188 ವ್ಯಾಸವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ವೈವಾಹಿಕ ಪರ್ವ

ಅಧ್ಯಾಯ 188

ಸಾರ

ಒಬ್ಬ ಸ್ತ್ರೀಯು ಹಲವಾರು ಪುರುಷರ ಪತ್ನಿಯಾದರೆ ಧರ್ಮಸಂಕರವಾಗುವುದಿಲ್ಲವೇ ಎಂದು ಕೇಳಲು ವ್ಯಾಸನು ಎಲ್ಲರ ಅಭಿಪ್ರಾಯಗಳನ್ನು ಕೇಳುವುದು (1-19). ಸನಾತನ ಧರ್ಮವನ್ನು ದ್ರುಪದನಿಗೆ ಮಾತ್ರ ಹೇಳುವುದಾಗಿ ವ್ಯಾಸನು ದ್ರುಪದನನ್ನು ಅಂತಃಪುರದ ಏಕಾಂತಕ್ಕೆ ಕರೆದುಕೊಂಡು ಹೋದುದು (20-22).

01188001 ವೈಶಂಪಾಯನ ಉವಾಚ।
01188001a ತತಸ್ತೇ ಪಾಂಡವಾಃ ಸರ್ವೇ ಪಾಂಚಾಲ್ಯಶ್ಚ ಮಹಾಯಶಾಃ।
01188001c ಪ್ರತ್ಯುತ್ಥಾಯ ಮಹಾತ್ಮಾನಂ ಕೃಷ್ಣಂ ದೃಷ್ಟ್ವಾಭ್ಯಪೂಜಯನ್।।

ವೈಶಂಪಾಯನನು ಹೇಳಿದನು: “ಮಾಹಾತ್ಮ ಕೃಷ್ಣನನ್ನು ನೋಡಿದಾಕ್ಷಣವೇ ಮಹಾಯಶ ಪಾಂಡವ ಮತ್ತು ಪಾಂಚಾಲ ಸರ್ವರೂ ಮೇಲೆದ್ದು ಪೂಜಿಸಿದರು.

01188002a ಪ್ರತಿನಂದ್ಯ ಸ ತಾನ್ಸರ್ವಾನ್ಪೃಷ್ಟ್ವಾ ಕುಶಲಮಂತತಃ।
01188002c ಆಸನೇ ಕಾಂಚನೇ ಶುಭ್ರೇ ನಿಷಸಾದ ಮಹಾಮನಾಃ।।

ಅವರೆಲ್ಲರಿಗೂ ಪ್ರತಿವಂದಿಸಿ ಕುಶಲವನ್ನು ವಿಚಾರಿಸಿದ ಮಹಾಮನನು ಶುಭ್ರ ಕಾಂಚನದ ಆಸನದಲ್ಲಿ ಕುಳಿತುಕೊಂಡನು.

01188003a ಅನುಜ್ಞಾತಾಸ್ತು ತೇ ಸರ್ವೇ ಕೃಷ್ಣೇನಾಮಿತತೇಜಸಾ।
01188003c ಆಸನೇಷು ಮಹಾರ್ಹೇಷು ನಿಷೇದುರ್ದ್ವಿಪದಾಂ ವರಾಃ।।

ಅಮಿತತೇಜಸ್ವಿ ಮಹರ್ಷಿ ದ್ವಿಪದರಲ್ಲಿ ಶ್ರೇಷ್ಠ ಕೃಷ್ಣನಿಂದ ಅನುಜ್ಞೆಯನ್ನು ಪಡೆದ ಎಲ್ಲರೂ ತಮ್ಮ ತಮ್ಮ ಆಸನಗಳಲ್ಲಿ ಕುಳಿತುಕೊಂಡರು.

01188004a ತತೋ ಮುಹೂರ್ತಾನ್ಮಧುರಾಂ ವಾಣೀಮುಚ್ಚಾರ್ಯ ಪಾರ್ಷತಃ।
01188004c ಪಪ್ರಚ್ಛ ತಂ ಮಹಾತ್ಮಾನಂ ದ್ರೌಪದ್ಯರ್ಥೇ ವಿಶಾಂ ಪತಿಃ।।

ಸ್ವಲ್ಪಸಮಯದ ನಂತರ ವಿಶಾಂಪತಿ ಪಾರ್ಷತನು ಮಧುರ ವಾಣಿಯಲ್ಲಿ ದ್ರೌಪದಿಯ ಕುರಿತು ಮಹಾತ್ಮನನ್ನು ಕೇಳಿದನು.

