187 ದ್ವೈಪಾಯನಾಗಮನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ವೈವಾಹಿಕ ಪರ್ವ

ಅಧ್ಯಾಯ 187

ಸಾರ

ದ್ರುಪದನು ಯುಧಿಷ್ಠಿರನನ್ನುದ್ದೇಶಿಸಿ ಅವರನ್ನು ಯಾರೆಂದು ಸಂಬೋಧಿಸಬೇಕೆಂದು ಕೇಳಲು ಯುಧಿಷ್ಠಿರನು ತಮ್ಮ ಪರಿಚಯವನ್ನು ಮಾಡಿಕೊಳ್ಳುವುದು (1-11). ಹರ್ಷಿತನಾದ ದ್ರುಪದನು, ವಿಷಯವನ್ನು ತಿಳಿದು, ಧೃತರಾಷ್ಟ್ರನನ್ನು ನಿಂದಿಸಿ ಅವರಿಗೆ ರಾಜ್ಯವನ್ನು ದೊರಕಿಸುವುದಾಗಿ ಪ್ರತಿಜ್ಞೆ ಮಾಡಿದುದು (12-16). ಅರ್ಜುನನು ಕೃಷ್ಣೆಯ ಪಾಣಿಗ್ರಹಣ ಮಾಡಲು ಮುಹೂರ್ತವನ್ನು ನಿಶ್ಚಯಿಸಬೇಕೆಂದು ಕೇಳಲು ಯುಧಿಷ್ಠಿರನು ಕೃಷ್ಣೆಯು ಐವರ ಬಾರ್ಯೆಯಾಗುತ್ತಾಳೆಂದು ಹೇಳಲು ಅದರ ಕುರಿತು ದೃಪದ-ಯುಧಿಷ್ಠಿರರ ನಡುವೆ ಚರ್ಚೆಯಾಗುವಾಗ ವ್ಯಾಸನ ಆಗಮನ (17-32).

01187001 ವೈಶಂಪಾಯನ ಉವಾಚ।
01187001a ತತ ಆಹೂಯ ಪಾಂಚಾಲ್ಯೋ ರಾಜಪುತ್ರಂ ಯುಧಿಷ್ಠಿರಂ।
01187001c ಪರಿಗ್ರಹೇಣ ಬ್ರಾಹ್ಮೇಣ ಪರಿಗೃಹ್ಯ ಮಹಾದ್ಯುತಿಃ।।

ವೈಶಂಪಾಯನನು ಹೇಳಿದನು: “ಆಗ ಆ ಮಹಾದ್ಯುತಿ ಪಾಂಚಾಲ್ಯನು ರಾಜಪುತ್ರ ಯುಧಿಷ್ಠಿರನನ್ನು ಕರೆದು ಬ್ರಾಹ್ಮಣರನ್ನು ಸಂಬೋಧಿಸುವಂತೆ ಮಾತನಾಡಿದನು.

01187002a ಪರ್ಯಪೃಚ್ಛದದೀನಾತ್ಮಾ ಕುಂತೀಪುತ್ರಂ ಸುವರ್ಚಸಂ।
01187002c ಕಥಂ ಜಾನೀಮ ಭವತಃ ಕ್ಷತ್ರಿಯಾನ್ಬ್ರಾಹ್ಮಣಾನುತ।।

ಆ ದೀನಾತ್ಮನು ಸುವರ್ಚಸ ಕುಂತೀಪುತ್ರನಲ್ಲಿ ಕೇಳಿದನು: “ನಾವು ನಿಮ್ಮನ್ನು ಯಾರೆಂದು ತಿಳಿಯಬೇಕು? ಕ್ಷತ್ರಿಯರೆಂದೋ ಅಥವಾ ಬ್ರಾಹ್ಮಣರೆಂದೋ?

