ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಸ್ವಯಂವರ ಪರ್ವ
ಅಧ್ಯಾಯ 185
ಸಾರ
ದೃಷ್ಟದ್ಯುಮ್ನನು ತನ್ನ ತಂದೆಗೆ ಕೃಷ್ಣೆಯನ್ನು ಯಾರು ಪಡೆದರು ಮತ್ತು ಏನಾಯಿತು ಎನ್ನುವುದನ್ನು ವರದಿಮಾಡಿದುದು (1-13). ಪ್ರಹೃಷ್ಟ ದ್ರುಪದನಿಂದ ಕಳುಹಿಸಲ್ಪಟ್ಟ ಪುರೋಹಿತನು ಪಾಂಡವರಲ್ಲಿಗೆ ಬಂದು ಸಂದೇಶವನ್ನು ನೀಡಿದುದು (14-28).
01185001 ವೈಶಂಪಾಯನ ಉವಾಚ।
01185001a ತತಸ್ತಥೋಕ್ತಃ ಪರಿಹೃಷ್ಟರೂಪಃ। ಪಿತ್ರೇ ಶಶಂಸಾಥ ಸ ರಾಜಪುತ್ರಃ।
01185001c ಧೃಷ್ಟದ್ಯುಮ್ನಃ ಸೋಮಕಾನಾಂ ಪ್ರಬರ್ಹೋ। ವೃತ್ತಂ ಯಥಾ ಯೇನ ಹೃತಾ ಚ ಕೃಷ್ಣಾ।।
ವೈಶಂಪಾಯನನು ಹೇಳಿದನು: “ಈ ಮಾತುಗಳನ್ನು ಕೇಳಿ ಸಂತೋಷಗೊಂಡ ಸೋಮಕರ ಪ್ರಭೆ ರಾಜಪುತ್ರ ಧೃಷ್ಟದ್ಯುಮ್ನನು ತನ್ನ ತಂದೆಗೆ ಕೃಷ್ಣೆಯನ್ನು ಯಾರು ಪಡೆದರು ಮತ್ತು ಏನಾಯಿತು ಎನ್ನುವುದನ್ನು ವರದಿಮಾಡಿದನು.
01185002a ಯೋಽಸೌ ಯುವಾ ಸ್ವಾಯತಲೋಹಿತಾಕ್ಷಃ। ಕೃಷ್ಣಾಜಿನೀ ದೇವಸಮಾನರೂಪಃ।
01185002c ಯಃ ಕಾರ್ಮುಕಾಗ್ರ್ಯಂ ಕೃತವಾನಧಿಜ್ಯಂ। ಲಕ್ಷ್ಯಂ ಚ ತತ್ಪಾತಿತವಾನ್ಪೃಥಿವ್ಯಾಂ।।
01185003a ಅಸಜ್ಜಮಾನಶ್ಚ ಗತಸ್ತರಸ್ವೀ। ವೃತೋ ದ್ವಿಜಾಗ್ರ್ಯೈರಭಿಪೂಜ್ಯಮಾನಃ।
01185003c ಚಕ್ರಾಮ ವಜ್ರೀವ ದಿತೇಃ ಸುತೇಷು। ಸರ್ವೈಶ್ಚ ದೇವೈರೃಷಿಭಿಶ್ಚ ಜುಷ್ಟಃ।।
“ಕೆಂಪು ಮತ್ತು ಅಗಲ ಸುಂದರ ಕಣ್ಣುಗಳ, ಕೃಷ್ಣಾಜಿನದಲ್ಲಿದ್ದೂ ದೇವಸಮಾನರೂಪಿ, ಅಗ್ರ ಧನುಸ್ಸಿಗೆ ದಾರವನ್ನು ಕಟ್ಟಿ ಗುರಿಯನ್ನು ಕೆಳಕ್ಕುರುಳಿಸಿದ ಆ ಯುವಕನು ವಜ್ರಿಯು ಸರ್ವ ದೇವರ್ಷಿ ಋಷಿಗಳಿಂದ ಸುತ್ತುವರೆಯಲ್ಪಟ್ಟು ದಿತಿಯ ಮಕ್ಕಳನ್ನು ಗಮನಿಸದೇ ಹೇಗೆ ಹೋಗುತ್ತಾನೋ ಹಾಗೆ ಅಲ್ಲಿ ನೆರದಿದ್ದ ಯಾರನ್ನೂ ಗಮನಿಸದೇ ಬ್ರಾಹ್ಮಣ ಹಿರಿಯರಿಂದ ಸುತ್ತುವರೆಯಲ್ಪಟ್ಟು ಪ್ರಶಂಸನೆಗೊಳ್ಳುತ್ತಾ ಅವಸರದಲ್ಲಿ ಅಲ್ಲಿಂದ ಹೊರಟುಹೋದನು.
