವಶಾಶ್ಚಾಪತನ್ದೀಪ್ತಂ ದೇಹಾಭಾವಾಯ ಪಾವಕಂ।।
ಆಕಾಶಗಾಮಿಗಳು ರೋಷದಿಂದ ಧಾವಿಸುತ್ತಿರುವುದನ್ನು ಕಂಡ ಪಾರ್ಥನು ಶರಗಳಿಂದ ಅವುಗಳನ್ನು ಕತ್ತರಿಸಲು, ಶಕ್ತಿರಹಿತರಾಗಿ ಅವುಗಳು ಉರಿಯುತ್ತಿರುವ ಬೆಂಕಿಯಲ್ಲಿ ಬಿದ್ದವು.
01218023a ತತಃ ಸುರಾಃ ಸಗಂಧರ್ವಾ ಯಕ್ಷರಾಕ್ಷಸಪನ್ನಗಾಃ।
01218023c ಉತ್ಪೇತುರ್ನಾದಮತುಲಮುತ್ಸೃಜಂತೋ ರಣಾರ್ಥಿಣಃ।।
01218024a ಅಯಃಕಣಪಚಕ್ರಾಶ್ಮಭುಶುಂಡ್ಯುದ್ಯತಬಾಹವಃ।
01218024c ಕೃಷ್ಣಪಾರ್ಥೌ ಜಿಘಾಂಸಂತಃ ಕ್ರೋಧಸಮ್ಮೂರ್ಚ್ಛಿತೌಜಸಃ।।
ಆಗ ಕ್ರೋಧಸಂಮೂರ್ಛಿತ ರಣಾರ್ಥಿ ಸುರರು ಗಂಧರ್ವ ಯಕ್ಷ ರಾಕ್ಷಸ ಪನ್ನಗರೊಡಗೂಡಿ ಮಹಾನಾದದೊಂದಿಗೆ ಮೇಲೆದ್ದು ಲೋಹದ ಗದೆ, ಚಕ್ರ, ಕಲ್ಲು ಬಂಡೆಗಳು ಮತ್ತು ಅಗ್ನಿಯನ್ನು ಉಗುಳುವ ಅಸ್ತ್ರಗಳೊಂದಿಗೆ ಕೃಷ್ಣಪಾರ್ಥರನ್ನು ಸಂಹರಿಸಲು ಮುಂದಾದರು.
01218025a ತೇಷಾಮಭಿವ್ಯಾಹರತಾಂ ಶಸ್ತ್ರವರ್ಷಂ ಚ ಮುಂಚತಾಂ।
01218025c ಪ್ರಮಮಾಥೋತ್ತಮಾಂಗಾನಿ ಬೀಭತ್ಸುರ್ನಿಶಿತೈಃ ಶರೈಃ।।
ಅವರು ಹೀಗೆ ಮುಂದಾಗಿ ಶಸ್ತ್ರಗಳ ಮಳೆಯನ್ನೇ ಸುರಿಸಲು ಬೀಭತ್ಸುವು ತನ್ನ ನಿಶಿತ ಶರಗಳಿಂದ ಅವರ ಅಂಗಗಳನ್ನು ಕತ್ತರಿಸಿದನು.
01218026a ಕೃಷ್ಣಶ್ಚ ಸುಮಹಾತೇಜಾಶ್ಚಕ್ರೇಣಾರಿನಿಹಾ ತದಾ।
01218026c ದೈತ್ಯದಾನವಸಂಘಾನಾಂ ಚಕಾರ ಕದನಂ ಮಹತ್।।
ಸುಮಹಾತೇಜಸ್ವಿ ಅರಿಧ್ವಂಸಿ ಕೃಷ್ಣನು ಚಕ್ರದಿಂದ ಮಹಾ ಕದನದಲ್ಲಿ ದೈತ್ಯ-ದಾನವರನ್ನು ಸಂಹರಿಸಿದನು.
