ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಚೈತ್ರರಥ ಪರ್ವ
ಅಧ್ಯಾಯ 167
ಸಾರ
ಪುತ್ರಶೋಕದಿಂದ ಕ್ಷಮಾವಂತ ವಸಿಷ್ಠನು ಆತ್ಮಹತ್ಯೆಯನ್ನು ಮಾಡಿಕೊಳ್ಳಲು ಪ್ರಯತ್ನಿಸಿ ಅಸಫಲನಾಗುವುದು (1-11). ಸೊಸೆ ಅದೃಶ್ಯವಂತಿಯು ಶಕ್ತಿಯಿಂದ ಗರ್ಭಿಣಿಯಾಗಿದ್ದಾಳೆಂದು ತಿಳಿದ ವಸಿಷ್ಠನು ಆತ್ಮಹತ್ಯೆಯಿಂದ ವಿಮುಖನಾದುದು (12-15). ಗರ್ಭಿಣಿ ಸೊಸೆಯೊಂದಿಗೆ ಬರುತ್ತಿರುವಾಗ ಮಾರ್ಗದಲ್ಲಿ ರಾಕ್ಷಸನಿಂದ ಆವೇಶಗೊಂಡಿದ್ದ, ನರಭಕ್ಷಕನಾಗಿದ್ದ ಕಲ್ಮಾಷಪಾದನು ಎದುರಾಗಲು ಅದೃಶ್ಯವಂತಿಯು ಹೆದರಿದುದು (16-21).
01167001 ಗಂಧರ್ವ ಉವಾಚ।
01167001a ತತೋ ದೃಷ್ಟ್ವಾಶ್ರಮಪದಂ ರಹಿತಂ ತೈಃ ಸುತೈರ್ಮುನಿಃ।
01167001c ನಿರ್ಜಗಾಮ ಸುದುಃಖಾರ್ತಃ ಪುನರೇವಾಶ್ರಮಾತ್ತತಃ।।
ಗಂಧರ್ವನು ಹೇಳಿದನು: “ಮಕ್ಕಳಿಲ್ಲದ ಆಶ್ರಮಪದವನ್ನು ನೋಡಿದ ಮುನಿಯು ಅತೀವ ದುಃಖಾರ್ತನಾಗಿ ಪುನಃ ಆಶ್ರಮದಿಂದ ಹೊರ ಹೊರಟನು.
01167002a ಸೋಽಪಶ್ಯತ್ಸರಿತಂ ಪೂರ್ಣಾಂ ಪ್ರಾವೃತ್ಕಾಲೇ ನವಾಂಭಸಾ।
01167002c ವೃಕ್ಷಾನ್ಬಹುವಿಧಾನ್ಪಾರ್ಥ ವಹಂತೀಂ ತೀರಜಾನ್ಬಹೂನ್।।
ಪಾರ್ಥ! ಮಳೆಗಾಲದ ಹೊಸನೀರಿನಿಂದ ಹರಿಯುತ್ತಿರುವ ನದಿಯೊಂದನ್ನು ಕಂಡನು. ದಡದಲ್ಲಿ ಹುಟ್ಟಿದ ಬಹುವಿಧ ವೃಕ್ಷಗಳು ಅದರಲ್ಲಿ ತೇಲುತ್ತಿದ್ದವು.
01167003a ಅಥ ಚಿಂತಾಂ ಸಮಾಪೇದೇ ಪುನಃ ಪೌರವನಂದನ।
01167003c ಅಂಭಸ್ಯಸ್ಯಾ ನಿಮಜ್ಜೇಯಮಿತಿ ದುಃಖಸಮನ್ವಿತಃ।
ಪೌರವನಂದನ! ಆಗ ಆ ದುಃಖಸಮನ್ವಿತನು ಮತ್ತೊಮ್ಮೆ ಈ ನೀರಿನಲ್ಲಿ ಬಿದ್ದು ಮುಳುಗಿಹೋಗುತ್ತೇನೆ ಎಂದು ಯೋಚಿಸಿದನು.
01167004a ತತಃ ಪಾಶೈಸ್ತದಾತ್ಮಾನಂ ಗಾಢಂ ಬದ್ಧ್ವಾ ಮಹಾಮುನಿಃ।
01167004c ತಸ್ಯಾ ಜಲೇ ಮಹಾನದ್ಯಾ ನಿಮಮಜ್ಜ ಸುದುಃಖಿತಃ।।
ಸುದುಃಖಿತನಾದ ಮಹಾಮುನಿಯು ಹಗ್ಗಗಳಿಂದ ತನ್ನನ್ನು ತಾನೇ ಬಿಗಿಯಾಗಿ ಕಟ್ಟಿಕೊಂಡು ಮಹಾನದಿಯ ನೀರಿನಲ್ಲಿ ಧುಮುಕಿದನು.
01167005a ಅಥ ಚಿತ್ತ್ವಾ ನದೀ ಪಾಶಾಂಸ್ತಸ್ಯಾರಿಬಲಮರ್ದನ।
01167005c ಸಮಸ್ಥಂ ತಮೃಷಿಂ ಕೃತ್ವಾ ವಿಪಾಶಂ ಸಮವಾಸೃಜತ್।।
ಅರಿಬಲಮರ್ದನ! ಆದರೆ ನದಿಯು ಅವನ ಪಾಶಗಳನ್ನು ಕತ್ತರಿಸಿ, ಅವನನ್ನು ವಿಪಾಶನನ್ನಾಗಿ ಮಾಡಿ ಸಮಸ್ಥ ಋಷಿಯನ್ನು ತನ್ನ ತೀರಕ್ಕೆ ತಂದು ಬಿಟ್ಟಿತು.
01167006a ಉತ್ತತಾರ ತತಃ ಪಾಶೈರ್ವಿಮುಕ್ತಃ ಸ ಮಹಾನೃಷಿಃ।
01167006c ವಿಪಾಶೇತಿ ಚ ನಾಮಾಸ್ಯಾ ನದ್ಯಾಶ್ಚಕ್ರೇ ಮಹಾನೃಷಿಃ।।
ಪಾಶಗಳಿಂದ ವಿಮುಕ್ತನಾದ ಮಹಾನೃಷಿಯು ನದಿಯಿಂದ ಮೇಲಕ್ಕೆದ್ದನು. ಮಹಾನೃಷಿಯು ಆ ನದಿಗೆ ವಿಪಾಶ ಎಂಬ ಹೆಸರನ್ನಿತ್ತನು.
01167007a ಶೋಕೇ ಬುದ್ಧಿಂ ತತಶ್ಚಕ್ರೇ ನ ಚೈಕತ್ರ ವ್ಯತಿಷ್ಠತ।
01167007c ಸೋಽಗಚ್ಛತ್ಪರ್ವತಾಂಶ್ಚೈವ ಸರಿತಶ್ಚ ಸರಾಂಸಿ ಚ।।
ತನ್ನ ಬುದ್ಧಿಯನ್ನು ಶೋಕದಲ್ಲಿಯೇ ನಿರತವಾಗಿರಿಸಿ ಒಂದೇ ಸ್ಥಳದಲ್ಲಿ ನಿಲ್ಲದೇ ಪರ್ವತ, ಸರಿತ ಮತ್ತು ಸಾರಸಗಳ ಕಡೆ ಹೋದನು.
01167008a ತತಃ ಸ ಪುನರೇವರ್ಷಿರ್ನದೀಂ ಹೈಮವತೀಂ ತದಾ।
01167008c ಚಂಡಗ್ರಾಹವತೀಂ ದೃಷ್ಟ್ವಾ ತಸ್ಯಾಃ ಸ್ರೋತಸ್ಯವಾಪತತ್।।
ಕ್ರೂರ ಮೊಸಳೆಗಳಿಂದ ತುಂಬಿದ ಹಿಮಾಲಯದಿಂದ ಹರಿದು ಬರುತ್ತಿರುವ ನದಿಯೊಂದನ್ನು ನೋಡಿದ ಋಷಿಯು ಪುನಃ ಅದರಲ್ಲಿ ಧುಮುಕಿದನು.
