217 ಇಂದ್ರಕ್ರೋಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಖಾಂಡವದಾಹ ಪರ್ವ

ಅಧ್ಯಾಯ 217

ಸಾರ

ಖಾಂಡವ ದಹನ (1-13). ಇಂದ್ರನು ಅಗ್ನಿಯನ್ನು ಆರಿಸಲು ವನದ ಮೇಲೆ ಜೋರಾಗಿ ಮಳೆಸುರಿಸಿದುದು (14-22).

01217001 ವೈಶಂಪಾಯನ ಉವಾಚ।
01217001a ತೌ ರಥಾಭ್ಯಾಂ ನರವ್ಯಾಘ್ರೌ ದಾವಸ್ಯೋಭಯತಃ ಸ್ಥಿತೌ।
01217001c ದಿಕ್ಷು ಸರ್ವಾಸು ಭೂತಾನಾಂ ಚಕ್ರಾತೇ ಕದನಂ ಮಹತ್।।

ವೈಶಂಪಾಯನನು ಹೇಳಿದನು: “ಅರಣ್ಯದ ಎರಡು ಕಡೆಗಳಲ್ಲಿ ರಥವನ್ನೇರಿ ನಿಂತಿದ್ದ ಆ ಇಬ್ಬರು ನರವ್ಯಾಘ್ರರು ಸರ್ವ ಭೂತಗಳ ಮಹಾ ಸಂಹಾರ ಕಾರ್ಯದಲ್ಲಿ ತೊಡಗಿದರು.

01217002a ಯತ್ರ ಯತ್ರ ಹಿ ದೃಶ್ಯಂತೇ ಪ್ರಾಣಿನಃ ಖಾಂಡವಾಲಯಾಃ।
01217002c ಪಲಾಯಂತಸ್ತತ್ರ ತತ್ರ ತೌ ವೀರೌ ಪರ್ಯಧಾವತಾಂ।।

ಎಲ್ಲೆಲ್ಲಿ ಖಾಂಡವವನ್ನು ಬಿಟ್ಟು ಓಡಿಹೋಗುತ್ತಿರುವ ಪ್ರಾಣಿಗಳು ಕಂಡುಬರುತ್ತಿದ್ದವೋ ಅಲ್ಲಲ್ಲಿ ಅವುಗಳನ್ನು ಬೆನ್ನಟ್ಟಿ ಆ ವೀರರು ಕೆಳಗುರುಳಿಸುತ್ತಿದ್ದರು.

01217003a ಚಿದ್ರಂ ಹಿ ನ ಪ್ರಪಶ್ಯಂತಿ ರಥಯೋರಾಶುವಿಕ್ರಮಾತ್।
01217003c ಆವಿದ್ಧಾವಿವ ದೃಶ್ಯೇತೇ ರಥಿನೌ ತೌ ರಥೋತ್ತಮೌ।।

ರಥದ ಮಹಾವೇಗದಿಂದಾಗಿ ತಪ್ಪಿಸಿಕೊಂಡು ಹೋಗಲು ಯಾವುದೇ ಮಾರ್ಗವೂ ತೋರಿಬರುತ್ತಿರಲಿಲ್ಲ. ರಥಗಳೆರಡೂ ಮತ್ತು ರಥಿಗಳೆರಡೂ ಅತಿ ಬಲವಾದ ಜೋಡಿಗಳಾಗಿ ತೋರುತ್ತಿದ್ದರು.

01217004a ಖಾಂಡವೇ ದಹ್ಯಮಾನೇ ತು ಭೂತಾನ್ಯಥ ಸಹಸ್ರಶಃ।
01217004c ಉತ್ಪೇತುರ್ಭೈರವಾನ್ನಾದಾನ್ವಿನದಂತೋ ದಿಶೋ ದಶ।।

ಖಾಂಡವವು ಹತ್ತಿ ಉರಿಯುತ್ತಿರಲು ಅದರಲ್ಲಿದ್ದ ಸಹಸ್ರಾರು ಜೀವಿಗಳು ಭೈರವ ಧ್ವನಿಗಳಲ್ಲಿ ಚೀರುತ್ತಾ ಹತ್ತು ದಿಕ್ಕುಗಳಲ್ಲಿ ಹಾರತೊಡಗಿದವು.

