ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಚೈತ್ರರಥ ಪರ್ವ
ಅಧ್ಯಾಯ 170
ಸಾರ
ಶರಣುಬಂದ ಕ್ಷತ್ರಿಯರಿಗೆ ಔರ್ವನು ದೃಷ್ಟಿಪ್ರದಾನ ಮಾಡಿದ್ದುದು (1-8). ಲೋಕವಿನಾಶಕ್ಕೆ ತಪಸ್ಸನ್ನು ತಪಿಸುತ್ತಿದ್ದ ಔರ್ವನನ್ನು ಪಿತೃಗಳು ಬಂದು ತಡೆದುದು (9-21).
01170001 ಬ್ರಾಹ್ಮಣ್ಯುವಾಚ।
01170001a ನಾಹಂ ಗೃಹ್ಣಾಮಿ ವಸ್ತಾತ ದೃಷ್ಟೀರ್ನಾಸ್ತಿ ರುಷಾನ್ವಿತಾ।
01170001c ಅಯಂ ತು ಭಾರ್ಗವೋ ನೂನಮೂರುಜಃ ಕುಪಿತೋಽದ್ಯ ವಃ।।
ಬ್ರಾಹ್ಮಣಿಯು ಹೇಳಿದಳು: “ನಾನೇನೂ ನಿಮ್ಮ ಕಣ್ಣುಗಳನ್ನು ತೆಗೆದುಕೊಂಡಿಲ್ಲ ಆಥವಾ ನಾನು ರೋಶಾನ್ವಿತಳೂ ಆಗಿಲ್ಲ. ನನ್ನ ತೊಡೆಯಿಂದ ಹುಟ್ಟಿದ ಈ ಭಾರ್ಗವನು ನಿಮ್ಮ ಮೇಲೆ ಕುಪಿತನಾಗಿದ್ದಾನೆ.
01170002a ತೇನ ಚಕ್ಷೂಂಷಿ ವಸ್ತಾತ ನೂನಂ ಕೋಪಾನ್ಮಹಾತ್ಮನಾ।
01170002c ಸ್ಮರತಾ ನಿಹತಾನ್ಬಂಧೂನಾದತ್ತಾನಿ ನ ಸಂಶಯಃ।।
ಅವನೇ ನಿಮ್ಮ ಕಣ್ಣುಗಳನ್ನು ತೆಗೆದುಕೊಂಡ. ಏಕೆಂದರೆ ಆ ಮಹಾತ್ಮನು ಅವನ ಬಂಧುಗಳ ವಧೆಗೈದ ನಿಮ್ಮನ್ನು ನೆನಪಿಸಿಕೊಂಡು ನಿಸ್ಸಂಶಯವಾಗಿ ನಿಮ್ಮ ಮೇಲೆ ಕುಪಿತನಾಗಿರಬಹುದು.
01170003a ಗರ್ಭಾನಪಿ ಯದಾ ಯೂಯಂ ಭೃಗೂಣಾಂ ಘ್ನತ ಪುತ್ರಕಾಃ।
01170003c ತದಾಯಮೂರುಣಾ ಗರ್ಭೋ ಮಯಾ ವರ್ಷಶತಂ ಧೃತಃ।।
ಗರ್ಭದಲ್ಲಿರುವ ಭೃಗು ಮಕ್ಕಳನ್ನು ನೀವು ಕೊಲ್ಲುತ್ತಿದ್ದುದರಿಂದ ನಾನು ನನ್ನ ಈ ಗರ್ಭವನ್ನು ಒಂದು ನೂರು ವರ್ಷಗಳ ಪರ್ಯಂತ ನನ್ನ ತೊಡೆಯಲ್ಲಿಯೇ ಇರಿಸಿಕೊಂಡಿದ್ದೆ.