01185004a ಕೃಷ್ಣಾ ಚ ಗೃಹ್ಯಾಜಿನಮನ್ವಯಾತ್ತಂ। ನಾಗಂ ಯಥಾ ನಾಗವಧೂಃ ಪ್ರಹೃಷ್ಟಾ।
01185004c ಅಮೃಷ್ಯಮಾಣೇಷು ನರಾಧಿಪೇಷು। ಕ್ರುದ್ಧೇಷು ತಂ ತತ್ರ ಸಮಾಪತತ್ಸು।।
ಅದನ್ನು ಸಹಿಸಲಾಗದ ನರಾಧಿಪರು ಕ್ರುದ್ಧರಾಗಿ ಅವನ ಮೇಲೆ ಬೀಳುತ್ತಿರಲು ಕೃಷ್ಣೆಯು ಕೆಳಗಿಳಿದಿದ್ದ ಅವನ ಜಿನದ ತುದಿಯನ್ನು ಹಿಡಿದು ನಾಗವಧುವು ನಾಗವನ್ನು ಹೇಗೋ ಹಾಗೆ ಸಂತೋಷದಿಂದ ಹಿಂಬಾಲಿಸಿದಳು.
01185005a ತತೋಽಪರಃ ಪಾರ್ಥಿವರಾಜಮಧ್ಯೇ। ಪ್ರವೃದ್ಧಮಾರುಜ್ಯ ಮಹೀಪ್ರರೋಹಂ।
01185005c ಪ್ರಕಾಲಯನ್ನೇವ ಸ ಪಾರ್ಥಿವೌಘಾನ್। ಕ್ರುದ್ಧೋಽಮ್ತಕಃ ಪ್ರಾಣಭೃತೋ ಯಥೈವ।।
ಆಗ ಪಾರ್ಥಿವರಾಜಮಧ್ಯದಲ್ಲಿದ್ದ ಓರ್ವನು ದೊಡ್ಡದಾಗಿ ಬೆಳೆದಿದ್ದ ವೃಕ್ಷವೊಂದನ್ನು ಭೂಮಿಯಿಂದ ಕಿತ್ತು ಕೃದ್ಧ ಅಂತಕನು ಪ್ರಾಣಭೃತರ ಮೇಲೆ ಹೇಗೋ ಹಾಗೆ ಆ ಪಾರ್ಥಿವಗಣದ ಮೇಲೆ ಎರಗಿ ಪಲಾಯನಹೋಗುವಂತೆ ಮಾಡಿದನು.
01185006a ತೌ ಪಾರ್ಥಿವಾನಾಂ ಮಿಷತಾಂ ನರೇಂದ್ರ। ಕೃಷ್ಣಾಮುಪಾದಾಯ ಗತೌ ನರಾಗ್ರ್ಯೌ।
01185006c ವಿಭ್ರಾಜಮಾನಾವಿವ ಚಂದ್ರಸೂರ್ಯೌ। ಬಾಹ್ಯಾಂ ಪುರಾದ್ಭಾರ್ಗವಕರ್ಮಶಾಲಾಂ।।
ನರೇಂದ್ರ! ಪಾರ್ಥಿವರು ನೋಡುತ್ತಿದ್ದಂತೆಯೇ ಚಂದ್ರಸೂರ್ಯರಂತೆ ಹೊಳೆಯುತ್ತಿದ್ದ ಆ ಇಬ್ಬರು ನರವ್ಯಾಘ್ರರು ಕೃಷ್ಣೆಯನ್ನು ಕರೆದುಕೊಂಡು ಪುರದ ಹೊರಗಿರುವ ಭಾರ್ಗವಕರ್ಮಶಾಲೆಗೆ ಹೊರಟುಹೋದರು.
