ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಅರ್ಜುನವನವಾಸ ಪರ್ವ
ಅಧ್ಯಾಯ 207
ಸಾರ
ಮಣಲೂರಿನಲ್ಲಿ ಚಿತ್ರಾಂಗದೆಯನ್ನು ಕಂಡು ಅರ್ಜುನನು ಕಾಮಮೋಹಿತನಾದುದು (1-16). ಅವಳಲ್ಲಿ ಹುಟ್ಟಿದವನು ಕುಲದ ವಾರಸನಾಗಬೇಕೆಂಬ ಮಣಲೂರೇಶ್ವರನ ನಿಬಂಧನೆಗೆ ಒಪ್ಪಿ ಅರ್ಜುನನು ಚಿತ್ರಾಂಗದೆಯೊಂದಿಗೆ ಮೂರು ವರ್ಷ ಇದ್ದುದು (17-23).
01207001 ವೈಶಂಪಾಯನ ಉವಾಚ।
01207001a ಕಥಯಿತ್ವಾ ತು ತತ್ಸರ್ವಂ ಬ್ರಾಹ್ಮಣೇಭ್ಯಃ ಸ ಭಾರತ।
01207001c ಪ್ರಯಯೌ ಹಿಮವತ್ಪಾರ್ಶ್ವಂ ತತೋ ವಜ್ರಧರಾತ್ಮಜಃ।।
ವೈಶಂಪಾಯನನು ಹೇಳಿದನು: “ಭಾರತ! ವಜ್ರಧರಾತ್ಮಜನು ಅವೆಲ್ಲವನ್ನೂ ಬ್ರಾಹ್ಮಣರಿಗೆ ವರದಿಮಾಡಿ, ಹಿಮವತ್ಪರ್ವತದ ಪಕ್ಕದಿಂದ ನಡೆದನು.
01207002a ಅಗಸ್ತ್ಯವಟಮಾಸಾದ್ಯ ವಸಿಷ್ಠಸ್ಯ ಚ ಪರ್ವತಂ।
01207002c ಭೃಗುತುಂಗೇ ಚ ಕೌಂತೇಯಃ ಕೃತವಾಂಶೌಚಮಾತ್ಮನಃ।।
ಕೌಂತೇಯನು ಅಗಸ್ತ್ಯವಟ, ವಸಿಷ್ಠ ಪರ್ವತ ಮತ್ತು ಭೃಗುತುಂಗಗಳಿಗೆ ಹೋಗಿ ಅಲ್ಲಿ ತನ್ನನ್ನು ಪರಿಶುದ್ಧಿಮಾಡಿಕೊಂಡನು.
01207003a ಪ್ರದದೌ ಗೋಸಹಸ್ರಾಣಿ ತೀರ್ಥೇಷ್ವಾಯತನೇಷು ಚ।
01207003c ನಿವೇಶಾಂಶ್ಚ ದ್ವಿಜಾತಿಭ್ಯಃ ಸೋಽದದತ್ಕುರುಸತ್ತಮಃ।।
ಕುರುಸತ್ತಮನು ತೀರ್ಥಸ್ಥಳಗಳಲ್ಲಿ ದ್ವಿಜರಿಗೆ ಸಹಸ್ರಾರು ಗೋವು-ನಿವೇಶನಗಳ ದಾನವಿತ್ತನು.
01207004a ಹಿರಣ್ಯಬಿಂದೋಸ್ತೀರ್ಥೇ ಚ ಸ್ನಾತ್ವಾ ಪುರುಷಸತ್ತಮಃ।
01207004c ದೃಷ್ಟವಾನ್ಪರ್ವತಶ್ರೇಷ್ಠಂ ಪುಣ್ಯಾನ್ಯಾಯತನಾನಿ ಚ।।
ಪುರುಷಸತ್ತಮನು ಹಿರಣ್ಯಬಿಂದು ತೀರ್ಥದಲ್ಲಿ ಸ್ನಾನಮಾಡಿ ಪರ್ವತಶ್ರೇಷ್ಠನನ್ನು ಮತ್ತು ಪುಣ್ಯ ಪ್ರದೇಶಗಳನ್ನು ನೋಡಿದನು.
