ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ವಿದುರಾಗಮನ ಪರ್ವ
ಅಧ್ಯಾಯ 197
ಸಾರ
ಭೀಷ್ಮ-ದ್ರೋಣರ ಸಲಹೆಯನ್ನು ಸ್ವೀಕರಿಸಬೇಕೆಂದು ವಿದುರನು ಧೃತರಾಷ್ಟ್ರನಿಗೆ ಹೇಳುವುದು (1-29).
01197001 ವಿದುರ ಉವಾಚ।
01197001a ರಾಜನ್ನಿಃಸಂಶಯಂ ಶ್ರೇಯೋ ವಾಚ್ಯಸ್ತ್ವಮಸಿ ಬಾಂಧವೈಃ।
01197001c ನ ತ್ವಶುಶ್ರೂಷಮಾಣೇಷು ವಾಕ್ಯಂ ಸಂಪ್ರತಿತಿಷ್ಠತಿ।।
ವಿದುರನು ಹೇಳಿದನು: “ರಾಜನ್! ನಿನ್ನ ಬಾಂಧವರು ನಿನಗೆ ಶ್ರೇಯಸ್ಸನ್ನು ತರುವ ಮಾತುಗಳನ್ನೇ ಆಡಿದ್ದಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಕೇಳಲಿಕ್ಕೆ ಮನಸ್ಸಿಲ್ಲದಿರುವವರಿಗೆ ಆ ಮಾತುಗಳು ಒಳ್ಳೆಯದೆನಿಸುವುದಿಲ್ಲ.
01197002a ಹಿತಂ ಹಿ ತವ ತದ್ವಾಕ್ಯಮುಕ್ತವಾನ್ಕುರುಸತ್ತಮಃ।
01197002c ಭೀಷ್ಮಃ ಶಾಂತನವೋ ರಾಜನ್ಪ್ರತಿಗೃಹ್ಣಾಸಿ ತನ್ನ ಚ।।
ರಾಜನ್! ಕುರುಸತ್ತಮ ಭೀಷ್ಮ ಶಾಂತನವನು ನಿನ್ನ ಹಿತಕ್ಕಾಗಿಯೇ ಆ ಮಾತುಗಳನ್ನಾಡಿದನು. ಆದರೆ ನೀನು ಅವುಗಳನ್ನು ಸ್ವೀಕರಿಸಲಿಲ್ಲ.
01197003a ತಥಾ ದ್ರೋಣೇನ ಬಹುಧಾ ಭಾಷಿತಂ ಹಿತಮುತ್ತಮಂ।
01197003c ತಚ್ಚ ರಾಧಾಸುತಃ ಕರ್ಣೋ ಮನ್ಯತೇ ನ ಹಿತಂ ತವ।।
ದ್ರೋಣನೂ ಕೂಡ ನಿನ್ನ ಹಿತವನ್ನುದ್ದೇಶಿಸಿ ಬಹಳಷ್ಟು ಮಾತನಾಡಿದನು. ಆದರೆ ಅವುಗಳು ನಿನಗೆ ಹಿತಕಾರಕವೆಂದು ರಾಧಾಸುತ ಕರ್ಣನು ಸ್ವೀಕರಿಸುವುದಿಲ್ಲ.
01197004a ಚಿಂತಯಂಶ್ಚ ನ ಪಶ್ಯಾಮಿ ರಾಜಂಸ್ತವ ಸುಹೃತ್ತಮಂ।
01197004c ಆಭ್ಯಾಂ ಪುರುಷಸಿಂಹಾಭ್ಯಾಂ ಯೋ ವಾ ಸ್ಯಾತ್ಪ್ರಜ್ಞಯಾಧಿಕಃ।।
ರಾಜನ್! ಆದರೆ ನನ್ನ ಯೋಚನೆಯಲ್ಲಿ ಈ ಇಬ್ಬರು ಪುರುಷಸಿಂಹರನ್ನು ಬಿಟ್ಟು ಬೇರೆ ಯಾರೂ ನಿನ್ನ ಸುಹೃದಯರಲ್ಲಿ ಉತ್ತಮರೆಂದು ಕಾಣುತ್ತಿಲ್ಲ.
