210 ಅರ್ಜುನದ್ವಾರಕಾಗಮನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಅರ್ಜುನವನವಾಸ ಪರ್ವ

ಅಧ್ಯಾಯ 210

ಸಾರ

ಪ್ರಭಾಸದಲ್ಲಿ ಕೃಷ್ಣನನ್ನು ಭೇಟಿಯಾದುದು (1-4). ಒಟ್ಟಿಗೇ ವನವಿಹಾರ, ಭೋಜನ, ಮನೋರಂಜನೆಗಳನ್ನು ಗೈದು, ಅರ್ಜುನನ್ನು ದ್ವಾರಕೆಗೆ ಕರೆದುಕೊಂಡು ಹೋದುದು, ಕೃಷ್ಣನ ಭವನದಲ್ಲಿ ಅರ್ಜುನನ ವಾಸ (5-21).

01210001 ವೈಶಂಪಾಯನ ಉವಾಚ।
01210001a ಸೋಽಪರಾಂತೇಷು ತೀರ್ಥಾನಿ ಪುಣ್ಯಾನ್ಯಾಯತನಾನಿ ಚ।
01210001c ಸರ್ವಾಣ್ಯೇವಾನುಪೂರ್ವ್ಯೇಣ ಜಗಾಮಾಮಿತವಿಕ್ರಮಃ।।

ವೈಶಂಪಾಯನನು ಹೇಳಿದನು: “ನಂತರ ಆ ಅಮಿತ ವಿಕ್ರಮನು ಪಶ್ಚಿಮದಿಕ್ಕಿನಲ್ಲಿದ್ದ ಎಲ್ಲ ಪುಣ್ಯ ತೀರ್ಥ ಪ್ರದೇಶಗಳಿಗೆ ಭೇಟಿಯಿತ್ತನು.

01210002a ಸಮುದ್ರೇ ಪಶ್ಚಿಮೇ ಯಾನಿ ತೀರ್ಥಾನ್ಯಾಯತನಾನಿ ಚ।
01210002c ತಾನಿ ಸರ್ವಾಣಿ ಗತ್ವಾ ಸ ಪ್ರಭಾಸಮುಪಜಗ್ಮಿವಾನ್।।

ಪಶ್ಚಿಮ ಸಮುದ್ರದಲ್ಲಿ ಯಾವ್ಯಾವ ತೀರ್ಥ ಸ್ಥಾನಗಳಿವೆಯೋ ಅವೆಲ್ಲವಕ್ಕೂ ಹೋಗಿ ಅವನು ಪ್ರಭಾಸಕ್ಕೆ ಬಂದನು.

01210003a ಪ್ರಭಾಸದೇಶಂ ಸಂಪ್ರಾಪ್ತಂ ಬೀಭತ್ಸುಮಪರಾಜಿತಂ।
01210003c ತೀರ್ಥಾನ್ಯನುಚರಂತಂ ಚ ಶುಶ್ರಾವ ಮಧುಸೂದನಃ।।

ಮಧುಸೂದನನು ಅಪರಾಜಿತ ಬೀಭತ್ಸುವು ತೀರ್ಥಯಾತ್ರೆ ಮಾಡುತ್ತಾ ಪ್ರಭಾಸದೇಶವನ್ನು ತಲುಪಿದ್ದಾನೆ ಎನ್ನುವುದನ್ನು ಕೇಳಿದನು.

01210004a ತತೋಽಭ್ಯಗಚ್ಛತ್ಕೌಂತೇಯಮಜ್ಞಾತೋ ನಾಮ ಮಾಧವಃ।
01210004c ದದೃಶಾತೇ ತದಾನ್ಯೋನ್ಯಂ ಪ್ರಭಾಸೇ ಕೃಷ್ಣಪಾಂಡವೌ।।

ಕೌಂತೇಯನಿಗೆ ತಿಳಿಯದಂತೆಯೇ ಮಾಧವನು ಅಲ್ಲಿಗೆ ಹೋದನು ಮತ್ತು ಪುನಃ ಪ್ರಭಾಸದಲ್ಲಿ ಕೃಷ್ಣ ಪಾಂಡವರ ಅನ್ಯೋನ್ಯ ದರ್ಶನವಾಯಿತು.

