ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಖಾಂಡವದಾಹ ಪರ್ವ
ಅಧ್ಯಾಯ 216
ಸಾರ
ಅಗ್ನಿಯು ವರುಣನಿಂದ ಉತ್ತಮ ರಥವನ್ನೂ, ಅರ್ಜುನನಿಗೆ ಗಾಂಡೀವ ಧನುಸ್ಸು ಮತ್ತು ಎರಡು ಅಕ್ಷಯ ಬತ್ತಳಿಕೆಗಳನ್ನೂ, ಕೃಷ್ಣನಿಗೆ ಸುದರ್ಶನ ಚಕ್ರವನ್ನೂ, ಕೌಮೋದಕೀ ಎನ್ನುವ ಗದೆಯನ್ನೂ ಕೊಡಿಸಿದುದು; ಕೃಷ್ಣಾರ್ಜುನರು ಸಿದ್ಧರಾದುದು (1-30). ಅಗ್ನಿಯು ಖಾಂಡವವನ್ನು ಸುಡಲು ಪ್ರಾರಂಭಿಸಿದುದು (31-34).
01216001 ವೈಶಂಪಾಯನ ಉವಾಚ।
01216001a ಏವಮುಕ್ತಸ್ತು ಭಗವಾನ್ಧೂಮಕೇತುರ್ಹುತಾಶನಃ।
01216001c ಚಿಂತಯಾಮಾಸ ವರುಣಂ ಲೋಕಪಾಲಂ ದಿದೃಕ್ಷಯಾ।
01216001e ಆದಿತ್ಯಮುದಕೇ ದೇವಂ ನಿವಸಂತಂ ಜಲೇಶ್ವರಂ।।
ವೈಶಂಪಾಯನನು ಹೇಳಿದನು: “ಇದನ್ನು ಕೇಳಿದ ಧೂಮಕೇತು ಭಗವಾನ್ ಹುತಾಶನನು ಲೋಕಪಾಲ ವರುಣನನ್ನು ನೋಡಬೇಕೆಂದು ಆ ಉದಕವಾಸಿ ಜಲೇಶ್ವರ ಆದಿತ್ಯನನ್ನು ನೆನೆದನು.
01216002a ಸ ಚ ತಚ್ಚಿಂತಿತಂ ಜ್ಞಾತ್ವಾ ದರ್ಶಯಾಮಾಸ ಪಾವಕಂ।
01216002c ತಮಬ್ರವೀದ್ಧೂಮಕೇತುಃ ಪ್ರತಿಪೂಜ್ಯ ಜಲೇಶ್ವರಂ।
01216002e ಚತುರ್ಥಂ ಲೋಕಪಾಲಾನಾಂ ರಕ್ಷಿತಾರಂ ಮಹೇಶ್ವರಂ।।
ಅವನ ಯೋಚನೆಯನ್ನು ತಿಳಿದ ಅವನು ಪಾವಕನಿಗೆ ಕಾಣಿಸಿಕೊಂಡನು. ಧೂಮಕೇತುವು ಲೋಕಪಾಲಕರಲ್ಲಿ ನಾಲ್ಕನೆಯವನಾದ ರಕ್ಷಕ ಮಹೇಶ್ವರ ಜಲೇಶ್ವರನನ್ನು ಪೂಜಿಸಿ ಹೇಳಿದನು:
01216003a ಸೋಮೇನ ರಾಜ್ಞಾ ಯದ್ದತ್ತಂ ಧನುಶ್ಚೈವೇಷುಧೀ ಚ ತೇ।
01216003c ತತ್ಪ್ರಯಚ್ಛೋಭಯಂ ಶೀಘ್ರಂ ರಥಂ ಚ ಕಪಿಲಕ್ಷಣಂ।।
“ರಾಜ ಸೋಮನು ನಿನಗೆ ಒಮ್ಮೆ ನೀಡಿದ್ದ ಧನುಸ್ಸು, ಎರಡು ಬತ್ತಳಿಕೆಗಳು ಮತ್ತು ಕಪಿಲಕ್ಷಣದ ರಥವನ್ನು ಶೀಘ್ರದಲ್ಲಿಯೇ ಇವರೀರ್ವರಿಗೆ ಕೊಡು.
