189 ಪಂಚೇಂದ್ರೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ವೈವಾಹಿಕ ಪರ್ವ

ಅಧ್ಯಾಯ 189

ಸಾರ

ಹಿಂದೆ ದೇವಲೋಕದಲ್ಲಿ ನಡೆದ ಘಟನೆಗಳನ್ನೂ, ಪಾಂಡವರು ಐವರು ಇಂದ್ರರೆನ್ನುವುದನ್ನೂ ಹೇಳಿ ವ್ಯಾಸನು ದ್ರುಪದನಿಗೆ ಅವರನ್ನು ತೋರಿಸುವುದು (1-40). ದ್ರೌಪದಿಯ ಪೂರ್ವಜನ್ಮವೃತ್ತಾಂತವನ್ನು ಹೇಳುವುದು (41-49).

01189001 ವ್ಯಾಸ ಉವಾಚ।
01189001a ಪುರಾ ವೈ ನೈಮಿಷಾರಣ್ಯೇ ದೇವಾಃ ಸತ್ರಮುಪಾಸತೇ।
01189001c ತತ್ರ ವೈವಸ್ವತೋ ರಾಜಂಶಾಮಿತ್ರಮಕರೋತ್ತದಾ।।

ವ್ಯಾಸನು ಹೇಳಿದನು: “ರಾಜನ್! ಬಹಳ ಹಿಂದೆ ದೇವತೆಗಳು ನೈಮಿಷಾರಣ್ಯದ ಸತ್ರವೊಂದರಲ್ಲಿ ಉಪಸ್ಥಿತರಿದ್ದರು. ವೈವಸ್ವತನು ಅದರಲ್ಲಿ ಋತ್ವಿಕನಾಗಿದ್ದನು.

01189002a ತತೋ ಯಮೋ ದೀಕ್ಷಿತಸ್ತತ್ರ ರಾಜನ್। ನಾಮಾರಯತ್ಕಿಂ ಚಿದಪಿ ಪ್ರಜಾಭ್ಯಃ।
01189002c ತತಃ ಪ್ರಜಾಸ್ತಾ ಬಹುಲಾ ಬಭೂವುಃ। ಕಾಲಾತಿಪಾತಾನ್ಮರಣಾತ್ಪ್ರಹೀಣಾಃ।।

ರಾಜನ್! ದೀಕ್ಷೆಗೊಂಡಿದ್ದ ಆ ಸಮಯದಲ್ಲಿ ಯಮನು ಪ್ರಜೆಗಳ್ಯಾರನ್ನೂ ಕೊಲ್ಲಲಿಲ್ಲ. ಹಾಗಾಗಿ ಕಾಲದ ಹೊಡೆತ ಮತ್ತು ಮರಣದಿಂದ ತಪ್ಪಿಸಿಕೊಂಡ ಪ್ರಜೆಗಳು ಹೆಚ್ಚಿನ ಸಂಖ್ಯೆಯಲ್ಲಿ ವರ್ಧಿಸಿದರು.

01189003a ತತಸ್ತು ಶಕ್ರೋ ವರುಣಃ ಕುಬೇರಃ। ಸಾಧ್ಯಾ ರುದ್ರಾ ವಸವಶ್ಚಾಶ್ವಿನೌ ಚ।
01189003c ಪ್ರಣೇತಾರಂ ಭುವನಸ್ಯ ಪ್ರಜಾಪತಿಂ। ಸಮಾಜಗ್ಮುಸ್ತತ್ರ ದೇವಾಸ್ತಥಾನ್ಯೇ।।

ಆಗ ಶಕ್ರ, ವರುಣ, ಕುಬೇರ, ಸಾಧ್ಯರು, ರುದ್ರರು, ವಸುಗಳು, ಅಶ್ವಿನಿಯರು ಮತ್ತು ಅನ್ಯ ದೇವತೆಗಳು ಭುವನ ಪ್ರಜಾಪತಿಯ ಬಳಿ ಹೋಗಿ ಸೇರಿದರು.

01189004a ತತೋಽಬ್ರುವಽಲ್ಲೋಕಗುರುಂ ಸಮೇತಾ। ಭಯಂ ನಸ್ತೀವ್ರಂ ಮಾನುಷಾಣಾಂ ವಿವೃದ್ಧ್ಯಾ।
01189004c ತಸ್ಮಾದ್ಭಯಾದುದ್ವಿಜಂತಃ ಸುಖೇಪ್ಸವಃ। ಪ್ರಯಾಮ ಸರ್ವೇ ಶರಣಂ ಭವಂತಂ।।

ಅಲ್ಲಿ ಸಮೇತರಾದ ಅವರು ಲೋಕಗುರುವಿಗೆ ಹೇಳಿದರು: “ಮನುಷ್ಯರು ವೃದ್ಧಿಯಾಗುತ್ತಿರುವುದರನ್ನು ನೋಡಿದರೆ ನಮಗೆ ತೀವ್ರ ಭಯವುಂಟಾಗಿದೆ. ಆ ಭಯದಿಂದ ನಡುಗುತ್ತಾ, ಸುಖವನ್ನರಸುತ್ತಾ ನಿನ್ನ ಶರಣರಾಗಿ ನಾವೆಲ್ಲರೂ ಬಂದಿದ್ದೇವೆ.”

01189005 ಬ್ರಹ್ಮೋವಾಚ।
01189005a ಕಿಂ ವೋ ಭಯಂ ಮಾನುಷೇಭ್ಯೋ ಯೂಯಂ ಸರ್ವೇ ಯದಾಮರಾಃ।
01189005c ಮಾ ವೋ ಮರ್ತ್ಯಸಕಾಶಾದ್ವೈ ಭಯಂ ಭವತು ಕರ್ಹಿ ಚಿತ್।।

ಬ್ರಹ್ಮನು ಹೇಳಿದನು: “ಅಮರರಾಗಿರುವ ನೀವೆಲ್ಲರೂ ಮನುಷ್ಯರಿಂದ ಏಕೆ ಭಯಪಡಬೇಕು? ಮರ್ತ್ಯರಿಂದ ನಿಮಗೆ ಎಂದೂ ಭಯವಾಗದಿರಲಿ.”

01189006 ದೇವಾ ಊಚುಃ।
01189006a ಮರ್ತ್ಯಾ ಹ್ಯಮರ್ತ್ಯಾಃ ಸಂವೃತ್ತಾ ನ ವಿಶೇಷೋಽಸ್ತಿ ಕಶ್ಚನ।
01189006c ಅವಿಶೇಷಾದುದ್ವಿಜಂತೋ ವಿಶೇಷಾರ್ಥಮಿಹಾಗತಾಃ।।

ದೇವತೆಗಳು ಹೇಳಿದರು: “ಮರ್ತ್ಯರು ಅಮರ್ತ್ಯರಾಗಿದ್ದುದರಿಂದ ನಮ್ಮೀರ್ವರಲ್ಲಿ ವ್ಯತ್ಯಾಸವೇ ಇಲ್ಲದಂತಾಗಿದೆ. ನಮ್ಮೀರ್ವರಲ್ಲಿ ವ್ಯತ್ಯಾಸವಿರಬೇಕೆಂದು ಕೇಳಿಕೊಂಡೇ ನಾವು ನಿನ್ನಲ್ಲಿಗೆ ಬಂದಿದ್ದೇವೆ.”

