ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ವೈವಾಹಿಕ ಪರ್ವ
ಅಧ್ಯಾಯ 190
ಸಾರ
ವ್ಯಾಸನಿತ್ತ ವಿವರಗಳನ್ನು ಕೇಳಿ ವಿಧಿವಿಹಿತವಾಗಿರುವುದನ್ನು ತಪ್ಪಿಸಲು ಸಾಧ್ಯವಿಲ್ಲವೆಂದು ಐವರೂ ಪಾಂಡವರೊಂದಿಗೆ ದ್ರೌಪದಿಯ ವಿವಾಹಕ್ಕೆ ದ್ರುಪದನು ಒಪ್ಪಿಕೊಳ್ಳುವುದು (1-4). ಒಂದೊಂದು ದಿನದ ಅಂತರದಲ್ಲಿ ಒಬ್ಬೊಬ್ಬರಾಗಿ ಐವರು ಪಾಂಡವರೊಂದಿಗೆ ದ್ರೌಪದಿಯ ವಿವಾಹ, ಪ್ರತಿ ಹಗಲು ಅವಳು ಪುನಃ ಕನ್ಯೆಯಾಗಿಯೇ ಉಳಿಯುವುದು (5-14). ಅಳಿಯಂದಿರಿಗೆ ದ್ರುಪದನು ಉಡುಗೊರೆಗಳನ್ನಿತ್ತುದು (15-18).
01190001 ದ್ರುಪದ ಉವಾಚ।
01190001a ಅಶ್ರುತ್ವೈವಂ ವಚನಂ ತೇ ಮಹರ್ಷೇ। ಮಯಾ ಪೂರ್ವಂ ಯತಿತಂ ಕಾರ್ಯಮೇತತ್।
01190001c ನ ವೈ ಶಕ್ಯಂ ವಿಹಿತಸ್ಯಾಪಯಾತುಂ। ತದೇವೇದಮುಪಪನ್ನಂ ವಿಧಾನಂ।।
ದ್ರುಪದನು ಹೇಳಿದನು: “ಮಹರ್ಷಿ! ಇದಕ್ಕೆ ಮೊದಲು ನಿನ್ನ ವಚನಗಳನ್ನು ಕೇಳದೇ ಇದ್ದುದರಿಂದ ನಾನು ಆ ರೀತಿ ವರ್ತಿಸಿದೆ. ವಿಹಿತವಾಗಿರುವುದನ್ನು ತಡೆಹಿಡಿಯಲು ಶಕ್ಯವಿಲ್ಲ. ಇದೇ ವಿಧಿಯು ನಿರೂಪಿಸಿದ್ದುದು.
01190002a ದಿಷ್ಟಸ್ಯ ಗ್ರನ್ಥಿರನಿವರ್ತನೀಯಃ। ಸ್ವಕರ್ಮಣಾ ವಿಹಿತಂ ನೇಹ ಕಿಂ ಚಿತ್।
01190002c ಕೃತಂ ನಿಮಿತ್ತಂ ಹಿ ವರೈಕಹೇತೋಸ್। ತದೇವೇದಮುಪಪನ್ನಂ ಬಹೂನಾಂ।
ವಿಧಿಯು ಕಟ್ಟಿದ ಗಂಟನ್ನು ಬಿಚ್ಚಲು ಅಸಾಧ್ಯ. ತನ್ನದೇ ಕರ್ಮಗಳಿಂದ ವಿಹಿತವಾಗಿದ್ದುದು ಯಾವುದೂ ಇಲ್ಲ. ಒಬ್ಬನೇ ವರನಿಗೋಸ್ಕರ ಏರ್ಪಡಿಸಿದ್ದ ಕಾರ್ಯವನ್ನು ವಿಧಿಯು ಬಹುಮಂದಿಗೆ ವಿಹಿತಗೊಳಿಸಿದಂತಿದೆ.
01190003a ಯಥೈವ ಕೃಷ್ಣೋಕ್ತವತೀ ಪುರಸ್ತಾನ್। ನೈಕಾನ್ಪತೀನ್ಮೇ ಭಗವಾನ್ದದಾತು।
01190003c ಸ ಚಾಪ್ಯೇವಂ ವರಮಿತ್ಯಬ್ರವೀತ್ತಾಂ। ದೇವೋ ಹಿ ವೇದ ಪರಮಂ ಯದತ್ರ।
ಹಿಂದೆ ಕೃಷ್ಣೆಯು ಭಗವನ್! ನನಗೆ ಅನೇಕ ಪತಿಗಳನ್ನು ಕೊಡು ಎಂದು ಕೇಳಿಕೊಂಡವಳಾದ್ದುದರಿಂದ ಎಲ್ಲವನ್ನು ತಿಳಿದ ದೇವನು ಅವಳು ಕೇಳಿದಂತೆಯೇ ವರವನ್ನು ನೀಡಿದನು.