01216004a ಕಾರ್ಯಂ ಹಿ ಸುಮಹತ್ಪಾರ್ಥೋ ಗಾಂಡೀವೇನ ಕರಿಷ್ಯತಿ।
01216004c ಚಕ್ರೇಣ ವಾಸುದೇವಶ್ಚ ತನ್ಮದರ್ಥೇ ಪ್ರದೀಯತಾಂ।
01216004e ದದಾನೀತ್ಯೇವ ವರುಣಃ ಪಾವಕಂ ಪ್ರತ್ಯಭಾಷತ।।
ಆ ಗಾಂಡೀವದಿಂದ ಪಾರ್ಥನು ಒಂದು ಸುಮಹತ್ತರ ಕಾರ್ಯವನ್ನು ನೆರವೇರಿಸುತ್ತಾನೆ. ನನಗೋಸ್ಕರವಾಗಿ ವಾಸುದೇವನಿಗೆ ಚಕ್ರವನ್ನು ನೀಡು. “ಇವುಗಳನ್ನು ಕೊಡುತ್ತೇನೆ” ಎಂದು ವರುಣನು ಪಾವಕನಿಗೆ ಉತ್ತರಿಸಿದನು.
01216005a ತತೋಽದ್ಭುತಂ ಮಹಾವೀರ್ಯಂ ಯಶಃಕೀರ್ತಿವಿವರ್ಧನಂ।
01216005c ಸರ್ವಶಸ್ತ್ರೈರನಾಧೃಷ್ಯಂ ಸರ್ವಶಸ್ತ್ರಪ್ರಮಾಥಿ ಚ।
01216005e ಸರ್ವಾಯುಧಮಹಾಮಾತ್ರಂ ಪರಸೇನಾಪ್ರಧರ್ಷಣಂ।।
01216006a ಏಕಂ ಶತಸಹಸ್ರೇಣ ಸಮ್ಮಿತಂ ರಾಷ್ಟ್ರವರ್ಧನಂ।
01216006c ಚಿತ್ರಮುಚ್ಚಾವಚೈರ್ವರ್ಣೈಃ ಶೋಭಿತಂ ಶ್ಲಕ್ಷ್ಣಮವ್ರಣಂ।।
01216007a ದೇವದಾನವಗಂಧರ್ವೈಃ ಪೂಜಿತಂ ಶಾಶ್ವತೀಃ ಸಮಾಃ।
01216007c ಪ್ರಾದಾದ್ವೈ ಧನುರತ್ನಂ ತದಕ್ಷಯ್ಯೌ ಚ ಮಹೇಷುಧೀ।।
01216008a ರಥಂ ಚ ದಿವ್ಯಾಶ್ವಯುಜಂ ಕಪಿಪ್ರವರಕೇತನಂ।
01216008c ಉಪೇತಂ ರಾಜತೈರಶ್ವೈರ್ಗಾಂಧರ್ವೈರ್ಹೇಮಮಾಲಿಭಿಃ।
01216008e ಪಾಂಡುರಾಭ್ರಪ್ರತೀಕಾಶೈರ್ಮನೋವಾಯುಸಮೈರ್ಜವೇ।।
ಆಗ ಆ ಅದ್ಭುತ, ಮಹಾವೀರ್ಯ, ಯಶಸ್ಸು ಮತ್ತು ಕೀರ್ತಿಗಳನ್ನು ಹೆಚ್ಚಿಸುವ, ಎಲ್ಲ ಶಸ್ತ್ರಗಳಿಗೂ ಅನಾದೃಷ, ಸರ್ವಶಸ್ತ್ರ ಪ್ರಮಥಿ, ಸರ್ವಾಯುಧ ಮಹಾಮಾತ್ರವಾದ, ಪರಸೇನೆಯನ್ನು ತತ್ತರಿಸುವ, ಒಂದೇ ಒಂದು ಲಕ್ಷಕ್ಕೆ ಸಮನಾದ, ರಾಷ್ಟ್ರವಿವರ್ಧಕ, ರತ್ನಗಳಿಂದ ಅಲಂಕೃತ, ಸುಂದರ ಬಣ್ಣದ, ನುಣುಪಾದ, ಯಾವುದೇರೀತಿಯ ಗಾಯಗಳು ಇಲ್ಲದ, ಅನಾದಿಕಾಲದಿಂದಲೂ ದೇವ-ದಾನವ-ಗಂಧರ್ವರಿಂದ ಪೂಜಿತ, ಆ ಧನುರತ್ನವನ್ನೂ, ಹಾಗೆಯೇ ಅಕ್ಷಯ ಬತ್ತಳಿಕೆಯನ್ನೂ, ದಿವ್ಯಾಶ್ವಗಳಿಂದ ಕೂಡಿದ, ಗಂಧರ್ವರ ಬೆಳ್ಳಿಯ ಬಣ್ಣದ ಕುದುರೆಗಳಿಂದ ಎಳೆಯಲ್ಪಡುವ, ಕಪಿಪ್ರವರ ಕೇತನವನ್ನು ಹೊಂದಿದ್ದ, ಹೇಮ ಮಾಲೆಗಳಿಂದ ಅಲಂಕೃತ, ಆಕಾಶದಲ್ಲಿ ಮೋಡಗಳಂತೆ ಕಾಣುವ, ವಾಯು ಅಥವಾ ಮನೋವೇಗವನ್ನು ಹೊಂದಿದ ರಥವನ್ನು ನೀಡಿದನು.
01216009a ಸರ್ವೋಪಕರಣೈರ್ಯುಕ್ತಮಜಯ್ಯಂ ದೇವದಾನವೈಃ।
01216009c ಭಾನುಮಂತಂ ಮಹಾಘೋಷಂ ಸರ್ವಭೂತಮನೋಹರಂ।।
ಅದು ಸರ್ವೋಪಕರಣಗಳಿಂದ ಯುಕ್ತವಾಗಿತ್ತು, ದೇವದಾನವರಿಂದ ಅಜೇಯವಾಗಿತ್ತು, ಹೊಳೆಯುತ್ತಿತ್ತು ಮತ್ತು ಸರ್ವಭೂತಮನೋಹರ ಮಹಾಘೋಷವನ್ನು ನೀಡುತ್ತಿತ್ತು.
01216010a ಸಸರ್ಜ ಯತ್ಸ್ವತಪಸಾ ಭೌವನೋ ಭುವನಪ್ರಭುಃ।
01216010c ಪ್ರಜಾಪತಿರನಿರ್ದೇಶ್ಯಂ ಯಸ್ಯ ರೂಪಂ ರವೇರಿವ।।
ರವಿಯಂತೆ ರೂಪವನ್ನೂ ವರ್ಣಿಸಲಸಾಧ್ಯವಾದ ಆ ರಥವನ್ನು ಭುವನಪ್ರಭು ಪ್ರಜಾಪತಿ ವಿಶ್ವಕರ್ಮನು ತನ್ನ ತಪಸ್ಸಿನಿಂದ ಸೃಷ್ಟಿಸಿದ್ದನು.
01216011a ಯಂ ಸ್ಮ ಸೋಮಃ ಸಮಾರುಹ್ಯ ದಾನವಾನಜಯತ್ಪ್ರಭುಃ।
01216011c ನಗಮೇಘಪ್ರತೀಕಾಶಂ ಜ್ವಲಂತಮಿವ ಚ ಶ್ರಿಯಾ।।
ಪ್ರಭು ಸೋಮನು ಅದನ್ನು ಏರಿ ದಾನವರನ್ನು ಜಯಿಸಿದ್ದನು. ಆನೆ ಅಥವಾ ಮೇಘವನ್ನು ಹೋಲುತ್ತಿದ್ದ ಅದು ತನ್ನ ಸೌಂದರ್ಯದಿಂದ ಜ್ವಲಿಸುತ್ತಿತ್ತು.