01189007 ಬ್ರಹ್ಮೋವಾಚ।
01189007a ವೈವಸ್ವತೋ ವ್ಯಾಪೃತಃ ಸತ್ರಹೇತೋಸ್। ತೇನ ತ್ವಿಮೇ ನ ಮ್ರಿಯಂತೇ ಮನುಷ್ಯಾಃ।
01189007c ತಸ್ಮಿನ್ನೇಕಾಗ್ರೇ ಕೃತಸರ್ವಕಾರ್ಯೇ। ತತ ಏಷಾಂ ಭವಿತೈವಾಂತಕಾಲಃ।।

ಬ್ರಹ್ಮನು ಹೇಳಿದನು: “ವೈವಸ್ವತನು ಸತ್ರದಲ್ಲಿ ಮಗ್ನನಾಗಿದ್ದಾನೆ. ಆದುದರಿಂದಲೇ ಮನುಷ್ಯರು ಸಾಯುತ್ತಿಲ್ಲ. ಏಕಾಗ್ರಚಿತ್ತದಿಂದ ಆ ಕಾರ್ಯಗಳೆಲ್ಲವನ್ನೂ ಮುಗಿಸಿದ ನಂತರ ಆ ಅಂತಕಾಲನು ಅವರಿದ್ದಲ್ಲಿಗೆ ಹಿಂದಿರುಗುತ್ತಾನೆ.

01189008a ವೈವಸ್ವತಸ್ಯಾಪಿ ತನುರ್ವಿಭೂತಾ। ವೀರ್ಯೇಣ ಯುಷ್ಮಾಕಮುತ ಪ್ರಯುಕ್ತಾ।
01189008c ಸೈಷಾಮಂತೋ ಭವಿತಾ ಹ್ಯಂತಕಾಲೇ। ತನುರ್ಹಿ ವೀರ್ಯಂ ಭವಿತಾ ನರೇಷು।।

ನಿಮ್ಮ ವೀರ್ಯಗಳಿಂದ ಪ್ರಚೋದನೆಗೊಂಡ ವೈವಸ್ವತನ ದೇಹವು ಪುಷ್ಟಿಯಾಗುತ್ತದೆ. ಆಗ ಅವನು ನರರಲ್ಲಿ ಹಿಂದಿರುಗಿ ಕಾಲವು ಅಂತ್ಯವಾಗುತ್ತದೆಯೋ ಎನ್ನುವಂತೆ ಬಹುಜನರ ನಾಶಮಾಡುತ್ತಾನೆ3.””

01189009 ವ್ಯಾಸ ಉವಾಚ।
01189009a ತತಸ್ತು ತೇ ಪೂರ್ವಜದೇವವಾಕ್ಯಂ। ಶ್ರುತ್ವಾ ದೇವಾ ಯತ್ರ ದೇವಾ ಯಜಂತೇ।
01189009c ಸಮಾಸೀನಾಸ್ತೇ ಸಮೇತಾ ಮಹಾಬಲಾ। ಭಾಗೀರಥ್ಯಾಂ ದದೃಶುಃ ಪುಂಡರೀಕಂ।।

ವ್ಯಾಸನು ಹೇಳಿದನು: “ಪೂರ್ವಜನ ದೇವವಾಕ್ಯವನ್ನು ಕೇಳಿದ ಮಹಾಬಲಿ ದೇವತೆಗಳು, ದೇವತೆಗಳು ಯಜ್ಞಮಾಡುತ್ತಿರುವ ಸ್ಥಳಕ್ಕೆ ಹೋಗಿ ಒಟ್ಟಿಗೇ ಕುಳಿತುಕೊಂಡರು. ಆಗ ಅವರು ಭಾಗೀರಥಿಯಲ್ಲಿ ತೇಲುತ್ತಿದ್ದ ಒಂದು ಪುಂಡರೀಕವನ್ನು ಕಂಡರು.

01189010a ದೃಷ್ಟ್ವಾ ಚ ತದ್ವಿಸ್ಮಿತಾಸ್ತೇ ಬಭೂವುಸ್। ತೇಷಾಮಿಂದ್ರಸ್ತತ್ರ ಶೂರೋ ಜಗಾಮ।
01189010c ಸೋಽಪಶ್ಯದ್ಯೋಷಾಮಥ ಪಾವಕಪ್ರಭಾಂ। ಯತ್ರ ಗಂಗಾ ಸತತಂ ಸಂಪ್ರಸೂತಾ।।

ಅದನ್ನು ನೋಡಿದ ಅವರು ವಿಸ್ಮಿತರಾದರು. ಅವರಲ್ಲಿ ಶೂರ ಇಂದ್ರನು ಅಲ್ಲಿಗೆ ಹೋದನು. ಸತತ ಹರಿಯುವ ಗಂಗೆಯಲ್ಲಿ ಅವನು ಅಗ್ನಿಸಮಾನ ಓರ್ವ ಸ್ತ್ರೀಯನ್ನು ಕಂಡನು.

01189011a ಸಾ ತತ್ರ ಯೋಷಾ ರುದತೀ ಜಲಾರ್ಥಿನೀ। ಗಂಗಾಂ ದೇವೀಂ ವ್ಯವಗಾಹ್ಯಾವತಿಷ್ಠತ್।
01189011c ತಸ್ಯಾಶ್ರುಬಿಂದುಃ ಪತಿತೋ ಜಲೇ ವೈ। ತತ್ಪದ್ಮಮಾಸೀದಥ ತತ್ರ ಕಾಂಚನಂ।।

ಜಲಾರ್ಥಿನಿಯಾದ ಅವಳು ದೇವಿ ಗಂಗೆಯಲ್ಲಿ ಇಳಿದು ನಿಂತು ಅಳುತ್ತಿದ್ದಾಗ ಅವಳ ಕಣ್ಣೀರು ನೀರಿನಲ್ಲಿ ಬಿದ್ದು ಕಾಂಚನದ ಕಮಲಗಳಾಗಿ ತೇಲುತ್ತಿದ್ದವು.

01189012a ತದದ್ಭುತಂ ಪ್ರೇಕ್ಷ್ಯ ವಜ್ರೀ ತದಾನೀಂ। ಅಪೃಚ್ಛತ್ತಾಂ ಯೋಷಿತಮಂತಿಕಾದ್ವೈ।
01189012c ಕಾ ತ್ವಂ ಕಥಂ ರೋದಿಷಿ ಕಸ್ಯ ಹೇತೋರ್। ವಾಕ್ಯಂ ತಥ್ಯಂ ಕಾಮಯೇಹ ಬ್ರವೀಹಿ।।

ಆ ಅದ್ಭುತವನ್ನು ನೋಡಿದ ವಜ್ರಿಯು ಅವಳ ಬಳಿಬಂದು ಅವಳನ್ನು ಪ್ರಶ್ನಿಸಿದನು: “ನೀನು ಯಾರು ಮತ್ತು ಯಾವ ಕಾರಣಕ್ಕಾಗಿ ನೀನು ಅಳುತ್ತಿರುವೆ? ನಿನಗೆ ಇಷ್ಟವಾದರೆ ಸತ್ಯವೇನೆಂದು ಹೇಳು.”