01187003a ವೈಶ್ಯಾನ್ವಾ ಗುಣಸಂಪನ್ನಾನುತ ವಾ ಶೂದ್ರಯೋನಿಜಾನ್।
01187003c ಮಾಯಾಮಾಸ್ಥಾಯ ವಾ ಸಿದ್ಧಾಂಶ್ಚರತಃ ಸರ್ವತೋದಿಶಂ।।
01187004a ಕೃಷ್ಣಾಹೇತೋರನುಪ್ರಾಪ್ತಾನ್ದಿವಃ ಸಂದರ್ಶನಾರ್ಥಿನಃ।
01187004c ಬ್ರವೀತು ನೋ ಭವಾನ್ಸತ್ಯಂ ಸಂದೇಹೋ ಹ್ಯತ್ರ ನೋ ಮಹಾನ್।।

ಅಥವಾ ಗುಣಸಂಪನ್ನಾನುತ ವೈಶ್ಯರೆಂದೋ ಅಥವಾ ಶೂದ್ರಯೋನಿಯಲ್ಲಿ ಜನಿಸಿದವರೆಂದೋ? ಅಥವಾ ಕೃಷ್ಣೆಯ ಸಂದರ್ಶನಾರ್ಥಿಗಳಾಗಿ ಸ್ವರ್ಗದಿಂದ ತಮ್ಮ ಮಾಯೆಯಿಂದ ಬಂದಿಳಿದ ಸರ್ವತೋದಿಶ ಸಂಚರಿಸುವ ಸಿದ್ಧರೆಂದೋ? ಇದರ ಕುರಿತು ಮಹಾ ಸಂದೇಹವನ್ನು ಹೊಂದಿದ ನಮಗೆ ಸತ್ಯವನ್ನು ತಿಳಿಸು.

01187005a ಅಪಿ ನಃ ಸಂಶಯಸ್ಯಾಂತೇ ಮನಸ್ತುಷ್ಟಿರಿಹಾವಿಶೇತ್।
01187005c ಅಪಿ ನೋ ಭಾಗಧೇಯಾನಿ ಶುಭಾನಿ ಸ್ಯುಃ ಪರಂತಪ।।

ನಮ್ಮ ಈ ಸಂಶಯವು ದೂರವಾದ ಕೂಡಲೇ ನಮ್ಮ ಮನಸ್ಸಿಗೆ ಸಂತಸವಾಗುತ್ತದೆ. ಪರಂತಪ! ನಮ್ಮ ಭಾಗಧೇಯವು ಶುಭವೆಂದು ತೋರುವುದಿಲ್ಲವೇ?

01187006a ಕಾಮಯಾ ಬ್ರೂಹಿ ಸತ್ಯಂ ತ್ವಂ ಸತ್ಯಂ ರಾಜಸು ಶೋಭತೇ।
01187006c ಇಷ್ಟಾಪೂರ್ತೇನ ಚ ತಥಾ ವಕ್ತವ್ಯಮನೃತಂ ನ ತು।।

ನೀನು ನಿನ್ನ ಬಯಕೆಯಂತೆ ಸತ್ಯವನ್ನೇ ಹೇಳು. ರಾಜರಲ್ಲಿ ಯಜ್ಞ ದಾನಗಳಿಗಿಂತಲೂ ಸತ್ಯವೇ ಶೋಭಿಸುತ್ತದೆ. ಆದುದರಿಂದ ಅನೃತವನ್ನು ಹೇಳಬೇಡ.

01187007a ಶ್ರುತ್ವಾ ಹ್ಯಮರಸಂಕಾಶ ತವ ವಾಕ್ಯಮರಿಂದಮ।
01187007c ಧ್ರುವಂ ವಿವಾಹಕರಣಮಾಸ್ಥಾಸ್ಯಾಮಿ ವಿಧಾನತಃ।।

ಅಮರಸಂಕಾಶ! ಅರಿಂದಮ! ನಿನ್ನ ಮಾತುಗಳನ್ನು ಕೇಳಿದ ನಂತರವೇ ವಿವಾಹಕರ್ಮ ವಿಧಾನಗಳನ್ನು ನಿಶ್ಚಯಿಸುತ್ತೇನೆ.”

