184 ಧೃಷ್ಟಧ್ಯುಮ್ನಪ್ರತ್ಯಾಗಮನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಸ್ವಯಂವರ ಪರ್ವ

ಅಧ್ಯಾಯ 184

ಸಾರ

ಧೃಷ್ಟದ್ಯುಮ್ನನು ಹಿಂಬಾಲಿಸಿ ಕುಂಬಾರನ ಮನೆಗೆ ಬಂದು ಅಡಗಿ ಕುಳಿತು ನಡೆದುದೆಲ್ಲವನ್ನೂ ನೋಡಿದುದು (1-2). ಪಾಂಡವರು ಊಟಮಾಡಿದುದನ್ನು, ಮಲಗಿಕೊಂಡಿದುದನ್ನು ನೋಡಿದ ಧೃಷ್ಟದ್ಯುಮ್ನನು ತಂದೆಗೆ ವರದಿಮಾಡಲು ಹೊರಟುಹೋದುದು (3-13). ದ್ರೌಪದಿಯನ್ನು ಗೆದ್ದವನು ಅರ್ಜುನನೇ ಎಂದು ದ್ರುಪದನು ಮಗನನ್ನು ಪ್ರಶ್ನಿಸುವುದು (14-18).

01184001 ವೈಶಂಪಾಯನ ಉವಾಚ।
01184001a ಧೃಷ್ಟದ್ಯುಮ್ನಸ್ತು ಪಾಂಚಾಲ್ಯಃ ಪೃಷ್ಠತಃ ಕುರುನಂದನೌ।
01184001c ಅನ್ವಗಚ್ಛತ್ತದಾ ಯಾಂತೌ ಭಾರ್ಗವಸ್ಯ ನಿವೇಶನಂ।।

ವೈಶಂಪಾಯನನು ಹೇಳಿದನು: “ಕುಂಬಾರನ ಮನೆಗೆ ಹೋಗುವಾಗ ಕುರುನಂದನರನ್ನು ಪಾಂಚಾಲ್ಯ ಧೃಷ್ಟದ್ಯುಮ್ನನು ಹಿಂಬಾಲಿಸಿದ್ದನು.

01184002a ಸೋಽಜ್ಞಾಯಮಾನಃ ಪುರುಷಾನವಧಾಯ ಸಮಂತತಃ।
01184002c ಸ್ವಯಮಾರಾನ್ನಿವಿಷ್ಟೋಽಭೂದ್ಭಾರ್ಗವಸ್ಯ ನಿವೇಶನೇ।।

ಅವನು ತನ್ನ ಜನರನ್ನು ಅಡಗಿ ಕುಳಿತುಕೊಳ್ಳುವಂತೆ ಮಾಡಿ ಸ್ವಯಂ ಆ ಕುಂಬಾರನ ಮನೆಯ ಹತ್ತಿರದಲ್ಲಿ ಯಾರಿಗೂ ಕಾಣದಂತೆ ಅಡಗಿ ಕುಳಿತನು.

01184003a ಸಾಯೇಽಥ ಭೀಮಸ್ತು ರಿಪುಪ್ರಮಾಥೀ। ಜಿಷ್ಣುರ್ಯಮೌ ಚಾಪಿ ಮಹಾನುಭಾವೌ।
01184003c ಭೈಕ್ಷಂ ಚರಿತ್ವಾ ತು ಯುಧಿಷ್ಠಿರಾಯ। ನಿವೇದಯಾಂ ಚಕ್ರುರದೀನಸತ್ತ್ವಾಃ।।

ಸಾಯಂಕಾಲ ರಿಪುಪ್ರಮಥಿ ಭೀಮ, ಜಿಷ್ಣು ಮತ್ತು ಮಹಾನುಭಾವ ಅವಳಿಗಳು ಅವರ ಭಿಕ್ಷವನ್ನು ಮುಗಿಸಿ ಸಂತೋಷದಿಂದ ತಮಗೆ ದೊರೆತಿದ್ದುದೆಲ್ಲವನ್ನೂ ಯುಧಿಷ್ಠಿರನಿಗೆ ಕೊಟ್ಟರು.