01170004a ಷಡಂಗಶ್ಚಾಖಿಲೋ ವೇದ ಇಮಂ ಗರ್ಭಸ್ಥಮೇವ ಹಿ।
01170004c ವಿವೇಶ ಭೃಗುವಂಶಸ್ಯ ಭೂಯಃ ಪ್ರಿಯಚಿಕೀರ್ಷಯಾ।।
ಭವಿಷ್ಯದಲ್ಲಿ ಭೃಗುವಂಶಕ್ಕೆ ಒಳ್ಳೆಯದಾಗಲೆಂದು ಗರ್ಭಧಾರಣೆಯ ಸಮಯದಲ್ಲಿಯೇ ಷಡಂಗಸಮೇತ ಅಖಿಲ ವೇದವೂ ಇವನನ್ನು ಪ್ರವೇಶಿಸಿತ್ತು.
01170005a ಸೋಽಯಂ ಪಿತೃವಧಾನ್ನೂನಂ ಕ್ರೋಧಾದ್ವೋ ಹಂತುಮಿಚ್ಛತಿ।
01170005c ತೇಜಸಾ ಯಸ್ಯ ದಿವ್ಯೇನ ಚಕ್ಷೂಂಷಿ ಮುಷಿತಾನಿ ವಃ।।
ಪಿತೃವಧೆಗೈದವರನ್ನು ಕ್ರೋಧದಿಂದ ಕೊಲ್ಲಲ್ಲು ಬಯಸುತ್ತಿದ್ದಾನೆ ಮತ್ತು ತನ್ನ ದಿವ್ಯ ತೇಜಸ್ಸಿನಿಂದ ನಿಮ್ಮ ದೃಷ್ಟಿಗಳನ್ನು ಕುರುಡುಮಾಡಿದ್ದಾನೆ.
01170006a ತಮಿಮಂ ತಾತ ಯಾಚಧ್ವಮೌರ್ವಂ ಮಮ ಸುತೋತ್ತಮಂ।
01170006c ಅಯಂ ವಃ ಪ್ರಣಿಪಾತೇನ ತುಷ್ಟೋ ದೃಷ್ಟೀರ್ವಿಮೋಕ್ಷ್ಯತಿ।।
ನನ್ನ ಸುತೋತ್ತಮ ಔರ್ವನಲ್ಲಿ ಯಾಚಿಸಿರಿ. ನೀವು ಅವನಿಗೆ ಶರಣು ಬೀಳುವುದರಿಂದ ತುಷ್ಟನಾಗಿ ನಿಮಗೆ ದೃಷ್ಟಿಯನ್ನು ನೀಡುತ್ತಾನೆ.””
01170007 ವಸಿಷ್ಠ ಉವಾಚ।
01170007a ಏವಮುಕ್ತಾಸ್ತತಃ ಸರ್ವೇ ರಾಜಾನಸ್ತೇ ತಮೂರುಜಂ।
01170007c ಊಚುಃ ಪ್ರಸೀದೇತಿ ತದಾ ಪ್ರಸಾದಂ ಚ ಚಕಾರ ಸಃ।।
ವಸಿಷ್ಠನು ಹೇಳಿದನು: “ಇದನ್ನು ಕೇಳಿದ ಸರ್ವ ರಾಜರುಗಳೂ ಆ ಊರುಜನನ್ನು ಪ್ರಸೀದ ಎಂದು ಕೇಳಿಕೊಂಡಾಗ ಅವನು ಸಂತುಷ್ಟನಾದನು.
01170008a ಅನೇನೈವ ಚ ವಿಖ್ಯಾತೋ ನಾಮ್ನಾ ಲೋಕೇಷು ಸತ್ತಮಃ।
01170008c ಸ ಔರ್ವ ಇತಿ ವಿಪ್ರರ್ಷಿರೂರುಂ ಭಿತ್ತ್ವಾ ವ್ಯಜಾಯತ।।
ಊರುವನ್ನು ಸೀಳಿ ಹೊರಬಂದ ಆ ವಿಪ್ರರ್ಷಿ ಸತ್ತಮನು ಔರ್ವ ಎಂಬ ಹೆಸರಿನಿಂದ ಲೋಕಗಳಲ್ಲಿ ವಿಖ್ಯಾತನಾದನು.
