215 ಅರ್ಜುನಾಗ್ನಿಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಖಾಂಡವದಾಹ ಪರ್ವ

ಅಧ್ಯಾಯ 215

ಸಾರ

ಇಂದ್ರನಿಂದ ಸದಾ ರಕ್ಷಿಸಲ್ಪಟ್ಟಿರುವ ಖಾಂಡವ ವನವನ್ನು ಸುಡಲು ತನಗೆ ಸಹಾಯಮಾಡಬೇಕೆಂದು ಅಗ್ನಿಯು ಕೃಷ್ಣಾರ್ಜುನರಲ್ಲಿ ಕೇಳಿಕೊಳ್ಳುವುದು (1-11). ತಮಗೆ ಸಮರ್ಥವಾದ ಆಯುಧ-ರಥಗಳು ಬೇಕು ಎಂದು ಅರ್ಜುನನು ಕೇಳಿಕೊಳ್ಳುವುದು (12-19).

01215001 ವೈಶಂಪಾಯನ ಉವಾಚ।
01215001a ಸೋಽಬ್ರವೀದರ್ಜುನಂ ಚೈವ ವಾಸುದೇವಂ ಚ ಸಾತ್ವತಂ।
01215001c ಲೋಕಪ್ರವೀರೌ ತಿಷ್ಠಂತೌ ಖಾಂಡವಸ್ಯ ಸಮೀಪತಃ।।

ವೈಶಂಪಾಯನನು ಹೇಳಿದನು: “ಖಾಂಡವದ ಸಮೀಪದಲ್ಲಿಯೇ ನಿಂತಿದ್ದ ಲೋಕಪ್ರವೀರ ಅರ್ಜುನ ಮತ್ತು ಸಾತ್ವತ ವಾಸುದೇವ ಇಬ್ಬರನ್ನೂ ಉದ್ದೇಶಿಸಿ ಅವನು ಹೇಳಿದನು:

01215002a ಬ್ರಾಹ್ಮಣೋ ಬಹುಭೋಕ್ತಾಸ್ಮಿ ಭುಂಜೇಽಪರಿಮಿತಂ ಸದಾ।
01215002c ಭಿಕ್ಷೇ ವಾರ್ಷ್ಣೇಯಪಾರ್ಥೌ ವಾಮೇಕಾಂ ತೃಪ್ತಿಂ ಪ್ರಯಚ್ಛತಾಂ।।

“ಸದಾ ಅತಿಯಾಗಿ ತಿನ್ನುವ ಬಹುಭೋಕ್ತ ಬ್ರಾಹ್ಮಣನು ನಾನು. ವಾರ್ಷ್ಣೇಯ! ಪಾರ್ಥ! ನಾನು ನಿಮ್ಮಲ್ಲಿ ಒಂದು ಭಿಕ್ಷೆಯನ್ನು ಕೇಳುತ್ತಿದ್ದೇನೆ. ನನ್ನನ್ನು ತೃಪ್ತಗೊಳಿಸಿ.”

01215003a ಏವಮುಕ್ತೌ ತಮಬ್ರೂತಾಂ ತತಸ್ತೌ ಕೃಷ್ಣಪಾಂಡವೌ।
01215003c ಕೇನಾನ್ನೇನ ಭವಾಂಸ್ತೃಪ್ಯೇತ್ತಸ್ಯಾನ್ನಸ್ಯ ಯತಾವಹೇ।।

ಅವನು ಹೀಗೆ ಹೇಳಲು, ಕೃಷ್ಣ-ಪಾಂಡವರು ಕೇಳಿದರು: “ಯಾವುದರಿಂದ ನೀನು ತೃಪ್ತಿಗೊಳ್ಳುವೆ? ಅದನ್ನೇ ನಾವು ನಿನಗೆ ತೆಗೆದುಕೊಂಡು ಬರುತ್ತೇವೆ.”

01215004a ಏವಮುಕ್ತಃ ಸ ಭಗವಾನಬ್ರವೀತ್ತಾವುಭೌ ತತಃ।
01215004c ಭಾಷಮಾಣೌ ತದಾ ವೀರೌ ಕಿಮನ್ನಂ ಕ್ರಿಯತಾಮಿತಿ।।

“ಏನು ಅನ್ನವನ್ನು ತಯಾರಿಸಬೇಕು?” ಎಂದು ಕೇಳುತ್ತಿದ್ದ ಆ ವೀರರಿಗೆ ಭಗವಾನನು ಹೇಳಿದನು:

01215005a ನಾಹಮನ್ನಂ ಬುಭುಕ್ಷೇ ವೈ ಪಾವಕಂ ಮಾಂ ನಿಬೋಧತಂ।
01215005c ಯದನ್ನಮನುರೂಪಂ ಮೇ ತದ್ಯುವಾಂ ಸಂಪ್ರಯಚ್ಛತಂ।।

“ನಾನು ಅನ್ನವನ್ನು ತಿನ್ನುವುದಿಲ್ಲ! ನನ್ನನ್ನು ಪಾವಕನೆಂದು ತಿಳಿಯಿರಿ. ನನಗೆ ಅನುರೂಪವಾದ ಆಹಾರವನ್ನು ತೆಗೆದುಕೊಂಡು ಬನ್ನಿ!