01207005a ಅವತೀರ್ಯ ನರಶ್ರೇಷ್ಠೋ ಬ್ರಾಹ್ಮಣೈಃ ಸಹ ಭಾರತ।
01207005c ಪ್ರಾಚೀಂ ದಿಶಮಭಿಪ್ರೇಪ್ಸುರ್ಜಗಾಮ ಭರತರ್ಷಭಃ।।
ಭಾರತ! ಪೂರ್ವದಿಶೆಯಲ್ಲಿ ಹೋಗಲಿಚ್ಛಿಸಿದ ಆ ಭರತರ್ಷಭ ನರಶ್ರೇಷ್ಠನು ಬ್ರಾಹ್ಮಣರೊಡನೆ ಅಲ್ಲಿಂದ ಕೆಳಗಿಳಿದನು.
01207006a ಆನುಪೂರ್ವ್ಯೇಣ ತೀರ್ಥಾನಿ ದೃಷ್ಟವಾನ್ಕುರುಸತ್ತಮಃ।
01207006c ನದೀಂ ಚೋತ್ಪಲಿನೀಂ ರಮ್ಯಾಮರಣ್ಯಂ ನೈಮಿಷಂ ಪ್ರತಿ।।
01207007a ನಂದಾಮಪರನಂದಾಂ ಚ ಕೌಶಿಕೀಂ ಚ ಯಶಸ್ವಿನೀಂ।
01207007c ಮಹಾನದೀಂ ಗಯಾಂ ಚೈವ ಗಂಗಾಮಪಿ ಚ ಭಾರತ।।
ಭಾರತ! ಒಂದೊಂದಾಗಿ ಆ ಕುರುಸತ್ತಮನು ರಮ್ಯ ನೈಮಿಷಾರಣ್ಯದ ಬಳಿಯಲ್ಲಿದ್ದ ನದಿ ಉತ್ಪಲಿನೀ, ನಂದಾ, ಅಪರನಂದಾ, ಯಶಸ್ವಿನೀ ಕೌಶಿಕೀ, ಮಹಾನದೀ, ಗಯಾ ಮತ್ತು ಗಂಗಾ ಮೊದಲಾದ ತೀರ್ಥಗಳನ್ನು ಕಂಡನು.
01207008a ಏವಂ ಸರ್ವಾಣಿ ತೀರ್ಥಾನಿ ಪಶ್ಯಮಾನಸ್ತಥಾಶ್ರಮಾನ್।
01207008c ಆತ್ಮನಃ ಪಾವನಂ ಕುರ್ವನ್ಬ್ರಾಹ್ಮಣೇಭ್ಯೋ ದದೌ ವಸು।।
ಈ ರೀತಿ ಸರ್ವ ತೀರ್ಥಗಳನ್ನು ಮತ್ತು ಆಶ್ರಮಗಳನ್ನು ನೋಡಿ, ಬ್ರಾಹ್ಮಣರಿಗೆ ಸಂಪತ್ತುಗಳನ್ನಿತ್ತು ತನ್ನನ್ನು ಪಾವನಗೊಳಿಸಿಕೊಂಡನು.
01207009a ಅಂಗವಂಗಕಲಿಂಗೇಷು ಯಾನಿ ಪುಣ್ಯಾನಿ ಕಾನಿ ಚಿತ್।
01207009c ಜಗಾಮ ತಾನಿ ಸರ್ವಾಣಿ ತೀರ್ಥಾನ್ಯಾಯತನಾನಿ ಚ।
01207009e ದೃಷ್ಟ್ವಾ ಚ ವಿಧಿವತ್ತಾನಿ ಧನಂ ಚಾಪಿ ದದೌ ತತಃ।।
ಅಂಗ, ವಂಗ1, ಕಳಿಂಗ2ಗಳಲ್ಲಿ ಯಾವ ಯಾವ ಪುಣ್ಯ ತೀರ್ಥಸ್ಥಳಗಳಿವೆಯೋ ಅವೆಲ್ಲವುಗಳಿಗೂ ಹೋದನು. ಅವುಗಳನ್ನು ನೋಡಿ ಅಲ್ಲಿ ವಿಧಿವತ್ತಾಗಿ ಧನವನ್ನೂ ದಾನ ಮಾಡಿದನು.
01207010a ಕಲಿಂಗರಾಷ್ಟ್ರದ್ವಾರೇಷು ಬ್ರಾಹ್ಮಣಾಃ ಪಾಂಡವಾನುಗಾಃ।
01207010c ಅಭ್ಯನುಜ್ಞಾಯ ಕೌಂತೇಯಮುಪಾವರ್ತಂತ ಭಾರತ।।
ಭಾರತ! ಕಲಿಂಗರಾಷ್ಟ್ರ ದ್ವಾರದಲ್ಲಿ ಪಾಂಡವನನ್ನು ಅನುಸರಿಸಿ ಬಂದಿದ್ದ ಬ್ರಾಹ್ಮಣರು ಕೌಂತೇಯನ ಅನುಜ್ಞೆಯಂತೆ ಹಿಂದಿರುಗಿದರು.
