208 ತೀರ್ಥಗ್ರಾಹವಿಮೋಚನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಅರ್ಜುನವನವಾಸ ಪರ್ವ

ಅಧ್ಯಾಯ 208

ಸಾರ

ಮೊಸಳೆಗಳಿವೆಯೆಂದು ವರ್ಜಿತವಾದ ಸರೋವರಕ್ಕೆ ಅರ್ಜುನನು ಧುಮುಕುವುದು (1-8). ಆಕ್ರಮಣ ಮಾಡಿದ ಮೊಸಳೆಯನ್ನು ಮೆಟ್ಟಿ ಮೇಲೆ ತರಲು ದಿವ್ಯರೂಪೀ ನಾರಿಯ ರೂಪವನ್ನು ತಳೆದುದು; ತಮ್ಮ ಶಾಪಕ್ಕೆ ಕಾರಣವನ್ನು ಹೇಳಿದುದು (9-21).

01208001 ವೈಶಂಪಾಯನ ಉವಾಚ।
01208001a ತತಃ ಸಮುದ್ರೇ ತೀರ್ಥಾನಿ ದಕ್ಷಿಣೇ ಭರತರ್ಷಭಃ।
01208001c ಅಭ್ಯಗಚ್ಛತ್ಸುಪುಣ್ಯಾನಿ ಶೋಭಿತಾನಿ ತಪಸ್ವಿಭಿಃ।।

ವೈಶಂಪಾಯನನು ಹೇಳಿದನು: “ನಂತರ ಭರತರ್ಷಭನು ದಕ್ಷಿಣದಲ್ಲಿ ಸುಪುಣ್ಯ ತಪಸ್ವಿಗಳಿಂದ ಕೂಡಿದ ಸಮುದ್ರ ತೀರ್ಥಗಳಿಗೆ ಹೋದನು.

01208002a ವರ್ಜಯಂತಿ ಸ್ಮ ತೀರ್ಥಾನಿ ಪಂಚ ತತ್ರ ತು ತಾಪಸಾಃ।
01208002c ಆಚೀರ್ಣಾನಿ ತು ಯಾನ್ಯಾಸನ್ಪುರಸ್ತಾತ್ತು ತಪಸ್ವಿಭಿಃ।।

ಅಲ್ಲಿಯ ತಪಸ್ವಿಗಳು ಐದು ತೀರ್ಥಗಳನ್ನು - ಹಿಂದೆ ತಪಸ್ವಿಗಳು ಅವುಗಳನ್ನು ಪೂಜಿಸುತ್ತಿದ್ದರೂ - ತೊರೆದಿದ್ದರು.

01208003a ಅಗಸ್ತ್ಯತೀರ್ಥಂ ಸೌಭದ್ರಂ ಪೌಲೋಮಂ ಚ ಸುಪಾವನಂ।
01208003c ಕಾರಂಧಮಂ ಪ್ರಸನ್ನಂ ಚ ಹಯಮೇಧಫಲಂ ಚ ಯತ್।
01208003e ಭಾರದ್ವಾಜಸ್ಯ ತೀರ್ಥಂ ಚ ಪಾಪಪ್ರಶಮನಂ ಮಹತ್।।

ಅವುಗಳು ಅಗಸ್ತ್ಯ ತೀರ್ಥ, ಸೌಭದ್ರ, ಸುಪಾವನ ಪೌಲೋಮ, ಅಶ್ವಮೇಧ ಫಲವನ್ನು ನೀಡುವ ಪ್ರಸನ್ನ ಕಾರಂಧಮ, ಮತ್ತು ಮಹಾ ಪಾಪ ಪ್ರಮಶನ ಭರದ್ವಾಜ ತೀರ್ಥ.