01215006a ಇದಮಿಂದ್ರಃ ಸದಾ ದಾವಂ ಖಾಂಡವಂ ಪರಿರಕ್ಷತಿ।
01215006c ತಂ ನ ಶಕ್ನೋಮ್ಯಹಂ ದಗ್ಧುಂ ರಕ್ಷ್ಯಮಾಣಂ ಮಹಾತ್ಮನಾ।।

ಇಂದ್ರನು ಸದಾ ಈ ಖಾಂಡವವನ್ನು ಸುಡುವುದರಿಂದ ರಕ್ಷಿಸಿಕೊಂಡು ಬಂದಿದ್ದಾನೆ. ಎಲ್ಲಿಯವರೆಗೆ ಆ ಮಹಾತ್ಮನು ಇದನ್ನು ರಕ್ಷಿಸುತ್ತಾನೋ ಅಲ್ಲಿಯವರೆಗೆ ಇದನ್ನು ಸುಡುವ ಶಕ್ತಿ ನನಗಿಲ್ಲ.

01215007a ವಸತ್ಯತ್ರ ಸಖಾ ತಸ್ಯ ತಕ್ಷಕಃ ಪನ್ನಗಃ ಸದಾ।
01215007c ಸಗಣಸ್ತತ್ಕೃತೇ ದಾವಂ ಪರಿರಕ್ಷತಿ ವಜ್ರಭೃತ್।।

ಅವನ ಸಖ ಪನ್ನಗ ತಕ್ಷಕನು ತನ್ನ ಗಣಸಮೇತ ಸದಾ ಇಲ್ಲಿ ವಾಸಿಸುತ್ತಾನೆ. ಅವನಿಗೋಸ್ಕರ ವಜ್ರಭೃತನು ಇದನ್ನು ಸುಡುವುದರಿಂದ ರಕ್ಷಿಸುತ್ತಿದ್ದಾನೆ1.

01215008a ತತ್ರ ಭೂತಾನ್ಯನೇಕಾನಿ ರಕ್ಷ್ಯಂತೇ ಸ್ಮ ಪ್ರಸಂಗತಃ।
01215008c ತಂ ದಿಧಕ್ಷುರ್ನ ಶಕ್ನೋಮಿ ದಗ್ಧುಂ ಶಕ್ರಸ್ಯ ತೇಜಸಾ।।

ಪ್ರಸಂಗತಃ ಅಲ್ಲಿ ಇನ್ನೂ ಅನೇಕ ಜೀವಿಗಳು ರಕ್ಷಿಸಲ್ಪಟ್ಟಿವೆ. ಶಕ್ರನ ತೇಜಸ್ಸಿನಿಂದಾಗಿ ಅವರ್ಯಾರನ್ನೂ ಸುಡಲು ಶಕ್ತನಾಗಿಲ್ಲ.

01215009a ಸ ಮಾಂ ಪ್ರಜ್ವಲಿತಂ ದೃಷ್ಟ್ವಾ ಮೇಘಾಂಭೋಭಿಃ ಪ್ರವರ್ಷತಿ।
01215009c ತತೋ ದಗ್ಧುಂ ನ ಶಕ್ನೋಮಿ ದಿಧಕ್ಷುರ್ದಾವಮೀಪ್ಸಿತಂ।।

ನಾನು ಅದನ್ನು ಸುಡುವುದನ್ನು ನೋಡಿದ ಕೂಡಲೇ ಅವನು ಮೋಡಗಳಿಂದ ಕೂಡಿದ ಧಾರಕಾರ ಮಳೆಯನ್ನು ಸುರಿಸುತ್ತಾನೆ. ಆಗ ನನಗೆ ಸುಡಬೇಕೆಂದು ಎಷ್ಟು ಆಸೆಯಿದ್ದರೂ ನಾನು ಅದನ್ನು ಸುಡಲು ಶಕ್ತನಾಗುವುದಿಲ್ಲ.