01216012a ಆಶ್ರಿತಾ ತಂ ರಥಶ್ರೇಷ್ಠಂ ಶಕ್ರಾಯುಧಸಮಾ ಶುಭಾ।
01216012c ತಾಪನೀಯಾ ಸುರುಚಿರಾ ಧ್ವಜಯಷ್ಟಿರನುತ್ತಮಾ।।
ಆ ಶ್ರೇಷ್ಠ ರಥದಲ್ಲಿ ಶಕ್ರನ ಆಯುಧದಂತಿದ್ದ ಬಂಗಾರದಿಂದ ಮಾಡಲ್ಪಟ್ಟ, ಸುಂದರ ಉತ್ತಮ ಶುಭ ಧ್ವಜವೊಂದು ನಿಂತಿತ್ತು.
01216013a ತಸ್ಯಾಂ ತು ವಾನರೋ ದಿವ್ಯಃ ಸಿಂಹಶಾರ್ದೂಲಲಕ್ಷಣಃ।
01216013c ವಿನರ್ದನ್ನಿವ ತತ್ರಸ್ಥಃ ಸಂಸ್ಥಿತೋ ಮೂರ್ಧ್ನ್ಯಶೋಭತ।।
ಅದರ ಮೇಲೆ ಸಿಂಹಶಾರ್ದೂಲ ಲಕ್ಷಣಗಳಿಂದ ಕೂಡಿದ, ಇನ್ನೇನು ಘರ್ಜಿಸುತ್ತಾನೋ ಎನ್ನುವಂತಿರುವ ದಿವ್ಯ ವಾನರನು ಶೋಭಿಸುತ್ತಿದ್ದನು.
01216014a ಧ್ವಜೇ ಭೂತಾನಿ ತತ್ರಾಸನ್ವಿವಿಧಾನಿ ಮಹಾಂತಿ ಚ।
01216014c ನಾದೇನ ರಿಪುಸೈನ್ಯಾನಾಂ ಯೇಷಾಂ ಸಂಜ್ಞಾ ಪ್ರಣಶ್ಯತಿ।।
ಧ್ವಜದ ಮೇಲೆ ವಿವಿಧ ಮಹಾ ಭೂತಗಳು ವಾಸಿಸುತ್ತಿದ್ದು ತಮ್ಮ ನಾದದಿಂದ ರಿಪುಸೈನ್ಯಗಳನ್ನು ಮೂರ್ಛಿತಗೊಳಿಸುತ್ತಿದ್ದವು.
01216015a ಸ ತಂ ನಾನಾಪತಾಕಾಭಿಃ ಶೋಭಿತಂ ರಥಮುತ್ತಮಂ।
01216015c ಪ್ರದಕ್ಷಿಣಮುಪಾವೃತ್ಯ ದೈವತೇಭ್ಯಃ ಪ್ರಣಮ್ಯ ಚ।।
01216016a ಸನ್ನದ್ಧಃ ಕವಚೀ ಖಡ್ಗೀ ಬದ್ಧಗೋಧಾಂಗುಲಿತ್ರವಾನ್।
01216016c ಆರುರೋಹ ರಥಂ ಪಾರ್ಥೋ ವಿಮಾನಂ ಸುಕೃತೀ ಯಥಾ।।
ಅನಂತರ ಆ ಪಾರ್ಥನು ನಾನಾಪತಾಕಗಳಿಂದ ಶೋಭಿತ ಉತ್ತಮ ರಥವನ್ನು ಪ್ರದಕ್ಷಿಣೆಮಾಡಿ ದೇವತೆಗಳಿಗೆ ವಂದಿಸಿ, ಕವಚ-ಖಡ್ಗಗಳನ್ನು ಧರಿಸಿ, ಬೆರಳು-ಕೈಗಳಿಗೆ ಕಟ್ಟಿ ಸನ್ನದ್ಧನಾಗಿ, ಪುಣ್ಯವಂತನು ವಿಮಾನವನ್ನು ಏರುವಂತೆ, ರಥವನ್ನು ಏರಿದನು.