01188005a ಕಥಮೇಕಾ ಬಹೂನಾಂ ಸ್ಯಾನ್ನ ಚ ಸ್ಯಾದ್ಧರ್ಮಸಂಕರಃ।
01188005c ಏತನ್ನೋ ಭಗವಾನ್ಸರ್ವಂ ಪ್ರಬ್ರವೀತು ಯಥಾತಥಂ।।

“ಒಬ್ಬ ಸ್ತ್ರೀಯು ಹಲವಾರು ಪುರುಷರ ಪತ್ನಿಯಾದರೂ ಧರ್ಮಸಂಕರವಾಗದೇ ಇರುವುದು ಹೇಗೆ ಸಾಧ್ಯ? ಭಗವನ್! ಇವೆಲ್ಲವನ್ನೂ ಯಥಾವತ್ತಾಗಿ ನಮಗೆ ಹೇಳು.”

01188006 ವ್ಯಾಸ ಉವಾಚ।
01188006a ಅಸ್ಮಿನ್ಧರ್ಮೇ ವಿಪ್ರಲಂಭೇ ಲೋಕವೇದವಿರೋಧಕೇ।
01188006c ಯಸ್ಯ ಯಸ್ಯ ಮತಂ ಯದ್ಯಚ್ಛ್ರೋತುಮಿಚ್ಛಾಮಿ ತಸ್ಯ ತತ್।।

ವ್ಯಾಸನು ಹೇಳಿದನು: “ಧರ್ಮಕ್ಕೆ ವಿಪ್ರಲಂಭವೆನಿಸಿಕೊಂಡ, ಲೋಕವೇದಗಳಿಗೆ ವಿರೋಧವೆನಿಸುವ ಇದರ ಕುರಿತು ನೀವು ಪ್ರತಿಯೊಬ್ಬರ ಸ್ವಂತ ಅಭಿಪ್ರಾಯಗಳನ್ನು ತಿಳಿಯ ಬಯಸುತ್ತೇನೆ.”

01188007 ದ್ರುಪದ ಉವಾಚ।
01188007a ಅಧರ್ಮೋಽಯಂ ಮಮ ಮತೋ ವಿರುದ್ಧೋ ಲೋಕವೇದಯೋಃ।
01188007c ನ ಹ್ಯೇಕಾ ವಿದ್ಯತೇ ಪತ್ನೀ ಬಹೂನಾಂ ದ್ವಿಜಸತ್ತಮ।।

ದ್ರುಪದನು ಹೇಳಿದನು: “ಲೋಕವೇದ ವಿರುದ್ಧವಾದ ಇದು ಅಧರ್ಮವೆಂದು ನನ್ನ ಮತ. ದ್ವಿಜಸತ್ತಮ! ಬಹುಮಂದಿಗಳಿಗೆ ಪತ್ನಿಯು ಒಬ್ಬಳೇ ಇರುವುದಿಲ್ಲ.

01188008a ನ ಚಾಪ್ಯಾಚರಿತಃ ಪೂರ್ವೈರಯಂ ಧರ್ಮೋ ಮಹಾತ್ಮಭಿಃ।
01188008c ನ ಚ ಧರ್ಮೋಽಪ್ಯನೇಕಸ್ಥಶ್ಚರಿತವ್ಯಃ ಸನಾತನಃ।।

ಹಿಂದೆಂದೂ ಮಹಾತ್ಮರು ಯಾರೂ ಈ ಧರ್ಮವನ್ನು ಆಚರಿಸಲಿಲ್ಲ. ಒಬ್ಬನಿಗಿಂಥ ಹೆಚ್ಚು ಪತಿಯನ್ನು ಹೊಂದುವುದು ಸನಾತನ ಧರ್ಮವಲ್ಲ ಮತ್ತು ಆಚರಿಸುವಂತಿಲ್ಲ.

