ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ವೈವಾಹಿಕ ಪರ್ವ
ಅಧ್ಯಾಯ 186
ಸಾರ
ದ್ರುಪದನ ಮನೆಗೆ ಪಾಂಡವರು ಔತಣಕ್ಕೆ ಹೋದುದು (1-4). ಪಾಂಡವರನ್ನು ಗುರುತಿಸಲು ದ್ರುಪದನು ಅನೇಕ ವಸ್ತುಗಳನ್ನು ಒಟ್ಟುಹಾಕಿಸಿದುದು (5-15).
01186001 ದೂತ ಉವಾಚ।
01186001a ಜನ್ಯಾರ್ಥಮನ್ನಂ ದ್ರುಪದೇನ ರಾಜ್ಞಾ। ವಿವಾಹಹೇತೋರುಪಸಂಸ್ಕೃತಂ ಚ।
01186001c ತದಾಪ್ನುವಧ್ವಂ ಕೃತಸರ್ವಕಾರ್ಯಾಃ। ಕೃಷ್ಣಾ ಚ ತತ್ರೈವ ಚಿರಂ ನ ಕಾರ್ಯಂ।।
ದೂತನು ಹೇಳಿದನು: “ವರನ ಕಡೆಯವರಿಗಾಗಿ ರಾಜ ದ್ರುಪದನು ಔತಣವನ್ನು ಏರ್ಪಡಿಸಿದ್ದಾನೆ. ಸರ್ವಕಾರ್ಯಗಳನ್ನೂ ಪೂರೈಸಿ ನೀವು ಕೃಷ್ಣೆಯೊಡನೆ ದ್ರುಪದನ ಅರಮನೆಗೆ ಬರಬೇಕು. ತಡಮಾಡಬಾರದು.
01186002a ಇಮೇ ರಥಾಃ ಕಾಂಚನಪದ್ಮಚಿತ್ರಾಃ। ಸದಶ್ವಯುಕ್ತಾ ವಸುಧಾಧಿಪಾರ್ಹಾಃ।
01186002c ಏತಾನ್ಸಮಾರುಹ್ಯ ಪರೈತ ಸರ್ವೇ। ಪಾಂಚಾಲರಾಜಸ್ಯ ನಿವೇಶನಂ ತತ್।।
ಕಾಂಚನಪದ್ಮಚಿತ್ರಗಳಿಂದ ಅಲಂಕೃತ ಅಶ್ವಗಳು ಎಳೆಯುವ, ವಸುಧಾಧಿಪರಿಗೆ ಅರ್ಹ ರಥಗಳು ಇಲ್ಲಿವೆ. ನೀವೆಲ್ಲರೂ ಅವುಗಳನ್ನು ಏರಿ ಪಾಂಚಾಲರಾಜನ ನಿವೇಶನಕ್ಕೆ ಬನ್ನಿ.””
01186003 ವೈಶಂಪಾಯನ ಉವಾಚ।
01186003a ತತಃ ಪ್ರಯಾತಾಃ ಕುರುಪುಂಗವಾಸ್ತೇ। ಪುರೋಹಿತಂ ತಂ ಪ್ರಥಮಂ ಪ್ರಯಾಪ್ಯ।
01186003c ಆಸ್ಥಾಯ ಯಾನಾನಿ ಮಹಾಂತಿ ತಾನಿ। ಕುಂತೀ ಚ ಕೃಷ್ಣಾ ಚ ಸಹೈವ ಯಾತೇ।।
ವೈಶಂಪಾಯನನು ಹೇಳಿದನು: “ನಂತರ ಕುರುಪುಂಗವರು ಆ ವಿಶಾಲ ರಥದಲ್ಲಿ ಮುಂದೆ ಪುರೋಹಿತನನ್ನು ಕೂರಿಸಿ ತಾವೂ ಕುಳಿತುಕೊಂಡು ಹೊರಟರು. ಕುಂತಿ ಮತ್ತು ಕೃಷ್ಣೆ ಇಬ್ಬರೂ ಇನ್ನೊಂದು ರಥದಲ್ಲಿ ಒಟ್ಟಿಗೆ ಕುಳಿತರು.