01190004a ಯದಿ ವಾಯಂ ವಿಹಿತಃ ಶಂಕರೇಣ। ಧರ್ಮೋಽಧರ್ಮೋ ವಾ ನಾತ್ರ ಮಮಾಪರಾಧಃ।
01190004c ಗೃಹ್ಣಂತ್ವಿಮೇ ವಿಧಿವತ್ಪಾಣಿಮಸ್ಯಾ। ಯಥೋಪಜೋಷಂ ವಿಹಿತೈಷಾಂ ಹಿ ಕೃಷ್ಣಾ।।
ಇದನ್ನು ಶಂಕರನೇ ವಿಧಿಸಿದನೆಂದಾದರೆ, ಧಾರ್ಮಿಕವಾಗಿರಲಿ ಅಥವಾ ಅಧಾರ್ಮಿಕವಾಗಿರಲಿ, ಅದರಲ್ಲಿ ನನ್ನ ಅಪರಾಧವೇನೂ ಇಲ್ಲ. ಕೃಷ್ಣೆಯು ಅವರಿಗೇ ವಿಹಿತಳಾಗಿರುವುದರಿಂದ ಅವರೆಲ್ಲರೂ ಬಯಸಿದಂತೆ ವಿಧಿವತ್ತಾಗಿ ಅವಳ ಕೈ ಹಿಡಿಯಲಿ.””
01190005 ವೈಶಂಪಾಯನ ಉವಾಚ।
01190005a ತತೋಽಬ್ರವೀದ್ಭಗವಾನ್ಧರ್ಮರಾಜಂ। ಅದ್ಯ ಪುಣ್ಯಾಹಮುತ ಪಾಂಡವೇಯ।
01190005c ಅದ್ಯ ಪೌಷ್ಯಂ ಯೋಗಮುಪೈತಿ ಚಂದ್ರಮಾಃ। ಪಾಣಿಂ ಕೃಷ್ಣಾಯಾಸ್ತ್ವಂ ಗೃಹಾಣಾದ್ಯ ಪೂರ್ವಂ।।
ವೈಶಂಪಾಯನು ಹೇಳಿದನು: “ಆಗ ಆ ಭಗವಾನನು ದರ್ಮರಾಜನಿಗೆ ಹೇಳಿದನು: “ಪಾಂಡವ! ಇದು ಪುಣ್ಯ ದಿನ. ಇಂದು ಚಂದ್ರಮನು ಪೌಷ್ಯದಲ್ಲಿದ್ದಾನೆ. ಇಂದು ಮೊದಲನೆಯದಾಗಿ ನೀನು ಕೃಷ್ಣೆಯ ಪಾಣಿಗ್ರಹಣ ಮಾಡು.”
01190006a ತತೋ ರಾಜಾ ಯಜ್ಞಸೇನಃ ಸಪುತ್ರೋ। ಜನ್ಯಾರ್ಥ ಯುಕ್ತಂ ಬಹು ತತ್ತದಗ್ರ್ಯಂ।
01190006c ಸಮಾನಯಾಮಾಸ ಸುತಾಂ ಚ ಕೃಷ್ಣಾಂ। ಆಪ್ಲಾವ್ಯ ರತ್ನೈರ್ಬಹುಭಿರ್ವಿಭೂಷ್ಯ।।
ನಂತರ ರಾಜ ಯಜ್ಞಸೇನನು ಪುತ್ರನಿಂದೊಡಗೂಡಿ ಗಂಡಿನ ಕಡೆಯವರಿಗೆ ಬಹಳ ಉಡುಗೊರೆಗಳನ್ನಿತ್ತು, ಬಹಳ ರತ್ನ ವಿಭೂಷಣಗಳಿಂದ ಅಲಂಕೃತಳಾದ ಸುತೆ ಕೃಷ್ಣೆಯನ್ನು ಅವನಿಗೆ ಒಪ್ಪಿಸಿದನು.
