ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಸುಭದ್ರಾಹರಣ ಪರ್ವ
ಅಧ್ಯಾಯ 211
ಸಾರ
ರೈವತಕಗಿರಿಯ ಉತ್ಸವದಲ್ಲಿ ಸುಭದ್ರೆಯನ್ನು ನೋಡಿ ಅರ್ಜುನನು ಮೋಹಿಸಿ, ಅವಳನ್ನು ಪಡೆಯುವ ಉಪಾಯವನ್ನು ಕೃಷ್ಣನಲ್ಲಿ ಕೇಳುವುದು (1-20). ಅವಳನ್ನು ಕದ್ದುಕೊಂಡು ಹೋಗೆಂದು ಕೃಷ್ಣನು ಸಲಹೆನೀಡಲು, ಅರ್ಜುನನು ಅದಕ್ಕೆ ಯುಧಿಷ್ಠಿರನ ಅನುಮತಿಯನ್ನು ಪಡೆದಿದ್ದುದು (21-25).
01211001 1ವೈಶಂಪಾಯನ ಉವಾಚ।
01211001a ತತಃ ಕತಿಪಯಾಹಸ್ಯ ತಸ್ಮಿನ್ರೈವತಕೇ ಗಿರೌ।
01211001c ವೃಷ್ಣ್ಯಂಧಕಾನಾಮಭವತ್ ಸುಮಹಾನುತ್ಸವೋ ನೃಪ।।
ವೈಶಂಪಾಯನನು ಹೇಳಿದನು: “ನೃಪ! ಕೆಲವು ದಿನಗಳ ನಂತರ ವೃಷ್ಣಿ ಮತ್ತು ಅಂಧಕರು ಅದೇ ರೈವತಕ ಗಿರಿಯಲ್ಲಿ ಒಂದು ಮಹಾ ಉತ್ಸವವನ್ನು ನೆರವೇರಿಸಿದರು.
01211002a ತತ್ರ ದಾನಂ ದದುರ್ವೀರಾ ಬ್ರಾಹ್ಮಣಾನಾಂ ಸಹಸ್ರಶಃ।
01211002c ಭೋಜವೃಷ್ಣ್ಯಂಧಕಾಶ್ಚೈವ ಮಹೇ ತಸ್ಯ ಗಿರೇಸ್ತದಾ।।
ವೀರ ಭೋಜರು, ವೃಷ್ಣಿಗಳು ಮತ್ತು ಅಂಧಕರು ಆ ಮಹಾಗಿರಿಯಲ್ಲಿ ಸಹಸ್ರಾರು ಬ್ರಾಹ್ಮಣರಿಗೆ ದಾನವನ್ನಿತ್ತರು.
01211003a ಪ್ರಾಸಾದೈ ರತ್ನಚಿತ್ರೈಶ್ಚ ಗಿರೇಸ್ತಸ್ಯ ಸಮಂತತಃ।
01211003c ಸ ದೇಶಃ ಶೋಭಿತೋ ರಾಜನ್ದೀಪವೃಕ್ಷೈಶ್ಚ ಸರ್ವಶಃ।।
ರಾಜನ್! ಆ ಗಿರಿಯ ಸುತ್ತಲ ಪ್ರದೇಶವು ರತ್ನಚಿತ್ರಗಳಿಂದ ಕೂಡಿದ ಪ್ರಾಸಾದಗಳಿಂದ ಮತ್ತು ಎಲ್ಲೆಡೆಯೂ ದೀಪವೃಕ್ಷಗಳಿಂದ ಶೋಭಿತವಾಗಿತ್ತು.
01211004a ವಾದಿತ್ರಾಣಿ ಚ ತತ್ರ ಸ್ಮ ವಾದಕಾಃ ಸಮವಾದಯನ್।
01211004c ನನೃತುರ್ನರ್ತಕಾಶ್ಚೈವ ಜಗುರ್ಗಾನಾನಿ ಗಾಯನಾಃ।।
ಅಲ್ಲಿ ವಾದಕರು ತಮ್ಮ ವಾದ್ಯಗಳನ್ನು ನುಡಿಸುತ್ತಿದ್ದರು, ನರ್ತಕರು ನರ್ತಿಸುತ್ತಿದ್ದರು ಮತ್ತು ಗಾಯಕರು ಗಾಯನ ಹಾಡುತ್ತಿದ್ದರು.