01189013 ಸ್ತ್ರೀ ಉವಾಚ।
01189013a ತ್ವಂ ವೇತ್ಸ್ಯಸೇ ಮಾಮಿಹ ಯಾಸ್ಮಿ ಶಕ್ರ। ಯದರ್ಥಂ ಚಾಹಂ ರೋದಿಮಿ ಮಂದಭಾಗ್ಯಾ।
01189013c ಆಗಚ್ಛ ರಾಜನ್ಪುರತೋಽಹಂ ಗಮಿಷ್ಯೇ। ದ್ರಷ್ಟಾಸಿ ತದ್ರೋದಿಮಿ ಯತ್ಕೃತೇಽಹಂ।।

ಸ್ತ್ರೀಯು ಹೇಳಿದಳು: “ಶಕ್ರ! ನಾನು ಯಾರು ಮತ್ತು ಯಾವ ಕಾರಣಕ್ಕಾಗಿ ಮಂದಭಾಗ್ಯೆ ನಾನು ರೋದಿಸುತ್ತಿದ್ದೇನೆ ಎಂದು ನಿನಗೆ ತಿಳಿದಿರಲೇ ಬೇಕು. ರಾಜನ್! ನಾನು ಮುಂದೆ ಹೋಗುತ್ತೇನೆ. ನೀನು ನನ್ನನ್ನು ಹಿಂಬಾಲಿಸಿ ಬಾ. ನಾನು ಏಕೆ ಅಳುತ್ತಿದ್ದೇನೆ ಎನ್ನುವುದನ್ನು ನೀನೇ ನೋಡುವೆಯಂತೆ.””

01189014 ವ್ಯಾಸ ಉವಾಚ।
01189014a ತಾಂ ಗಚ್ಛಂತೀಮನ್ವಗಚ್ಛತ್ತದಾನೀಂ। ಸೋಽಪಶ್ಯದಾರಾತ್ತರುಣಂ ದರ್ಶನೀಯಂ।
01189014c ಸಿಂಹಾಸನಸ್ಥಂ ಯುವತೀಸಹಾಯಂ। ಕ್ರೀಡಂತಮಕ್ಷೈರ್ಗಿರಿರಾಜಮೂರ್ಧ್ನಿ।।

ವ್ಯಾಸನು ಹೇಳಿದನು: “ಅವಳು ಮುಂದೆ ಹೋಗುತ್ತಿರಲು ಅವನು ಅವಳನ್ನು ಹಿಂಬಾಲಿಸಿದನು. ಅಲ್ಲಿಯೇ ಹತ್ತಿರದ ಪರ್ವತ ಶಿಖರದಲ್ಲಿ ಸಿಂಹಾಸನದಲ್ಲಿ ಕುಳಿತು ಯುವತಿಯರ ಜೊತೆ ಪಗಡೆಯಾಡುತ್ತಿದ್ದ ಓರ್ವ ಸುಂದರ ತರುಣನನ್ನು ಅವನು ನೋಡಿದನು.

01189015a ತಮಬ್ರವೀದ್ದೇವರಾಜೋ ಮಮೇದಂ। ತ್ವಂ ವಿದ್ಧಿ ವಿಶ್ವಂ ಭುವನಂ ವಶೇ ಸ್ಥಿತಂ।
01189015c ಈಶೋಽಹಮಸ್ಮೀತಿ ಸಮನ್ಯುರಬ್ರವೀದ್। ದೃಷ್ಟ್ವಾ ತಮಕ್ಷೈಃ ಸುಭೃಶಂ ಪ್ರಮತ್ತಂ।।

ಅವನು ಪಗಡೆಯಾಟದಲ್ಲಿ ಮಗ್ನನಾಗಿದ್ದುದನ್ನು ಕಂಡು ಸಿಟ್ಟಿಗೆದ್ದು ಹೇಳಿದನು: “ನಾನು ದೇವರಾಜನೆಂದು ತಿಳಿ. ವಿಶ್ವ ಭುವನವೆಲ್ಲ ನನ್ನ ವಶದಲ್ಲಿದೆ. ನಾನೇ ಒಡೆಯ.”

01189016a ಕ್ರುದ್ಧಂ ತು ಶಕ್ರಂ ಪ್ರಸಮೀಕ್ಷ್ಯ ದೇವೋ। ಜಹಾಸ ಶಕ್ರಂ ಚ ಶನೈರುದೈಕ್ಷತ।
01189016c ಸಂಸ್ತಂಭಿತೋಽಭೂದಥ ದೇವರಾಜಸ್। ತೇನೇಕ್ಷಿತಃ ಸ್ಥಾಣುರಿವಾವತಸ್ಥೇ।।

ಆ ದೇವನು ಕ್ರುದ್ಧ ಶಕ್ರನನ್ನು ನೋಡಿ ನಿಧಾನವಾಗಿ ಮುಗುಳ್ನಕ್ಕು ದಿಟ್ಟಿಸಿ ನೋಡಿದನು. ಅವನ ನೋಟದಡಿಯಲ್ಲಿ ದೇವರಾಜನು ಸಂಸ್ತಂಭಿತನಾಗಿ ಸ್ಥಾಣುವಿನಂತೆ ಅಲ್ಲಿಯೇ ನಿಂತು ಬಿಟ್ಟನು.

01189017a ಯದಾ ತು ಪರ್ಯಾಪ್ತಮಿಹಾಸ್ಯ ಕ್ರೀಡಯಾ। ತದಾ ದೇವೀಂ ರುದತೀಂ ತಾಮುವಾಚ।
01189017c ಆನೀಯತಾಮೇಷ ಯತೋಽಹಮಾರಾನ್। ಮೈನಂ ದರ್ಪಃ ಪುನರಪ್ಯಾವಿಶೇತ।।

ಕ್ರೀಡೆಯಲ್ಲಿ ಉತ್ಸಾಹವನ್ನು ಕಳೆದುಕೊಂಡ ಅವನು ರೋದಿಸುತ್ತಿರುವ ದೇವಿಯಲ್ಲಿ ಹೇಳಿದನು: “ಅವನನ್ನು ನನ್ನ ಹತ್ತಿರ ಕರೆದುಕೊಂಡು ಬಾ. ಅವನು ತನ್ನ ದರ್ಪದಿಂದ ಇನ್ನೂ ಹೆಚ್ಚು ಆವೇಶಗೊಳ್ಳದ ಹಾಗೆ ನೋಡಿಕೊಳ್ಳುತ್ತೇನೆ.”

01189018a ತತಃ ಶಕ್ರಃ ಸ್ಪೃಷ್ಟಮಾತ್ರಸ್ತಯಾ ತು। ಸ್ರಸ್ತೈರಂಗೈಃ ಪತಿತೋಽಭೂದ್ಧರಣ್ಯಾಂ।
01189018c ತಮಬ್ರವೀದ್ಭಗವಾನುಗ್ರತೇಜಾ। ಮೈವಂ ಪುನಃ ಶಕ್ರ ಕೃಥಾಃ ಕಥಂ ಚಿತ್।।

ಅವಳ ಸ್ಪರ್ಷಮಾತ್ರದಿಂದಲೇ ಶಕ್ರನು ತನ್ನ ಅಂಗಾಂಗಗಳು ಶಕ್ತಿಯನ್ನೇ ಕಳೆದುಕೊಂಡಂತಾಗಿ ಧರಣಿಯಮೇಲೆ ಕುಸಿದು ಬಿದ್ದನು. ಉಗ್ರತೇಜಸ್ವಿ ಆ ಭಗವಾನನು ಅವನಿಗೆ ಹೇಳಿದನು: “ಶಕ್ರ! ಇನ್ನು ಎಂದೂ ಪುನಃ ಹೀಗೆ ಮಾಡಬೇಡ!