01184004a ತತಸ್ತು ಕುಂತೀ ದ್ರುಪದಾತ್ಮಜಾಂ ತಾಂ। ಉವಾಚ ಕಾಲೇ ವಚನಂ ವದಾನ್ಯಾ।
01184004c ಅತೋಽಗ್ರಮಾದಾಯ ಕುರುಷ್ವ ಭದ್ರೇ। ಬಲಿಂ ಚ ವಿಪ್ರಾಯ ಚ ದೇಹಿ ಭಿಕ್ಷಾಂ।।

ಆಗ ಸಿಹಿಮಾತುಗಳನ್ನಾಡುವ ಕುಂತಿಯು ದೃಪದಾತ್ಮಜೆಯನ್ನು ಉದ್ದೇಶಿಸಿ ಹೇಳಿದಳು: “ಭದ್ರೇ! ಇದನ್ನು ಮೊದಲು ನೀನು ತೆಗೆದುಕೋ; ದೇವರಿಗೆ, ಮತ್ತು ವಿಪ್ರರಿಗೆ ಭಿಕ್ಷವನ್ನು ಕೊಡು.

01184005a ಯೇ ಚಾನ್ನಮಿಚ್ಛಂತಿ ದದಸ್ವ ತೇಭ್ಯಃ। ಪರಿಶ್ರಿತಾ ಯೇ ಪರಿತೋ ಮನುಷ್ಯಾಃ।
01184005c ತತಶ್ಚ ಶೇಷಂ ಪ್ರವಿಭಜ್ಯ ಶೀಘ್ರಂ। ಅರ್ಧಂ ಚತುರ್ಣಾಂ ಮಮ ಚಾತ್ಮನಶ್ಚ।।

ಇಲ್ಲಿ ಸುತ್ತಮುತ್ತ ಇರುವ ಮನುಷ್ಯರಲ್ಲಿ ಅನ್ನ ಬೇಕೆನ್ನುವವರಿಗೆ ಸ್ವಲ್ಪ ಕೊಡು; ಅದರಲ್ಲಿ ಉಳಿದಿರುವುದನ್ನು ಎರಡು ಭಾಗಗಳಾಗಿ ಮಾಡು - ಅರ್ಧ ಭಾಗ ಆ ನಾಲ್ವರಿಗೆ, ನನಗೆ ಮತ್ತು ನಿನಗೆ.

01184006a ಅರ್ಧಂ ಚ ಭೀಮಾಯ ದದಾಹಿ ಭದ್ರೇ। ಯ ಏಷ ಮತ್ತರ್ಷಭತುಲ್ಯರೂಪಃ।
01184006c ಶ್ಯಾಮೋ ಯುವಾ ಸಂಹನನೋಪಪನ್ನ। ಏಷೋ ಹಿ ವೀರೋ ಬಹುಭುಕ್ಸದೈವ।।

ಭದ್ರೇ! ಇನ್ನೊಂದು ಅರ್ಧವನ್ನು ಮತ್ತರ್ಷಭತುಲ್ಯರೂಪಿ, ಶ್ಯಾಮ ಯುವಕ ಲೋಹದಂತ ದೇಹವನ್ನು ಹೊಂದಿರುವ ಭೀಮನಿಗೆ ಕೊಡು, ಯಾಕೆಂದರೆ ಈ ವೀರನು ಯಾವಾಗಲೂ ಹೆಚ್ಚು ತಿನ್ನುತ್ತಾನೆ.”

01184007a ಸಾ ಹೃಷ್ಟರೂಪೈವ ತು ರಾಜಪುತ್ರೀ। ತಸ್ಯಾ ವಚಃ ಸಾಧ್ವವಿಶಂಕಮಾನಾ।
01184007c ಯಥಾವದುಕ್ತಂ ಪ್ರಚಕಾರ ಸಾಧ್ವೀ। ತೇ ಚಾಪಿ ಸರ್ವೇಽಭ್ಯವಜಹ್ರುರನ್ನಂ।।

ಆ ರಾಜಪುತ್ರಿಯು ಸಂತೋಷದಿಂದಲೇ ಸಾಧ್ವಿಯ ಆ ಮಾತುಗಳನ್ನು ಸ್ವಲ್ಪವೂ ಶಂಕಿಸದೇ ಹೇಳಿದ ಹಾಗೆಯೇ ಮಾಡಿದಳು. ಮತ್ತು ಸರ್ವರೂ ಅನ್ನವನ್ನು ಊಟಮಾಡಿದರು.