01167009a ಸಾ ತಮಗ್ನಿಸಮಂ ವಿಪ್ರಮನುಚಿಂತ್ಯ ಸರಿದ್ವರಾ।
01167009c ಶತಧಾ ವಿದ್ರುತಾ ಯಸ್ಮಾಚ್ಶತದ್ರುರಿತಿ ವಿಶ್ರುತಾ।।
ಆದರೆ ಆ ಸರಿದ್ವರೆಯು ಅವನು ಅಗ್ನಿಸಮ ವಿಪ್ರನೆಂದು ಭಾವಿಸಿ ನೂರಾರು ದಿಕ್ಕುಗಳಲ್ಲಿ ಹರಿಯ ತೊಡಗಿತು. ಆದುದರಿಂದಲೇ ಅದು ಶತಾದ್ರು ಎಂದು ವಿಶ್ರುತವಾಗಿದೆ.
01167010a ತತಃ ಸ್ಥಲಗತಂ ದೃಷ್ಟ್ವಾ ತತ್ರಾಪ್ಯಾತ್ಮಾನಮಾತ್ಮನಾ।
01167010c ಮರ್ತುಂ ನ ಶಕ್ಯಮಿತ್ಯುಕ್ತ್ವಾ ಪುನರೇವಾಶ್ರಮಂ ಯಯೌ।।
ತಾನು ದಡದ ಮೇಲೆಯೇ ಇದ್ದುದನ್ನು ಕಂಡ ಅವನು ನನಗೆ ಸಾಯಲು ಶಕ್ಯವಿಲ್ಲ ಎಂದು ಪುನಃ ತನ್ನ ಆಶ್ರಮಕ್ಕೆ ಬಂದನು.
01167011a ವಧ್ವಾದೃಶ್ಯಂತ್ಯಾನುಗತ ಆಶ್ರಮಾಭಿಮುಖೋ ವ್ರಜನ್।
01167011c ಅಥ ಶುಶ್ರಾವ ಸಂಗತ್ಯಾ ವೇದಾಧ್ಯಯನನಿಃಸ್ವನಂ।
01167011e ಪೃಷ್ಠತಃ ಪರಿಪೂರ್ಣಾರ್ಥೈಃ ಷಡ್ಭಿರಂಗೈರಲಂಕೃತಂ।।
ಆಶ್ರಮಾಭಿಮುಖನಾಗಿ ಬರುತ್ತಿರುವಾಗ ಅವನ ಸೊಸೆ ಅದೃಶ್ಯಂತಿಯು ಹಿಂಬಾಲಿಸುತ್ತಿದ್ದಳು. ಆಗ ಹತ್ತಿರದಲ್ಲಿಯೇ ಷಡಂಗಗಳಿಂದ ಅಲಂಕೃತ ಪರಿಪೂರ್ಣಾರ್ಥಗಳಿಂದ ಕೂಡಿದ ವೇದಾಧ್ಯಯನದ ಸ್ವರವನ್ನು ಕೇಳಿದನು.
01167012a ಅನುವ್ರಜತಿ ಕೋ ನ್ವೇಷ ಮಾಮಿತ್ಯೇವ ಚ ಸೋಽಬ್ರವೀತ್।
01167012c ಅಹಂ ತ್ವದೃಶ್ಯತೀ ನಾಮ್ನಾ ತಂ ಸ್ನುಷಾ ಪ್ರತ್ಯಭಾಷತ।
01167012e ಶಕ್ತೇರ್ಭಾರ್ಯಾ ಮಹಾಭಾಗ ತಪೋಯುಕ್ತಾ ತಪಸ್ವಿನೀ।।
“ನನ್ನನ್ನು ಈ ರೀತಿ ಅನುಸರಿಸುತ್ತಿರುವವರು ಯಾರು?” ಎಂದು ಅವನು ಕೇಳಿದನು. ಅವಳು “ನಾನು ಅದೃಶ್ಯತೀ ಎಂಬ ಹೆಸರಿನ ನಿನ್ನ ಸೊಸೆ. ಮಹಾಭಾಗ! ಶಕ್ತಿಯ ಪತ್ನಿ, ತಪೋನಿರತೆ ತಪಸ್ವಿನೀ!” ಎಂದಳು.