01218027a ಅಥಾಪರೇ ಶರೈರ್ವಿದ್ಧಾಶ್ಚಕ್ರವೇಗೇರಿತಾಸ್ತದಾ।
01218027c ವೇಲಾಮಿವ ಸಮಾಸಾದ್ಯ ವ್ಯಾತಿಷ್ಠಂತ ಮಹೌಜಸಃ।।
ಇನ್ನೂ ಇತರ ಮಹೌಜಸ ದೈತ್ಯರು ಶರಗಳಿಂದ ತುಂಡಾಗಿ ಚಕ್ರದ ವೇಗಕ್ಕೆ ಸಿಲುಕಿ ಅಲೆಗಳು ದಡವನ್ನು ಸೇರುವಾಗ ಹೇಗೋ ಹಾಗೆ ಸ್ಥಬ್ಧರಾದರು.
01218028a ತತಃ ಶಕ್ರೋಽಭಿಸಂಕ್ರುದ್ಧಸ್ತ್ರಿದಶಾನಾಂ ಮಹೇಶ್ವರಃ।
01218028c ಪಾಂಡುರಂ ಗಜಮಾಸ್ಥಾಯತಾವುಭೌ ಸಮಭಿದ್ರವತ್।।
ಆಗ ತ್ರಿದಶ ಮಹೇಶ್ವರ ಶಕ್ರನು ಸಂಕೃದ್ಧನಾಗಿ ಶ್ವೇತ ಗಜವನ್ನೇರಿ ಅವರಿಬ್ಬರ ಮೇಲೆ ಭಿರುಗಾಳಿಯಂತೆ ಎರಗಿದನು.
01218029a ಅಶನಿಂ ಗೃಹ್ಯ ತರಸಾ ವಜ್ರಮಸ್ತ್ರಮವಾಸೃಜತ್।
01218029c ಹತಾವೇತಾವಿತಿ ಪ್ರಾಹ ಸುರಾನಸುರಸೂದನಃ।।
ತಕ್ಷಣವೇ ವಜ್ರವನ್ನು ಹಿಡಿದು ಅವರ ಮೇಲೆ ಎಸೆಯಲು ಅಸುರಸೂದನನು ಸುರರಿಗೆ “ಅವರಿಬ್ಬರೂ ಹತರಾದರು!” ಎಂದನು.
01218030a ತತಃ ಸಮುದ್ಯತಾಂ ದೃಷ್ಟ್ವಾ ದೇವೇಂದ್ರೇಣ ಮಹಾಶನಿಂ।
01218030c ಜಗೃಹುಃ ಸರ್ವಶಸ್ತ್ರಾಣಿ ಸ್ವಾನಿ ಸ್ವಾನಿ ಸುರಾಸ್ತದಾ।।
01218031a ಕಾಲದಂಡಂ ಯಮೋ ರಾಜಾ ಶಿಬಿಕಾಂ ಚ ಧನೇಶ್ವರಃ।
01218031c ಪಾಶಂ ಚ ವರುಣಸ್ತತ್ರ ವಿಚಕ್ರಂ ಚ ತಥಾ ಶಿವಃ।।
ದೇವೇಂದ್ರನು ಮಹಾಶನಿಯನ್ನು ಹಿಡಿದಿದ್ದುದನ್ನು ನೋಡಿ ಸುರರೆಲ್ಲರೂ ತಮ್ಮ ತಮ್ಮ ಅಸ್ತ್ರಗಳನ್ನು ಹಿಡಿದರು: ಯಮರಾಜನು ಕಾಲದಂಡವನ್ನು, ಧನೇಶ್ವರನು ಶಿಬಿಕೆಯನ್ನು, ವರುಣನು ಪಾಶವನ್ನು ಮತ್ತು ಶಿವನು ತ್ರಿಶೂಲವನ್ನು ಹಿಡಿದರು.