01170009a ಚಕ್ಷೂಂಷಿ ಪ್ರತಿಲಭ್ಯಾಥ ಪ್ರತಿಜಗ್ಮುಸ್ತತೋ ನೃಪಾಃ।
01170009c ಭಾರ್ಗವಸ್ತು ಮುನಿರ್ಮೇನೇ ಸರ್ವಲೋಕಪರಾಭವಂ।।
ದೃಷ್ಟಿಯನ್ನು ಹಿಂದಕ್ಕೆ ಪಡೆದು ನೃಪರು ಹಿಂದಿರುಗಿದರು. ಆದರೆ ಆ ಭಾರ್ಗವ ಮುನಿಯು ಮಾತ್ರ ಸರ್ವ ಲೋಕಪರಾಭವದ ಕುರಿತು ಯೋಚಿಸಿದನು.
01170010a ಸ ಚಕ್ರೇ ತಾತ ಲೋಕಾನಾಂ ವಿನಾಶಾಯ ಮಹಾಮನಾಃ।
01170010c ಸರ್ವೇಷಾಮೇವ ಕಾರ್ತ್ಸ್ನ್ಯೆನ ಮನಃ ಪ್ರವಣಮಾತ್ಮನಃ।।
ಮಗೂ! ಆ ಮಹಾತ್ಮನು ಲೋಕಗಳ ವಿನಾಶಕ್ಕೆ ತೊಡಗಿದನು. ತನ್ನ ಸಂಪೂರ್ಣ ಮನಸ್ಸನ್ನೂ ಅದೊಂದಕ್ಕೇ ತೊಡಗಿಸಿದನು.
01170011a ಇಚ್ಛನ್ನಪಚಿತಿಂ ಕರ್ತುಂ ಭೃಗೂಣಾಂ ಭೃಗುಸತ್ತಮಃ।
01170011c ಸರ್ವಲೋಕವಿನಾಶಾಯ ತಪಸಾ ಮಹತೈಧಿತಃ।।
ಭೃಗುಗಳಿಗೆ ಕೀರ್ತಿಯನ್ನು ತರಲೋಸುಗ ಆ ಭೃಗುಸತ್ತಮನು ಸರ್ವಲೋಕವಿನಾಶಕ್ಕಾಗಿ ಮಹಾ ತಪಸ್ಸಿನಲ್ಲಿ ತೊಡಗಿದನು.
01170012a ತಾಪಯಾಮಾಸ ಲೋಕಾನ್ಸ ಸದೇವಾಸುರಮಾನುಷಾನ್।
01170012c ತಪಸೋಗ್ರೇಣ ಮಹತಾ ನಂದಯಿಷ್ಯನ್ಪಿತಾಮಹಾನ್।।
ತನ್ನ ಪಿತಾಮಹರಿಗೆ ಮಹತ್ತರ ಆನಂದವನ್ನು ತರಲು ಉಗ್ರ ತಪಸ್ಸಿನಿಂದ ದೇವಾಸುರಮನುಷ್ಯರಿಂದೊಡಗೂಡಿದ ಲೋಕಗಳನ್ನು ಸುಡತೊಡಗಿದನು.