01216017a ತಚ್ಚ ದಿವ್ಯಂ ಧನುಃಶ್ರೇಷ್ಠಂ ಬ್ರಹ್ಮಣಾ ನಿರ್ಮಿತಂ ಪುರಾ।
01216017c ಗಾಂಡೀವಮುಪಸಂಗೃಹ್ಯ ಬಭೂವ ಮುದಿತೋಽರ್ಜುನಃ।।
ಹಿಂದೆ ಬ್ರಹ್ಮನಿಂದ ನಿರ್ಮಿತ ದಿವ್ಯ ಶ್ರೇಷ್ಠ ಧನು ಗಾಂಡೀವವನ್ನು ಕೈಗೆತ್ತಿ ಹಿಡಿದ ಅರ್ಜುನನು ಮುದಿತನಾದನು.
01216018a ಹುತಾಶನಂ ನಮಸ್ಕೃತ್ಯ ತತಸ್ತದಪಿ ವೀರ್ಯವಾನ್।
01216018c ಜಗ್ರಾಹ ಬಲಮಾಸ್ಥಾಯ ಜ್ಯಯಾ ಚ ಯುಯುಜೇ ಧನುಃ।।
ಹುತಾಶನನನ್ನು ನಮಸ್ಕರಿಸಿ ವೀರ್ಯವಾನನು ಧನುಸ್ಸಿಗೆ ಶಿಂಜನಿಯನ್ನು ಬಲವಾಗಿ ಬಿಗಿದನು.
01216019a ಮೌರ್ವ್ಯಾಂ ತು ಯುಜ್ಯಮಾನಾಯಾಂ ಬಲಿನಾ ಪಾಂಡವೇನ ಹ।
01216019c ಯೇಽಶೃಣ್ವನ್ಕೂಜಿತಂ ತತ್ರ ತೇಷಾಂ ವೈ ವ್ಯಥಿತಂ ಮನಃ।।
ಬಲಶಾಲಿ ಪಾಂಡವನು ತನ್ನ ಧನುಸ್ಸಿಗೆ ನೀಡಿದ ಠೇಂಕಾರವನ್ನು ಕೇಳಿದವರ ಮನಸ್ಸು ತತ್ತರಿಸಿತು.
01216020a ಲಬ್ಧ್ವಾ ರಥಂ ಧನುಶ್ಚೈವ ತಥಾಕ್ಷಯ್ಯೌ ಮಹೇಷುಧೀ।
01216020c ಬಭೂವ ಕಲ್ಯಃ ಕೌಂತೇಯಃ ಪ್ರಹೃಷ್ಟಃ ಸಾಹ್ಯಕರ್ಮಣಿ।।
ರಥವನ್ನೂ, ಧನುವನ್ನೂ ಮತ್ತು ಎರಡು ಅಕ್ಷಯ ಬತ್ತಳಿಕೆಗಳನ್ನೂ ಪಡೆದ ಕೌಂತೇಯನು ಸಂತೋಷಗೊಂಡು ಮುಂದಿರುವ ಕಾರ್ಯಕ್ಕೆ ಉತ್ಸುಕನಾದನು.
01216021a ವಜ್ರನಾಭಂ ತತಶ್ಚಕ್ರಂ ದದೌ ಕೃಷ್ಣಾಯ ಪಾವಕಃ।
01216021c ಆಗ್ನೇಯಮಸ್ತ್ರಂ ದಯಿತಂ ಸ ಚ ಕಲ್ಯೋಽಭವತ್ತದಾ।।
ಅನಂತರ ಪಾವಕನು ಕೃಷ್ಣನಿಗೆ ವಜ್ರನಾಭ ಚಕ್ರವನ್ನು ನೀಡಿದನು. ಅವನೂ ಕೂಡ ತನಗೆ ಅತ್ಯಂತ ಪ್ರಿಯವಾದ ಆ ಭೀಷಣ ಅಸ್ತ್ರವನ್ನು ಪಡೆದು ಶಕ್ತಿಸಮನ್ವಿತನಾಗಿ ತಯಾರಾದನು.