01218032a ಓಷಧೀರ್ದೀಪ್ಯಮಾನಾಶ್ಚ ಜಗೃಹಾತೇಽಶ್ವಿನಾವಪಿ।
01218032c ಜಗೃಹೇ ಚ ಧನುರ್ಧಾತಾ ಮುಸಲಂ ಚ ಜಯಸ್ತಥಾ।।
ದೀಪ್ಯಮಾನ ಔಷಧಿಗಳನ್ನು ಅಶ್ವಿನಿಯರು ಹಿಡಿದರು. ಧಾತನು ಧನುವನ್ನು ಹಿಡಿದನು ಮತ್ತು ಜಯನು ಮುಸಲವನ್ನು ಹಿಡಿದನು.
01218033a ಪರ್ವತಂ ಚಾಪಿ ಜಗ್ರಾಹ ಕ್ರುದ್ಧಸ್ತ್ವಷ್ಟಾ ಮಹಾಬಲಃ।
01218033c ಅಂಶಸ್ತು ಶಕ್ತಿಂ ಜಗ್ರಾಹ ಮೃತ್ಯುರ್ದೇವಃ ಪರಶ್ವಧಂ।।
ಕೃದ್ಧ ಮಹಾಬಲಿ ತ್ವಷ್ಟನು ಪರ್ವತವನ್ನೇ ಹಿಡಿದನು. ಅಂಶನು ಶಕ್ತಿಯನ್ನು ಹಿಡಿದನು ಮತ್ತು ಮೃತ್ಯುದೇವನು ಪರಶುವನ್ನು ಹಿಡಿದನು.
01218034a ಪ್ರಗೃಹ್ಯ ಪರಿಘಂ ಘೋರಂ ವಿಚಚಾರಾರ್ಯಮಾ ಅಪಿ।
01218034c ಮಿತ್ರಶ್ಚ ಕ್ಷುರಪರ್ಯಂತಂ ಚಕ್ರಂ ಗೃಹ್ಯ ವ್ಯತಿಷ್ಠತ।।
ಆರ್ಯಮನು ಘೋರ ಪರಿಘವನ್ನು ಹಿಡಿದು ಚಲಿಸಿದನು ಮತ್ತು ಮಿತ್ರನು ಕ್ಷುರಪರ್ಯಂತ ಚಕ್ರವನ್ನು ಹಿಡಿದು ನಿಂತನು.
01218035a ಪೂಷಾ ಭಗಶ್ಚ ಸಂಕ್ರುದ್ಧಃ ಸವಿತಾ ಚ ವಿಶಾಂ ಪತೇ।
01218035c ಆತ್ತಕಾರ್ಮುಕನಿಸ್ತ್ರಿಂಶಾಃ ಕೃಷ್ಣಪಾರ್ಥಾವಭಿದ್ರುತಾಃ।।
ವಿಶಾಂಪತೇ! ಸಂಕೃದ್ಧ ಪೂಷಾ, ಭಗ ಮತ್ತು ಸವಿತರು ಧನುಸ್ಸು ಮತ್ತು ಖಡ್ಗಗಳನ್ನು ಹಿಡಿದು ಕೃಷ್ಣ-ಪಾರ್ಥರ ಮೇಲೆ ಧಾಳಿಯಿಟ್ಟರು.
01218036a ರುದ್ರಾಶ್ಚ ವಸವಶ್ಚೈವ ಮರುತಶ್ಚ ಮಹಾಬಲಾಃ।
01218036c ವಿಶ್ವೇದೇವಾಸ್ತಥಾ ಸಾಧ್ಯಾ ದೀಪ್ಯಮಾನಾಃ ಸ್ವತೇಜಸಾ।।
01218037a ಏತೇ ಚಾನ್ಯೇ ಚ ಬಹವೋ ದೇವಾಸ್ತೌ ಪುರುಷೋತ್ತಮೌ।
01218037c ಕೃಷ್ಣಪಾರ್ಥೌ ಜಿಘಾಂಸಂತಃ ಪ್ರತೀಯುರ್ವಿವಿಧಾಯುಧಾಃ।।
ರುದ್ರರು, ವಸವರು, ಮಹಾಬಲಿ ಮರುತರು, ವಿಶ್ವೇದೇವರು, ಸಾಧ್ಯರು ಮತ್ತು ಇನ್ನೂ ಇತರ ಅನೇಕ ದೇವತೆಗಳು ಪುರುಷೋತ್ತಮ ಕೃಷ್ಣ-ಪಾರ್ಥರನ್ನು ಕೊಲ್ಲಲು ತಮ್ಮ ದೀಪ್ಯಮಾನ ತೇಜಸ್ಸಿನಿಂದ ಮತ್ತು ವಿವಿಧ ಆಯುಧಗಳಿಂದ ಮುನ್ನುಗ್ಗಿದರು.
