018 ಹರಣಹಾರಿಕ ಪರ್ವ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಹರಣಹಾರಿಕ ಪರ್ವ

ಅಧ್ಯಾಯ 213

ಸಾರ

ಹೋರಾಡಿ ಸೋತರೆ ಅಪಕೀರ್ತಿ ಬರುತ್ತದೆ, ಸಾಂತ್ವನದಲ್ಲಿ ಪರಾಭವವೆಂಬುವುದೇ ಇಲ್ಲ ಎಂದು ಹೇಳಿ ಕೃಷ್ಣನು ಬಲರಾಮನನ್ನು ತಡೆಯುವುದು; ಅರ್ಜುನನನ್ನು ಕರೆಯಿಸಿ ವಿವಾಹನೆರವೇರಿಸಿದ್ದುದು (1-13). ಸುಭದ್ರೆಯು ಕುಂತಿ-ದ್ರೌಪದಿಯರನ್ನು ಭೇಟಿಮಾಡಿದ್ದುದು (14-21). ವೃಷ್ಣಿ-ಅಂಧಕ ಪ್ರಮುಖರೊಂದಿಗೆ ಕೃಷ್ಣ-ಬಲರಾಮರು ಉಡುಗೊರೆಗಳೊಂದಿಗೆ ಇಂದ್ರಪ್ರಸ್ಥಕ್ಕೆ ಬಂದು ಪಾಂಡವರೊಂದಿಗೆ ರಮಿಸಿದುದು (22-57). ಸುಭದ್ರೆಯಲ್ಲಿ ಅಭಿಮನ್ಯುವಿನ ಜನನ (58-70). ಪಾಂಚಾಲಿಯಲ್ಲಿ ಪಾಂಡವ ಪುತ್ರರೈವರ ಜನನ (71-82).

01213001 ವೈಶಂಪಾಯನ ಉವಾಚ।
01213001a ಉಕ್ತವಂತೋ ಯದಾ ವಾಕ್ಯಮಸಕೃತ್ಸರ್ವವೃಷ್ಣಯಃ।
01213001c ತತೋಽಬ್ರವೀದ್ವಾಸುದೇವೋ ವಾಕ್ಯಂ ಧರ್ಮಾರ್ಥಸಂಹಿತಂ।।

ವೈಶಂಪಾಯನನು ಹೇಳಿದನು: “ಸರ್ವ ವೃಷ್ಣಿಗಳೂ ಅವನ ಮಾತುಗಳನ್ನೇ ಪುನಃ ಪುನಃ ಹೇಳುತ್ತಿರಲು ವಾಸುದೇವನು ಧರ್ಮಾರ್ಥಸಂಹಿತ ಈ ಮಾತುಗಳನ್ನು ಹೇಳಿದನು:

01213002a ನಾವಮಾನಂ ಕುಲಸ್ಯಾಸ್ಯ ಗುಡಾಕೇಶಃ ಪ್ರಯುಕ್ತವಾನ್।
01213002c ಸಮ್ಮಾನೋಽಭ್ಯಧಿಕಸ್ತೇನ ಪ್ರಯುಕ್ತೋಽಯಮಸಂಶಯಂ।।

“ಗುಡಾಕೇಶನು ನಮ್ಮ ಕುಲಕ್ಕೆ ಯಾವುದೇ ಅಪಮಾನವನ್ನೆಸಗಿಲ್ಲ. ಹೊರತಾಗಿ ನಮ್ಮ ಮೇಲೆ ಅಧಿಕ ಸನ್ಮಾನವನ್ನು ತೋರಿಸಿದ್ದಾನೆ ಎನ್ನುವುದರಲ್ಲಿ ಸಂಶಯವಿಲ್ಲ.

01213003a ಅರ್ಥಲುಬ್ಧಾನ್ನ ವಃ ಪಾರ್ಥೋ ಮನ್ಯತೇ ಸಾತ್ವತಾನ್ಸದಾ।
01213003c ಸ್ವಯಂವರಮನಾಧೃಷ್ಯಂ ಮನ್ಯತೇ ಚಾಪಿ ಪಾಂಡವಃ।।

ಸಾತ್ವತರು ಅರ್ಥಲುಬ್ಧಿಗಳಲ್ಲ ಎನ್ನುವುದನ್ನು ಪಾರ್ಥನು ತಿಳಿದಿದ್ದಾನೆ. ಹಾಗೆಯೇ ಆ ಪಾಂಡವನು ಸ್ವಯಂವರದಲ್ಲಿ ಗೆಲ್ಲಲಾರ ಎನ್ನುವುದನ್ನೂ ಅರಿತಿದ್ದಾನೆ.

01213004a ಪ್ರದಾನಮಪಿ ಕನ್ಯಾಯಾಃ ಪಶುವತ್ಕೋಽನುಮಂಸ್ಯತೇ।
01213004c ವಿಕ್ರಯಂ ಚಾಪ್ಯಪತ್ಯಸ್ಯ ಕಃ ಕುರ್ಯಾತ್ಪುರುಷೋ ಭುವಿ।।

ಪಶುವಂತೆ ಕನ್ಯೆಯರನ್ನು ಕೊಡುವುದನ್ನು ಯಾರುತಾನೆ ಮನ್ನಿಸಿಯಾರು? ಮತ್ತು ಭುವಿಯ ಯಾವ ಪುರುಷ ತಾನೆ ತನ್ನ ಸಂತಾನವನ್ನು ಮಾರಾಟಮಾಡುತ್ತಾನೆ?

01213005a ಏತಾನ್ದೋಷಾಂಶ್ಚ ಕೌಂತೇಯೋ ದೃಷ್ಟವಾನಿತಿ ಮೇ ಮತಿಃ।
01213005c ಅತಃ ಪ್ರಸಹ್ಯ ಹೃತವಾನ್ಕನ್ಯಾಂ ಧರ್ಮೇಣ ಪಾಂಡವಃ।।

ಈ ಎಲ್ಲ ದೋಷಗಳನ್ನೂ ಕೌಂತೇಯನು ಪರಿಶೀಲಿಸಿದ್ದ ಎನ್ನುವುದು ನನ್ನ ಅಭಿಪ್ರಾಯ. ಆದುದರಿಂದ ಪಾಂಡವನು ಧರ್ಮಪ್ರಕಾರ ಕನ್ಯೆಯನ್ನು ಅಪಹರಿಸಿದ್ದಾನೆ.

01213006a ಉಚಿತಶ್ಚೈವ ಸಂಬಂಧಃ ಸುಭದ್ರಾ ಚ ಯಶಸ್ವಿನೀ।
01213006c ಏಷ ಚಾಪೀದೃಶಃ ಪಾರ್ಥಃ ಪ್ರಸಹ್ಯ ಹೃತವಾನಿತಿ।।

ಈ ಸಂಬಂಧವು ಉಚಿತವೇ ಆಗಿದೆ. ಸುಭದ್ರೆಯು ಯಶಸ್ವಿನಿ ಮತ್ತು ಅವಳನ್ನು ಬಲವಂತವಾಗಿ ಅಪಹರಿಸಿದ ಪಾರ್ಥನೂ ಕೂಡ ಯಶಸ್ವಿಯು.

01213007a ಭರತಸ್ಯಾನ್ವಯೇ ಜಾತಂ ಶಂತನೋಶ್ಚ ಮಹಾತ್ಮನಃ।
01213007c ಕುಂತಿಭೋಜಾತ್ಮಜಾಪುತ್ರಂ ಕೋ ಬುಭೂಷೇತ ನಾರ್ಜುನಂ।।

ಭರತ ಮತ್ತು ಮಹಾತ್ಮ ಶಂತನುವಿನ ಕುಲದಲ್ಲಿ ಜನಿಸಿದ ಮತ್ತು ಕುಂತಿಭೋಜನ ಮಗಳ ಪುತ್ರ ಅರ್ಜುನನನ್ನು ಯಾರುತಾನೇ ಬಯಸುವುದಿಲ್ಲ?

01213008a ನ ಚ ಪಶ್ಯಾಮಿ ಯಃ ಪಾರ್ಥಂ ವಿಕ್ರಮೇಣ ಪರಾಜಯೇತ್।
01213008c ವರ್ಜಯಿತ್ವಾ ವಿರೂಪಾಕ್ಷಂ ಭಗನೇತ್ರಹರಂ ಹರಂ।
01213008e ಅಪಿ ಸರ್ವೇಷು ಲೋಕೇಷು ಸೇಂದ್ರರುದ್ರೇಷು ಮಾರಿಷ।।

ನನ್ನಷ್ಟೇ ಸಮರ್ಥನಾಗಿರುವ ಪಾರ್ಥನನ್ನು ವಿಕ್ರಮದಲ್ಲಿ ಪರಾಜಿಸುವ ಯಾರೂ, ವಿರೂಪಾಕ್ಷ ಭಗನೇತ್ರಹರ ಹರನನ್ನು ಬಿಟ್ಟು, ಸರ್ವ ಲೋಕಗಳಲ್ಲಿಯೂ ಇಂದ್ರ-ರುದ್ರರಲ್ಲಿಯೂ ನನಗೆ ಕಾಣುತ್ತಿಲ್ಲ.

01213009a ಸ ಚ ನಾಮ ರಥಸ್ತಾದೃಂ ಮದೀಯಾಸ್ತೇ ಚ ವಾಜಿನಃ।
01213009c ಯೋದ್ಧಾ ಪಾರ್ಥಶ್ಚ ಶೀಘ್ರಾಸ್ತ್ರಃ ಕೋ ನು ತೇನ ಸಮೋ ಭವೇತ್।।

ಅದರಲ್ಲೂ ರಥ ನನ್ನದು ಮತ್ತು ಕುದುರೆಗಳೂ ನನ್ನವೇ. ಯುದ್ಧದಲ್ಲಿ ಶೀಘ್ರಾಸ್ತ್ರನಾದ ಪಾರ್ಥನಿಗೆ ಸರಿಸಾಟಿ ಯಾರೂ ಇಲ್ಲ.

