169 ಔರ್ವೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಚೈತ್ರರಥ ಪರ್ವ

ಅಧ್ಯಾಯ 169

ಸಾರ

ಅದೃಶ್ಯವಂತಿಯಲ್ಲಿ ಶಕ್ತಿಯ ಮಗ ಪರಾಶರನ ಜನನ (1-4). ರಾಕ್ಷಸನೋರ್ವನು ತನ್ನ ತಂದೆಯನ್ನು ಭಕ್ಷಿಸಿದನು ಎಂದು ತಿಳಿದುಕೊಂಡ ಪರಾಶರನು ಲೋಕನಾಶಕ್ಕೆ ನಿಶ್ಚಯಿಸಲು, ವಸಿಷ್ಠನು ಅವನಿಗೆ ಔರ್ವನ ಚರಿತ್ರೆಯನ್ನು ಹೇಳಿ ತಡೆದುದು (5-10). ಕೃತವೀರ್ಯನ ಕುಲದವರು ಸಂಪತ್ತಿಗಾಗಿ ಭಾರ್ಗವರನ್ನು ನಾಶಗೊಳಿಸಿದುದು (11-19). ಗರ್ಭಿಣಿಯಾಗಿದ್ದ ಓರ್ವ ಭಾರ್ಗವಿಯ ತೊಡೆಯನ್ನು ಸೀಳಿಬಂದ ಮಗುವು ತನ್ನ ತೇಜಸ್ಸಿನಿಂದ ಕ್ಷತ್ರಿಯರನ್ನು ಕುರುಡು ಮಾಡಿದ್ದುದು (20-25).

01169001 ಗಂಧರ್ವ ಉವಾಚ।
01169001a ಆಶ್ರಮಸ್ಥಾ ತತಃ ಪುತ್ರಮದೃಶ್ಯಂತೀ ವ್ಯಜಾಯತ।
01169001c ಶಕ್ತೇಃ ಕುಲಕರಂ ರಾಜನ್ದ್ವಿತೀಯಮಿವ ಶಕ್ತಿನಂ।।

ಗಂಧರ್ವನು ಹೇಳಿದನು: “ರಾಜನ್! ಆಶ್ರಮದಲ್ಲಿಯೇ ಉಳಿದಿದ್ದ ಅದೃಶ್ಯಂತಿಯು ಶಕ್ತಿಯ ಕುಲಕರ, ಎರಡನೆಯ ಶಕ್ತಿಯೋ ಎನ್ನುವಂತಿರುವ ಪುತ್ರನಿಗೆ ಜನ್ಮವಿತ್ತಳು.

01169002a ಜಾತಕರ್ಮಾದಿಕಾಸ್ತಸ್ಯ ಕ್ರಿಯಾಃ ಸ ಮುನಿಪುಂಗವಃ।
01169002c ಪೌತ್ರಸ್ಯ ಭರತಶ್ರೇಷ್ಠ ಚಕಾರ ಭಗವಾನ್ಸ್ವಯಂ।।

ಭರತಶ್ರೇಷ್ಠ! ತನ್ನ ಮೊಮ್ಮಗನ ಜಾತಕರ್ಮಾದಿ ಕ್ರಿಯೆಗಳನ್ನು ಸ್ವಯಂ ಭಗವಾನ್ ಮುನಿಪುಂಗವನೇ ನೆರವೇರಿಸಿದನು.

01169003a ಪರಾಸುಶ್ಚ ಯತಸ್ತೇನ ವಸಿಷ್ಠಃ ಸ್ಥಾಪಿತಸ್ತದಾ।
01169003c ಗರ್ಭಸ್ಥೇನ ತತೋ ಲೋಕೇ ಪರಾಶರ ಇತಿ ಸ್ಮೃತಃ।।

ಗರ್ಭದಲ್ಲಿರುವಾಗಲೇ ಸಾಯಲು ಸಿದ್ಧನಾಗಿದ್ದ ವಸಿಷ್ಠನನ್ನು ತಡೆಹಿಡಿದುದಕ್ಕಾಗಿ ಅವನು ಪರಾಶರನೆಂದು ಲೋಕದಲ್ಲಿ ಹೇಳಿಸಿಕೊಂಡನು.

