192 ದುರ್ಯೋಧನವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ವಿದುರಾಗಮನ ಪರ್ವ

ಅಧ್ಯಾಯ 192

ಸಾರ

ಪಾಂಡವರು ಜೀವಿತರಾಗಿದ್ದಾರೆ ಮತ್ತು ದ್ರೌಪದಿಯನ್ನು ಗೆದ್ದಿದ್ದಾರೆ ಎಂದು ತಿಳಿದು ದುಃಖಿತರಾಗಿ “ದೈವವೇ ಪರಮವಾದದ್ದು ಪೌರುಷವು ನಿರರ್ಥಕ” ಎಂದು ಯೋಚಿಸುತ್ತಾ ದುರ್ಯೋಧನಾದಿಗಳು ಹಸ್ತಿನಾಪುರಕ್ಕೆ ಹಿಂದಿರುಗಿದುದು (1-13). ಪಾಂಡವರ ಯಶಸ್ಸನ್ನು ವಿದುರನಿಂದ ತಿಳಿದ ಧೃತರಾಷ್ಟ್ರನು ಸಂತೋಷವನ್ನು ವ್ಯಕ್ತಪಡಿಸುವುದು (14-22). ಸಂತೋಷಪಟ್ಟ ತಂದೆಯನ್ನು ಮೂದಲಿಸಿ ಅವನು ಏನು ಮಾಡಲಿದ್ದಾನೆಂದು ದುರ್ಯೋಧನನು ಪ್ರಶ್ನಿಸುವುದು (23-29).

01192001 ವೈಶಂಪಾಯನ ಉವಾಚ।
01192001a ತತೋ ರಾಜ್ಞಾಂ ಚರೈರಾಪ್ತೈಶ್ಚಾರಃ ಸಮುಪನೀಯತ।
01192001c ಪಾಂಡವೈರುಪಸಂಪನ್ನಾ ದ್ರೌಪದೀ ಪತಿಭಿಃ ಶುಭಾ।।
01192002a ಯೇನ ತದ್ಧನುರಾಯಮ್ಯ ಲಕ್ಷ್ಯಂ ವಿದ್ಧಂ ಮಹಾತ್ಮನಾ।
01192002c ಸೋಽರ್ಜುನೋ ಜಯತಾಂ ಶ್ರೇಷ್ಠೋ ಮಹಾಬಾಣಧನುರ್ಧರಃ।।
01192003a ಯಃ ಶಲ್ಯಂ ಮದ್ರರಾಜಾನಮುತ್ಕ್ಷಿಪ್ಯಾಭ್ರಾಮಯದ್ಬಲೀ।
01192003c ತ್ರಾಸಯಂಶ್ಚಾಪಿ ಸಂಕ್ರುದ್ಧೋ ವೃಕ್ಷೇಣ ಪುರುಷಾನ್ರಣೇ।।

ವೈಶಂಪಾಯನನು ಹೇಳಿದನು: “ಆಪ್ತ ಚರರು ರಾಜನಿಗೆ ವಿಷಯವನ್ನು ತಂದು ಹೇಳಿದರು: “ಶುಭೆ ದ್ರೌಪದಿಯು ಪಾಂಡವರನ್ನು ಪತಿಯರನ್ನಾಗಿ ಸ್ವೀಕರಿಸಿದಳು. ಆ ಧನುಸ್ಸಿನಿಂದ ಲಕ್ಷ್ಯವನ್ನು ಭೇಧಿಸಿದ ಮಹಾತ್ಮನೇ ಮಹಾಬಾಣಧನುರ್ಧರ ವಿಜಯಿಗಳಲ್ಲಿ ಶ್ರೇಷ್ಠ ಅರ್ಜುನ. ಅಲ್ಲಿದ್ದ ಮದ್ರರಾಜ ಶಲ್ಯನನ್ನು ಮೇಲಕ್ಕೆತ್ತಿ ಗರಗರನೆ ತಿರುಗಿಸಿ ವೃಕ್ಷವನ್ನು ಹಿಡಿದು ರಣದಲ್ಲಿ ಪುರುಷರನ್ನು ಸದೆಬಡಿದ ಮಹಾತ್ಮ ಬಲಿಯು ಭೀಮಸಂಸ್ಪರ್ಷ ಶತ್ರುಸೇನಾಂಗಪಾತನ ಭೀಮ.