01188009a ಅತೋ ನಾಹಂ ಕರೋಮ್ಯೇವಂ ವ್ಯವಸಾಯಂ ಕ್ರಿಯಾಂ ಪ್ರತಿ।
01188009c ಧರ್ಮಸಂದೇಹಸಂದಿಗ್ಧಂ ಪ್ರತಿಭಾತಿ ಹಿ ಮಾಮಿದಂ।।

ಆದುದರಿಂದ ನಾನು ಇದನ್ನು ನಡೆಸಿಕೊಡಬೇಕೋ ಬೇಡವೋ ಎಂದು ನಿರ್ಧರಿಸಲಾರೆ. ನನಗೆ ಇದೊಂದು ಧರ್ಮಸಂದೇಹ ಸಂದಿಗ್ಧವೆಂದು ತೋರುತ್ತದೆ.”

01188010 ಧೃಷ್ಟದ್ಯುಮ್ನ ಉವಾಚ।
01188010a ಯವೀಯಸಃ ಕಥಂ ಭಾರ್ಯಾಂ ಜ್ಯೇಷ್ಠೋ ಭ್ರಾತಾ ದ್ವಿಜರ್ಷಭ।
01188010c ಬ್ರಹ್ಮನ್ಸಮಭಿವರ್ತೇತ ಸದ್ವೃತ್ತಃ ಸಂಸ್ತಪೋಧನ।।

ಧೃಷ್ಟಧ್ಯುಮ್ನನು ಹೇಳಿದನು: “ದ್ವಿಜರ್ಷಭ! ಬ್ರಹ್ಮನ್! ತಪೋಧನ! ಜ್ಯೇಷ್ಠ ಭ್ರಾತನು ತನ್ನ ತಮ್ಮನ ಭಾರ್ಯೆಯೊಂದಿಗೆ ಕೂಡಿಕೊಂಡೂ ಧರ್ಮವಂತನಾಗಿರಲು ಹೇಗೆ ಸಾಧ್ಯ?

01188011a ನ ತು ಧರ್ಮಸ್ಯ ಸೂಕ್ಷ್ಮತ್ವಾದ್ಗತಿಂ ವಿದ್ಮಃ ಕಥಂ ಚನ।
01188011c ಅಧರ್ಮೋ ಧರ್ಮ ಇತಿ ವಾ ವ್ಯವಸಾಯೋ ನ ಶಕ್ಯತೇ।।
01188012a ಕರ್ತುಮಸ್ಮದ್ವಿಧೈರ್ಬ್ರಹ್ಮಂಸ್ತತೋ ನ ವ್ಯವಸಾಮ್ಯಹಂ।
01188012c ಪಂಚಾನಾಂ ಮಹಿಷೀ ಕೃಷ್ಣಾ ಭವತ್ವಿತಿ ಕಥಂ ಚನ।।

ಸೂಕ್ಷ್ಮ ಧರ್ಮದ ಗತಿಯನ್ನು ಅರ್ಥಮಾಡಿಕೊಳ್ಳಲು ಎಂದೂ ಸಾಧ್ಯವಾಗಲಾರದು. ಬ್ರಹ್ಮನ್! ಇದು ಧರ್ಮವೋ ಅಧರ್ಮವೋ ಎಂದು ನಿರ್ಧರಿಸುವುದು ನಮ್ಮಂಥವರಿಗೆ ಶಕ್ಯವಿಲ್ಲ. ಆದುದರಿಂದ ಕೃಷ್ಣೆಯು ಐವರ ರಾಣಿಯಾಗಬಹುದೋ ಅಥವಾ ಇಲ್ಲವೋ ಎಂದು ನಿರ್ಧರಿಸಲು ನಮಗೆ ಸಾಧ್ಯವಾಗುತ್ತಿಲ್ಲ.”

01188013 ಯುಧಿಷ್ಠಿರ ಉವಾಚ।
01188013a ನ ಮೇ ವಾಗನೃತಂ ಪ್ರಾಹ ನಾಧರ್ಮೇ ಧೀಯತೇ ಮತಿಃ।
01188013c ವರ್ತತೇ ಹಿ ಮನೋ ಮೇಽತ್ರ ನೈಷೋಽಧರ್ಮಃ ಕಥಂ ಚನ।।

ಯುಧಿಷ್ಠಿರನು ಹೇಳಿದನು: “ನನ್ನ ಮಾತು ಸುಳ್ಳನ್ನಾಡುವುದಿಲ್ಲ ಮತ್ತು ನನ್ನ ಮತಿಯು ಅಧರ್ಮವನ್ನು ಯೋಚಿಸುವುದಿಲ್ಲ. ನನ್ನ ಮನಸ್ಸು ಇದನ್ನು ಪ್ರೋತ್ಸಾಹಿಸುತ್ತಿದೆ ಎಂದರೆ ಇದು ಎಂದೂ ಅಧರ್ಮವಾಗಿರಲು ಸಾಧ್ಯವಿಲ್ಲ.