01185007a ತತ್ರೋಪವಿಷ್ಟಾರ್ಚಿರಿವಾನಲಸ್ಯ। ತೇಷಾಂ ಜನಿತ್ರೀತಿ ಮಮ ಪ್ರತರ್ಕಃ।
01185007c ತಥಾವಿಧೈರೇವ ನರಪ್ರವೀರೈರ್- ಉಪೋಪವಿಷ್ಟೈಸ್ತ್ರಿಭಿರಗ್ನಿಕಲ್ಪೈಃ।।
ಅಲ್ಲಿ ಅಗ್ನಿಯ ಜ್ವಾಲೆಯಂತೆ ಬೆಳಗುತ್ತಿದ್ದ, ನನ್ನ ಮತದಂತೆ ಅವರ ತಾಯಿಯು, ಕುಳಿತುಕೊಂಡಿದ್ದಳು. ಅವಳ ಸುತ್ತಲೂ ಕುಳಿತುಕೊಂಡ ಅಗ್ನಿಸಮಾನ ಮೂವರು ನರಪ್ರವೀರರು ಅಗ್ನಿಗಳಂತೆ ತೋರುತ್ತಿದ್ದರು.
01185008a ತಸ್ಯಾಸ್ತತಸ್ತಾವಭಿವಾದ್ಯ ಪಾದಾವ್- ಉಕ್ತ್ವಾ ಚ ಕೃಷ್ಣಾಮಭಿವಾದಯೇತಿ।
01185008c ಸ್ಥಿತೌ ಚ ತತ್ರೈವ ನಿವೇದ್ಯ ಕೃಷ್ಣಾಂ। ಭೈಕ್ಷಪ್ರಚಾರಾಯ ಗತಾ ನರಾಗ್ರ್ಯಾಃ।।
ಅವರಿಬ್ಬರೂ ಅವಳ ಪಾದಕ್ಕೆ ಅಭಿವಂದಿಸಿದರು ಮತ್ತು ಅವಳನ್ನು ಅಭಿವಂದಿಸಲು ಕೃಷ್ಣೆಗೂ ಹೇಳಿದರು. ಅಲ್ಲಿಯೇ ನಿಂತು ಕೃಷ್ಣೆಯನ್ನು ಒಪ್ಪಿಸಿ ಆ ನರವ್ಯಾಘ್ರರು ಭಿಕ್ಷೆಗೆಂದು ಹೊರಟುಹೋದರು.
01185009a ತೇಷಾಂ ತು ಭೈಕ್ಷಂ ಪ್ರತಿಗೃಹ್ಯ ಕೃಷ್ಣಾ। ಕೃತ್ವಾ ಬಲಿಂ ಬ್ರಾಹ್ಮಣಸಾಚ್ಚ ಕೃತ್ವಾ।
01185009c ತಾಂ ಚೈವ ವೃದ್ಧಾಂ ಪರಿವಿಷ್ಯ ತಾಂಶ್ಚ। ನರಪ್ರವೀರಾನ್ಸ್ವಯಮಪ್ಯಭುಂಕ್ತ।।
ಕೃಷ್ಣೆಯು ಅವರಿಂದ ಭಿಕ್ಷವನ್ನು ತೆಗೆದುಕೊಂಡು ಬಲಿಯನ್ನು ಮಾಡಿ ಬ್ರಾಹ್ಮಣರಿಗೆ ನೀಡಿದಳು. ನಂತರ ಅದನ್ನು ಆ ವೃದ್ಧೆಗೆ ಮತ್ತು ನರಪ್ರವೀರರಿಗೆ ನೀಡಿ, ತಾನೂ ಊಟಮಾಡಿದಳು.
01185010a ಸುಪ್ತಾಸ್ತು ತೇ ಪಾರ್ಥಿವ ಸರ್ವ ಏವ। ಕೃಷ್ಣಾ ತು ತೇಷಾಂ ಚರಣೋಪಧಾನಂ।
01185010c ಆಸೀತ್ಪೃಥಿವ್ಯಾಂ ಶಯನಂ ಚ ತೇಷಾಂ। ದರ್ಭಾಜಿನಾಗ್ರ್ಯಾಸ್ತರಣೋಪಪನ್ನಂ।।
ಪಾರ್ಥಿವ! ಅವರೆಲ್ಲರೂ ಅವರ ದರ್ಭೆ ಮತ್ತು ಜಿನಗಳನ್ನು ನೆಲದ ಮೇಲೆ ಹಾಸಿ ಅಲ್ಲಿಯೇ ಮಲಗಿಕೊಂಡರು. ಕೃಷ್ಣೆಯು ಅವರ ಚರಣಗಳ ಕಡೆಯಲ್ಲಿ ಕಾಲುದಿಂಬಾಗಿ ಮಲಗಿಕೊಂಡಳು.