01192004a ನ ಚಾಪಿ ಸಂಭ್ರಮಃ ಕಶ್ಚಿದಾಸೀತ್ತತ್ರ ಮಹಾತ್ಮನಃ।
01192004c ಸ ಭೀಮೋ ಭೀಮಸಂಸ್ಪರ್ಶಃ ಶತ್ರುಸೇನಾಂಗಪಾತನಃ।।
01192005a ಬ್ರಹ್ಮರೂಪಧರಾಂಶ್ರುತ್ವಾ ಪಾಂಡುರಾಜಸುತಾಂಸ್ತದಾ।
01192005c ಕೌಂತೇಯಾನ್ಮನುಜೇಂದ್ರಾಣಾಂ ವಿಸ್ಮಯಃ ಸಮಜಾಯತ।।
01192006a ಸಪುತ್ರಾ ಹಿ ಪುರಾ ಕುಂತೀ ದಗ್ಧಾ ಜತುಗೃಹೇ ಶ್ರುತಾ।
01192006c ಪುನರ್ಜಾತಾನಿತಿ ಸ್ಮೈತಾನ್ಮನ್ಯಂತೇ ಸರ್ವಪಾರ್ಥಿವಾಃ।।
01192007a ಧಿಕ್ಕುರ್ವಂತಸ್ತದಾ ಭೀಷ್ಮಂ ಧೃತರಾಷ್ಟ್ರಂ ಚ ಕೌರವಂ।
01192007c ಕರ್ಮಣಾ ಸುನೃಶಂಸೇನ ಪುರೋಚನಕೃತೇನ ವೈ।।

ಹಿಂದೆ ಪುತ್ರರ ಸಹಿತ ಕುಂತಿಯು ಜತುಗೃಹದಲ್ಲಿ ಸುಟ್ಟುಹೋಗಿದ್ದಳು ಎಂದು ಕೇಳಿದ ಮನುಜೇಂದ್ರರು ಬ್ರಾಹ್ಮಣ ವೇಷದಲ್ಲಿದ್ದವರು ರಾಜ ಪಾಂಡು ಮತ್ತು ಕುಂತಿಯ ಮಕ್ಕಳು ಎಂದು ಕೇಳಿ ವಿಸ್ಮಿತರಾದರು. ಅವರು ಪುನರ್ಜನ್ಮತಾಳಿದ್ದಾರೆ ಎಂದು ಸರ್ವ ಪಾರ್ಥಿವರೂ ಅಂದುಕೊಂಡರು. ಪುರೋಚನನು ಎಸಗಿದ್ದ ಆ ಕ್ರೂರ ಕರ್ಮಕ್ಕಾಗಿ ಭೀಷ್ಮ ಮತ್ತು ಕೌರವ ಧೃತರಾಷ್ಟ್ರನನ್ನು ಹೀಗಳೆದರು.

01192008a ವೃತ್ತೇ ಸ್ವಯಂವರೇ ಚೈವ ರಾಜಾನಃ ಸರ್ವ ಏವ ತೇ।
01192008c ಯಥಾಗತಂ ವಿಪ್ರಜಗ್ಮುರ್ವಿದಿತ್ವಾ ಪಾಂಡವಾನ್ವೃತಾನ್।।

ಸ್ವಯಂವರವು ಮುಗಿಯುತ್ತಲೇ ಪಾಂಡವರು ಆಯ್ಕೆಗೊಂಡಿದ್ದಾರೆ ಎಂದು ತಿಳಿದು ಸರ್ವ ರಾಜರೂ ಬಂದ ದಾರಿಯಲ್ಲಿ ಹಿಂದಿರುಗಿದರು.”