01210005a ತಾವನ್ಯೋನ್ಯಂ ಸಮಾಶ್ಲಿಷ್ಯ ಪೃಷ್ಟ್ವಾ ಚ ಕುಶಲಂ ವನೇ।
01210005c ಆಸ್ತಾಂ ಪ್ರಿಯಸಖಾಯೌ ತೌ ನರನಾರಾಯಣಾವೃಷೀ।।

ಅವರು ಅನ್ಯೋನ್ಯರನ್ನು ಆಲಂಗಿಸಿದರು ಮತ್ತು ಕುಶಲವನ್ನು ವಿಚಾರಿಸಿದರು. ನರ-ನಾರಾಯಣ ಋಷಿಗಳಾಗಿದ್ದ ಆ ಪ್ರಿಯ ಸಖರು ವನದಲ್ಲಿ ಕುಳಿತುಕೊಂಡರು.

01210006a ತತೋಽರ್ಜುನಂ ವಾಸುದೇವಸ್ತಾಂ ಚರ್ಯಾಂ ಪರ್ಯಪೃಚ್ಛತ।
01210006c ಕಿಮರ್ಥಂ ಪಾಂಡವೇಮಾನಿ ತೀರ್ಥಾನ್ಯನುಚರಸ್ಯುತ।।

ನಂತರ ವಾಸುದೇವನು ಅರ್ಜುನನ ಕುರಿತು ಕೇಳಿದನು: “ಪಾಂಡವ! ನೀನು ಯಾವ ಕಾರಣಕ್ಕಾಗಿ ತೀರ್ಥಯಾತ್ರೆ ಮಾಡುತ್ತಿದ್ದೀಯೆ?”

01210007a ತತೋಽರ್ಜುನೋ ಯಥಾವೃತ್ತಂ ಸರ್ವಮಾಖ್ಯಾತವಾಂಸ್ತದಾ।
01210007c ಶ್ರುತ್ವೋವಾಚ ಚ ವಾರ್ಷ್ಣೇಯ ಏವಮೇತದಿತಿ ಪ್ರಭುಃ।।

ಆಗ ಅರ್ಜುನನು ನಡೆದುದೆಲ್ಲವನ್ನೂ ಯಥಾವತ್ತಾಗಿ ಹೇಳಿದನು. ಅದನ್ನು ಕೇಳಿ ಪ್ರಭು ವಾರ್ಷ್ಣೇಯನು ಅದು ಸರಿಯೆಂದು ಹೇಳಿದನು.

01210008a ತೌ ವಿಹೃತ್ಯ ಯಥಾಕಾಮಂ ಪ್ರಭಾಸೇ ಕೃಷ್ಣಪಾಂಡವೌ।
01210008c ಮಹೀಧರಂ ರೈವತಕಂ ವಾಸಾಯೈವಾಭಿಜಗ್ಮತುಃ।।

ಪ್ರಭಾಸದಲ್ಲಿ ಕೃಷ್ಣ-ಪಾಂಡವರು ಮನಬಂದಂತೆ ವಿಹರಿಸಿದರು. ಅವರು ಉಳಿಯಲು ರೈವತ ಪರ್ವತಕ್ಕೆ ಹೋದರು.

01210009a ಪೂರ್ವಮೇವ ತು ಕೃಷ್ಣಸ್ಯ ವಚನಾತ್ತಂ ಮಹೀಧರಂ।
01210009c ಪುರುಷಾಃ ಸಮಲಂಚಕ್ರುರುಪಜಹ್ರುಶ್ಚ ಭೋಜನಂ।।

ಕೃಷ್ಣನ ವಚನದಂತೆ ಮೊದಲೇ ಆ ಪರ್ವತವನ್ನು ಜನರು ಸಮಲಂಕರಿಸಿ ಭೋಜನವನ್ನು ಏರ್ಪಡಿಸಿದ್ದರು.

01210010a ಪ್ರತಿಗೃಹ್ಯಾಯಾರ್ಜುನಃ ಸರ್ವಮುಪಭುಜ್ಯ ಚ ಪಾಂಡವಃ।
01210010c ಸಹೈವ ವಾಸುದೇವೇನ ದೃಷ್ಟವಾನ್ನಟನರ್ತಕಾನ್।।

ಪಾಂಡವನು ಅವೆಲ್ಲವನ್ನೂ ಸ್ವೀಕರಿಸಿ ಆನಂದಿಸಿದನು. ಮತ್ತು ವಾಸುದೇವನ ಸಹಿತ ನಟನರ್ತಕರನ್ನೂ ನೋಡಿದನು.