01167013 ವಸಿಷ್ಠ ಉವಾಚ।
01167013a ಪುತ್ರಿ ಕಸ್ಯೈಷ ಸಾಂಗಸ್ಯ ವೇದಸ್ಯಾಧ್ಯಯನಸ್ವನಃ।
01167013c ಪುರಾ ಸಾಂಗಸ್ಯ ವೇದಸ್ಯ ಶಕ್ತೇರಿವ ಮಯಾ ಶ್ರುತಃ।।
ವಸಿಷ್ಠನು ಹೇಳಿದನು: “ಪುತ್ರಿ! ಹಿಂದೆ ಶಕ್ತಿಯಿಂದ ನನಗೆ ಕೇಳಿಬರುತ್ತಿದ್ದಂತೆ ಈಗಲೂ ಹತ್ತಿರದಿಂದ ಕೇಳಿಬರುತ್ತಿರುವ ಈ ವೇದಾಧ್ಯಯನದ ಸ್ವರವು ಯಾರಿಂದ ಕೇಳಿಬರುತ್ತಿದೆ?”
01167014 ಅದೃಶ್ಯಂತ್ಯುವಾಚ।
01167014a ಅಯಂ ಕುಕ್ಷೌ ಸಮುತ್ಪನ್ನಃ ಶಕ್ತೇರ್ಗರ್ಭಃ ಸುತಸ್ಯ ತೇ।
01167014c ಸಮಾ ದ್ವಾದಶ ತಸ್ಯೇಹ ವೇದಾನಭ್ಯಸತೋ ಮುನೇ।।
ಅದೃಶ್ಯಂತಿಯು ಹೇಳಿದಳು: “ಕಳೆದ ಹನ್ನೆರಡು ವರ್ಷಗಳಿಂದ ನಿನ್ನ ಸುತ ಶಕ್ತಿಯ ಗರ್ಭವು ನನ್ನ ಹೊಟ್ಟೆಯಲ್ಲಿ ಬೆಳೆಯುತ್ತಿದೆ. ಮುನಿ! ಇದು ವೇದಾಭ್ಯಾಸ ಮಾಡುತ್ತಿರುವ ಅವನ ಸ್ವರ.””
01167015 ಗಂಧರ್ವ ಉವಾಚ।
01167015a ಏವಮುಕ್ತಸ್ತತೋ ಹೃಷ್ಟೋ ವಸಿಷ್ಠಃ ಶ್ರೇಷ್ಠಭಾಗೃಷಿಃ।
01167015c ಅಸ್ತಿ ಸಂತಾನಮಿತ್ಯುಕ್ತ್ವಾ ಮೃತ್ಯೋಃ ಪಾರ್ಥ ನ್ಯವರ್ತತ।।
ಗಂಧರ್ವನು ಹೇಳಿದನು: “ಪಾರ್ಥ! ಇದನ್ನು ಕೇಳಿದ ಶ್ರೇಷ್ಠಭಾಗ ಋಷಿ ವಸಿಷ್ಠನು ಹೃಷ್ಟನಾಗಿ “ಸಂತಾನವಿದೆ!” ಎಂದು ಹೇಳಿ ಮೃತ್ಯುವಿನ ದಾರಿಯಿಂದ ಹಿಂದುರಿಗಿದನು.
01167016a ತತಃ ಪ್ರತಿನಿವೃತ್ತಃ ಸ ತಯಾ ವಧ್ವಾ ಸಹಾನಘ।
01167016c ಕಲ್ಮಾಷಪಾದಮಾಸೀನಂ ದದರ್ಶ ವಿಜನೇ ವನೇ।।
ಅನಘ! ತನ್ನ ಸೊಸೆಯೊಂದಿಗೆ ಹಿಂದಿರುಗಿ ಬರುತ್ತಿರುವಾಗ ನಿರ್ಜನ ವನದಲ್ಲಿ ಕುಳಿತಿದ್ದ ಕಲ್ಪಾಷಪಾದನನ್ನು ಕಂಡನು.