01192009a ಅಥ ದುರ್ಯೋಧನೋ ರಾಜಾ ವಿಮನಾ ಭ್ರಾತೃಭಿಃ ಸಹ।
01192009c ಅಶ್ವತ್ಥಾಮ್ನಾ ಮಾತುಲೇನ ಕರ್ಣೇನ ಚ ಕೃಪೇಣ ಚ।।
01192010a ವಿನಿವೃತ್ತೋ ವೃತಂ ದೃಷ್ಟ್ವಾ ದ್ರೌಪದ್ಯಾ ಶ್ವೇತವಾಹನಂ।
01192010c ತಂ ತು ದುಃಶಾಸನೋ ವ್ರೀಡನ್ಮಂದಂ ಮಂದಮಿವಾಬ್ರವೀತ್।।

ವಿಮನಸ್ಕ ರಾಜ ದುರ್ಯೋಧನನು ಅಶ್ವತ್ಥಾಮ, ಮಾತುಲ, ಕರ್ಣ, ಕೃಪ ಮತ್ತು ತನ್ನ ಭ್ರಾತೃಗಳ ಸಹಿತ ದ್ರೌಪದಿಯು ಶ್ವೇತವಾಹನನ್ನು ವರಿಸಿದ್ದುದನ್ನು ಕಂಡು ವಿನಿವೃತನಾಗಿ ಹಿಂದಿರುಗಿದನು. ನಾಚಿಕೊಂಡ ದುಃಶಾಸನನು ಅವನಲ್ಲಿ ಪಿಸುಮಾತಿನಲ್ಲಿ ಹೇಳಿದನು:

01192011a ಯದ್ಯಸೌ ಬ್ರಾಹ್ಮಣೋ ನ ಸ್ಯಾದ್ವಿಂದೇತ ದ್ರೌಪದೀಂ ನ ಸಃ।
01192011c ನ ಹಿ ತಂ ತತ್ತ್ವತೋ ರಾಜನ್ವೇದ ಕಶ್ಚಿದ್ಧನಂಜಯಂ।।

“ಬ್ರಾಹ್ಮಣನಾಗಿಲ್ಲದಿದ್ದರೆ ಎಂದೂ ಅವನು ದ್ರೌಪದಿಯನ್ನು ಪಡೆಯುತ್ತಿರಲಿಲ್ಲ. ರಾಜನ್! ಯಾರಿಗೂ ಅವನು ಧನಂಜಯನೆಂದು ಗೊತ್ತಾಗಲಿಲ್ಲ.

01192012a ದೈವಂ ತು ಪರಮಂ ಮನ್ಯೇ ಪೌರುಷಂ ತು ನಿರರ್ಥಕಂ।
01192012c ಧಿಗಸ್ಮತ್ಪೌರುಷಂ ತಾತ ಯದ್ಧರಂತೀಹ ಪಾಂಡವಾಃ।।

ದೈವವೇ ಪರಮವಾದದ್ದು ಪೌರುಷವು ನಿರರ್ಥಕ ಎನ್ನುವುದು ನನ್ನ ಅಭಿಪ್ರಾಯ. ಪಾಂಡವರು ಇನ್ನೂ ಜೀವದಿಂದಿದ್ದಾರೆಂದರೆ ನಮ್ಮ ಪೌರುಷಕ್ಕೆ ಧಿಕ್ಕಾರ!”

01192013a ಏವಂ ಸಂಭಾಷಮಾಣಾಸ್ತೇ ನಿಂದಂತಶ್ಚ ಪುರೋಚನಂ।
01192013c ವಿವಿಶುರ್ಹಾಸ್ತಿನಪುರಂ ದೀನಾ ವಿಗತಚೇತಸಃ।।

ಈ ರೀತಿ ಮಾತನಾಡುತ್ತಾ ಪುರೋಚನನನ್ನು ನಿಂದಿಸುತ್ತಾ ಆ ವಿಗತಚೇತಸ ದೀನರು ಹಸ್ತಿನಪುರವನ್ನು ಪ್ರವೇಶಿಸಿದರು.