01184008a ಕುಶೈಸ್ತು ಭೂಮೌ ಶಯನಂ ಚಕಾರ। ಮಾದ್ರೀಸುತಃ ಸಹದೇವಸ್ತರಸ್ವೀ।
01184008c ಯಥಾತ್ಮೀಯಾನ್ಯಜಿನಾನಿ ಸರ್ವೇ। ಸಂಸ್ತೀರ್ಯ ವೀರಾಃ ಸುಷುಪುರ್ಧರಣ್ಯಾಂ।।

ಅನಂತರ ಮಾದ್ರೀಸುತ ಸಹದೇವನು ಭೂಮಿಯಮೇಲೆ ಕುಶದ ಹಾಸಿಗೆಯನ್ನು ಹಾಸಿದನು. ಪ್ರತಿಯೊಬ್ಬರೂ ತಮ್ಮ ತಮ್ಮ ಜಿನವನ್ನು ಹಾಸಿಕೊಂಡು, ಎಲ್ಲಾ ವೀರರೂ ನೆಲದ ಮೇಲೆ ಮಲಗಿದರು.

01184009a ಅಗಸ್ತ್ಯಶಾಸ್ತಾಮಭಿತೋ ದಿಶಂ ತು। ಶಿರಾಂಸಿ ತೇಷಾಂ ಕುರುಸತ್ತಮಾನಾಂ।
01184009c ಕುಂತೀ ಪುರಸ್ತಾತ್ತು ಬಭೂವ ತೇಷಾಂ। ಕೃಷ್ಣಾ ತಿರಶ್ಚೈವ ಬಭೂವ ಪತ್ತಃ।।

ಅಗಸ್ತ್ಯಮುನಿಯು ಹರಸಿದ ದಿಕ್ಕಿನಲ್ಲಿ ಆ ಕುರುಸತ್ತಮರು ತಮ್ಮ ಶಿರವನ್ನು ಇಟ್ಟಿದ್ದರು, ಅವರ ತಲೆಗಳ ಪಕ್ಕದಲ್ಲಿ ಕುಂತಿಯು ಮಲಗಿದ್ದಳು, ಮತ್ತು ಕೃಷ್ಣೆಯು ಅವರ ಕಾಲುಗಳ ಪಕ್ಕದಲ್ಲಿ ಮಲಗಿದಳು.

01184010a ಅಶೇತ ಭೂಮೌ ಸಹ ಪಾಂಡುಪುತ್ರೈಃ। ಪಾದೋಪಧಾನೇವ ಕೃತಾ ಕುಶೇಷು।
01184010c ನ ತತ್ರ ದುಃಖಂ ಚ ಬಭೂವ ತಸ್ಯಾ। ನ ಚಾವಮೇನೇ ಕುರುಪುಂಗವಾಂಸ್ತಾನ್।।

ಈ ರೀತಿ ಕುಶವನ್ನೇ ಕಾಲುದಿಂಬನ್ನಾಗಿ ಮಾಡಿ ಅವಳು ಪಾಂಡುಪುತ್ರರ ಸಹ ಭೂಮಿಯಮೇಲೆ ಮಲಗಿದಳು; ಅವಳಲ್ಲಿ ಸ್ವಲ್ಪವೂ ದುಃಖವಿರಲಿಲ್ಲ ಮತ್ತು ಕುರುಪುಂಗವರ ಕುರಿತು ಯಾವರೀತಿಯೂ ಅಸಹ್ಯವೂ ಅನ್ನಿಸಲಿಲ್ಲ.

01184011a ತೇ ತತ್ರ ಶೂರಾಃ ಕಥಯಾಂ ಬಭೂವುಃ। ಕಥಾ ವಿಚಿತ್ರಾಃ ಪೃತನಾಧಿಕಾರಾಃ।
01184011c ಅಸ್ತ್ರಾಣಿ ದಿವ್ಯಾನಿ ರಥಾಂಶ್ಚ ನಾಗಾನ್। ಖಡ್ಗಾನ್ಗದಾಶ್ಚಾಪಿ ಪರಶ್ವಧಾಂಶ್ಚ।।

ಆ ಶೂರರು ಯುದ್ದ, ದಿವ್ಯಾಸ್ತ್ರಗಳು, ರಥಗಳು, ಆನೆಗಳು, ಖಡ್ಗಗಳು, ಗದೆಗಳು ಮತ್ತು ಪರಶುಗಳ ಸಂಬಂದಿಸಿದ ವಿಚಿತ್ರ ಕಥೆಗಳನ್ನು ಕಟ್ಟಲು ಪ್ರಾರಂಭಿಸಿದರು.