01215010a ಸ ಯುವಾಭ್ಯಾಂ ಸಹಾಯಾಭ್ಯಾಮಸ್ತ್ರವಿದ್ಭ್ಯಾಂ ಸಮಾಗತಃ।
01215010c ದಹೇಯಂ ಖಾಂಡವಂ ದಾವಮೇತದನ್ನಂ ವೃತಂ ಮಯಾ।।

ಅಸ್ತ್ರವಿದ ನಿಮ್ಮಿಬ್ಬರನ್ನೂ ಭೆಟ್ಟಿಯಾಗಿ ಸಹಾಯವನ್ನು ಕೇಳಿದ್ದೇನಾದ್ದರಿಂದ ನಾನು ಈಗ ಖಾಂಡವವನ್ನು ಸುಡುತ್ತೇನೆ. ಇದೇ ನಾನು ಕೇಳಿಕೊಳ್ಳುವ ಆಹಾರ.

01215011a ಯುವಾಂ ಹ್ಯುದಕಧಾರಾಸ್ತಾ ಭೂತಾನಿ ಚ ಸಮಂತತಃ।
01215011c ಉತ್ತಮಾಸ್ತ್ರವಿದೋ ಸಮ್ಯಕ್ಸರ್ವತೋ ವಾರಯಿಷ್ಯಥಃ।।

ಉತ್ತಮ ಅಸ್ತ್ರವಿದರಾದ ನೀವು ಎಲ್ಲ ಜೀವಿಗಳನ್ನೂ ಮೋಡಗಳನ್ನೂ ಎಲ್ಲ ಕಡೆಗಳಿಂದಲೂ ತಡೆಹಿಡಿಯಬಲ್ಲಿರಿ.”

01215012a 2ಏವಮುಕ್ತೇ ಪ್ರತ್ಯುವಾಚ ಬೀಭತ್ಸುರ್ಜಾತವೇದಸಂ। 01215012c ದಿಧಕ್ಷುಂ ಖಾಂಡವಂ ದಾವಮಕಾಮಸ್ಯ ಶತಕ್ರತೋಃ।।

ಇದನ್ನು ಕೇಳಿದ ಬೀಭತ್ಸುವು ಶತಕ್ರತುವನ್ನು ಮೀರಿಯೂ ಖಾಂಡವವನ್ನು ಸುಡಲು ಬಯಸುತ್ತಿದ್ದ ಜಾತವೇದಸನನ್ನುದ್ದೇಶಿಸಿ ಹೇಳಿದನು:

01215013a ಉತ್ತಮಾಸ್ತ್ರಾಣಿ ಮೇ ಸಂತಿ ದಿವ್ಯಾನಿ ಚ ಬಹೂನಿ ಚ।
01215013c ಯೈರಹಂ ಶಕ್ನುಯಾಂ ಯೋದ್ಧುಮಪಿ ವಜ್ರಧರಾನ್ಬಹೂನ್।।

“ನನ್ನಲ್ಲಿ ಅನೇಕ ವಜ್ರಧರರೊಂದಿಗೆ ಯುದ್ಧಮಾಡಲು ಸಾಧ್ಯವಾಗುವ ಬಹಳಷ್ಟು ಉತ್ತಮ ದಿವ್ಯಾಸ್ತ್ರಗಳಿವೆ.

01215014a ಧನುರ್ಮೇ ನಾಸ್ತಿ ಭಗವನ್ಬಾಹುವೀರ್ಯೇಣ ಸಮ್ಮಿತಂ।
01215014c ಕುರ್ವತಃ ಸಮರೇ ಯತ್ನಂ ವೇಗಂ ಯದ್ವಿಷಹೇತ ಮೇ।।

ಆದರೆ ಭಗವನ್! ನನ್ನ ಬಾಹುವೀರ್ಯಕ್ಕೆ ಸಮಾನವಾದ, ಮತ್ತು ಸಮರದಲ್ಲಿ ನನ್ನ ಯತ್ನ ಮತ್ತು ವೇಗಗಳನ್ನು ಸಹಿಸಬಲ್ಲಂಥ ಧನುಸ್ಸು ಇಲ್ಲವಾಗಿದೆ.

01215015a ಶರೈಶ್ಚ ಮೇಽರ್ಥೋ ಬಹುಭಿರಕ್ಷಯೈಃ ಕ್ಷಿಪ್ರಮಸ್ಯತಃ।
01215015c ನ ಹಿ ವೋಢುಂ ರಥಃ ಶಕ್ತಃ ಶರಾನ್ಮಮ ಯಥೇಪ್ಸಿತಾನ್।।

ಮತ್ತು ನಾನು ವೇಗದಲ್ಲಿ ಬಾಣಗಳನ್ನು ಬಿಡುವಾಗ ನನಗೊಂದು ಅಕ್ಷಯ ಬತ್ತಳಿಕೆ ಬೇಕಾಗಿದೆ. ನನ್ನಲ್ಲಿರುವ ಎಲ್ಲ ಶರಗಳನ್ನೂ ಈ ರಥವು ಹೊರಲು ಸಾಧ್ಯವಿಲ್ಲ.