01192014a ತ್ರಸ್ತಾ ವಿಗತಸಂಕಲ್ಪಾ ದೃಷ್ಟ್ವಾ ಪಾರ್ಥಾನ್ಮಹೌಜಸಃ।
01192014c ಮುಕ್ತಾನ್ ಹವ್ಯವಹಾಚ್ಚೈನಾನ್ಸಮ್ಯುಕ್ತಾನ್ದ್ರುಪದೇನ ಚ।।
01192015a ಧೃಷ್ಟದ್ಯುಮ್ನಂ ಚ ಸಂಚಿಂತ್ಯ ತಥೈವ ಚ ಶಿಖಂಡಿನಂ।
01192015c ದ್ರುಪದಸ್ಯಾತ್ಮಜಾಂಶ್ಚಾನ್ಯಾನ್ಸರ್ವಯುದ್ಧವಿಶಾರದಾನ್।।

ಬೆಂಕಿಯಿಂದ ತಪ್ಪಿಸಿಕೊಂಡು ದ್ರುಪದನನ್ನು ಸೇರಿದ ಆ ಮಹೌಜಸ ಪಾರ್ಥರನ್ನು ನೋಡಿ ಮತ್ತು ಸರ್ವ ಯುದ್ಧ ವಿಶಾರದ ಧೃಷ್ಟಧ್ಯುಮ್ನ, ಶಿಖಂಡಿ ಮತ್ತು ದ್ರುಪದನ ಇತರ ಮಕ್ಕಳನ್ನು ಯೋಚಿಸಿ ಅವರೆಲ್ಲರೂ ವಿಗತಸಂಕಲ್ಪರಾಗಿ ನಡುಗಿದರು.

01192016a ವಿದುರಸ್ತ್ವಥ ತಾಂಶ್ರುತ್ವಾ ದ್ರೌಪದ್ಯಾ ಪಾಂಡವಾನ್ವೃತಾನ್।
01192016c ವ್ರೀಡಿತಾನ್ಧಾರ್ತರಾಷ್ಟ್ರಾಂಶ್ಚ ಭಗ್ನದರ್ಪಾನುಪಾಗತಾನ್।।
01192017a ತತಃ ಪ್ರೀತಮನಾಃ ಕ್ಷತ್ತಾ ಧೃತರಾಷ್ಟ್ರಂ ವಿಶಾಂ ಪತೇ।
01192017c ಉವಾಚ ದಿಷ್ಟ್ಯಾ ಕುರವೋ ವರ್ಧಂತ ಇತಿ ವಿಸ್ಮಿತಃ।।

ವಿಶಾಂಪತೇ! ಆದರೆ ದ್ರೌಪದಿಯು ಪಾಂಡವರನ್ನು ವರಿಸಿದಳು ಮತ್ತು ಧಾರ್ತರಾಷ್ಟ್ರರ ದರ್ಪವು ಭಗ್ನವಾಗಿ ನಾಚಿಕೊಂಡು ಹಿಂದಿರುಗಿದರು ಎಂದು ಕೇಳಿ ಸಂತೋಷಗೊಂಡ ಕ್ಷತ್ತ ವಿದುರನು ವಿಸ್ಮಿತನಾಗಿ “ಕುರುಗಳು ವರ್ಧಿಸಿದ್ದಾರೆ!” ಎಂದು ಧೃತರಾಷ್ಟ್ರನಿಗೆ ಕೂಗಿ ಹೇಳಿದನು.