01184012a ತೇಷಾಂ ಕಥಾಸ್ತಾಃ ಪರಿಕೀರ್ತ್ಯಮಾನಾಃ। ಪಾಂಚಾಲರಾಜಸ್ಯ ಸುತಸ್ತದಾನೀಂ।
01184012c ಶುಶ್ರಾವ ಕೃಷ್ಣಾಂ ಚ ತಥಾ ನಿಷಣ್ಣಾಂ। ತೇ ಚಾಪಿ ಸರ್ವೇ ದದೃಶುರ್ಮನುಷ್ಯಾಃ।।

ಪಾಂಚಾಲರಾಜ ಸುತನು ಅವರು ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಿರುವ ಕಥೆಗಳನ್ನು ಕೇಳಿದನು; ಮತ್ತು ಅವರೆಲ್ಲರೂ ಮತ್ತು ಕೃಷ್ಣೆಯೂ ನಿಷಣ್ಣಳಾಗಿ ಅಲ್ಲಿ ಹೇಗೆ ಮಲಗಿಕೊಂದಿದ್ದಾರೆ ಎನ್ನುವುದನ್ನು ನೋಡಿದನು.

01184013a ಧೃಷ್ಟದ್ಯುಮ್ನೋ ರಾಜಪುತ್ರಸ್ತು ಸರ್ವಂ। ವೃತ್ತಂ ತೇಷಾಂ ಕಥಿತಂ ಚೈವ ರಾತ್ರೌ।
01184013c ಸರ್ವಂ ರಾಜ್ಞೇ ದ್ರುಪದಾಯಾಖಿಲೇನ। ನಿವೇದಯಿಷ್ಯಂಸ್ತ್ವರಿತೋ ಜಗಾಮ।।

ರಾಜಪುತ್ರ ದೃಷ್ಟದ್ಯುಮ್ನನು ರಾತ್ರಿಯಲ್ಲಿ ನಡೆದುದೆಲ್ಲವನ್ನೂ ರಾಜ ದ್ರುಪದನಿಗೆ ಹೇಳಬೇಕೆಂದು ಅಲ್ಲಿಂದ ತ್ವರಿತವಾಗಿ ಹೊರಟನು.

01184014a ಪಾಂಚಾಲರಾಜಸ್ತು ವಿಷಣ್ಣರೂಪಸ್। ತಾನ್ಪಾಂಡವಾನಪ್ರತಿವಿಂದಮಾನಃ।
01184014c ಧೃಷ್ಟದ್ಯುಮ್ನಂ ಪರ್ಯಪೃಚ್ಛನ್ ಮಹಾತ್ಮಾ। ಕ್ವ ಸಾ ಗತಾ ಕೇನ ನೀತಾ ಚ ಕೃಷ್ಣಾ।।

ಮಹಾತ್ಮ ಪಾಂಚಾಲರಾಜನು ಪಾಂಡವರನ್ನು ಕಾಣದೇ ವಿಷಣ್ಣನಾಗಿ ದೃಷ್ಟದ್ಯುಮ್ನನನ್ನು ಕೇಳಿದನು: “ಅವಳು ಎಲ್ಲಿಗೆ ಹೋದಳು? ಕೃಷ್ಣೆಯನ್ನು ಯಾರು ತೆಗೆದುಕೊಂಡು ಹೋದರು?

01184015a ಕಚ್ಚಿನ್ನ ಶೂದ್ರೇಣ ನ ಹೀನಜೇನ। ವೈಶ್ಯೇನ ವಾ ಕರದೇನೋಪಪನ್ನಾ।
01184015c ಕಚ್ಚಿತ್ಪದಂ ಮೂರ್ಧ್ನಿ ನ ಮೇ ನಿದಿಗ್ಧಂ। ಕಚ್ಚಿನ್ಮಾಲಾ ಪತಿತಾ ನ ಶ್ಮಶಾನೇ।।

ಹೀನ ಜನ ಶೂದ್ರರವಳಾಗಿದ್ದಾಳಾ? ಅಥವಾ ನನಗೆ ತೆರಿಗೆಯನ್ನು ಕೊಡುವ ವೈಶ್ಯರವಳಾಗಿದ್ದಾಳಾ? ನನ್ನ ತಲೆಯ ಮೇಲೆ ಯಾರಾದರೂ ಕಾಲಿಟ್ಟಹಾಗಾಯಿತೇ? ಅಥವಾ ಶ್ಮಶಾನದಲ್ಲಿ ಮಾಲೆ ಬಿದ್ದಹಾಗೆ ಆಯಿತೇ?