01190007a ತತಃ ಸರ್ವೇ ಸುಹೃದಸ್ತತ್ರ ತಸ್ಯ। ಸಮಾಜಗ್ಮುಃ ಸಚಿವಾ ಮಂತ್ರಿಣಶ್ಚ।
01190007c ದ್ರಷ್ಟುಂ ವಿವಾಹಂ ಪರಮಪ್ರತೀತಾ। ದ್ವಿಜಾಶ್ಚ ಪೌರಾಶ್ಚ ಯಥಾಪ್ರಧಾನಾಃ।।
ಅಲ್ಲಿ ಅವನ ಸುಹೃದರಯರೆಲ್ಲರೂ, ಸಚಿವ ಮಂತ್ರಿಗಣಗಳೂ, ದ್ವಿಜರೂ, ಪ್ರಮುಖ ಪೌರರೂ ಆ ಪರಮಪ್ರತೀತ ವಿವಾಹವನ್ನು ನೋಡಲು ಸೇರಿದ್ದರು.
01190008a ತತ್ತಸ್ಯ ವೇಶ್ಮಾರ್ಥಿಜನೋಪಶೋಭಿತಂ। ವಿಕೀರ್ಣಪದ್ಮೋತ್ಪಲಭೂಷಿತಾಜಿರಂ।
01190008c ಮಹಾರ್ಹರತ್ನೌಘವಿಚಿತ್ರಮಾಬಭೌ। ದಿವಂ ಯಥಾ ನಿರ್ಮಲತಾರಕಾಚಿತಂ।।
ವೇಷ್ಮಾರ್ಥಿಜನಗಳಿಂದ ಪರಿಶೋಭಿತ, ಅಲ್ಲಲ್ಲಿ ನಿರ್ಮಿಸಿದ್ದ ಪದ್ಮೋತ್ಪಲಗಳಿಂದ ಭೂಷಿತ, ಬೆಲೆಬಾಳುವ ರತ್ನ ರಾಶಿಗಳಿಂದ ಹೊಳೆಯುತ್ತಿರುವ ಅವನ ಅರಮನೆಯು ನಕ್ಷತ್ರಮಂಡಲುಗಳನ್ನುಳ್ಳ ದೇವಲೋಕವು ಬೆಳಗುವಂತೆ ಬೆಳಗುತ್ತಿತ್ತು.
01190009a ತತಸ್ತು ತೇ ಕೌರವರಾಜಪುತ್ರಾ। ವಿಭೂಷಿತಾಃ ಕುಂಡಲಿನೋ ಯುವಾನಃ।
01190009c ಮಹಾರ್ಹವಸ್ತ್ರಾ ವರಚಂದನೋಕ್ಷಿತಾಃ। ಕೃತಾಭಿಷೇಕಾಃ ಕೃತಮಂಗಲಕ್ರಿಯಾಃ।।
ಯುವ ಕೌರವರಾಜಪುತ್ರರು ಅಭ್ಯಂಜನವನ್ನು ಪಡೆದು, ಶ್ರೇಷ್ಠ ಚಂದನದಿಂದ ಲೇಪಿತರಾಗಿ, ಕುಂಡಲಗಳಿಂದ, ಅಧಿಕ ಬೆಲೆಯ ವಸ್ತ್ರಗಳಿಂದ ವಿಭೂಷಿತರಾಗಿ, ಮಂಗಲಕ್ರಿಯೆಗಳನ್ನು ಕೈಗೊಂಡರು.
01190010a ಪುರೋಹಿತೇನಾಗ್ನಿಸಮಾನವರ್ಚಸಾ। ಸಹೈವ ಧೌಮ್ಯೇನ ಯಥಾವಿಧಿ ಪ್ರಭೋ।
01190010c ಕ್ರಮೇಣ ಸರ್ವೇ ವಿವಿಶುಶ್ಚ ತತ್ಸದೋ। ಮಹರ್ಷಭಾ ಗೋಷ್ಠಮಿವಾಭಿನಂದಿನಃ।।
ಅಗ್ನಿವರ್ಚಸ ಪುರೋಹಿತ ಧೌಮ್ಯನಿಂದೊಡಗೂಡಿ ಯಥಾವಿಧಿಯಲ್ಲಿ ಎಲ್ಲರೂ ಕ್ರಮೇಣವಾಗಿ ಮಹರ್ಷಭಗಳು ಗೋವು ಇದ್ದ ಕಡೆ ಪ್ರವೇಶಿಸುವಂತೆ ಆ ಸದಸ್ಸನ್ನು ಪ್ರವೇಶಿಸಿದರು.