01218038a ತತ್ರಾದ್ಭುತಾನ್ಯದೃಶ್ಯಂತ ನಿಮಿತ್ತಾನಿ ಮಹಾಹವೇ।
01218038c ಯುಗಾಂತಸಮರೂಪಾಣಿ ಭೂತೋತ್ಸಾದಾಯ ಭಾರತ।।
ಭಾರತ! ಆ ಅದ್ಭುತ ಯುದ್ಧದಲ್ಲಿ ಯುಗಾಂತಸಮರೂಪ ನಿಮಿತ್ತಗಳು ಕಾಣಿಸಿಕೊಂಡು ಭೂತಗಳ ಅಂತ್ಯವನ್ನು ಸೂಚಿಸಿದವು.
01218039a ತಥಾ ತು ದೃಷ್ಟ್ವಾ ಸಂರಬ್ಧಂ ಶಕ್ರಂ ದೇವೈಃ ಸಹಾಚ್ಯುತೌ।
01218039c ಅಭೀತೌ ಯುಧಿ ದುರ್ಧರ್ಷೌ ತಸ್ಥತುಃ ಸಜ್ಜಕಾರ್ಮುಕೌ।।
01218040a ಆಗತಾಂಶ್ಚೈವ ತಾನ್ದೃಷ್ಟ್ವಾ ದೇವಾನೇಕೈಕಶಸ್ತತಃ।
01218040c ನ್ಯವಾರಯೇತಾಂ ಸಂಕ್ರುದ್ಧೌ ಬಾಣೈರ್ವಜ್ರೋಪಮೈಸ್ತದಾ।।
ಅವರೀರ್ವರು ಅಚ್ಯುತರು ದೇವತೆಗಳೊಡಗೂಡಿ ಮುನ್ನುಗ್ಗುತ್ತಿದ್ದ ಶಕ್ರನನ್ನು ನೋಡಿ ನಿರ್ಭೀತರಾಗಿ ತಮ್ಮ ಧನುಸ್ಸುಗಳನ್ನು ಹಿಡಿದು ಸಿದ್ಧರಾಗಿ ಯುದ್ಧದಲ್ಲಿ ದುರ್ಧರ್ಷರಾಗಿ ನಿಂತರು. ಎಲ್ಲಕಡೆಯಿಂದಲೂ ಮುಂದುವರೆಯುತ್ತಿದ್ದ ದೇವತೆಗಳನ್ನು ನೋಡಿದ ಆ ಸಂಕೃದ್ಧರು ತಮ್ಮ ವಜ್ರಸದೃಶ ಬಾಣಗಳಿಂದ ಅವರನ್ನು ತಡೆದರು.
01218041a ಅಸಕೃದ್ಭಗ್ನಸಂಕಲ್ಪಾಃ ಸುರಾಶ್ಚ ಬಹುಶಃ ಕೃತಾಃ।
01218041c ಭಯಾದ್ರಣಂ ಪರಿತ್ಯಜ್ಯ ಶಕ್ರಮೇವಾಭಿಶಿಶ್ರಿಯುಃ।।
ಪುನಃ ಪುನಃ ಅವರ ಸಂಕಲ್ಪವು ಭಗ್ನವಾಗಲು ಅಸಹಾಯಕ ಸುರರು ಭಯದಿಂದ ರಣವನ್ನು ಪರಿತ್ಯಜಿಸಿ ಶಕ್ರನಲ್ಲಿ ಶರಣು ಹೋದರು.