01211005a ಅಲಂಕೃತಾಃ ಕುಮಾರಾಶ್ಚ ವೃಷ್ಣೀನಾಂ ಸುಮಹೌಜಸಃ।
01211005c ಯಾನೈರ್ಹಾಟಕಚಿತ್ರಾಂಗೈಶ್ಚಂಚೂರ್ಯಂತೇ ಸ್ಮ ಸರ್ವಶಃ।।
ಸುಮಹೌಜಸ ವೃಷ್ಣಿ ಕುಮಾರರು ಅಲಂಕೃತರಾಗಿ ತಮ್ಮ ತಮ್ಮ ವಾಹನಗಳ ಮೇಲೆ ಕುಳಿತು ಬಂಗಾರದ ಕಡಗಗಳನ್ನು ಹಾಕಿಕೊಂಡು ಎಲ್ಲ ಕಡೆ ಓಡಾಡುತ್ತಿದ್ದರು.
01211006a ಪೌರಾಶ್ಚ ಪಾದಚಾರೇಣ ಯಾನೈರುಚ್ಚಾವಚೈಸ್ತಥಾ।
01211006c ಸದಾರಾಃ ಸಾನುಯಾತ್ರಾಶ್ಚ ಶತಶೋಽಥ ಸಹಸ್ರಶಃ।।
ಪೌರರು ತಮ್ಮ ಪತ್ನಿಯರು ಮತ್ತು ಅನುಚರರೊಂದಿಗೆ ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ನಡೆಯುತ್ತ ಅಥವಾ ವಾಹನಗಳಲ್ಲಿ ಹೊರಬಂದಿದ್ದರು.
01211007a ತತೋ ಹಲಧರಃ ಕ್ಷೀಬೋ ರೇವತೀಸಹಿತಃ ಪ್ರಭುಃ।
01211007c ಅನುಗಮ್ಯಮಾನೋ ಗಂಧರ್ವೈರಚರತ್ತತ್ರ ಭಾರತ।।
ಭಾರತ! ಅಲ್ಲಿ ಸಂಗೀತಗಾರರು ಹಿಂಬಾಲಿಸಿಬರುತ್ತಿರಲು ಎತ್ತರವಾಗಿದ್ದ ಪ್ರಭು ಹಲಧರನು ಕುಡಿದು ಮತ್ತನಾಗಿ ರೇವತಿಯ ಸಹಿತ ತಿರುಗಾಡುತ್ತಿದ್ದನು.
01211008a ತಥೈವ ರಾಜಾ ವೃಷ್ಣೀನಾಮುಗ್ರಸೇನಃ ಪ್ರತಾಪವಾನ್।
01211008c ಉಪಗೀಯಮಾನೋ ಗಂಧರ್ವೈಃ ಸ್ತ್ರೀಸಹಸ್ರಸಹಾಯವಾನ್।।
ಅಲ್ಲಿ ವೃಷ್ಣಿಗಳ ರಾಜ ಪ್ರತಾಪವಾನ್ ಉಗ್ರಸೇನನೂ ತನ್ನ ಸಹಸ್ರ ಪತ್ನಿಯರೊಂದಿಗೆ ಗಂಧರ್ವರಿಂದ ರಂಜಿಸಿಕೊಳ್ಳುತ್ತಾ ಇದ್ದನು.