01187008 ಯುಧಿಷ್ಠಿರ ಉವಾಚ।
01187008a ಮಾ ರಾಜನ್ವಿಮನಾ ಭೂಸ್ತ್ವಂ ಪಾಂಚಾಲ್ಯ ಪ್ರೀತಿರಸ್ತು ತೇ।
01187008c ಈಪ್ಸಿತಸ್ತೇ ಧ್ರುವಃ ಕಾಮಃ ಸಂವೃತ್ತೋಽಯಮಸಂಶಯಂ।।

ಯುಧಿಷ್ಠಿರನು ಹೇಳಿದನು: “ರಾಜನ್! ವಿಮನಸ್ಕನಾಗಬೇಡ. ಸಂತೋಷಗೊಳ್ಳು ಪಾಂಚಾಲ್ಯ! ನಿನ್ನ ಆಸೆಯು ನಿಸ್ಸಂಶಯವಾಗಿಯೂ ನಿಶ್ಚಿತವಾಗಿಯೂ ಸಿದ್ಧಿಯಾಗಿದೆ.

01187009a ವಯಂ ಹಿ ಕ್ಷತ್ರಿಯಾ ರಾಜನ್ಪಾಂಡೋಃ ಪುತ್ರಾ ಮಹಾತ್ಮನಃ।
01187009c ಜ್ಯೇಷ್ಠಂ ಮಾಂ ವಿದ್ಧಿ ಕೌಂತೇಯಂ ಭೀಮಸೇನಾರ್ಜುನಾವಿಮೌ।
01187009e ಯಾಭ್ಯಾಂ ತವ ಸುತಾ ರಾಜನ್ನಿರ್ಜಿತಾ ರಾಜಸಂಸದಿ।।

ರಾಜನ್! ನಾವು ಕ್ಷತ್ರಿಯರೇ! ಮಹಾತ್ಮ ಪಾಂಡುವಿನ ಪುತ್ರರು. ನಾನು ಜ್ಯೇಷ್ಠ ಕೌಂತೇಯನೆಂದು ತಿಳಿ. ರಾಜನ್! ಇವರೀರ್ವರು ರಾಜಸನ್ನಿಧಿಯಲ್ಲಿ ನಿನ್ನ ಸುತೆಯನ್ನು ಗೆದ್ದ ಅರ್ಜುನ-ಭೀಮಸೇನರು.

01187010a ಯಮೌ ತು ತತ್ರ ರಾಜೇಂದ್ರ ಯತ್ರ ಕೃಷ್ಣಾ ಪ್ರತಿಷ್ಠಿತಾ।
01187010c ವ್ಯೇತು ತೇ ಮಾನಸಂ ದುಃಖಂ ಕ್ಷತ್ರಿಯಾಃ ಸ್ಮೋ ನರರ್ಷಭ।
01187010e ಪದ್ಮಿನೀವ ಸುತೇಯಂ ತೇ ಹ್ರದಾದನ್ಯಂ ಹ್ರದಂ ಗತಾ।।

ರಾಜೇಂದ್ರ! ಅವಳಿಗಳು ಕೃಷ್ಣೆಯು ನಿಂತಿರುವಲ್ಲಿ ಇದ್ದಾರೆ. ನರರ್ಷಭ! ನಾವು ಕ್ಷತ್ರಿಯರು. ಆದುದರಿಂದ ನಿನ್ನ ಮನಸ್ಸಿನ ದುಃಖವನ್ನು ದೂರಮಾಡು. ನಿನ್ನ ಈ ಸುತೆಯು ಪದ್ಮದಂತೆ ಒಂದು ಕೊಳದಿಂದ ಇನ್ನೊಂದು ಕೊಳಕ್ಕೆ ಹೋಗಿದ್ದಾಳೆ.