01218042a ದೃಷ್ಟ್ವಾ ನಿವಾರಿತಾನ್ದೇವಾನ್ಮಾಧವೇನಾರ್ಜುನೇನ ಚ।
01218042c ಆಶ್ಚರ್ಯಮಗಮಂಸ್ತತ್ರ ಮುನಯೋ ದಿವಿ ವಿಷ್ಠಿತಾಃ।।
ದಿವಿಯಲ್ಲಿ ನೆಲೆಸಿದ್ದ ಮುನಿಗಳು ಮಾಧವಾರ್ಜುನರು ದೇವತೆಗಳನ್ನು ತಡೆಹಿಡಿದಿದ್ದುದನ್ನು ನೋಡಿ ಅಶ್ಚರ್ಯಚಕಿತರಾದರು.
01218043a ಶಕ್ರಶ್ಚಾಪಿ ತಯೋರ್ವೀರ್ಯಮುಪಲಭ್ಯಾಸಕೃದ್ರಣೇ।
01218043c ಬಭೂವ ಪರಮಪ್ರೀತೋ ಭೂಯಶ್ಚೈತಾವಯೋಧಯತ್।।
ರಣದಲ್ಲಿ ಅವರಿಬ್ಬರ ವೀರತನವನ್ನು ನೋಡಿ ಪರಮಪ್ರೀತನಾಗಿ ಶಕ್ರನು ಇನ್ನೊಮ್ಮೆ ಅವರೊಡನೆ ಯುದ್ಧಮಾಡತೊಡಗಿದನು.
01218044a ತತೋಽಶ್ಮವರ್ಷಂ ಸುಮಹದ್ವ್ಯಸೃಜತ್ಪಾಕಶಾಸನಃ।
01218044c ಭೂಯ ಏವ ತದಾ ವೀರ್ಯಂ ಜಿಜ್ಞಾಸುಃ ಸವ್ಯಸಾಚಿನಃ।
01218044e ತಚ್ಶರೈರರ್ಜುನೋ ವರ್ಷಂ ಪ್ರತಿಜಘ್ನೇಽತ್ಯಮರ್ಷಣಃ।।
ಸವ್ಯಸಾಚಿಯ ವೀರ್ಯವನ್ನು ಪರೀಕ್ಷಿಸಲು ಪಾಕಶಾಸನನು ಮಹಾ ಕಲ್ಲುಬಂಡೆಗಳ ಮಳೆಯನ್ನು ಸುರಿಸಿದನು. ಆದರೆ ಅರ್ಜುನನನು ತನ್ನ ಶರಗಳ ಮಳೆಯಿಂದ ಅವುಗಳನ್ನು ತುಂಡರಿಸಿದನು.
01218045a ವಿಫಲಂ ಕ್ರಿಯಮಾಣಂ ತತ್ಸಂಪ್ರೇಕ್ಷ್ಯ ಚ ಶತಕ್ರತುಃ।
01218045c ಭೂಯಃ ಸಂವರ್ಧಯಾಮಾಸ ತದ್ವರ್ಷಂ ದೇವರಾಡಥ।।
ದೇವರಾಜ ಶತಕ್ರತುವು ತನ್ನ ಪ್ರಯತ್ನವು ವಿಫಲವಾದುದನ್ನು ನೋಡಿ ಪ್ರಹಾರವನ್ನು ಇನ್ನೂ ಹೆಚ್ಚಿಸಿದನು.
01218046a ಸೋಽಶ್ಮವರ್ಷಂ ಮಹಾವೇಗೈರಿಷುಭಿಃ ಪಾಕಶಾಸನಿಃ।
01218046c ವಿಲಯಂ ಗಮಯಾಮಾಸ ಹರ್ಷಯನ್ಪಿತರಂ ತದಾ।।
ಆದರೆ ಪಾಕಶಾಸನಿಯು ತನ್ನ ತಂದೆಯನ್ನು ಅಣಕಿಸುತ್ತಾ ಮಹಾವೇಗದ ಶರಗಳಿಂದ ಆ ಕಲ್ಲುಬಂಡೆಗಳ ಮಳೆಯನ್ನು ವಿಲಯಗೊಳಿಸಿದನು.