01189019a ವಿವರ್ತಯೈನಂ ಚ ಮಹಾದ್ರಿರಾಜಂ। ಬಲಂ ಚ ವೀರ್ಯಂ ಚ ತವಾಪ್ರಮೇಯಂ।
01189019c ವಿವೃತ್ಯ ಚೈವಾವಿಶ ಮಧ್ಯಮಸ್ಯ। ಯತ್ರಾಸತೇ ತ್ವದ್ವಿಧಾಃ ಸೂರ್ಯಭಾಸಃ।।

ಬಲ ಮತ್ತು ವೀರ್ಯದಲ್ಲಿ ಅಪ್ರಮೇಯ ನೀನು ಈ ಮಹಾದ್ರಿರಾಜನನ್ನು ತಳ್ಳಿ ಉರುಳಿಸು. ಉರುಳಿಸಿದ ನಂತರ ಅದರ ಮಧ್ಯವನ್ನು ಪ್ರವೇಶಿಸು. ಅಲ್ಲಿ ನಿನ್ನಂತೆ ಸೂರ್ಯಭಾಸ ಇತರರನ್ನು ಕಾಣುತ್ತೀಯೆ.”

01189020a ಸ ತದ್ವಿವೃತ್ಯ ಶಿಖರಂ ಮಹಾಗಿರೇಸ್। ತುಲ್ಯದ್ಯುತೀಂಶ್ಚತುರೋಽನ್ಯಾನ್ದದರ್ಶ।
01189020c ಸ ತಾನಭಿಪ್ರೇಕ್ಷ್ಯ ಬಭೂವ ದುಃಖಿತಃ। ಕಚ್ಚಿನ್ನಾಹಂ ಭವಿತಾ ವೈ ಯಥೇಮೇ।।

ಮಹಾಗಿರಿಯ ಶಿಖರವನ್ನು ಉರುಳಿಸಿ, ಅಲ್ಲಿ ತನ್ನ ಕಾಂತಿಯನ್ನು ಹೋಲುವ ಇತರರನ್ನು ನೋಡಿದನು. ಅದನ್ನು ನೋಡಿ ಅವನು “ನಾನೂ ಇವರ ಹಾಗೆ ಆಗಿಬಿಡುತ್ತೇನೆಯೇ?” ಎಂದು ದುಃಖಿತನಾದನು.

01189021a ತತೋ ದೇವೋ ಗಿರಿಶೋ ವಜ್ರಪಾಣಿಂ। ವಿವೃತ್ಯ ನೇತ್ರೇ ಕುಪಿತೋಽಭ್ಯುವಾಚ।
01189021c ದರೀಮೇತಾಂ ಪ್ರವಿಶ ತ್ವಂ ಶತಕ್ರತೋ। ಯನ್ಮಾಂ ಬಾಲ್ಯಾದವಮಂಸ್ಥಾಃ ಪುರಸ್ತಾತ್।।

ಆಗ ಕುಪಿತ ದೇವ ಗಿರೀಶನು ಕಣ್ಣುಗಳನ್ನು ತಿರುಗಿಸುತ್ತಾ ವಜ್ರಪಾಣಿಗೆ ಹೇಳಿದನು: “ಶತಕ್ರತೋ! ನಿನ್ನ ಹುಡುಗಾಟಿಕೆಯಲ್ಲಿ ನನ್ನನ್ನು ಅವಮಾನಿಸಿದ್ದುದರಿಂದ ನೀನೂ ಈ ಬಿಲವನ್ನು ಪ್ರವೇಶಿಸು!”

01189022a ಉಕ್ತಸ್ತ್ವೇವಂ ವಿಭುನಾ ದೇವರಾಜಃ। ಪ್ರವೇಪಮಾನೋ ಭೃಶಮೇವಾಭಿಷಂಗಾತ್।
01189022c ಸ್ರಸ್ತೈರಂಗೈರನಿಲೇನೇವ ನುನ್ನಂ। ಅಶ್ವತ್ಥಪತ್ರಂ ಗಿರಿರಾಜಮೂರ್ಧ್ನಿ।।

ವಿಭುವು ಈ ರೀತಿ ಹೇಳಿದ ನಂತರ ದೇವರಾಜನು ಆ ಶಾಪದಿಂದ ನಡುಗಿದನು. ಅವನ ಅಂಗಾಂಗಗಳು ಪರ್ವತ ಶಿಖರದ ಮೇಲಿದ್ದ ಅಶ್ವತ್ಥ ವೃಕ್ಷದ ಎಲೆಗಳು ಭಿರುಗಾಳಿಗೆ ಸಿಲುಕಿದರೆ ಹೇಗೋ ಹಾಗೆ ತತ್ತರಿಸಿದವು.

01189023a ಸ ಪ್ರಾಂಜಲಿರ್ವಿನತೇನಾನನೇನ। ಪ್ರವೇಪಮಾನಃ ಸಹಸೈವಮುಕ್ತಃ।
01189023c ಉವಾಚ ಚೇದಂ ಬಹುರೂಪಮುಗ್ರಂ। ದ್ರಷ್ಟಾ ಶೇಷಸ್ಯ ಭಗವಂಸ್ತ್ವಂ ಭವಾದ್ಯ।।

ಆಗ ಅವನು ಕೈಜೋಡಿಸಿ, ಮುಖವನ್ನು ಕೆಳಮಾಡಿ, ಒಮ್ಮಿಂದೊಮ್ಮಿಗೇ ಬಂದ ಮಾತುಗಳನ್ನು ಕೇಳಿ ಕಂಪಿಸುತ್ತಾ ಆ ಬಹುರೂಪಿ ಉಗ್ರನಿಗೆ ಹೇಳಿದನು: “ಭಗವನ್! ಇಂದು ಇದರಿಂದ ಬಿಡುಗಡೆಯನ್ನು ತೋರಿಸು!”

01189024a ತಮಬ್ರವೀದುಗ್ರಧನ್ವಾ ಪ್ರಹಸ್ಯ। ನೈವಂಶೀಲಾಃ ಶೇಷಮಿಹಾಪ್ನುವಂತಿ।
01189024c ಏತೇ‌ಅಪ್ಯೇವಂ ಭವಿತಾರಃ ಪುರಸ್ತಾತ್। ತಸ್ಮಾದೇತಾಂ ದರಿಮಾವಿಶ್ಯ ಶೇಧ್ವಂ।।

ಆಗ ಆ ಉಗ್ರಧನ್ವಿಯು ನಗುತ್ತಾ ಹೇಳಿದನು: “ಹೀಗೆ ನಡೆದುಕೊಳ್ಳುವವರಿಗೆ ಇಲ್ಲಿಂದ ಬಿಡುಗಡೆಯೇ ಇಲ್ಲ. ಮುಂದೆ ಇವರೂ ಕೂಡ ನಿನ್ನಂತೆ ಆಗುತ್ತಾರೆ. ಆದುದರಿಂದ ಈ ಗುಹೆಯನ್ನು ಪ್ರವೇಶಿಸಿ ಅಲ್ಲಿಯೇ ಇರು.