01213010a ತಮನುದ್ರುತ್ಯ ಸಾಂತ್ವೇನ ಪರಮೇಣ ಧನಂಜಯಂ।
01213010c ನಿವರ್ತಯಧ್ವಂ ಸಂಹೃಷ್ಟಾ ಮಮೈಷಾ ಪರಮಾ ಮತಿಃ।।

ಧನಂಜಯನ ಬೆನ್ನಟ್ಟುವ ಬದಲಾಗಿ ಅವನನ್ನು ಸಂತವಿಸಿ ಸಂತೋಷದಿಂದ ಹಿಂದೆ ಕರೆದುಕೊಂಡು ಬರಬೇಕು ಎನ್ನುವುದು ನನ್ನ ಅಂತಿಮ ಅಭಿಪ್ರಾಯ.

01213011a ಯದಿ ನಿರ್ಜಿತ್ಯ ವಃ ಪಾರ್ಥೋ ಬಲಾದ್ಗಚ್ಛೇತ್ಸ್ವಕಂ ಪುರಂ।
01213011c ಪ್ರಣಶ್ಯೇದ್ವೋ ಯಶಃ ಸದ್ಯೋ ನ ತು ಸಾಂತ್ವೇ ಪರಾಜಯಃ।।

ತನ್ನ ಬಲದಿಂದ ನಮ್ಮನ್ನೆಲ್ಲ ಸೋಲಿಸಿ ಪಾರ್ಥನು ತನ್ನ ಪುರವನ್ನು ಸೇರಿದನೆಂದರೆ ತಕ್ಷಣವೇ ನಮ್ಮೆಲ್ಲರಿಗೆ ಅಪಕೀರ್ತಿ ಬರುತ್ತದೆ. ಆದರೆ ಸಾಂತ್ವನದಲ್ಲಿ ಪರಾಜಯವೆನ್ನುವುದೇ ಇಲ್ಲ.”

01213012a ತಚ್ಛೃತ್ವಾ ವಾಸುದೇವಸ್ಯ ತಥಾ ಚಕ್ರುರ್ಜನಾಧಿಪ।
01213012c ನಿವೃತ್ತಶ್ಚಾರ್ಜುನಸ್ತತ್ರ ವಿವಾಹಂ ಕೃತವಾಂಸ್ತತಃ।।

ನರಾಧಿಪ! ವಾಸುದೇವನ ಈ ಮಾತುಗಳನ್ನು ಕೇಳಿದ ನಂತರ ಅವರು ಅದರಂತೆಯೇ ಮಾಡಿದರು. ಅರ್ಜುನನನ್ನು ಹಿಂದೆ ಕರೆತಂದು ಅವನ ವಿವಾಹವನ್ನು ನೆರವೇರಿಸಿದರು.

01213013a ಉಷಿತ್ವಾ ತತ್ರ ಕೌಂತೇಯಃ ಸಂವತ್ಸರಪರಾಃ ಕ್ಷಪಾಃ।
01213013c ವಿಹೃತ್ಯ ಚ ಯಥಾಕಾಮಂ ಪೂಜಿತೋ ವೃಷ್ಣಿನಂದನೈಃ।।
01213013a ಪುಷ್ಕರೇಷು ತತಃ ಶಿಷ್ಟಂ ಕಾಲಂ ವರ್ತಿತವಾನ್ ಪ್ರಭುಃ।
01213013c ಪೂರ್ಣೇ ತು ದ್ವಾದಶೇ ವರ್ಷೇ ಖಾಂಡವಪ್ರಸ್ಥಮಾವಿಶತ್।।

ಕೌಂತೇಯನು ಆ ವರ್ಷದ ಉಳಿದ ರಾತ್ರಿಗಳನ್ನು ವೃಷ್ಣಿನಂದನರ ಸತ್ಕಾರದಲ್ಲಿ ಯಥಾಕಾಮವಾಗಿ ವಿಹರಿಸುತ್ತಾ ಅಲ್ಲಿಯೇ ಕಳೆದನು. ಉಳಿದ ಸಮಯವನ್ನು ಪ್ರಭುವು ಪುಷ್ಕರದಲ್ಲಿ ಕಳೆದನು. ಹನ್ನೆರಡು ವರ್ಷಗಳು ಪೂರ್ಣವಾದ ನಂತರ ಅವನು ಖಾಂಡವಪ್ರಸ್ಥವನ್ನು ಪ್ರವೇಶಿಸಿದನು.

01213013a ವವಂದೇ ಧೌಮ್ಯಮಾಸಾದ್ಯ ಮಾತರಂ ಚ ಧನಂಜಯಃ।
01213013c ಸ್ಪೃಷ್ಟಾ ಚ ಚರಣೌ ರಾಜ್ಞೋ ಭೀಮಸ್ಯ ಚ ಧನಂಜಯಃ।
0121301e ಯಮಾಭ್ಯಾಂ ವಂದಿತೋ ಹೃಷ್ಟಃ ಸಖಜೇ ತೌ ನನಂದ ಚ।।

ಧನಂಜಯನು ಆಗಮಿಸಿ ಧೌಮ್ಯ ಮತ್ತು ತಾಯಿಯನ್ನು ವಂದಿಸಿದನು. ಧನಂಜಯನು ರಾಜನ ಮತ್ತು ಭೀಮನ ಚರಣಗಳನ್ನು ಸ್ಪರ್ಷಿಸಿದನು. ನಂತರ ಹರ್ಷಿತರಾದ ಯಮಳರು ಅವನಿಗೆ ವಂದಿಸಿದರು. ಮತ್ತು ಸಖರು ಆನಂದಿತರಾದರು.

01213014a ಅಭಿಗಮ್ಯ ಸ ರಾಜಾನಂ ವಿನಯೇನ ಸಮಾಹಿತಃ।
01213014c ಅಭ್ಯರ್ಚ್ಯ ಬ್ರಾಹ್ಮಣಾನ್ಪಾರ್ಥೋ ದ್ರೌಪದೀಮಭಿಜಗ್ಮಿವಾನ್।।

ಆ ವಿನಯ ಸಮಾಹಿತನು ರಾಜನನ್ನು ಅಭಿನಂದಿಸಿದನು. ಆಚಾರ್ಯ ಮತ್ತು ಬ್ರಾಹ್ಮಣರನ್ನು ಅಭಿನಂದಿಸಿ, ಪಾರ್ಥನು ದ್ರೌಪದಿಯಿದ್ದಲ್ಲಿಗೆ ಬಂದನು.

01213015a ತಂ ದ್ರೌಪದೀ ಪ್ರತ್ಯುವಾಚ ಪ್ರಣಯಾತ್ಕುರುನಂದನಂ।
01213015c ತತ್ರೈವ ಗಚ್ಛ ಕೌಂತೇಯ ಯತ್ರ ಸಾ ಸಾತ್ವತಾತ್ಮಜಾ।
01213015e ಸುಬದ್ಧಸ್ಯಾಪಿ ಭಾರಸ್ಯ ಪೂರ್ವಬಂಧಃ ಶ್ಲಥಾಯತೇ।।

ದ್ರೌಪದಿಯು ಪ್ರಣಯದಲ್ಲಿ ಕುರುನಂದನಿಗೆ ಉತ್ತರಿಸಿದಳು: “ಕೌಂತೇಯ! ಸಾತ್ವತಾತ್ಮಜೆಯು ಎಲ್ಲಿ ಇರುವಳೋ ಅಲ್ಲಿಗೇ ಹೋಗು. ಎಷ್ಟು ಚೆನ್ನಾಗಿ ಕಟ್ಟಿದ್ದರೂ ಭಾರ ಬಿದ್ದಾಗ ಮೊದಲನೆಯ ಗಂಟೇ ಸಡಿಲವಾಗುತ್ತದೆ!”

01213016a ತಥಾ ಬಹುವಿಧಂ ಕೃಷ್ಣಾಂ ವಿಲಪಂತೀಂ ಧನಂಜಯಃ।
01213016c ಸಾಂತ್ವಯಾಮಾಸ ಭೂಯಶ್ಚ ಕ್ಷಮಯಾಮಾಸ ಚಾಸಕೃತ್।।

ಈ ರೀತಿ ಕೃಷ್ಣೆಯು ಬಹುವಿಧವಾಗಿ ವಿಲಪಿಸುತ್ತಿರಲು ದನಂಜಯನು ಅವಳನ್ನು ಪುನಃ ಪುನಃ ಸಂತವಿಸಲು ಪ್ರಯತ್ನಿಸಿದನು ಮತ್ತು ಕ್ಷಮೆಯನ್ನು ಯಾಚಿಸಿದನು.

01213017a ಸುಭದ್ರಾಂ ತ್ವರಮಾಣಶ್ಚ ರಕ್ತಕೌಶೇಯವಾಸಸಂ।
01213017c ಪಾರ್ಥಃ ಪ್ರಸ್ಥಾಪಯಾಮಾಸ ಕೃತ್ವಾ ಗೋಪಾಲಿಕಾವಪುಃ।।

ಪಾರ್ಥನು ತ್ವರೆಮಾಡಿ ರಕ್ತಕೌಶೇಯವನ್ನು ಧರಿಸಿದ್ದ ಸುಭದ್ರೆಯನ್ನು ಗೋಪಾಲಿಕ ವೇಷಕ್ಕೆ ಬದಲಾಯಿಸಿ ಕರೆತಂದನು.

01213018a ಸಾಧಿಕಂ ತೇನ ರೂಪೇಣ ಶೋಭಮಾನಾ ಯಶಸ್ವಿನೀ।
01213018c ಭವನಂ ಶ್ರೇಷ್ಠಮಾಸಾದ್ಯ ವೀರಪತ್ನೀ ವರಾಂಗನಾ।
01213018e ವವಂದೇ ಪೃಥುತಾಮ್ರಾಕ್ಷೀ ಪೃಥಾಂ ಭದ್ರಾ ಯಶಸ್ವಿನೀ।।

ಯಶಸ್ವಿನಿಯು ಆ ರೂಪದಲ್ಲಿ ಇನ್ನೂ ಅಧಿಕ ಶೋಭಮಾನಳಾಗಿ ಕಾಣುತ್ತಿದ್ದಳು. ಶ್ರೇಷ್ಠ ಭವನವನ್ನು ಪ್ರವೇಶಿಸಿ ಆ ವೀರಪತ್ನಿ ವರಾಂಗನೆ, ವಿಶಾಲ ಕಣ್ಣುಗಳ ಯಶಸ್ವಿನೀ ಭದ್ರೆಯು ಪೃಥೆಯನ್ನು ವಂದಿಸಿದಳು.