01187011a ಇತಿ ತಥ್ಯಂ ಮಹಾರಾಜ ಸರ್ವಮೇತದ್ಬ್ರವೀಮಿ ತೇ।
01187011c ಭವಾನ್ ಹಿ ಗುರುರಸ್ಮಾಕಂ ಪರಮಂ ಚ ಪರಾಯಣಂ।।

ಮಹಾರಾಜ! ನಾನು ಹೇಳಿದ ಇವೆಲ್ಲವೂ ಸತ್ಯ. ನೀನೇ ನಮ್ಮ ಪರಮ ಪರಾಯಣ ಗುರು.””

01187012 ವೈಶಂಪಾಯನ ಉವಾಚ।
01187012a ತತಃ ಸ ದ್ರುಪದೋ ರಾಜಾ ಹರ್ಷವ್ಯಾಕುಲಲೋಚನಃ।
01187012c ಪ್ರತಿವಕ್ತುಂ ತದಾ ಯುಕ್ತಂ ನಾಶಕತ್ತಂ ಯುಧಿಷ್ಠಿರಂ।।

ವೈಶಂಪಾಯನನು ಹೇಳಿದನು: “ಆಗ ರಾಜ ದ್ರುಪದನು ಹರ್ಷವ್ಯಾಕುಲಲೋಚನನಾಗಿ ಮೊದಲಿಗೆ ಯುಧಿಷ್ಠಿರನಿಗೆ ಏನು ಹೇಳಲೂ ಶಕ್ಯನಾಗಲಿಲ್ಲ.

01187013a ಯತ್ನೇನ ತು ಸ ತಂ ಹರ್ಷಂ ಸನ್ನಿಗೃಹ್ಯ ಪರಂತಪಃ।
01187013c ಅನುರೂಪಂ ತತೋ ರಾಜಾ ಪ್ರತ್ಯುವಾಚ ಯುಧಿಷ್ಠಿರಂ।।

ರಾಜ ಪರಂತಪನು ತನ್ನ ಆ ಸಂತಸವನ್ನು ನಿಗ್ರಹಿಸಲು ಪ್ರಯತ್ನಿಸುತ್ತಾ ಯುಧಿಷ್ಠಿರನಿಗೆ ಅನುರೂಪ ಪ್ರತ್ಯುತ್ತರವನ್ನಿತ್ತನು.

01187014a ಪಪ್ರಚ್ಛ ಚೈನಂ ಧರ್ಮಾತ್ಮಾ ಯಥಾ ತೇ ಪ್ರದ್ರುತಾಃ ಪುರಾ।
01187014c ಸ ತಸ್ಮೈ ಸರ್ವಮಾಚಖ್ಯಾವಾನುಪೂರ್ವ್ಯೇಣ ಪಾಂಡವಃ।।

ಅವರು ಹಿಂದಿನ ಘಟನೆಯಿಂದ ಹೇಗೆ ತಪ್ಪಿಸಿಕೊಂಡರೆಂದು ಧರ್ಮಾತ್ಮನು ಕೇಳಲು, ಪಾಂಡವನು ಅವನಿಗೆ ಮೊದಲಿನಿಂದ ಎಲ್ಲವನ್ನೂ ಹೇಳಿದನು.

01187015a ತಚ್ಛೃತ್ವಾ ದ್ರುಪದೋ ರಾಜಾ ಕುಂತೀಪುತ್ರಸ್ಯ ಭಾಷಿತಂ।
01187015c ವಿಗರ್ಹಯಾಮಾಸ ತದಾ ಧೃತರಾಷ್ಟ್ರಂ ಜನೇಶ್ವರಂ।।

ಕುಂತೀಪುತ್ರನ ಮಾತುಗಳನ್ನು ಕೇಳಿದ ರಾಜ ದ್ರುಪದನು ಜನೇಶ್ವರ ಧೃತರಾಷ್ಟ್ರನನ್ನು ನಿಂದಿಸಿದನು.

