ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಸ್ವಯಂವರ ಪರ್ವ
ಅಧ್ಯಾಯ 183
ಸಾರ
ಕೃಷ್ಣ-ಬಲರಾಮರು ಪಾಂಡವರಿದ್ದ ಕುಂಬಾರನ ಮನೆಗೆ ಬಂದು ತಮ್ಮ ಪರಿಚಯವನ್ನು ಮಾಡಿಕೊಂಡಿದುದು (1-5). ಅವರು ಬೆಂಕಿಯಿಂದ ತಪ್ಪಿಸಿಕೊಂಡಿರುವುದು ಒಳ್ಳೆಯದಾಯಿತೆಂದು ಹೇಳಿ, ಇತರರು ಪಾಂಡವರನ್ನು ಗುರುತಿಸಬಾರದೆಂದು ಕೃಷ್ಣ-ಬಲರಾಮರು ಬೇಗನೇ ಅಲ್ಲಿಂದ ಹೊರಟುಹೋದದು (6-9).
1183001 ವೈಶಂಪಾಯನ ಉವಾಚ।
01183001a ಭ್ರಾತುರ್ವಚಸ್ತತ್ಪ್ರಸಮೀಕ್ಷ್ಯ ಸರ್ವೇ। ಜ್ಯೇಷ್ಠಸ್ಯ ಪಾಂಡೋಸ್ತನಯಾಸ್ತದಾನೀಂ।
01183001c ತಮೇವಾರ್ಥಂ ಧ್ಯಾಯಮಾನಾ ಮನೋಭಿರ್। ಆಸಾಂ ಚಕ್ರುರಥ ತತ್ರಾಮಿತೌಜಾಃ।।
ವೈಶಂಪಾಯನನು ಹೇಳಿದನು: “ಜ್ಯೇಷ್ಠ ಪಾಂಡು ಅಣ್ಣನ ಈ ಮಾತುಗಳನ್ನು ಕೇಳಿ ಎಲ್ಲರೂ ಯೋಚಿಸತೊಡಗಿದರು. ಅದರ ಅರ್ಥವೇನೆಂದು ಮನಸ್ಸಿನಲ್ಲಿಯೇ ಚಿಂತಿಸುತ್ತಾ ಆ ಅಮಿತ ತೇಜಸರು ಅಲ್ಲಿಯೇ ಕುಳಿತುಕೊಂಡರು.
01183002a ವೃಷ್ಣಿಪ್ರವೀರಸ್ತು ಕುರುಪ್ರವೀರಾನ್। ಆಶಂಕಮಾನಃ ಸಹರೌಹಿಣೇಯಃ।
01183002c ಜಗಾಮ ತಾಂ ಭಾರ್ಗವಕರ್ಮಶಾಲಾಂ। ಯತ್ರಾಸತೇ ತೇ ಪುರುಷಪ್ರವೀರಾಃ।।
ಅಷ್ಟರಲ್ಲಿಯೇ ಅವರು ಕುರುಪ್ರವೀಣರೇ ಇರಬೇಕೆಂದು ಶಂಕಿಸಿದ ವೃಷ್ಣಿಪ್ರವೀರನು ರೌಹಿಣೇಯನ ಜೊತೆಗೊಂಡು ಪುರುಷಪ್ರವೀರರು ವಸತಿಮಾಡಿಕೊಂಡಿದ್ದ ಆ ಕುಂಬಾರನ ಮನೆಗೆ ಬಂದನು.
01183003a ತತ್ರೋಪವಿಷ್ಟಂ ಪೃಥುದೀರ್ಘಬಾಹುಂ। ದದರ್ಶ ಕೃಷ್ಣಃ ಸಹರೌಹಿಣೇಯಃ।
01183003c ಅಜಾತಶತ್ರುಂ ಪರಿವಾರ್ಯ ತಾಂಶ್ಚ। ಉಪೋಪವಿಷ್ಟಾಂಜ್ವಲನಪ್ರಕಾಶಾನ್।।
ಅಲ್ಲಿ ಕುಳಿತಿದ್ದ ದೀರ್ಘಬಾಹು ಪೃಥೆ ಮತ್ತು ಆ ಅಜಾತಶತ್ರುವನ್ನು ಸುತ್ತುವರೆದು ಕುಳಿತುಕೊಂಡು ಅಗ್ನಿಯಂತೆ ಬೆಳಗುತ್ತಿದ್ದವರನ್ನು ರೌಹಿಣೇಯನನ್ನೂ ಕೂಡಿ ಕೃಷ್ಣನು ನೋಡಿದನು.
