182

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಸ್ವಯಂವರ ಪರ್ವ

ಅಧ್ಯಾಯ 182

ಸಾರ

ತಾವು ತಂದ ಭಿಕ್ಷೆಯನ್ನು ಬಂದು ನೋಡು ಎಂದು ಮನೆಯ ಬಾಗಿಲಲ್ಲಿಯೇ ನಿಂತು ಭೀಮಾರ್ಜುನರು ಕುಂತಿಗೆ ಹೇಳಲು, ಒಳಗಿನಿಂದಲೇ ಕುಂತಿಯು ಭಿಕ್ಷೆಯನ್ನು ಸಹೋದರರಲ್ಲಿ ಹಂಚಿಕೊಳ್ಳಿ ಎನ್ನುವುದು (1-2). ಎಲ್ಲರೂ ಚರ್ಚೆಮಾಡಿದ ನಂತರ ಯುಧಿಷ್ಠಿರನು ದ್ರೌಪದಿಯು ನಮ್ಮೆಲ್ಲರ ಭಾರ್ಯೆಯಾಗುತ್ತಾಳೆ ಎಂದು ನಿರ್ಧರಿಸುವುದು (3-15).

01182001 ವೈಶಂಪಾಯನ ಉವಾಚ।
01182001a ಗತ್ವಾ ತು ತಾಂ ಭಾರ್ಗವಕರ್ಮಶಾಲಾಂ। ಪಾರ್ಥೌ ಪೃಥಾಂ ಪ್ರಾಪ್ಯ ಮಹಾನುಭಾವೌ।
01182001c ತಾಂ ಯಾಜ್ಞಸೇನೀಂ ಪರಮಪ್ರತೀತೌ। ಭಿಕ್ಷೇತ್ಯಥಾವೇದಯತಾಂ ನರಾಗ್ರ್ಯೌ।।

ವೈಶಂಪಾಯನನು ಹೇಳಿದನು: “ಮಹಾನುಭಾವ ನರವ್ಯಾಘ್ರ ಪಾರ್ಥರೀರ್ವರು ಕುಂಬಾರನ ಮನೆಯನ್ನು ತಲುಪಿ ಅಲ್ಲಿ ಪೃಥೆಯನ್ನು ಕಂಡು ಪರಮಪ್ರತೀತರಾಗಿ ಯಾಜ್ಞಸೇನಿಯ ಕುರಿತು “ನಾವು ತಂದಿರುವ ಭಿಕ್ಷೆಯನ್ನು ನೋಡು!” ಎಂದು ಹೇಳಿದರು.

01182002a ಕುಟೀಗತಾ ಸಾ ತ್ವನವೇಕ್ಷ್ಯ ಪುತ್ರಾನ್। ಉವಾಚ ಭುಂಕ್ತೇತಿ ಸಮೇತ್ಯ ಸರ್ವೇ।
01182002c ಪಶ್ಚಾತ್ತು ಕುಂತೀ ಪ್ರಸಮೀಕ್ಷ್ಯ ಕನ್ಯಾಂ। ಕಷ್ಟಂ ಮಯಾ ಭಾಷಿತಮಿತ್ಯುವಾಚ।।

ಮನೆಯೊಳಗಿದ್ದ ಅವಳು ತನ್ನ ಪುತ್ರರನ್ನು ನೋಡದೇ ಹೇಳಿದಳು: “ನೀವೆಲ್ಲರೂ ಅದನ್ನು ಸಮನಾಗಿ ಹಂಚಿಕೊಳ್ಳಿ!” ಎಂದಳು. ನಂತರ ಕುಂತಿಯು ಆ ಕನ್ಯೆಯನ್ನು ನೋಡಿ “ನಾನು ಎಂಥಹ ಕಷ್ಟಕರ ಮಾತುಗಳನ್ನಾಡಿದೆ!” ಎಂದಳು.

01182003a ಸಾಧರ್ಮಭೀತಾ ಹಿ ವಿಲಜ್ಜಮಾನಾ। ತಾಂ ಯಾಜ್ಞಸೇನೀಂ ಪರಮಪ್ರತೀತಾಂ।
01182003c ಪಾಣೌ ಗೃಹೀತ್ವೋಪಜಗಾಮ ಕುಂತೀ। ಯುಧಿಷ್ಠಿರಂ ವಾಕ್ಯಮುವಾಚ ಚೇದಂ।।