01189025a ಶೇಷೋಽಪ್ಯೇವಂ ಭವಿತಾ ವೋ ನ ಸಂಶಯೋ। ಯೋನಿಂ ಸರ್ವೇ ಮಾನುಷೀಮಾವಿಶಧ್ವಂ।
01189025c ತತ್ರ ಯೂಯಂ ಕರ್ಮ ಕೃತ್ವಾವಿಷಃಯಂ। ಬಹೂನನ್ಯಾನ್ನಿಧನಂ ಪ್ರಾಪಯಿತ್ವಾ।।
01189026a ಆಗಂತಾರಃ ಪುನರೇವೇಂದ್ರಲೋಕಂ। ಸ್ವಕರ್ಮಣಾ ಪೂರ್ವಜಿತಂ ಮಹಾರ್ಹಂ।
01189026c ಸರ್ವಂ ಮಯಾ ಭಾಷಿತಮೇತದೇವಂ। ಕರ್ತವ್ಯಮನ್ಯದ್ವಿವಿಧಾರ್ಥವಚ್ಚ।।

ನಿಮಗೆಲ್ಲ ಇದರಿಂದ ಬಿಡುಗಡೆ ದೊರೆಯುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ನೀವೆಲ್ಲರೂ ಮನುಷ್ಯ ಯೋನಿಯನ್ನು ಪ್ರವೇಶಿಸಿ, ಅಲ್ಲಿ ಬಹಳಷ್ಟು ಕಷ್ಟಕರ್ಮಗಳನ್ನು ಅನುಭವಿಸಿ, ಬೇರೆ ಹಲವಾರು ಜನರನ್ನು ಸಂಹರಿಸಿ, ಪುನಃ ಇಂದ್ರಲೋಕವನ್ನು ತೆರಳುತ್ತೀರಿ. ನಿಮ್ಮದೇ ಕರ್ಮಗಳಿಂದ ಈ ಮಹಾಲೋಕವನ್ನು ಪಡೆದಿದ್ದೀರಿ. ನಾನು ಹೇಳಿದ ಇವೆಲ್ಲವನ್ನೂ ಮಾಡಬೇಕಾಗುತ್ತದೆ. ಇದಲ್ಲದೇ ಬೇರೇನೂ ಆಗುವುದಿಲ್ಲ!”

01189027 ಪೂರ್ವೇಂದ್ರಾ ಊಚುಃ।
01189027a ಗಮಿಷ್ಯಾಮೋ ಮಾನುಷಂ ದೇವಲೋಕಾದ್। ದುರಾಧರೋ ವಿಹಿತೋ ಯತ್ರ ಮೋಕ್ಷಃ।
01189027c ದೇವಾಸ್ತ್ವಸ್ಮಾನಾದಧೀರಂಜನನ್ಯಾಂ। ಧರ್ಮೋ ವಾಯುರ್ಮಘವಾನಶ್ವಿನೌ ಚ।।

ಪೂರ್ವೇಂದ್ರರು ಹೇಳಿದರು: “ದೇವಲೋಕದಿಂದ ಮೋಕ್ಷವು ದುರಾಧರವೆಂದು ವಿಹಿತವಾಗಿರುವ ಮಾನುಷ ಲೋಕಕ್ಕೆ ನಾವು ಹೋಗುತ್ತೇವೆ. ಆದರೆ ಧರ್ಮ, ವಾಯು, ಮಘವತ್ ಮತ್ತು ಅಶ್ವಿನೀ ದೇವತೆಗಳು ನಮ್ಮನ್ನು ನಮ್ಮ ತಾಯಿಯಿಂದ ಪಡೆಯಬೇಕು.””

01189028 ವ್ಯಾಸ ಉವಾಚ।
01189028a ಏತಚ್ಛೃತ್ವಾ ವಜ್ರಪಾಣಿರ್ವಚಸ್ತು। ದೇವಶ್ರೇಷ್ಠಂ ಪುನರೇವೇದಮಾಹ।
01189028c ವೀರ್ಯೇಣಾಹಂ ಪುರುಷಂ ಕಾರ್ಯಹೇತೋರ್। ದದ್ಯಾಮೇಷಾಂ ಪಂಚಮಂ ಮತ್ಪ್ರಸೂತಂ।।

ವ್ಯಾಸನು ಹೇಳಿದನು: “ಈ ಮಾತುಗಳನ್ನು ಕೇಳಿದ ವಜ್ರಪಾಣಿಯು ದೇವಶ್ರೇಷ್ಠನಲ್ಲಿ ಪುನಃ ಹೇಳಿದನು: “ಈ ಕಾರ್ಯಗಳನ್ನು ನೆರವೇರಿಸುವ ಅವರಲ್ಲಿಯ ಐದನೆಯ ಪುರುಷನನ್ನು ನನ್ನ ವೀರ್ಯದಿಂದ ಮಗನನ್ನಾಗಿ ಪಡೆಯುತ್ತೇನೆ.”

01189029a ತೇಷಾಂ ಕಾಮಂ ಭಗವಾನುಗ್ರಧನ್ವಾ। ಪ್ರಾದಾದಿಷ್ಟಂ ಸನ್ನಿಸರ್ಗಾದ್ಯಥೋಕ್ತಂ।
01189029c ತಾಂ ಚಾಪ್ಯೇಷಾಂ ಯೋಷಿತಂ ಲೋಕಕಾಂತಾಂ। ಶ್ರಿಯಂ ಭಾರ್ಯಾಂ ವ್ಯದಧಾನ್ಮಾನುಷೇಷು।।

ಉಗ್ರಧನ್ವಿ ಭಗವಂತನು ಅವರ ಇಷ್ಟವನ್ನು ಅವರು ಕೇಳಿದಹಾಗೆಯೇ ಅನುಗ್ರಹಿಸಿದನು. ಲೋಕಕಾಂತೆ ಶ್ರೀಯೇ ಮನುಷ್ಯಲೋಕದಲ್ಲಿ ಅವರ ಭಾರ್ಯೆಯಾಗಲೆಂದು ಅಪ್ಪಣೆ ಮಾಡಿದನು.

01189030a ತೈರೇವ ಸಾರ್ಧಂ ತು ತತಃ ಸ ದೇವೋ। ಜಗಾಮ ನಾರಾಯಣಮಪ್ರಮೇಯಂ।
01189030c ಸ ಚಾಪಿ ತದ್ವ್ಯದಧಾತ್ಸರ್ವಮೇವ। ತತಃ ಸರ್ವೇ ಸಂಬಭೂವುರ್ಧರಣ್ಯಾಂ।।

ಅವರ ಜೊತೆಗೇ ಆ ದೇವನು ಅಪ್ರಮೇಯ ನಾರಾಯಣನಲ್ಲಿ ಸೇರಿಕೊಂಡನು. ಅವನೂ ಕೂಡ ಎಲ್ಲವೂ ಹಾಗೆಯೇ ಆಗಲೆಂದು ಅನುಮೋದಿಸಿದನು. ನಂತರ ಎಲ್ಲರೂ ಧರಣಿಯಲ್ಲಿ ಜನಿಸಿದರು.