01184016a ಕಚ್ಚಿತ್ಸವರ್ಣಪ್ರವರೋ ಮನುಷ್ಯ। ಉದ್ರಿಕ್ತವರ್ಣೋಽಪ್ಯುತ ವೇಹ ಕಚ್ಚಿತ್।
01184016c ಕಚ್ಚಿನ್ನ ವಾಮೋ ಮಮ ಮೂರ್ಧ್ನಿ ಪಾದಃ। ಕೃಷ್ಣಾಭಿಮರ್ಶೇನ ಕೃತೋಽದ್ಯ ಪುತ್ರ।।

ಅಥವಾ ಸವರ್ಣ ಪ್ರವರ ಮನುಷ್ಯನೋ? ಅಥವಾ ಅಕಸ್ಮಾತ್ ಉದ್ರಿಕ್ತವರ್ಣದವರು ಯಾರಾದರೋ? ಅಥವಾ ಯಾರಾದರೂ ಕೃಷ್ಣೆಯನ್ನು ಕೆಡಿಸಿ ನನ್ನ ತಲೆಯ ಮೇಲೆ ತಮ್ಮ ಎಡ ಕಾಲನ್ನು ಇತ್ತಿದ್ದಾರೆಯೋ, ಪುತ್ರ?

01184017a ಕಚ್ಚಿಚ್ಚ ಯಕ್ಷ್ಯೇ ಪರಮಪ್ರತೀತಃ। ಸಂಯುಜ್ಯ ಪಾರ್ಥೇನ ನರರ್ಷಭೇಣ।
01184017c ಬ್ರವೀಹಿ ತತ್ತ್ವೇನ ಮಹಾನುಭಾವಃ। ಕೋಽಸೌ ವಿಜೇತಾ ದುಹಿತುರ್ಮಮಾದ್ಯ।।

ಅಥವಾ ನರರ್ಷಭ ಪಾರ್ಥನ ಜೊತೆಗೂಡಿದಳು ಎಂದು ನಿಶ್ಚಿಂತೆಯಿಂದ ಇರಬಹುದೇ? ಯಾವ ಮಹಾನುಭಾವನಿಂದ ನನ್ನ ಮಗಳು ಇಂದು ಗೆಲ್ಲಲ್ಪಟ್ಟಿದ್ದಾಳೆ ಎಂಬ ನಿಜವನ್ನು ಹೇಳು.

01184018a ವಿಚಿತ್ರವೀರ್ಯಸ್ಯ ತು ಕಚ್ಚಿದದ್ಯ। ಕುರುಪ್ರವೀರಸ್ಯ ಧರಂತಿ ಪುತ್ರಾಃ।
01184018c ಕಚ್ಚಿತ್ತು ಪಾರ್ಥೇನ ಯವೀಯಸಾದ್ಯ। ಧನುರ್ಗೃಹೀತಂ ನಿಹತಂ ಚ ಲಕ್ಷ್ಯಂ।।

ವಿಚಿತ್ರವೀರ್ಯ ಕುರುಪ್ರವೀರನ ಪುತ್ರರು ಜೀವಂತವಿದ್ದಾರೆ ಮತ್ತು ಕಿರಿಯ ಪಾರ್ಥನು ಇಂದು ಧನುವನ್ನು ಹಿಡಿದು ಲಕ್ಷ್ಯವನ್ನು ಹೊಡೆಯಲು ಸಾದ್ಯವಿದೆಯೇ?”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸ್ವಯಂವರಪರ್ವಣಿ ಧೃಷ್ಟಧ್ಯುಮ್ನಪ್ರತ್ಯಾಗಮನೇ ಚತುರಶೀತ್ಯಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸ್ವಯಂವರಪರ್ವದಲ್ಲಿ ಧೃಷ್ಟಧ್ಯುಮ್ನಪ್ರತ್ಯಾಗಮನದಲ್ಲಿ ನೂರಾಎಂಭತ್ತ್ನಾಲ್ಕನೆಯ ಅಧ್ಯಾಯವು.