01210011a ಅಭ್ಯನುಜ್ಞಾಪ್ಯ ತಾನ್ಸರ್ವಾನರ್ಚಯಿತ್ವಾ ಚ ಪಾಂಡವಃ।
01210011c ಸತ್ಕೃತಂ ಶಯನಂ ದಿವ್ಯಮಭ್ಯಗಚ್ಛನ್ಮಹಾದ್ಯುತಿಃ।।

ಅವರೆಲ್ಲರನ್ನೂ ಪ್ರಶಂಸಿಸಿ ಬೀಳ್ಕೊಟ್ಟು ಮಹಾದ್ಯುತಿ ಪಾಂಡವನು ಸಿಂಗರಿಸಿದ ದಿವ್ಯ ಶಯನವನ್ನು ಸೇರಿದನು.

01210012a ತೀರ್ಥಾನಾಂ ದರ್ಶನಂ ಚೈವ ಪರ್ವತಾನಾಂ ಚ ಭಾರತ।
01210012c ಆಪಗಾನಾಂ ವನಾನಾಂ ಚ ಕಥಯಾಮಾಸ ಸಾತ್ವತೇ।।

ಭಾರತ! ಅವನು ಸಾತ್ವತನಿಗೆ ತಾನು ಕಂಡ ತೀರ್ಥಗಳ, ಪರ್ವತಗಳ, ನದಿಗಳ ಮತ್ತು ವನಗಳ ಕುರಿತು ಹೇಳಿದನು.

01210013a ಸ ಕಥಾಃ ಕಥಯನ್ನೇವ ನಿದ್ರಯಾ ಜನಮೇಜಯ।
01210013c ಕೌಂತೇಯೋಽಪಹೃತಸ್ತಸ್ಮಿಂಶಯನೇ ಸ್ವರ್ಗಸಮ್ಮಿತೇ।।
01210014a ಮಧುರೇಣ ಸ ಗೀತೇನ ವೀಣಾಶಬ್ದೇನ ಚಾನಘ।
01210014c ಪ್ರಬೋಧ್ಯಮಾನೋ ಬುಬುಧೇ ಸ್ತುತಿಭಿರ್ಮಂಗಲೈಸ್ತಥಾ।।

ಜನಮೇಜಯ! ಈ ಕಥೆಗಳನ್ನೆಲ್ಲಾ ಹೇಳುತ್ತಿರುವಾಗಲೇ ನಿದ್ರೆಯು ಕೌಂತೇಯನನ್ನು ಸ್ವರ್ಗಸಮ್ಮಿತ ಲೋಕಕ್ಕೆ ಕರೆದುಕೊಂಡು ಹೋಯಿತು. ಬೆಳಗಾಗುತ್ತಲೇ ಆ ಅನಘನು ಮಧುರ ಗೀತ, ವೀಣೆಯ ನಾದ, ಮತ್ತು ಮಂಗಲ ಸ್ತುತಿಗಳಿಗೆ ಎಚ್ಚೆತ್ತನು.

01210015a ಸ ಕೃತ್ವಾವಶ್ಯಕಾರ್ಯಾಣಿ ವಾರ್ಷ್ಣೇಯೇನಾಭಿನಂದಿತಃ।
01210015c ರಥೇನ ಕಾಂಚನಾಂಗೇನ ದ್ವಾರಕಾಮಭಿಜಗ್ಮಿವಾನ್।।

ಅವಶ್ಯಕಾರ್ಯಗಳನ್ನು ಮುಗಿಸಿ ವಾರ್ಷ್ಣೇಯನಿಂದ ಅಭಿನಂದಿತನಾಗಿ ಕಾಂಚನಾಂಗ ರಥದಲ್ಲಿ ದ್ವಾರಕೆಗೆ ಹೋದನು.

01210016a ಅಲಂಕೃತಾ ದ್ವಾರಕಾ ತು ಬಭೂವ ಜನಮೇಜಯ।
01210016c ಕುಂತೀಸುತಸ್ಯ ಪೂಜಾರ್ಥಮಪಿ ನಿಷ್ಕುಟಕೇಷ್ವಪಿ।।

ಜನಮೇಜಯ! ಕುಂತೀಸುತನ ಗೌರವಾರ್ಥವಾಗಿ ದ್ವಾರಕೆಯನ್ನು ಗುಡಿಸಿ ಸೇರಿ ಚೆನ್ನಾಗಿ ಅಲಂಕರಿಸಲಾಗಿತ್ತು.

01210017a ದಿದೃಕ್ಷವಶ್ಚ ಕೌಂತೇಯಂ ದ್ವಾರಕಾವಾಸಿನೋ ಜನಾಃ।
01210017c ನರೇಂದ್ರಮಾರ್ಗಮಾಜಗ್ಮುಸ್ತೂರ್ಣಂ ಶತಸಹಸ್ರಶಃ।।

ದ್ವಾರಕಾವಾಸಿ ಜನರು ಕೌಂತೇಯನನ್ನು ನೋಡಲೆಂದು ರಾಜ ಮಾರ್ಗದಲ್ಲಿ ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ಸೇರಿದರು.