01186004a ಶ್ರುತ್ವಾ ತು ವಾಕ್ಯಾನಿ ಪುರೋಹಿತಸ್ಯ। ಯಾನ್ಯುಕ್ತವಾನ್ಭಾರತ ಧರ್ಮರಾಜಃ।
01186004c ಜಿಜ್ಞಾಸಯೈವಾಥ ಕುರೂತ್ತಮಾನಾಂ। ದ್ರವ್ಯಾಣ್ಯನೇಕಾನ್ಯುಪಸಂಜಹಾರ।।
ಭಾರತ! ಧರ್ಮರಾಜನು ಹೇಳಿದ್ದುದನ್ನು ಪುರೋಹಿತನಿಂದ ಕೇಳಿದ ನಂತರ ದ್ರುಪದನು ಕುರುಗಳನ್ನು ಗುರುತಿಸುವುದಕ್ಕಾಗಿ ಅನೇಕ ದ್ರವ್ಯಗಳನ್ನು ಒಟ್ಟುಹಾಕಿಸಿದನು.
01186005a ಫಲಾನಿ ಮಾಲ್ಯಾನಿ ಸುಸಂಸ್ಕೃತಾನಿ। ಚರ್ಮಾಣಿ ವರ್ಮಾಣಿ ತಥಾಸನಾನಿ।
01186005c ಗಾಶ್ಚೈವ ರಾಜನ್ನಥ ಚೈವ ರಜ್ಜೂರ್- ದ್ರವ್ಯಾಣಿ ಚಾನ್ಯಾನಿ ಕೃಷೀನಿಮಿತ್ತಂ।।
ರಾಜನ್! ಫಲಗಳು, ಸುಂದರವಾಗಿ ಹೆಣೆದ ಮಾಲೆಗಳು, ಚರ್ಮ, ವರ್ಮ, ಆಸನಗಳು, ಹಸುಗಳು, ಹಗ್ಗಗಳು, ಮತ್ತು ಕೃಷಿಗೆ ಸಂಬಂಧಿಸಿದ ಇತರ ದ್ರವ್ಯಗಳನ್ನು ತರಿಸಿದ್ದನು.
01186006a ಅನ್ಯೇಷು ಶಿಲ್ಪೇಷು ಚ ಯಾನ್ಯಪಿ ಸ್ಯುಃ। ಸರ್ವಾಣಿ ಕಲ್ಪಾನ್ಯಖಿಲೇನ ತತ್ರ।
01186006c ಕ್ರೀಡಾನಿಮಿತ್ತಾನಿ ಚ ಯಾನಿ ತಾನಿ। ಸರ್ವಾಣಿ ತತ್ರೋಪಜಹಾರ ರಾಜಾ।।
ಶಿಲ್ಪ ಮತ್ತು ವ್ಯಾಪಾರಗಳಲ್ಲಿ ಬಳಸುವ ಅನ್ಯ ಸರ್ವ ವಸ್ತುಗಳನ್ನೂ, ಕ್ರೀಡೆಗಳಲ್ಲಿ ಬಳಸುವ ಸರ್ವವಸ್ತುಗಳನ್ನೂ ರಾಜನು ತರಿಸಿದ್ದನು.
01186007a ರಥಾಶ್ವವರ್ಮಾಣಿ ಚ ಭಾನುಮಂತಿ। ಖಡ್ಗಾ ಮಹಾಂತೋಽಶ್ವರಥಾಶ್ಚ ಚಿತ್ರಾಃ।
01186007c ಧನೂಂಷಿ ಚಾಗ್ರ್ಯಾಣಿ ಶರಾಶ್ಚ ಮುಖ್ಯಾಃ। ಶಕ್ತ್ಯೃಷ್ಟಯಃ ಕಾಂಚನಭೂಷಿತಾಶ್ಚ।।
ಹೊಳೆಯುತ್ತಿರುವ ರಥ, ಅಶ್ವ, ಕವಚಗಳು, ಮಹಾ ಖಡ್ಗಗಳು, ಚಿತ್ರಣಗಳಿಂದ ಕೂಡಿದ ರಥಾಶ್ವಗಳು, ಆರಿಸಿದ್ದ ಬಿಲ್ಲುಗಳು, ಮುಖ್ಯ ಬಾಣಗಳು, ಭಲ್ಲಗಳು, ಮತ್ತು ಕಾಂಚನಭೂಷಿತ ಶಕ್ತಿ ಮುಂತಾದವುಗಳನ್ನೂ ತರಿಸಿದ್ದನು.