01197005a ಇಮೌ ಹಿ ವೃದ್ಧೌ ವಯಸಾ ಪ್ರಜ್ಞಯಾ ಚ ಶ್ರುತೇನ ಚ।
01197005c ಸಮೌ ಚ ತ್ವಯಿ ರಾಜೇಂದ್ರ ತೇಷು ಪಾಂಡುಸುತೇಷು ಚ।।
ಇವರಿಬ್ಬರೂ ವಯಸ್ಸಿನಲ್ಲಿ, ಪ್ರಜ್ಞೆಯಲ್ಲಿ, ಮತ್ತು ಕಲಿಕೆಯಲ್ಲಿ ವೃದ್ಧರಾಗಿದ್ದಾರೆ. ರಾಜೇಂದ್ರ! ಮತ್ತು ಇವರಿಗೆ ನಿನ್ನ ಮತ್ತು ಪಾಂಡುಸುತರು ಇಬ್ಬರೂ ಒಂದೇ.
01197006a ಧರ್ಮೇ ಚಾನವಮೌ ರಾಜನ್ಸತ್ಯತಾಯಾಂ ಚ ಭಾರತ।
01197006c ರಾಮಾದ್ದಾಶರಥೇಶ್ಚೈವ ಗಯಾಚ್ಚೈವ ನ ಸಂಶಯಃ।।
ರಾಜನ್! ಭಾರತ! ಧರ್ಮದಲ್ಲಿಯಾಗಲೀ ಸತ್ಯದಲ್ಲಿಯಾಗಲೀ ಅವರೀರ್ವರೂ ದಾಶರಥಿ ರಾಮ ಮತ್ತು ಗಯನಿಗಿಂಥ ಕಡಿಮೆಯಿಲ್ಲ ಎನ್ನುವುದರಲ್ಲಿ ಸಂಶಯವಿಲ್ಲ.
01197007a ನ ಚೋಕ್ತವಂತಾವಶ್ರೇಯಃ ಪುರಸ್ತಾದಪಿ ಕಿಂ ಚನ।
01197007c ನ ಚಾಪ್ಯಪಕೃತಂ ಕಿಂ ಚಿದನಯೋರ್ಲಕ್ಷ್ಯತೇ ತ್ವಯಿ।।
ಹಿಂದೆ ಎಂದೂ ಅವರು ನಿನಗೆ ಅಶ್ರೇಯ ಸಲಹೆಯನ್ನಾಗಲೀ ಅಥವಾ ನಿನಗೆ ಯಾವುದೇ ಅಪಕೃತವನ್ನೆಸಗಿದ್ದುದನ್ನು ನೀನು ಕಂಡಿಲ್ಲ.
01197008a ತಾವಿಮೌ ಪುರುಷವ್ಯಾಘ್ರಾವನಾಗಸಿ ನೃಪ ತ್ವಯಿ।
01197008c ನ ಮಂತ್ರಯೇತಾಂ ತ್ವಚ್ಛ್ರೇಯಃ ಕಥಂ ಸತ್ಯಪರಾಕ್ರಮೌ।।
ನೃಪ! ಹಾಗಿದ್ದಾಗ ಈಗ ಏಕೆ ಈ ಸತ್ಯಪರಾಕ್ರಮಿ ಪುರುಷವ್ಯಾಘ್ರರು ನಿನಗೆ ಅಶ್ರೇಯ ಸಲಹೆಯನ್ನು ನೀಡುತ್ತಾರೆ?
01197009a ಪ್ರಜ್ಞಾವಂತೌ ನರಶ್ರೇಷ್ಠಾವಸ್ಮಿಽಲ್ಲೋಕೇ ನರಾಧಿಪ।
01197009c ತ್ವನ್ನಿಮಿತ್ತಮತೋ ನೇಮೌ ಕಿಂ ಚಿಜ್ಜಿಹ್ಮಂ ವದಿಷ್ಯತಃ।
01197009e ಇತಿ ಮೇ ನೈಷ್ಠಿಕೀ ಬುದ್ಧಿರ್ವರ್ತತೇ ಕುರುನಂದನ।।
ನರಾಧಿಪ! ಲೋಕದಲ್ಲೇ ಪ್ರಜ್ಞಾವಂತ ಈ ನರಶ್ರೇಷ್ಠರು ನಿನ್ನ ವಿಷಯದಲ್ಲಿ ಎಂದೂ ವಿರುದ್ಧ ಮಾತುಗಳನ್ನಾಡುವುದಿಲ್ಲ. ಕುರುನಂದನ! ಇದು ನನ್ನ ಮೂಲಭೂತ ಯೋಚನೆಯಾಗಿದೆ.