01192018a ವೈಚಿತ್ರವೀರ್ಯಸ್ತು ನೃಪೋ ನಿಶಮ್ಯ ವಿದುರಸ್ಯ ತತ್।
01192018c ಅಬ್ರವೀತ್ಪರಮಪ್ರೀತೋ ದಿಷ್ಟ್ಯಾ ದಿಷ್ಟ್ಯೇತಿ ಭಾರತ।।

ಭಾರತ! ವಿದುರನ ಈ ಮಾತುಗಳನ್ನು ಕೇಳಿ ಪರಮಪ್ರೀತ ನೃಪ ವೈಚಿತ್ರವೀರ್ಯನು “ಒಳ್ಳೆಯದೇ ಆಯಿತು! ಒಳ್ಳೆಯದೇ ಆಯಿತು!” ಎಂದನು.

01192019a ಮನ್ಯತೇ ಹಿ ವೃತಂ ಪುತ್ರಂ ಜ್ಯೇಷ್ಠಂ ದ್ರುಪದಕನ್ಯಯಾ।
01192019c ದುರ್ಯೋಧನಮವಿಜ್ಞಾನಾತ್ಪ್ರಜ್ಞಾಚಕ್ಷುರ್ನರೇಶ್ವರಃ।।

ಪ್ರಾಜ್ಞಚಕ್ಷು ನರೇಶ್ವರನು ಅವಿಜ್ಞಾನದಿಂದ ದ್ರುಪದ ಕನ್ಯೆಯು ತನ್ನ ಜ್ಯೇಷ್ಠ ಪುತ್ರ ದುರ್ಯೋಧನನನ್ನೇ ವರಿಸಿದ್ದಾಳೆ ಎಂದು ಭಾವಿಸಿದ್ದನು.

01192020a ಅಥ ತ್ವಾಜ್ಞಾಪಯಾಮಾಸ ದ್ರೌಪದ್ಯಾ ಭೂಷಣಂ ಬಹು।
01192020c ಆನೀಯತಾಂ ವೈ ಕೃಷ್ಣೇತಿ ಪುತ್ರಂ ದುರ್ಯೋಧನಂ ತದಾ।।

ಅವನು ದ್ರೌಪದಿಗೋಸ್ಕರ ಬಹು ಭೂಷಣಗಳನ್ನು ಮತ್ತು “ಕೃಷ್ಣೆಯನ್ನು ಕರೆದುಕೊಂಡು ಬಾ!” ಎಂದು ಪುತ್ರ ದುರ್ಯೋಧನನಿಗೆ ಆಜ್ಞಾಪಿಸಿದನು.

01192021a ಅಥಾಸ್ಯ ಪಶ್ಚಾದ್ವಿದುರ ಆಚಖ್ಯೌ ಪಾಂಡವಾನ್ವೃತಾನ್।
01192021c ಸರ್ವಾನ್ಕುಶಲಿನೋ ವೀರಾನ್ಪೂಜಿತಾನ್ದ್ರುಪದೇನ ಚ।
01192021e ತೇಷಾಂ ಸಂಬಂಧಿನಶ್ಚಾನ್ಯಾನ್ಬಹೂನ್ಬಲಸಮನ್ವಿತಾನ್।।

ನಂತರ ವಿದುರನು “ಪಾಂಡವರು ವರಿಸಲ್ಪಟ್ಟಿದ್ದಾರೆ! ಸರ್ವ ವೀರರೂ ಕುಶಲದಿಂದಿದ್ದಾರೆ! ಬಹು ಬಲಸಮನ್ವಿತರೊಂದಿಗೆ ಸಂಬಂಧವನ್ನು ಮಾಡಿಕೊಂಡ ಅವರು ದ್ರುಪದನಿಂದ ಸತ್ಕರಿಸಲ್ಪಟ್ಟಿದ್ದಾರೆ” ‌ಎಂದು ವರದಿಮಾಡಿದನು.