01183004a ತತೋಽಬ್ರವೀದ್ವಾಸುದೇವೋಽಭಿಗಮ್ಯ। ಕುಂತೀಸುತಂ ಧರ್ಮಭೃತಾಂ ವರಿಷ್ಠಂ।
01183004c ಕೃಷ್ಣೋಽಹಮಸ್ಮೀತಿ ನಿಪೀಡ್ಯ ಪಾದೌ। ಯುಧಿಷ್ಠಿರಸ್ಯಾಜಮೀಢಸ್ಯ ರಾಜ್ಞಃ।।
ಅಲ್ಲಿಗೆ ಆಗಮಿಸಿದ ವಾಸುದೇವನು ಧರ್ಮಭೃತರಲ್ಲಿ ವರಿಷ್ಠ ಕುಂತೀಸುತನಿಗೆ “ನಾನು ಕೃಷ್ಣ!” ಎಂದು ಹೇಳಿ ಆ ಅಜಮೀಡ ರಾಜ ಯುಧಿಷ್ಠಿರನ ಪಾದಗಳನ್ನು ಮುಟ್ಟಿದನು.
01183005a ತಥೈವ ತಸ್ಯಾಪ್ಯನು ರೌಹಿಣೇಯಸ್। ತೌ ಚಾಪಿ ಹೃಷ್ಟಾಃ ಕುರವೋಽಭ್ಯನಂದನ್।
01183005c ಪಿತೃಷ್ವಸುಶ್ಚಾಪಿ ಯದುಪ್ರವೀರಾವ್। ಅಗೃಹ್ಣತಾಂ ಭಾರತಮುಖ್ಯ ಪಾದೌ।।
ಕೃಷ್ಣನಂತೆ ರೌಹಿಣೀಯನೂ ಮಾಡಿದನು ಮತ್ತು ಕುರುಗಳು ಅವರನ್ನು ಸಂತೋಷದಿಂದ ಸ್ವಾಗತಿಸಿದರು. ಭಾರತ ಮುಖ್ಯ! ಅನಂತರ ಆ ಯದುಪ್ರವೀರರು ತಮ್ಮ ತಂದೆಯ ತಂಗಿಯ ಪಾದಗಳಿಗೆ ನಮಸ್ಕರಿಸಿದರು.
01183006a ಅಜಾತಶತ್ರುಶ್ಚ ಕುರುಪ್ರವೀರಃ। ಪಪ್ರಚ್ಛ ಕೃಷ್ಣಂ ಕುಶಲಂ ನಿವೇದ್ಯ।
01183006c ಕಥಂ ವಯಂ ವಾಸುದೇವ ತ್ವಯೇಹ। ಗೂಢಾ ವಸಂತೋ ವಿದಿತಾಃ ಸ್ಮ ಸರ್ವೇ।।
ಕುಶಲ ಪ್ರಶ್ನೆಯನ್ನು ಕೇಳಿಯಾದ ನಂತರ ಕುರುಪ್ರವೀರ ಅಜಾತಶತ್ರುವು ಕೃಷ್ಣನಿಗೆ ಕೇಳಿದನು: “ವಾಸುದೇವ! ಗೌಪ್ಯವಾಗಿ ವಾಸಿಸುತ್ತಿರುವ ನಮ್ಮೆಲ್ಲರನ್ನೂ ನೀನು ಹೇಗೆ ಹುಡುಕಿ ಗುರುತಿಸಿದೆ?”
01183007a ತಮಬ್ರವೀದ್ವಾಸುದೇವಃ ಪ್ರಹಸ್ಯ। ಗೂಢೋಽಪ್ಯಗ್ನಿರ್ಜ್ಞಾಯತ ಏವ ರಾಜನ್।
01183007c ತಂ ವಿಕ್ರಮಂ ಪಾಂಡವೇಯಾನತೀತ್ಯ। ಕೋಽನ್ಯಃ ಕರ್ತಾ ವಿದ್ಯತೇ ಮಾನುಷೇಷು।।
ಆಗ ವಾಸುದೇವನು ನಗುತ್ತಾ ಉತ್ತರಿಸಿದನು: “ರಾಜನ್! ಗೂಢವಾಗಿದ್ದರೂ ಅಗ್ನಿಯು ಹೊರಗೆ ಕಂಡೇ ಕಾಣಿಸಿಕೊಳ್ಳುತ್ತದೆ. ಪಾಂಡವನನ್ನು ಬಿಟ್ಟು ಮನುಷ್ಯರಲ್ಲೇ ಬೇರೆ ಯಾರು ತಾನೆ ಅಂತಹ ವಿಕ್ರಮವನ್ನು ಮಾಡಿ ತೋರಿಸಿಯಾರು?