ಅಧರ್ಮಭೀತಳಾಗಿ ವಿಲಜ್ಜಮಾನಳಾದ ಆ ಕುಂತಿಯು ಪರಮಪ್ರತೀತೆ ಯಾಜ್ಞಸೇನಿಯ ಕೈಗಳನ್ನು ಹಿಡಿದು ಒಳ ಹೋಗಿ ಯುಧಿಷ್ಠಿರನಲ್ಲಿ ಈ ಮಾತುಗಳನ್ನಾಡಿದಳು:

01182004a ಇಯಂ ಹಿ ಕನ್ಯಾ ದ್ರುಪದಸ್ಯ ರಾಜ್ಞಸ್। ತವಾನುಜಾಭ್ಯಾಂ ಮಯಿ ಸಂನಿಸೃಷ್ಟಾ।
01182004c ಯಥೋಚಿತಂ ಪುತ್ರ ಮಯಾಪಿ ಚೋಕ್ತಂ। ಸಮೇತ್ಯ ಭುಂಕ್ತೇತಿ ನೃಪ ಪ್ರಮಾದಾತ್।।

“ನಿನ್ನ ತಮ್ಮಂದಿರಿಬ್ಬರು ರಾಜ ದ್ರುಪದನ ಈ ಮಗಳನ್ನು ನನಗೊಪ್ಪಿಸಿದರು. ಪುತ್ರ! ನೃಪ! ಯಾವಾಗಲೂ ನಾನು ಹೇಳುವಂತೆ ಈ ಬಾರಿಯೂ ಪ್ರಮಾದದಿಂದ ಅದನ್ನು ನೀವೆಲ್ಲರೂ ಸಮನಾಗಿ ಹಂಚಿಕೊಳ್ಳಿ ಎಂದುಬಿಟ್ಟೆ!

01182005a ಕಥಂ ಮಯಾ ನಾನೃತಮುಕ್ತಮದ್ಯ। ಭವೇತ್ಕುರೂಣಾಮೃಷಭ ಬ್ರವೀಹಿ।
01182005c ಪಾಂಚಾಲರಾಜಸ್ಯ ಸುತಾಮಧರ್ಮೋ। ನ ಚೋಪವರ್ತೇತ ನಭೂತಪೂರ್ವಃ।।

ನಾನು ಹೇಳಿದ್ದುದು ಸುಳ್ಳಾಗದ ಹಾಗೆ ಮತ್ತು ಪಾಂಚಾಲರಾಜನ ಸುತೆಯೂ ಕೂಡ ಈ ಹಿಂದೆ ಯಾರೂ ಮಾಡಿರದ ಅಧರ್ಮವನ್ನು ಮಾಡದಹಾಗೆ ಏನು ಮಾಡಬಹುದು ಹೇಳು ಕುರುಶ್ರೇಷ್ಠ!”

01182006a ಮುಹೂರ್ತಮಾತ್ರಂ ತ್ವನುಚಿಂತ್ಯ ರಾಜಾ। ಯುಧಿಷ್ಠಿರೋ ಮಾತರಮುತ್ತಮೌಜಾಃ।
01182006c ಕುಂತೀಂ ಸಮಾಶ್ವಾಸ್ಯ ಕುರುಪ್ರವೀರೋ। ಧನಂಜಯಂ ವಾಕ್ಯಮಿದಂ ಬಭಾಷೇ।।

ಮುಹೂರ್ತಮಾತ್ರ ಯೋಚನೆಮಾಡಿ ಉತ್ತಮೌಜಸ ರಾಜ ಯುಧಿಷ್ಠಿರನು ತಾಯಿ ಕುಂತಿಗೆ ಸಮಾಧಾನ ಮಾಡುತ್ತಾ ಕುರುಪ್ರವೀರ ಧನಂಜಯನನ್ನುದ್ದೇಶಿಸಿ ಈ ಮಾತುಗಳನ್ನು ಹೇಳಿದನು:

01182007a ತ್ವಯಾ ಜಿತಾ ಪಾಂಡವ ಯಾಜ್ಞಸೇನೀ। ತ್ವಯಾ ಚ ತೋಷಿಷ್ಯತಿ ರಾಜಪುತ್ರೀ।
01182007c ಪ್ರಜ್ವಾಲ್ಯತಾಂ ಹೂಯತಾಂ ಚಾಪಿ ವಹ್ನಿರ್। ಗೃಹಾಣ ಪಾಣಿಂ ವಿಧಿವತ್ತ್ವಮಸ್ಯಾಃ।।

“ಪಾಂಡವ! ಯಾಜ್ಞಸೇನಿಯು ನಿನ್ನಿಂದ ಗೆದ್ದವಳು ಮತ್ತು ರಾಜಪುತ್ರಿಯನ್ನು ನೀನೇ ತೃಪ್ತಿಗೊಳಿಸಬೇಕು. ಅಗ್ನಿಯನ್ನು ಪ್ರಜ್ವಲಿಸಿ ಹವಿಸ್ಸನ್ನು ನೀಡಿ ವಿಧಿವತ್ತಾಗಿ ಅವಳ ಪಾಣಿಗ್ರಹಣ ಮಾಡಿಕೋ!”