01187016a ಆಶ್ವಾಸಯಾಮಾಸ ಚ ತಂ ಕುಂತೀಪುತ್ರಂ ಯುಧಿಷ್ಠಿರಂ।
01187016c ಪ್ರತಿಜಜ್ಞೇ ಚ ರಾಜ್ಯಾಯ ದ್ರುಪದೋ ವದತಾಂ ವರಃ।।

ಶ್ರೇಷ್ಠ ಮಾತುಗಾರ ದ್ರುಪದನು ರಾಜ್ಯವನ್ನು ದೊರಕಿಸುತ್ತೇನೆಂದು ಪ್ರತಿಜ್ಞೆಯನ್ನು ಮಾಡಿ ಕುಂತೀಪುತ್ರ ಯುಧಿಷ್ಠಿರನಿಗೆ ಆಶ್ವಾಸನೆಯನ್ನಿತ್ತನು.

01187017a ತತಃ ಕುಂತೀ ಚ ಕೃಷ್ಣಾ ಚ ಭೀಮಸೇನಾರ್ಜುನಾವಪಿ।
01187017c ಯಮೌ ಚ ರಾಜ್ಞಾ ಸಂದಿಷ್ಟೌ ವಿವಿಶುರ್ಭವನಂ ಮಹತ್।।
01187018a ತತ್ರ ತೇ ನ್ಯವಸನ್ರಾಜನ್ಯಜ್ಞಸೇನೇನ ಪೂಜಿತಾಃ।
01187018c ಪ್ರತ್ಯಾಶ್ವಸ್ತಾಂಸ್ತತೋ ರಾಜಾ ಸಹ ಪುತ್ರೈರುವಾಚ ತಾನ್।।

ರಾಜನ್! ನಂತರ ರಾಜನು ಕುಂತಿ, ಕೃಷ್ಣೆ, ಭೀಮಸೇನ, ಅರ್ಜುನ ಮತ್ತು ಯಮಳರನ್ನು ಮಹಾ ಭುವನಕ್ಕೆ ಕರೆಸಿಕೊಂಡನು. ಯಜ್ಞಸೇನನ ಸತ್ಕಾರದಲ್ಲಿ ಅವರು ಅಲ್ಲಿಯೇ ಉಳಿದುಕೊಂಡರು. ವಿಶ್ವಾಸವನ್ನು ಪಡೆದುಕೊಂಡ ಅವರಲ್ಲಿ ರಾಜನು ತನ್ನ ಪುತ್ರಸಮೇತನಾಗಿ ಹೇಳಿದನು:

01187019a ಗೃಹ್ಣಾತು ವಿಧಿವತ್ಪಾಣಿಮದ್ಯೈವ ಕುರುನಂದನಃ।
01187019c ಪುಣ್ಯೇಽಹನಿ ಮಹಾಬಾಹುರರ್ಜುನಃ ಕುರುತಾಂ ಕ್ಷಣಂ।।

“ಇಂದಿನ ಈ ಪುಣ್ಯದಿನದಲ್ಲಿ ಕುರುನಂದನ ಮಹಾಬಾಹು ಅರ್ಜುನನು ವಿಧಿವತ್ತಾಗಿ ಪಾಣಿಗ್ರಹಣಗೊಂಡು ಮುಹೂರ್ತವನ್ನು ಮಾಡಬೇಕು.

01187020a ತತಸ್ತಮಬ್ರವೀದ್ರಾಜಾ ಧರ್ಮಪುತ್ರೋ ಯುಧಿಷ್ಠಿರಃ।
01187020c ಮಮಾಪಿ ದಾರಸಂಬಂಧಃ ಕಾರ್ಯಸ್ತಾವದ್ವಿಶಾಂ ಪತೇ।।

ಆದಕ್ಕೆ ರಾಜ ಧರ್ಮಪುತ್ರ ಯುಧಿಷ್ಠಿರನು ಹೇಳಿದನು: “ವಿಶಾಂಪತೇ! ಹಾಗಿದ್ದರೆ ನಾನೂ ಕೂಡ ದಾರಸಂಬಂಧಕಾರ್ಯವನ್ನು ನೆರವೇರಿಸಿಕೊಳ್ಳಬೇಕು.”