01197010a ನ ಚಾರ್ಥಹೇತೋರ್ಧರ್ಮಜ್ಞೌ ವಕ್ಷ್ಯತಃ ಪಕ್ಷಸಂಶ್ರಿತಂ।
01197010c ಏತದ್ಧಿ ಪರಮಂ ಶ್ರೇಯೋ ಮೇನಾತೇ ತವ ಭಾರತ।।
ಈ ಇಬ್ಬರು ಧರ್ಮಜ್ಞರು ತಮ್ಮ ವೈಯಕ್ತಿಕ ಲಾಭಕ್ಕೋಸ್ಕರ ಯಾವುದೇ ಒಂದು ಪಕ್ಷದ ಪರವಾಗಿ ಮಾತನಾಡುವುದಿಲ್ಲ. ಭಾರತ! ನಿನ್ನ ಪರಮ ಶ್ರೇಯಸ್ಸನ್ನೇ ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾರೆ.
01197011a ದುರ್ಯೋಧನಪ್ರಭೃತಯಃ ಪುತ್ರಾ ರಾಜನ್ಯಥಾ ತವ।
01197011c ತಥೈವ ಪಾಂಡವೇಯಾಸ್ತೇ ಪುತ್ರಾ ರಾಜನ್ನ ಸಂಶಯಃ।।
ರಾಜನ್! ದುರ್ಯೋಧನರೇ ಮೊದಲಾದವರು ನಿನಗೆ ಹೇಗೆ ಪುತ್ರರೋ ಹಾಗೆ ಪಾಂಡವರೂ ಕೂಡ ನಿನ್ನ ಪುತ್ರರು. ರಾಜನ್! ಇದರಲ್ಲಿ ಯಾವುದೇ ಸಂಶಯವಿಲ್ಲ.
01197012a ತೇಷು ಚೇದಹಿತಂ ಕಿಂ ಚಿನ್ಮಂತ್ರಯೇಯುರಬುದ್ಧಿತಃ।
01197012c ಮಂತ್ರಿಣಸ್ತೇ ನ ತೇ ಶ್ರೇಯಃ ಪ್ರಪಶ್ಯಂತಿ ವಿಶೇಷತಃ।।
ಒಂದು ವೇಳೆ ನಿನ್ನ ಮಂತ್ರಿಗಳು ಅವಿವೇಕದಿಂದ ಪಾಂಡವರಿಗೆ ಶ್ರೇಯಸ್ಸಾಗದ ಸಲಹೆಗಳನ್ನು ನೀಡಿದರೆ, ಅವರು ವಿಶೇಷವಾಗಿ ನಿನ್ನ ಶ್ರೇಯಸ್ಸನ್ನು ಪರಿಗಣಿಸುತ್ತಿಲ್ಲ ಎನ್ನುವುದು ಸ್ಪಷ್ಟ.
01197013a ಅಥ ತೇ ಹೃದಯೇ ರಾಜನ್ವಿಶೇಷಸ್ತೇಷು ವರ್ತತೇ।
01197013c ಅಂತರಸ್ಥಂ ವಿವೃಣ್ವಾನಾಃ ಶ್ರೇಯಃ ಕುರ್ಯುರ್ನ ತೇ ಧ್ರುವಂ।।
ರಾಜನ್! ಅಥವಾ, ನಿನ್ನ ಹೃದಯದಲ್ಲಿ ನಿನ್ನ ಮಕ್ಕಳ ಮೇಲೇ ವಿಶೇಷ ಪ್ರೀತಿಯಿದ್ದರೆ, ನಿನ್ನ ಒಳಗಿದ್ದ ಅದನ್ನು ಬಹಿರಂಗಪಡಿಸುವುದರಿಂದ ನಿನಗೆ ಶ್ರೇಯಸ್ಸಾಗುವುದಿಲ್ಲ ಎನ್ನುವುದೂ ಖಂಡಿತ.
01197014a ಏತದರ್ಥಮಿಮೌ ರಾಜನ್ಮಹಾತ್ಮಾನೌ ಮಹಾದ್ಯುತೀ।
01197014c ನೋಚತುರ್ವಿವೃತಂ ಕಿಂ ಚಿನ್ನ ಹ್ಯೇಷ ತವ ನಿಶ್ಚಯಃ।
ರಾಜನ್! ಹಾಗಿದ್ದರೆ, ಈ ಮಹಾತ್ಮ ಮಹಾದ್ಯುತಿಗಳಿಬ್ಬರೂ ಬಹಿರಂಗವಾಗಿ ಮಾತನಾಡದೇ ಇದ್ದರೂ ನಿನ್ನ ನಿರ್ಧಾರಗಳು ಎಂದೂ ಬದಲಾವಣೆಯಾಗಲಾರದು.