01169004a ಅಮನ್ಯತ ಸ ಧರ್ಮಾತ್ಮಾ ವಸಿಷ್ಠಂ ಪಿತರಂ ತದಾ।
01169004c ಜನ್ಮಪ್ರಭೃತಿ ತಸ್ಮಿಂಶ್ಚ ಪಿತರೀವ ವ್ಯವರ್ತತ।।

ಹುಟ್ಟಿದಾಗಿನಿಂದ ಧರ್ಮಾತ್ಮನಾದ ಅವನು ವಸಿಷ್ಠನೇ ತನ್ನ ತಂದೆಯೆಂದು ತಿಳಿದು ಅವನೊಡನೆ ತಂದೆಯೊಡನೆ ಹೇಗೋ ಹಾಗೆಯೇ ವರ್ತಿಸುತ್ತಿದ್ದನು.

01169005a ಸ ತಾತ ಇತಿ ವಿಪ್ರರ್ಷಿಂ ವಸಿಷ್ಠಂ ಪ್ರತ್ಯಭಾಷತ।
01169005c ಮಾತುಃ ಸಮಕ್ಷಂ ಕೌಂತೇಯ ಅದೃಶ್ಯಂತ್ಯಾಃ ಪರಂತಪ।।
01169006a ತಾತೇತಿ ಪರಿಪೂರ್ಣಾರ್ಥಂ ತಸ್ಯ ತನ್ಮಧುರಂ ವಚಃ।
01169006c ಅದೃಶ್ಯಂತ್ಯಶ್ರುಪೂರ್ಣಾಕ್ಷೀ ಶೃಣ್ವಂತೀ ತಮುವಾಚ ಹ।।

ಕೌಂತೇಯ! ಪರಂತಪ! ಒಮ್ಮೆ ಅವನು ತಾಯಿಯ ಸಮಕ್ಷಮದಲ್ಲಿ ವಿಪ್ರರ್ಷಿ ವಸಿಷ್ಠನನ್ನು “ತಂದೆ” ಎಂದು ಕರೆದಾಗ ಅದೃಶ್ಯವಂತಿಯು ಕಣ್ಣುಗಳನ್ನು ಕಣ್ಣೀರಿನಿಂದ ತುಂಬಿಸಿಕೊಂಡು ಅವನಿಗೆ ಕೇಳುವಂತೆ ಹೇಳಿದಳು:

01169007a ಮಾ ತಾತ ತಾತ ತಾತೇತಿ ನ ತೇ ತಾತೋ ಮಹಾಮುನಿಃ।
01169007c ರಕ್ಷಸಾ ಭಕ್ಷಿತಸ್ತಾತ ತವ ತಾತೋ ವನಾಂತರೇ।।

“ಅವನನ್ನು ಅಪ್ಪಾ ಅಪ್ಪಾ ಅಪ್ಪಾ ಎಂದು ಕರೆಯಬೇಡ. ಮಹಾಮುನಿಯು ನಿನ್ನ ತಂದೆಯಲ್ಲ. ನಿನ್ನ ತಂದೆಯನ್ನು ವನದಲ್ಲಿ ಓರ್ವ ರಾಕ್ಷಸನು ಭಕ್ಷಿಸಿದನು.

01169008a ಮನ್ಯಸೇ ಯಂ ತು ತಾತೇತಿ ನೈಷ ತಾತಸ್ತವಾನಘ।
01169008c ಆರ್ಯಸ್ತ್ವೇಷ ಪಿತಾ ತಸ್ಯ ಪಿತುಸ್ತವ ಮಹಾತ್ಮನಃ।।

ತಂದೆಯೆಂದು ನೀನು ತಿಳಿದಿರುವವನು ನಿನ್ನ ತಂದೆಯಲ್ಲ ಅನಘ! ಈ ಮಹಾತ್ಮನು ನಿನ್ನ ತಂದೆಯ ತಂದೆ.”