01213018 ತಾಂ ಕುಂತೀಂ ಚಾರುಸರ್ವಾಂಗೀಮುಪಾಜಿಘ್ನತ ಮೂರ್ಧನಿ।
01213018 ಪ್ರೀತ್ಯಾ ಪರಮಯಾ ಯುಕ್ತಃ ಆಶೀರ್ಭಿರ್ಯುಂಜತಾತುಲಾಂ।।

ಕುಂತಿಯು ಆ ಚಾರುಸರ್ವಾಂಗಿಯನ್ನು ಬಿಗಿದಪ್ಪಿ ನೆತ್ತಿಯನ್ನು ಆಘ್ರಾಣಿಸಿದಳು. ಮತ್ತು ಪರಮ ಪ್ರೀತಿಯಿಂದ ಅವಳಿಗೆ ಅತುಲ ಅಶೀರ್ವಚನಗಳನ್ನಿತ್ತಳು.

01213019a ತತೋಽಭಿಗಮ್ಯ ತ್ವರಿತಾ ಪೂರ್ಣೇಂದುಸದೃಶಾನನಾ।
01213019c ವವಂದೇ ದ್ರೌಪದೀಂ ಭದ್ರಾ ಪ್ರೇಷ್ಯಾಹಮಿತಿ ಚಾಬ್ರವೀತ್।।

ನಂತರ ಆ ಪೂರ್ಣೇಂದುಸದೃಶಾನನೆಯು ತ್ವರೆಮಾಡಿ ದ್ರೌಪದಿಯನ್ನು ವಂದಿಸಿ “ನಾನು ಭದ್ರಾ. ನಿನ್ನ ಸೇವಕಿ!” ಎಂದು ಹೇಳಿದಳು.

01213020a ಪ್ರತ್ಯುತ್ಥಾಯ ಚ ತಾಂ ಕೃಷ್ಣಾ ಸ್ವಸಾರಂ ಮಾಧವಸ್ಯ ತಾಂ।
01213020c ಸಸ್ವಜೇ ಚಾವದತ್ಪ್ರೀತಾ ನಿಃಸಪತ್ನೋಽಸ್ತು ತೇ ಪತಿಃ।
01213020e ತಥೈವ ಮುದಿತಾ ಭದ್ರಾ ತಾಮುವಾಚೈವಮಸ್ತ್ವಿತಿ।।

ಮಾಧವನ ತಂಗಿಯನ್ನು ಮೇಲೆತ್ತಿದ ಕೃಷ್ಣೆಯು ಅವಳನ್ನು ಆಲಂಗಿಸಿ ಪ್ರೀತಿಯಿಂದ ಹೇಳಿದಳು: “ನಿನ್ನ ಪತಿಗೆ ಬೇರೆ ಯಾವ ಸ್ಪರ್ಧಿಯೂ ಇರದಂತಾಗಲಿ!” ಇದರಿಂದ ಸಂತೋಷಗೊಂಡ ಭದ್ರೆಯು “ಹಾಗೆಯೇ ಆಗಲಿ!” ಎಂದು ಉತ್ತರಿಸಿದಳು.

01213021a ತತಸ್ತೇ ಹೃಷ್ಟಮನಸಃ ಪಾಂಡವೇಯಾ ಮಹಾರಥಾಃ।
01213021c ಕುಂತೀ ಚ ಪರಮಪ್ರೀತಾ ಬಭೂವ ಜನಮೇಜಯ।।

ಜನಮೇಜಯ! ಮಹಾರಥಿ ಪಾಂಡವರೂ ಹರ್ಷಿತರಾದರು. ಕುಂತಿಯೂ ಕೂಡ ಪರಮಪ್ರೀತಳಾದಳು.

01213022a ಶ್ರುತ್ವಾ ತು ಪುಂಡರೀಕಾಕ್ಷಃ ಸಂಪ್ರಾಪ್ತಂ ಸ್ವಪುರೋತ್ತಮಂ।
01213022c ಅರ್ಜುನಂ ಪಾಂಡವಶ್ರೇಷ್ಠಮಿಂದ್ರಪ್ರಸ್ಥಗತಂ ತದಾ।।
01213023a ಆಜಗಾಮ ವಿಶುದ್ಧಾತ್ಮಾ ಸಹ ರಾಮೇಣ ಕೇಶವಃ।
01213023c ವೃಷ್ಣ್ಯಂಧಕಮಹಾಮಾತ್ರೈಃ ಸಹ ವೀರೈರ್ಮಹಾರಥೈಃ।।

ಇಂದ್ರಪ್ರಸ್ಥಕ್ಕೆಂದು ಹೊರಟಿದ್ದ ಪಾಂಡವಶ್ರೇಷ್ಠ ಅರ್ಜುನನು ನಗರವನ್ನು ಸೇರಿದನೆಂಬ ವಿಷಯವನ್ನು ಕೇಳಿದ ವಿಶುದ್ಧಾತ್ಮ ಪುಂಡರೀಕಾಕ್ಷ ಕೇಶವನು ರಾಮನ ಸಹಿತ ವೀರ ಮಹಾರಥಿ ವೃಷ್ಣಿ ಅಂಧಕ ಮುಖ್ಯರೊಡಗೂಡಿ ಅಲ್ಲಿಗೆ ಬಂದನು.

01213024a ಭ್ರಾತೃಭಿಶ್ಚ ಕುಮಾರೈಶ್ಚ ಯೋಧೈಶ್ಚ ಶತಶೋ ವೃತಃ।
01213024c ಸೈನ್ಯೇನ ಮಹತಾ ಶೌರಿರಭಿಗುಪ್ತಃ ಪರಂತಪಃ।।

ನೂರಾರು ಭ್ರಾತೃಗಳು, ಕುಮಾರರು, ಮತ್ತು ಯೋಧರಿಂದ ಸುತ್ತುವರೆಯಲ್ಪಟ್ಟು, ಮಹಾಸೈನ್ಯದೊಂದಿಗೆ ಪರಂತಪ ಶೌರಿಯು ಆಗಮಿಸಿದನು.

01213025a ತತ್ರ ದಾನಪತಿರ್ಧೀಮಾನಾಜಗಾಮ ಮಹಾಯಶಾಃ।
01213025c ಅಕ್ರೂರೋ ವೃಷ್ಣಿವೀರಾಣಾಂ ಸೇನಾಪತಿರರಿಂದಮಃ।।

ಅಲ್ಲಿಗೆ ದಾನಪತಿ, ಧೀಮಂತ, ಮಹಾಯಶ, ವೃಷ್ಣಿವೀರರ ಸೇನಾಪತಿ, ಅರಿಂದಮ ಅಕ್ರೂರನು ಆಗಮಿಸಿದನು.

01213026a ಅನಾಧೃಷ್ಟಿರ್ಮಹಾತೇಜಾ ಉದ್ಧವಶ್ಚ ಮಹಾಯಶಾಃ।
01213026c ಸಾಕ್ಷಾದ್ಬೃಹಸ್ಪತೇಃ ಶಿಷ್ಯೋ ಮಹಾಬುದ್ಧಿರ್ಮಹಾಯಶಾಃ।।
01213027a ಸತ್ಯಕಃ ಸಾತ್ಯಕಿಶ್ಚೈವ ಕೃತವರ್ಮಾ ಚ ಸಾತ್ವತಃ।
01213027c ಪ್ರದ್ಯುಮ್ನಶ್ಚೈವ ಸಾಂಬಶ್ಚ ನಿಶಠಃ ಶಂಕುರೇವ ಚ।।
01213028a ಚಾರುದೇಷ್ಣಶ್ಚ ವಿಕ್ರಾಂತೋ ಝಿಲ್ಲೀ ವಿಪೃಥುರೇವ ಚ।
01213028c ಸಾರಣಶ್ಚ ಮಹಾಬಾಹುರ್ಗದಶ್ಚ ವಿದುಷಾಂ ವರಃ।।

ಮಹಾತೇಜಸ್ವಿ ಅನಾಧೃಷ್ಟಿ, ಮಹಾಯಶ ಉದ್ಧವ, ಸಾಕ್ಷಾತ್ ಬೃಹಸ್ಪತಿಯ ಶಿಷ್ಯ ಮಹಾಬುದ್ಧಿ ಮಹಾಯಶ ಸತ್ಯಕ, ಸಾತ್ಯಕಿ, ಮತ್ತು ಸಾತ್ವತ ಕೃತವರ್ಮ, ಪ್ರದ್ಯುಮ್ನ, ಸಾಂಬ, ನಿಷಠ, ಶಂಖು, ಚಾರುದೇಷ್ಣ, ವಿಕ್ರಾಂತ ಝಿಲ್ಲಿ, ವಿಪೃಥು, ಮಹಾಬಾಹು ಸಾರಣ, ಮತ್ತು ವಿದುಷರಲ್ಲಿ ಶ್ರೇಷ್ಠ ಗದ -

01213029a ಏತೇ ಚಾನ್ಯೇ ಚ ಬಹವೋ ವೃಷ್ಣಿಭೋಜಾಂಧಕಾಸ್ತಥಾ।
01213029c ಆಜಗ್ಮುಃ ಖಾಂಡವಪ್ರಸ್ಥಮಾದಾಯ ಹರಣಂ ಬಹು।।

ಇವರು ಮತ್ತು ಇನ್ನೂ ಅನೇಕ ವೃಷ್ಣಿ, ಭೋಜ ಮತ್ತು ಅಂಧಕರು ವಧುವಿಗೆ ಉಡುಗೊರೆಗಳನ್ನು ತೆಗೆದುಕೊಂಡು ಖಾಂಡವಪ್ರಸ್ಥಕ್ಕೆ ಆಗಮಿಸಿದರು.