01197015a ಯಚ್ಚಾಪ್ಯಶಕ್ಯತಾಂ ತೇಷಾಮಾಹತುಃ ಪುರುಷರ್ಷಭೌ।
01197015c ತತ್ತಥಾ ಪುರುಷವ್ಯಾಘ್ರ ತವ ತದ್ಭದ್ರಮಸ್ತು ತೇ।।
ಪುರುಷವ್ಯಾಘ್ರ! ಪಾಂಡವರನ್ನು ಗೆಲ್ಲುವುದು ಅಶಕ್ಯ ಎನ್ನುವ ಈ ಪುರುಷರ್ಷಭರ ಮಾತು ಸತ್ಯ. ಇನ್ನು ನಿನಗೆ ಮಂಗಳವಾಗಲಿ.
01197016a ಕಥಂ ಹಿ ಪಾಂಡವಃ ಶ್ರೀಮಾನ್ಸವ್ಯಸಾಚೀ ಪರಂತಪಃ।
01197016c ಶಕ್ಯೋ ವಿಜೇತುಂ ಸಂಗ್ರಾಮೇ ರಾಜನ್ಮಘವತಾ ಅಪಿ।।
ರಾಜನ್! ಶ್ರೀಮಾನ್, ಪರಂತಪ, ಪಾಂಡವ ಸವ್ಯಸಾಚಿಯನ್ನು ಸಂಗ್ರಾಮದಲ್ಲಿ ಮಘವತನಿಗೂ ಕೂಡ ಗೆಲ್ಲಲು ಹೇಗೆ ಶಕ್ಯ?
01197017a ಭೀಮಸೇನೋ ಮಹಾಬಾಹುರ್ನಾಗಾಯುತಬಲೋ ಮಹಾನ್।
01197017c ಕಥಂ ಹಿ ಯುಧಿ ಶಕ್ಯೇತ ವಿಜೇತುಮಮರೈರಪಿ।।
ಮಹಾಬಾಹು, ಸಾವಿರ ಆನೆಗಳ ಬಲವನ್ನುಳ್ಳ ಮಹಾ ಭೀಮಸೇನನನ್ನು, ಅಮರರೂ ಕೂಡ ಹೇಗೆ ಯುದ್ಧದಲ್ಲಿ ಜಯಿಸಲು ಶಕ್ಯ?
01197018a ತಥೈವ ಕೃತಿನೌ ಯುದ್ಧೇ ಯಮೌ ಯಮಸುತಾವಿವ।
01197018c ಕಥಂ ವಿಷಹಿತುಂ ಶಕ್ಯೌ ರಣೇ ಜೀವಿತುಮಿಚ್ಛತಾ।।
ಹಾಗೆಯೇ ಯಮಸುತರಂತಿರುವ ಯುದ್ಧ ಕೃತಿ ಯಮಳರನ್ನು ಜೀವಂತವಿರಲು ಇಚ್ಛಿಸುವವನು ಹೇಗೆ ರಣದಲ್ಲಿ ಗೆಲ್ಲಲು ಸಾಧ್ಯ?
01197019a ಯಸ್ಮಿನ್ಧೃತಿರನುಕ್ರೋಶಃ ಕ್ಷಮಾ ಸತ್ಯಂ ಪರಾಕ್ರಮಃ।
01197019c ನಿತ್ಯಾನಿ ಪಾಂಡವಶ್ರೇಷ್ಠೇ ಸ ಜೀಯೇತ ಕಥಂ ರಣೇ।।
ಯಾರಲ್ಲಿ ಧೃತಿ, ಅನುಕ್ರೋಶ, ಕ್ಷಮೆ, ಸತ್ಯ ಮತ್ತು ಪರಾಕ್ರಮಗಳು ನಿತ್ಯವೂ ನೆಲೆಸಿರುವೆಯೋ ಆ ಪಾಂಡವಶ್ರೇಷ್ಠನನ್ನು ರಣದಲ್ಲಿ ಹೇಗೆ ಜಯಿಸಬಹುದು?