01186008a ಪ್ರಾಸಾ ಭುಶುಂಡ್ಯಶ್ಚ ಪರಶ್ವಧಾಶ್ಚ। ಸಾಂಗ್ರಾಮಿಕಂ ಚೈವ ತಥೈವ ಸರ್ವಂ।
01186008c ಶಯ್ಯಾಸನಾನ್ಯುತ್ತಮಸಂಸ್ಕೃತಾನಿ। ತಥೈವ ಚಾಸನ್ವಿವಿಧಾನಿ ತತ್ರ।।
ಪ್ರಾಸಗಳು, ಭುಷುಂಡಗಳು, ಪರಶುಗಳು, ಮತ್ತು ಎಲ್ಲ ತರಹದ ಸಂಗ್ರಾಮ ಸಾಮಗ್ರಿಗಳನ್ನೂ, ಹಾಗೆಯೇ ಉತ್ತಮವಾಗಿ ತಯಾರಿಸಲ್ಪಟ್ಟ ವಿವಿಧ ಶಯ್ಯಾಸನಗಳನ್ನೂ ತರಿಸಿದ್ದನು.
01186009a ಕುಂತೀ ತು ಕೃಷ್ಣಾಂ ಪರಿಗೃಹ್ಯ ಸಾಧ್ವೀಂ। ಅಂತಃಪುರಂ ದ್ರುಪದಸ್ಯಾವಿವೇಷ।
01186009c ಸ್ತ್ರಿಯಶ್ಚ ತಾಂ ಕೌರವರಾಜಪತ್ನೀಂ। ಪ್ರತ್ಯರ್ಚಯಾಂ ಚಕ್ರುರದೀನಸತ್ತ್ವಾಃ।।
ಕುಂತಿಯು ಸಾಧ್ವಿ ಕೃಷ್ಣೆಯನ್ನು ಕರೆದುಕೊಂಡು ದ್ರುಪದನ ಅಂತಃಪುರವನ್ನು ಪ್ರವೇಶಿಸಿದಳು. ಅಲ್ಲಿ ಉತ್ಸುಕ ಸ್ತ್ರೀಯರು ಕೌರವರಾಜಪತ್ನಿಯ ಉಪಚಾರದಲ್ಲಿ ತೊಡಗಿದರು.
01186010a ತಾನ್ಸಿಂಹವಿಕ್ರಾಂತಗತೀನವೇಕ್ಷ್ಯ। ಮಹರ್ಷಭಾಕ್ಷಾನಜಿನೋತ್ತರೀಯಾನ್।
01186010c ಗೂಢೋತ್ತರಾಂಸಾನ್ಭುಜಗೇಂದ್ರಭೋಗ। ಪ್ರಲಂಬಬಾಹೂನ್ಪುರುಷಪ್ರವೀರಾನ್।।
01186011a ರಾಜಾ ಚ ರಾಜ್ಞಃ ಸಚಿವಾಶ್ಚ ಸರ್ವೇ। ಪುತ್ರಾಶ್ಚ ರಾಜ್ಞಃ ಸುಹೃದಸ್ತಥೈವ।
01186011c ಪ್ರೇಷ್ಯಾಶ್ಚ ಸರ್ವೇ ನಿಖಿಲೇನ ರಾಜನ್। ಹರ್ಷಂ ಸಮಾಪೇತುರತೀವ ತತ್ರ।।
ರಾಜನ್! ಭುಜಗೇಂದ್ರನಂತೆ ಕೆತ್ತಿದ್ದ ನೀಳ ಬಾಹುಗಳ ಎಡಭುಜಗಳನ್ನು ಜಿನದ ಉತ್ತರೀಯದಿಂದ ಮುಚ್ಚಿ ಸಿಂಹವಿಕ್ರಾಂತರಂತೆ ನಡೆದು ಬರುತ್ತಿದ್ದ ಆ ಮಹರ್ಷಭ ಪುರುಷವೀರರನ್ನು ತಾವು ಇದ್ದಲ್ಲಿಂದಲೇ ನೋಡಿದ ರಾಜ ಮತ್ತು ರಾಜನ ಸರ್ವ ಸಚಿವರೂ, ರಾಜಪುತ್ರರೂ, ಸುಹೃದಯರೂ, ಸರ್ವ ನಿಖಿಲ ಪರಿಚಾರಕರೂ ಅತೀವ ಹರ್ಷಿತರಾದರು.
01186012a ತೇ ತತ್ರ ವೀರಾಃ ಪರಮಾಸನೇಷು। ಸಪಾದಪೀಠೇಷ್ವವಿಶಂಕಮಾನಾಃ।
01186012c ಯಥಾನುಪೂರ್ವ್ಯಾ ವಿವಿಶುರ್ನರಾಗ್ರ್ಯಾಸ್- ತದಾ ಮಹಾರ್ಹೇಷು ನ ವಿಸ್ಮಯಂತಃ।।
ಆ ನರಾಗ್ರ ವೀರರು ಅಲ್ಲಿಯ ಮಹಾ ವೈಭವವನ್ನು ನೋಡಿ ಸ್ವಲ್ಪವೂ ವಿಸ್ಮಿತರಾಗದೇ ವಿಶಂಕರಾಗಿ ಪಾದಪೀಠಗಳನ್ನು ಹೊಂದಿದ್ದ ಉತ್ತಮ ಆಸನಗಳಲ್ಲಿ ವಯಸ್ಸಿಗನುಗುಣವಾಗಿ ಕುಳಿತುಕೊಂಡರು.