01192022 ಧೃತರಾಷ್ಟ್ರ ಉವಾಚ।
01192022a ಯಥೈವ ಪಾಂಡೋಃ ಪುತ್ರಾಸ್ತೇ ತಥೈವಾಭ್ಯಧಿಕಾ ಮಮ।
01192022c ಸೇಯಮಭ್ಯಧಿಕಾ ಪ್ರೀತಿರ್ವೃದ್ಧಿರ್ವಿದುರ ಮೇ ಮತಾ।
01192022e ಯತ್ತೇ ಕುಶಲಿನೋ ವೀರಾ ಮಿತ್ರವಂತಶ್ಚ ಪಾಂಡವಾಃ।।

ಧೃತರಾಷ್ಟ್ರನು ಹೇಳಿದನು: “ಪಾಂಡುವಿನ ಪುತ್ರರು ಅವನಿಗೆ ಹೇಗೋ ಅದಕ್ಕಿಂತಲೂ ಅಧಿಕವಾಗಿ ನನಗಾಗುತ್ತಾರೆ. ವಿದುರ! ವೀರ ಪಾಂಡವರು ಕುಶಲರಾಗಿದ್ದು ಮಿತ್ರರನ್ನು ಪಡೆದಿದ್ದಾರೆ ಎಂದು ಕೇಳಿ ನನ್ನ ಸಂತೋಷವು ಇನ್ನೂ ಹೆಚ್ಚಾಗಿದೆ ಎಂದು ನನ್ನ ಅನಿಸಿಕೆ.

01192023a ಕೋ ಹಿ ದ್ರುಪದಮಾಸಾದ್ಯ ಮಿತ್ರಂ ಕ್ಷತ್ತಃ ಸಬಾಂಧವಂ।
01192023c ನ ಬುಭೂಷೇದ್ಭವೇನಾರ್ಥೀ ಗತಶ್ರೀರಪಿ ಪಾರ್ಥಿವಃ।।

ಕ್ಷತ್ತ! ಸಂಪತ್ತನ್ನು ಕಳೆದುಕೊಂಡ ಮತ್ತು ಬಲಶಾಲಿಯಾಗಬೇಕೆನ್ನುವ ಯಾವ ಪಾರ್ಥಿವನು ದ್ರುಪದ ಮತ್ತು ಅವನ ಬಾಂಧವರ ಮಿತ್ರತ್ವವನ್ನು ಬಯಸುವುದಿಲ್ಲ?””

01192024 ವೈಶಂಪಾಯನ ಉವಾಚ।
01192024a ತಂ ತಥಾ ಭಾಷಮಾಣಂ ತು ವಿದುರಃ ಪ್ರತ್ಯಭಾಷತ।
01192024c ನಿತ್ಯಂ ಭವತು ತೇ ಬುದ್ಧಿರೇಷಾ ರಾಜಂಶತಂ ಸಮಾಃ।।

ವೈಶಂಪಾಯನನು ಹೇಳಿದನು: “ಅವನು ಹಾಗೆ ಹೇಳಲು ವಿದುರನು ಉತ್ತರಿಸಿದನು: “ರಾಜನ್! ನಿನ್ನ ಈ ಬುದ್ಧಿಯು ನೂರು ವರ್ಷಗಳು ಸದಾ ಇರಲಿ!”

01192025a ತತೋ ದುರ್ಯೋಧನಶ್ಚೈವ ರಾಧೇಯಶ್ಚ ವಿಶಾಂ ಪತೇ।
01192025c ಧೃತರಾಷ್ಟ್ರಮುಪಾಗಮ್ಯ ವಚೋಽಬ್ರೂತಾಮಿದಂ ತದಾ।।

ವಿಶಾಂಪತೇ! ನಂತರ ದುರ್ಯೋಧನ ಮತ್ತು ರಾಧೇಯರು ಧೃತರಾಷ್ಟ್ರನಲ್ಲಿಗೆ ಬಂದು ಈ ಮಾತುಗಳನ್ನಾಡಿದರು:

01192026a ಸನ್ನಿಧೌ ವಿದುರಸ್ಯ ತ್ವಾಂ ವಕ್ತುಂ ನೃಪ ನ ಶಕ್ನುವಃ।
01192026c ವಿವಿಕ್ತಮಿತಿ ವಕ್ಷ್ಯಾವಃ ಕಿಂ ತವೇದಂ ಚಿಕೀರ್ಷಿತಂ।।