01211009a ರೌಕ್ಮಿಣೇಯಶ್ಚ ಸಾಂಬಶ್ಚ ಕ್ಷೀಬೌ ಸಮರದುರ್ಮದೌ।
01211009c ದಿವ್ಯಮಾಲ್ಯಾಂಬರಧರೌ ವಿಜಹ್ರಾತೇಽಮರಾವಿವ।।
ದಿವ್ಯಮಾಲಾಂಬರಗಳನ್ನು ಧರಿಸಿ ಕುಡಿದ ಅಮಲಿನಲ್ಲಿ ಸಮರದುರ್ಮದರಾಗಿದ್ದ ರೌಕ್ಮಿಣೇಯ-ಸಾಂಬರಿಬ್ಬರೂ ಅಮಲಿನಲ್ಲಿ ಅಮರರಂತೆ ವಿಹರಿಸುತ್ತಿದ್ದರು.
01211010a ಅಕ್ರೂರಃ ಸಾರಣಶ್ಚೈವ ಗದೋ ಭಾನುರ್ವಿಡೂರಥಃ।
01211010c ನಿಶಠಶ್ಚಾರುದೇಷ್ಣಶ್ಚ ಪೃಥುರ್ವಿಪೃಥುರೇವ ಚ।।
01211011a ಸತ್ಯಕಃ ಸಾತ್ಯಕಿಶ್ಚೈವ ಭಂಗಕಾರಸಹಾಚರೌ।
01211011c ಹಾರ್ದಿಕ್ಯಃ ಕೃತವರ್ಮಾ ಚ ಯೇ ಚಾನ್ಯೇ ನಾನುಕೀರ್ತಿತಾಃ।।
01211012a ಏತೇ ಪರಿವೃತಾಃ ಸ್ತ್ರೀಭಿರ್ಗಂಧರ್ವೈಶ್ಚ ಪೃಥಕ್ ಪೃಥಕ್।
01211012c ತಮುತ್ಸವಂ ರೈವತಕೇ ಶೋಭಯಾಂ ಚಕ್ರಿರೇ ತದಾ।।
ಅಕ್ರೂರ, ಸಾರಣ, ಗದ, ಭಾನು, ವಿಡೂರಥ, ನಿಶಠ, ಚಾರುದೇಷ್ಣ, ಪೃಥು, ವಿಪೃಥು, ಸತ್ಯಕ, ಸಾತ್ಯಕಿ, ಭಂಗಕಾರ, ಸಹಾಚರ, ಹಾರ್ದಿಕ್ಯ ಕೃತವರ್ಮ ಮತ್ತು ಇನ್ನೂ ಇತರರು ಯಾರ ಹೆಸರನ್ನು ಹೇಳಲಿಲ್ಲ ಎಲ್ಲರೂ ತಮ್ಮ ತಮ್ಮ ಸ್ತ್ರೀಯರು ಮತ್ತು ಗಾಯಕರಿಂದ ಸುತ್ತುವರೆಯಲ್ಪಟ್ಟು ರೈತಕದಲ್ಲಿ ನಡೆಯುತ್ತಿದ್ದ ಆ ಉತ್ಸವದ ಶೋಭೆಯನ್ನು ಹೆಚ್ಚಿಸಿದರು.
01211013a ತದಾ ಕೋಲಾಹಲೇ ತಸ್ಮಿನ್ವರ್ತಮಾನೇ ಮಹಾಶುಭೇ।
01211013c ವಾಸುದೇವಶ್ಚ ಪಾರ್ಥಶ್ಚ ಸಹಿತೌ ಪರಿಜಗ್ಮತುಃ।।
01211014a ತತ್ರ ಚಂಕ್ರಮ್ಯಮಾಣೌ ತೌ ವಾಸುದೇವಸುತಾಂ ಶುಭಾಂ।
01211014c ಅಲಂಕೃತಾಂ ಸಖೀಮಧ್ಯೇ ಭದ್ರಾಂ ದದೃಶತುಸ್ತದಾ।।
ಆ ಮಹಾಶುಭ ಕೋಲಾಹಲವು ನಡೆಯುತ್ತಿರಲು ವಾಸುದೇವ ಮತ್ತು ಪಾರ್ಥರು ಒಟ್ಟಿಗೇ ನಡೆಯುತ್ತಿದ್ದರು ಮತ್ತು ಅಲ್ಲಿ ನಡೆಯುತ್ತಿರುವಾಗ ಅಲಂಕೃತಳಾಗಿ ಸಖಿಗಳ ಮಧ್ಯದಲ್ಲಿದ್ದ ವಸುದೇವನ ಸುಂದರ ಮಗಳು ಭದ್ರೆಯನ್ನು ನೋಡಿದರು.