01207011a ಸ ತು ತೈರಭ್ಯನುಜ್ಞಾತಃ ಕುಂತೀಪುತ್ರೋ ಧನಂಜಯಃ।
01207011c ಸಹಾಯೈರಲ್ಪಕೈಃ ಶೂರಃ ಪ್ರಯಯೌ ಯೇನ ಸಾಗರಂ।।
ಶೂರ ಕುಂತೀಪುತ್ರ ಧನಂಜಯನು ಅವರ ಅನುಜ್ಞೆಯನ್ನು ಪಡೆದು ಕೆಲವೇ ಸಹಾಯಕರೊಂದಿಗೆ ಸಾಗರದವರೆಗೂ ಪ್ರಯಾಣಿಸಿದನು.
01207012a ಸ ಕಲಿಂಗಾನತಿಕ್ರಮ್ಯ ದೇಶಾನಾಯತನಾನಿ ಚ।
01207012c ಧರ್ಮ್ಯಾಣಿ ರಮಣೀಯಾನಿ ಪ್ರೇಕ್ಷಮಾಣೋ ಯಯೌ ಪ್ರಭುಃ।।
01207013a ಮಹೇಂದ್ರಪರ್ವತಂ ದೃಷ್ಟ್ವಾ ತಾಪಸೈರುಪಶೋಭಿತಂ।
01207013c ಸಮುದ್ರತೀರೇಣ ಶನೈರ್ಮಣಲೂರಂ ಜಗಾಮ ಹ।।
ಕಲಿಂಗವನ್ನೂ ಅಲ್ಲಿಯ ಧರ್ಮ, ರಮಣೀಯ, ಪ್ರೇಕ್ಷಣೀಯ ದೇಶ ಪ್ರದೇಶಗಳನ್ನೂ ದಾಟಿ ಪ್ರಭುವು ತಾಪಸರಿಂದ ಉಪಶೋಭಿತ ಮಹೇಂದ್ರಪರ್ವತವನ್ನು ನೋಡಿ, ನಿಧಾನವಾಗಿ ಸಮುದ್ರತೀರದಲ್ಲಿದ್ದ ಮಣಲೂರಿಗೆ ಬಂದನು.
01207014a ತತ್ರ ಸರ್ವಾಣಿ ತೀರ್ಥಾನಿ ಪುಣ್ಯಾನ್ಯಾಯತನಾನಿ ಚ।
01207014c ಅಭಿಗಮ್ಯ ಮಹಾಬಾಹುರಭ್ಯಗಚ್ಛನ್ಮಹೀಪತಿಂ।
01207014e ಮಣಲೂರೇಶ್ವರಂ ರಾಜನ್ಧರ್ಮಜ್ಞಂ ಚಿತ್ರವಾಹನಂ।।
ಅಲ್ಲಿ ಸರ್ವ ಪುಣ್ಯ ತೀರ್ಥಕ್ಷೇತ್ರಗಳಿಗೂ ಭೇಟಿನೀಡಿ ಆ ಮಹಾಬಾಹುವು ಮಣಲೂರೇಶ್ವರ3 ಧರ್ಮಜ್ಞ ಮಹೀಪತಿ ಚಿತ್ರವಾಹನನಲ್ಲಿಗೆ ಹೋದನು.
01207015a ತಸ್ಯ ಚಿತ್ರಾಂಗದಾ ನಾಮ ದುಹಿತಾ ಚಾರುದರ್ಶನಾ।
01207015c ತಾಂ ದದರ್ಶ ಪುರೇ ತಸ್ಮಿನ್ವಿಚರಂತೀಂ ಯದೃಚ್ಛಯಾ।।
ಆ ಪುರದಲ್ಲಿ ವಿಹರಿಸುತ್ತಿದ್ದ ಅವನ ಮಗಳು ಚಾರುದರ್ಶನೆ ಚಿತ್ರಾಂಗದ ಎನ್ನುವ ಹೆಸರುಳ್ಳವಳನ್ನು ಕಂಡನು.