01190011a ತತಃ ಸಮಾಧಾಯ ಸ ವೇದಪಾರಗೋ। ಜುಹಾವ ಮಂತ್ರೈರ್ಜ್ವಲಿತಂ ಹುತಾಶನಂ।
01190011c ಯುಧಿಷ್ಠಿರಂ ಚಾಪ್ಯುಪನೀಯ ಮಂತ್ರವಿನ್। ನಿಯೋಜಯಾಮಾಸ ಸಹೈವ ಕೃಷ್ಣಯಾ।।
ಆ ವೇದಪಾರಂಗತನು ಮಂತ್ರಗಳಿಂದ ಪ್ರಜ್ವಲಿಸುತ್ತಿರುವ ಹುತಾಶನನನ್ನು ರಚಿಸಿದನು ಮತ್ತು ಹಾಗೆಯೇ ಮಂತ್ರಪೂರ್ವಕ ಕೃಷ್ಣೆಯ ಸಹಿತ ಯುಧಿಷ್ಠಿರನ ಉಪನೀಯವನ್ನು ನಿಯೋಜಿಸಿದನು.
01190012a ಪ್ರದಕ್ಷಿಣಂ ತೌ ಪ್ರಗೃಹೀತಪಾಣೀ। ಸಮಾನಯಾಮಾಸ ಸ ವೇದಪಾರಗಃ।
01190012c ತತೋಽಭ್ಯನುಜ್ಞಾಯ ತಮಾಜಿಶೋಭಿನಂ। ಪುರೋಹಿತೋ ರಾಜಗೃಹಾದ್ವಿನಿರ್ಯಯೌ।।
ಆ ವೇದಪಾರಂಗತನು ಅವರಿಬ್ಬರೂ ಕೈಗಳನ್ನು ಹಿಡಿದು ಯಜ್ಞಕುಂಡದ ಪ್ರದಕ್ಷಿಣೆಯನ್ನು ಮಾಡಿಸಿದನು. ನಂತರ ಪುರೋಹಿತನು ಆ ಅಜಿಶೋಭಿಯ ಅನುಜ್ಞೆಯಂತೆ ರಾಜಗೃಹದಿಂದ ಹಿಂದಿರುಗಿದನು.
01190013a ಕ್ರಮೇಣ ಚಾನೇನ ನರಾಧಿಪಾತ್ಮಜಾ। ವರಸ್ತ್ರಿಯಾಸ್ತೇ ಜಗೃಹುಸ್ತದಾ ಕರಂ।
01190013c ಅಹನ್ಯಹನ್ಯುತ್ತಮರೂಪಧಾರಿಣೋ। ಮಹಾರಥಾಃ ಕೌರವವಂಶವರ್ಧನಾಃ।।
ಕ್ರಮಬದ್ಧವಾಗಿ, ಒಂದೊಂದು ದಿನಗಳ ಅಂತರದಲ್ಲಿ, ಆ ಕೌರವವಂಶವರ್ಧನ ಮಹಾರಥಿ ನೃಪತಾತ್ಮಜರು ಉತ್ತಮರೂಪಧಾರಿಣಿಯನ್ನು ವರಿಸಿದರು.
01190014a ಇದಂ ಚ ತತ್ರಾದ್ಭುತರೂಪಮುತ್ತಮಂ। ಜಗಾದ ವಿಪ್ರರ್ಷಿರತೀತಮಾನುಷಂ।
01190014c ಮಹಾನುಭಾವಾ ಕಿಲ ಸಾ ಸುಮಧ್ಯಮಾ। ಬಭೂವ ಕನ್ಯೈವ ಗತೇ ಗತೇಽಹನಿ।।
ಅಲ್ಲಿ ಉತ್ತಮ ಅಮಾನುಷ ಅದ್ಭುತವೊಂದು ನಡೆಯಿತೆಂದು ಹೇಳುತ್ತಾರೆ: ಆ ಮಹಾನುಭಾವೆ, ಸುಮಧ್ಯಮೆಯು ಪ್ರತಿ ಹಗಲೂ ಪುನಃ ಕನ್ಯೆಯಾಗಿಯೇ ಉಳಿಯುತ್ತಿದ್ದಳು.