01218047a ಸಮುತ್ಪಾಟ್ಯ ತು ಪಾಣಿಭ್ಯಾಂ ಮಂದರಾಚ್ಛಿಖರಂ ಮಹತ್।
01218047c ಸದ್ರುಮಂ ವ್ಯಸೃಜಚ್ಛಕ್ರೋ ಜಿಘಾಂಸುಃ ಪಾಂಡುನಂದನಂ।।
ಶಕ್ರನು ಅವನನ್ನು ಶಿಕ್ಷಿಸಲು ತನ್ನ ಕೈಗಳಿಂದ ಮರಗಳೊಡನೆ ಮಂದರದ ಒಂದು ಮಹಾ ಶಿಖರವನ್ನು ಕಿತ್ತು ಪಾಂಡುನಂದನನ ಮೇಲೆ ಎಸೆದನು.
01218048a ತತೋಽರ್ಜುನೋ ವೇಗವದ್ಭಿರ್ಜ್ವಲಿತಾಗ್ರೈರಜಿಹ್ಮಗೈಃ।
01218048c ಬಾಣೈರ್ವಿಧ್ವಂಸಯಾಮಾಸ ಗಿರೇಃ ಶೃಂಗಂ ಸಹಸ್ರಧಾ।।
ಆಗ ಅರ್ಜುನನು ತುದಿಯು ಜ್ವಲಿಸುತ್ತಿರುವ ವೇಗ ಬಾಣಗಳಿಂದ ಆ ಗಿರಿಶೃಂಗವನ್ನು ಸಹಸ್ರ ತುಂಡುಗಳನ್ನಾಗಿ ಕತ್ತರಿಸಿದನು.
01218049a ಗಿರೇರ್ವಿಶೀರ್ಯಮಾಣಸ್ಯ ತಸ್ಯ ರೂಪಂ ತದಾ ಬಭೌ।
01218049c ಸಾರ್ಕಚಂದ್ರಗ್ರಹಸ್ಯೇವ ನಭಸಃ ಪ್ರವಿಶೀರ್ಯತಃ।।
ಬೀಳುತ್ತಿರುವ ಆ ಗಿರಿಯ ತುಂಡುಗಳು ಅರ್ಕ-ಚಂದ್ರಗ್ರಹಗಳೊಡನೆ ನಭವೇ ಬೀಳುತ್ತಿದೆಯೋ ಎನ್ನುವಂತೆ ತೋರುತ್ತಿತ್ತು.
01218050a ತೇನಾವಾಕ್ಪತತಾ ದಾವೇ ಶೈಲೇನ ಮಹತಾ ಭೃಶಂ।
01218050c ಭೂಯ ಏವ ಹತಾಸ್ತತ್ರ ಪ್ರಾಣಿನಃ ಖಾಂಡವಾಲಯಾಃ।।
ಆ ಮಹಾ ಶೈಲವು ವನದ ಮೇಲೆ ಬೀಳಲು ಅದರ ಘಾತದಿಂದ ಖಾಂಡವದಲ್ಲಿ ವಾಸಿಸುತ್ತಿದ್ದ ಇನ್ನೂ ಹೆಚ್ಚಿನ ಪ್ರಾಣಿಗಳು ಹತವಾದವು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಖಾಂಡವದಾಹಪರ್ವಣಿ ದೇವಕೃಷ್ಣಾರ್ಜುನಯುದ್ಧೇ ಅಷ್ಟಾದಶಾಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಖಾಂಡವದಾಹಪರ್ವದಲ್ಲಿ ದೇವಕೃಷ್ಣಾರ್ಜುನಯುದ್ಧ ಎನ್ನುವ ಇನ್ನೂರಾ ಹದಿನೆಂಟನೆಯ ಅಧ್ಯಾಯವು.