01167017a ಸ ತು ದೃಷ್ಟ್ವೈವ ತಂ ರಾಜಾ ಕ್ರುದ್ಧ ಉತ್ಥಾಯ ಭಾರತ।
01167017c ಆವಿಷ್ಟೋ ರಕ್ಷಸೋಗ್ರೇಣ ಇಯೇಷಾತ್ತುಂ ತತಃ ಸ್ಮ ತಂ।।
ಭಾರತ! ಅವನನ್ನು ನೋಡಿದ ಕೂಡಲೇ ಉಗ್ರ ರಾಕ್ಷಸನಿಂದ ಆವಿಷ್ಟಗೊಂಡಿದ್ದ ಆ ರಾಜನು ಕೃದ್ಧನಾಗಿ ಮೇಲೆದ್ದು ಅವನನ್ನೇ ಕಬಳಿಸಲು ಮುಂದಾದನು.
01167018a ಅದೃಶ್ಯಂತೀ ತು ತಂ ದೃಷ್ಟ್ವಾ ಕ್ರೂರಕರ್ಮಾಣಮಗ್ರತಃ।
01167018c ಭಯಸಂವಿಗ್ನಯಾ ವಾಚಾ ವಸಿಷ್ಠಮಿದಮಬ್ರವೀತ್।।
ಅದೃಶ್ಯಂತಿಯು ಕ್ರೂರಕರ್ಮಕ್ಕೆ ಮುಂದಾಗುತ್ತಿದ್ದ ಅವನನ್ನು ನೋಡಿ ಭಯಸಂವಿಗ್ನಳಾಗಿ ವಸಿಷ್ಠನಲ್ಲಿ ಹೇಳಿದಳು:
01167019a ಅಸೌ ಮೃತ್ಯುರಿವೋಗ್ರೇಣ ದಂಡೇನ ಭಗವನ್ನಿತಃ।
01167019c ಪ್ರಗೃಹೀತೇನ ಕಾಷ್ಠೇನ ರಾಕ್ಷಸೋಽಭ್ಯೇತಿ ಭೀಷಣಃ।।
“ಇದೋ! ಉಗ್ರ ದಂಡವನ್ನು ಹಿಡಿದ ಮೃತ್ಯುವಿನಂತೆ ಕಾಷ್ಠವನ್ನು ಹಿಡಿದು ಭೀಷಣ ರಾಕ್ಷಸನು ಬರುತ್ತಿದ್ದಾನೆ.
01167020a ತಂ ನಿವಾರಯಿತುಂ ಶಕ್ತೋ ನಾನ್ಯೋಽಸ್ತಿ ಭುವಿ ಕಶ್ಚನ।
01167020c ತ್ವದೃತೇಽದ್ಯ ಮಹಾಭಾಗ ಸರ್ವವೇದವಿದಾಂ ವರ।।
ಮಹಾಭಾಗ! ಸರ್ವ ವೇದವಿದರಲ್ಲಿ ಶ್ರೇಷ್ಠ! ನಿನ್ನನ್ನು ಬಿಟ್ಟು ಭೂಮಿಯಲ್ಲಿ ಯಾರಿಗೂ ಅವನನ್ನು ತಡೆಯಲು ಸಾಧ್ಯವಿಲ್ಲ.
01167021a ತ್ರಾಹಿ ಮಾಂ ಭಗವನ್ಪಾಪಾದಸ್ಮಾದ್ದಾರುಣದರ್ಶನಾತ್।
01167021c ರಕ್ಷೋ ಅತ್ತುಮಿಹ ಹ್ಯಾವಾಂ ನೂನಮೇತಚ್ಚಿಕೀರ್ಷತಿ।।
ಭಗವನ್! ಇಂಥಹ ದಾರುಣದೃಶ್ಯದ ಪಾಪದಿಂದ ನನ್ನನ್ನು ರಕ್ಷಿಸು. ನಿಜವಾಗಿಯೂ ಅವನು ನಮ್ಮನ್ನು ತಿನ್ನಲು ಬರುತ್ತಿದ್ದಾನೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಚೈತ್ರರಥಪರ್ವಣಿ ವಸಿಷ್ಠಶೋಕೇ ಸಪ್ತಷಷ್ಟ್ಯಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಚೈತ್ರರಥಪರ್ವದಲ್ಲಿ ವಸಿಷ್ಠಶೋಕದಲ್ಲಿ ನೂರಾಅರವತ್ತೇಳನೆಯ ಅಧ್ಯಾಯವು.