01185011a ತೇ ನರ್ದಮಾನಾ ಇವ ಕಾಲಮೇಘಾಃ। ಕಥಾ ವಿಚಿತ್ರಾಃ ಕಥಯಾಂ ಬಭೂವುಃ।
01185011c ನ ವೈಶ್ಯಶೂದ್ರೌಪಯಿಕೀಃ ಕಥಾಸ್ತಾ। ನ ಚ ದ್ವಿಜಾತೇಃ ಕಥಯಂತಿ ವೀರಾಃ।।
ನಂತರ ಅವರು ಕಾಲಮೇಘವು ಗರ್ಜಿಸುವಂತೆ ವಿಚಿತ್ರ ಮಾತುಕಥೆಗಳನ್ನಾಡಿದರು. ಆ ಮಾತುಗಳು ವೈಶ್ಯರು ಆಡುವ ಮಾತುಗಳಂತಿರಲಿಲ್ಲ. ಆ ವೀರರು ಬ್ರಾಹ್ಮಣರಂತೆಯೂ ಮಾತನಾಡಿಕೊಳ್ಳುತ್ತಿರಲಿಲ್ಲ.
01185012a ನಿಃಸಂಶಯಂ ಕ್ಷತ್ರಿಯಪುಂಗವಾಸ್ತೇ। ಯಥಾ ಹಿ ಯುದ್ಧಂ ಕಥಯಂತಿ ರಾಜನ್।
01185012c ಆಶಾ ಹಿ ನೋ ವ್ಯಕ್ತಮಿಯಂ ಸಮೃದ್ಧಾ। ಮುಕ್ತಾನ್ ಹಿ ಪಾರ್ಥಾಂಶೃಣುಮೋಽಗ್ನಿದಾಹಾತ್।।
ಅವರು ನಿಸ್ಸಂಶಯವಾಗಿಯೂ ಕ್ಷತ್ರಿಯ ಪುಂಗವರೇ. ಯಾಕೆಂದರೆ ರಾಜನ್! ಅವರು ಯುದ್ಧದ ಕುರಿತು ಮಾತನಾಡುತ್ತಿದ್ದರು. ನಮ್ಮ ಆಸೆಯು ನಿಶ್ಚಯವಾಗಿಯೂ ಪೂರೈಸಿದೆ ಎನ್ನುವುದು ವ್ಯಕ್ತವಾಗಿದೆ. ಪಾರ್ಥರು ಆ ಬೆಂಕಿಯಿಂದ ತಪ್ಪಿಸಿಕೊಂಡಿದ್ದರೆಂದು ಕೇಳುತ್ತೇವೆ.
01185013a ಯಥಾ ಹಿ ಲಕ್ಷ್ಯಂ ನಿಹತಂ ಧನುಶ್ಚ। ಸಜ್ಯಂ ಕೃತಂ ತೇನ ತಥಾ ಪ್ರಸಹ್ಯ।
01185013c ಯಥಾ ಚ ಭಾಷಂತಿ ಪರಸ್ಪರಂ ತೇ। ಚನ್ನಾ ಧ್ರುವಂ ತೇ ಪ್ರಚರಂತಿ ಪಾರ್ಥಾಃ।।
ಧನುಸ್ಸನ್ನು ಬಿಗಿದು ಹೇಗೆ ಲಕ್ಷ್ಯವನ್ನು ಹೊಡೆಯಲಾಯಿತೋ, ಯೋದ್ಧನ ಶಕ್ತಿಯಿಂದ ಹೇಗೆ ಆ ಯಂತ್ರವನ್ನು ಕೆಳಗುರಿಳಿಸಲಾಯಿತೋ, ಮತ್ತು ಪರಸ್ಪರರಲ್ಲಿ ಅವರು ಹೇಗೆ ಮಾತನಾಡಿಕೊಳ್ಳುತ್ತಿದ್ದರೋ ಇವೆಲ್ಲವುಗಳೂ ಅವರು ನಿಜವಾಗಿಯೂ ಅಡಗಿರುವ ಪಾರ್ಥರೆಂದು ಸೂಚಿಸುತ್ತವೆ.”