01169009a ಸ ಏವಮುಕ್ತೋ ದುಃಖಾರ್ತಃ ಸತ್ಯವಾಗೃಷಿಸತ್ತಮಃ।
01169009c ಸರ್ವಲೋಕವಿನಾಶಾಯ ಮತಿಂ ಚಕ್ರೇ ಮಹಾಮನಾಃ।।

ಇದನ್ನು ಕೇಳಿದ ಸತ್ಯವಾಗ್ಮಿ ಮಹಾಮನಸ್ವಿ ಮುನಿಸತ್ತಮನು ದುಃಖಾರ್ತನಾಗಿ ಸರ್ವಲೋಕವಿನಾಶದ ಕುರಿತು ಯೋಚಿಸತೊಡಗಿದನು.

01169010a ತಂ ತಥಾ ನಿಶ್ಚಿತಾತ್ಮಾನಂ ಮಹಾತ್ಮಾನಂ ಮಹಾತಪಾಃ।
01169010c ವಸಿಷ್ಠೋ ವಾರಯಾಮಾಸ ಹೇತುನಾ ಯೇನ ತಚ್ಛೃಣು।।

ಈಗ ಮಹಾತ್ಮ ಮಹಾತಪಸ್ವಿ ವಸಿಷ್ಠನು ಯಾವ ಕಾರಣಗಳನ್ನಿತ್ತು ಆ ನಿಶ್ಚಿತಾತ್ಮನನ್ನು ತಡೆದನು ಎನ್ನುವುದನ್ನು ಕೇಳು.

01169011 ವಸಿಷ್ಠ ಉವಾಚ।
01169011a ಕೃತವೀರ್ಯ ಇತಿ ಖ್ಯಾತೋ ಬಭೂವ ನೃಪತಿಃ ಕ್ಷಿತೌ।
01169011c ಯಾಜ್ಯೋ ವೇದವಿದಾಂ ಲೋಕೇ ಭೃಗೂಣಾಂ ಪಾರ್ಥಿವರ್ಷಭಃ।।

ವಸಿಷ್ಠನು ಹೇಳಿದನು: “ಭೂಮಿಯಲ್ಲಿ ಹಿಂದೆ ಕೃತವೀರ್ಯ ಎಂದು ಖ್ಯಾತಗೊಂಡ ಪಾರ್ಥಿವರ್ಷಭ ನೃಪತಿಯು ಇದ್ದನು. ಅವನು ಲೋಕದಲ್ಲಿ ವೇದವಿದರಾದ ಭೃಗುಗಳನ್ನು ಯಾಜಕರನಾಗಿರಿಸಿದ್ದನು.

01169012a ಸ ತಾನಗ್ರಭುಜಸ್ತಾತ ಧಾನ್ಯೇನ ಚ ಧನೇನ ಚ।
01169012c ಸೋಮಾಂತೇ ತರ್ಪಯಾಮಾಸ ವಿಪುಲೇನ ವಿಶಾಂ ಪತಿಃ।।

ಸೋಮಯಾಗದ ಅಂತ್ಯದಲ್ಲಿ ವಿಶಾಂಪತಿಯು ಆ ಅಗ್ರಭುಜರಿಗೆ ವಿಪುಲ ಧನ ಧಾನ್ಯಗಳನ್ನಿತ್ತು ತೃಪ್ತಿಪಡಿಸಿದನು.

01169013a ತಸ್ಮಿನ್ನೃಪತಿಶಾರ್ದೂಲೇ ಸ್ವರ್ಯಾತೇಽಥ ಕದಾ ಚನ।
01169013c ಬಭೂವ ತತ್ಕುಲೇಯಾನಾಂ ದ್ರವ್ಯಕಾರ್ಯಮುಪಸ್ಥಿತಂ।।
01169014a ತೇ ಭೃಗೂಣಾಂ ಧನಂ ಜ್ಞಾತ್ವಾ ರಾಜಾನಃ ಸರ್ವ ಏವ ಹ।
01169014c ಯಾಚಿಷ್ಣವೋಽಭಿಜಗ್ಮುಸ್ತಾಂಸ್ತಾತ ಭಾರ್ಗವಸತ್ತಮಾನ್।।

ಈ ನೃಪತಿಶಾರ್ದೂಲನು ಸ್ವರ್ಗವಾಸಿಯಾದ ನಂತರ ಅವನ ಕುಲದವರಿಗೆ ದ್ರವ್ಯದ ಅವಶ್ಯಕತೆಯುಂಟಾಯಿತು. ಭೃಗುಗಳಲ್ಲಿರುವ ಸಂಪತ್ತನ್ನು ತಿಳಿದ ಆ ಎಲ್ಲ ರಾಜರುಗಳೂ ಭಾರ್ಗವಸತ್ತಮರಲ್ಲಿ ಸಂಪತ್ತನ್ನು ಕೇಳಿಕೊಂಡರು.