01197020a ಯೇಷಾಂ ಪಕ್ಷಧರೋ ರಾಮೋ ಯೇಷಾಂ ಮಂತ್ರೀ ಜನಾರ್ದನಃ।
01197020c ಕಿಂ ನು ತೈರಜಿತಂ ಸಂಖ್ಯೇ ಯೇಷಾಂ ಪಕ್ಷೇ ಚ ಸಾತ್ಯಕಿಃ।।
ಯಾರ ಪಕ್ಷಧರನಾಗಿ ರಾಮನಿದ್ದಾನೆಯೋ, ಯಾರ ಮಂತ್ರಿಯಾಗಿ ಜನಾರ್ದನನಿದ್ದಾನೆಯೋ, ಮತ್ತು ಯಾರ ಪಕ್ಷದಲ್ಲಿ ಸಾತ್ಯಕಿಯ ಬೆಂಬಲವಿದೆಯೋ ಅವರು ಗೆಲ್ಲದೇ ಇರುವವರು ಇನ್ನು ಯಾರಿದ್ದಾರೆ?
01197021a ದ್ರುಪದಃ ಶ್ವಶುರೋ ಯೇಷಾಂ ಯೇಷಾಂ ಶ್ಯಾಲಾಶ್ಚ ಪಾರ್ಷತಾಃ।
01197021c ಧೃಷ್ಟದ್ಯುಮ್ನಮುಖಾ ವೀರಾ ಭ್ರಾತರೋ ದ್ರುಪದಾತ್ಮಜಾಃ।।
ಮಾವನನ್ನಾಗಿ ದ್ರುಪದನನ್ನು ಪಡೆದ ಮತ್ತು ದೃಷ್ಟದ್ಯುಮ್ನನೇ ಮೊದಲಾದ ಪಾರ್ಷತ ದ್ರುಪದಾತ್ಮಜರನ್ನು ಬಾವಂದಿರನ್ನಾಗಿ ಹೊಂದಿದ ಅವರನ್ನು ಗೆಲ್ಲಲು ಹೇಗೆ ಸಾದ್ಯ?
01197022a ಸೋಽಶಕ್ಯತಾಂ ಚ ವಿಜ್ಞಾಯ ತೇಷಾಮಗ್ರೇಣ ಭಾರತ।
01197022c ದಾಯಾದ್ಯತಾಂ ಚ ಧರ್ಮೇಣ ಸಮ್ಯಕ್ತೇಷು ಸಮಾಚರ।।
ಭಾರತ! ಅವರನ್ನು ಗೆಲ್ಲುವುದು ಅಶಕ್ಯ ಮತ್ತು ಧರ್ಮದ ಪ್ರಕಾರ ಅವರು ಮೊದಲೇ ಈ ರಾಜ್ಯದ ದಾಯಾದಿಗಳು ಎಂದು ತಿಳಿದು ಅವರೊಂದಿಗೆ ಒಳ್ಳೆಯದಾಗಿ ನಡೆದುಕೋ.
01197023a ಇದಂ ನಿರ್ದಿಗ್ಧಮಯಶಃ ಪುರೋಚನಕೃತಂ ಮಹತ್।
01197023c ತೇಷಾಮನುಗ್ರಹೇಣಾದ್ಯ ರಾಜನ್ಪ್ರಕ್ಷಾಲಯಾತ್ಮನಃ।।
ರಾಜನ್! ಪುರೋಚನನ ಕೃತ್ಯದಿಂದ ನಿನಗಾದ ನಿರ್ದಿಗ್ಧ ಅಯಶವನ್ನು ಅವರ ಮೇಲೆ ಅನುಗ್ರಹಮಾಡುವುದರ ಮೂಲಕ ನೀನೇ ಶುದ್ಧಪಡಿಸಿಕೋ.
01197024a ದ್ರುಪದೋಽಪಿ ಮಹಾನ್ರಾಜಾ ಕೃತವೈರಶ್ಚ ನಃ ಪುರಾ।
01197024c ತಸ್ಯ ಸಂಗ್ರಹಣಂ ರಾಜನ್ಸ್ವಪಕ್ಷಸ್ಯ ವಿವರ್ಧನಂ।।
ರಾಜನ್! ಹಿಂದೆ ಮಹಾರಾಜ ದ್ರುಪದನೂ ಕೂಡ ವೈರವನ್ನು ಸಾಧಿಸುತ್ತಿದ್ದನು. ಅವನ ಸಂಬಧದ ಮೂಲಕ ನಿನ್ನ ಪಕ್ಷವನ್ನು ವೃದ್ಧಿಪಡಿಸಿಕೋ.