01210018a ಅವಲೋಕೇಷು ನಾರೀಣಾಂ ಸಹಸ್ರಾಣಿ ಶತಾನಿ ಚ।
01210018c ಭೋಜವೃಷ್ಣ್ಯಂಧಕಾನಾಂ ಚ ಸಮವಾಯೋ ಮಹಾನಭೂತ್।।

ಅಲ್ಲಿ ಭೋಜ, ವೃಷ್ಣಿ, ಅಂಧಕರು ಮತ್ತು ಅವರ ಸ್ತ್ರೀಯರ ನೂರಾರು ಸಹಸ್ರಾರು ಸಂಖ್ಯೆಗಳ ಮಹಾ ಸಮಾವೇಶವಿತ್ತು.

01210019a ಸ ತಥಾ ಸತ್ಕೃತಃ ಸರ್ವೈರ್ಭೋಜವೃಷ್ಣ್ಯಂಧಕಾತ್ಮಜೈಃ।
01210019c ಅಭಿವಾದ್ಯಾಭಿವಾದ್ಯಾಂಶ್ಚ ಸರ್ವೈಶ್ಚ ಪ್ರತಿನಂದಿತಃ।।

ಭೋಜ, ವೃಷ್ಣಿ, ಅಂಧಕಾತ್ಮಜರಿಂದ ಸತ್ಕೃತನಾಗಿ, ಅಭಿವಾದಿಸುವವರನ್ನು ಅಭಿವಾದಿಸಿ ಸರ್ವರಿಗೂ ಸಂತಸವನ್ನು ತಂದನು.

01210020a ಕುಮಾರೈಃ ಸರ್ವಶೋ ವೀರಃ ಸತ್ಕಾರೇಣಾಭಿವಾದಿತಃ।
01210020c ಸಮಾನವಯಸಃ ಸರ್ವಾನಾಶ್ಲಿಷ್ಯ ಸ ಪುನಃ ಪುನಃ।।

ಕುಮಾರ ಸರ್ವರೂ ಆ ವೀರನನ್ನು ಸತ್ಕಾರದಿಂದ ಅಭಿವಾದಿಸಿದರು. ಸಮಾನ ವಯಸ್ಕರು ಎಲ್ಲರೂ ಪುನಃ ಪುನಃ ಆಲಂಗಿಸಿದರು.

01210021a ಕೃಷ್ಣಸ್ಯ ಭವನೇ ರಮ್ಯೇ ರತ್ನಭೋಜ್ಯಸಮಾವೃತೇ।
01210021c ಉವಾಸ ಸಹ ಕೃಷ್ಣೇನ ಬಹುಲಾಸ್ತತ್ರ ಶರ್ವರೀಃ।।

ಅವನು ರತ್ನ ಭೋಜ್ಯ ಸಮಾವೃತ ಕೃಷ್ಣನ ಭವನದಲ್ಲಿ ಕೃಷ್ಣನೊಡನೆ ಬಹಳಷ್ಟು ರಾತ್ರಿಗಳು ತಂಗಿದನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಆದಿಪರ್ವಣಿ ಅರ್ಜುನವನವಾಸಪರ್ವಣಿ ಅರ್ಜುನದ್ವಾರಕಾಗಮನೇ ದಶಾಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದ ಆದಿಪರ್ವದಲ್ಲಿ ಅರ್ಜುನವನವಾಸಪರ್ವದಲ್ಲಿ ಅರ್ಜುನದ್ವಾರಕಾಗಮನ ಎನ್ನುವ ಇನ್ನೂರಾಹತ್ತನೆಯ ಅಧ್ಯಾಯವು. ಇತಿ ಶ್ರೀಮಹಾಭಾರತೇ ಆದಿಪರ್ವಣಿ ಅರ್ಜುನವನವಾಸಪರ್ವಃ।।
ಇದು ಶ್ರೀಮಹಾಭಾರತದ ಆದಿಪರ್ವದಲ್ಲಿ ಅರ್ಜುನವನವಾಸಪರ್ವವು. ಇದೂವರೆಗಿನ ಒಟ್ಟು ಮಹಾಪರ್ವಗಳು-0/18, ಉಪಪರ್ವಗಳು-16/100, ಅಧ್ಯಾಯಗಳು-210/1995, ಶ್ಲೋಕಗಳು-6713/73784.