200 ಯುಧಿಷ್ಠಿರನಾರದಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಅರ್ಜುನವನವಾಸ ಪರ್ವ

ಅಧ್ಯಾಯ 200

ಸಾರ

ಇಂದ್ರಪ್ರಸ್ಥಕ್ಕೆ ನಾರದನ ಆಗಮನ, ಸತ್ಕಾರ (1-15). “ಪಾಂಚಾಲಿಯಿಂದಾಗಿ ನಿಮ್ಮಲ್ಲಿ ಭೇದವುಂಟಾಗಬಾರದೆಂದು ನಿಯಮವನ್ನು ಮಾಡಿಕೊಳ್ಳಬೇಕು” ಎಂದು ಹೇಳಿ ನಾರದನು ಸುಂದೋಪಸುಂದರ ಚರಿತ್ರೆಯನ್ನು ಹೇಳಲು ಪ್ರಾರಂಭಿಸಿದುದು (16-23).

01200001 ಜನಮೇಜಯ ಉವಾಚ।
01200001a ಏವಂ ಸಂಪ್ರಾಪ್ಯ ರಾಜ್ಯಂ ತದಿಂದ್ರಪ್ರಸ್ಥೇ ತಪೋಧನ।
01200001c ಅತ ಊರ್ಧ್ವಂ ಮಹಾತ್ಮಾನಃ ಕಿಮಕುರ್ವಂತ ಪಾಂಡವಾಃ।।
01200002a ಸರ್ವ ಏವ ಮಹಾತ್ಮಾನಃ ಪೂರ್ವೇ ಮಮ ಪಿತಾಮಹಾಃ।
01200002c ದ್ರೌಪದೀ ಧರ್ಮಪತ್ನೀ ಚ ಕಥಂ ತಾನನ್ವವರ್ತತ।।

ಜನಮೇಜಯನು ಹೇಳಿದನು: “ತಪೋಧನ! ಈ ರೀತಿ ಇಂದ್ರಪ್ರಸ್ಥದಲ್ಲಿ ರಾಜ್ಯವನ್ನು ಪಡೆದ ನಂತರ ಮಹಾತ್ಮ ಪಾಂಡವರು ಏನು ಮಾಡಿದರು? ಆ ನನ್ನ ಪಿತಾಮಹ ಮಹಾತ್ಮರೆಲ್ಲರ ಧರ್ಮಪತ್ನಿ ದ್ರೌಪದಿಯು ಹೇಗೆ ನಡೆದುಕೊಳ್ಳುತ್ತಿದ್ದಳು?

01200003a ಕಥಂ ವಾ ಪಂಚ ಕೃಷ್ಣಾಯಾಮೇಕಸ್ಯಾಂ ತೇ ನರಾಧಿಪಾಃ।
01200003c ವರ್ತಮಾನಾ ಮಹಾಭಾಗಾ ನಾಭಿದ್ಯಂತ ಪರಸ್ಪರಂ।।

ಅಥವಾ ಆ ನರಾಧಿಪರು ಹೇಗೆ ಮಹಾಭಾಗೆ ಕೃಷ್ಣೆಯೊಬ್ಬಳಿಗೇ ನಡೆದುಕೊಳ್ಳುತ್ತಿದ್ದು ಪರಸ್ಪರರಲ್ಲಿ ಭೇದಭಾವವು ಉಂಟಾಗಲಿಲ್ಲವೇ?

01200004a ಶ್ರೋತುಮಿಚ್ಛಾಮ್ಯಹಂ ಸರ್ವಂ ವಿಸ್ತರೇಣ ತಪೋಧನ।
01200004c ತೇಷಾಂ ಚೇಷ್ಟಿತಮನ್ಯೋನ್ಯಂ ಯುಕ್ತಾನಾಂ ಕೃಷ್ಣಯಾ ತಯಾ।।

ತಪೋಧನ! ಕೃಷ್ಣೆಯೊಡನೆ ಒಟ್ಟಿಗೇ ಮದುವೆಯಾದ ಅವರು ಪರಸ್ಪರರಲ್ಲಿ ನಡೆದುಕೊಂಡಿದ್ದರ ಕುರಿತು ಸರ್ವವನ್ನೂ ವಿಸ್ತಾರವಾಗಿ ಕೇಳ ಬಯಸುತ್ತೇನೆ.”