01189031a ಸ ಚಾಪಿ ಕೇಶೌ ಹರಿರುದ್ಬಬರ್ಹ। ಶುಕ್ಲಮೇಕಮಪರಂ ಚಾಪಿ ಕೃಷ್ಣಂ।
01189031c ತೌ ಚಾಪಿ ಕೇಶೌ ವಿಶತಾಂ ಯದೂನಾಂ। ಕುಲೇ ಸ್ತ್ರಿಯೌ ರೋಹಿಣೀಂ ದೇವಕೀಂ ಚ।
01189031e ತಯೋರೇಕೋ ಬಲದೇವೋ ಬಭೂವ। ಕೃಷ್ಣೋ ದ್ವಿತೀಯಃ ಕೇಶವಃ ಸಂಬಭೂವ।।

ಆಗ ಹರಿಯು ತನ್ನ ಶಿರದಿಂದ ಎರಡು ಕೂದಲುಗಳನ್ನು ಕಿತ್ತನು. ಅದರಲ್ಲಿ ಒಂದು ಬಿಳಿಯಾಗಿತ್ತು. ಇನ್ನೊಂದು ಕಪ್ಪಾಗಿತ್ತು. ಈ ಕೂದಲುಗಳು ಯದು ಕುಲದ ಸ್ತ್ರೀಯರಾದ ರೋಹಿಣಿ ಮತ್ತು ದೇವಕಿಯರನ್ನು ಪ್ರವೇಶಿಸಿದವು. ಅವುಗಳಲ್ಲಿ ಒಂದು ಬಲದೇವನಾಯಿತು. ಎರಡನೇ ಕಪ್ಪು ಬಣ್ಣದ್ದು ಕೇಶವನಾಗಿ ಜನಿಸಿತು.

01189032a ಯೇ ತೇ ಪೂರ್ವಂ ಶಕ್ರರೂಪಾ ನಿರುದ್ಧಾಸ್। ತಸ್ಯಾಂ ದರ್ಯಾಂ ಪರ್ವತಸ್ಯೋತ್ತರಸ್ಯ।
01189032c ಇಹೈವ ತೇ ಪಾಂಡವಾ ವೀರ್ಯವಂತಃ। ಶಕ್ರಸ್ಯಾಂಶಃ ಪಾಂಡವಃ ಸವ್ಯಸಾಚೀ।।

ಆ ಪರ್ವತ ಕಣಿವೆಯ ಗುಹೆಯಲ್ಲಿ ಬಂಧಿಗಳಾಗಿದ್ದ ಪೂರ್ವ ಶಕ್ರರೇ ಇಲ್ಲಿ ವೀರ್ಯವಂತ ಪಾಂಡವರಾಗಿ ಜನಿಸಿದ್ದಾರೆ. ಪಾಂಡವ ಸವ್ಯಸಾಚಿಯು ಶಕ್ರನ ಅಂಶದವನು.

01189033a ಏವಮೇತೇ ಪಾಂಡವಾಃ ಸಂಬಭೂವುರ್। ಯೇ ತೇ ರಾಜನ್ಪೂರ್ವಮಿಂದ್ರಾ ಬಭೂವುಃ।
01189033c ಲಕ್ಷ್ಮೀಶ್ಚೈಷಾಂ ಪೂರ್ವಮೇವೋಪದಿಷ್ಟಾ। ಭಾರ್ಯಾ ಯೈಷಾ ದ್ರೌಪದೀ ದಿವ್ಯರೂಪಾ।।

ರಾಜನ್! ಪೂರ್ವದಲ್ಲಿ ಇಂದ್ರರಾಗಿದ್ದವರೇ ಪಾಂಡವರಾಗಿ ಹುಟ್ಟಿದ್ದಾರೆ. ಪೂರ್ವದಲ್ಲಿಯೇ ಇವರ ಪತ್ನಿಯಾಗಲೆಂದು ನಿರ್ಧರಿಸಲ್ಪಟ್ಟ ಲಕ್ಷ್ಮಿಯು ದಿವ್ಯರೂಪಿ ದ್ರೌಪದಿಯಾಗಿ ಜನಿಸಿದ್ದಾಳೆ.

01189034a ಕಥಂ ಹಿ ಸ್ತ್ರೀ ಕರ್ಮಣೋಽಂತೇ ಮಹೀತಲಾತ್। ಸಮುತ್ತಿಷ್ಠೇದನ್ಯತೋ ದೈವಯೋಗಾತ್।
01189034c ಯಸ್ಯಾ ರೂಪಂ ಸೋಮಸೂರ್ಯಪ್ರಕಾಶಂ। ಗಂಧಶ್ಚಾಗ್ರ್ಯಃ ಕ್ರೋಶಮಾತ್ರಾತ್ಪ್ರವಾತಿ।।

ದೈವಯೋಗದ ಹೊರತು ಬೇರೆ ಹೇಗೆ ಕರ್ಮಾಂತರದಲ್ಲಿ ಮಹೀತಲದಿಂದ ಸೋಮಸೂರ್ಯಪ್ರಕಾಶದ ರೂಪ ಮತ್ತು ಕೋಶಮಾತ್ರದವರೆಗೆ ಪಸರಿಸುವ ಸುಗಂಧವನ್ನು ಹೊಂದಿದ ಸ್ತ್ರೀಯು ಉದ್ಭವಿಸಬಲ್ಲಳು?

01189035a ಇದಂ ಚಾನ್ಯತ್ಪ್ರೀತಿಪೂರ್ವಂ ನರೇಂದ್ರ। ದದಾಮಿ ತೇ ವರಮತ್ಯದ್ಭುತಂ ಚ।
01189035c ದಿವ್ಯಂ ಚಕ್ಷುಃ ಪಶ್ಯ ಕುಂತೀಸುತಾಂಸ್ತ್ವಂ। ಪುಣ್ಯೈರ್ದಿವ್ಯೈಃ ಪೂರ್ವದೇಹೈರುಪೇತಾನ್।।

ನರೇಂದ್ರ! ಪ್ರೀತಿಪೂರ್ವಕವಾಗಿ ನಿನಗೆ ಅದ್ಭುತ ವರವನ್ನು ನೀಡುತ್ತೇನೆ. ದಿವ್ಯ ಚಕ್ಷುಗಳಿಂದ ಕುಂತೀಪುತ್ರರನ್ನು ಅವರ ಪುಣ್ಯ ದಿವ್ಯ ಪೂರ್ವ ದೇಹರೂಪಗಳಲ್ಲಿ ನೋಡು!””

01189036 ವೈಶಂಪಾಯನ ಉವಾಚ।
01189036a ತತೋ ವ್ಯಾಸಃ ಪರಮೋದಾರಕರ್ಮಾ। ಶುಚಿರ್ವಿಪ್ರಸ್ತಪಸಾ ತಸ್ಯ ರಾಜ್ಞಃ।
01189036c ಚಕ್ಷುರ್ದಿವ್ಯಂ ಪ್ರದದೌ ತಾನ್ಸ ಸರ್ವಾನ್। ರಾಜಾಪಶ್ಯತ್ಪೂರ್ವದೇಹೈರ್ಯಥಾವತ್।।

ವೈಶಂಪಾಯನನು ಹೇಳಿದನು: “ಪರಮ ಉದಾರಕರ್ಮಿ ಶುಚಿ ವಿಪ್ರ ವ್ಯಾಸನು ತನ್ನ ತಪಸ್ಸಿನಿಂದ ರಾಜನಿಗೆ ದಿವ್ಯ ದೃಷ್ಟಿಯನ್ನು ನೀಡಿದನು. ರಾಜನು ಅವರೆಲ್ಲರನ್ನೂ ಅವರ ಪೂರ್ವದೇಹದಲ್ಲಿ ಹೇಗಿದ್ದರೋ ಹಾಗೆ ನೋಡಿದನು.