01213030a ತತೋ ಯುಧಿಷ್ಠಿರೋ ರಾಜಾ ಶ್ರುತ್ವಾ ಮಾಧವಮಾಗತಂ।
01213030c ಪ್ರತಿಗ್ರಹಾರ್ಥಂ ಕೃಷ್ಣಸ್ಯ ಯಮೌ ಪ್ರಾಸ್ಥಾಪಯತ್ತದಾ।।

ಕೃಷ್ಣ ಮಾಧವನು ಬರುತ್ತಿದ್ದಾನೆಂದು ಕೇಳಿ ರಾಜ ಯುಧಿಷ್ಠಿರನು ಅವನನ್ನು ಬರಮಾಡಿಕೊಳ್ಳಲು ಅವಳಿಯರನ್ನು ಕಳುಹಿಸಿದನು.

01213031a ತಾಭ್ಯಾಂ ಪ್ರತಿಗೃಹೀತಂ ತದ್ವೃಷ್ಣಿಚಕ್ರಂ ಸಮೃದ್ಧಿಮತ್।
01213031c ವಿವೇಶ ಖಾಂಡವಪ್ರಸ್ಥಂ ಪತಾಕಾಧ್ವಜಶೋಭಿತಂ।।

ಅವರು ಸಮೃದ್ಧವಾದ ವೃಷ್ಣೀ ಚಕ್ರವನ್ನು ಸ್ವಾಗತಿಸಿ ಪತಾಕ ಧ್ವಜ ಶೋಭಿತ ಖಾಂಡವಪ್ರಸ್ಥವನ್ನು ಪ್ರವೇಶಿಸಿದರು.

01213032a ಸಿಕ್ತಸಮ್ಮೃಷ್ಟಪಂಥಾನಂ ಪುಷ್ಪಪ್ರಕರಶೋಭಿತಂ।
01213032c ಚಂದನಸ್ಯ ರಸೈಃ ಶೀತೈಃ ಪುಣ್ಯಗಂಧೈರ್ನಿಷೇವಿತಂ।।

ಮಾರ್ಗಗಳನ್ನು ಗುಡಿಸಿ ಸಿಂಪಡಿಸಲಾಗಿತ್ತು, ಪುಷ್ಪಗಳನ್ನು ಹರಡಿ ಶೋಭೆಗೊಳಿಸಲಾಗಿತ್ತು, ಚಂದನದ ರಸ ಮತ್ತು ಇತರ ಶೀತಲ ಪುಣ್ಯ ಸುಗಂಧಗಳನ್ನು ಪಸರಿಸಲಾಗಿತ್ತು.

01213033a ದಹ್ಯತಾಗುರುಣಾ ಚೈವ ದೇಶೇ ದೇಶೇ ಸುಗಂಧಿನಾ।
01213033c ಸುಸಮ್ಮೃಷ್ಟಜನಾಕೀರ್ಣಂ ವಣಿಗ್ಭಿರುಪಶೋಭಿತಂ।।

ಅಲ್ಲಲ್ಲಿ ಗಂಧದ ಹೊಗೆಯ ಸುಗಂಧವು ಬರುತ್ತಿತ್ತು. ನಗರವು ಶುಚಿರ್ಭೂತರಾದ ನರರಿಂದ ಮತ್ತು ವಣಿಕರಿಂದ ಶೋಭಿಸುತ್ತಿತ್ತು.

01213034a ಪ್ರತಿಪೇದೇ ಮಹಾಬಾಹುಃ ಸಹ ರಾಮೇಣ ಕೇಶವಃ।
01213034c ವೃಷ್ಣ್ಯಂಧಕಮಹಾಭೋಜೈಃ ಸಂವೃತಃ ಪುರುಷೋತ್ತಮಃ।।

ಮಹಾಬಾಹು ಪುರುಷೋತ್ತಮ ಕೇಶವನು ರಾಮನೊಂದಿಗೆ ವೃಷ್ಣಿ ಅಂಧಕ ಮಹಾಭೋಜರಿಂದ ಸಂವೃತನಾಗಿ ಮುನ್ನಡೆದನು.

01213035a ಸಂಪೂಜ್ಯಮಾನಃ ಪೌರೈಶ್ಚ ಬ್ರಾಹ್ಮಣೈಶ್ಚ ಸಹಸ್ರಶಃ।
01213035c ವಿವೇಶ ಭವನಂ ರಾಜ್ಞಃ ಪುರಂದರಗೃಹೋಪಮಂ।।

ಸಹಸ್ರಾರು ಪೌರ ಬ್ರಾಹ್ಮಣರಿಂದ ಸಂಪೂಜ್ಯಮಾನನಾಗಿ ಅವನು ಪುರಂದರನ ಗೃಹದಂತಿದ್ದ ರಾಜ ಭವನವನ್ನು ಪ್ರವೇಶಿಸಿದನು.

01213036a ಯುಧಿಷ್ಠಿರಸ್ತು ರಾಮೇಣ ಸಮಾಗಚ್ಛದ್ಯಥಾವಿಧಿ।
01213036c ಮೂರ್ಧ್ನಿ ಕೇಶವಮಾಘ್ರಾಯ ಪರ್ಯಷ್ವಜತ ಬಾಹುನಾ।।

ಯುಧಿಷ್ಠಿರನು ಯಥಾವಿಧಿಯಾಗಿ ರಾಮನನ್ನು ಸ್ವಾಗತಿಸಿದನು ಮತ್ತು ಕೇಶವನ ನೆತ್ತನ್ನು ಆಘ್ರಾಣಿಸಿ, ಬಾಹುಗಳಿಂದ ಬಿಗಿದಪ್ಪಿದನು.

01213037a ತಂ ಪ್ರೀಯಮಾಣಂ ಕೃಷ್ಣಸ್ತು ವಿನಯೇನಾಭ್ಯಪೂಜಯತ್।
01213037c ಭೀಮಂ ಚ ಪುರುಷವ್ಯಾಘ್ರಂ ವಿಧಿವತ್ಪ್ರತ್ಯಪೂಜಯತ್।।

ಪ್ರೀಯಮಾಣನಾದ ಕೃಷ್ಣನು ಅವನನ್ನು ವಿನಯದಿಂದ ನಮಸ್ಕರಿಸಿದನು ಮತ್ತು ಪುರುಷವ್ಯಾಘ್ರ ಭೀಮನನ್ನು ವಿಧಿವತ್ತಾಗಿ ಗೌರವಿಸಿದನು.

01213038a ತಾಂಶ್ಚ ವೃಷ್ಣ್ಯಂಧಕಶ್ರೇಷ್ಠಾನ್ಧರ್ಮರಾಜೋ ಯುಧಿಷ್ಠಿರಃ।
01213038c ಪ್ರತಿಜಗ್ರಾಹ ಸತ್ಕಾರೈರ್ಯಥಾವಿಧಿ ಯಥೋಪಗಂ।।

ಧರ್ಮರಾಜ ಯುಧಿಷ್ಠಿರನು ವೃಷ್ಣಿ ಅಂಧಕ ಶ್ರೇಷ್ಠರನ್ನು ತಕ್ಕುದಾಗಿ ಯಥಾವಿಧಿಯಾಗಿ ಸತ್ಕರಿಸಿ ಬರಮಾಡಿಕೊಂಡನು.

01213039a ಗುರುವತ್ಪೂಜಯಾಮಾಸ ಕಾಂಶ್ಚಿತ್ಕಾಂಶ್ಚಿದ್ವಯಸ್ಯವತ್।
01213039c ಕಾಂಶ್ಚಿದಭ್ಯವದತ್ಪ್ರೇಮ್ಣಾ ಕೈಶ್ಚಿದಪ್ಯಭಿವಾದಿತಃ।।

ಕೆಲವರನ್ನು ಹಿರಿಯರೆಂದು ನಮಸ್ಕರಿಸಿದನು, ಕೆಲವರನ್ನು ಸಮವಯಸ್ಕರಂತೆ, ಇನ್ನು ಕೆಲವರನ್ನು ಕಿರಿಯವರೆಂದು ಪ್ರೇಮದಿಂದ ಅಭಿವಾದಿಸಿದನು.

01213040a ತತೋ ದದೌ ವಾಸುದೇವೋ ಜನ್ಯಾರ್ಥೇ ಧನಮುತ್ತಮಂ।
01213040c ಹರಣಂ ವೈ ಸುಭದ್ರಾಯಾ ಜ್ಞಾತಿದೇಯಂ ಮಹಾಯಶಾಃ।।

ಅನಂತರ ಮಹಾಯಶಸ್ವಿ ವಾಸುದೇವನು ವರನ ಕಡೆಯವರಿಗೆ ಸುಭದ್ರೆಯ ಬಂಧು ಬಳಗದವರಿಂದ ಎಂದು ಉತ್ತಮ ಧನವನ್ನು ಬಳುವಳಿಯಾಗಿ ನೀಡಿದನು.

01213041a ರಥಾನಾಂ ಕಾಂಚನಾಂಗಾನಾಂ ಕಿಂಕಿಣೀಜಾಲಮಾಲಿನಾಂ।
01213041c ಚತುರ್ಯುಜಾಮುಪೇತಾನಾಂ ಸೂತೈಃ ಕುಶಲಸಮ್ಮತೈಃ।
01213041e ಸಹಸ್ರಂ ಪ್ರದದೌ ಕೃಷ್ಣೋ ಗವಾಮಯುತಮೇವ ಚ।।
01213042a ಶ್ರೀಮಾನ್ಮಾಥುರದೇಶ್ಯಾನಾಂ ದೋಗ್ಧ್ರೀಣಾಂ ಪುಣ್ಯವರ್ಚಸಾಂ।

ಕಿಂಕಿಣೀಜಾಲಮಾಲೆಗಳಿಂದ ಶೋಭಿತವಾದ, ನಾಲ್ಕು ಕುದುರೆಗಳನ್ನು ಕಟ್ಟಿದ್ದ, ಕುಶಲ ಸಮ್ಮತರಾದ ಸೂತರೊಂದಿಗೆ ಕಾಂಚನದ ಸಾವಿರ ರಥಗಳನ್ನು ಮತ್ತು ಮಥುರದೇಶದ, ಹಾಲನ್ನು ಕೊಡುವ, ಪುಣ್ಯವರ್ಚಸ ಸುಂದರ ಮತ್ತು ಉತ್ತಮ ಗೋವುಗಳನ್ನು ಕೃಷ್ಣನು ನೀಡಿದನು.