01169015a ಭೂಮೌ ತು ನಿದಧುಃ ಕೇ ಚಿದ್ಭೃಗವೋ ಧನಮಕ್ಷಯಂ।
01169015c ದದುಃ ಕೇ ಚಿದ್ದ್ವಿಜಾತಿಭ್ಯೋ ಜ್ಞಾತ್ವಾ ಕ್ಷತ್ರಿಯತೋ ಭಯಂ।।

ಕ್ಷತ್ರಿಯರ ಭಯದಿಂದ ಭೃಗುಗಳಲ್ಲಿ ಕೆಲವರು ಸಂಪತ್ತನ್ನು ಭೂಮಿಯಲ್ಲಿ ಹುಗಿದಿಟ್ಟರು. ಕೆಲವರು ಬ್ರಾಹ್ಮಣರಿಗೆ ದಾನವನ್ನಿತ್ತರು.

01169016a ಭೃಗವಸ್ತು ದದುಃ ಕೇ ಚಿತ್ತೇಷಾಂ ವಿತ್ತಂ ಯಥೇಪ್ಸಿತಂ।
01169016c ಕ್ಷತ್ರಿಯಾಣಾಂ ತದಾ ತಾತ ಕಾರಣಾಂತರದರ್ಶನಾತ್।।

ಮಗೂ! ಭೃಗುಗಳಲ್ಲಿಯೂ ಕೆಲವರು, ಅದರ ಲಾಭವನ್ನು ಯೋಚಿಸಿ, ಕ್ಷತ್ರಿಯರಿಗೆ ಅವರು ಇಷ್ಟಪಟ್ಟಷ್ಟು ವಿತ್ತವನ್ನು ನೀಡಿದರು.

01169017a ತತೋ ಮಹೀತಲಂ ತಾತ ಕ್ಷತ್ರಿಯೇಣ ಯದೃಚ್ಛಯಾ।
01169017c ಖನತಾಧಿಗತಂ ವಿತ್ತಂ ಕೇನ ಚಿದ್ಭೃಗುವೇಶ್ಮನಿ।
01169017e ತದ್ವಿತ್ತಂ ದದೃಶುಃ ಸರ್ವೇ ಸಮೇತಾಃ ಕ್ಷತ್ರಿಯರ್ಷಭಾಃ।।

ಮಗೂ! ಒಮ್ಮೆ ಕ್ಷತ್ರಿಯರು ಮಹೀತಲವನ್ನು ಅಗೆಯುತ್ತಿದ್ದಾಗ ಎಲ್ಲಿಯೋ ಒಂದು ಕಡೆ ಭೃಗುವಿನ ಮನೆಯಲ್ಲಿ ವಿತ್ತವು ದೊರೆಯಿತು. ಕ್ಷತ್ರಿಯರ್ಷಭರೆಲ್ಲರೂ ಸೇರಿ ಆ ವಿತ್ತವನ್ನು ನೋಡಿದರು.

01169018a ಅವಮನ್ಯ ತತಃ ಕೋಪಾದ್ಭೃಗೂಂಸ್ತಾಂಶರಣಾಗತಾನ್।
01169018c ನಿಜಘ್ನುಸ್ತೇ ಮಹೇಷ್ವಾಸಾಃ ಸರ್ವಾಂಸ್ತಾನ್ನಿಶಿತೈಃ ಶರೈಃ।
01169018e ಆ ಗರ್ಭಾದನುಕೃಂತಂತಶ್ಚೇರುಶ್ಚೈವ ವಸುಂಧರಾಂ।।