01200005 ವೈಶಂಪಾಯನ ಉವಾಚ।
01200005a ಧೃತರಾಷ್ಟ್ರಾಭ್ಯನುಜ್ಞಾತಾಃ ಕೃಷ್ಣಯಾ ಸಹ ಪಾಂಡವಾಃ।
01200005c ರೇಮಿರೇ ಪುರುಷವ್ಯಾಘ್ರಾಃ ಪ್ರಾಪ್ತರಾಜ್ಯಾಃ ಪರಂತಪಾಃ।।

ವೈಶಂಪಾಯನನು ಹೇಳಿದನು: “ಧೃತರಾಷ್ಟ್ರನ ಅನುಜ್ಞೆಯಂತೆ ರಾಜ್ಯವನ್ನು ಹೊಂದಿದ ಆ ಪುರುಷವ್ಯಾಘ್ರ, ಪರಂತಪ ಪಾಂಡವರು ಕೃಷ್ಣೆಯೊಡನೆ ರಮಿಸಿದರು.

01200006a ಪ್ರಾಪ್ಯ ರಾಜ್ಯಂ ಮಹಾತೇಜಾಃ ಸತ್ಯಸಂಧೋ ಯುಧಿಷ್ಠಿರಃ।
01200006c ಪಾಲಯಾಮಾಸ ಧರ್ಮೇಣ ಪೃಥಿವೀಂ ಭ್ರಾತೃಭಿಃ ಸಹ।।

ರಾಜ್ಯವನ್ನು ಪಡೆದ ಮಹಾತೇಜಸ್ವಿ ಸತ್ಯಸಂಧ ಯುಧಿಷ್ಠಿರನು ಭ್ರಾತೃಗಳೊಡನೆ ಪೃಥ್ವಿಯನ್ನು ಧರ್ಮದಿಂದ ಪಾಲಿಸತೊಡಗಿದನು.

01200007a ಜಿತಾರಯೋ ಮಹಾಪ್ರಾಜ್ಞಾಃ ಸತ್ಯಧರ್ಮಪರಾಯಣಾಃ।
01200007c ಮುದಂ ಪರಮಿಕಾಂ ಪ್ರಾಪ್ತಾಸ್ತತ್ರೋಷುಃ ಪಾಂಡುನಂದನಾಃ।।

ಅರಿಗಳನ್ನು ಗೆದ್ದು ಮಹಾಪ್ರಾಜ್ಞ ಸತ್ಯಧರ್ಮಪರಾಯಣ ಪಾಂಡುನಂದನನು ಪರಮ ಸಂತಸವನ್ನು ಹೊಂದಿ ಬಾಳುತ್ತಿದ್ದನು.

01200008a ಕುರ್ವಾಣಾಃ ಪೌರಕಾರ್ಯಾಣಿ ಸರ್ವಾಣಿ ಪುರುಷರ್ಷಭಾಃ।
01200008c ಆಸಾಂ ಚಕ್ರುರ್ಮಹಾರ್ಹೇಷು ಪಾರ್ಥಿವೇಷ್ವಾಸನೇಷು ಚ।।

ಪುರುಷರ್ಷಭರು ಬೆಲೆಬಾಳುವ ರಾಜಾಸನಗಳಲ್ಲಿ4 ಕುಳಿತು ಸರ್ವ ಪೌರಕಾರ್ಯಗಳನ್ನೂ ಮಾಡುತ್ತಿದ್ದರು.

01200009a ಅಥ ತೇಷೂಪವಿಷ್ಟೇಷು ಸರ್ವೇಷ್ವೇವ ಮಹಾತ್ಮಸು।
01200009c ನಾರದಸ್ತ್ವಥ ದೇವರ್ಷಿರಾಜಗಾಮ ಯದೃಚ್ಛಯಾ।
01200009e ಆಸನಂ ರುಚಿರಂ ತಸ್ಮೈ ಪ್ರದದೌ ಸ್ವಂ ಯುಧಿಷ್ಠಿರಃ।।
01200010a ದೇವರ್ಷೇರುಪವಿಷ್ಟಸ್ಯ ಸ್ವಯಮರ್ಘ್ಯಂ ಯಥಾವಿಧಿ।
01200010c ಪ್ರಾದಾದ್ಯುಧಿಷ್ಠಿರೋ ಧೀಮಾನ್ರಾಜ್ಯಂ ಚಾಸ್ಮೈ ನ್ಯವೇದಯತ್।।