01207016a ದೃಷ್ಟ್ವಾ ಚ ತಾಂ ವರಾರೋಹಾಂ ಚಕಮೇ ಚೈತ್ರವಾಹಿನೀಂ।
01207016c ಅಭಿಗಮ್ಯ ಚ ರಾಜಾನಂ ಜ್ಞಾಪಯತ್ಸ್ವಂ ಪ್ರಯೋಜನಂ।
01207016e ತಮುವಾಚಾಥ ರಾಜಾ ಸ ಸಾಂತ್ವಪೂರ್ವಮಿದಂ ವಚಃ।।
ಅ ವರಾರೋಹೆ ಚೈತ್ರವಾಹಿನಿಯನ್ನು ನೋಡಿದ ಕೂಡಲೇ ಅವನು ಕಾಮಮೋಹಿತನಾದನು ಮತ್ತು ರಾಜನಲ್ಲಿಗೆ ಹೋಗಿ ತನ್ನ ಉದ್ದೇಶವನ್ನು ತಿಳಿಸಿದನು. ಆಗ ರಾಜನು ಅವನಿಗೆ ಈ ಸಾಂತ್ವಪೂರ್ವಕ ಮಾತುಗಳನ್ನಾಡಿದನು.
01207017a ರಾಜಾ ಪ್ರಭಂಕರೋ ನಾಮ ಕುಲೇ ಅಸ್ಮಿನ್ಬಭೂವ ಹ।
01207017c ಅಪುತ್ರಃ ಪ್ರಸವೇನಾರ್ಥೀ ತಪಸ್ತೇಪೇ ಸ ಉತ್ತಮಂ।।
“ಈ ಕುಲದಲ್ಲಿ ಪ್ರಭಂಕರ4 ಎಂಬ ಹೆಸರಿನ ರಾಜನಿದ್ದನು. ಅಪುತ್ರನಾದ ಅವನು ಸಂತಾನಕ್ಕಾಗಿ ಉತ್ತಮ ತಪವನ್ನಾಚರಿಸಿದನು.
01207018a ಉಗ್ರೇಣ ತಪಸಾ ತೇನ ಪ್ರಣಿಪಾತೇನ ಶಂಕರಃ।
01207018c ಈಶ್ವರಸ್ತೋಷಿತಸ್ತೇನ ಮಹಾದೇವ ಉಮಾಪತಿಃ।।
ಅವನ ಉಗ್ರ ತಪಸ್ಸಿನಿಂದ ಮತ್ತು ಪ್ರಣಿಪಾತ5ದಿಂದ ಶಂಕರ ಈಶ್ವರ ಮಹಾದೇವ ಉಮಾಪತಿಯು ಸಂತುಷ್ಟನಾದನು.
01207019a ಸ ತಸ್ಮೈ ಭಗವಾನ್ಪ್ರಾದಾದೇಕೈಕಂ ಪ್ರಸವಂ ಕುಲೇ।
01207019c ಏಕೈಕಃ ಪ್ರಸವಸ್ತಸ್ಮಾದ್ಭವತ್ಯಸ್ಮಿನ್ಕುಲೇ ಸದಾ।।
ಭಗವಾನನು ಅವನಿಗೆ ಕುಲದ ಒಂದೊಂದು ಪೀಳಿಗೆಯಲ್ಲಿ ಒಂದೊಂದೇ ಸಂತಾನವಾಗುತ್ತದೆ ಎಂದು ವರವನ್ನಿತ್ತನು. ಅಂದಿನಿಂದ ಈ ಕುಲದಲ್ಲಿ ಒಂದೇ ಸಂತಾನವು ಆಗುತ್ತಾ ಬಂದಿದೆ.
01207020a ತೇಷಾಂ ಕುಮಾರಾಃ ಸರ್ವೇಷಾಂ ಪೂರ್ವೇಷಾಂ ಮಮ ಜಜ್ಞಿರೇ।
01207020c ಕನ್ಯಾ ತು ಮಮ ಜಾತೇಯಂ ಕುಲಸ್ಯೋತ್ಪಾದನೀ ಧ್ರುವಂ।।
ನನ್ನ ಪೂರ್ವಜರೆಲ್ಲರಿಗೂ ಪುತ್ರರು ಹುಟ್ಟಿದ್ದರು. ಆದರೆ ನನ್ನ ಕುಲದಲ್ಲಿ ಕನ್ಯೆಯು ಹುಟ್ಟಿದ್ದಾಳೆ. ಅವಳೇ ಈ ಕುಲವನ್ನು ಮುಂದುವರಿಸಿಕೊಂಡು ಹೋಗುತ್ತಾಳೆ ಎನ್ನುವುದರಲ್ಲಿ ಸಂಶಯವಿಲ್ಲ.