01213042c ವಡವಾನಾಂ ಚ ಶುಭ್ರಾಣಾಂ ಚಂದ್ರಾಂಶುಸಮವರ್ಚಸಾಂ।
01213042e ದದೌ ಜನಾರ್ದನಃ ಪ್ರೀತ್ಯಾ ಸಹಸ್ರಂ ಹೇಮಭೂಷಣಂ।।
01213043a ತಥೈವಾಶ್ವತರೀಣಾಂ ಚ ದಾಂತಾನಾಂ ವಾತರಂಹಸಾಂ।
01213043c ಶತಾನ್ಯಂಜನಕೇಶೀನಾಂ ಶ್ವೇತಾನಾಂ ಪಂಚ ಪಂಚ ಚ।।
01213044a ಸ್ನಾಪನೋತ್ಸಾದನೇ ಚೈವ ಸುಯುಕ್ತಂ ವಯಸಾನ್ವಿತಂ।
01213044c ಸ್ತ್ರೀಣಾಂ ಸಹಸ್ರಂ ಗೌರೀಣಾಂ ಸುವೇಷಾಣಾಂ ಸುವರ್ಚಸಾಂ।।
01213045a ಸುವರ್ಣಶತಕಂಠೀನಾಮರೋಗಾಣಾಂ ಸುವಾಸಸಾಂ।
01213045c ಪರಿಚರ್ಯಾಸು ದಕ್ಷಾಣಾಂ ಪ್ರದದೌ ಪುಷ್ಕರೇಕ್ಷಣಃ।।

ಇದಲ್ಲದೇ ಜನಾರ್ದನನು ಪ್ರೀತಿಯಿಂದ ಶುಭ್ರವಾದ, ಚಂದ್ರನ ಬಿಂಬಗಳಂತೆ ಕಾಣುತ್ತಿದ್ದ, ಹೇಮಭೂಷಿತ ಸಹಸ್ರ ಕುದುರೆಗಳನ್ನು ನೀಡಿದನು. ಹಾಗೆಯೇ ಐದು ಐದು ನೂರು ಬಿಳಿ ಬಣ್ಣದ ಮತ್ತು ಕಪ್ಪು ಬಣ್ಣದ ವೇಗವಾಗಿ ಹೋಗಬಲ್ಲ ಅಶ್ವತರಿಗಳನ್ನೂ ನೀಡಿದನು. ಮತ್ತು ಆ ಪುಷ್ಕರೇಕ್ಷಣನು ಬೆಳ್ಳಗಿರುವ, ಸುವೇಷಿತ, ಸುವರ್ಚಸ, ನೂರು ಸುವರ್ಣದ ಮಾಲೆಗಳನ್ನು ಧರಿಸಿದ್ದ, ಆರೋಗ್ಯವಂತ, ಸುಂದರ ವಸ್ತ್ರಗಳನ್ನು ಧರಿಸಿದ್ದ, ಪರಿಚರ್ಯೆಗಳಲ್ಲಿ ದಕ್ಷ, ಮತ್ತು ಅಲಂಕಾರದಲ್ಲಿ ನಿಪುಣರಾದ ಸಹಸ್ರ ಯುವತಿಯರನ್ನು ಉಡುಗೊರೆಯಾಗಿತ್ತನು.

01213045 ಪೃಷ್ಠಯಾನಾಮಪಿ ಚಾಶ್ವಾನಾಂ ಬಾಹ್ಲೀಕಾನಾಂ ಜನಾರ್ದನಃ।
01213045 ದದೌ ಶತಸಹಸ್ರಾಖ್ಯಂ ಕನ್ಯಾಧನಮನುತ್ತಮಂ।।

ಮೇಲೆ ಕುಳಿತು ಸವಾರಿಮಾಡಬಲ್ಲ ಬಾಹ್ಲೀಕ ದೇಶದ ಒಂದು ಲಕ್ಷ ಕುದುರೆಗಳನ್ನು ಅನುತ್ತಮ ಕನ್ಯಾಧನವಾಗಿ ಜನಾರ್ದನನು ನೀಡಿದನು.

01213046a ಕೃತಾಕೃತಸ್ಯ ಮುಖ್ಯಸ್ಯ ಕನಕಸ್ಯಾಗ್ನಿವರ್ಚಸಃ।
01213046c ಮನುಷ್ಯಭಾರಾನ್ದಾಶಾರ್ಹೋ ದದೌ ದಶ ಜನಾರ್ದನಃ।।

ದಾಶಾರ್ಹ ಜನಾರ್ದನನು ಹತ್ತು ಮನುಷ್ಯರು ಹೊರಬಲ್ಲಷ್ಟು ಅಗ್ನಿವರ್ಚಸ ಉತ್ತಮ ಗುಣದ ಕೃತಾಕೃತ ಕನಕವನ್ನೂ ನೀಡಿದನು.

01213047a ಗಜಾನಾಂ ತು ಪ್ರಭಿನ್ನಾನಾಂ ತ್ರಿಧಾ ಪ್ರಸ್ರವತಾಂ ಮದಂ।
01213047c ಗಿರಿಕೂಟನಿಕಾಶಾನಾಂ ಸಮರೇಷ್ವನಿವರ್ತಿನಾಂ।
01213048a ಕ್ಲುಪ್ತಾನಾಂ ಪಟುಘಂಟಾನಾಂ ವರಾಣಾಂ ಹೇಮಮಾಲಿನಾಂ।
01213048c ಹಸ್ತ್ಯಾರೋಹೈರುಪೇತಾನಾಂ ಸಹಸ್ರಂ ಸಾಹಸಪ್ರಿಯಃ।।

ಸಾಹಸಪ್ರಿಯನು ಮೂರು ಕಡೆಗಳಲ್ಲಿ ಮದ ಸುರಿಸುತ್ತಿದ್ದ, ಪರ್ವತಗಳಂತೆ ಎತ್ತರವಾಗಿದ್ದ, ಸಮರದಲ್ಲಿ ಹಿಂದೆ ಹೆಜ್ಜೆಯಿಡದ, ಶ್ರೇಷ್ಠ ಜೋರಾಗಿ ಶಬ್ಧ ಮಾಡಬಲ್ಲ ಬಂಗಾರದ ಗಂಟೆಗಳಿಂದ ಕಟ್ಟಲ್ಪಟ್ಟ, ಪಲ್ಲಕ್ಕಿಗಳನ್ನು ಹೊಂದಿದ ಆಯ್ದ ಸಹಸ್ರ ಆನೆಗಳನ್ನು ನೀಡಿದನು.

01213049a ರಾಮಃ ಪಾದಗ್ರಾಹಣಿಕಂ ದದೌ ಪಾರ್ಥಾಯ ಲಾಂಗಲೀ।
01213049c ಪ್ರೀಯಮಾಣೋ ಹಲಧರಃ ಸಂಬಂಧಪ್ರೀತಿಮಾವಹನ್।।

ಇವೆಲ್ಲವನ್ನು ಸಂಬಂಧದಿಂದ ಸಂತೋಷಗೊಂಡ ಹಲಧರ ರಾಮನು ಪಾರ್ಥನಿಗೆ ಪ್ರೀತಿಯಿಂದ ಕೊಟ್ಟನು.

01213050a ಸ ಮಹಾಧನರತ್ನೌಘೋ ವಸ್ತ್ರಕಂಬಲಫೇನವಾನ್।
01213050c ಮಹಾಗಜಮಹಾಗ್ರಾಹಃ ಪತಾಕಾಶೈವಲಾಕುಲಃ।।
01213051a ಪಾಂಡುಸಾಗರಮಾವಿದ್ಧಃ ಪ್ರವಿವೇಶ ಮಹಾನದಃ।
01213051c ಪೂರ್ಣಮಾಪೂರಯಂಸ್ತೇಷಾಂ ದ್ವಿಷಚ್ಶೋಕಾವಹೋಽಭವತ್।।

ವಸ್ತ್ರಕಂಬಳಿಗಳೇ ನೊರೆಯಾಗಿದ್ದ, ಮಹಾ ಗಜಗಳೇ ತಿಮಿಂಗಿಲಗಳಾಗಿದ್ದ, ಪತಾಕಗಳ ದೋಣಿಗಳು ತೇಲುತ್ತಿದ್ದ ಧನ ರತ್ನಗಳ ಈ ಮಹಾಪ್ರವಾಹವು ಸಾಗರವನ್ನು ಸೇರುವ ಮಹಾ ನದಿಯಂತೆ ಪಾಂಡವರನ್ನು ಸಂಪೂರ್ಣವಾಗಿ ಆವರಿಸಿ ಅವರ ವೈರಿಗಳಲ್ಲಿ ಅಸೂಯೆಯನ್ನು ಮಾಡಿಸಿ ಅವರಿಗೆ ಸಂತೋಷಪಡಿಸಿತು.

01213052a ಪ್ರತಿಜಗ್ರಾಹ ತತ್ಸರ್ವಂ ಧರ್ಮರಾಜೋ ಯುಧಿಷ್ಠಿರಃ।
01213052c ಪೂಜಯಾಮಾಸ ತಾಂಶ್ಚೈವ ವೃಷ್ಣ್ಯಂಧಕಮಹಾರಥಾನ್।।

ಧರ್ಮರಾಜ ಯುಧಿಷ್ಠಿರನು ಅವೆಲ್ಲವನ್ನೂ ಸ್ವೀಕರಿಸಿ ವೃಷ್ಣಿ ಅಂಧಕ ಮಹಾರಥಿಗಳಿಗೆ ಸತ್ಕರಿಸಿದನು.

01213053a ತೇ ಸಮೇತಾ ಮಹಾತ್ಮಾನಃ ಕುರುವೃಷ್ಣ್ಯಂಧಕೋತ್ತಮಾಃ।
01213053c ವಿಜಹ್ರುರಮರಾವಾಸೇ ನರಾಃ ಸುಕೃತಿನೋ ಯಥಾ।।

ಅಲ್ಲಿ ಸೇರಿದ್ದ ಮಹಾತ್ಮ ಕುರು ವೃಷ್ಣಿ ಅಂಧಕ ಶ್ರೇಷ್ಠರು ಪುಣ್ಯಪುರುಷರು ಸ್ವರ್ಗದಲ್ಲಿ ಹೇಗೋ ಹಾಗೆ ಆನಂದಿಸಿದರು.