01187021 ದ್ರುಪದ ಉವಾಚ।
01187021a ಭವಾನ್ವಾ ವಿಧಿವತ್ಪಾಣಿಂ ಗೃಹ್ಣಾತು ದುಹಿತುರ್ಮಮ।
01187021c ಯಸ್ಯ ವಾ ಮನ್ಯಸೇ ವೀರ ತಸ್ಯ ಕೃಷ್ಣಾಮುಪಾದಿಶ।।

ದ್ರುಪದನು ಹೇಳಿದನು: “ಅಥವಾ ವಿಧಿವತ್ತಾಗಿ ನೀನು ನನ್ನ ಮಗಳ ಪಾಣಿಗ್ರಹಣ ಮಾಡಿಕೋ. ಅಥವಾ ವೀರ! ನಿನಗಿಷ್ಟವಿದ್ದವನಿಗೆ ಕೃಷ್ಣೆಯನ್ನು ನೀಡು.”

01187022 ಯುಧಿಷ್ಠಿರ ಉವಾಚ।
01187022a ಸರ್ವೇಷಾಂ ದ್ರೌಪದೀ ರಾಜನ್ಮಹಿಷೀ ನೋ ಭವಿಷ್ಯತಿ।
01187022c ಏವಂ ಹಿ ವ್ಯಾಹೃತಂ ಪೂರ್ವಂ ಮಮ ಮಾತ್ರಾ ವಿಶಾಂ ಪತೇ।।

ಯುಧಿಷ್ಠಿರನು ಹೇಳಿದನು: “ರಾಜನ್! ದ್ರೌಪದಿಯು ನಮ್ಮೆಲ್ಲರ ರಾಣಿಯಾಗುತ್ತಾಳೆ. ವಿಶಾಂಪತೇ! ಹಿಂದೆ ನನ್ನ ತಾಯಿಯು ಹೀಗೆಯೇ ಅಪ್ಪಣೆಯಿತ್ತಿದ್ದಳು.

01187023a ಅಹಂ ಚಾಪ್ಯನಿವಿಷ್ಟೋ ವೈ ಭೀಮಸೇನಶ್ಚ ಪಾಂಡವಃ।
01187023c ಪಾರ್ಥೇನ ವಿಜಿತಾ ಚೈಷಾ ರತ್ನಭೂತಾ ಚ ತೇ ಸುತಾ।।

ನಾನಿನ್ನೂ ಮದುವೆಯಾಗಿಲ್ಲ. ಹಾಗೆಯೇ ಪಾಂಡವ ಭೀಮಸೇನನೂ ವಿವಾಹವಾಗಿಲ್ಲ. ಪಾರ್ಥನಿಂದ ಜಯಿಸಲ್ಪಟ್ಟ ನಿನ್ನ ಈ ಮಗಳು ನಿಧಿಸಮಾನಳು.

01187024a ಏಷ ನಃ ಸಮಯೋ ರಾಜನ್ರತ್ನಸ್ಯ ಸಹಭೋಜನಂ।
01187024c ನ ಚ ತಂ ಹಾತುಮಿಚ್ಛಾಮಃ ಸಮಯಂ ರಾಜಸತ್ತಮ।।

ರಾಜನ್! ಯಾವುದೇ ನಿಧಿಯನ್ನು ನಾವೆಲ್ಲರೂ ಜೊತೆಯಲ್ಲಿಯೇ ಅನುಭವಿಸುತ್ತೇವೆ ಎಂದು ನಮ್ಮ ಮಧ್ಯೆ ಒಪ್ಪಂದವಾಗಿದೆ. ರಾಜಸತ್ತಮ! ನಾವು ಈ ಒಪ್ಪಂದವನ್ನು ಮುರಿಯಲು ಬಯಸುವುದಿಲ್ಲ.