01189037a ತತೋ ದಿವ್ಯಾನ್ ಹೇಮಕಿರೀಟಮಾಲಿನಃ। ಶಕ್ರಪ್ರಖ್ಯಾನ್ಪಾವಕಾದಿತ್ಯವರ್ಣಾನ್।
01189037c ಬದ್ಧಾಪೀಡಾಂಶ್ಚಾರುರೂಪಾಂಶ್ಚ ಯೂನೋ। ವ್ಯೂಢೋರಸ್ಕಾಂಸ್ತಾಲಮಾತ್ರಾಂದದರ್ಶ।।

ದಿವ್ಯ ಹೇಮಕಿರೀಟಮಾಲೆಗಳನ್ನು ಧರಿಸಿ, ಪಾವಕಾದಿತ್ಯ ವರ್ಣಿಗಳಾದ, ಆಭರಣಗಳನ್ನು ಧರಿಸಿದ್ದ, ವಿಶಾಲ ಎದೆಗಳ, ಎತ್ತರವಾಗಿ, ಇಂದ್ರರಂತಿದ್ದ ಪ್ರತಿಯೊಬ್ಬ ಯುವಕನನ್ನೂ ನೋಡಿದನು.

01189038a ದಿವ್ಯೈರ್ವಸ್ತ್ರೈರರಜೋಭಿಃ ಸುವರ್ಣೈರ್। ಮಾಲ್ಯೈಶ್ಚಾಗ್ರ್ಯೈಃ ಶೋಭಮಾನಾನತೀವ।
01189038c ಸಾಕ್ಷಾತ್ತ್ರ್ಯಕ್ಷಾನ್ವಸವೋ ವಾಥ ದಿವ್ಯಾನ್। ಆದಿತ್ಯಾನ್ವಾ ಸರ್ವಗುಣೋಪಪನ್ನಾನ್।
01189038e ತಾನ್ಪೂರ್ವೇಂದ್ರಾನೇವಮೀ‌ಈಕ್ಷ್ಯಾಭಿರೂಪಾನ್। ಪ್ರೀತೋ ರಾಜಾ ದ್ರುಪದೋ ವಿಸ್ಮಿತಶ್ಚ।।

ಮಲಿನವಾಗದ ದಿವ್ಯ ಸುವರ್ಣ ವಸ್ತ್ರಗಳನ್ನು ಧರಿಸಿದ್ದ, ಆರಿಸಿದ್ದ ಮಾಲೆಗಳಿಂದ ಅತೀವ ಶೋಭಾಯಮಾನರಾದ, ಸಾಕ್ಷಾತ್ ಮುಕ್ಕಣ್ಣನೋ ಅಥವಾ ದಿವ್ಯ ವಸವರೋ ಎಂದು ತೋರುತ್ತಿದ್ದ, ಆದಿತ್ಯರಂತೆ ಸರ್ವಗುಣೋಪಪನ್ನರಾದ, ಅಭಿರೂಪಿ ಆ ಪೂರ್ವೇಂದ್ರರನ್ನು ನೋಡಿದ ರಾಜ ದ್ರುಪದನು ವಿಸ್ಮಿತನೂ ಸಂಪ್ರೀತನೂ ಆದನು.

01189039a ದಿವ್ಯಾಂ ಮಾಯಾಂ ತಾಮವಾಪ್ಯಾಪ್ರಮೇಯಾಂ। ತಾಂ ಚೈವಾಗ್ರ್ಯಾಂ ಶ್ರಿಯಮಿವ ರೂಪಿಣೀಂ ಚ।
01189039c ಯೋಗ್ಯಾಂ ತೇಷಾಂ ರೂಪತೇಜೋಯಶೋಭಿಃ। ಪತ್ನೀಮೃದ್ಧಾಂ ದೃಷ್ಟವಾನ್ಪಾರ್ಥಿವೇಂದ್ರಃ।।

ಪಾರ್ಥಿವೇಂದ್ರನು ಅಪ್ಯಾಪ್ರಮೇಯ ದಿವ್ಯ ಮಾಯೆಯಿಂದ ಅವರ ರೂಪತೇಜಸ್ಸು ಮತ್ತು ಯಶಸ್ಸನ್ನು ಹೋಲುವ ಆ ರೂಪಿಣಿ ಶ್ರೀಯನ್ನೂ ನೋಡಿದನು.

01189040a ಸ ತದ್ದೃಷ್ಟ್ವಾ ಮಹದಾಶ್ಚರ್ಯರೂಪಂ। ಜಗ್ರಾಹ ಪಾದೌ ಸತ್ಯವತ್ಯಾಃ ಸುತಸ್ಯ।
01189040c ನೈತಚ್ಚಿತ್ರಂ ಪರಮರ್ಷೇ ತ್ವಯೀತಿ। ಪ್ರಸನ್ನಚೇತಾಃ ಸ ಉವಾಚ ಚೈನಂ।।

ಆ ಮಹಾದಾಶ್ಚರ್ಯ ರೂಪವನ್ನು ನೋಡಿ ಪ್ರಸನ್ನನಾದ ಅವನು ಸತ್ಯವತೀಸುತನ ಪಾದಗಳನ್ನು ಹಿಡಿದು “ಪರಮರ್ಷಿ! ನಿನಗೆ ಇದು ಅದ್ಭುತವೇನಲ್ಲ!” ಎಂದನು.

01189041 ವ್ಯಾಸ ಉವಾಚ।
01189041a ಆಸೀತ್ತಪೋವನೇ ಕಾ ಚಿದೃಷೇಃ ಕನ್ಯಾ ಮಹಾತ್ಮನಃ।
01189041c ನಾಧ್ಯಗಚ್ಛತ್ಪತಿಂ ಸಾ ತು ಕನ್ಯಾ ರೂಪವತೀ ಸತೀ।।

ವ್ಯಾಸನು ಹೇಳಿದನು: “ಒಮ್ಮೆ ಯಾವುದೋ ತಪೋವನದಲ್ಲಿ ಮಹಾತ್ಮನೋರ್ವನ ಮಗಳಿದ್ದಳು. ಸತೀ ರೂಪವತಿಯಾಗಿದ್ದರೂ ಆ ಕನ್ಯೆಗೆ ಪತಿಯು ದೊರೆಯಲಿಲ್ಲ.

01189042a ತೋಷಯಾಮಾಸ ತಪಸಾ ಸಾ ಕಿಲೋಗ್ರೇಣ ಶಂಕರಂ।
01189042c ತಾಮುವಾಚೇಶ್ವರಃ ಪ್ರೀತೋ ವೃಣು ಕಾಮಮಿತಿ ಸ್ವಯಂ।।

ಬೇರೆಯವರು ಹೇಳುವಂತೆ ಅವಳು ಉಗ್ರ ತಪಸ್ಸಿನಿಂದ ಶಂಕರನನ್ನು ತೃಪ್ತಿಪಡಿಸಿದಳು. ಪ್ರೀತ ಈಶ್ವರನು ತಾನಾಗಿಯೇ “ನಿನಗಿಷ್ಟ ವರವನ್ನು ಕೇಳು!” ಎಂದನು.