01217005a ದಗ್ಧೈಕದೇಶಾ ಬಹವೋ ನಿಷ್ಟಪ್ತಾಶ್ಚ ತಥಾಪರೇ।
01217005c ಸ್ಫುಟಿತಾಕ್ಷಾ ವಿಶೀರ್ಣಾಶ್ಚ ವಿಪ್ಲುತಾಶ್ಚ ವಿಚೇತಸಃ।।

ಬಹಳಷ್ಟು ಒಂದೇ ಸ್ಥಳದಲ್ಲಿ ಸುಟ್ಟುಹೋದವು, ಇನ್ನು ಕೆಲವು ಅಲ್ಲಲ್ಲಿ ಹರಡಿ ಚೆಲ್ಲಿ ಮೂರ್ಛೆ ತಪ್ಪಿ ಕಣ್ಣುಗಳು ಒಡೆದು ಬೆಂದು ಹೋದವು.

01217006a ಸಮಾಲಿಂಗ್ಯ ಸುತಾನನ್ಯೇ ಪಿತೄನ್ಮಾತೄಂಸ್ತಥಾಪರೇ।
01217006c ತ್ಯಕ್ತುಂ ನ ಶೇಕುಃ ಸ್ನೇಹೇನ ತಥೈವ ನಿಧನಂ ಗತಾಃ।।

ಕೆಲವರು ತಮ್ಮ ಮಕ್ಕಳನ್ನು, ಇನ್ನು ಕೆಲವರು ತಮ್ಮ ತಂದೆ ತಾಯಿಯರನ್ನು ತ್ಯಜಿಸಲಾರದೆ ಸ್ನೇಹದಿಂದ ಶೋಕದಿಂದ ಅಪ್ಪಿ ಹಿಡಿದು ಅಲ್ಲಿಯೇ ನಿಧನರಾದರು.

01217007a ವಿಕೃತೈರ್ದರ್ಶನೈರನ್ಯೇ ಸಮುತ್ಪೇತುಃ ಸಹಸ್ರಶಃ।
01217007c ತತ್ರ ತತ್ರ ವಿಘೂರ್ಣಂತಃ ಪುನರಗ್ನೌ ಪ್ರಪೇದಿರೇ।।

ಇನ್ನು ಕೆಲವರು ನೋಡಲು ವಿಕೃತರಾಗಿ ಸಹಸ್ರಾರು ಸಂಖ್ಯೆಗಳಲ್ಲಿ ಮೇಲೆ ಹಾರಿ ಅಲ್ಲಲ್ಲಿ ಪುನಃ ಉರಿಯುತ್ತಿರುವ ಅಗ್ನಿಯಲ್ಲಿ ಬಿದ್ದರು.

01217008a ದಗ್ಧಪಕ್ಷಾಕ್ಷಿಚರಣಾ ವಿಚೇಷ್ಟಂತೋ ಮಹೀತಲೇ।
01217008c ತತ್ರ ತತ್ರ ಸ್ಮ ದೃಶ್ಯಂತೇ ವಿನಶ್ಯಂತಃ ಶರೀರಿಣಃ।।

ಅಲ್ಲಲ್ಲಿ ಭೂಮಿಯ ಮೇಲೆ ವಿಚೇಷ್ಟರಾಗಿ ರೆಕ್ಕೆ, ಕಣ್ಣು ಮತ್ತು ಪಂಜಗಳು ಸಹಿತ ದೇಹವೆಲ್ಲ ಸುಟ್ಟು ವಿನಾಶರಾಗಿದ್ದುದು ಕಾಣುತ್ತಿತ್ತು.