01211015a ದೃಷ್ಟ್ವೈವ ತಾಮರ್ಜುನಸ್ಯ ಕಂದರ್ಪಃ ಸಮಜಾಯತ।
01211015c ತಂ ತಥೈಕಾಗ್ರಮನಸಂ ಕೃಷ್ಣಃ ಪಾರ್ಥಮಲಕ್ಷಯತ್।।
ಅವಳನ್ನು ನೋಡಿದೊಡನೆಯೇ ಅರ್ಜುನನು ಅವಳಲ್ಲಿ ಅನುರಕ್ತನಾದನು. ಪಾರ್ಥನು ಅವಳಲ್ಲಿಯೇ ಏಕಾಗ್ರಮನಸ್ಕನಾಗಿದ್ದುದನ್ನು ಕೃಷ್ಣನು ಗಮನಿಸಿದನು.
01211016a ಅಥಾಬ್ರವೀತ್ಪುಷ್ಕರಾಕ್ಷಃ ಪ್ರಹಸನ್ನಿವ ಭಾರತ।
01211016c ವನೇಚರಸ್ಯ ಕಿಮಿದಂ ಕಾಮೇನಾಲೋಡ್ಯತೇ ಮನಃ।।
ಭಾರತ! ಆಗ ಪುಷ್ಕರಾಕ್ಷನು ನಗುತ್ತಾ ಹೇಳಿದನು: “ವನಚರನ ಮನಸ್ಸು ಕಾಮದಿಂದ ಏರು ಪೇರಾಗುತ್ತಿದೆಯೇ?
01211017a ಮಮೈಷಾ ಭಗಿನೀ ಪಾರ್ಥ ಸಾರಣಸ್ಯ ಸಹೋದರಾ।
01211017c ಸುಭದ್ರಾ ನಾಮ ಭಂದ್ರಂ ತೇ ಪಿತುರ್ಮೇ ದಯಿತಾ ಸುತಾ।
01211017e ಯದಿ ತೇ ವರ್ತತೇ ಬುದ್ಧಿರ್ವಕ್ಷ್ಯಾಮಿ ಪಿತರಂ ಸ್ವಯಮ್।।
ಪಾರ್ಥ! ನಿನಗೆ ಮಂಗಳವಾಗಲಿ! ಅವಳು ಸಾರಣನ ಸಹೋದರಿ ಮತ್ತು ನನ್ನ ತಂಗಿ. ಸುಭದ್ರಾ ಎಂಬ ಹೆಸರಿನವಳು. ನನ್ನ ತಂದೆಯ ಹಿರಿಯ ಮಗಳು. ನಿನ್ನ ಮನಸ್ಸು ಅವಳಲ್ಲಿದೆ ಎಂದಾದರೆ ಸ್ವಯಂ ನಾನೇ ತಂದೆಯಲ್ಲಿ ಮಾತನಾಡುತ್ತೇನೆ.”
01211018 ಅರ್ಜುನ ಉವಾಚ।
01211018a ದುಹಿತಾ ವಸುದೇವಸ್ಯ ವಾಸುದೇವಸ್ಯ ಚ ಸ್ವಸಾ।
01211018c ರೂಪೇಣ ಚೈವ ಸಂಪನ್ನಾ ಕಮಿವೈಷಾ ನ ಮೋಹಯೇತ್।।
ಅರ್ಜುನನು ಹೇಳಿದನು: “ರೂಪಸಂಪನ್ನಳಾದ ಈ ವಸುದೇವನ ಮಗಳು ಮತ್ತು ವಾಸುದೇವನ ತಂಗಿಯನ್ನು ಯಾರು ತಾನೇ ಮೋಹಿಸುವುದಿಲ್ಲ?