01216022a ಅಬ್ರವೀತ್ಪಾವಕಶ್ಚೈನಮೇತೇನ ಮಧುಸೂದನ।
01216022c ಅಮಾನುಷಾನಪಿ ರಣೇ ವಿಜೇಷ್ಯಸಿ ನ ಸಂಶಯಃ।।
01216023a ಅನೇನ ತ್ವಂ ಮನುಷ್ಯಾಣಾಂ ದೇವಾನಾಮಪಿ ಚಾಹವೇ।
01216023c ರಕ್ಷಃಪಿಶಾಚದೈತ್ಯಾನಾಂ ನಾಗಾನಾಂ ಚಾಧಿಕಃ ಸದಾ।
01216023e ಭವಿಷ್ಯಸಿ ನ ಸಂದೇಹಃ ಪ್ರವರಾರಿನಿಬರ್ಹಣೇ।।
ಪಾವಕನು ಹೇಳಿದನು: “ಮಧುಸೂದನ! ಇದರಿಂದ ನೀನು ಅಮಾನುಷರನ್ನೂ ರಣದಲ್ಲಿ ಗೆಲ್ಲುತ್ತೀಯೆ ಎನ್ನುವುದರಲ್ಲಿ ಸಂಶಯವಿಲ್ಲ. ಇದರಿಂದ ನೀನು ಯಾರನ್ನೇ ಆಗಲಿ - ಮನುಷ್ಯ, ದೇವ, ರಾಕ್ಷಸ, ಪಿಶಾಚಿ, ದೈತ್ಯ, ನಾಗ ಮತ್ತು ಇತರರನ್ನೂ ಸದಾ ಸೋಲಿಸುತ್ತೀಯೆ ಎನ್ನುವುದರಲ್ಲಿ ಸಂಶಯವಿಲ್ಲ.
01216024a ಕ್ಷಿಪ್ತಂ ಕ್ಷಿಪ್ತಂ ರಣೇ ಚೈತತ್ತ್ವಯಾ ಮಾಧವ ಶತ್ರುಷು।
01216024c ಹತ್ವಾಪ್ರತಿಹತಂ ಸಂಖ್ಯೇ ಪಾಣಿಮೇಷ್ಯತಿ ತೇ ಪುನಃ।।
ಮಾಧವ! ರಣದಲ್ಲಿ ನೀನು ಎಷ್ಟು ಬಾರಿ ಇದನ್ನು ಬಿಟ್ಟರೂ ಅದು ವೈರಿಗಳನ್ನು ಸಂಹರಿಸಿ ಪುನಃ ನಿನ್ನ ಕೈ ಬಂದು ಸೇರುತ್ತದೆ.”
01216025a ವರುಣಶ್ಚ ದದೌ ತಸ್ಮೈ ಗದಾಮಶನಿನಿಃಸ್ವನಾಂ।
01216025c ದೈತ್ಯಾಂತಕರಣೀಂ ಘೋರಾಂ ನಾಮ್ನಾ ಕೌಮೋದಕೀಂ ಹರೇಃ।।
ವರುಣನು ಹರಿಗೆ ಗುಡುಗಿನಂತೆ ಗರ್ಜಿಸಬಲ್ಲ, ಘೋರ ದೈತ್ಯರ ಅಂತಕಾರಿಣಿಯಾಗಿದ್ದ, ಕೌಮೋದಕೀ ಎಂಬ ಹೆಸರಿನ ಗದೆಯನ್ನೂ ನೀಡಿದನು.