01217009a ಜಲಸ್ಥಾನೇಷು ಸರ್ವೇಷು ಕ್ವಾಥ್ಯಮಾನೇಷು ಭಾರತ।
01217009c ಗತಸತ್ತ್ವಾಃ ಸ್ಮ ದೃಶ್ಯಂತೇ ಕೂರ್ಮಮತ್ಸ್ಯಾಃ ಸಹಸ್ರಶಃ।।

ಭಾರತ! ಎಲ್ಲ ಜಲಸ್ಥಾನಗಳು ಕುದಿಯುತ್ತಿರಲು ಆಮೆ ಮೀನುಗಳು ಸಹಸ್ರಾರು ಸಂಖ್ಯೆಗಳಲ್ಲಿ ಸತ್ತು ಬಿದ್ದಿರುವುದು ಕಾಣುತ್ತಿತ್ತು.

01217010a ಶರೀರೈಃ ಸಂಪ್ರದೀಪ್ತೈಶ್ಚ ದೇಹವಂತ ಇವಾಗ್ನಯಃ।
01217010c ಅದೃಶ್ಯಂತ ವನೇ ತಸ್ಮಿನ್ಪ್ರಾಣಿನಃ ಪ್ರಾಣಸಂಕ್ಷಯೇ।।

ಆ ವನದಲ್ಲಿದ್ದ ಪ್ರಾಣಿಗಳೆಲ್ಲವೂ ಉರಿಯುತ್ತಿರುವ ಶರೀರಗಳಿಂದ ಉರಿಯುತ್ತಿರುವ ಬೆಂಕಿಗಳಂತೆ ತೋರುತ್ತಿದ್ದು ತಮ್ಮ ಪ್ರಾಣಗಳನ್ನು ಕಳೆದುಕೊಂಡು ನಾಶವಾಗುತ್ತಿದ್ದವು.

01217011a ತಾಂಸ್ತಥೋತ್ಪತತಃ ಪಾರ್ಥಃ ಶರೈಃ ಸಂಚಿದ್ಯ ಖಂಡಶಃ।
01217011c ದೀಪ್ಯಮಾನೇ ತತಃ ಪ್ರಾಸ್ಯತ್ಪ್ರಹಸನ್ ಕೃಷ್ಣವರ್ತ್ಮನಿ।।

ಅವರು ಹೊರಗೆ ಹಾರಲು ಪಾರ್ಥನು ನಗುತ್ತಾ ಶರಗಳಿಂದ ಹೊಡೆದು ತುಂಡುಮಾಡಿ ಉರಿಯುತ್ತಿರುವ ಬೆಂಕಿಯಲ್ಲಿ ಪುನಃ ಬೀಳಿಸುತ್ತಿದ್ದನು.

01217012a ತೇ ಶರಾಚಿತಸರ್ವಾಂಗಾ ವಿನದಂತೋ ಮಹಾರವಾನ್।
01217012c ಊರ್ಧ್ವಮುತ್ಪತ್ಯ ವೇಗೇನ ನಿಪೇತುಃ ಪಾವಕೇ ಪುನಃ।।

ಸರ್ವಾಂಗಗಳೂ ಶರಗಳಿಂದ ಚುಚ್ಚಿರಲು ಮಹಾ ರೋದನೆಯಿಂದ ವೇಗದಿಂದ ಮೇಲಕ್ಕೆ ಹಾರಿ ಪುನಃ ಅಗ್ನಿಯಲ್ಲಿ ಬೀಳುತ್ತಿದ್ದವು.

01217013a ಶರೈರಭ್ಯಾಹತಾನಾಂ ಚ ದಹ್ಯತಾಂ ಚ ವನೌಕಸಾಂ।
01217013c ವಿರಾವಃ ಶ್ರೂಯತೇ ಹ ಸ್ಮ ಸಮುದ್ರಸ್ಯೇವ ಮಥ್ಯತಃ।।

ಶರಗಳಿಂದ ಹೊಡೆಯಲ್ಪಟ್ಟು ಸುಟ್ಟುಹೋಗುತ್ತಿದ್ದ ಆ ವನೌಕಸರ ರೋದನೆಯು ಮಥಿಸಲ್ಪಟ್ಟ ಸಮುದ್ರದಂತೆ ಕೇಳಿಬರುತ್ತಿತ್ತು.