01185014a ತತಃ ಸ ರಾಜಾ ದ್ರುಪದಃ ಪ್ರಹೃಷ್ಟಃ। ಪುರೋಹಿತಂ ಪ್ರೇಷಯಾಂ ತತ್ರ ಚಕ್ರೇ।
01185014c ವಿದ್ಯಾಮ ಯುಷ್ಮಾನಿತಿ ಭಾಷಮಾಣೋ। ಮಹಾತ್ಮನಃ ಪಾಂಡುಸುತಾಃ ಸ್ಥ ಕಚ್ಚಿತ್।।
ಆಗ ರಾಜ ದ್ರುಪದನು ಪ್ರಹೃಷ್ಟನಾಗಿ ತಕ್ಷಣವೇ ತನ್ನ ಪುರೋಹಿತನನ್ನು ಅಲ್ಲಿಗೆ ಕಳುಹಿಸಿದನು: “ನೀವು ಯಾರೆಂದು ನಾವು ತಿಳಿದಿದ್ದೇವೆ. ಎಲ್ಲಿಯಾದರೂ ನೀವು ಮಹಾತ್ಮ ಪಾಂಡುವಿನ ಮಕ್ಕಳಿರಬಹುದೇ? ಎಂದು ಹೋಗಿ ಕೇಳು.”
01185015a ಗೃಹೀತವಾಕ್ಯೋ ನೃಪತೇಃ ಪುರೋಧಾ। ಗತ್ವಾ ಪ್ರಶಂಸಾಮಭಿಧಾಯ ತೇಷಾಂ।
01185015c ವಾಕ್ಯಂ ಯಥಾವನ್ನೃಪತೇಃ ಸಮಗ್ರಂ। ಉವಾಚ ತಾನ್ಸ ಕ್ರಮವಿತ್ಕ್ರಮೇಣ।।
ಪುರೋಹಿತನು ನೃಪತಿಯ ವಾಕ್ಯಗಳನ್ನು ತೆಗೆದುಕೊಂಡು ಹೋಗಿ ಅವರನ್ನು ಪ್ರಶಂಸಿಸಿದನು. ನೃಪತಿಯು ಹೇಗೆ ಹೇಳಿ ಕಳುಹಿಸಿದ್ದನೋ ಸಮಗ್ರ ಎಲ್ಲವನ್ನೂ ಕ್ರಮವತ್ತಾಗಿ ಹೇಳಿದನು.
01185016a ವಿಜ್ಞಾತುಮಿಚ್ಛತ್ಯವನೀಶ್ವರೋ ವಃ। ಪಾಂಚಾಲರಾಜೋ ದ್ರುಪದೋ ವರಾರ್ಹಾಃ।
01185016c ಲಕ್ಷ್ಯಸ್ಯ ವೇದ್ಧಾರಮಿಮಂ ಹಿ ದೃಷ್ಟ್ವಾ। ಹರ್ಷಸ್ಯ ನಾಂತಂ ಪರಿಪಶ್ಯತೇ ಸಃ।।
“ಅವನೀಶ್ವರ ಪಾಂಚಾಲರಾಜ ದ್ರುಪದನು ವರಾರ್ಹ ನಿಮ್ಮನ್ನು ತಿಳಿಯಲು ಬಯಸುತ್ತಾನೆ. ಲಕ್ಷ್ಯವನ್ನು ಹೊಡೆದು ಕೆಳಗುರಿಳಿಸಿದವನನ್ನು ನೋಡಿದ ಅವನ ಹರ್ಷಕ್ಕೆ ಅಂತ್ಯವೇ ಕಾಣುತ್ತಿಲ್ಲ.
01185017a ತದಾಚಡ್ಢ್ವಂ ಜ್ಞಾತಿಕುಲಾನುಪೂರ್ವೀಂ। ಪದಂ ಶಿರಃಸು ದ್ವಿಷತಾಂ ಕುರುಧ್ವಂ।
01185017c ಪ್ರಹ್ಲಾದಯಧ್ವಂ ಹೃದಯಂ ಮಮೇದಂ। ಪಾಂಚಾಲರಾಜಸ್ಯ ಸಹಾನುಗಸ್ಯ।।
ನಿಮ್ಮ ಹಿನ್ನೆಲೆ ಜ್ಞಾತಿಕುಲವನ್ನು ಹೇಳಿಕೊಂಡು ನಿಮ್ಮ ದ್ವೇಷಿಗಳ ತಲೆಯಮೇಲೆ ಕಾಲನ್ನಿಡಿ ಮತ್ತು ಸಹಾನುಗ ಪಾಂಚಾಲರಾಜನ ಈ ಹೃದಯವನ್ನು ಸಂತೋಷದಿಂದ ತುಂಬಿಸಿರಿ.