01187025a ಸರ್ವೇಷಾಂ ಧರ್ಮತಃ ಕೃಷ್ಣಾ ಮಹಿಷೀ ನೋ ಭವಿಷ್ಯತಿ।
01187025c ಆನುಪೂರ್ವ್ಯೇಣ ಸರ್ವೇಷಾಂ ಗೃಹ್ಣಾತು ಜ್ವಲನೇ ಕರಂ।।

ಕೃಷ್ಣೆಯು ಧರ್ಮವತ್ತಾಗಿ ನಮ್ಮೆಲ್ಲರ ರಾಣಿಯಾಗುತ್ತಾಳೆ. ಅವಳು ಅಗ್ನಿ ಸಮ್ಮುಖದಲ್ಲಿ ಒಬ್ಬೊಬ್ಬರಾಗಿ ನಮ್ಮೆಲ್ಲರ ಕೈ ಹಿಡಿಯುತ್ತಾಳೆ.”

01187026 ದ್ರುಪದ ಉವಾಚ।
01187026a ಏಕಸ್ಯ ಬಹ್ವ್ಯೋ ವಿಹಿತಾ ಮಹಿಷ್ಯಃ ಕುರುನಂದನ।
01187026c ನೈಕಸ್ಯಾ ಬಹವಃ ಪುಂಸೋ ವಿಧೀಯಂತೇ ಕದಾ ಚನ।।

ದ್ರುಪದನು ಹೇಳಿದನು: “ಕುರುನಂದನ! ಒಬ್ಬನಿಗೆ ಹಲವಾರು ರಾಣಿಯರಿರಬಹುದು ಎಂದು ಹೇಳಿದ್ದಾರೆ. ಆದರೆ ಒಬ್ಬಳಿಗೆ ಹಲವಾರು ಪತಿಯರಿರುವರೆಂದು ಎಂದೂ ಎಲ್ಲಿಯೂ ಹೇಳಿಲ್ಲ.

01187027a ಲೋಕವೇದವಿರುದ್ಧಂ ತ್ವಂ ನಾಧರ್ಮಂ ಧಾರ್ಮಿಕಃ ಶುಚಿಃ।
01187027c ಕರ್ತುಮರ್ಹಸಿ ಕೌಂತೇಯ ಕಸ್ಮಾತ್ತೇ ಬುದ್ಧಿರೀದೃಶೀ।।

ಕೌಂತೇಯ! ಧಾರ್ಮಿಕನೂ ಶುಚಿಯೂ ಆದ ನೀನು ಲೋಕವೇದವಿರುದ್ಧ ಅಧರ್ಮವನ್ನು ಎಸೆಗಬಾರದು. ಈ ರೀತಿಯ ಯೋಚನೆಯಾದರೂ ನಿನಗೆ ಎಲ್ಲಿಂದ ಬಂದಿತು?”

01187028 ಯುಧಿಷ್ಠಿರ ಉವಾಚ।
01187028a ಸೂಕ್ಷ್ಮೋ ಧರ್ಮೋ ಮಹಾರಾಜ ನಾಸ್ಯ ವಿದ್ಮೋ ವಯಂ ಗತಿಂ।
01187028c ಪೂರ್ವೇಷಾಮಾನುಪೂರ್ವ್ಯೇಣ ಯಾತಂ ವರ್ತ್ಮಾನುಯಾಮಹೇ।।

ಯುಧಿಷ್ಠಿರನು ಹೇಳಿದನು: “ಮಹಾರಾಜ! ಧರ್ಮವು ಸೂಕ್ಷ್ಮ ಮತ್ತು ಅದರ ಗತಿಯು ನಮಗೆ ತಿಳಿದಿದ್ದುದಲ್ಲ. ಹಿಂದಿನವರು ನಡೆದುಕೊಂಡು ಬಂದ ದಾರಿಯನ್ನೇ ನಾವು ಹಿಂಬಾಲಿಸಿಕೊಂಡು ಹೋಗುತ್ತೇವೆ.