01190015a ಕೃತೇ ವಿವಾಹೇ ದ್ರುಪದೋ ಧನಂ ದದೌ। ಮಹಾರಥೇಭ್ಯೋ ಬಹುರೂಪಮುತ್ತಮಂ।
01190015c ಶತಂ ರಥಾನಾಂ ವರಹೇಮಭೂಷಿಣಾಂ। ಚತುರ್ಯುಜಾಂ ಹೇಮಖಲೀನಮಾಲಿನಾಂ।।
ವಿವಾಹವನ್ನು ಮಾಡಿಕೊಟ್ಟ ನಂತರ ದ್ರುಪದನು ಆ ಮಹಾರಥಿಗಳಿಗೆ ಉತ್ತಮ ಚಿನ್ನದಿಂದ ಮಾಡಲ್ಪಟ್ಟ ಬಹಳಷ್ಟು ನೂರು ಸುಂದರ ರಥಗಳನ್ನು, ಪ್ರತಿಯೊಂದು ರಥಕ್ಕೂ ಚಿನ್ನದ ಮೋಜುಗಳನ್ನು ಹೊಂದಿದ್ದ ನಾಲ್ಕು ನಾಲ್ಕು ಕುದುರೆಗಳನ್ನು ಉಡುಗೊರೆಯಾಗಿತ್ತನು.
01190016a ಶತಂ ಗಜಾನಾಮಭಿಪದ್ಮಿನಾಂ ತಥಾ। ಶತಂ ಗಿರೀಣಾಮಿವ ಹೇಮಶೃಂಗಿಣಾಂ।
01190016c ತಥೈವ ದಾಸೀಶತಮಗ್ರ್ಯಯೌವನಂ। ಮಹಾರ್ಹವೇಷಾಭರಣಾಂಬರಸ್ರಜಂ।।
ಪದ್ಮದ ಚಿಹ್ನೆಗಳನ್ನು ಹೊಂದಿ ಹೇಮಶೃಂಗಿ ಗಿರಿಗಳಂತಿದ್ದ ನೂರು ಗಜಗಳು, ಬೆಲೆಬಾಳುವ ವೇಷಾಭರಣಗಳಿಂದ ಸಿಂಗರಿಸಿದ್ದ ನೂರು ಯುವ ದಾಸಿಯರನ್ನೂ ನೀಡಿದನು.
01190017a ಪೃಥಕ್ ಪೃಥಕ್ಚೈವ ದಶಾಯುತಾನ್ವಿತಂ। ಧನಂ ದದೌ ಸೌಮಕಿರಗ್ನಿಸಾಕ್ಷಿಕಂ।
01190017c ತಥೈವ ವಸ್ತ್ರಾಣಿ ಚ ಭೂಷಣಾನಿ। ಪ್ರಭಾವಯುಕ್ತಾನಿ ಮಹಾಧನಾನಿ।।
ಸೌಮಿಕನು ಅಗ್ನಿಸಾಕ್ಷಮ ಪ್ರತಿಯೊಬ್ಬರಿಗೂ ಅಬ್ಜಗಳಲ್ಲಿ ಧನ, ವಸ್ತ್ರಗಳು, ಪ್ರಭಾವಯುಕ್ತ ಬೆಲೆಬಾಳುವ ಭೂಷಣಗಳನ್ನು ನೀಡಿದನು.
01190018a ಕೃತೇ ವಿವಾಹೇ ಚ ತತಃ ಸ್ಮ ಪಾಂಡವಾಃ। ಪ್ರಭೂತರತ್ನಾಮುಪಲಭ್ಯ ತಾಂ ಶ್ರಿಯಂ।
01190018c ವಿಜಹ್ರುರಿಂದ್ರಪ್ರತಿಮಾ ಮಹಾಬಲಾಃ। ಪುರೇ ತು ಪಾಂಚಾಲನೃಪಸ್ಯ ತಸ್ಯ ಹ।।
ವಿವಾಹಿತರಾದ ಮಹಾಬಲಿ ಪಾಂಡವರು ರತ್ನಗಳೊಡನೆ ಆ ಶ್ರೀಯನ್ನು ಪಡೆದು ಪಾಂಚಾಲನೃಪನ ಪುರದಲ್ಲಿ ಇಂದ್ರಪ್ರತಿಮರಾಗಿ ಉಳಿದುಕೊಂಡರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ವೈವಾಹಿಕಪರ್ವಣಿ ದ್ರೌಪದೀವಿವಾಹೇ ನವತ್ಯಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ವೈವಾಹಿಕಪರ್ವದಲ್ಲಿ ದ್ರೌಪದೀವಿವಾಹದಲ್ಲಿ ನೂರಾತೊಂಭತ್ತನೆಯ ಅಧ್ಯಾಯವು.