01216026a ತತಃ ಪಾವಕಮಬ್ರೂತಾಂ ಪ್ರಹೃಷ್ಟೌ ಕೃಷ್ಣಪಾಂಡವೌ।
01216026c ಕೃತಾಸ್ತ್ರೌ ಶಸ್ತ್ರಸಂಪನ್ನೌ ರಥಿನೌ ಧ್ವಜಿನಾವಪಿ।।
01216027a ಕಲ್ಯೌ ಸ್ವೋ ಭಗವನ್ಯೋದ್ಧುಮಪಿ ಸರ್ವೈಃ ಸುರಾಸುರೈಃ।
01216027c ಕಿಂ ಪುನರ್ವಜ್ರಿಣೈಕೇನ ಪನ್ನಗಾರ್ಥೇ ಯುಯುತ್ಸುನಾ।।
ನಂತರ ಪ್ರಹೃಷ್ಟ ಕೃಷ್ಣ-ಪಾಂಡವರು ಪಾವಕನಿಗೆ ಹೇಳಿದರು: “ಭಗವನ್! ಅಸ್ತ್ರಗಳನ್ನು ಪಡೆದು ಶಸ್ತ್ರಸಂಪನ್ನರಾಗಿ ರಥ ಮತ್ತು ಧ್ವಜಗಳನ್ನೂ ಪಡೆದು ಸುರಾಸುರರೆಲ್ಲರೊಡನೆಯೂ ಯುದ್ಧಮಾಡಲು ಉತ್ಸುಕರಾಗಿದ್ದೇವೆ. ಪನ್ನಗನಿಗಾಗಿ ಏಕಾಂಗಿಯಾಗಿ ಯುದ್ಧಮಾಡಲು ಸಿದ್ಧನಿರುವ ಇಂದ್ರನೇನಂತೆ!”
01216028 ಅರ್ಜುನ ಉವಾಚ।
01216028a ಚಕ್ರಮಸ್ತ್ರಂ ಚ ವಾರ್ಷ್ಣೇಯೋ ವಿಸೃಜನ್ಯುಧಿ ವೀರ್ಯವಾನ್।
01216028c ತ್ರಿಷು ಲೋಕೇಷು ತನ್ನಾಸ್ತಿ ಯನ್ನ ಜೀಯಾಜ್ಜನಾರ್ದನಃ।।
ಅರ್ಜುನನು ಹೇಳಿದನು: “ವೀರ್ಯವಾನ್ ವಾರ್ಷ್ಣೇಯನು ಯುದ್ಧದಲ್ಲಿ ಚಕ್ರಾಸ್ತ್ರವನ್ನು ಪ್ರಯೋಗಿಸಿದನೆಂದರೆ ಜನಾರ್ದನನು ಗೆಲ್ಲಲಿಕ್ಕಾಗದೇ ಇರುವ ಏನೂ ಈ ಮೂರು ಲೋಕಗಳಲ್ಲಿ ಇಲ್ಲದಂತಾಗುತ್ತದೆ.
01216029a ಗಾಂಡೀವಂ ಧನುರಾದಾಯ ತಥಾಕ್ಷಯ್ಯೌ ಮಹೇಷುಧೀ।
01216029c ಅಹಮಪ್ಯುತ್ಸಹೇ ಲೋಕಾನ್ವಿಜೇತುಂ ಯುಧಿ ಪಾವಕ।।
ನನ್ನ ಈ ಗಾಂಡೀವ ಧನುಸ್ಸು ಮತ್ತು ಈ ಎರಡು ಅಕ್ಷಯ ಬತ್ತಳಿಕೆಗಳಿಂದ ನಾನೂ ಕೂಡ ಯುದ್ಧದಲ್ಲಿ ಲೋಕಗಳನ್ನು ಗೆಲ್ಲಬಲ್ಲೆ ಎಂಬ ಉತ್ಸಾಹವಿದೆ ಪಾವಕ!
01216030a ಸರ್ವತಃ ಪರಿವಾರ್ಯೈನಂ ದಾವೇನ ಮಹತಾ ಪ್ರಭೋ।
01216030c ಕಾಮಂ ಸಂಪ್ರಜ್ವಲಾದ್ಯೈವ ಕಲ್ಯೌ ಸ್ವಃ ಸಾಹ್ಯಕರ್ಮಣಿ।।
ಪ್ರಭು! ಈಗ ಮಹಾ ಪ್ರಜ್ವಾಲೆಗಳಿಂದ ನಿನಗಿಷ್ಟ ಬಂದಹಾಗೆ ಈ ಅರಣ್ಯವನ್ನು ಸುತ್ತುವರೆ. ನಾವು ಈ ಕಾರ್ಯದಲ್ಲಿ ಸಹಭಾಗಿಗಳಾಗಲು ಸಿದ್ಧರಿದ್ದೇವೆ.””