01182008 ಅರ್ಜುನ ಉವಾಚ।
01182008a ಮಾ ಮಾಂ ನರೇಂದ್ರ ತ್ವಮಧರ್ಮಭಾಜಂ। ಕೃಥಾ ನ ಧರ್ಮೋ ಹ್ಯಯಮೀಪ್ಸಿತೋಽನ್ಯೈಃ।
01182008c ಭವಾನ್ನಿವೇಶ್ಯಃ ಪ್ರಥಮಂ ತತೋಽಯಂ। ಭೀಮೋ ಮಹಾಬಾಹುರಚಿಂತ್ಯಕರ್ಮಾ।।

ಅರ್ಜುನನು ಹೇಳಿದನು: “ನರೇಂದ್ರ! ನಾನು ಅಧರ್ಮದಲ್ಲಿ ಪಾಲ್ಗೊಳ್ಳುವಂತೆ ಮಾಡಬೇಡ! ಬೇರೆಯವರು ಸ್ವೀಕರಿಸುವ ಧರ್ಮವಿದಲ್ಲ. ನೀನೇ ಮೊದಲು ಮದುವೆಯಾಗಬೇಕು. ನಂತರ ಅಚಿಂತ್ಯಕರ್ಮಿ ಮಹಾಬಾಹು ಬೀಮ.

01182009a ಅಹಂ ತತೋ ನಕುಲೋಽನಂತರಂ ಮೇ। ಮಾದ್ರೀಸುತಃ ಸಹದೇವೋ ಜಘನ್ಯಃ।
01182009c ವೃಕೋದರೋಽಹಂ ಚ ಯಮೌ ಚ ರಾಜನ್ನಿ- ಯಂ ಚ ಕನ್ಯಾ ಭವತಃ ಸ್ಮ ಸರ್ವೇ।।

ನಂತರ ನಾನು, ನನ್ನ ನಂತರ ನಕುಲ ಮತ್ತು ನಮ್ಮೆಲ್ಲರ ನಂತರ ಮಾದ್ರೀಸುತ ಸಹದೇವ. ರಾಜನ್! ವೃಕೋದರ, ನಾನು ಮತ್ತು ಅವಳಿಗಳು ಎಲ್ಲರೂ ಈ ಕನ್ಯೆಯು ನಿನಗೇ ಸೇರಬೇಕು ಎಂದು ಅಂದುಕೊಂಡಿದ್ದೇವೆ.

01182010a ಏವಂಗತೇ ಯತ್ಕರಣೀಯಮತ್ರ। ಧರ್ಮ್ಯಂ ಯಶಸ್ಯಂ ಕುರು ತತ್ಪ್ರಚಿಂತ್ಯ।
01182010c ಪಾಂಚಾಲರಾಜಸ್ಯ ಚ ಯತ್ಪ್ರಿಯಂ ಸ್ಯಾತ್। ತದ್ಬ್ರೂಹಿ ಸರ್ವೇ ಸ್ಮ ವಶೇ ಸ್ಥಿತಾಸ್ತೇ।।

ಈ ಪರಿಸ್ಥಿತಿಯಲ್ಲಿ ಏನನ್ನು ಮಾಡಿದರೆ ಒಳ್ಳೆಯದಾಗುವುದು, ಯಾವುದು ನಮಗೆ ಧರ್ಮ ಮತ್ತು ಯಶಸ್ಸನ್ನು ತರುವುದು ಮತ್ತು ಪಾಂಚಾಲರಾಜನಿಗೆ ಯಾವುದು ಪ್ರಿಯವಾದುದು ಎನ್ನುವುದರ ಬಗ್ಗೆ ಯೋಚಿಸು. ನಮಗೆ ಹೇಳು, ನಾವೆಲ್ಲ ನಿನ್ನ ವಶದಲ್ಲಿದ್ದೇವೆ.””