01207021a ಪುತ್ರೋ ಮಮೇಯಮಿತಿ ಮೇ ಭಾವನಾ ಪುರುಷೋತ್ತಮ।
01207021c ಪುತ್ರಿಕಾ ಹೇತುವಿಧಿನಾ ಸಂಜ್ಞಿತಾ ಭರತರ್ಷಭ।।
ಭರತರ್ಷಭ! ಪುರುಷೋತ್ತಮ! ಅವಳು ನನ್ನ ಪುತ್ರನೆಂದೇ ಭಾವಿಸುತ್ತಿದ್ದೇನೆ. ವಿಧಿವತ್ತಾಗಿ ಅವಳು ಪುತ್ರಿಕೆಯಂತಿದ್ದಾಳೆ.
01207022a ಏತಚ್ಛುಲ್ಕಂ ಭವತ್ವಸ್ಯಾಃ ಕುಲಕೃಜ್ಜಾಯತಾಮಿಹ।
01207022c ಏತೇನ ಸಮಯೇನೇಮಾಂ ಪ್ರತಿಗೃಹ್ಣೀಷ್ವ ಪಾಂಡವ।।
ಪಾಂಡವ! ನಿನ್ನಿಂದ ಅವಳಲ್ಲಿ ಹುಟ್ಟುವವನು ಈ ಕುಲದ ವಾರಸನಾಗಲಿ. ಇದು ನನ್ನ ಶುಲ್ಕ. ಇದಕ್ಕೆ ಒಪ್ಪಿಗೆಯಿದ್ದರೆ ಅವಳನ್ನು ಸ್ವೀಕರಿಸು.”
01207023a ಸ ತಥೇತಿ ಪ್ರತಿಜ್ಞಾಯ ಕನ್ಯಾಂ ತಾಂ ಪ್ರತಿಗೃಹ್ಯ ಚ।
01207023c ಉವಾಸ ನಗರೇ ತಸ್ಮಿನ್ಕೌಂತೇಯಸ್ತ್ರಿಹಿಮಾಃ ಸಮಾಃ।।
ಹಾಗೆಯೇ ಆಗಲೆಂದು ಪ್ರತಿಜ್ಞೆಮಾಡಿ ಅವನು ಆ ಕನ್ಯೆಯನ್ನು ಸ್ವೀಕರಿಸಿದನು. ಕೌಂತೇಯನು ಆ ನಗರದಲ್ಲಿ ಮೂರು ವರ್ಷಗಳ ಪರ್ಯಂತ ವಾಸಿಸಿದನು6.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಆದಿಪರ್ವಣಿ ಅರ್ಜುನವನವಾಸಪರ್ವಣಿ ಚಿತ್ರಾಂಗದಸಂಗಮೇ ಸಪ್ತಾಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದ ಆದಿಪರ್ವದಲ್ಲಿ ಅರ್ಜುನವನವಾಸಪರ್ವದಲ್ಲಿ ಚಿತ್ರಾಂಗದಸಂಗಮ ಎನ್ನುವ ಇನ್ನೂರಾಏಳನೆಯ ಅಧ್ಯಾಯವು.
-
ಈಗಿನ ಬಂಗಾಳ ↩︎
-
ಈಗಿನ ಒದಿಶಾ ↩︎
-
ಕನ್ನಡ ಭಾರತ ದರ್ಶನ ಸಂಪುಟದಲ್ಲಿ ಆ ನಗರದ ಹೆಸರು “ಮಣೀಪೂರ” ಎಂದಿದೆ. ↩︎
-
ಕನ್ನಡ ಭಾರತದರ್ಶನದಲ್ಲಿ ಈ ರಾಜನ ಹೆಸರು “ಪ್ರಭಂಜನ” ಎಂದಿದೆ. ↩︎
-
‘ಪ್ರಣಿಪಾತ’ ಎಂದರೇನು? ↩︎
-
ಕನ್ನಡ ಭಾರತ ದರ್ಶನ ಸಂಪುಟದಲ್ಲಿ ಚಿತ್ರಾಂಗದೆಯು ಧನಂಜಯನಿಂದ ಅವನಿಗೆ ಅನುರೂಪ ಮಗನನ್ನು ಪಡೆದು ಚಿತ್ರವಾಹನನಿಗೆ ಅತೀವ ಸಂತೋಷವನ್ನು ತಂದಳು; ಮತ್ತು ಧನಂಜಯನು ಮಗನ ಶಿರಸ್ಸನ್ನು ಆಘ್ರಾಣಿಸಿ, ಚಿತ್ರವಾಹನನ ಅನುಮತಿಯನ್ನು ಪಡೆದು ಮುಂದೆ ಪ್ರಯಾಣ ಮಾಡಿದನು ಎಂದಿದೆ. ↩︎