01216031 ವೈಶಂಪಾಯನ ಉವಾಚ।
01216031a ಏವಮುಕ್ತಃ ಸ ಭಗವಾನ್ದಾಶಾರ್ಹೇಣಾರ್ಜುನೇನ ಚ।
01216031c ತೈಜಸಂ ರೂಪಮಾಸ್ಥಾಯ ದಾವಂ ದಗ್ಧುಂ ಪ್ರಚಕ್ರಮೇ।।
ವೈಶಂಪಾಯನನು ಹೇಳಿದನು: “ಅರ್ಜುನ ಮತ್ತು ದಾಶಾರ್ಹನ ಈ ಮಾತುಗಳನ್ನು ಕೇಳಿದ ಭಗವಾನನು ತನ್ನ ತೇಜಸ್ವಿ ರೂಪ ಧಾರಣಮಾಡಿ ಅರಣ್ಯವನ್ನು ಸುಡಲು ಪ್ರಾರಂಭಿಸಿದನು.
01216032a ಸರ್ವತಃ ಪರಿವಾರ್ಯಾಥ ಸಪ್ತಾರ್ಚಿರ್ಜ್ವಲನಸ್ತದಾ।
01216032c ದದಾಹ ಖಾಂಡವಂ ಕ್ರುದ್ಧೋ ಯುಗಾಂತಮಿವ ದರ್ಶಯನ್।।
ಎಲ್ಲ ಕಡೆಗಳಿಂದಲೂ ಸುತ್ತುವರೆದು ತನ್ನ ಏಳು ಜ್ವಾಲೆಗಳ ಮೂಲಕ ಆ ಕೃದ್ಧನು ಖಾಂಡವವನ್ನು ಸುಡುತ್ತಿರಲು ಯುಗವೇ ಅಂತ್ಯವಾಗುತ್ತಿದೆಯೋ ಎನ್ನುವಂತೆ ತೋರುತ್ತಿತ್ತು.
01216033a ಪರಿಗೃಹ್ಯ ಸಮಾವಿಷ್ಟಸ್ತದ್ವನಂ ಭರತರ್ಷಭ।
01216033c ಮೇಘಸ್ತನಿತನಿರ್ಘೋಷಂ ಸರ್ವಭೂತಾನಿ ನಿರ್ದಹನ್।।
01216034a ದಹ್ಯತಸ್ತಸ್ಯ ವಿಬಭೌ ರೂಪಂ ದಾವಸ್ಯ ಭಾರತ।
01216034c ಮೇರೋರಿವ ನಗೇಂದ್ರಸ್ಯ ಕಾಂಚನಸ್ಯ ಮಹಾದ್ಯುತೇಃ।।
ಭರತರ್ಷಭ! ಭಾರತ! ಆ ವನವನ್ನು ಸುತ್ತುವರೆದು ಮೇಲೆರಗಿ ಮಳೆಗಾಲದ ಮೋಡಗಳ ಗುಡುಗಿನಂತೆ ಗರ್ಜಿಸುತ್ತಾ ಭುಗಿಲೆದ್ದು ಸರ್ವಭೂತಗಳನ್ನೂ ಸುಡುತ್ತಿರುವ ಆ ವನವು ಕಾಂಚನ ಮಹಾದ್ಯುತಿ ನಗೇಂದ್ರ ಮೇರುವಿನಂತೆ ತೋರುತ್ತಿತ್ತು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಖಾಂಡವದಾಹಪರ್ವಣಿ ಗಾಂಡೀವಾದಿದಾನೇ ಷೋಡಶಾಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಖಾಂಡವದಾಹಪರ್ವದಲ್ಲಿ ಗಾಂಡೀವಪ್ರದಾನ ಎನ್ನುವ ಇನ್ನೂರಾ ಹದಿನಾರನೆಯ ಅಧ್ಯಾಯವು.