01182011 ವೈಶಂಪಾಯನ ಉವಾಚ।
01182011a ತೇ ದೃಷ್ಟ್ವಾ ತತ್ರ ತಿಷ್ಠಂತೀಂ ಸರ್ವೇ ಕೃಷ್ಣಾಂ ಯಶಸ್ವಿನೀಂ।
01182011c ಸಂಪ್ರೇಕ್ಷ್ಯಾನ್ಯೋನ್ಯಮಾಸೀನಾ ಹೃದಯೈಸ್ತಾಮಧಾರಯನ್।।

ವೈಶಂಪಾಯನನು ಹೇಳಿದನು: “ಎಲ್ಲರೂ ಅಲ್ಲಿ ನಿಂತಿದ್ದ ಯಶಸ್ವಿನೀ ಕೃಷ್ಣೆಯನ್ನು ನೋಡುತ್ತಾ ತಮ್ಮ ತಮ್ಮ ಹೃದಯದಲ್ಲಿ ಅವಳನ್ನು ಆರಾಧಿಸುತ್ತಾ ಅನ್ಯೋನ್ಯರನ್ನು ನೋಡಿದರು.

01182012a ತೇಷಾಂ ಹಿ ದ್ರೌಪದೀಂ ದೃಷ್ಟ್ವಾ ಸರ್ವೇಷಾಮಮಿತೌಜಸಾಂ।
01182012c ಸಂಪ್ರಮಥ್ಯೇಂದ್ರಿಯಗ್ರಾಮಂ ಪ್ರಾದುರಾಸೀನ್ಮನೋಭವಃ।।

ಅಮಿತ ತೇಜಸ್ವಿಗಳಾದ ಎಲ್ಲರೂ ಆ ದ್ರೌಪದಿಯನ್ನು ನೋಡುತ್ತಿರಲು ಅವರ ಮನದಲ್ಲಿ ಅವಳ ಮೇಲಿರುವ ಪ್ರೀತಿಯು ಅವರ ಇಂದ್ರಿಯಗಳನ್ನು ಕಡೆಯುತ್ತಿರಲು ಅವರ ಮನೋಭಾವಗಳು ಗೋಚರವಾದವು.

01182013a ಕಾಮ್ಯಂ ರೂಪಂ ಹಿ ಪಾಂಚಾಲ್ಯಾ ವಿಧಾತ್ರಾ ವಿಹಿತಂ ಸ್ವಯಂ।
01182013c ಬಭೂವಾಧಿಕಮನ್ಯಾಭ್ಯಃ ಸರ್ವಭೂತಮನೋಹರಂ।।

ಸ್ವಯಂ ವಿಧಾತನಿಂದ ವಿಹಿತೆ ಆ ಪಾಂಚಾಲೆಯ ಕಾಮ್ಯಕ ರೂಪವು ಅನ್ಯರ ರೂಪಕ್ಕಿಂತ ಅಧಿಕವಾಗಿತ್ತು ಮತ್ತು ಸರ್ವಭೂತ ಮನೋಹರವಾಗಿದ್ದಿತು.

01182014a ತೇಷಾಮಾಕಾರಭಾವಜ್ಞಃ ಕುಂತೀಪುತ್ರೋ ಯುಧಿಷ್ಠಿರಃ।
01182014c ದ್ವೈಪಾಯನವಚಃ ಕೃತ್ಸ್ನಂ ಸಂಸ್ಮರನ್ವೈ ನರರ್ಷಭ।।
01182015a ಅಬ್ರವೀತ್ಸ ಹಿ ತಾನ್ಭ್ರಾತೄನ್ಮಿಥೋಭೇದಭಯಾನ್ನೃಪಃ।
01182015c ಸರ್ವೇಷಾಂ ದ್ರೌಪದೀ ಭಾರ್ಯಾ ಭವಿಷ್ಯತಿ ಹಿ ನಃ ಶುಭಾ।।

ಅವರೆಲ್ಲರ ಭಾವನೆಗಳನ್ನು ತಿಳಿದ, ದ್ವೈಪಾಯನನ ಅದ್ಭುತವಚನಗಳನ್ನು ಸ್ಮರಿಸಿದ ನರರ್ಷಭ ಕುಂತೀಪುತ್ರ ಯುಧಿಷ್ಠಿರ ರಾಜನು ತಮ್ಮಲ್ಲಿಯೇ ಭಿರುಕುಂಟಾಗಬಹುದೆಂಬ ಭಯದಿಂದ ಅವರೆಲ್ಲರಿಗೂ: “ಶುಭೆ ದ್ರೌಪದಿಯು ನಮ್ಮೆಲ್ಲರ ಭಾರ್ಯೆಯಾಗುತ್ತಾಳೆ!” ಎಂದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸ್ವಯಂವರಪರ್ವಣಿ ದ್ವಶೀತ್ಯಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸ್ವಯಂವರಪರ್ವದಲ್ಲಿ ನೂರಾಎಂಭತ್ತೆರಡನೆಯ ಅಧ್ಯಾಯವು.