ಒಮ್ಮೆ ಸರ್ವ ಮಹಾತ್ಮರೂ ಕುಳಿತಿರುವಾಗ ಅಲ್ಲಿಗೆ ದೇವರ್ಷಿ ನಾರದನು ಬಂದನು5. ಯುಧಿಷ್ಠಿರನು ಅವನಿಗೆ ತನ್ನದೇ ಸುಂದರ ಆಸನವನ್ನು ನೀಡಿದನು ಮತ್ತು ಯುಧಿಷ್ಠಿರನು ದೇವರ್ಷಿಯನ್ನು ಸ್ವಯಂ ಕುಳ್ಳಿರಿಸಿ ಯಥಾವಿಧಿ ಅರ್ಘ್ಯವನ್ನಿತ್ತನು. ನಂತರ ಧೀಮಾನ್ ಯುಧಿಷ್ಠಿರನು ರಾಜ್ಯವನ್ನೇ ಅವನಿಗೆ ನಿವೇದಿಸಿದನು.

01200011a ಪ್ರತಿಗೃಹ್ಯ ತು ತಾಂ ಪೂಜಾಮೃಷಿಃ ಪ್ರೀತಮನಾಭವತ್।
01200011c ಆಶೀರ್ಭಿರ್ವರ್ಧಯಿತ್ವಾ ತು ತಮುವಾಚಾಸ್ಯತಾಮಿತಿ।।
01200012a ನಿಷಸಾದಾಭ್ಯನುಜ್ಞಾತಸ್ತತೋ ರಾಜಾ ಯುಧಿಷ್ಠಿರಃ।
01200012c ಪ್ರೇಷಯಾಮಾಸ ಕೃಷ್ಣಾಯೈ ಭಗವಂತಮುಪಸ್ಥಿತಂ।।

ಅವನ ಪೂಜೆಯನ್ನು ಸ್ವೀಕರಿಸಿದ ಋಷಿಯು ಸಂತೋಷಗೊಂಡು ಅವನಿಗೆ ಆಶೀರ್ವಾದಗಳನ್ನಿತ್ತು ಕುಳಿತುಕೊಳ್ಳಲು ಹೇಳಿದನು. ರಾಜ ಯುಧಿಷ್ಠಿರನು ಕುಳಿತುಕೊಳ್ಳಲು ಭಗವಾನನು ಬಂದಿದ್ದಾನೆಂದು ಕೃಷ್ಣೆಗೆ ಬರಲು ಹೇಳಿ ಕಳುಹಿಸಿದನು.

01200013a ಶ್ರುತ್ವೈವ ದ್ರೌಪದೀ ಚಾಪಿ ಶುಚಿರ್ಭೂತ್ವಾ ಸಮಾಹಿತಾ।
01200013c ಜಗಾಮ ತತ್ರ ಯತ್ರಾಸ್ತೇ ನಾರದಃ ಪಾಂಡವೈಃ ಸಹ।।

ಕೇಳಿದೊಡನೆಯೇ ದ್ರೌಪದಿಯು ಶುಚಿರ್ಭೂತಳಾಗಿ ಪಾಂಡವರೊಡನೆ ನಾರದನು ಇರುವಲ್ಲಿಗೆ ಹೋದಳು.

01200014a ತಸ್ಯಾಭಿವಾದ್ಯ ಚರಣೌ ದೇವರ್ಷೇರ್ಧರ್ಮಚಾರಿಣೀ।
01200014c ಕೃತಾಂಜಲಿಃ ಸುಸಂವೀತಾ ಸ್ಥಿತಾಥ ದ್ರುಪದಾತ್ಮಜಾ।।

ದೇವರ್ಷಿಯ ಚರಣಗಳೆರಡಕ್ಕೂ ನಮಸ್ಕರಿಸಿದ ಧರ್ಮಚಾರಿಣಿ ದ್ರುಪದಾತ್ಮಜೆಯು ಅಂಜಲೀಬದ್ಧಳಾಗಿ, ಸುಸಂವೀತಳಾಗಿ ನಿಂತುಕೊಂಡಳು.