01188014a ಶ್ರೂಯತೇ ಹಿ ಪುರಾಣೇಽಪಿ ಜಟಿಲಾ ನಾಮ ಗೌತಮೀ।
01188014c ಋಷೀನಧ್ಯಾಸಿತವತೀ ಸಪ್ತ ಧರ್ಮಭೃತಾಂ ವರ।।

ಧರ್ಮಭೃತರಲ್ಲಿ ಶ್ರೇಷ್ಠ! ಪುರಾಣಗಳಲ್ಲಿಯೂ ಕೂಡ ಜಟಿಲಾ ಎಂಬ ಹೆಸರಿನ ಗೌತಮಿಯೋರ್ವಳು ಏಳು ಋಷಿಗಳೊಡನೆ ಕೂಡಿದ್ದಳು ಎಂದು ನಾವು ಕೇಳಿದ್ದೇವೆ.

01188015a ಗುರೋಶ್ಚ ವಚನಂ ಪ್ರಾಹುರ್ಧರ್ಮಂ ಧರ್ಮಜ್ಞಸತ್ತಮ।
01188015c ಗುರೂಣಾಂ ಚೈವ ಸರ್ವೇಷಾಂ ಜನಿತ್ರೀ ಪರಮೋ ಗುರುಃ।।

ಧರ್ಮಜ್ಞಸತ್ತಮ! ಗುರುವಿನ ವಚನವೇ ಧರ್ಮವೆಂದು ಹೇಳುತ್ತಾರೆ. ಗುರುಗಳಲ್ಲೆಲ್ಲಾ ಜನನಿಯೇ ಪರಮ ಗುರುವು.

01188016a ಸಾ ಚಾಪ್ಯುಕ್ತವತೀ ವಾಚಂ ಭೈಕ್ಷವದ್ಭುಜ್ಯತಾಮಿತಿ।
01188016c ತಸ್ಮಾದೇತದಹಂ ಮನ್ಯೇ ಧರ್ಮಂ ದ್ವಿಜವರೋತ್ತಮ।।

ದ್ವಿಜವರೋತ್ತಮ! ಅವಳೇ ನಮಗೆ ಭಿಕ್ಷೆಯಂತೆ ಹಂಚಿಕೊಳ್ಳಿ ಎಂದು ಹೇಳಿದ್ದಾಳೆ. ಆದುದರಿಂದ ನಾನು ಇದನ್ನೇ ಧರ್ಮವೆಂದು ತಿಳಿಯುತ್ತೇನೆ.”

01188017 ಕುಂತ್ಯುವಾಚ।
01188017a ಏವಮೇತದ್ಯಥಾಹಾಯಂ ಧರ್ಮಚಾರೀ ಯುಧಿಷ್ಠಿರಃ।
01188017c ಅನೃತಾನ್ಮೇ ಭಯಂ ತೀವ್ರಂ ಮುಚ್ಯೇಯಮನೃತಾತ್ಕಥಂ।।

ಕುಂತಿಯು ಹೇಳಿದಳು: “ಧರ್ಮಚಾರಿ ಯುಧಿಷ್ಠಿರನು ಹೇಳಿದ ಹಾಗೆಯೇ ನಡೆಯಿತು. ಸುಳ್ಳಿನ ಕುರಿತು ನನಗೆ ತೀವ್ರ ಭಯವಿದೆ. ಈ ಸುಳ್ಳಿನಿಂದ ನಾನು ಹೇಗೆ ಹೊರಬರಲಿ?”