01213054a ತತ್ರ ತತ್ರ ಮಹಾಪಾನೈರುತ್ಕೃಷ್ಟತಲನಾದಿತೈಃ।
01213054c ಯಥಾಯೋಗಂ ಯಥಾಪ್ರೀತಿ ವಿಜಹ್ರುಃ ಕುರುವೃಷ್ಣಯಃ।।

ಕುರು ವೃಷ್ಣಿಯರು ಎಷ್ಟು ಬೇಕೋ ಅಷ್ಟು ಎಷ್ಟು ಯೋಗ್ಯವೋ ಅಷ್ಟು ಮಹಾ ಪಾನ, ಸಂಗೀತ ಮತ್ತು ವಾದ್ಯಗಳ ಮೂಲಕ ರಂಜಿಸಿದರು.

01213055a ಏವಮುತ್ತಮವೀರ್ಯಾಸ್ತೇ ವಿಹೃತ್ಯ ದಿವಸಾನ್ಬಹೂನ್।
01213055c ಪೂಜಿತಾಃ ಕುರುಭಿರ್ಜಗ್ಮುಃ ಪುನರ್ದ್ವಾರವತೀಂ ಪುರೀಂ।।

ಈ ರೀತಿ ಉತ್ತಮ ವೀರರು ಅಲ್ಲಿ ಬಹಳ ದಿವಸಗಳು ವಿಹರಿಸಿ ಕುರುಗಳಿಂದ ಪೂಜಿತರಾಗಿ ಪುನಃ ದ್ವಾರವತೀ ಪುರವನ್ನು ತಲುಪಿದರು.

01213056a ರಾಮಂ ಪುರಸ್ಕೃತ್ಯ ಯಯುರ್ವೃಷ್ಣ್ಯಂಧಕಮಹಾರಥಾಃ।
01213056c ರತ್ನಾನ್ಯಾದಾಯ ಶುಭ್ರಾಣಿ ದತ್ತಾನಿ ಕುರುಸತ್ತಮೈಃ।।

ಕುರುಸತ್ತಮರು ನೀಡಿದ್ದ ಶುಭ್ರ ರತ್ನಗಳನ್ನು ಸ್ವೀಕರಿಸಿ ವೃಷ್ಣಿ-ಅಂಧಕ ಮಹಾರಥಿಗಳು ರಾಮನ ನೇತೃತ್ವದಲ್ಲಿ ಹೊರಟರು.

01213057a ವಾಸುದೇವಸ್ತು ಪಾರ್ಥೇನ ತತ್ರೈವ ಸಹ ಭಾರತ।
01213057c ಉವಾಸ ನಗರೇ ರಮ್ಯೇ ಶಕ್ರಪ್ರಸ್ಥೇ ಮಹಾಮನಾಃ।
01213057e ವ್ಯಚರದ್ಯಮುನಾಕೂಲೇ ಪಾರ್ಥೇನ ಸಹ ಭಾರತ।।
01213057 ಮೃಗಾನ್ವಿಘ್ಯನ್ವರಾಹಾಂಶ್ಚ ರೇಮೇ ಸಾರ್ಧಂ ಕಿರೀಟಿನಾ।।

ಭಾರತ! ಆದರೆ ಮಹಾಮನ ವಾಸುದೇವನು ಪಾರ್ಥನ ಸಹಿತ ರಮ್ಯ ಶಕ್ರಪ್ರಸ್ಥ ನಗರದಲ್ಲಿ ಉಳಿದುಕೊಂಡನು. ಭಾರತ! ಅವನು ಪಾರ್ಥನ ಸಹಿತ ಯಮುನಾ ತೀರದಲ್ಲಿ ವಿಹರಿಸುತ್ತಿದ್ದನು. ಕಿರೀಟಿಯ ಸಹಿತ ವರಾಹ ಮತ್ತು ಇತರ ಮೃಗಗಳನ್ನು ಬೇಟೆಯಾಡಿ ರಮಿಸಿದನು.

01213058a ತತಃ ಸುಭದ್ರಾ ಸೌಭದ್ರಂ ಕೇಶವಸ್ಯ ಪ್ರಿಯಾ ಸ್ವಸಾ।
01213058c ಜಯಂತಮಿವ ಪೌಲೋಮೀ ದ್ಯುತಿಮಂತಮಜೀಜನತ್।।

ಕೇಶವನ ಪ್ರಿಯ ತಂಗಿ ಸುಭದ್ರೆಯು ಪೌಲೋಮಿಯು ದ್ಯುತಿಮಂತ ಜಯಂತನಿಗೆ ಹೇಗೋ ಹಾಗೆ ಸೌಭದ್ರನಿಗೆ ಜನ್ಮವಿತ್ತಳು.

01213059a ದೀರ್ಘಬಾಹುಂ ಮಹಾಸತ್ತ್ವಮೃಷಭಾಕ್ಷಮರಿಂದಮಂ।
01213059c ಸುಭದ್ರಾ ಸುಷುವೇ ವೀರಮಭಿಮನ್ಯುಂ ನರರ್ಷಭಂ।।

ಸುಭದ್ರೆಯು ಜನ್ಮವಿತ್ತ ಅಭಿಮನ್ಯುವು ದೀರ್ಘಬಾಹುವೂ, ಮಹಾಸತ್ವಯುತನೂ, ವೃಷಭಾಕ್ಷನೂ, ನರರ್ಷಭನೂ ವೀರನೂ ಆಗಿದ್ದನು.

01213060a ಅಭೀಶ್ಚ ಮನ್ಯುಮಾಂಶ್ಚೈವ ತತಸ್ತಮರಿಮರ್ದನಂ।
01213060c ಅಭಿಮನ್ಯುಮಿತಿ ಪ್ರಾಹುರಾರ್ಜುನಿಂ ಪುರುಷರ್ಷಭಂ।।

ಅವನು ನಿರ್ಭಯನಾಗಿದ್ದನು, ಕುಪಿತನಾಗಿದ್ದನು. ಅದುದರಿಂದ ಪುರುಷರ್ಷಭ ಅರಿಮರ್ದನ ಆರ್ಜುನಿಯನ್ನು ಅಭಿಮನ್ಯು ಎಂದು ಕರೆಯಲಾಯಿತು.

01213061a ಸ ಸಾತ್ವತ್ಯಾಮತಿರಥಃ ಸಂಬಭೂವ ಧನಂಜಯಾತ್।
01213061c ಮಖೇ ನಿರ್ಮಥ್ಯಮಾನಾದ್ವಾ ಶಮೀಗರ್ಭಾದ್ಧುತಾಶನಃ।।

ಕಡೆದ ಶಮೀ ಗರ್ಭದ ಮುಖದಿಂದ ಹುತಾಶನನು ಹೇಗೋ ಹಾಗೆ ಆ ಅತಿರಥನು ಸಾತ್ವತೆಯಲ್ಲಿ ಧನಂಜಯನಿಂದ ಸಂಭವಿಸಿದನು.

01213062a ಯಸ್ಮಿಂಜಾತೇ ಮಹಾಬಾಹುಃ ಕುಂತೀಪುತ್ರೋ ಯುಧಿಷ್ಠಿರಃ।
01213062c ಅಯುತಂ ಗಾ ದ್ವಿಜಾತಿಭ್ಯಃ ಪ್ರಾದಾನ್ನಿಷ್ಕಾಂಶ್ಚ ತಾವತಃ।

ಅವನು ಹುಟ್ಟಿದಾಗ ಮಹಾಬಾಹು ಕುಂತೀಪುತ್ರ ಯುಧಿಷ್ಠಿರನು ದ್ವಿಜರಿಗೆ ಹತ್ತು ಸಾವಿರ ಹಸುಗಳನ್ನೂ ಮತ್ತು ಅಷ್ಟೇ ಸಂಖ್ಯೆಯಲ್ಲಿ ಬಂಗಾರದ ನಾಣ್ಯಗಳನ್ನೂ ದಾನಮಾಡಿದನು.

01213063a ದಯಿತೋ ವಾಸುದೇವಸ್ಯ ಬಾಲ್ಯಾತ್ಪ್ರಭೃತಿ ಚಾಭವತ್।
01213063c ಪಿತೄಣಾಂ ಚೈವ ಸರ್ವೇಷಾಂ ಪ್ರಜಾನಾಮಿವ ಚಂದ್ರಮಾಃ।।

ಪಿತೃಗಳಿಗೆ ಮತ್ತು ಸರ್ವ ಪ್ರಜೆಗಳಿಗೆ ಚಂದ್ರಮನು ಹೇಗೋ ಹಾಗೆ ಅವನು ಬಾಲ್ಯದಿಂದ ವಾಸುದೇವನ ಅಚ್ಚುಮೆಚ್ಚಿನವನಾಗಿದ್ದನು.

01213064a ಜನ್ಮಪ್ರಭೃತಿ ಕೃಷ್ಣಶ್ಚ ಚಕ್ರೇ ತಸ್ಯ ಕ್ರಿಯಾಃ ಶುಭಾಃ।
01213064c ಸ ಚಾಪಿ ವವೃಧೇ ಬಾಲಃ ಶುಕ್ಲಪಕ್ಷೇ ಯಥಾ ಶಶೀ।।

ಜನ್ಮಪ್ರಭೃತಿಯಾದ ಅವನ ಎಲ್ಲ ಶುಭಕ್ರಿಯೆಗಳನ್ನೂ ಕೃಷ್ಣನೇ ನೆರವೇರಿಸಿದನು. ಮತ್ತು ಆ ಬಾಲಕನೂ ಶುಕ್ಲಪಕ್ಷದಲ್ಲಿ ಶಶಿಯ ಹಾಗೆ ವೃದ್ಧಿಸಿದನು.