01211019a ಕೃತಮೇವ ತು ಕಲ್ಯಾಣಂ ಸರ್ವಂ ಮಮ ಭವೇದ್ಧ್ರುವಂ।
01211019c ಯದಿ ಸ್ಯಾನ್ಮಮ ವಾರ್ಷ್ಣೇಯೀ ಮಹಿಷೀಯಂ ಸ್ವಸಾ ತವ।।
ನಿನ್ನ ತಂಗಿ ವಾರ್ಷ್ಣೇಯಿಯು ನನ್ನ ಮಹಿಷಿಯಾಗುತ್ತಾಳೆಂದರೆ ನಾನು ಎಲ್ಲ ಒಳ್ಳೆಯ ಕೆಲಸಗಳನ್ನೂ ಮಾಡಿರಬೇಕು.
01211020a ಪ್ರಾಪ್ತೌ ತು ಕ ಉಪಾಯಃ ಸ್ಯಾತ್ತದ್ಬ್ರವೀಹಿ ಜನಾರ್ದನ।
01211020c ಆಸ್ಥಾಸ್ಯಾಮಿ ತಥಾ ಸರ್ವಂ ಯದಿ ಶಕ್ಯಂ ನರೇಣ ತತ್।।
ಜನಾರ್ದನ! ಅವಳನ್ನು ಪಡೆಯುವ ಉಪಾಯವೇನು ಹೇಳು. ಮನುಷ್ಯನಿಂದ ಸಾಧ್ಯವಾಗುವ ಎಲ್ಲವನ್ನೂ ಮಾಡುತ್ತೇನೆ.”
01211021 ವಾಸುದೇವ ಉವಾಚ।
01211021a ಸ್ವಯಂವರಃ ಕ್ಷತ್ರಿಯಾಣಾಂ ವಿವಾಹಃ ಪುರುಷರ್ಷಭ।
01211021c ಸ ಚ ಸಂಶಯಿತಃ ಪಾರ್ಥ ಸ್ವಭಾವಸ್ಯಾನಿಮಿತ್ತತಃ।।
ವಾಸುದೇವನು ಹೇಳಿದನು: “ಪುರುಷರ್ಷಭ! ಪಾರ್ಥ! ಸ್ವಯಂವರವೇ ಕ್ಷತ್ರಿಯರ ವಿವಾಹ. ಆದರೆ ಅದು ಸಂಶಯಯುಕ್ತವಾದುದು ಏಕೆಂದರೆ ಅದರ ಫಲಿತಾಂಶವು ಭಾವನೆಗಳ ಮೇಲೆ ಅವಲಂಬಿಸಿಲ್ಲ.
01211022a ಪ್ರಸಹ್ಯ ಹರಣಂ ಚಾಪಿ ಕ್ಷತ್ರಿಯಾಣಾಂ ಪ್ರಶಸ್ಯತೇ।
01211022c ವಿವಾಹಹೇತೋಃ ಶೂರಾಣಾಮಿತಿ ಧರ್ಮವಿದೋ ವಿದುಃ।।
ಬಲವಂತಾಗಿ ಕದ್ದುಕೊಂಡು ಹೋಗುವುದೂ ಶೂರ ಕ್ಷತ್ರಿಯರ ವಿವಾಹವಾಗಬಹುದು ಎಂದು ಧರ್ಮವಿದರು ಹೇಳುತ್ತಾರೆ.
01211023a ಸ ತ್ವಮರ್ಜುನ ಕಲ್ಯಾಣೀಂ ಪ್ರಸಹ್ಯ ಭಗಿನೀಂ ಮಮ।
01211023c ಹರ ಸ್ವಯಂವರೇ ಹ್ಯಸ್ಯಾಃ ಕೋ ವೈ ವೇದ ಚಿಕೀರ್ಷಿತಂ।।
ಅರ್ಜುನ! ನನ್ನ ತಂಗಿ ಕಲ್ಯಾಣಿಯನ್ನು ಕದ್ದುಕೊಂಡು ಹೋಗು. ಸ್ವಯಂವರದಲ್ಲಿ ಅವಳ ಬಯಕೆಗಳು ಏನೋ ತಿಳಿದಿಲ್ಲ.””