01185018a ಪಾಂಡುರ್ಹಿ ರಾಜಾ ದ್ರುಪದಸ್ಯ ರಾಜ್ಞಃ। ಪ್ರಿಯಃ ಸಖಾ ಚಾತ್ಮಸಮೋ ಬಭೂವ।
01185018c ತಸ್ಯೈಷ ಕಾಮೋ ದುಹಿತಾ ಮಮೇಯಂ। ಸ್ನುಷಾ ಯದಿ ಸ್ಯಾದಿತಿ ಕೌರವಸ್ಯ।।
ರಾಜ ಪಾಂಡುವು ರಾಜ ದ್ರುಪದನಿಗೆ ಪ್ರಿಯಸಖನಾಗಿದ್ದು ಅತ್ಮಸಮನಾಗಿದ್ದನು. “ನನ್ನ ಈ ಮಗಳು ಆ ಕೌರವನ ಸೊಸೆಯಾಗಬೇಕೆಂಬುದೇ ನನ್ನ ಆಸೆಯಾಗಿತ್ತು.
01185019a ಅಯಂ ಚ ಕಾಮೋ ದ್ರುಪದಸ್ಯ ರಾಜ್ಞೋ। ಹೃದಿ ಸ್ಥಿತೋ ನಿತ್ಯಮನಿಂದಿತಾಂಗಾಃ।
01185019c ಯದರ್ಜುನೋ ವೈ ಪೃಥುದೀರ್ಘಬಾಹುರ್- ಧರ್ಮೇಣ ವಿಂದೇತ ಸುತಾಂ ಮಮೇತಿ।।
ಅನಿಂದಿತಾಂಗರೇ! ಪೃಥುದೀರ್ಘಬಾಹು ಅರ್ಜುನನೇ ನನ್ನ ಸುತೆಯನ್ನು ಧರ್ಮಪೂರ್ವಕ ವಿವಾಹವಾಗಲಿ” ಎಂಬ ಈ ಆಸೆಯು ರಾಜ ದ್ರುಪದನ ಹೃದಯದಲ್ಲಿ ಯಾವಾಗಲೂ ನೆಲೆಸಿತ್ತು.”
01185020a ತಥೋಕ್ತವಾಕ್ಯಂ ತು ಪುರೋಹಿತಂ ತಂ। ಸ್ಥಿತಂ ವಿನೀತಂ ಸಮುದೀಕ್ಷ್ಯ ರಾಜಾ।
01185020c ಸಮೀಪಸ್ಥಂ ಭೀಮಮಿದಂ ಶಶಾಸ। ಪ್ರದೀಯತಾಂ ಪಾದ್ಯಮರ್ಘ್ಯಂ ತಥಾಸ್ಮೈ।।
ಈ ರೀತಿ ತನ್ನ ಮಾತುಗಳನ್ನು ಹೇಳಿ ವಿನೀತನಾಗಿ ನಿಂತಿದ್ದ ಪುರೋಹಿತನನ್ನು ನೋಡಿದ ರಾಜನು “ಇವನಿಗೆ ಪಾದ್ಯ ಮತ್ತು ಅರ್ಘ್ಯಗಳನ್ನು ನೀಡು!” ಎಂದು ಹತ್ತಿರದಲ್ಲಿದ್ದ ಭೀಮನಿಗೆ ಆಜ್ಞೆಯನ್ನಿತ್ತನು.
01185021a ಮಾನ್ಯಃ ಪುರೋಧಾ ದ್ರುಪದಸ್ಯ ರಾಜ್ಞಸ್- ತಸ್ಮೈ ಪ್ರಯೋಜ್ಯಾಭ್ಯಧಿಕೈವ ಪೂಜಾ।
01185021c ಭೀಮಸ್ತಥಾ ತತ್ಕೃತವಾನ್ನರೇಂದ್ರ। ತಾಂ ಚೈವ ಪೂಜಾಂ ಪ್ರತಿಸಂಗೃಹೀತ್ವಾ।।
“ರಾಜ ದ್ರುಪದನ ಪುರೋಹಿತನು ಮಾನ್ಯನು. ಅವನಿಗೆ ಅಧಿಕ ಪೂಜೆಯನ್ನೇ ನೀಡೋಣ!” ನರೇಂದ್ರ! ಭೀಮನು ಹಾಗೆಯೇ ಮಾಡಲು ಅವನೂ ಕೂಡ ಆ ಪೂಜೆಯನ್ನು ಪ್ರತಿಸಂಗ್ರಹಿಸಿದನು.