01208004a ವಿವಿಕ್ತಾನ್ಯುಪಲಕ್ಷ್ಯಾಥ ತಾನಿ ತೀರ್ಥಾನಿ ಪಾಂಡವಃ।
01208004c ದೃಷ್ಟ್ವಾ ಚ ವರ್ಜ್ಯಮಾನಾನಿ ಮುನಿಭಿರ್ಧರ್ಮಬುದ್ಧಿಭಿಃ।।
01208005a ತಪಸ್ವಿನಸ್ತತೋಽಪೃಚ್ಛತ್ ಪ್ರಾಂಜಲಿಃ ಕುರುನಂದನಃ।
01208005c ತೀರ್ಥಾನೀಮಾನಿ ವರ್ಜ್ಯಂತೇ ಕಿಮರ್ಥಂ ಬ್ರಹ್ಮವಾದಿಭಿಃ।।

ತಪಸ್ವಿಗಳಿಂದ ತೊರೆಯಲ್ಪಟ್ಟು ನಿರ್ಜನವಾಗಿದ್ದ ಆ ತೀರ್ಥಗಳನ್ನು ನೋಡಿದ ಕುರುನಂದನ ಪಾಂಡವನು ಅಂಜಲೀ ಬದ್ಧನಾಗಿ ಅವರಲ್ಲಿ ಪ್ರಶ್ನಿಸಿದನು: “ಬ್ರಹ್ಮವಾದಿಗಳು ಈ ತೀರ್ಥಗಳನ್ನು ಏಕೆ ವರ್ಜಿಸಿದ್ದಾರೆ?”

01208006 ತಾಪಸಾ ಊಚುಃ।
01208006a ಗ್ರಾಹಾಃ ಪಂಚ ವಸಂತ್ಯೇಷು ಹರಂತಿ ಚ ತಪೋಧನಾನ್।
01208006c ಅತ ಏತಾನಿ ವರ್ಜ್ಯಂತೇ ತೀರ್ಥಾನಿ ಕುರುನಂದನ।।

ತಾಪಸಿಗಳು ಹೇಳಿದರು: “ಅಲ್ಲಿ ಐದು ಮೊಸಳೆಗಳು ವಾಸಿಸುತ್ತಿವೆ ಮತ್ತು ಅವು ತಪೋಧನರನ್ನು ಹಿಡಿಯುತ್ತವೆ. ಕುರುನಂದನ! ಆದುದರಿಂದ ಈ ತೀರ್ಥಗಳು ವರ್ಜಿತವಾಗಿವೆ.””

01208007 ವೈಶಂಪಾಯನ ಉವಾಚ।
01208007a ತೇಷಾಂ ಶ್ರುತ್ವಾ ಮಹಾಬಾಹುರ್ವಾರ್ಯಮಾಣಸ್ತಪೋಧನೈಃ।
01208007c ಜಗಾಮ ತಾನಿ ತೀರ್ಥಾನಿ ದ್ರಷ್ಟುಂ ಪುರುಷಸತ್ತಮಃ।।

ವೈಶಂಪಾಯನನು ಹೇಳಿದನು: “ಅವರಿಂದ ಇದನ್ನು ಕೇಳಿದ ಮಹಾಬಾಹು ಪುರುಷೋತ್ತಮನು ತಪೋಧನರು ತಡೆದರೂ ಆ ತೀರ್ಥಗಳನ್ನು ನೋಡಲು ಹೋದನು.

01208008a ತತಃ ಸೌಭದ್ರಮಾಸಾದ್ಯ ಮಹರ್ಷೇಸ್ತೀರ್ಥಮುತ್ತಮಂ।
01208008c ವಿಗಾಹ್ಯ ತರಸಾ ಶೂರಃ ಸ್ನಾನಂ ಚಕ್ರೇ ಪರಂತಪಃ।।

ಆ ಶೂರ ಪರಂತಪನು ಮಹರ್ಷಿ ಸುಭದ್ರನ ತೀರ್ಥಕ್ಕೆ ಬಂದು ಸ್ನಾನಕ್ಕೆಂದು ಅತಿವೇಗದಲ್ಲಿ ಅದರಲ್ಲಿ ಧುಮುಕಿದನು.