01217014a ವಹ್ನೇಶ್ಚಾಪಿ ಪ್ರಹೃಷ್ಟಸ್ಯ ಖಮುತ್ಪೇತುರ್ಮಹಾರ್ಚಿಷಃ।
01217014c ಜನಯಾಮಾಸುರುದ್ವೇಗಂ ಸುಮಹಾಂತಂ ದಿವೌಕಸಾಂ।।

ಸಂತೋಷದಿಂದ ಭುಗಿಲೆಂದು ಉರಿಯುತ್ತಿರುವ ಬೆಂಕಿಯು ಆಕಾಶವನ್ನು ಮುಟ್ಟಿ ದಿವೌಕಸರಲ್ಲಿ ಮಹಾ ಉದ್ವೇಗವನ್ನು ಉಂಟುಮಾಡಿತು.

01217015a ತತೋ ಜಗ್ಮುರ್ಮಹಾತ್ಮಾನಃ ಸರ್ವ ಏವ ದಿವೌಕಸಃ।
01217015c ಶರಣಂ ದೇವರಾಜಾನಂ ಸಹಸ್ರಾಕ್ಷಂ ಪುರಂದರಂ।।

ಆಗ ಮಹಾತ್ಮ ದಿವೌಕಸರೆಲ್ಲರೂ ದೇವರಾಜ ಸಹಸ್ರಾಕ್ಷ ಪುರಂದರನ ಶರಣು ಹೊಕ್ಕರು.

01217016 ದೇವಾ ಊಚುಃ।
01217016a ಕಿಂ ನ್ವಿಮೇ ಮಾನವಾಃ ಸರ್ವೇ ದಹ್ಯಂತೇ ಕೃಷ್ಣವರ್ತ್ಮನಾ।
01217016c ಕಚ್ಚಿನ್ನ ಸಂಕ್ಷಯಃ ಪ್ರಾಪ್ತೋ ಲೋಕಾನಾಮಮರೇಶ್ವರ।।

ದೇವತೆಗಳು ಹೇಳಿದರು: “ಇವರೆಲ್ಲರೂ ಏಕೆ ಬೆಂಕಿಯಲ್ಲಿ ಸುಟ್ಟುಹೋಗುತ್ತಿದ್ದಾರೆ? ಲೋಕಗಳ ಅಮರೇಶ್ವರ! ಪ್ರಳಯವೇನಾದರೂ ಪ್ರಾಪ್ತವಾಗಿದೆಯೇ?””

01217017 ವೈಶಂಪಾಯನ ಉವಾಚ।
01217017a ತಚ್ಛೃತ್ವಾ ವೃತ್ರಹಾ ತೇಭ್ಯಃ ಸ್ವಯಮೇವಾನ್ವವೇಕ್ಷ್ಯ ಚ।
01217017c ಖಾಂಡವಸ್ಯ ವಿಮೋಕ್ಷಾರ್ಥಂ ಪ್ರಯಯೌ ಹರಿವಾಹನಃ।।

ವೈಶಂಪಾಯನನು ಹೇಳಿದನು: “ಅವರ ಈ ಮಾತುಗಳನ್ನು ಕೇಳಿದ ವೃತ್ರಹ ಹರಿವಾಹನನು ಸ್ವತಃ ಕೆಳಗಿ ಇಣುಕಿ ನೋಡಿ ಖಾಂಡವದ ವಿಮೋಕ್ಷಕ್ಕಾಗಿ ಧಾವಿಸಿದನು.

01217018a ಮಹತಾ ಮೇಘಜಾಲೇನ ನಾನಾರೂಪೇಣ ವಜ್ರಭೃತ್।
01217018c ಆಕಾಶಂ ಸಮವಸ್ತೀರ್ಯ ಪ್ರವವರ್ಷ ಸುರೇಶ್ವರಃ।।

ವಜ್ರಭೃತ ಸುರೇಶ್ವರನು ನಾನಾರೂಪದ ಮಹಾಮೇಘಜಾಲದಿಂದ ಆಕಾಶವನ್ನು ತುಂಬಿಸಿ ಮಳೆಯನ್ನು ಸುರಿಸಲು ಪ್ರಾರಂಭಿಸಿದನು.