01200015a ತಸ್ಯಾಶ್ಚಾಪಿ ಸ ಧರ್ಮಾತ್ಮಾ ಸತ್ಯವಾಗೃಷಿಸತ್ತಮಃ।
01200015c ಆಶಿಷೋ ವಿವಿಧಾಃ ಪ್ರೋಚ್ಯ ರಾಜಪುತ್ರ್ಯಾಸ್ತು ನಾರದಃ।
01200015e ಗಮ್ಯತಾಮಿತಿ ಹೋವಾಚ ಭಗವಾಂಸ್ತಾಮನಿಂದಿತಾಂ।।

ಸತ್ಯವಾಗ್ಮಿ ಋಷಿಸತ್ತಮ ಧರ್ಮಾತ್ಮ ಭಗವಾನ್ ನಾರದನು ಅನಿಂದಿತೆ ರಾಜಪುತ್ರಿಗೆ ವಿವಿಧ ಆಶೀರ್ವಾದಗಳನ್ನಿತ್ತು ಹೋಗಬಹುದೆಂದು ಹೇಳಿದನು6.

01200016a ಗತಾಯಾಮಥ ಕೃಷ್ಣಾಯಾಂ ಯುಧಿಷ್ಠಿರಪುರೋಗಮಾನ್।
01200016c ವಿವಿಕ್ತೇ ಪಾಂಡವಾನ್ಸರ್ವಾನುವಾಚ ಭಗವಾನೃಷಿಃ।।

ಕೃಷ್ಣೆಯು ಹೋದನಂತರ ಯುಧಿಷ್ಠಿರನೇ ಮೊದಲಾದ ಪಾಂಡವರು ಮಾತ್ರ ಏಕಾಂತದಲ್ಲಿರಲು, ಸರ್ವರನ್ನೂ ಉದ್ದೇಶಿಸಿ ಭಗವಾನ್ ಋಷಿಯು ಹೇಳಿದನು:

01200017a ಪಾಂಚಾಲೀ ಭವತಾಮೇಕಾ ಧರ್ಮಪತ್ನೀ ಯಶಸ್ವಿನೀ।
01200017c ಯಥಾ ವೋ ನಾತ್ರ ಭೇದಃ ಸ್ಯಾತ್ತಥಾ ನೀತಿರ್ವಿಧೀಯತಾಂ।।

“ಯಶಸ್ವಿನೀ ಪಾಂಚಾಲಿಯು ನಿಮ್ಮೆಲ್ಲರಿಗೂ ಒಬ್ಬಳೇ ಧರ್ಮಪತ್ನಿಯಾಗಿದ್ದಾಳೆ. ಅವಳಿಂದಾಗಿ ನಿಮ್ಮ ನಿಮ್ಮಲ್ಲಿ ಭೇದವುಂಟಾಗದಂತೆ ನಿಮ್ಮಲ್ಲಿಯೇ ಒಂದು ನೀತಿಯನ್ನು ಪಾಲಿಸಬೇಕಾಗುತ್ತದೆ.

01200018a ಸುಂದೋಪಸುಂದಾವಸುರೌ ಭ್ರಾತರೌ ಸಹಿತಾವುಭೌ।
01200018c ಆಸ್ತಾಮವಧ್ಯಾವನ್ಯೇಷಾಂ ತ್ರಿಷು ಲೋಕೇಷು ವಿಶ್ರುತೌ।।

ಹಿಂದೆ ಮೂರೂ ಲೋಕಗಳಲ್ಲಿಯೂ ವಿಶ್ರುತ, ಒಬ್ಬರನ್ನೊಬ್ಬರು ಬಿಟ್ಟಿರದೇ ಇದ್ದ ಸುಂದ ಮತ್ತು ಉಪಸುಂದರೆಂಬ ಈರ್ವರು ಅಸುರ ಸಹೋದರರಿದ್ದರು. ಅವರು ಬೇರೆ ಯಾರಿಂದಲೂ ಅವಧ್ಯರಾಗಿದ್ದರು.

01200019a ಏಕರಾಜ್ಯಾವೇಕಗೃಹಾವೇಕಶಯ್ಯಾಸನಾಶನೌ।
01200019c ತಿಲೋತ್ತಮಾಯಾಸ್ತೌ ಹೇತೋರನ್ಯೋನ್ಯಮಭಿಜಘ್ನತುಃ।।

ಒಂದೇ ರಾಜ್ಯ, ಒಂದೇ ಅರಮನೆ, ಒಂದೇ ಹಾಸಿಗೆ, ಆಸನ, ಆಹಾರವನ್ನು ಬಳಸುತ್ತಿದ್ದ ಅವರು ತಿಲೋತ್ತಮೆಯ ಸಲುವಾಗಿ ಪರಸ್ಪರರನ್ನು ಸಂಹರಿಸಿದರು.