01188018 ವ್ಯಾಸ ಉವಾಚ।
01188018a ಅನೃತಾನ್ಮೋಕ್ಷ್ಯಸೇ ಭದ್ರೇ ಧರ್ಮಶ್ಚೈಷ ಸನಾತನಃ।
01188018c ನ ತು ವಕ್ಷ್ಯಾಮಿ ಸರ್ವೇಷಾಂ ಪಾಂಚಾಲ ಶೃಣು ಮೇ ಸ್ವಯಂ।।
01188019a ಯಥಾಯಂ ವಿಹಿತೋ ಧರ್ಮೋ ಯತಶ್ಚಾಯಂ ಸನಾತನಃ।
01188019c ಯಥಾ ಚ ಪ್ರಾಹ ಕೌಂತೇಯಸ್ತಥಾ ಧರ್ಮೋ ನ ಸಂಶಯಃ।।

ವ್ಯಾಸನು ಹೇಳಿದನು: “ಭದ್ರೇ! ಸುಳ್ಳಿನಿಂದ ಬಿಡುಗಡೆಯಾಗುತ್ತದೆ. ಇದೇ ಸನಾತನ ಧರ್ಮ. ಆದರೆ ನಾನು ಇದನ್ನು ನಿಮಗೆಲ್ಲರಿಗೂ ಹೇಳುವುದಿಲ್ಲ. ಈ ಸನಾತನ ಧರ್ಮವು ಏನು ಮತ್ತು ಅದು ಹೇಗೆ ಬಂದಿತು ಎನ್ನುವುದನ್ನು ಸ್ವಯಂ ಪಾಂಚಾಲನು ಮಾತ್ರ ನನ್ನಿಂದ ಕೇಳುತ್ತಾನೆ. ಕೌಂತೇಯನು ಹೇಳಿದ್ದುದೇ ಧರ್ಮ ಎನ್ನುವುದರಲ್ಲಿ ಸಂಶಯವೇ ಇಲ್ಲ.””

01188020 ವೈಶಂಪಾಯನ ಉವಾಚ।
01188020a ತತ ಉತ್ಥಾಯ ಭಗವಾನ್ವ್ಯಾಸೋ ದ್ವೈಪಾಯನಃ ಪ್ರಭುಃ।
01188020c ಕರೇ ಗೃಹೀತ್ವಾ ರಾಜಾನಂ ರಾಜವೇಶ್ಮ ಸಮಾವಿಶತ್।।

ವೈಶಂಪಾಯನನು ಹೇಳಿದನು: “ಭಗವಾನ್ ಪ್ರಭು ದ್ವೈಪಾಯನ ವ್ಯಾಸನು ರಾಜನ ಕೈಗಳನ್ನು ಹಿಡಿದು ರಾಜನ ಅಂತಃಪುರವನ್ನು ಪ್ರವೇಶಿಸಿದನು.

01188021a ಪಾಂಡವಾಶ್ಚಾಪಿ ಕುಂತೀ ಚ ಧೃಷ್ಟದ್ಯುಮ್ನಶ್ಚ ಪಾರ್ಷತಃ।
01188021c ವಿಚೇತಸಸ್ತೇ ತತ್ರೈವ ಪ್ರತೀಕ್ಷಂತೇ ಸ್ಮ ತಾವುಭೌ।।

ಪಾಂಡವರು, ಕುಂತಿ, ಮತ್ತು ಪಾರ್ಷತ ಧೃಷ್ಟಧ್ಯುಮ್ನನು ವಿಚೇತಸರಾಗಿ ಅವರಿಬ್ಬರ ಪ್ರತೀಕ್ಷೆಯಲ್ಲಿ ಅಲ್ಲಿಯೇ ನಿಂತುಕೊಂಡರು.

01188022a ತತೋ ದ್ವೈಪಾಯನಸ್ತಸ್ಮೈ ನರೇಂದ್ರಾಯ ಮಹಾತ್ಮನೇ।
01188022c ಆಚಖ್ಯೌ ತದ್ಯಥಾ ಧರ್ಮೋ ಬಹೂನಾಮೇಕಪತ್ನಿತಾ।।

ಆಗ ದ್ವೈಪಾಯನನು ಮಹಾತ್ಮ ನರೇಂದ್ರನಿಗೆ ಒಬ್ಬಳಿಗೇ ಬಹುಮಂದಿ ಪತಿಗಳಾಗುವ ಧರ್ಮವು ಹೇಗೆ ಬಂದಿತೆಂದು ಹೇಳಿದನು.

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ವೈವಾಹಿಕಪರ್ವಣಿ ವ್ಯಾಸವಾಕ್ಯೇ ಅಷ್ಟಾಶೀತ್ಯಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ವೈವಾಹಿಕಪರ್ವದಲ್ಲಿ ವ್ಯಾಸವಾಕ್ಯದಲ್ಲಿ ನೂರಾಎಂಭತ್ತೆಂಟನೆಯ ಅಧ್ಯಾಯವು.