01197025a ಬಲವಂತಶ್ಚ ದಾಶಾರ್ಹಾ ಬಹವಶ್ಚ ವಿಶಾಂ ಪತೇ।
01197025c ಯತಃ ಕೃಷ್ಣಸ್ತತಸ್ತೇ ಸ್ಯುರ್ಯತಃ ಕೃಷ್ಣಸ್ತತೋ ಜಯಃ।।
ವಿಶಾಂಪತೇ! ಬಹುಸಂಖ್ಯೆಯಲ್ಲಿರುವ ದಾಶಾರ್ಹರು ಬಲವಂತರು. ಅವರು ಕೃಷ್ಣನಿದ್ದಲ್ಲೇ ಇರುತ್ತಾರೆ ಮತ್ತು ಎಲ್ಲಿ ಕೃಷ್ಣನಿರುವನೋ ಅಲ್ಲಿಯೇ ಜಯ.
01197026a ಯಚ್ಚ ಸಾಮ್ನೈವ ಶಕ್ಯೇತ ಕಾರ್ಯಂ ಸಾಧಯಿತುಂ ನೃಪ।
01197026c ಕೋ ದೈವಶಪ್ತಸ್ತತ್ಕಾರ್ತುಂ ವಿಗ್ರಹೇಣ ಸಮಾಚರೇತ್।।
ನೃಪ! ಸಮಾಚರದಿಂದ ತಡೆಯಬಹುದಾದ ಈ ಯುದ್ಧವನ್ನು ಕೈಗೊಳ್ಳುವ ಯಾರು ತಾನೇ ವಿಧಿಯ ಶಾಪಕ್ಕೊಳಗಾಗಿಲ್ಲ?
01197027a ಶ್ರುತ್ವಾ ಚ ಜೀವತಃ ಪಾರ್ಥಾನ್ಪೌರಜಾನಪದೋ ಜನಃ।
01197027c ಬಲವದ್ದರ್ಶನೇ ಗೃಧ್ನುಸ್ತೇಷಾಂ ರಾಜನ್ಕುರು ಪ್ರಿಯಂ।।
ನಗರ ಮತ್ತು ಗ್ರಾಮೀಣ ಜನರು ಪಾರ್ಥರು ಜೀವಂತವಿದ್ದಾರೆ ಎಂದು ಕೇಳಿದ್ದಾರೆ ಮತ್ತು ಅವರನ್ನು ನೋಡಲು ಕಾತರರಾಗಿದ್ದಾರೆ. ರಾಜನ್! ಅವರಿಗೆ ಆ ಸಂತೋಷವನ್ನು ನೀಡು.
01197028a ದುರ್ಯೋಧನಶ್ಚ ಕರ್ಣಶ್ಚ ಶಕುನಿಶ್ಚಾಪಿ ಸೌಬಲಃ।
01197028c ಅಧರ್ಮಯುಕ್ತಾ ದುಷ್ಪ್ರಜ್ಞಾ ಬಾಲಾ ಮೈಷಾಂ ವಚಃ ಕೃಥಾಃ।।
ದುರ್ಯೋಧನ, ಕರ್ಣ, ಮತ್ತು ಶಕುನಿ ಸೌಬಲರು ಅಧರ್ಮಯುಕ್ತ ದುಷ್ಪ್ರಜ್ಞ ಬಾಲಕರಾಗಿದ್ದಾರೆ. ಅವರ ಮಾತುಗಳಂತೆ ಮಾಡಬೇಡ!
01197029a ಉಕ್ತಮೇತನ್ಮಯಾ ರಾಜನ್ಪುರಾ ಗುಣವತಸ್ತವ।
01197029c ದುರ್ಯೋಧನಾಪರಾಧೇನ ಪ್ರಜೇಯಂ ವಿನಶಿಷ್ಯತಿ।।
ಗುಣವಂತ ರಾಜನ್! ದುರ್ಯೋಧನನ ಅಪರಾಧದಿಂದ ಈ ರಾಜ್ಯವು ವಿನಾಶವಾಗುತ್ತದೆ ಎಂದು ನಾನು ನಿನಗೆ ಹಿಂದೆಯೇ ಹೇಳಿದ್ದೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ವಿದುರಾಗಮನಪರ್ವಣಿ ವಿದುರವಾಕ್ಯೇ ಸಪ್ತನವತ್ಯಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ವಿದುರಾಗಮನಪರ್ವದಲ್ಲಿ ವಿದುರವಾಕ್ಯದಲ್ಲಿ ನೂರಾತೊಂಭತ್ತೇಳನೆಯ ಅಧ್ಯಾಯವು.