01185022a ಸುಖೋಪವಿಷ್ಟಂ ತು ಪುರೋಹಿತಂ ತಂ। ಯುಧಿಷ್ಠಿರೋ ಬ್ರಾಹ್ಮಣಮಿತ್ಯುವಾಚ।
01185022c ಪಾಂಚಾಲರಾಜೇನ ಸುತಾ ನಿಸೃಷ್ಟಾ। ಸ್ವಧರ್ಮದೃಷ್ಟೇನ ಯಥಾನುಕಾಮಂ।।
ಪುರೋಹಿತನು ಸುಖೋಪವಿಷ್ಟನಾಗಲು, ಯುಧಿಷ್ಠಿರನು ಬ್ರಾಹ್ಮಣನಿಗೆ ಹೇಳಿದನು: “ಪಾಂಚಾಲರಾಜನು ತನ್ನ ಮಗಳನ್ನು ತನ್ನ ಧರ್ಮದಂತೆ, ಇಷ್ಟವಿದ್ದು ಸಂತೋಷದಿಂದ ಕೊಟ್ಟಿದ್ದಾನೆ.
01185023a ಪ್ರದಿಷ್ಟಶುಲ್ಕಾ ದ್ರುಪದೇನ ರಾಜ್ಞಾ। ಸಾನೇನ ವೀರೇಣ ತಥಾನುವೃತ್ತಾ।
01185023c ನ ತತ್ರ ವರ್ಣೇಷು ಕೃತಾ ವಿವಕ್ಷಾ। ನ ಜೀವಶಿಲ್ಪೇ ನ ಕುಲೇ ನ ಗೋತ್ರೇ।।
ರಾಜ ದ್ರುಪದನು ಅವಳಿಗೆ ಒಂದು ಶುಲ್ಕವನ್ನು ಇಟ್ಟಿದ್ದನು ಮತ್ತು ಅದರ ಪ್ರಕಾರವೇ ಈ ವೀರನು ಅವಳನ್ನು ಗೆದ್ದಿದ್ದಾನೆ. ಅವನ ಜಾತಿ, ಜೀವನಶಿಲ್ಪ, ಕುಲ ಅಥವಾ ಗೋತ್ರದ ಕುರಿತು ಯಾವುದೇ ರೀತಿಯ ಮನಸ್ಥಾಪವೂ ಉಂಟಾಗಬಾರದು.
01185024a ಕೃತೇನ ಸಜ್ಯೇನ ಹಿ ಕಾರ್ಮುಕೇಣ। ವಿದ್ಧೇನ ಲಕ್ಷ್ಯೇಣ ಚ ಸನ್ನಿಸೃಷ್ಟಾ।
01185024c ಸೇಯಂ ತಥಾನೇನ ಮಹಾತ್ಮನೇಹ। ಕೃಷ್ಣಾ ಜಿತಾ ಪಾರ್ಥಿವಸಂಘಮಧ್ಯೇ।।
ಕಾರ್ಮುಕವನ್ನು ಬಿಗಿದು ಲಕ್ಷ್ಯವನ್ನು ಗುರಿಯಿಟ್ಟು ಹೊಡೆದು ಈ ಮಹಾತ್ಮನು ಪಾರ್ಥಿವಸಂಘಮಧ್ಯದಲ್ಲಿ ಕೃಷ್ಣೆಯನ್ನು ಗೆದ್ದಿದ್ದಾನೆ.
01185025a ನೈವಂಗತೇ ಸೌಮಕಿರದ್ಯ ರಾಜಾ। ಸಂತಾಪಮರ್ಹತ್ಯಸುಖಾಯ ಕರ್ತುಂ।
01185025c ಕಾಮಶ್ಚ ಯೋಽಸೌ ದ್ರುಪದಸ್ಯ ರಾಜ್ಞಃ। ಸ ಚಾಪಿ ಸಂಪತ್ಸ್ಯತಿ ಪಾರ್ಥಿವಸ್ಯ।।
ಹೀಗಿರುವಾಗ ರಾಜ ಸೋಮಕನು ಇಂದು ಸಂತಾಪವನ್ನೂ ಅಥವಾ ಅಸುಖವನ್ನೂ ಪಡೆಯುವುದು ಸರಿಯಲ್ಲ. ಆದರೂ ರಾಜ ದ್ರುಪದನ ಬಯಕೆಯು ಪಾರ್ಥಿವನಿಗೆ ನಿಜವಾಗಿದೆ.