01170013a ತತಸ್ತಂ ಪಿತರಸ್ತಾತ ವಿಜ್ಞಾಯ ಭೃಗುಸತ್ತಮಂ।
01170013c ಪಿತೃಲೋಕಾದುಪಾಗಮ್ಯ ಸರ್ವ ಊಚುರಿದಂ ವಚಃ।।
ಆ ಭೃಗುಸತ್ತಮನನ್ನು ಅರ್ಥಮಾಡಿಕೊಂಡ ಅವನ ಸರ್ವ ಪಿತೃಗಳು ಪಿತೃಲೋಕದಿಂದ ಕೆಳಗಿಳಿದು ಬಂದು ಅವನಿಗೆ ಈ ಮಾತುಗಳನ್ನು ಹೇಳಿದರು:
01170014a ಔರ್ವ ದೃಷ್ಟಃ ಪ್ರಭಾವಸ್ತೇ ತಪಸೋಗ್ರಸ್ಯ ಪುತ್ರಕ।
01170014c ಪ್ರಸಾದಂ ಕುರು ಲೋಕಾನಾಂ ನಿಯಚ್ಛ ಕ್ರೋಧಮಾತ್ಮನಃ।।
“ಔರ್ವ! ಪುತ್ರಕ! ನಿನ್ನ ಈ ಉಗ್ರ ತಪಸ್ಸಿನ ಪ್ರಭಾವವನ್ನು ನೋಡಿದ್ದೇವೆ. ಲೋಕಗಳ ಮೇಲೆ ಕರುಣೆತೋರು. ನಿನ್ನ ಸಿಟ್ಟನ್ನು ಹಿಂತೆಗೆದುಕೋ.
01170015a ನಾನೀಶೈರ್ಹಿ ತದಾ ತಾತ ಭೃಗುಭಿರ್ಭಾವಿತಾತ್ಮಭಿಃ।
01170015c ವಧೋಽಭ್ಯುಪೇಕ್ಷಿತಃ ಸರ್ವೈಃ ಕ್ಷತ್ರಿಯಾಣಾಂ ವಿಹಿಂಸತಾಂ।।
ಮಗೂ! ಭಾವಿತಾತ್ಮ ಭೃಗುಗಳಲ್ಲಿ ಶಕ್ತಿ ಇರಲಿಲ್ಲವೆಂದು ಅವರು ಕ್ಷತ್ರಿಯರಿಂದ ಸರ್ವರ ಹಿಂಸಾತ್ಮಕ ವಧೆಯನ್ನು ನಿರ್ಲಕ್ಷಿಸಲಿಲ್ಲ.
01170016a ಆಯುಷಾ ಹಿ ಪ್ರಕೃಷ್ಟೇನ ಯದಾ ನಃ ಖೇದ ಆವಿಶತ್।
01170016c ತದಾಸ್ಮಾಭಿರ್ವಧಸ್ತಾತ ಕ್ಷತ್ರಿಯೈರೀಪ್ಸಿತಃ ಸ್ವಯಂ।।
ಆಯುಷ್ಯ ತುಂಬಾ ಹೆಚ್ಚಿದ್ದ ನಾವೇ ಬೇಸತ್ತು ನಾವೆಲ್ಲರೂ ಕ್ಷತ್ರಿಯರಿಂದ ಹತರಾಗಬೇಕೆಂದು ಬಯಸಿದ್ದೆವು.
01170017a ನಿಖಾತಂ ತದ್ಧಿ ವೈ ವಿತ್ತಂ ಕೇನ ಚಿದ್ಭೃಗುವೇಶ್ಮನಿ।
01170017c ವೈರಾಯೈವ ತದಾ ನ್ಯಸ್ತಂ ಕ್ಷತ್ರಿಯಾನ್ಕೋಪಯಿಷ್ಣುಭಿಃ।
01170017e ಕಿಂ ಹಿ ವಿತ್ತೇನ ನಃ ಕಾರ್ಯಂ ಸ್ವರ್ಗೇಪ್ಸೂನಾಂ ದ್ವಿಜರ್ಷಭ।।
ಆದುದರಿಂದ ನಮ್ಮಲ್ಲಿಯೇ ಒಬ್ಬರು ಕ್ಷತ್ರಿಯರಿಗೆ ನಮ್ಮ ಮೇಲೆ ಕೋಪ ಬರಲಿ ಎನ್ನುವ ಉದ್ದೇಶದಿಂದ ಭೃಗುವಿನ ಮನೆಯಲ್ಲಿ ವಿತ್ತವನ್ನು ಹುಗಿದಿಟ್ಟಿದ್ದೆವು. ದ್ವಿಜರ್ಷಭ! ಸ್ವರ್ಗವನ್ನೇ ಬಯಸುವ ನಮಗೆ ವಿತ್ತದಲ್ಲಿ ಏನು ಆಸಕ್ತಿ?