01208009a ಅಥ ತಂ ಪುರುಷವ್ಯಾಘ್ರಮಂತರ್ಜಲಚರೋ ಮಹಾನ್।
01208009c ನಿಜಗ್ರಾಹ ಜಲೇ ಗ್ರಾಹಃ ಕುಂತೀಪುತ್ರಂ ಧನಂಜಯಂ।।

ತಕ್ಷಣವೇ ನೀರಿನಲ್ಲಿ ವಾಸಿಸುತ್ತಿದ್ದ ಮಹಾ ಮೊಸಳೆಯೊಂದು ಕುಂತೀಪುತ್ರ ಧನಂಜಯನನ್ನು ಹಿಡಿದು ನೀರಿಗೆ ಎಳೆಯಿತು.

01208010a ಸ ತಮಾದಾಯ ಕೌಂತೇಯೋ ವಿಸ್ಫುರಂತಂ ಜಲೇಚರಂ।
01208010c ಉದತಿಷ್ಠನ್ಮಹಾಬಾಹುರ್ಬಲೇನ ಬಲಿನಾಂ ವರಃ।।

ಬಲಿಗಳಲ್ಲಿಯೇ ಶ್ರೇಷ್ಠ ಮಹಾಬಾಹು ಕೌಂತೇಯನು ತನ್ನ ಬಲದಿಂದ ಭುಸುಗುಟ್ಟುತ್ತಿದ್ದ ಆ ಜಲಚರವನ್ನು ಹಿಡಿದು, ಮೆಟ್ಟಿ ನೀರಿನಿಂದ ಮೇಲೆ ಬಂದನು.

01208011a ಉತ್ಕೃಷ್ಟ ಏವ ತು ಗ್ರಾಹಃ ಸೋಽರ್ಜುನೇನ ಯಶಸ್ವಿನಾ।
01208011c ಬಭೂವ ನಾರೀ ಕಲ್ಯಾಣೀ ಸರ್ವಾಭರಣಭೂಷಿತಾ।
01208011e ದೀಪ್ಯಮಾನಾ ಶ್ರಿಯಾ ರಾಜನ್ದಿವ್ಯರೂಪಾ ಮನೋರಮಾ।।

ರಾಜನ್! ಯಶಸ್ವಿ ಅರ್ಜುನನು ಎಳೆದು ಮೇಲೆ ತಂದಕೂಡಲೇ ಅದು ಸರ್ವಾಭರಣ ಭೂಷಿತ ಕಲ್ಯಾಣಿ, ಶ್ರೀಯಂತೆ ದೀಪ್ಯಮಾನ ದಿವ್ಯರೂಪಿ ಮನೋರಮೆ ನಾರಿಯ ರೂಪವನ್ನು ತಾಳಿತು.

01208012a ತದದ್ಭುತಂ ಮಹದ್ದೃಷ್ಟ್ವಾ ಕುಂತೀಪುತ್ರೋ ಧನಂಜಯಃ।
01208012c ತಾಂ ಸ್ತ್ರಿಯಂ ಪರಮಪ್ರೀತ ಇದಂ ವಚನಮಬ್ರವೀತ್।।

ಈ ಮಹಾ ಅದ್ಭುತವನ್ನು ನೋಡಿದ ಕುಂತೀಪುತ್ರ ಧನಂಜಯನು ಪರಮಪ್ರೀತನಾಗಿ ಆ ಸ್ತ್ರೀಗೆ ಹೇಳಿದನು:

01208013a ಕಾ ವೈ ತ್ವಮಸಿ ಕಲ್ಯಾಣಿ ಕುತೋ ವಾಸಿ ಜಲೇಚರೀ।
01208013c ಕಿಮರ್ಥಂ ಚ ಮಹತ್ಪಾಪಮಿದಂ ಕೃತವತೀ ಪುರಾ।।

“ಕಲ್ಯಾಣಿ! ನೀನು ಯಾರು? ಮತ್ತು ಹೇಗೆ ಮೊಸಳೆಯಾದೆ? ನೀನು ಯಾವ ಪುರಾತನ ಕಾರಣಕ್ಕಾಗಿ ಈ ಮಹಾ ಪಾಪವನ್ನು ಮಾಡುತ್ತಿರುವೆ?”