01183008a ದಿಷ್ಟ್ಯಾ ತಸ್ಮಾತ್ಪಾವಕಾತ್ಸಂಪ್ರಮುಕ್ತಾ। ಯೂಯಂ ಸರ್ವೇ ಪಾಂಡವಾಃ ಶತ್ರುಸಾಹಾಃ।
01183008c ದಿಷ್ಟ್ಯಾ ಪಾಪೋ ಧೃತರಾಷ್ಟ್ರಸ್ಯ ಪುತ್ರಃ। ಸಹಾಮಾತ್ಯೋ ನ ಸಕಾಮೋಽಭವಿಷ್ಯತ್।।
ಶತ್ರುಸಾಹರಾದ ನೀವೆಲ್ಲ ಪಾಂಡವರೂ ಆ ಬೆಂಕಿಯಿಂದ ತಪ್ಪಿಸಿಕೊಂಡರೆಂಬುದು ಒಂದು ಒಳ್ಳೆಯ ವಿಷಯವೇ ಆಗಿದೆ. ಪಾಪಿ ಧೃತರಾಷ್ಟ್ರನ ಮಗನ ಮತ್ತು ಅವನ ಅಮಾತ್ಯನ ಸಂಚು ಯಶಸ್ವಿಯಾಗಲಿಲ್ಲ ಎನ್ನುವುದೂ ಒಳ್ಳೆಯದಾಯಿತು.
01183009a ಭದ್ರಂ ವೋಽಸ್ತು ನಿಹಿತಂ ಯದ್ಗುಹಾಯಾಂ। ವಿವರ್ಧಧ್ವಂ ಜ್ವಲನ ಇವೇಧ್ಯಮಾನಃ।
01183009c ಮಾ ವೋ ವಿದ್ಯುಃ ಪಾರ್ಥಿವಾಃ ಕೇ ಚನೇಹ। ಯಾಸ್ಯಾವಹೇ ಶಿಬಿರಾಯೈವ ತಾವತ್।।
01183009e ಸೋಽನುಜ್ಞಾತಃ ಪಾಂಡವೇನಾವ್ಯಯಶ್ರೀಃ। ಪ್ರಾಯಾಚ್ಛೀಘ್ರಂ ಬಲದೇವೇನ ಸಾರ್ಧಂ।।
ನಿಮಗೆಲ್ಲ ಮಂಗಳವಾಗಲಿ! ಗುಹೆಯಲ್ಲಿ ಅಡಗಿದ್ದು ಕಿಚ್ಚೆತ್ತ ಬೆಂಕಿಯಂತೆ ವೃದ್ಧಿಯಾಗಿದ್ದೀರಿ. ಪಾರ್ಥಿವರಲ್ಲಿ ಯಾರಾದರೂ ನಿಮ್ಮನ್ನು ನೋಡಿ ಗುರುತಿಸಿಯಾರು. ಆದುದರಿಂದ ನಾವು ಇಲ್ಲಿಂದ ತೆರಳುತ್ತೇವೆ.” ಪಾಂಡವರಿಂದ ಬೀಳ್ಕೊಂಡ ಆ ಅವ್ಯಯಶ್ರೀಯು ಬಲದೇವನ ಸಹಿತ ಶೀಘ್ರವಾಗಿ ಅಲ್ಲಿಂದ ಹೊರಟನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸ್ವಯಂವರಪರ್ವಣಿ ರಾಮಕೃಷ್ಣಾಗಮನೇ ತ್ರ್ಯಶೀತ್ಯಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸ್ವಯಂವರಪರ್ವದಲ್ಲಿ ರಾಮಕೃಷ್ಣರ ಆಗಮನದಲ್ಲಿ ನೂರಾಎಂಭತ್ತ್ಮೂರನೆಯ ಅಧ್ಯಾಯವು.