01189043a ಸೈವಮುಕ್ತಾಬ್ರವೀತ್ಕನ್ಯಾ ದೇವಂ ವರದಮೀಶ್ವರಂ।
01189043c ಪತಿಂ ಸರ್ವಗುಣೋಪೇತಮಿಚ್ಛಾಮೀತಿ ಪುನಃ ಪುನಃ।।

ವರದ ಈಶ್ವರ ದೇವನಲ್ಲಿ ಆ ಕನ್ಯೆಯು “ಸರ್ವಗುಣೋಪೇತ ಪತಿಯನ್ನು ಬಯಸುತ್ತೇನೆ!” ಎಂದು ಪುನಃ ಪುನಃ ಕೇಳಿಕೊಂಡಳು.

01189044a ದದೌ ತಸ್ಯೈ ಸ ದೇವೇಶಸ್ತಂ ವರಂ ಪ್ರೀತಿಮಾಂಸ್ತದಾ।
01189044c ಪಂಚ ತೇ ಪತಯಃ ಶ್ರೇಷ್ಠಾ ಭವಿಷ್ಯಂತೀತಿ ಶಂಕರಃ।।

ಪ್ರೀತಿಮಾನ್ ದೇವ ಶಂಕರನು ಅವಳಿಗೆ “ನಿನಗೆ ಐವರು ಶ್ರೇಷ್ಠ ಪತಿಗಳಾಗುತ್ತಾರೆ!” ಎಂದು ವರವನ್ನಿತ್ತನು.

01189045a ಸಾ ಪ್ರಸಾದಯತೀ ದೇವಮಿದಂ ಭೂಯೋಽಭ್ಯಭಾಷತ।
01189045c ಏಕಂ ಪತಿಂ ಗುಣೋಪೇತಂ ತ್ವತ್ತೋಽರ್ಹಾಮೀತಿ ವೈ ತದಾ।
01189045e ತಾಂ ದೇವದೇವಃ ಪ್ರೀತಾತ್ಮಾ ಪುನಃ ಪ್ರಾಹ ಶುಭಂ ವಚಃ।।

ಪುನಃ ಪೂಜಿಸುತ್ತಾ ಅವಳು ದೇವನಿಗೆ ಹೇಳಿದಳು: “ನಿನ್ನಿಂದ ನಾನು ಒಬ್ಬನೇ ಗುಣೋಪೇತ ಪತಿಯನ್ನು ಕೇಳುತ್ತಿದ್ದೇನೆ.” ಆಗ ಆ ಪ್ರೀತಾತ್ಮ ದೇವದೇವನು ಪುನಃ ಈ ಶುಭವಚನಗಳನ್ನಾಡಿದನು:

01189046a ಪಂಚಕೃತ್ವಸ್ತ್ವಯಾ ಉಕ್ತಃ ಪತಿಂ ದೇಹೀತ್ಯಹಂ ಪುನಃ।
01189046c ತತ್ತಥಾ ಭವಿತಾ ಭದ್ರೇ ತವ ತದ್ಭದ್ರಮಸ್ತು ತೇ।
01189046e ದೇಹಮನ್ಯಂ ಗತಾಯಾಸ್ತೇ ಯಥೋಕ್ತಂ ತದ್ಭವಿಷ್ಯತಿ।।

“ನೀನು ನನ್ನಲ್ಲಿ ಪತಿಯನ್ನು ಕೊಡು ಎಂದು ಐದು ಬಾರಿ ಪುನಃ ಪುನಃ ಕೇಳಿಕೊಂಡೆ. ಭದ್ರೇ! ಅದು ಹಾಗೆಯೇ ಆಗುತ್ತದೆ. ನಿನಗೆ ಮಂಗಳವಾಗಲಿ. ಅನ್ಯ ದೇಹವನ್ನು ಸೇರಿದಾಗ ನೀನು ಕೇಳಿದಂತೆಯೇ ಆಗುತ್ತದೆ.”

01189047a ದ್ರುಪದೈಷಾ ಹಿ ಸಾ ಜಜ್ಞೇ ಸುತಾ ತೇ ದೇವರೂಪಿಣೀ।
01189047c ಪಂಚಾನಾಂ ವಿಹಿತಾ ಪತ್ನೀ ಕೃಷ್ಣಾ ಪಾರ್ಷತ್ಯನಿಂದಿತಾ।।

ದ್ರುಪದ! ಅವಳೇ ನಿನ್ನ ಈ ದೇವರೂಪಿಣಿ ಮಗಳಾಗಿ ಜನಿಸಿದ್ದಾಳೆ. ಕೃಷ್ಣಾ ಪಾಂಚಾಲಿಯು ಐವರ ಪತ್ನಿಯಾಗಿಯೂ ಅನಿಂದಿತೆಯಾಗಿರುತ್ತಾಳೆಂದು ವಿಹಿತವಾಗಿದೆ.

01189048a ಸ್ವರ್ಗಶ್ರೀಃ ಪಾಂಡವಾರ್ಥಾಯ ಸಮುತ್ಪನ್ನಾ ಮಹಾಮಖೇ।
01189048c ಸೇಹ ತಪ್ತ್ವಾ ತಪೋ ಘೋರಂ ದುಹಿತೃತ್ವಂ ತವಾಗತಾ।।

ಘೋರ ತಪಸ್ಸನ್ನು ತಪಿಸಿ, ಪಾಂಡವರಿಗಾಗಿ ಸ್ವರ್ಗಶ್ರೀಯು ಮಹಾಮಖದಲ್ಲಿ ನಿನ್ನ ಮಗಳಾಗಿ ಹುಟ್ಟಿದಳು.

01189049a ಸೈಷಾ ದೇವೀ ರುಚಿರಾ ದೇವಜುಷ್ಟಾ। ಪಂಚಾನಾಮೇಕಾ ಸ್ವಕೃತೇನ ಕರ್ಮಣಾ।
01189049c ಸೃಷ್ಟಾ ಸ್ವಯಂ ದೇವಪತ್ನೀ ಸ್ವಯಂಭುವಾ। ಶ್ರುತ್ವಾ ರಾಜನ್ದ್ರುಪದೇಷ್ಟಂ ಕುರುಷ್ವ।।

ಸ್ವಯಂ ಸ್ವಯಂಭುವನಿಂದ ಸೃಷ್ಟಳಾದ ದೇವತೆಗಳೂ ಬಯಸುವ ಈ ದೇವಪತ್ನಿ ದೇವಿಯು ತಾನೇ ಮಾಡಿದ ಕರ್ಮಗಳಿಂದ ಈ ಐವರಿಗೆ ಒಬ್ಬಳೇ ಪತ್ನಿಯಾಗುವಳು. ರಾಜನ್! ದ್ರುಪದ! ಇದನ್ನು ಕೇಳಿದ ನೀನು ನಿನಗಿಷ್ಟವಾದುದನ್ನು ಮಾಡು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ವೈವಾಹಿಕಪರ್ವಣಿ ಪಂಚೇಂದ್ರೋಪಾಖ್ಯಾನೇ ಏಕೋನನವತ್ಯಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ವೈವಾಹಿಕಪರ್ವದಲ್ಲಿ ಪಂಚೇಂದ್ರೋಪಾಖ್ಯಾನದಲ್ಲಿ ನೂರಾಎಂಭತ್ತೊಂಭತ್ತನೆಯ ಅಧ್ಯಾಯವು.