01200020a ರಕ್ಷ್ಯತಾಂ ಸೌಹೃದಂ ತಸ್ಮಾದನ್ಯೋನ್ಯಪ್ರತಿಭಾವಿಕಂ।
01200020c ಯಥಾ ವೋ ನಾತ್ರ ಭೇದಃ ಸ್ಯಾತ್ತತ್ಕುರುಷ್ವ ಯುಧಿಷ್ಠಿರ।।

ಯುಧಿಷ್ಠಿರ! ಆದುದರಿಂದ ನಿಮ್ಮ ಅನ್ಯೋನ್ಯರಲ್ಲಿ ಇರುವ ಸೌಹಾರ್ದತೆಯನ್ನು ರಕ್ಷಿಸಿಕೋ ಮತ್ತು ನಿಮ್ಮಲ್ಲೇ ಭೇದವುಂಟಾಗದ ಹಾಗೆ ನಡೆದುಕೋ!”

01200021 ಯುಧಿಷ್ಠಿರ ಉವಾಚ।
01200021a ಸುಂದೋಪಸುಂದಾವಸುರೌ ಕಸ್ಯ ಪುತ್ರೌ ಮಹಾಮುನೇ।
01200021c ಉತ್ಪನ್ನಶ್ಚ ಕಥಂ ಭೇದಃ ಕಥಂ ಚಾನ್ಯೋನ್ಯಮಘ್ನತಾಂ।।

ಯುಧಿಷ್ಠಿರನು ಹೇಳಿದನು: “ಮಹಾಮುನೇ! ಸುಂದ ಮತ್ತು ಉಪಸುಂದರು ಯಾರ ಮಕ್ಕಳು ಮತ್ತು ಅವರಲ್ಲಿ ಹೇಗೆ ಭೇದವುಂಟಾಯಿತು ಮತ್ತು ಅವರು ಹೇಗೆ ಅನ್ಯೋನ್ಯರನ್ನು ಸಂಹರಿಸಿದರು?

01200022a ಅಪ್ಸರಾ ದೇವಕನ್ಯಾ ವಾ ಕಸ್ಯ ಚೈಷಾ ತಿಲೋತ್ತಮಾ।
01200022c ಯಸ್ಯಾಃ ಕಾಮೇನ ಸಮ್ಮತ್ತೌ ಜಘ್ನತುಸ್ತೌ ಪರಸ್ಪರಂ।।

ಮತ್ತು ಕಾಮದಿಂದ ಆ ಸಮ್ಮತ್ತರು ಪರಸ್ಪರರನ್ನು ಸಂಹರಿಸಿದ ಆ ತಿಲೋತ್ತಮೆಯು ಯಾರು? ಅಪ್ಸರೆಯೇ? ದೇವಕನ್ಯೆಯೇ? ಮತ್ತು ಅವಳು ಯಾರವಳು?

01200023a ಏತತ್ಸರ್ವಂ ಯಥಾವೃತ್ತಂ ವಿಸ್ತರೇಣ ತಪೋಧನ।
01200023c ಶ್ರೋತುಮಿಚ್ಛಾಮಹೇ ವಿಪ್ರ ಪರಂ ಕೌತೂಹಲಂ ಹಿ ನಃ।।

ತಪೋಧನ! ಇವೆಲ್ಲವನ್ನೂ ಯಥಾವತ್ತಾಗಿ ಕೇಳಲು ಬಯಸುತ್ತೇನೆ. ವಿಪ್ರ! ಇದರ ಕುರಿತು ನನಗೆ ಪರಮ ಕುತೂಹಲವುಂಟಾಗಿದೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಆದಿಪರ್ವಣಿ ಅರ್ಜುನವನವಾಸಪರ್ವಣಿ ಯುಧಿಷ್ಠಿರನಾರದಸಂವಾದೇ ದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದ ಆದಿಪರ್ವದಲ್ಲಿ ಅರ್ಜುನವನವಾಸಪರ್ವದಲ್ಲಿ ಯುಧಿಷ್ಠಿರನಾರದಸಂವಾದ ಎನ್ನುವ ಇನ್ನೂರನೆಯ ಅಧ್ಯಾಯವು.