“ನೃಪ! ವಿದುರನ ಸನ್ನಿಧಿಯಲ್ಲಿ ನಿನ್ನೊಡನೆ ಮಾತನಾಡಲು ಸಾಧ್ಯವಾಗಲಿಲ್ಲ. ಆದುದರಿಂದ ನಾವು ನಿನ್ನಲ್ಲಿ ಏಕಾಂತದಲ್ಲಿ ಕೇಳುತ್ತಿದ್ದೇವೆ. ನೀನು ಈಗ ಏನು ಮಾಡಬೇಕೆಂದು ಯೋಚಿಸಿದ್ದೀಯೆ?

01192027a ಸಪತ್ನವೃದ್ಧಿಂ ಯತ್ತಾತ ಮನ್ಯಸೇ ವೃದ್ಧಿಮಾತ್ಮನಃ।
01192027c ಅಭಿಷ್ಟೌಷಿ ಚ ಯತ್ಕ್ಷತ್ತುಃ ಸಮೀಪೇ ದ್ವಿಪದಾಂ ವರ।।

ತಾತ! ದ್ವಿಪದರಲ್ಲಿ ಶ್ರೇಷ್ಠ! ವಿದುರನ ಎದಿರು ಅವರ ಪ್ರಶಂಸೆಯನ್ನು ಮಾಡುತ್ತಿದ್ದೆಯಲ್ಲ! ನಿನ್ನ ಪ್ರತಿಸ್ಪರ್ಧಿಗಳ ಯಶಸ್ಸನ್ನು ನಿನ್ನದೇ ಯಶಸ್ಸೆಂದು ಭಾವಿಸುತ್ತಿದ್ದೀಯಾ?

01192028a ಅನ್ಯಸ್ಮಿನ್ನೃಪ ಕರ್ತವ್ಯೇ ತ್ವಮನ್ಯತ್ಕುರುಷೇಽನಘ।
01192028c ತೇಷಾಂ ಬಲವಿಘಾತೋ ಹಿ ಕರ್ತವ್ಯಸ್ತಾತ ನಿತ್ಯಶಃ।।

ನೃಪ! ಅನಘ! ಒಂದು ಕೆಲಸವನ್ನು ಮಾಡಬೇಕೆಂದಿದ್ದರೆ ಇನ್ನೊಂದನ್ನು ಮಾಡಿಬಿಡುತ್ತೀಯೆ. ತಾತ! ಏನಾದರೂ ಮಾಡಿ ನಿತ್ಯವೂ ಅವರ ಬಲವನ್ನು ನಾಶಪಡಿಸಬೇಕು.

01192029a ತೇ ವಯಂ ಪ್ರಾಪ್ತಕಾಲಸ್ಯ ಚಿಕೀರ್ಷಾಂ ಮಂತ್ರಯಾಮಹೇ।
01192029c ಯಥಾ ನೋ ನ ಗ್ರಸೇಯುಸ್ತೇ ಸಪುತ್ರಬಲಬಾಂಧವಾನ್।।

ಅವರು ನಮ್ಮನ್ನು ಪುತ್ರ ಬಲ ಬಾಂಧವರ ಸಹಿತ ನುಂಗಲಾರದಂತೆ ನಾವೆಲ್ಲರೂ ಏನಾದರೂ ಉಪಾಯವನ್ನು ಯೋಚಿಸುವ ಕಾಲವು ಪ್ರಾಪ್ತವಾಗಿದೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ವಿದುರಾಗಮನಪರ್ವಣಿ ದುರ್ಯೋಧನವಾಕ್ಯೇ ದ್ವಿನವತ್ಯಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ವಿದುರಾಗಮನಪರ್ವದಲ್ಲಿ ದುರ್ಯೋಧನವಾಕ್ಯದಲ್ಲಿ ನೂರಾತೊಂಭತ್ತೆರಡನೆಯ ಅಧ್ಯಾಯವು.