01213065a ಚತುಷ್ಪಾದಂ ದಶವಿಧಂ ಧನುರ್ವೇದಮರಿಂದಮಃ।
01213065c ಅರ್ಜುನಾದ್ವೇದ ವೇದಜ್ಞಾತ್ಸಕಲಂ ದಿವ್ಯಮಾನುಷಂ।।

ಆ ಅರಿಂದಮನು ವೇದಜ್ಞ ಅರ್ಜುನನಿಂದ ಚತುಷ್ಪಾದಗಳನ್ನು1 ಹೊಂದಿದ್ದ, ದಶವಿಧದ2 ಸಕಲ ದಿವ್ಯ ಮಾನುಷ ಧನುರ್ವೇದ3ವನ್ನು ಕಲಿತುಕೊಂಡನು.

01213066a ವಿಜ್ಞಾನೇಷ್ವಪಿ ಚಾಸ್ತ್ರಾಣಾಂ ಸೌಷ್ಠವೇ ಚ ಮಹಾಬಲಃ।
01213066c ಕ್ರಿಯಾಸ್ವಪಿ ಚ ಸರ್ವಾಸು ವಿಶೇಷಾನಭ್ಯಶಿಕ್ಷಯತ್।।

ಆ ಮಹಾಬಲಿಯು ಅಸ್ತ್ರಗಳ ವಿಜ್ಞಾನವನ್ನೂ ಕಲಿತುಕೊಂಡನು, ಸರ್ವವನ್ನೂ ಬಳಸುವುದರಲ್ಲಿ, ಮತ್ತು ವಿಶೇಷವಾದವುಗಳನ್ನೂ ಕಲಿತುಕೊಂಡನು.

01213067a ಆಗಮೇ ಚ ಪ್ರಯೋಗೇ ಚ ಚಕ್ರೇ ತುಲ್ಯಮಿವಾತ್ಮನಃ।
01213067c ತುತೋಷ ಪುತ್ರಂ ಸೌಭದ್ರಂ ಪ್ರೇಕ್ಷಮಾಣೋ ಧನಂಜಯಃ।।

ಅವನು ಆಗಮ ಪ್ರಯೋಗಗಳಲ್ಲಿ ತನ್ನ ಸರಿಸಾಟಿಯನ್ನಾಗಿ ಮಾಡಿದನು. ಧನಂಜಯನು ಪುತ್ರ ಸೌಭದ್ರನನ್ನು ನೋಡಿದಾಗಲೆಲ್ಲಾ ಸಂತೋಷಪಡುತ್ತಿದ್ದನು.

01213068a ಸರ್ವಸಂಹನನೋಪೇತಂ ಸರ್ವಲಕ್ಷಣಲಕ್ಷಿತಂ।
01213068c ದುರ್ಧರ್ಷಮೃಷಭಸ್ಕಂಧಂ ವ್ಯಾತ್ತಾನನಮಿವೋರಗಂ।।
01213069a ಸಿಂಹದರ್ಪಂ ಮಹೇಷ್ವಾಸಂ ಮತ್ತಮಾತಂಗವಿಕ್ರಮಂ।

1213069c ಮೇಘದುಂದುಭಿನಿರ್ಘೋಷಂ ಪೂರ್ಣಚಂದ್ರನಿಭಾನನಂ।।

01213070a ಕೃಷ್ಣಸ್ಯ ಸದೃಶಂ ಶೌರ್ಯೇ ವೀರ್ಯೇ ರೂಪೇ ತಥಾಕೃತೌ।
01213070c ದದರ್ಶ ಪುತ್ರಂ ಬೀಭತ್ಸುರ್ಮಘವಾನಿವ ತಂ ಯಥಾ।।

ಸರ್ವಸಂಹನನೋಪೇತ, ಸರ್ವಲಕ್ಷಣಲಕ್ಷಿತ, ದುರ್ಧರ್ಷ, ವೃಷಭಸ್ಕಂಧ, ಉರಗದಂತೆ ಅಗಲ ಬಾಯನ್ನುಳ್ಳ, ಸಿಂಹದರ್ಪ, ಮಹೇಷ್ವಾಸ, ಮತ್ತಮಾತಂಗ ವಿಕ್ರಮಿ, ಮೇಘದುಂಧುಭಿ ನಿರ್ಘೋಷ, ಪೂರ್ಣಚಂದ್ರನಿಭಾನನ, ಶೌರ್ಯ ವೀರ್ಯ ರೂಪದಲ್ಲಿ ಕೃಷ್ಣ ಸದೃಶ ಪುತ್ರನನ್ನು ವಘವಂತನು ಹೇಗೋ ಹಾಗೆ ಕಂಡನು.

01213071a ಪಾಂಚಾಲ್ಯಪಿ ಚ ಪಂಚಭ್ಯಃ ಪತಿಭ್ಯಃ ಶುಭಲಕ್ಷಣಾ।
01213071c ಲೇಭೇ ಪಂಚ ಸುತಾನ್ವೀರಾಂಶುಭಾನ್ಪಂಚಾಚಲಾನಿವ।।

ಶುಭಲಕ್ಷಣೆ ಪಾಂಚಾಲಿಯೂ ಕೂಡ ತನ್ನ ಐವರು ಪತಿಗಳಿಂದ ಐದು ಪರ್ವತಗಳಂತಿರುವ ವೀರ ಶುಭ ಐವರು ಪುತ್ರರನ್ನು ಪಡೆದಳು.

01213072a ಯುಧಿಷ್ಠಿರಾತ್ಪ್ರತಿವಿಂಧ್ಯಂ ಸುತಸೋಮಂ ವೃಕೋದರಾತ್।
01213072c ಅರ್ಜುನಾಚ್ಛ್ರುತಕರ್ಮಾಣಂ ಶತಾನೀಕಂ ಚ ನಾಕುಲಿಂ।।
01213073a ಸಹದೇವಾಚ್ಛ್ರುತಸೇನಮೇತಾನ್ಪಂಚ ಮಹಾರಥಾನ್।
01213073c ಪಾಂಚಾಲೀ ಸುಷುವೇ ವೀರಾನಾದಿತ್ಯಾನದಿತಿರ್ಯಥಾ।।

ಯುಧಿಷ್ಠಿರನಿಂದ ಪ್ರತಿವಿಂದ್ಯ, ವೃಕೋದರನಿಂದ ಸುತಸೋಮ, ಅರ್ಜುನನಿಂದ ಶ್ರುತಕರ್ಮ, ನಕುಲನಿಂದ ಶತಾನೀಕ, ಮತ್ತು ಸಹದೇವನಿಂದ ಶ್ರುತಸೇನ ಈ ಐವರು ವೀರ ಮಹಾರಥಿಗಳಿಗೆ ಪಾಂಚಾಲಿಯು ಅದಿತಿಯು ಆದಿತ್ಯರಿಗೆ ಹೇಗೋ ಹಾಗೆ ಜನ್ಮವಿತ್ತಳು.

01213074a ಶಾಸ್ತ್ರತಃ ಪ್ರತಿವಿಂಧ್ಯಂ ತಮೂಚುರ್ವಿಪ್ರಾ ಯುಧಿಷ್ಠಿರಂ।
01213074c ಪರಪ್ರಹರಣಜ್ಞಾನೇ ಪ್ರತಿವಿಂಧ್ಯೋ ಭವತ್ವಯಂ।।

ಶಾಸ್ತ್ರತಃ ವಿಪ್ರನು ಯುಧಿಷ್ಠಿರನಿಗೆ ಪ್ರತಿವಿಂದ್ಯನ ಕುರಿತು ಹೇಳಿದನು: “ಇವನು ಪರಪ್ರಹರಣಜ್ಞಾನದಲ್ಲಿ ಪ್ರತಿವಿಂದ್ಯನಾಗುತ್ತಾನೆ.

01213075a ಸುತೇ ಸೋಮಸಹಸ್ರೇ ತು ಸೋಮಾರ್ಕಸಮತೇಜಸಂ।
01213075c ಸುತಸೋಮಂ ಮಹೇಷ್ವಾಸಂ ಸುಷುವೇ ಭೀಮಸೇನತಃ।।

ಸಹಸ್ರ ಸೋಮಗಳನ್ನು ಹಿಂಡಿದಾಗ ಆಗುವ ಸೋಮಾರ್ಕಸಮತೇಜಸ್ವಿ ಮಹೇಷ್ವಾಸ ಸುತಸೋಮನನ್ನು ಭೀಮಸೇನನಿಂದ ಪಡೆದಳು.

01213076a ಶ್ರುತಂ ಕರ್ಮ ಮಹತ್ಕೃತ್ವಾ ನಿವೃತ್ತೇನ ಕಿರೀಟಿನಾ।
01213076c ಜಾತಃ ಪುತ್ರಸ್ತವೇತ್ಯೇವಂ ಶ್ರುತಕರ್ಮಾ ತತೋಽಭವತ್।।

ಪ್ರಸಿದ್ಧ ಮಹಾಕರ್ಮಗಳನ್ನು ಮಾಡಿ ಹಿಂದಿರುಗಿದ ಕಿರೀಟಿಯಿಂದ ಹುಟ್ಟಿದ ಈ ಪುತ್ರನು ಶ್ರುತಕರ್ಮನೆಂದಾಗುತ್ತಾನೆ.”

01213077a ಶತಾನೀಕಸ್ಯ ರಾಜರ್ಷೇಃ ಕೌರವ್ಯಃ ಕುರುನಂದನಃ।
01213077c ಚಕ್ರೇ ಪುತ್ರಂ ಸನಾಮಾನಂ ನಕುಲಃ ಕೀರ್ತಿವರ್ಧನಂ।।

ಕೌರವ್ಯ ಕುರುನಂದನ ನಕುಲನು ಕೀರ್ತಿವರ್ಧನ ತನ್ನ ಪುತ್ರನಿಗೆ ರಾಜರ್ಷಿ ಶತಾನೀಕನ ಹೆಸರನ್ನೇ ಇಟ್ಟನು.