01217019a ತತೋಽಕ್ಷಮಾತ್ರಾ ವಿಸೃಜನ್ಧಾರಾಃ ಶತಸಹಸ್ರಶಃ।
01217019c ಅಭ್ಯವರ್ಷತ್ಸಹಸ್ರಾಕ್ಷಃ ಪಾವಕಂ ಖಾಂಡವಂ ಪ್ರತಿ।।

ಸಹಸ್ರಾಕ್ಷನು ಖಾಂಡವವನ್ನು ಸುಡುತ್ತಿದ್ದ ಪಾವಕನ ಮೇಲೆ ನೂರಾರು ಸಾವಿರಾರು ಮಳೆಗಳ ಧಾರೆಗಳನ್ನು ಸುರಿಸಿದನು.

01217020a ಅಸಂಪ್ರಾಪ್ತಾಸ್ತು ತಾ ಧಾರಾಸ್ತೇಜಸಾ ಜಾತವೇದಸಃ।
01217020c ಖ ಏವ ಸಮಶುಷ್ಯಂತ ನ ಕಾಶ್ಚಿತ್ಪಾವಕಂ ಗತಾಃ।।

ಆದರೆ ಆ ಮಳೆಯ ಧಾರೆಗಳು ಕೆಳಗೆ ತಲುಪುವುದರೊಳಗೇ ಜಾತವೇದಸನ ತೇಜಸ್ಸಿನಿಂದ ಬತ್ತಿ ಆವಿಯಾಗಿ ಪಾವಕನನ್ನು ಮುಟ್ಟದೆಯೇ ಹೋದವು.

01217021a ತತೋ ನಮುಚಿಹಾ ಕ್ರುದ್ಧೋ ಭೃಶಮರ್ಚಿಷ್ಮತಸ್ತದಾ।
01217021c ಪುನರೇವಾಭ್ಯವರ್ಷತ್ತಮಂಭಃ ಪ್ರವಿಸೃಜನ್ಬಹು।।

ಆಗ ನಮೂಚಿಹನು ಅಗ್ನಿಯ ಮೇಲೆ ಅತ್ಯಂತ ಕೋಪಗೊಂಡು ಇನ್ನೂ ಹೆಚ್ಚಿನ ಮಳೆಯನ್ನು ಸುರಿಸಲು ಪುನಃ ಪ್ರಾರಂಭಿಸಿದನು.

01217022a ಅರ್ಚಿರ್ಧಾರಾಭಿಸಂಬದ್ಧಂ ಧೂಮವಿದ್ಯುತ್ಸಮಾಕುಲಂ।
01217022c ಬಭೂವ ತದ್ವನಂ ಘೋರಂ ಸ್ತನಯಿತ್ನುಸಘೋಷವತ್।।

ಬೆಂಕಿ ಮತ್ತು ಮಳೆಯ ಯುದ್ಧವು ನಡೆಯುತ್ತಿರಲು ಹೊಗೆ ಮಿಂಚುಗಳ ಮಿಶ್ರಣದಿಂದ ಮತ್ತು ಮೇಘಘರ್ಜನೆಗಳಿಂದ ಆ ವನವು ಘೋರರೂಪವನ್ನು ತಾಳಿತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಖಾಂಡವದಾಹಪರ್ವಣಿ ಇಂದ್ರಕ್ರೋಧೇ ಸಪ್ತದಶಾಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಖಾಂಡವದಾಹಪರ್ವದಲ್ಲಿ ಇಂದ್ರಕ್ರೋಧವೆನ್ನುವ ಇನ್ನೂರಾ ಹದಿನೇಳನೆಯ ಅಧ್ಯಾಯವು.