01208014 ನಾರ್ಯುವಾಚ।
01208014a ಅಪ್ಸರಾಸ್ಮಿ ಮಹಾಬಾಹೋ ದೇವಾರಣ್ಯವಿಚಾರಿಣೀ।
01208014c ಇಷ್ಟಾ ಧನಪತೇರ್ನಿತ್ಯಂ ವರ್ಗಾ ನಾಮ ಮಹಾಬಲ।।

ನಾರಿಯು ಹೇಳಿದಳು: “ಮಹಾಬಾಹು! ನಾನು ದೇವಾರಣ್ಯವಿಚಾರಿಣಿ ಅಪ್ಸರೆ. ನಿತ್ಯವೂ ಮಹಾಬಲ ಧನಪತಿಯ ಇಷ್ಟದವಳಾದ ನನ್ನ ಹೆಸರು ವರ್ಗಾ.

01208015a ಮಮ ಸಖ್ಯಶ್ಚತಸ್ರೋಽನ್ಯಾಃ ಸರ್ವಾಃ ಕಾಮಗಮಾಃ ಶುಭಾಃ।
01208015c ತಾಭಿಃ ಸಾರ್ಧಂ ಪ್ರಯಾತಾಸ್ಮಿ ಲೋಕಪಾಲನಿವೇಶನಂ।।
01208016a ತತಃ ಪಶ್ಯಾಮಹೇ ಸರ್ವಾ ಬ್ರಾಹ್ಮಣಂ ಸಂಶಿತವ್ರತಂ।
01208016c ರೂಪವಂತಮಧೀಯಾನಮೇಕಮೇಕಾಂತಚಾರಿಣಂ।।

ನನ್ನ ಅನ್ಯ ನಾಲ್ಕು ಸಖಿಯರಿದ್ದರು. ಎಲ್ಲರೂ ಕಾಮಗಾಮಿಗಳು ಮತ್ತು ಸುಂದರಿಯರು. ನಾವೆಲ್ಲ ಒಮ್ಮೆ ಲೋಕಪಾಲಕ ಕುಬೇರನ ನಿವೇಶನಕ್ಕೆ ಹೋಗುತ್ತಿದ್ದೆವು. ದಾರಿಯಲ್ಲಿ ನಾವೆಲ್ಲರೂ ಏಕಾಂತದಲ್ಲಿ ಒಬ್ಬನೇ ಅಭ್ಯಾಸಮಾಡುತ್ತಿದ್ದ ಸಂಶಿತವ್ರತ, ರೂಪವಂತ ಬ್ರಾಹ್ಮಣನನ್ನು ನೋಡಿದೆವು.

01208017a ತಸ್ಯ ವೈ ತಪಸಾ ರಾಜಂಸ್ತದ್ವನಂ ತೇಜಸಾವೃತಂ।
01208017c ಆದಿತ್ಯ ಇವ ತಂ ದೇಶಂ ಕೃತ್ಸ್ನಂ ಸ ವ್ಯವಭಾಸಯತ್।।

ರಾಜನ್! ಅವನ ತಪಸ್ಸಿನಿಂದ ಆ ಪ್ರದೇಶವು ತೇಜಸ್ಸಿನಿಂದ ಆವೃತವಾಗಿತ್ತು. ಆದಿತ್ಯನಂತೆ ಅವನು ಇಡೀ ಪ್ರದೇಶವನ್ನು ಬೆಳಗುತ್ತಿದ್ದನು.

01208018a ತಸ್ಯ ದೃಷ್ಟ್ವಾ ತಪಸ್ತಾದೃಗ್ರೂಪಂ ಚಾದ್ಭುತದರ್ಶನಂ।
01208018c ಅವತೀರ್ಣಾಃ ಸ್ಮ ತಂ ದೇಶಂ ತಪೋವಿಘ್ನಚಿಕೀರ್ಷಯಾ।।

ಅವನ ಉಗ್ರ ತಪಸ್ಸಿನ ಪ್ರಭಾವ ಮತ್ತು ಅದ್ಭುತವನ್ನು ನೋಡಿ ನಾವು ಅವನ ತಪಸ್ಸಿನಲ್ಲಿ ವಿಘ್ನವನ್ನುಂಟುಮಾಡಲು ಆ ಪ್ರದೇಶಕ್ಕೆ ಬಂದಿಳಿದೆವು.