01187029a ನ ಮೇ ವಾಗನೃತಂ ಪ್ರಾಹ ನಾಧರ್ಮೇ ಧೀಯತೇ ಮತಿಃ।
01187029c ಏವಂ ಚೈವ ವದತ್ಯಂಬಾ ಮಮ ಚೈವ ಮನೋಗತಂ।।

ನನ್ನ ನಾಲಿಗೆಯು ಸುಳ್ಳನ್ನಾಡುವುದಿಲ್ಲ ಮತ್ತು ನನ್ನ ಬುದ್ಧಿಯು ಅಧರ್ಮವನ್ನು ಯೋಚಿಸುವುದಿಲ್ಲ. ನನ್ನ ತಾಯಿಯು ಇದನ್ನೇ ಹೇಳಿದ್ದಳು ಮತ್ತು ಅದರಂತೆ ನಡೆಯುವುದೇ ನನ್ನ ಮನೋಗತ.

01187030a ಏಷ ಧರ್ಮೋ ಧ್ರುವೋ ರಾಜಂಶ್ಚರೈನಮವಿಚಾರಯನ್।
01187030c ಮಾ ಚ ತೇಽತ್ರ ವಿಶಂಕಾ ಭೂತ್ಕಥಂ ಚಿದಪಿ ಪಾರ್ಥಿವ।।

ರಾಜನ್! ನಿಶ್ಚಯವಾಗಿಯೂ ಇದು ಧರ್ಮ. ಏನನ್ನೂ ಯೋಚಿಸಿದೇ ಪರಿಪಾಲಿಸು. ಪಾರ್ಥಿವ! ಇದರಲ್ಲಿ ಯಾವುದೇ ರೀತಿಯ ಶಂಕೆಯು ಇಲ್ಲದಿರಲಿ.”

01187031 ದ್ರುಪದ ಉವಾಚ।
01187031a ತ್ವಂ ಚ ಕುಂತೀ ಚ ಕೌಂತೇಯ ಧೃಷ್ಟದ್ಯುಮ್ನಶ್ಚ ಮೇ ಸುತಃ।
01187031c ಕಥಯಂತ್ವಿತಿಕರ್ತವ್ಯಂ ಶ್ವಃ ಕಾಲೇ ಕರವಾಮಹೇ।।

ದ್ರುಪದನು ಹೇಳಿದನು: “ಕೌಂತೇಯ! ನೀನು, ಕುಂತಿ ಮತ್ತು ನನ್ನ ಸುತ ಧೃಷ್ಟದ್ಯುಮ್ನ ಎಲ್ಲರೂ ಏನು ಮಾಡಬೇಕೆಂದು ಸಮಾಲೋಚನೆ ಮಾಡಿ. ನಾಳೆ ನಾವು ಅದನ್ನೇ ಕಾರ್ಯಗತಗೊಳಿಸೋಣ.””

01187032 ವೈಶಂಪಾಯನ ಉವಾಚ।
01187032a ತೇ ಸಮೇತ್ಯ ತತಃ ಸರ್ವೇ ಕಥಯಂತಿ ಸ್ಮ ಭಾರತ।
01187032c ಅಥ ದ್ವೈಪಾಯನೋ ರಾಜನ್ನಭ್ಯಾಗಚ್ಛದ್ಯದೃಚ್ಛಯಾ।।

ವೈಶಂಪಾಯನನು ಹೇಳಿದನು: “ರಾಜನ್! ಭಾರತ! ಈ ರೀತಿ ಅವರೆಲ್ಲರೂ ಅಲ್ಲಿ ಸೇರಿ ಚರ್ಚೆಮಾಡುತ್ತಿರಲು ಅದೇ ಸಮಯದಲ್ಲಿ ಅಲ್ಲಿಗೆ ದ್ವೈಪಾಯನನು ಬಂದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ವೈವಾಹಿಕಪರ್ವಣಿ ದ್ವೈಪಾಯನಾಗಮನೇ ಸಪ್ತಶೀತ್ಯಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ವೈವಾಹಿಕಪರ್ವದಲ್ಲಿ ದ್ವೈಪಾಯನಾಗಮನದಲ್ಲಿ ನೂರಾಎಂಭತ್ತೇಳನೆಯ ಅಧ್ಯಾಯವು.