ಅನಂತರ ಕೋಪ ಮತ್ತು ಅಪಮಾನದಿಂದ ಭೃಗುಗಳನ್ನೆಲ್ಲರನ್ನೂ, ಅವರು ಶರಣು ಬಂದರೂ, ತೀಕ್ಷ್ಣ ಶರಗಳಿಂದ ಹೊಡೆದು ಕೊಂದರು. ಅವರು ಭೂಮಿಯನ್ನೆಲ್ಲಾ ತಿರುಗಾಡಿ ಗರ್ಭದಲ್ಲಿರುವ ಮಕ್ಕಳನ್ನೂ ಬಿಡದೇ ಎಲ್ಲ ಭೃಗುಗಳನ್ನೂ ಕೊಂದರು.

01169019a ತತ ಉಚ್ಛಿದ್ಯಮಾನೇಷು ಭೃಗುಷ್ವೇವಂ ಭಯಾತ್ತದಾ।
01169019c ಭೃಗುಪತ್ನ್ಯೋ ಗಿರಿಂ ತಾತ ಹಿಮವಂತಂ ಪ್ರಪೇದಿರೇ।।

ಮಗೂ! ಈ ರೀತಿ ಭೃಗುಗಳ ಕೊಲೆಯಾಗುತ್ತಿರಲು ಭೃಗು ಪತ್ನಿಯರು ಭಯದಿಂದ ಹಿಮವತ್ ಗಿರಿಯನ್ನು ಸೇರಿದರು.

01169020a ತಾಸಾಮನ್ಯತಮಾ ಗರ್ಭಂ ಭಯಾದ್ದಾಧಾರ ತೈಜಸಂ।
01169020c ಊರುಣೈಕೇನ ವಾಮೋರೂರ್ಭರ್ತುಃ ಕುಲವಿವೃದ್ಧಯೇ।
01169020e ದದೃಶುರ್ಬ್ರಾಹ್ಮಣೀಂ ತಾಂ ತೇ ದೀಪ್ಯಮಾನಾಂ ಸ್ವತೇಜಸಾ।।

ಅವರಲ್ಲಿಯೇ ಓರ್ವ ವಾಮೋರುವು ತನ್ನ ಪತಿಯ ಕುಲವೃದ್ಧಿಗೋಸ್ಕರ ಕಂಡುಹಿಡಿದುಬಿಡುತ್ತಾರೋ ಎನ್ನುವ ಭಯದಿಂದ ತನ್ನ ಗರ್ಭವನ್ನು ತೊಡೆಯಲ್ಲಿ ಇರಿಸಿಕೊಂಡಿದ್ದಳು. ಸ್ವತೇಜಸ್ಸಿನಿಂದ ದೀಪ್ಯಮಾನಳಾಗಿದ್ದ ಆ ಬ್ರಾಹ್ಮಣಿಯನ್ನು ಅವರು ಕಂಡರು.

01169021a ಅಥ ಗರ್ಭಃ ಸ ಭಿತ್ತ್ವೋರುಂ ಬ್ರಾಹ್ಮಣ್ಯಾ ನಿರ್ಜಗಾಮ ಹ।
01169021c ಮುಷ್ಣನ್ದೃಷ್ಟೀಃ ಕ್ಷತ್ರಿಯಾಣಾಂ ಮಧ್ಯಾಹ್ನ ಇವ ಭಾಸ್ಕರಃ।
01169021e ತತಶ್ಚಕ್ಷುರ್ವಿಯುಕ್ತಾಸ್ತೇ ಗಿರಿದುರ್ಗೇಷು ಬಭ್ರಮುಃ।।

ಆಗ ಆ ಗರ್ಭವು ಬ್ರಾಹ್ಮಣಿಯ ತೊಡೆಯನ್ನು ಸೀಳಿ ಮಧ್ಯಾಹ್ನದ ಭಾಸ್ಕರನಂತೆ ಕ್ಷತ್ರಿಯರ ದೃಷ್ಟಿಯನ್ನು ಕುರುಡುಮಾಡುತ್ತಾ ಹೊರಬಂದಿತು. ಕಣ್ಣು ಕುರುಡಾದ ಅವರು ಗಿರಿದುರ್ಗಗಳಲ್ಲಿ ಅಲೆಯತೊಡಗಿದರು.