01185026a ಅಪ್ರಾಪ್ಯರೂಪಾಂ ಹಿ ನರೇಂದ್ರಕನ್ಯಾಂ। ಇಮಾಮಹಂ ಬ್ರಾಹ್ಮಣ ಸಾಧು ಮನ್ಯೇ।
01185026c ನ ತದ್ಧನುರ್ಮಂದಬಲೇನ ಶಕ್ಯಂ। ಮೌರ್ವ್ಯಾ ಸಮಾಯೋಜಯಿತುಂ ತಥಾ ಹಿ।
01185026e ನ ಚಾಕೃತಾಸ್ತ್ರೇಣ ನ ಹೀನಜೇನ। ಲಕ್ಷ್ಯಂ ತಥಾ ಪಾತಯಿತುಂ ಹಿ ಶಕ್ಯಂ।।
ಬ್ರಾಹ್ಮಣ! ನನ್ನ ಅಭಿಪ್ರಾಯದಂತೆ ರೂಪವತಿ ಈ ನರೇಂದ್ರಕನ್ಯೆಯು ಅಪ್ರಾಪ್ಯಳು. ಯಾಕೆಂದರೆ ಯಾವ ಮಂದಬಲಶಾಲಿಯೂ ಆ ಧನುವನ್ನು ಆ ರೀತಿಯಲ್ಲಿ ಬಿಗಿದು ಕಟ್ಟಲು ಶಕ್ಯವಿರಲಿಲ್ಲ. ಅಥವಾ ಅಸ್ತ್ರಗಳನ್ನು ಅರಿಯದೇ ಇದ್ದವನಿಂದ ಅಥವಾ ಹೀನಜನಿಂದ ಆ ರೀತಿ ಲಕ್ಷ್ಯವನ್ನು ಬೀಳಿಸುವುದು ಶಕ್ಯವಿರಲಿಲ್ಲ.
01185027a ತಸ್ಮಾನ್ನ ತಾಪಂ ದುಹಿತುರ್ನಿಮಿತ್ತಂ। ಪಾಂಚಾಲರಾಜೋಽರ್ಹತಿ ಕರ್ತುಮದ್ಯ।
01185027c ನ ಚಾಪಿ ತತ್ಪಾತನಮನ್ಯಥೇಹ। ಕರ್ತುಂ ವಿಷಹ್ಯಂ ಭುವಿ ಮಾನವೇನ।।
ಆದುದರಿಂದ ಇಂದು ಪಾಂಚಾಲರಾಜನಿಗೆ ತನ್ನ ಮಗಳ ಕಾರಣದಿಂದ ಯಾವುದೇ ರೀತಿಯ ದುಃಖವೂ ಆಗಬಾರದು. ಮತ್ತು ಇವನು ಆ ಚಿಹ್ನೆಯನ್ನು ಹೊಡೆದು ಕೆಳಗುರುಳಿಸಿದ ಎನ್ನುವುದನ್ನು ಭುವಿಯಲ್ಲಿರುವ ಯಾವ ಮಾನವನೂ ಬದಲಾಯಿಸಲಾರ.”
01185028a ಏವಂ ಬ್ರುವತ್ಯೇವ ಯುಧಿಷ್ಠಿರೇ ತು। ಪಾಂಚಾಲರಾಜಸ್ಯ ಸಮೀಪತೋಽನ್ಯಃ।
01185028c ತತ್ರಾಜಗಾಮಾಶು ನರೋ ದ್ವಿತೀಯೋ। ನಿವೇದಯಿಷ್ಯನ್ನಿಹ ಸಿದ್ಧಮನ್ನಂ।।
ಯುಧಿಷ್ಠಿರನು ಹೀಗೆ ಹೇಳಲು ಪಾಂಚಾಲರಾಜನ ಕಡೆಯಿಂದ ಎರಡನೆಯ ಇನ್ನೊಬ್ಬನು ಆತುರದಿಂದ ಬಂದು “ಭೋಜನವು ಸಿದ್ಧವಾಗಿದೆ!” ಎಂದು ನಿವೇದಿಸಿದನು.
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸ್ವಯಂವರಪರ್ವಣಿ ಪುರೋಹಿತಯುಧಿಷ್ಠಿರಸಂವಾದೇ ಪಂಚಶೀತ್ಯಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸ್ವಯಂವರಪರ್ವದಲ್ಲಿ ಪುರೋಹಿತಯುಧಿಷ್ಠಿರಸಂವಾದದಲ್ಲಿ ನೂರಾಎಂಭತ್ತೈದನೆಯ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸ್ವಯಂವರಪರ್ವ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸ್ವಯಂವರಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-0/18, ಉಪಪರ್ವಗಳು-12/100, ಅಧ್ಯಾಯಗಳು-184/1995, ಶ್ಲೋಕಗಳು-6011/73784.