01213078a ತತಸ್ತ್ವಜೀಜನತ್ ಕೃಷ್ಣಾ ನಕ್ಷತ್ರೇ ವಹ್ನಿದೈವತೇ।
01213078c ಸಹದೇವಾತ್ಸುತಂ ತಸ್ಮಾಚ್ಛ್ರುತಸೇನೇತಿ ತಂ ವಿದುಃ।।

ನಂತರ ಕೃಷ್ಣೆಯು ವಹ್ನಿದೇವತೆಯ ನಕ್ಷತ್ರದಲ್ಲಿ ಸಹದೇವನಿಂದ ಸುತನನ್ನು ಪಡೆದಳು. ಆದುದರಿಂದ ಅವನು ಶ್ರುತಸೇನನೆಂದಾದನು.

01213079a ಏಕವರ್ಷಾಂತರಾಸ್ತ್ವೇವ ದ್ರೌಪದೇಯಾ ಯಶಸ್ವಿನಃ।
01213079c ಅನ್ವಜಾಯಂತ ರಾಜೇಂದ್ರ ಪರಸ್ಪರಹಿತೇ ರತಾಃ।।

ರಾಜೇಂದ್ರ! ಯಶಸ್ವಿಯರಾದ ದ್ರೌಪದೇಯರು ಒಂದೊಂದು ವರ್ಷ ಅಂತರದಲ್ಲಿ ಹುಟ್ಟಿದರು ಮತ್ತು ಪರಸ್ಪರರ ಹಿತದಲ್ಲಿ ನಿರತರಾಗಿದ್ದರು.

01213080a ಜಾತಕರ್ಮಾಣ್ಯಾನುಪೂರ್ವ್ಯಾಚ್ಚೂಡೋಪನಯನಾನಿ ಚ।
01213080c ಚಕಾರ ವಿಧಿವದ್ಧೌಮ್ಯಸ್ತೇಷಾಂ ಭರತಸತ್ತಮ।।

ಭರತಸತ್ತಮ! ಅವರಿಗೆ ಧೌಮ್ಯನು ವಿಧಿವತ್ತಾಗಿ ಜಾತಕರ್ಮ, ಚೌಳ, ಮತ್ತು ಉಪನಯನಗಳನ್ನು ನೆರವೇರಿಸಿಕೊಟ್ಟನು.

01213081a ಕೃತ್ವಾ ಚ ವೇದಾಧ್ಯಯನಂ ತತಃ ಸುಚರಿತವ್ರತಾಃ।
01213081c ಜಗೃಹುಃ ಸರ್ವಮಿಷ್ವಸ್ತ್ರಮರ್ಜುನಾದ್ದಿವ್ಯಮಾನುಷಂ।।

ಆ ಸುಚರಿತವ್ರತರು ವೇದಾಧ್ಯಯನವನ್ನು ಮುಗಿಸಿ ದಿವ್ಯ ಮಾನುಷ ಸರ್ವ ಅಸ್ತ್ರ ಶಸ್ತ್ರಗಳನ್ನೂ ಅರ್ಜುನನಿಂದ ಕಲಿತರು.

01213082a ದೇವಗರ್ಭೋಪಮೈಃ ಪುತ್ರೈರ್ವ್ಯೂಢೋರಸ್ಕೈರ್ಮಹಾಬಲೈಃ।
01213082c ಅನ್ವಿತಾ ರಾಜಶಾರ್ದೂಲ ಪಾಂಡವಾ ಮುದಮಾಪ್ನುವನ್।।

ಈ ವಿಶಾಲ ಛಾತಿಯ ಮಹಾಬಲಶಾಲಿ ದೇವಗರ್ಭಸಮಾನ ಪುತ್ರರಿಂದ ಸುತ್ತುವರೆಯಲ್ಪಟ್ಟ ರಾಜಶಾರ್ದೂಲ ಪಾಂಡವರು ಸಂತೋಷವನ್ನು ಹೊಂದಿದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಹರಣಹಾರಿಕಪರ್ವಣಿ ತ್ರಯೋದಶಾಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಹರಣಹಾರಿಕಪರ್ವದಲ್ಲಿ ಇನ್ನೂರಾ ಹದಿಮೂರನೆಯ ಅಧ್ಯಾಯವು. ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಹರಣಹಾರಿಕಪರ್ವಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಹರಣಹಾರಿಕಪರ್ವವು. ಇದೂವರೆಗಿನ ಒಟ್ಟು ಮಹಾಪರ್ವಗಳು-0/18, ಉಪಪರ್ವಗಳು-18/100, ಅಧ್ಯಾಯಗಳು-213/1995, ಶ್ಲೋಕಗಳು-6852/73784.


  1. ಮಂತ್ರಮುಕ್ತಂ ಪಾಣಿಮುಕ್ತಂ ಮುಕ್ತಾಮುಕ್ತಂ ತಥೈವ ಚ। ಅಮುಕ್ತಂ ಚ ಧನುರ್ವೇದೇ ಚತುಷ್ಪಾಚ್ಛಸ್ತ್ರಮೀರಿತಂ।। ಎಂದು ಧನುರ್ವೇದದಲ್ಲಿ ಮಂತ್ರಮುಕ್ತ, ಪಾಣಿಮುಕ್ತ, ಮುಕ್ತಾಮುಕ್ತ ಮತ್ತು ಅಮುಕ್ತ ಎಂಬ ನಾಲ್ಕು ಪಾದಗಳಿವೆ. ಕೇವಲ ಮಂತ್ರದ್ವಾರ ಯಾವುದರ ಪ್ರಯೋಗವಾಗುತ್ತದೆಯೋ (ಉಪಸಂಹಾರವಲ್ಲ) ಅದನ್ನು ಮಂತ್ರಮುಕ್ತವೆಂದು ಹೇಳುತ್ತಾರೆ. ಕೈಯಿಂದ ಧನುಸ್ಸಿಗೆ ಹೂಡಿ ಬಿಡುವ ಬಾಣ ಮೊದಲಾದವುಗಳಿಗೆ ಪಾಣಿಮುಕ್ತವೆಂದು ಹೇಳುತ್ತಾರೆ. ಪ್ರಯೋಗ ಮತ್ತು ಉಪಸಂಹಾರ ಈ ಎರಡೂ ಇರುವ ಆಯುಧಗಳಿಗೆ ಮುಕ್ತಾಮುಕ್ತವೆಂದು ಹೇಳುತ್ತಾರೆ. ಮಂತ್ರಪೂರ್ವಕವಾಗಿರುವ, ಶತ್ರುಗಳು ಕೇವಲ ನೋಡುವುದರಿಂದ ಅಥವಾ ಕೇಳುವುದರಿಂದ (ಪತಾಕೆ, ಶಂಖ ಮೊದಲಾದವುಗಳು) ಭಯಭೀತರಾಗುವಂತೆ ಮಾಡುವ ಆಯುಧಗಳಿಗೆ ಅಮುಕ್ತವೆಂದು ಹೇಳುತ್ತಾರೆ. ↩︎

  2. ಆದಾನಮಥಸಂಧಾನಂ ಮೋಕ್ಷಣಂ ವಿನಿವರ್ತನಂ। ಸ್ಥಾನಂ ಮುಷ್ಠಿಃ ಪ್ರಯೋಗಶ್ಚ ಪ್ರಾಯಶ್ಚಿತ್ತಾನಿ ಮಂಡಲಂ। ರಹಸ್ಯಂ ಚೇತಿ ದಶಧಾ ಧನುರ್ವೇದಾಂಗಮಿಷ್ಯತೇ।। ಎಂದು ಧನುರ್ವೇದದಲ್ಲಿ ಹತ್ತು ಅಂಗಗಳಿವೆ ಎಂದು ಹೇಳಲಾಗಿದೆ. ಭತ್ತಳಿಕೆಯಿಂದ ಬಾಣವನ್ನು ತೆಗೆಯುವುದು ಆದಾನ. ಅದನ್ನು ಧನುಸ್ಸಿಗೆ ಏರಿಸುವುದು ಸಂಧಾನ. ಲಕ್ಷ್ಯದ ಮೇಲೆ ಬಿಡುವುದು ಮೋಕ್ಷಣ. ಶತ್ರುವು ನಿರ್ಬಲನಾಗಿದ್ದಾನೆಂದು ತಿಳಿದು ಬಿಟ್ಟ ಅಸ್ತ್ರವನ್ನು ಹಿಂತೆಗೆದುಕೊಳ್ಳುವುದು ವಿನಿವರ್ತನ. ಧನುಸ್ಸಿನ ನಡುಭಾಗವನ್ನು ಸ್ಥಾನವೆಂದು ಹೇಳುತ್ತಾರೆ. ಮೂರು ಅಥವಾ ನಾಲ್ಕು ಬೆರಳುಗಳನ್ನು ಬಿಗಿಯಾಗಿ ಹಿಡಿಯುವುದು ಮುಷ್ಠಿ. ತರ್ಜನೀ ಮತ್ತು ಮಧ್ಯಮಾ ಅಥವಾ ಮಧ್ಯಮ ಮತ್ತು ಅಂಗುಷ್ಟಗಳ ಮೂಲಕ ಬಾಣವನ್ನು ಹಿಡಿಯುವುದೇ ಪ್ರಯೋಗ. ವೈರಿಯ ಬಾಣಗಳ ಆಘಾತವನ್ನು ತಡೆಹಿಡಿಯಲು ಬಾಣಗಳನ್ನು ಬಿಡುವುದನ್ನು ಪ್ರಾಯಶ್ಚಿತ್ತವೆಂದು ಹೇಳುತ್ತಾರೆ. ಚಕ್ರಾಕಾರವಾಗಿ ರಥದೊಂದಿಗೆ ತಿರುಗುತ್ತಾ ಲಕ್ಷ್ಯವನ್ನು ಹೊಡೆಯುವುದನ್ನು ಮಂಡಲವೆಂದು ಹೇಳುತ್ತಾರೆ. ↩︎

  3. ಬ್ರಹ್ಮಾಸ್ತ್ರ ಮೊದಲಾದವುಗಳು ದಿವ್ಯ ಹಾಗೂ ಖಡ್ಗ, ಬಾಣ ಮೊದಲಾದವುಗಳು ಮಾನುಷ ಅಸ್ತ್ರಗಳೆಂದು ಹೇಳುತ್ತಾರೆ. ↩︎