01211024 ವೈಶಂಪಾಯನ ಉವಾಚ।
01211024a ತತೋಽರ್ಜುನಶ್ಚ ಕೃಷ್ಣಶ್ಚ ವಿನಿಶ್ಚಿತ್ಯೇತಿಕೃತ್ಯತಾಂ।
01211024c ಶೀಘ್ರಗಾನ್ಪುರುಷಾನ್ರಾಜನ್ಪ್ರೇಷಯಾಮಾಸತುಸ್ತದಾ।।
01211025a ಧರ್ಮರಾಜಾಯ ತತ್ಸರ್ವಮಿಂದ್ರಪ್ರಸ್ಥಗತಾಯ ವೈ।
01211025c ಶ್ರುತ್ವೈವ ಚ ಮಹಾಬಾಹುರನುಜಜ್ಞೇ ಸ ಪಾಂಡವಃ।।
ವೈಶಂಪಾಯನನು ಹೇಳಿದನು: “ರಾಜನ್! ಅರ್ಜುನ-ಕೃಷ್ಣರು ಆ ನಿಶ್ಚಯವನ್ನು ಮಾಡಿ ಶೀಘ್ರಗ ಜನರನ್ನು ಇಂದ್ರಪ್ರಸ್ಥದಲ್ಲಿದ್ದ ಧರ್ಮರಾಜನಲ್ಲಿಗೆ ಕಳುಹಿಸಿದರು. ವಿಷಯವನ್ನು ಕೇಳಿದೊಡನೆಯೇ ಮಹಾಬಾಹು ಪಾಂಡವನು ತನ್ನ ಒಪ್ಪಿಗೆಯನ್ನು ನೀಡಿದನು.
01211025a ಭೀಮಸೇನಸ್ತು ತಚ್ಛೃತ್ತ್ವಾ ಕೃತಕೃತ್ಯೋಽಭ್ಯಮನ್ಯತ।
01211025c ಇತ್ಯೇವಂ ಮನುಜೈಃ ಸಾರ್ಧಮುಕ್ತ್ವಾ ಪ್ರೀತಿಮುಪೇಯಿವಾನ್।।
ಭೀಮಸೇನನು ಇದನ್ನು ಕೇಳಿ ಕೃತಕೃತ್ಯನಾದಂತೆ ಭಾವಿಸಿದನು. ಇತರರೊಡನೆ ಈ ವಿಷಯವನ್ನು ಹೇಳಿಕೊಂಡು ಸಂತಸ ಪಟ್ಟನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸುಭದ್ರಾಹರಣಪರ್ವಣಿ ಯುಧಿಷ್ಠಿರಾನುಜ್ಞಾಯಾಂ ಏಕಾದಶಾಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದ ಆದಿಪರ್ವದಲ್ಲಿ ಸುಭದ್ರಾಹರಣಪರ್ವದಲ್ಲಿ ಯುಧಿಷ್ಠಿರನ ಅನುಜ್ಞೆ ಎನ್ನುವ ಇನ್ನೂರಾ ಹನ್ನೊಂದನೆಯ ಅಧ್ಯಾಯವು.
-
ಶ್ರೀಮದ್ಭಾಗವತದ ದಶಮ ಸ್ಕಂದದ ೮೬ನೆಯ ಅಧ್ಯಾಯದಲ್ಲಿ ಬರುವ ಸುಭದ್ರಾ ವಿವಾಹ ಪ್ರಸಂಗವು ಮಹಾಭಾರತದ ಈ ಪರ್ವದಲ್ಲಿ ಇರುವುದಕ್ಕಿಂತ ಸ್ವಲ್ಪ ಬೇರೆಯದಾಗಿದೆ. ↩︎