01208019a ಅಹಂ ಚ ಸೌರಭೇಯೀ ಚ ಸಮೀಚೀ ಬುದ್ಬುದಾ ಲತಾ।
01208019c ಯೌಗಪದ್ಯೇನ ತಂ ವಿಪ್ರಮಭ್ಯಗಚ್ಛಾಮ ಭಾರತ।।

ಭಾರತ! ನಾನು, ಸೌರಭೇಯೀ, ಸಮೀಚೀ, ಬುದ್ಬುದಾ, ಲತಾ ಎಲ್ಲರೂ ಒಟ್ಟಿಗೇ ಆ ವಿಪ್ರನಲ್ಲಿಗೆ ಹೋದೆವು.

01208020a ಗಾಯಂತ್ಯೋ ವೈ ಹಸಂತ್ಯಶ್ಚ ಲೋಭಯಂತ್ಯಶ್ಚ ತಂ ದ್ವಿಜಂ।
01208020c ಸ ಚ ನಾಸ್ಮಾಸು ಕೃತವಾನ್ಮನೋ ವೀರ ಕಥಂ ಚನ।
01208020e ನಾಕಂಪತ ಮಹಾತೇಜಾಃ ಸ್ಥಿತಸ್ತಪಸಿ ನಿರ್ಮಲೇ।।

ನಾವು ಹಾಡಿದೆವು, ನಕ್ಕೆವು ಮತ್ತು ಆ ದ್ವಿಜನನ್ನು ಪ್ರಚೋದಿಸಿದೆವು. ವೀರ! ಆದರೆ ಅವನು ನಮಗೆ ಯಾವುದೇ ರೀತಿಯ ಗಮನವನ್ನೂ ಕೊಡಲಿಲ್ಲ. ತಪಸ್ಸಿನಲ್ಲಿ ನಿರತನಾಗಿದ್ದ ಆ ನಿರ್ಮಲನು ಅಲುಗಾಡಲೂ ಇಲ್ಲ.

01208021a ಸೋಽಶಪತ್ಕುಪಿತೋಽಸ್ಮಾಂಸ್ತು ಬ್ರಾಹ್ಮಣಃ ಕ್ಷತ್ರಿಯರ್ಷಭ।
01208021c ಗ್ರಾಹಭೂತಾ ಜಲೇ ಯೂಯಂ ಚರಿಷ್ಯಧ್ವಂ ಶತಂ ಸಮಾಃ।।

ಕ್ಷತ್ರಿಯರ್ಷಭ! ಆದರೆ ಕುಪಿತನಾದ ಅವನು ನಮಗೆ ಶಾಪವನ್ನಿತ್ತನು: “ನೀವೆಲ್ಲರೂ ನೂರು ವರ್ಷಗಳು ಮೊಸಳೆಗಳಾಗಿ ಜಲದಲ್ಲಿ ವಾಸಿಸುತ್ತೀರಿ!””

ಸಮಾಪ್ತಿ

ಇತಿ ಶ್ರೀಮಹಾಭಾರತೇ ಆದಿಪರ್ವಣಿ ಅರ್ಜುನವನವಾಸಪರ್ವಣಿ ತೀರ್ಥಗ್ರಾಹವಿಮೋಚನೇ ಅಷ್ಟಾಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದ ಆದಿಪರ್ವದಲ್ಲಿ ಅರ್ಜುನವನವಾಸಪರ್ವದಲ್ಲಿ ತೀರ್ಥಗ್ರಾಹವಿಮೋಚನ ಎನ್ನುವ ಇನ್ನೂರಾಎಂಟನೆಯ ಅಧ್ಯಾಯವು.