01169022a ತತಸ್ತೇ ಮೋಘಸಂಕಲ್ಪಾ ಭಯಾರ್ತಾಃ ಕ್ಷತ್ರಿಯರ್ಷಭಾಃ।
01169022c ಬ್ರಹ್ಮಣೀಂ ಶರಣಂ ಜಗ್ಮುರ್ದೃಷ್ಟ್ಯರ್ಥಂ ತಾಮನಿಂದಿತಾಂ।।

ತಮ್ಮ ಉದ್ದೇಶಗಳು ಪೂರೈಸದೇ ಇದ್ದುದರಿಂದ ಭಯಾರ್ತ ಕ್ಷತ್ರಿಯರ್ಷಭರು ತಮ್ಮ ದೃಷ್ಟಿಯನ್ನು ಪಡೆಯಲು ಅನಿಂದಿತೆ ಬ್ರಾಹ್ಮಣಿಯನ್ನು ಶರಣು ಹೊಕ್ಕರು.

01169023a ಊಚುಶ್ಚೈನಾಂ ಮಹಾಭಾಗಾಂ ಕ್ಷತ್ರಿಯಾಸ್ತೇ ವಿಚೇತಸಃ।
01169023c ಜ್ಯೋತಿಃಪ್ರಹೀಣಾ ದುಃಖಾರ್ತಾಃ ಶಾಂತಾರ್ಚಿಷ ಇವಾಗ್ನಯಃ।।

ಆರಿಹೋದ ಅಗ್ನಿಯಂತೆ ಕಣ್ಣಿನ ಜ್ಯೋತಿಯನ್ನೇ ಕಳೆದುಕೊಂಡ ವಿಚೇತಸ ಕ್ಷತ್ರಿಯರು ಆ ಮಹಾಭಾಗೆಯಲ್ಲಿ ಹೇಳಿದರು:

01169024a ಭಗವತ್ಯಾಃ ಪ್ರಸಾದೇನ ಗಚ್ಛೇತ್ ಕ್ಷತ್ರಂ ಸಚಕ್ಷುಷಂ।
01169024c ಉಪಾರಮ್ಯ ಚ ಗಚ್ಛೇಮ ಸಹಿತಾಃ ಪಾಪಕರ್ಮಣಃ।।

“ನಿನ್ನ ಕರುಣೆಯಿಂದ ಕ್ಷತ್ರಿಯರಿಗೆ ದೃಷ್ಟಿಯು ಹಿಂದಿರುಗಿ ಬರಲಿ. ನಾವೆಲ್ಲರೂ ಒಟ್ಟಿಗೇ ಪಾಪಕರ್ಮಗಳನ್ನು ನಿಲ್ಲಿಸಿ ಹೊರಟು ಹೋಗುತ್ತೇವೆ.

01169025a ಸಪುತ್ರಾ ತ್ವಂ ಪ್ರಸಾದಂ ನಃ ಸರ್ವೇಷಾಂ ಕರ್ತುಮರ್ಹಸಿ।
01169025c ಪುನರ್ದೃಷ್ಟಿಪ್ರದಾನೇನ ರಾಜ್ಞಃ ಸಂತ್ರಾತುಮರ್ಹಸಿ।।

ಪುತ್ರನ ಸಹಿತ ನೀನು ನಮ್ಮೆಲ್ಲರಿಗೂ ಕರುಣೆ ತೋರಿಸಬೇಕು. ಪುನಃ ದೃಷ್ಟಿಯನ್ನಿತ್ತು ರಾಜರನ್ನು ಉಳಿಸಬೇಕು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಚೈತ್ರರಥಪರ್ವಣಿ ಔರ್ವೋಪಾಖ್ಯಾನೇ ಏಕೋನಸಪ್ತತ್ಯಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಚೈತ್ರಪರ್ವದಲ್ಲಿ ಔರ್ವೋಪಾಖ್ಯಾನದಲ್ಲಿ ನೂರಾಅರವತ್ತೊಂಭತ್ತನೆಯ ಅಧ್ಯಾಯವು.