01186013a ಉಚ್ಚಾವಚಂ ಪಾರ್ಥಿವಭೋಜನೀಯಂ। ಪಾತ್ರೀಷು ಜಾಂಬೂನದರಾಜತೀಷು।
01186013c ದಾಸಾಶ್ಚ ದಾಸ್ಯಶ್ಚ ಸುಮೃಷ್ಟವೇಷಾಃ। ಭೋಜಾಪಕಾಶ್ಚಾಪ್ಯುಪಜಹ್ರುರನ್ನಂ।।
ಸುಂದರ ಶುಭ್ರವಸ್ತ್ರಗಳನ್ನು ಧರಿಸಿದ ಅಡುಗೆಯವರು ತಯಾರಿಸಿದ ಪಾರ್ಥಿವರ ಭೋಜನಕ್ಕೆ ಯೋಗ್ಯ ಎಲ್ಲಾ ತರಹದ ಆಹಾರವನ್ನು ಚಿನ್ನ ಮತ್ತು ಬಂಗಾರದ ಪಾತ್ರೆಗಳಲ್ಲಿ ಸುಂದರ ಉಡುಪುಗಳನ್ನು ಧರಿಸಿದ್ದ ದಾಸ ದಾಸಿಯರು ನೀಡಿದರು.
01186014a ತೇ ತತ್ರ ಭುಕ್ತ್ವಾ ಪುರುಷಪ್ರವೀರಾ। ಯಥಾನುಕಾಮಂ ಸುಭೃಶಂ ಪ್ರತೀತಾಃ।
01186014c ಉತ್ಕ್ರಮ್ಯ ಸರ್ವಾಣಿ ವಸೂನಿ ತತ್ರ। ಸಾಂಗ್ರಾಮಿಕಾನ್ಯಾವಿವಿಶುರ್ನೃವೀರಾಃ।।
ಆ ಪುರುಷಪ್ರವೀರರು ಭೋಜನವನ್ನು ಮುಗಿಸಿ, ಮನೋಕಾಮದಂತೆ ವಿಶ್ರಾಂತಿಪಡೆದು ಅಲ್ಲಿರಿಸಿದ್ದ ಸರ್ವ ವಸ್ತುಗಳನ್ನೂ ನೋಡುತ್ತಾ ಸಾಂಗ್ರಾಮಿಕ ವಸ್ತುಗಳ ಕಡೆಗೆ ಆ ವೀರರು ನಡೆದರು.
01186015a ತಲ್ಲಕ್ಷಯಿತ್ವಾ ದ್ರುಪದಸ್ಯ ಪುತ್ರೋ। ರಾಜಾ ಚ ಸರ್ವೈಃ ಸಹ ಮಂತ್ರಿಮುಖ್ಯೈಃ।
01186015c ಸಮರ್ಚಯಾಮಾಸುರುಪೇತ್ಯ ಹೃಷ್ಟಾಃ। ಕುಂತೀಸುತಾನ್ಪಾರ್ಥಿವಪುತ್ರಪೌತ್ರಾನ್।।
ಅದನ್ನು ನೋಡಿದ ದ್ರುಪದನ ಪುತ್ರರು, ರಾಜ ಮತ್ತು ಜೊತೆಗಿದ್ದ ಸರ್ವ ಮಂತ್ರಿಪ್ರಮುಖರೂ ಹೃಷ್ಟರಾಗಿ ಪಾರ್ಥಿವ ಪುತ್ರಪೌತ್ರ ಕುಂತೀಸುತರನ್ನು ಉಪಚರಿಸಿದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ವೈವಾಹಿಕಪರ್ವಣಿ ಯುಧಿಷ್ಠಿರಾದಿಪರೀಕ್ಷಣೇ ಷಡಶೀತ್ಯಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ವೈವಾಹಿಕಪರ್ವದಲ್ಲಿ ಯುಧಿಷ್ಠಿರಾದಿಪರೀಕ್ಷಣದಲ್ಲಿ ನೂರಾಎಂಭತ್ತಾರನೆಯ ಅಧ್ಯಾಯವು.