01215016a ಅಶ್ವಾಂಶ್ಚ ದಿವ್ಯಾನಿಚ್ಛೇಯಂ ಪಾಂಡುರಾನ್ವಾತರಂಹಸಃ।
01215016c ರಥಂ ಚ ಮೇಘನಿರ್ಘೋಷಂ ಸೂರ್ಯಪ್ರತಿಮತೇಜಸಂ।।

ವಾಯುವೇಗದ ಬಿಳಿ ದಿವ್ಯಾಶ್ವಗಳು ಬೇಕು. ಮೇಘನಿರ್ಘೋಷ ಮತ್ತು ತೇಜಸ್ಸಿನಲ್ಲಿ ಸೂರ್ಯಪ್ರತಿಮೆ ರಥವೂ ಬೇಕು.

01215017a ತಥಾ ಕೃಷ್ಣಸ್ಯ ವೀರ್ಯೇಣ ನಾಯುಧಂ ವಿದ್ಯತೇ ಸಮಂ।
01215017c ಯೇನ ನಾಗಾನ್ಪಿಶಾಚಾಂಶ್ಚ ನಿಹನ್ಯಾನ್ಮಾಧವೋ ರಣೇ।।

ಅದೇ ರೀತಿ ಈ ನಾಗಗಳು ಮತ್ತು ಪಿಶಾಚಿಗಳನ್ನು ರಣದಲ್ಲಿ ಸಂಹರಿಸಲು ಕೃಷ್ಣ ಮಾಧವನಲ್ಲಿಯೂ ಕೂಡ ಅವನ ವೀರ್ಯಕ್ಕೆ ಸರಿಸಾಟಿ ಆಯುಧವಿಲ್ಲ.

01215018a ಉಪಾಯಂ ಕರ್ಮಣಃ ಸಿದ್ಧೌ ಭಗವನ್ವಕ್ತುಮರ್ಹಸಿ।
01215018c ನಿವಾರಯೇಯಂ ಯೇನೇಂದ್ರಂ ವರ್ಷಮಾಣಂ ಮಹಾವನೇ।।

ಭಗವನ್! ಈ ಕೆಲಸದಲ್ಲಿ ಯಶಸ್ವಿಯಾಗುವ ಉಪಾಯವನ್ನು ಹೇಳಬೇಕು. ಇದರಿಂದ ಇಂದ್ರನು ಈ ಮಹಾವನದ ಮೇಲೆ ಮಳೆಯನ್ನು ಸುರಿಸದಂತೆ ತಡೆಗಟ್ಟಬಹುದು.

01215019a ಪೌರುಷೇಣ ತು ಯತ್ಕಾರ್ಯಂ ತತ್ಕರ್ತಾರೌ ಸ್ವ ಪಾವಕ।
01215019c ಕರಣಾನಿ ಸಮರ್ಥಾನಿ ಭಗವನ್ದಾತುಮರ್ಹಸಿ।।

ಪಾವಕ! ಭಗವನ್! ಪೌರುಷದಿಂದ ಮಾಡಬೇಕಾದ ಕಾರ್ಯವೆಲ್ಲವನ್ನೂ ನಾವು ಮಾಡುತ್ತೇವೆ. ಅದಕ್ಕೆ ಸಮರ್ಥ ಕರಣಗಳನ್ನು ನೀಡಬೇಕು.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಖಾಂಡವದಾಹಪರ್ವಣಿ ಅರ್ಜುನಾಗ್ನಿಸಂವಾದೇ ಪಂಚದಶಾಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಖಾಂಡವದಾಹಪರ್ವದಲ್ಲಿ ಅರ್ಜುನಾಗ್ನಿಸಂವಾದವೆನ್ನುವ ಇನ್ನೂರಾ ಹದಿನೈದನೆಯ ಅಧ್ಯಾಯವು.


  1. ಇಂದ್ರ ಮತ್ತು ತಕ್ಷಕರ ನಡುವೆ ಇರುವ ಮಿತ್ರತ್ವವು ಏನು? ಜನಮೇಜಯನ ಸರ್ಪ ಯಜ್ಞದಲ್ಲಿ ಕೂಡ ಇಂದ್ರನು ತಕ್ಷಕನನ್ನು ರಕ್ಷಿಸಲು ಪ್ರಯತ್ನಪಟ್ಟನು. ↩︎

  2. ಗೋರಖಪುರ ಸಂಪುಟದಲ್ಲಿ ಅಗ್ನಿ ದೇವನು ಖಾಂಡವವನ್ನು ದಹಿಸಲು ಬಯಸುವ ಕಾರಣವನ್ನು ಕೊಡಲಾಗಿದೆ. ↩︎