01170018a ಯದಾ ತು ಮೃತ್ಯುರಾದಾತುಂ ನ ನಃ ಶಕ್ನೋತಿ ಸರ್ವಶಃ।
01170018c ತದಾಸ್ಮಾಭಿರಯಂ ದೃಷ್ಟ ಉಪಾಯಸ್ತಾತ ಸಮ್ಮತಃ।।
ಮಗೂ! ನಮ್ಮೆಲ್ಲರನ್ನೂ ತೆಗೆದುಕೊಂಡು ಹೋಗಲು ಮೃತ್ಯುವೂ ಅಶಕ್ಯನೆಂದು ನೋಡಿ ಈ ಉಪಾಯವನ್ನು ಸಮ್ಮತಿಯಿಂದ ಮಾಡಿದೆವು.
01170019a ಆತ್ಮಹಾ ಚ ಪುಮಾಂಸ್ತಾತ ನ ಲೋಕಾಽಲ್ಲಭತೇ ಶುಭಾನ್।
01170019c ತತೋಽಸ್ಮಾಭಿಃ ಸಮೀಕ್ಷ್ಯೈವಂ ನಾತ್ಮನಾತ್ಮಾ ವಿನಾಶಿತಃ।।
ಆತ್ಮಹತ್ಯೆ ಮಾಡಿಕೊಳ್ಳುವವನು ಶ್ರೇಷ್ಠ ಶುಭ ಲೋಕಗಳನ್ನು ಪಡೆಯುವುದಿಲ್ಲ. ಈ ಕಾರಣದಿಂದಲೇ ನಮ್ಮನ್ನು ನಾವೇ ನಾಶಪಡಿಸಿಕೊಳ್ಳಲಿಲ್ಲ.
01170020a ನ ಚೈತನ್ನಃ ಪ್ರಿಯಂ ತಾತ ಯದಿದಂ ಕರ್ತುಮಿಚ್ಛಸಿ।
01170020c ನಿಯಚ್ಛೇದಂ ಮನಃ ಪಾಪಾತ್ಸರ್ವಲೋಕಪರಾಭವಾತ್।।
ಮಗೂ! ಆದುದರಿಂದ ನೀನು ಈಗ ಮಾಡಲು ಇಚ್ಛಿಸಿರುವುದು ನಮಗೆ ಸ್ವಲ್ಪವೂ ಇಷ್ಟವಿಲ್ಲ. ಸರ್ವಲೋಕಪರಾಭವದ ಪಾಪ ಮನಸ್ಸನ್ನು ತಡೆಹಿಡಿದುಕೋ.
01170021a ನ ಹಿ ನಃ ಕ್ಷತ್ರಿಯಾಃ ಕೇ ಚಿನ್ನ ಲೋಕಾಃ ಸಪ್ತ ಪುತ್ರಕ।
01170021c ದೂಷಯಂತಿ ತಪಸ್ತೇಜಃ ಕ್ರೋಧಮುತ್ಪತಿತಂ ಜಹಿ।।
ಪುತ್ರಕ! ಕ್ಷತ್ರಿಯರಾಗಲೀ ಈ ಸಪ್ತ ಲೋಕಗಳೇ ಆಗಲಿ ನಮ್ಮ ಈ ತಪೋ ತೇಜಸ್ಸನ್ನು ದೂಷಿಸಲು ಸಾದ್ಯವಿಲ್ಲ. ನಿನ್ನಲ್ಲಿರುವ ಕ್ರೋಧವನ್ನು ಕಿತ್ತು ಹಾಕು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಚೈತ್ರರಥಪರ್ವಣಿ ಔರ್ವವಾರಣೇ ಸಪ್ತತ್ಯಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಚೈತ್ರಪರ್ವದಲ್ಲಿ ಔರ್ವವಾರಣದಲ್ಲಿ ನೂರಾಎಪ್ಪತ್ತನೆಯ ಅಧ್ಯಾಯವು.